Tag: bidar

  • ಬೀದರ್ ಜಿಲ್ಲೆಯ ಗ್ರಾಮದಲ್ಲಿ ಶುಕ್ರವಾರ ನಡೆಯಲ್ಲ ಯಾವುದೇ ಶುಭಕಾರ್ಯ

    ಬೀದರ್ ಜಿಲ್ಲೆಯ ಗ್ರಾಮದಲ್ಲಿ ಶುಕ್ರವಾರ ನಡೆಯಲ್ಲ ಯಾವುದೇ ಶುಭಕಾರ್ಯ

    ಬೀದರ್: ಶುಕ್ರವಾರ ಅಂದ್ರೆ ಶುಭ ದಿನ ಅಂತ ಎಲ್ಲರೂ ಭಾವಿಸ್ತಾರೆ. ಅದಕ್ಕೆ ಸಿನಿಮಾಗಳು ತೆರೆಗೆ ಅಪ್ಪಳಿಸಿದ್ರೆ, ಹಲವೆಡೆ ದೇವಿ ಪೂಜೆ ನಡೆಸ್ತಾರೆ. ಮುಸ್ಲಿಮರು ನಮಾಜ್ ಮಾಡಿ ಪ್ರಾರ್ಥಿಸುತ್ತಾರೆ. ಆದ್ರೆ ಬೀದರ್ ಜಿಲ್ಲೆಯ ಫತ್ತೇಪೂರ್ ಗ್ರಾಮದಲ್ಲಿ ಶುಕ್ರವಾರ ಯಾವುದೇ ಶುಭಕಾರ್ಯಗಳು ನಡೆಯಲ್ಲ.

    ಫತ್ತೆಪೂರ್ ಗ್ರಾಮದ ಜನರಿಗೆ ‘ಶುಕ್ರವಾರ’ ಅಂದ್ರೆ ಕರಾಳ ದಿನ. 100 ವರ್ಷದಿಂದ ಇಲ್ಲಿ ಶುಭಕಾರ್ಯ ನಡೆದಿಲ್ಲ ಎಂಬುವುದು ಗ್ರಾಮಸ್ಥರ ಮಾತು. ಇದೆಲ್ಲ ಮೂಢನಂಬಿಕೆ ಅಂತ ಲಕ್ಷ್ಮಿ ಎಂಬವರಿಗೆ ವರ್ಷದ ಹಿಂದೆ ಶುಕ್ರವಾರ ಮದುವೆ ಮಾಡಲಾಯ್ತು. ಮದುವೆ ಮಾಡಿದ 15 ದಿನಗಳಲ್ಲಿ ಲಕ್ಷ್ಮಿ ಸಾವನ್ನಪ್ಪಿದ್ದರು. 3 ವರ್ಷಗಳ ಹಿಂದೆ ಅಣ್ಣರೈ ಎಂಬವರು ಮಗವಿನ ತೊಟ್ಟಿಲು ಕಾರ್ಯಕ್ರಮ ಮಾಡಿದ್ದರಿಂದ ಒಂದು ವಾರದಲ್ಲಿ ಅಣ್ಣರೈ ಸಾವನ್ನಪ್ಪಿದ್ದಾರೆ ಎಂದು ಗ್ರಾಮದ ಮುಖಂಡರು ಹೇಳುತ್ತಾರೆ.

    ಬಹುಮನಿ ಸಾಮ್ರಾಜ್ಯದ ಕಾಲದಲ್ಲಿ ಮಹಮ್ಮದ್ ಗವಾನನ ಗುರುಗಳಾಗಿದ್ದ ಫಕುರಲ್ ಗಿಲಾನಿ ಕಾರಣಾಂತರದಿಂದ ಮೃತಪಟ್ಟಿದ್ದರು. ಗ್ರಾಮದಲ್ಲೇ ನನ್ನ ಅಂತ್ಯ ಸಂಸ್ಕಾರ ಆಗಬೇಕು ಅಂಥ ಫಕುರಲ್ ಗಿಲಾನಿ ಆಸೆ ಪಟ್ಟಿದ್ದರು. ಆದರೆ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಬಂದ್ರೆ ಸಾಕು, ಊರ ಜನರನ್ನ ಗಿಲಾನಿ ಶಾಪವಾಗಿ ಕಾಡ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಯಾವುದೊ ಕಾರಣಕ್ಕೆ ಜನರು ಸಾವನ್ನಪ್ಪಿದ್ರೆ ಅದನ್ನ ಶುಕ್ರವಾರಕ್ಕೆ ತಳಕು ಹಾಕಿ ಆತಂಕದಿಂದಿರೋದು ವಿಚಿತ್ರ. ಗ್ರಾಮಸ್ಥರಿಗೆ ವಿಚಾರವಾದಿಗಳು, ಬುದ್ಧಿವಂತರು ಬುದ್ಧಿ ಹೇಳಿ ಮೂಢನಂಬಿಕೆಯನ್ನ ದೂರವಾಗಿಸಬೇಕಿದೆ.

  • ಪಿಕ್‍ನಿಕ್‍ಗೆ ಹೋಗಿದ್ದ ಬಾಲಕಿ ಅನುಮಾನಾಸ್ಪದ ಸಾವು

    ಪಿಕ್‍ನಿಕ್‍ಗೆ ಹೋಗಿದ್ದ ಬಾಲಕಿ ಅನುಮಾನಾಸ್ಪದ ಸಾವು

    – ನಿಧಿಗಾಗಿ ಕೊಲೆ ಮಾಡಿರುವ ಶಂಕೆ

    ಬೀದರ್: ಶಾಲೆಯಿಂದ ಪಿಕ್‍ನಿಕ್ ಹೋದಾಗ ಬಾಲಕಿ ಅನುಮಾನ್ಪಾದವಾಗಿ ಸಾವನ್ನಪ್ಪಿದ್ದು. ಆದರೆ ನಿಧಿಯ ಆಸೆಗಾಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ.

    ಬೀದರ್ ಜಿಲ್ಲೆಯ ಹುಮ್ನಬಾದ್ ತಾಲೂಕಿನ ನಿರ್ಣಾ ಗ್ರಾಮದ ರಕ್ಷಿತಾ ಮೃತ ಬಾಲಕಿ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕಲಬುರಗಿ ತಾಲೂಕಿನ ಚಿಂಚೋಳ್ಳಿಗೆ ಪಿಕ್ ನಿಕ್ ಹೋದಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ರಕ್ಷಿತಾ ಅಪಘಾತವಾದ ಸ್ಥಿತಿಯಲ್ಲಿ ಅನುಮಾನ್ಪದವಾಗಿ ಸಾವನ್ನಪ್ಪಿದ್ದಳು. ಈ ಬಗ್ಗೆ ಚಿಟ್ಟಗುಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

    ಈಗ ಬಾಲಕಿಯ ಪೋಷಕರು ಇದು ಅಫಘಾತವಲ್ಲ ನಿಧಿಗಾಗಿ ಕೊಲೆ ಮಾಡಲಾಗಿದೆ ಎಂದು ವಿವೇಕಾನಂದ ಶಾಲೆಯ ಆಡಳಿತ ಮಂಡಳಿ ವಿರುದ್ಧ ಗಂಭೀರ ಅರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಸಿಎಂ, ಶಿಕ್ಷಣ ಸಚಿವರಿಗೆ ಸೂಕ್ತ ತನಿಖೆಗೆ ಆಗ್ರಹಿ ಪತ್ರ ಬರೆದಿದ್ದಾರೆ.

  • ಬಡ ಹಳ್ಳಿ ಹುಡುಗಿಯ ದೆಹಲಿ ಸಾಧನೆ

    ಬಡ ಹಳ್ಳಿ ಹುಡುಗಿಯ ದೆಹಲಿ ಸಾಧನೆ

    ಬೀದರ್: ಬಡತನ ಮೆಟ್ಟಿನಿಂತು ರಾಷ್ಟ್ರ ಮಟ್ಟದ ಸಿಲಂಬಮ್ (ದೊಣ್ಣೆವರಸೆ) ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಬೀದರ್ ನ ವಿದ್ಯಾರ್ಥಿನಿಯೋರ್ವಳು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ರಾಷ್ಟ್ರ ಮಟ್ಟದ ದೊಣ್ಣೆವರಸೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ವಿದ್ಯಾರ್ಥಿನಿ ಭಾಗೀರಥಿ ಸಾಧನೆ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಸ್ಫೂರ್ತಿಯಾಗಿದೆ. ಬೀದರ್ ತಾಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ಅಧ್ಯಯನ ಮಾಡುತ್ತಿರುವ ಭಾಗೀರಥಿ, ಪಾಠದ ಜತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾಳೆ. ಕಿತ್ತು ತಿನ್ನುವ ಬಡತನದ ಮಧ್ಯೆ ರಾಷ್ಟ್ರ ಮಟ್ಟದಲ್ಲಿ ಈ ಸಾಧನೆ ಮಾಡಿ ತೋರಿಸಿದ್ದಾಳೆ.

    ದೊಣ್ಣೆವರಸೆಯಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿ ಗೆದ್ದಿರುವ ವಿದ್ಯಾರ್ಥಿನಿ, ಇತ್ತೀಚಿಗೆ ನವದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ್ದಳು. ಈ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ವಿದ್ಯಾರ್ಥಿಗಳಲ್ಲಿ ಛಲದ ಜೊತೆಗೆ ಸಾಧನೆ ಮಾಡುವ ಮನಸ್ಸು ಹೊಂದಿದ್ದರೆ ಕ್ರೀಡೆಯಲ್ಲಿಯೂ ಉತ್ತಮ ಸಾಧನೆ ಮಾಡಬಹುದು ಎನ್ನುವುದಕ್ಕೆ ಭಾಗೀರಥಿ ನಿದರ್ಶನವಾಗಿದ್ದಾಳೆ.

  • ನಾಡಗೀತೆಗೆ ಅವಮಾನ- ಶಿಕ್ಷಕರಿಬ್ಬರ ಅಮಾನತು

    ನಾಡಗೀತೆಗೆ ಅವಮಾನ- ಶಿಕ್ಷಕರಿಬ್ಬರ ಅಮಾನತು

    ಬೀದರ್ : ಪಶು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಾಡಗೀತೆ ಹಾಡುವಾಗ ಮೂತ್ರ ವಿಸರ್ಜನೆ ಮಾಡಿ ಅಸಭ್ಯ ವರ್ತನೆ ಮಾಡಿದ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    ಔರಾದ್ ತಾಲೂಕಿನ ಹಿಪ್ಪಳಗಾಂವ ಸರ್ಕಾರಿ ಶಾಲೆಯ ಶಿಕ್ಷಕ ವಿರೇಶ್ ಹಾಗೂ ಗಂಗಾರಾಮ ತಾಂಡ ಸರ್ಕಾರಿ ಶಾಲೆಯ ಶಿಕ್ಷಕ ವಿಜಯಕುಮಾರ್ ರಾಠೋರ್ ಅಮಾನತುಗೊಂಡವರು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಕರು ಅದೇ ಪ್ರಾಂಗಣದಲ್ಲಿ ಮೂತ್ರ ವಿಸರ್ಜನೆ ಮಾಡಿ ನಾಡಗೀತೆ ಹಾಗೂ ಕ್ರೀಡಾಕೂಟಕ್ಕೆ ಶಿಕ್ಷಣ ಇಲಾಖೆಗೆ ಅವಮಾನಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದರು.

    ಈ ಹಿನ್ನೆಲೆಯಲ್ಲಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

  • ಶಾಹೀನ್ ಶಾಲೆಯ ಶಿಕ್ಷಕಿ, ಮಗುವಿನ ತಾಯಿಗೆ ಜಾಮೀನು

    ಶಾಹೀನ್ ಶಾಲೆಯ ಶಿಕ್ಷಕಿ, ಮಗುವಿನ ತಾಯಿಗೆ ಜಾಮೀನು

    ಬೀದರ್: ಕಳೆದ 15 ದಿನಗಳಿಂದ ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿದ್ದ ಬೀದರ್ ನ ಶಾಲೆಯ ಮುಖ್ಯ ಶಿಕ್ಷಕಿ ಫರಿನಾಭಾನು ಮತ್ತು ಶಾಲೆಯ ಮಗುವಿನ ತಾಯಿ ನಶೀಮಾಗೆ ಇಂದು ಕೋರ್ಟ್ ಜಾಮೀನು ನೀಡಿದೆ.

    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮಾವತಿ ಮನಗೂಳಿಯವರು ಜಾಮೀನು ಮಂಜೂರು ಮಾಡಿದ್ದಾರೆ. ಫೆ.11 ರಂದು ಆರೋಪಿಗಳ ಪರವಾಗಿ ಬೆಂಗಳೂರಿನ ಹಿರಿಯ ವಕೀಲರಾದ ಬಿ.ಟಿ ವೆಂಕಟೇಶ್‍ರವರು ವಾದ ಮಂಡಿಸಿದ್ದರು. ಇಂದಿಗೆ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಇಂದು ಜಾಮೀನು ನೀಡಿದೆ.

    ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಸಿಎಎ ವಿರುದ್ಧ ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಮಕ್ಕಳಿಂದ ನಾಟಕ ಆಡಿಸಲಾಗಿತ್ತು. ಅದರಲ್ಲಿ ಯಾರಾದರೂ ದಾಖಲೆ ಕೇಳಿ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂಬ ಸಂಭಾಷಣೆ ಇದ್ದ ಕಾರಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೂರು ದಾಖಲಾಗಿತ್ತು. ಇದಾದ ನಂತರ ಪೊಲೀಸರು ಶಾಲೆಯ ಮುಖ್ಯ ಶಿಕ್ಷಕಿ ಫರೀದಾಭಾನು ಮತ್ತು ಶಾಲೆಯ ಮಗುವಿನ ತಾಯಿ ನಶೀಮಾ ಎಂಬವರನ್ನು ಕಳೆದ 15 ದಿನಗಳಿಂದ ಬಂಧಿಸಿ ಜೈಲಿನಟ್ಟಿದ್ದರು.

  • ದೇಶದ್ರೋಹದ ಆರೋಪವಿರುವ ಶಿಕ್ಷಣ ಸಂಸ್ಥೆಗೆ ಇಂದು ಸಿದ್ದರಾಮಯ್ಯ ಭೇಟಿ

    ದೇಶದ್ರೋಹದ ಆರೋಪವಿರುವ ಶಿಕ್ಷಣ ಸಂಸ್ಥೆಗೆ ಇಂದು ಸಿದ್ದರಾಮಯ್ಯ ಭೇಟಿ

    ಬೀದರ್: ದೇಶದ್ರೋಹದ ಆರೋಪ ಎದುರಿಸುತ್ತಿರುವ ಶಾಹೀನ್ ಶಿಕ್ಷಣ ಸಂಸ್ಥೆಗೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಸಿದ್ದರಾಮಯ್ಯರ ಈ ಭೇಟಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಚರ್ಚೆಗೆ ಕಾರಣವಾಗಿದೆ.

    ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳಿಂದ ನಾಟಕ ಮಾಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಅವಮಾನ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದರಿಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನ್ಯೂಟೌನ್ ಠಾಣೆಯಲ್ಲಿ ಜನವರಿ 26ರಂದು ದೂರು ದಾಖಲಿಸಿದ್ದರು. ಆ ಬಳಿಕ ಶಾಲೆಯ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ನಾಟಕ ಮಾಡಿದ ವಿದ್ಯಾರ್ಥಿನಿ ತಾಯಿ ನಶೀಮಾ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದನ್ನೂ ಓದಿ: ಪೌರತ್ವ ವಿರೋಧಿ ನಾಟಕದಲ್ಲಿ ಮೋದಿಗೆ ಅವಮಾನ- ಸಂಸ್ಥೆ ಕ್ಷಮೆ

    ಈ ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದಿದ್ದು, ಹಲವಾರು ನಾಯಕರು ಶಾಹೀನ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುತ್ತಿದ್ದಾರೆ. ಇಂದು ಸಿದ್ದರಾಮಯ್ಯ ಶಾಹೀನ್ ಶಿಕ್ಷಣ ಸಂಸ್ಥೆ ಗೆ ಭೇಟಿ ನೀಡಿ ನಾಟಕ ಮಾಡಿದ ವಿದ್ಯಾರ್ಥಿನಿಗೆ ಸಾಂತ್ವನ ಹೇಳಲಿದ್ದಾರೆ.

    ವಿಶೇಷ ವಿಮಾನ ಮೂಲಕ ಮಧ್ಯಾಹ್ನ 1 ಗಂಟೆಗೆ ಬೀದರ್ ಏರಬೇಸ್‍ಗೆ ಆಗಮಿಸಿ ನೇರವಾಗಿ ಶಾಹೀನ್ ಶಿಕ್ಷಣ ಸಂಸ್ಥೆಗೆ ಸಿದ್ದರಾಮಯ್ಯ ತೆರಳಿದ್ದಾರೆ. ನಂತರ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸುದ್ದಿಗೋಷ್ಠಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ರಾಜಶೇಖರ್ ಪಾಟೀಲ್, ಬಿ.ನಾರಾಯಣ್ ರಾವ್, ರಹೀಂ ಖಾನ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಲಿದ್ದಾರೆ.

  • ವಸತಿ ಶಾಲೆಯಲ್ಲಿ ನಿಗೂಢವಾಗಿ ಮೃತಪಟ್ಟ ವಿದ್ಯಾರ್ಥಿನಿಯ ಮನೆಗೆ ಈಶ್ವರ ಖಂಡ್ರೆ ಭೇಟಿ

    ವಸತಿ ಶಾಲೆಯಲ್ಲಿ ನಿಗೂಢವಾಗಿ ಮೃತಪಟ್ಟ ವಿದ್ಯಾರ್ಥಿನಿಯ ಮನೆಗೆ ಈಶ್ವರ ಖಂಡ್ರೆ ಭೇಟಿ

    ಬೀದರ್: ಶ್ರಮ ಜೀವಿ ವಸತಿ ಶಾಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿ ಸುಪ್ರಿಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನರಸಿಂಹಪೂರ್ ತಾಂಡದಲ್ಲಿರುವ ಮೃತ ಸುಪ್ರಿಯಾ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಈಶ್ವರ ಖಂಡ್ರೆ, ಈ ಪ್ರಕರಣವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಮೃತ ಸುಪ್ರಿಯಾ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

    ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವಸತಿ ಶಾಲೆಯ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಇದೊಂದು ಅಸಾಮಾನ್ಯ ಸಾವಾಗಿದ್ದು, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆಯಲ್ಲಿ ಮೃತ ಸುಪ್ರಿಯಾ ತಂದೆ ಸಂಜೀವ ಕುಮಾರ್ ಅವರಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡುವ ಮೂಲಕ ಬಡ ಕುಟುಂಬಕ್ಕೆ ಆರ್ಥಿಕವಾಗಿ ಧೈರ್ಯ ತುಂಬಿದರು.

  • ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸೋ ಮುನ್ನವೇ ವ್ಯಕ್ತಿ ಸಾವು

    ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸೋ ಮುನ್ನವೇ ವ್ಯಕ್ತಿ ಸಾವು

    ಬೀದರ್: ಪಿಎಲ್‍ಡಿ ಬ್ಯಾಂಕ್ ಹಾಗೂ ಪಿಕೆಪಿಎಸ್‍ನ ನಿರ್ದೇಶಕರಾಗಿ ಆಯ್ಕೆಯಾಗಿದ್ದ ವ್ಯಕ್ತಿಯೊಬ್ಬರು, ಅಧಿಕಾರ ಸ್ವೀಕರಿಸುವ ಮುನವೇ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ನಡೆದಿದೆ.

    ಇಸ್ಲಾಂಪೂರ ಗ್ರಾಮದ ಕಾಶಿನಾಥ ಕನಾಟೆ(66) ಮೃತ ವ್ಯಕ್ತಿ. ಇವರು ಗ್ರಾಮದ ಸಮೀಪ ಇರುವ ಮಶಾಳ ತಾಂಡಾದಿಂದ ಭಾನುವಾರ ರಾತ್ರಿ ಗ್ರಾಮಕ್ಕೆ ಬರುವಾಗ ಬೈಕಿನಿಂದ ಬಿದ್ದು ಮೃತಪಟ್ಟಿದ್ದಾರೆ. ಕಳೆದ 30 ವರ್ಷಗಳಿಂದ ಸಹಕಾರಿ ರಂಗದ ವಿವಿಧ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು, ಬಸವಕಲ್ಯಾಣದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿ ಹಾಗೂ ರಾಜೇಶ್ವರ ಪಿಕೆಪಿಎಸ್‍ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

    ಕಳೆದ ಒಂದು ವಾರದ ಹಿಂದೆ ನಡೆದ ರಾಜೇಶ್ವರ ಪಿಕೆಪಿಎಸ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಇವರು, ಎರಡು ದಿನಗಳ ಹಿಂದೆ ನಡೆದಿದ್ದ ಪಿಎಲ್‍ಡಿ ಬ್ಯಾಂಕ್ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕಾಶಿನಾಥ ಅವರು ಪಿಕೆಪಿಎಸ್ ಹಾಗೂ ಪಿಎಲ್‍ಡಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿದ್ದನ್ನು ಸಹಿಸದ ವ್ಯಕ್ತಿಗಳು ಕೊಲೆ ಮಾಡರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

    ಮಂಠಾಳ ಸಿಪಿಐ ಮಹೇಶಗೌಡ ಪಾಟೀಲ, ಮುಡಬಿ ಪಿಎಸ್‍ಐ ವಸೀಮ್ ಪಟೇಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜೆಸಿಬಿಯಿಂದ ಗೋಡೆ ಒಡೆದು ಬ್ಯಾಂಕ್ ದರೋಡೆಗೆ ಯತ್ನ!

    ಜೆಸಿಬಿಯಿಂದ ಗೋಡೆ ಒಡೆದು ಬ್ಯಾಂಕ್ ದರೋಡೆಗೆ ಯತ್ನ!

    – ಮೊಬೈಲ್ ಅಲರ್ಟ್‍ನಿಂದ ತಪ್ಪಿತು ಕಳ್ಳತನ

    ಬೀದರ್: ಎಸ್‍ಬಿಐ ಬ್ಯಾಂಕ್ ಗೋಡೆಯನ್ನು ಜೆಸಿಬಿಯಿಂದ ಒಡೆದು ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದ ಘಟನೆ ಬೀದರ್‍ನಲ್ಲಿ ನಡೆದಿದೆ.

    ಒಳಗೆ ನುಗ್ಗಿದ ಇಬ್ಬರು ದರೋಡೆಕೋರರು ಬ್ಯಾಂಕಿನ ಬಾಗಿಲನ್ನ ರಾಡಿನಿಂದ ಹೊಡೆದು ಮುರಿಯಲು ಯತ್ನ ಮಾಡಿದ್ದಾರೆ. ಆದರೆ ಬಾಗಿಲು ಮುರಿಯಲು ಎಷ್ಟೇ ಯತ್ನಿಸಿದರೂ ಅದು ವಿಫವಾಗಿದೆ.

    ಬ್ಯಾಂಕಿನ ದರೋಡೆ ಯತ್ನ ಮಾಡುತ್ತಿದ್ದಾಗ ಬ್ಯಾಂಕ್ ಮ್ಯಾನೇಜರ್ ಮೊಬೈಲ್‍ಗೆ ಅಲರ್ಟ್ ಸಂದೇಶ ಹೋಗಿದೆ. ಅಲರ್ಟ್ ಬಳಿಕ ಎಚ್ಚರಗೊಂಡ ಬ್ಯಾಂಕ್ ಮ್ಯಾನೇಜರ್ ಪೋಲಿಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸಂತಪೂರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಪೊಲೀಸರು ಆಗಮನದ ಮಾಹಿತಿ ಅರಿತ ದರೋಡೆಕೋರರು, ತಕ್ಷಣ ಪರಾರಿಯಾಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್‍ನ ಎಸ್‍ಬಿಐ ಬ್ಯಾಂಕಿನಲ್ಲಿ ಈ ದರೋಡೆ ಯತ್ನ ನಡೆದಿದ್ದು ಖದೀಮರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಎಕ್ಸ್ ಕ್ಲೂಸಿವ್ ಸಿಸಿಟಿವಿ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ಸಂಬಂಧ ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 2 ವರ್ಷದಿಂದ ತುಕ್ಕು ಹಿಡಿಯುತ್ತಿವೆ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕ್ ವಾಹನಗಳು

    2 ವರ್ಷದಿಂದ ತುಕ್ಕು ಹಿಡಿಯುತ್ತಿವೆ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕ್ ವಾಹನಗಳು

    ಬೀದರ್: ಪರಿಸರ ಸ್ನೇಹಿ ವಾಹನಗಳನ್ನು ಬೀದರ್‍ನ ನಗರಸಭೆ ಅಧಿಕಾರಿಗಳು ತಂದಿದ್ದಾರೆ. ಆದರೆ ನಗರದ ಕಸದ ವಿಲೇವಾರಿಗಾಗಿ ತಂದಿರುವ ಈ ವಾಹನಗಳನ್ನು ನಗರಸಭೆ ಅಧಿಕಾರಿಗಳು ಉಪಯೋಗ ಮಾಡದೆ ತುಕ್ಕು ಹಿಡಿಸುತ್ತಿದ್ದಾರೆ.

    ಎರಡು ವರ್ಷಗಳ ಹಿಂದೆ 20 ಲಕ್ಷ ಖರ್ಚು ಮಾಡಿ 10 ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವಾಹನಗಳನ್ನು ತಂದಿದ್ದಾರೆ. ಎರಡು ವರ್ಷಗಳಿಂದ ಅವುಗಳನ್ನು ಉಪಯೋಗ ಮಾಡದೆ ತುಕ್ಕು ಹಿಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಯಾರಿಗೂ ಕಾಣದಂತೆ ನಗರಸಭೆ ಆವರಣದ ಮೂಲೆಯೊಂದರಲ್ಲಿ ಅವುಗಳನ್ನು ನಿಲ್ಲಿಸಿದ್ದಾರೆ.

    10 ಗಾಡಿಗಳ ಬ್ಯಾಟರಿ ಸೇರಿದಂತೆ ಬಹುತೇಕ ಗಾಡಿಯ ಭಾಗಗಳು ತುಕ್ಕು ಹಿಡಿವೆ. ಸರ್ಕಾರದ ಬೋಕ್ಕಸಕ್ಕೆ ನಷ್ಟು ಉಂಟು ಮಾಡಿದ್ದು, ಈ ಮೂಲಕ ನಗರಸಭೆ ಅಧಿಕಾರಿಗಳು ಗೋಲ್‍ಮಾಲ್ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.