Tag: bidar

  • ನಿಶ್ಚಿತಾರ್ಥ ಆಗಿಲ್ಲವೆಂದು ಮಹಿಳಾ ದಿನಾಚರಣೆಯಂದೇ ಶಿಕ್ಷಕಿ ಆತ್ಮಹತ್ಯೆ

    ನಿಶ್ಚಿತಾರ್ಥ ಆಗಿಲ್ಲವೆಂದು ಮಹಿಳಾ ದಿನಾಚರಣೆಯಂದೇ ಶಿಕ್ಷಕಿ ಆತ್ಮಹತ್ಯೆ

    ಬೀದರ್: ಮಹಿಳಾ ದಿನಾಚರಣೆಯ ದಿನವೇ ಶಿಕ್ಷಕಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.

    ಪೂಜಾ (24) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಭಾಲ್ಕಿ ತಾಲೂಕಿನ ಭಾಲ್ಕೇಶ್ವರ ದೇವಸ್ಥಾನದ ಬಾವಿಯಲ್ಲಿ ಈ ಘಟನೆ ನಡೆದಿದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟು ಬರೆದಿಟ್ಟು ಶಿಕ್ಷಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ವರನ ಕಡೆಯವರು ಹಲವು ಬಾರಿ ನೋಡಿ ಹೋದರೂ ನಿಶ್ಚಿತಾರ್ಥವಾಗಿಲ್ಲ ಎಂಬ ಕಾರಣಕ್ಕೆ ಮನನೊಂದು ಶಿಕ್ಷಕಿ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೋಷಕರ ಜೊತೆ ಪೂಜಾ ಚರ್ಚೆ ಮಾಡಿದ್ದು, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಎಂದು ಹೇಳಿದ್ದಳಂತೆ. ಆಗ ಪೋಷಕರು ಹಲವಾರು ಬಾರಿ ಸಮಾಧಾನ ಮಾಡಿದ್ದರು. ಆದರೂ ಇಂದು ಡೆತ್ ನೋಟ್ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪೂಜಾ ಭಾಲ್ಕಿಯ ಖಾಸಗಿ ಚನ್ನಬಸವ ಪದವಿ ಕಾಲೇಜಿನಲ್ಲಿ ರಾಸಾಯನಿಕ ಶಾಸ್ತ್ರದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ಕುರಿತು ಭಾಲ್ಕಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೀದರ್ ವೈದ್ಯರಿಂದ ಹೈದರಾಬಾದ್‍ನಲ್ಲಿ ಉಚಿತ ಮಾಸ್ಕ್ ವಿತರಣೆ

    ಬೀದರ್ ವೈದ್ಯರಿಂದ ಹೈದರಾಬಾದ್‍ನಲ್ಲಿ ಉಚಿತ ಮಾಸ್ಕ್ ವಿತರಣೆ

    ಬೀದರ್: ತೆಲಂಗಾಣದ ಹೈದರಾಬಾದ್ ನಗರದ ಚಾರ್‍ಮೀನಾರ ಬಳಿ ಉಚಿತವಾಗಿ ಜನರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಕೊರೊನಾ ಸೋಂಕು ಕುರಿತು ಬೀದರ್‍ನ ವೈದ್ಯರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ನಿವಾಸಿಯಾಗಿರುವ ದಂತ ವೈದ್ಯ ಡಾ. ಪ್ರಭು ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ್ದಾರೆ. ಜೊತೆಗೆ ಕೊರೊನಾ ಸೊಂಕು ಬಗ್ಗೆ ಜನರಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸಿ ಸಾಮಾಜಿಕ ಕಳಕಳಿ ಮೆರೆದ್ದಾರೆ.

    ಮನೆ ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೆ ಬರಬೇಕು. ಸ್ವಚ್ಛತೆಯಿಂದ ಇರಬೇಕೆಂದು ವೈದ್ಯರಾದ ಪ್ರಭು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಡೆಡ್ಲಿ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಸಂಘ ಸಂಸ್ಥೆಗಳು ಜನಜಾಗೃತಿ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ವೈದ್ಯರು ಕೇಳಿಕೊಂಡಿದ್ದಾರೆ.

  • ಸಿಎಎ ವಿರೋಧಿ ನಾಟಕ ಪ್ರದರ್ಶನ- ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಸಿಎಎ ವಿರೋಧಿ ನಾಟಕ ಪ್ರದರ್ಶನ- ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    – ಶಾಹೀನ್ ಶಾಲೆಯಲ್ಲಿ ನಾಟಕ ಪ್ರದರ್ಶನ

    ನವದೆಹಲಿ: ರಾಜಕೀಯ ಪಕ್ಷಗಳು ದೇಶದ್ರೋಹ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಆದ್ದರಿಂದ ಸೂಕ್ತ ಮಾರ್ಗಸೂಚಿಗಳನ್ನು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಬೀದರ್‍ನ ಶಾಹೀನ್ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ವಿಚಾರಣೆ ನಡೆಸಲು ನಿರಾಕರಿಸಿದೆ.

    ಬೀದರ್ ನ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕ ವಿರುದ್ಧ ದಾಖಲಿಸಿರುವ ದೇಶದ್ರೋಹದ ಎಫ್‍ಐಆರ್ ರದ್ದುಪಡಿಸಬೇಕು. ದೇಶ ದ್ರೋಹ ಕಾಯ್ದೆಯ ದುರ್ಬಳಕೆ ಆಗುತ್ತಿರುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಅವರು ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ ಖಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠ, ಎಫ್‍ಐಆರ್ ರದ್ದು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಬೇಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಇದನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ. ದೇಶದ್ರೋಹದ ಕೇಸ್ ದಾಖಲು ಮಾಡಲು ಈಗಾಗಲೇ ನಿರ್ದೇಶನಗಳಿವೆ ಮತ್ತೆ ಅವುಗಳನ್ನು ಉಲ್ಲೇಖಿಸುವ ಅಗತ್ಯ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

    ಸಿಎಎ ವಿರೋಧಿಸಿವ ನಾಟಕವನ್ನು ವೇದಿಕೆ ಮೇಲೆ ಪ್ರದರ್ಶನ ಮಾಡಿದ ಹಿನ್ನೆಲೆ ಶಾಹೀನ್ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ, ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ವಿದ್ಯಾರ್ಥಿಯೊಬ್ಬರ ಪಾಲಕರಾದ ಅನುಜಾ ಮಿನ್ಸಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು. ಬೀದರ್ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶಾಲಾ ಆಡಳಿತ ಮಂಡಳಿಯ 5 ಜನರಿಗೆ ನಿರೀಕ್ಷಣಾ ಜಾಮೀನು ನೀಡಿದೆ.

  • ಶಾಹೀನ್ ಶಾಲೆ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದು ಕೋರಿ ಸುಪ್ರೀಂಗೆ ಅರ್ಜಿ

    ಶಾಹೀನ್ ಶಾಲೆ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದು ಕೋರಿ ಸುಪ್ರೀಂಗೆ ಅರ್ಜಿ

    – ದೇಶದ್ರೋಹದ ಕೇಸುಗಳಿಗಾಗಿ ಸಮಿತಿ ರಚಿಸುವಂತೆ ಒತ್ತಾಯ

    ನವದೆಹಲಿ: ಬೀದರ್‌ನ ಶಾಹೀನ್ ಶಾಲೆಯಲ್ಲಿ ಸಿಎಎ ನಾಟಕ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್‍ಐಆರ್ ರದ್ದು ಗೊಳಿಸುವಂತೆ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

    ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕರ ವಿರುದ್ಧ ದೇಶದ್ರೋಹದ ಸೆಕ್ಷನ್ ಅಡಿ ದಾಖಲಿಸಿರುವ ಎಫ್‍ಐಆರ್ ರದ್ದು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪೋಲಿಸರು ದೇಶದ್ರೋಹದ ಕೇಸ್ ದಾಖಲಿಸಿರುವುದು ಸರಿಯಲ್ಲ. ಇದು ವ್ಯಕ್ತಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ಅಷ್ಟೇ ಅಲ್ಲದೆ ಕೆಲವು ರಾಜ್ಯ ಸರ್ಕಾರಗಳು ತಮ್ಮ ಅನುಕೂಲಕ್ಕೆ ಈ ಸೆಕ್ಷನ್ ಬಳಕೆ ಮಾಡಿಕೊಳ್ಳುತ್ತಿವೆ. ಹಾಗಾಗಿ ದೇಶದ್ರೋಹದ ಕೇಸ್ ದಾಖಲು ಮಾಡಿಕೊಳ್ಳುವ ಮುನ್ನ ಘಟನೆಯ ಪೂರ್ವಪರಗಳ ಬಗ್ಗೆ ತನಿಖೆ ನಡೆಯಬೇಕು. ಇದಕ್ಕಾಗಿ ಸಮಿತಿಯೊಂದನ್ನ ರಚಿಸಬೇಕು. ಸಮಿತಿಯೂ ಘಟನೆಯನ್ನು ಅಧ್ಯಯನ ನಡೆಸಿ ಒಪ್ಪಿಗೆ ನೀಡಿದ ಬಳಿಕವಷ್ಟೇ ದೇಶದ್ರೋಹದ ಕೇಸ್ ದಾಖಲಾಗುವಂತೆ ನಿರ್ದೇಶನಗಳನ್ನು ಸುಪ್ರೀಂಕೋರ್ಟ್ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

    ಕರ್ನಾಟಕ ಹೈಕೋರ್ಟ್ ನಲ್ಲೂ ಎಫ್‍ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಬಾಕಿ ಇದೆ. ಈ ನಡುವೆ ಅರ್ಜಿ ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಬರಲಿದೆ.

    ಏನಿದು ಪ್ರಕರಣ?
    ಜನವರಿ 23 ರಂದು ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಮಾಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿ ದೇಶಾದ್ಯಂತ ಬಾರಿ ಸುದ್ದಿಯಾದ ಬಳಿಕ ಬಿಜೆಪಿಯ ಯುವ ಮೋರ್ಚಾ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಪೊಲೀಸರು ತನಿಖೆ ಮಾಡಿ ಸಂಸ್ಥೆಯ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ವಿದ್ಯಾರ್ಥಿಯ ತಾಯಿ ನಶೀಮಾ ಎಂಬವರನ್ನು ಪೊಲೀಸರು ಬಂಧಿಸಿದ್ದರು.

    ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿದ್ದ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ಶಾಲೆಯ ಮಗುವಿನ ತಾಯಿ ನಶೀಮಾ 15 ದಿನಗಳ ಬಳಿಕ ಅಂದ್ರೆ ಫೆಬ್ರವರಿ 14ರಂದು ಕೋರ್ಟ್ ಜಾಮೀನು ನೀಡಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮಾವತಿ ಮನಗೂಳಿ ಅವರು ಜಾಮೀನು ಮಂಜೂರು ಮಾಡಿದ್ದರು. ಫೆಬ್ರವರಿ 11 ರಂದು ಆರೋಪಿಗಳ ಪರವಾಗಿ ಬೆಂಗಳೂರಿನ ಹಿರಿಯ ವಕೀಲರಾದ ಬಿ.ಟಿ ವೆಂಕಟೇಶ್ ಅವರು ವಾದ ಮಂಡಿಸಿದ್ದರು. ಫೆಬ್ರವರಿ 14ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಜಾಮೀನು ನೀಡಿತ್ತು.

  • ಕಲಬುರಗಿ ಮಾರ್ಗವಾಗಿ ಬೀದರ್- ಯಶವಂತಪುರ ರೈಲು ಮಂಜೂರು

    ಕಲಬುರಗಿ ಮಾರ್ಗವಾಗಿ ಬೀದರ್- ಯಶವಂತಪುರ ರೈಲು ಮಂಜೂರು

    ಬೀದರ್: ಜಿಲ್ಲೆಯ ಜನರ ಬಹುದಿನಗಳ ಕನಸು ನನಸಾಗಿದ್ದು, ಕೆಲವೇ ದಿನಗಳಲ್ಲಿ ಕಲಬುರಗಿ ಮಾರ್ಗವಾಗಿ ಬೀದರ್ ಟು ಯಶವಂತಪುರ ರೈಲು ಸಂಚಾರ ಪ್ರಾರಂಭವಾಗಲಿದೆ.

    ಸೋಮವಾರ ಕೇಂದ್ರ ರೈಲ್ವೆ ಇಲಾಖೆ ರೈಲು ಮಂಜೂರು ಮಾಡಿದೆ ಸಂಸದ ಭಗವಂತ್ ಖೂಬಾ ಮಾಹಿತಿ ನೀಡಿದ್ದಾರೆ. ಈ ಮೊದಲು ತೆಲಂಗಾಣದ ಸಿಕಂದರಾಬಾದ್ ಮಾರ್ಗವಾಗಿ ಬೀದರ್ ಟು ಯಶವಂತಪುರ ರೈಲು ಸಂಚಾರ ಮಾಡುತ್ತಿತ್ತು. ಹೀಗಾಗಿ ಪ್ರಯಾಣ ಸಮಯ ಹೆಚ್ಚಾಗುತ್ತಿತ್ತು.

    ಕಲಬುರಗಿ ಮಾರ್ಗವಾಗಿ ರೈಲು ಸಂಚರಿಸಿದರೆ ಸಮಯ ಉಳಿಯುತ್ತದೆ ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿತ್ತು. ಬೀದರ್ ಸಂಸದ ಭಗವಂತ್ ಖೂಬಾ ಹಲವಾರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆದರೆ ಕಾರ್ಯ ಸಫಲವಾಗಿರಲಿಲ್ಲ. ಸೋಮವಾರ ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿಯವರನ್ನು ಖೂಬಾ ಅವರು ಭೇಟಿ ಮಾಡಿದ್ದು, ಈ ವೇಳೆ ಸುರೇಶ್ ಅಂಗಡಿಯವರು ಈ ಮಾಹಿತಿ ನೀಡಿದ್ದಾರೆ.

    ಕೆಲವೇ ದಿನಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ಸುರೇಶ್ ಅಂಗಡಿ ತಿಳಿಸಿದ್ದಾರೆ. ರೈಲು ಮಂಜೂರು ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಂಸದ ಭಗವಂತ್ ಖೂಬಾ ಜಿಲ್ಲೆಯ ಜನರ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

  • ಜಲಾಸುರನನ್ನು ಸಂಹರಿಸಿದ ಉಗ್ರನರಸಿಂಹ – ಬೀದರ್‌ನಲ್ಲಿದೆ ಪವಿತ್ರ ಝೀರ

    ಜಲಾಸುರನನ್ನು ಸಂಹರಿಸಿದ ಉಗ್ರನರಸಿಂಹ – ಬೀದರ್‌ನಲ್ಲಿದೆ ಪವಿತ್ರ ಝೀರ

    ಭಾರತದ 22ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ 5ನೇ ಸ್ವಚ್ಛ ನಗರ, ಬೆಂಗಳೂರಿನಿಂದ ಸುಮಾರು 700 ಕಿಮೀ ದೂರದಲ್ಲಿರುವ ಬೀದರ್ ಜಿಲ್ಲೆಗೆ ನಿಮ್ಮನ್ನ ಕರೆದುಕೊಂಡು ಹೋಗ್ತೀನಿ. ಬಿದರಿ ಕರಕುಶಲತೆಯಿಂದ ಇದಕ್ಕೆ ಬೀದರ್ ಎಂಬ ಹೆಸರು ಬಂದಿದೆ. ಈ ಕಲೆ ಪರ್ಶಿಯಾ ದೇಶದಿಂದ 14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದಿದೆ. ತದನಂತರ ಇದು ಹೊಸ ರೂಪವನ್ನ ಪಡೆದುಕೊಂಡಿದೆ.

    ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಣಮಾಡಿ ಹೂಜಿ ಹಾಗೂ ವಿವಿಧ ಶೈಲಿಯ ವಸ್ತುಗಳನ್ನ ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು, ಕೊರೆದಿರುವ ಜಾಗದಲ್ಲಿ ಬೆಳ್ಳಿಯ ತಂತಿಯನ್ನ ಕೂರಿಸಿ, ಅದಕ್ಕೆ ಹೊಳಪು ಕೊಡುತ್ತಾರೆ. ಈಗಲೂ ಬೀದರ್‍ನಲ್ಲಿ ಬಿದರಿ ಕರಕುಶಲ ವಸ್ತುಗಳನ್ನ ತಯಾರಿಸಿ ಮಾರಾಟ ಮಾಡಲಾಗುತ್ತೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಭಾರಿ ಬೇಡಿಕೆ ಇದೆ. ಇಂತಹ ಬೀದರ್ ಜಿಲ್ಲೆಯಲ್ಲಿ ಹಲವು ಪ್ರವಾಸಿ ಕ್ಷೇತ್ರಗಳಿವೆ.

    ನರಸಿಂಹ ಝೀರ:
    ನಿಮಗೆಲ್ಲ ಭಕ್ತ ಪ್ರಹ್ಲಾದ ಅವನ ತಂದೆ ಹಿರಣ್ಯಕಶಪುವಿನ ಕಥೆ ಗೊತ್ತೆ ಇದೆ. ಭಗವಾನ್ ವಿಷ್ಣು ಉಗ್ರನರಸಿಂಹನ ಅವತಾರ ತಾಳಿ ಹಿರಣ್ಯಕಶಪುವಿನ ವಧೆ ಮಾಡಿ ಮುಂದೆ ಎಲ್ಲಿ ಹೋದ ಅಂತಾ ಬಹುತೇಕರಿಗೆ ಗೊತ್ತೆ ಇಲ್ಲ. ಹಿರಣ್ಯಕಶಪುವಿನ ವಧೆ ಮಾಡಿ ಮತ್ತೊಬ್ಬ ಅಸುರನು, ಶಿವಭಕ್ತನು ಆಗಿದ್ದ ಜಲಾಸುರನ ವಧೆ ಮಾಡಲು ಉಗ್ರ ನರಸಿಂಹ ಬರುತ್ತಾನೆ. ಉಗ್ರ ನರಸಿಂಹ ಮತ್ತು ಜಲಾಸುರನ ನಡುವೆ ಘೋರ ಯುದ್ಧ ನಡೆದು ಜಲಾಸುರ ಸೋಲನ್ನೊಪ್ಪುತ್ತಾನೆ. ಕೊನೆಗೆ ಜಲಾಸುರ ಸಾಯುವ ಸಂದರ್ಭದಲ್ಲಿ ನರಸಿಂಹನ ಕಾಲು ಹಿಡಿದು ಜನರಿಗೆ ಒಳಿತನ್ನು ಮಾಡಲು ನೀನು ಇಲ್ಲೆ ನೆಲೆಸಬೇಕೆಂದು ಕೇಳಿಕೊಳ್ಳುತ್ತಾ ನರಸಿಂಹನ ಪಾದದಲ್ಲಿ ಜಲಾಸುರನು ನೀರಾಗಿ ಹರಿಯಲು ಪ್ರಾರಂಭ ಮಾಡಿ ದೇಹ ತ್ಯಾಗ ಮಾಡುತ್ತಾನೆ. ಅವನಿಗೆ ಕೊಟ್ಟ ಮಾತಿನಂತೆ ನರಸಿಂಹನು ಒಂದು ಗುಹೆಯೊಳಗೆ ಐಕ್ಯನಾಗಿಬಿಡುತ್ತಾನೆ. ಅಲ್ಲಿಂದ ಇಲ್ಲಿಯವರೆಗೂ ನರಸಿಂಹನ ಪಾದದಿಂದ ಸದಾ ನೀರು ಹರಿಯುತ್ತಿದೆ. ಈ ಜಾಗವನ್ನೆ ನರಸಿಂಹ ಝೀರ ಎಂದು ಕರೆಯುತ್ತಾರೆ.

    ಹೋಗೋದು ಹೇಗೆ?
    ಬೆಂಗಳೂರಿನಿಂದ ಬೀದರ್ ಗೆ ಬಸ್‍ಗಳಿವೆ, ಟ್ರೇನ್ ಮೂಲಕ ಹೋಗಬಹುದು. ಗೆಳೆಯರೆಲ್ಲ ಸೇರಿ ಹೋಗುವುದಾದರೆ ಕಾರು ಮಾಡಿಕೊಂಡು ಹೋಗಬಹುದು. ಬೀದರ್ ನಗರಕ್ಕೆ ಹೋದ ಬಳಿಕ ಅಲ್ಲಿಂದ ಪೂರ್ವ ಭಾಗದಲ್ಲಿ ಸುಮಾರು 12 ಕಿಮೀ ದೂರದಲ್ಲಿ ನರಸಿಂಹ ಝೀರ ಸಿಗುತ್ತೆ. ಸಿಟಿ ಬಸ್‍ಗಳು, ಆಟೋಗಳ ಮೂಲಕ ಈ ಜಾಗಕ್ಕೆ ಹೋಗಬಹುದು.

    ವೈಶಿಷ್ಟ್ಯತೆ – ನಮ್ಮ ದೇಶದಲ್ಲೆ ಎಲ್ಲೂ ಕಾಣಿಸಿಕೊಳ್ಳದೆ ವಿಶೇಷತೆ ಇಲ್ಲಿದೆ. ಇಲ್ಲಿ ದೇವರ ದರ್ಶನ ಪಡೆಯಬೇಕಂದ್ರೆ ನೀವು ಸುಮಾರು ಅರ್ಧ ಕಿಲೋ ಮೀಟರ್ ಅಂದ್ರೆ 500 ಮೀಟರ್‍ನಷ್ಟು ಗುಹೆಯೊಳಗೆ ಅದರಲ್ಲೂ ನೀರು ತುಂಬಿದ ಗುಹೆಯೊಳಗೆ ನಡೆದುಕೊಂಡೆ ಹೋಗಬೇಕು. ಯೆಸ್..ಸರಿ ಸುಮಾರು 3 ರಿಂದ 4 ಅಡಿ ನೀರು ಸದಾ ಈ ಗುಹೆಯೊಳಗೆ ಸದಾ ಹರಿಯುತ್ತೆ. ಒಳಗಡೆ ಗಾಳಿಯಾಡೋದು ಕಷ್ಟ. ಹಾಗಾಗಿ ಇಲ್ಲಿ ಗಾಳಿಯಾಡಲು ಪೈಪ್‍ನ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ವಿಶೇಷತೆ ಅಂದ್ರೆ, ಗುಹೆಯೊಳಗೆ ಎಲ್ಲ ಕಡೆಯೂ ಬಾವಲಿಗಳು ಕಾಣಿಸುತ್ವೆ. ಆದ್ರೆ, ಈ ಬಾವಲಿಗಳು ಯಾರಿಗೂ ಏನೂ ಹಾನಿಯುಂಟು ಮಾಡಲ್ಲ. ಇಲ್ಲಿಗೆ ಬರುವ ಭಕ್ತರು ಅತ್ಯಂತ ಶ್ರದ್ಧೆಯಿಂದ ಭಕ್ತಿಯಿಂದ ಮಡಿಯಿಂದ 4 ಅಡಿ ನೀರಿನಲ್ಲಿ ಗುಹೆಯಲ್ಲಿ ನಡೆದುಕೊಂಡು ನರಸಿಂಹನಿಗೆ ನೈವೇದ್ಯ ಅರ್ಪಿಸುತ್ತಾರೆ.

    – ಅರುಣ್ ಬಡಿಗೇರ್

  • ಸಚಿವ ಪ್ರಭು ಚವ್ಹಾಣ್ ಕಾರು ಅಪಘಾತ

    ಸಚಿವ ಪ್ರಭು ಚವ್ಹಾಣ್ ಕಾರು ಅಪಘಾತ

    ಬೀದರ್: ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಶಾಸಕರ ಗನ್ ಮ್ಯಾನ್ ಹಾಗೂ ವಾಹನ ಚಾಲಕ ಗಾಯಗೊಂಡಿದ್ದಾರೆ.

    ತೆಲಂಗಾಣದ ಜಹಿರಾಬಾದಿನ ಬಳಿ ಇಂದು ಪ್ರಭು ಚವ್ಹಾಣ್ ಅವರ ಕಾರು ಅಪಘಾತಕ್ಕೀಡಾಗಿದೆ. ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹಿನ್ನೆಲೆ ಅವರಿಗೆ ಶುಭಕೋರಲು ಪ್ರಭು ಚವ್ಹಾಣ್ ಬೆಂಗಳೂರಿನತ್ತ ತೆರಳುತ್ತಿದ್ದರು. ಸಚಿವರು ಸರ್ಕಾರಿ ವಾಹನ ಇನೋವಾದಲ್ಲಿ ಪ್ರಯಾಣಿಸುತ್ತಿದ್ದರು.

    ಸಚಿವರು ತೆರೆಳುತ್ತಿದ್ದ ಕಾರನ್ನು ಅವರ ಗನ್ ಮ್ಯಾನ್ ಫಾರ್ಚುನರ್ ಕಾರಿನಲ್ಲಿ ಹಿಂಬಾಲಿಸುತ್ತಿದ್ದರು. ಈ ವೇಳೆ ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಫಾರ್ಚುನರ್ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಗನ್ ಮ್ಯಾನ್ ರವಿ ಹಾಗೂ ಚಾಲಕ ಸಂಜುಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಸಂಬಂಧ ತೆಲಂಗಾಣದ ಜಹೀರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಷ್ಟದಲ್ಲಿ ಕೈಹಿಡಿದ ನಂಬಿದ ದೇವ-ಭಕ್ತರಿಗೆ ಉಚಿತ ಆರೋಗ್ಯ ಸೇವೆ

    ಕಷ್ಟದಲ್ಲಿ ಕೈಹಿಡಿದ ನಂಬಿದ ದೇವ-ಭಕ್ತರಿಗೆ ಉಚಿತ ಆರೋಗ್ಯ ಸೇವೆ

    -ಡಾ. ಬಸವರಾಜ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ

    ಬೀದರ್: ಭಾಲ್ಕಿಯ ಖಾನಾಪೂರದ ಮೈಲಾರ ಮಲ್ಲಣ ದೇವಸ್ಥಾನದ ಭಕ್ತರಿಗೆ 15 ವರ್ಷಗಳಿಂದ ಉಚಿತ ಚಿಕಿತ್ಸೆ ನೀಡುತ್ತಿರುವ ಡಾ.ಬಸವರಾಜ್ ಉಜ್ವಲ್ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಬೀದರ್ ನ ನೌಬಾದ್ ನಿವಾಸಿಯಾಗಿರುವ ಡಾ. ಬಸವರಾಜ್ ಉಜ್ವಲ್ ಬಿಎಎಂಎಸ್ ವೈದ್ಯರಾಗಿದ್ದು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಭಾಲ್ಕಿ ತಾಲೂಕಿನ ಖಾನಪೂರ್ ಬಳಿಯ ಮೈಲಾರ್ ಮಲ್ಲಣ್ಣ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಉಚಿತವಾಗಿ ವೈದ್ಯಕೀಯ ನೆರವು ನೀಡುತ್ತಿದ್ದಾರೆ.

    ಪ್ರತಿ ಭಾನುವಾರ, ಅಮವಾಸ್ಯೆ, ಹುಣ್ಣಿಮೆ, ಜಾತ್ರ ಉತ್ಸವ ಸೇರಿದಂತೆ ದೇವಸ್ಥಾನದ ಯಾವುದೇ ಕಾರ್ಯಕ್ರಮವಿದ್ದರೂ ವೈದ್ಯರು ಕ್ಯಾಂಪ್ ಹಾಕುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಆರೋಗ್ಯ ತಪಾಸಣೆ ಮಾಡ್ತಾರೆ. ನೆಗಡಿ, ಕೆಮ್ಮು, ಜ್ವರದಂತ ಪ್ರಾಥಮಿಕ ರೋಗಗಳಿಗೆ ಚಿಕಿತ್ಸೆ ನೀಡ್ತಾರೆ. ದೊಡ್ಡ ಸಮಸ್ಯೆ ಇದ್ದಲ್ಲಿ ತಜ್ಞ ವೈದ್ಯರಿಗೆ ಶಿಫಾರಸು ಮಾಡುತ್ತಾರೆ.

    ಡಾಕ್ಟರ್ ಬಸವರಾಜ್ ಅವರ ಪತ್ನಿ ಅವರು ಆರೋಗ್ಯ ಇಲಾಖೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಮೈಲಾರ ಮಲ್ಲಣ್ಣನ ಕೃಪೆಯಿಂದ ನನಗೆ ಸಾಕಷ್ಟು ಒಳ್ಳೆಯದಾಗಿದೆ. ಹಾಗಾಗಿ ಭಕ್ತರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಡಾ.ಬಸವರಾಜ್ ಹೇಳುತ್ತಾರೆ.

  • ಯತ್ನಾಳ್ ಮನುಷ್ಯ ಜಾತಿಗೆ ಸೇರಿದವರೇ ಅಲ್ಲ: ಖಂಡ್ರೆ ಕೆಂಡಾಮಂಡಲ

    ಯತ್ನಾಳ್ ಮನುಷ್ಯ ಜಾತಿಗೆ ಸೇರಿದವರೇ ಅಲ್ಲ: ಖಂಡ್ರೆ ಕೆಂಡಾಮಂಡಲ

    ಬೀದರ್: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಎಂದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಇಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿ ಯತ್ನಾಳ್ ಮನುಷ್ಯ ಜಾತಿಗೆ ಸೇರಿದವರೇ ಅಲ್ಲ ಎಂದು ಕಿಡಿಕಾರಿದ್ದಾರೆ.

    ಖಾಸಗಿ ಕಾಲೇಜಿನಲ್ಲಿ ಸುದ್ದಿಗೋಷ್ಠಿ ಮಾಡಿದ ಖಂಡ್ರೆ, ಈ ದೇಶಕ್ಕಾಗಿ ಹೋರಾಟ ಮಾಡಿದ ಶತಾಯುಷಿ ಬಗ್ಗೆ ನಕಲಿ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದು ಹುಚ್ಚು ಹುಚ್ಚಾಗಿ ಹೇಳಿಕೆ ಕೊಟ್ಟಿದ್ದು ಅತ್ಯಂತ ಖಂಡನೀಯವಾಗಿದೆ. ಇದು ಬರಿ ಸ್ವಾತಂತ್ರ್ಯ ಸೇನಾನಿಗಳಿಗೆ ಮಾಡಿದ ಅಪಮಾನವಲ್ಲ, ದೇಶದ 130 ಕೋಟಿ ಜನರಿಗೆ ಮಾಡಿದ ದ್ರೋಹವಾಗಿದೆ. ಹೀಗೆ ಮಾತನಾಡುವ ಯತ್ನಳ್ ಮನುಷ್ಯ ಜಾತಿಗೆ ಸೇರಿದವರೇ ಅಲ್ಲ. ಇದು ದೇಶದ್ರೋಹದ ಹೇಳಿಕೆ ಎಂದು ವಾಗ್ದಾಳಿ ನಡೆಸಿದರು.

    ಒಬ್ಬ ಹಿರಿಯ ವಯೋವೃದ್ಧರಿಗೆ ಏಕ ವಚನದಲ್ಲಿ ಹೇಳಿಕೆ ನೀಡಿದ್ದು ಅಮಾನವೀಯ ಹಾಗೂ ಲಜ್ಜೆಗೆಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯತ್ನಾಳ್‍ರನ್ನು ಕೂಡಲೆ ಶಾಸಕ ಸ್ಥಾನದಿಂದ ಉಚ್ಛಾಟನೆ ಮಾಡಿ ಬಿಜೆಪಿ ಅವರ ವಿರುದ್ಧ ಕಾನೂನು ರೀತಿ ಕ್ರಮ ತಗೆದುಕೊಳ್ಳಬೇಕು ಎಂದು ಬೀದರ್ ನಲ್ಲಿ ಖಂಡ್ರೆ ಹರಿಹಾಯ್ದರು.

    ಯತ್ನಾಳ್ ಹೇಳಿದ್ದೇನು?
    ಮಂಗಳವಾರ ವಿಜಯಪುರದಲ್ಲಿ ಯತ್ನಾಳ್ ಅವರು ದೊರೆಸ್ವಾಮಿ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಮಾಧ್ಯಮಗಳ ಜೊತೆ ಮಾತನಾಡುತ್ತಾ, ದೇಶದ್ರೋಹಿ ಘೋಷಣೆ ಹಾಗೂ ಫೇಸ್‍ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಖಡಕ್ ವಾರ್ನಿಂಗ್ ನೀಡಿದ್ದರು. ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು, ದೇಶದ್ರೋಹಿಗಳೇ ಹುಷಾರ್. ಇನ್ನು ಮುಂದು ಹಾಗೆಲ್ಲ ಮಾಡಿದರೆ ಗುಂಡೇಟು ಬೀಳುತ್ತವೆ. ಜೈಲಿಗೆ ಕಳುಹಿಸುವುದೆಲ್ಲ ಇಲ್ಲ, ಇನ್ಮೇಲೆ ದೇಶದ್ರೋಹದ ಹೇಳಿಕೆ ಕೊಟ್ಟರೆ ಅವರಿಗೆ ಗುಂಡು ಬೀಳುತ್ತೆ ಎನ್ನುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲದೇ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಎಲ್ಲಿದ್ದಾನೆ ಆ ಮುತ್ಯಾ ಈಗ, ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್. ಪಾಕಿಸ್ತಾನ ಏಜೆಂಟ್ರಂತೆ ದೊರೆಸ್ವಾಮಿ ಮಾತಾಡ್ತಿದ್ದಾನೆ ಎಂದು ಕಿಡಿಕಾರಿದ್ದರು.

  • ಮಂಗ್ಳೂರಿನಲ್ಲಿ ಇಬ್ಬರು ಅಮಾಯಕರನ್ನು ಪೊಲೀಸರೇ ಕೊಂದ್ರು: ಸಿದ್ದರಾಮಯ್ಯ ಆರೋಪ

    ಮಂಗ್ಳೂರಿನಲ್ಲಿ ಇಬ್ಬರು ಅಮಾಯಕರನ್ನು ಪೊಲೀಸರೇ ಕೊಂದ್ರು: ಸಿದ್ದರಾಮಯ್ಯ ಆರೋಪ

    – ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆ

    ಬೀದರ್: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಅಮಾಯಕರನ್ನು ಪೊಲೀಸಿನವರೇ ದುರುದ್ದೇಶದಿಂದ ಕೊಂದು ಬಿಟ್ಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪೊಲೀಸ್ ಇಲಾಖೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಭಾನುವಾರ ಪೌರತ್ವ ಕಾಯ್ದೆ ವಿರೋಧಿಸಿ ಜಂಟಿ ಕ್ರಿಯಾ ಸಮಿತಿಯಿಂದ ಬಸವಕಲ್ಯಾಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಪೊಲೀಸ್ ಇಲಾಖೆ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸರ್ಕಾರದ ಕೈಗೊಂಬೆಯಂತೆ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದ್ದು, ಮಂಗಳೂರಿನಲ್ಲಿ ನಡೆದ ಗೋಲಿಬಾರ್‍ನಲ್ಲಿ ಇಬ್ಬರು ಅಮಾಯಕರು ಸತ್ತರು ಎಂದರು.

    ಸತ್ತವರು ಅಮಾಯಕರು ಅಲ್ಲಾ ಎಂದು ಬಿಜೆಪಿ ಹೇಳುತ್ತದೆ. ಆದರೆ ಕೋರ್ಟ್ ಅವರನ್ನು ಅಮಾಯಕರು ಎಂದು ಹೇಳುತ್ತದೆ ಎಂದು ಬಿಜೆಪಿ ಮೇಲೆ ಕಿಡಿಕಾರಿದರು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ರಹೀಂಖಾನ್, ರಾಜಶೇಖರ್ ಪಾಟೀಲ್, ಬಿ ನಾರಾಯಣ್, ಬಂಡೆಪ್ಪ ಕಾಶೆಂಪೂರ್, ಎಂಎಲ್‍ಸಿ ಅರವಿಂದ ಅರಳಿ, ಹಲವು ಹೋರಾಟಗಾರು, ಪಕ್ಷದ ಮುಖಂಡರು ಹಾಗೂ ಸಾವಿರಾರು ಜನರು ಭಾಗಿಯಾಗಿದ್ದರು.