Tag: bidar

  • ಬೀದರ್‌ನಲ್ಲಿ ಕೊರೊನಾಗೆ ಮತ್ತೊಂದು ಬಲಿ- ರಾಜ್ಯದಲ್ಲಿ ಮೃತರ ಸಂಖ್ಯೆ 45ಕ್ಕೆ ಏರಿಕೆ

    ಬೀದರ್‌ನಲ್ಲಿ ಕೊರೊನಾಗೆ ಮತ್ತೊಂದು ಬಲಿ- ರಾಜ್ಯದಲ್ಲಿ ಮೃತರ ಸಂಖ್ಯೆ 45ಕ್ಕೆ ಏರಿಕೆ

    ಬೀದರ್: ಹೆಮ್ಮಾರಿ ಕೊರೊನಾ ವೈರಸ್ ಜಿಲ್ಲೆಯಲ್ಲಿ ಮತ್ತೊಂದು ಬಲಿ ಪಡೆದುಕೊಂಡಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 45ಕ್ಕೆ ಏರಿದೆ.

    ಬೀದರ್‌ನ ವಿದ್ಯಾನಗರ ಕಾಲೋನಿಯ ನಿವಾಸಿ 49 ವರ್ಷದ ವ್ಯಕ್ತಿಗೆ ಮೇ 22ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ಅವರನ್ನು ರೋಗಿ-1712 ಎಂದು ಗುರುತಿಸಲಾಗಿತ್ತು. ಸೋಂಕಿನಿಂದಾಗಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬ್ರೀಮ್ಸ್‌ನ ಐಸೋಲೇಷನ್ ವಾರ್ಡಿನಲ್ಲಿ ಇಂದು ಮೃತಪಟ್ಟಿದ್ದಾರೆ.

    ಮೃತ ವ್ಯಕ್ತಿಯು ಕಿಡ್ನಿ ವೈಫಲ್ಯ ಹಾಗೂ ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆರೋಗ್ಯ ಇಲಾಖೆ ನಿಯಮದಂತೆ ಇಂದು ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಪಬ್ಲಿಕ್ ಟಿವಿಗೆ ಬ್ರೀಮ್ಸ್ ನಿರ್ದೇಶಕ ಡಾ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

    ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಮೂರನೇ ಬಲಿಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂಗಳವಾರದ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ.

  • ಕ್ವಾರಂಟೈನ್‍ನಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು

    ಕ್ವಾರಂಟೈನ್‍ನಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು

    ಬೀದರ್: ಕ್ವಾರಂಟೈನ್‍ನಲ್ಲಿದ್ದ ಯುವಕನೊಬ್ಬ ಇಂದು ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ.

    ಸಚಿನ್ ಜಾದವ್ (21) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈಗಾಗಲೇ ಯುವಕ ಜಾದವ್‍ಗೆ ಮದುವೆಯಾಗಿದ್ದು, ಎಂಟು ದಿನಗಳ ಹಿಂದೆ ಮುಂಬೈನಿಂದ ಪತ್ನಿಯ ಜೊತೆ ಜಿಲ್ಲೆಗೆ ಬಂದಿದ್ದನು.

    ಮುಂಬೈನಿಂದ ಬಂದ ಕಾರಣ ದಂಪತಿಯನ್ನು ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ರಾತ್ರಿ ಪತ್ನಿಯ ಜೊತೆಗಿದ್ದ ಜಾದವ್ ಇಂದು ಬೆಳಗಿನ ಜಾವ ನೇಣು ಬಿಗಿದುಕೊಂಡು ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮಾಹಿತಿ ತಿಳಿದು ಸ್ಥಳಕ್ಕೆ ಔರಾದ್ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ಜಾದವ್ ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.

  • ಬೀದರ್‌ನಲ್ಲಿ ಗರ್ಭಿಣಿ, ಮಗು ಸೇರಿ 6 ಮಂದಿಗೆ ಕೊರೊನಾ – ಧಾರವಾಡದಲ್ಲಿ ಇಂದು 2 ಪ್ರಕರಣ

    ಬೀದರ್‌ನಲ್ಲಿ ಗರ್ಭಿಣಿ, ಮಗು ಸೇರಿ 6 ಮಂದಿಗೆ ಕೊರೊನಾ – ಧಾರವಾಡದಲ್ಲಿ ಇಂದು 2 ಪ್ರಕರಣ

    ಧಾರವಾಡ/ಬೀದರ್: ಇಂದು ಕರ್ನಾಟದಲ್ಲಿ 105 ಕೊರೊನಾ ಸೋಂಕಿತ ಹೊಸ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ ಬೀದರ್‌ನಲ್ಲಿ ಗರ್ಭಿಣಿ, ಮಗು ಸೇರಿ 6 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಧಾರವಾಡದಲ್ಲಿ ಇಂದು 2 ಸೋಂಕಿತ ಪ್ರಕರಣ ವರದಿಯಾಗಿದೆ.

    ಈ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದು, ರೋಗಿ-1,609(22 ವರ್ಷದ ಯುವಕ) ಹಾಗೂ ರೋಗಿ-1,610(23 ವರ್ಷದ ಯುವಕ) ಇವರಿಬ್ಬರು ನವದೆಹಲಿಯಿಂದ ರೈಲಿನಲ್ಲಿ ಹಿಂದಿರುಗಿರುವ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಈ ಇಬ್ಬರೂ ಜಿಲ್ಲೆಗೆ ಬಂದ ಕೂಡಲೇ ಅವರ ಗಂಟಲು ದ್ರವ ಪರೀಕ್ಷೆಗೊಳಪಡಿಸಿ, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಈ ಎರಡು ಪ್ರಕರಣ ಸೇರಿಸಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಈಗಾಗಲೇ 09 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

    ಇತ್ತ ಬೀದರ್ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರು ಕಂಟಕವಾಗಿದ್ದು, ಅವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಗರ್ಭಿಣಿ, ಮಗು ಸೇರಿದಂತೆ ಒಟ್ಟು 6 ಜನರಲ್ಲಿ ಇಂದು ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ 23 ವಯಸ್ಸಿನ ಗರ್ಭಿಣಿ, 2 ವರ್ಷದ ಮಗುವಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಇವರು ಹಳ್ಳಿಖೇಡ ಗ್ರಾಮಕ್ಕೆ ಬಂದಿದ್ದರು. ಇವರ ವೈದ್ಯಕೀಯ ತಪಾಸಣೆ ಮಾಡಿದಾಗ ಸೋಂಕು ಇರುವುದು ದೃಢಡವಾಗಿದೆ.

    ಇನ್ನುಳಿದಂತೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮಕ್ಕೆ ಮಹಾರಾಷ್ಟ್ರದಿಂದ ಬಂದ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ. ತೆಲಂಗಾಣದಿಂದ ವಾಪಸ್ ಬಂದಿದ್ದ ಓರ್ವ ಮಹಿಳೆ ಹಾಗೂ ಹಲಸಿ(ಎಲ್) ಗ್ರಾಮದ 28 ವಯಸ್ಸಿನ ಯುವಕನಿಗೆ ಕೊವಿಡ್-19 ಇರುವುದು ದೃಢವಾಗಿದೆ. ಈ ಮೂಲಕ ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿದ್ದು, ಈ ಪೈಕಿ 21 ಜನರು ಗುಣಮುಖರಾಗಿದ್ದಾರೆ. ಅಲ್ಲದೆ ಕೊರೊನಾ ಜಿಲ್ಲೆಯ ಇಬ್ಬರನ್ನು ಬಲಿ ಪಡೆದಿದೆ.

  • ಮುಂಬೈನಿಂದ ಬಂದಿದ್ದ ಮಹಿಳೆ ಸೇರಿ ನಾಲ್ವರಿಗೆ ಸೋಂಕು – ಹುಮನಾಬಾದ್‍ಗೆ ಬಂತು ಕೊರೊನಾ

    ಮುಂಬೈನಿಂದ ಬಂದಿದ್ದ ಮಹಿಳೆ ಸೇರಿ ನಾಲ್ವರಿಗೆ ಸೋಂಕು – ಹುಮನಾಬಾದ್‍ಗೆ ಬಂತು ಕೊರೊನಾ

    ಬೀದರ್: ಮುಂಬೈನಿಂದ ಬಂದ ಮಹಿಳೆಯೊಬ್ಬರು ಸೇರಿ ಓಲ್ಡ್ ಸಿಟಿಯ ನಿರ್ಬಂಧಿತ ಪ್ರದೇಶದ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

    ಈ ಮೂಲಕ ಗಡಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಣಸಗೇರಾ ಗ್ರಾಮದ 45 ವಯಸ್ಸಿನ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಈಕೆ ಮಹಾರಾಷ್ಟ್ರದ ಮುಂಬೈನಿಂದ ಸ್ವಗ್ರಾಮಕ್ಕೆ ಪ್ರವಾಸ ಮಾಡಿದ ಹಿನ್ನೆಲೆಯಿದ್ದು, ಹುಮನಾಬಾದ್ ತಾಲೂಕಿನಲ್ಲಿ ಮೊದಲ ಪ್ರಕರಣ ಇದಾಗಿದೆ.

    ಅಲ್ಲದೆ ನಗರದ ಓಲ್ಡ್ ಸಿಟಿಯಲ್ಲಿ ನಡೆಸಲಾಗುತ್ತಿರುವ ಸಾಮೂಹಿಕ ತಪಾಸಣೆ ವೇಳೆ ಮತ್ತೆ ಮೂವರು ಯುವಕರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಇದರಲ್ಲಿ 14 ಜನರು ಗುಣಮುಖರಾಗಿದ್ದರೆ, ಒಬ್ಬ ವೃದ್ಧ ಬಲಿಯಾಗಿದ್ದು, ಉಳಿದ 31 ಮಂದಿ ಸೋಂಕಿತರಿಗೆ ಜಿಲ್ಲಾಸ್ಪತ್ರೆಯ ಕೊರೊನಾ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಬೀದರ್ ಓಲ್ಡ್ ಸಿಟಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ: 28ಕ್ಕೇರಿದ ಸೋಂಕಿತರ ಸಂಖ್ಯೆ

    ಬೀದರ್ ಓಲ್ಡ್ ಸಿಟಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ: 28ಕ್ಕೇರಿದ ಸೋಂಕಿತರ ಸಂಖ್ಯೆ

    ಬೀದರ್: ದೆಹಲಿಯ ಜಮಾತ್‍ಗೆ ಹೋಗಿ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಮುಖಾಂತರ ಓಲ್ಡ್ ಸಿಟಿಯಲ್ಲಿ ಇಂದು ಮತ್ತೆ ಇಬ್ಬರು ಸೋಂಕಿಗೆ ತುತ್ತಾಗಿದ್ದಾರೆ.

    ಓಲ್ಡ್ ಸಿಟಿಯ ಇಡೇನ್ ಕಾಲೋನಿಯ 50 ವರ್ಷದ ವ್ಯಕ್ತಿ ಹಾಗೂ 27 ವಯಸ್ಸಿನ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದು, ಈ ಇಬ್ಬರು ಕೊರೊನಾ ರೋಗಿ ನಂಬರ್ 644ರ ಸಂಪರ್ಕಕ್ಕೆ ಬಂದು ಸೋಂಕು ತಗುಲಿಸಿಕೊಂಡಿದ್ದಾರೆ. ಈಗ ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, 14 ಜನರನ್ನು ಗುಣಮುಖ ಮಾಡಿ ಮನೆಗೆ ಕಳುಹಿಸಲಾಗಿದೆ.

    ಜಿಲ್ಲೆಯಲ್ಲಿ ಸೋಂಕಿಗೆ ಒಂದು ಸಾವಾಗಿದೆ. ಸದ್ಯ ಕೊರೊನಾ ವಾರ್ಡ್‍ನಲ್ಲಿ 13 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯಾದ್ಯಂತ ಇಂದು 10 ಮಂದಿ ಹೊಸ ಪ್ರಕರಣಗಳು ದಾಖಲಾಗಿವೆ. ಬೀದರ್ ನಲ್ಲಿ 2, ಬಾಗಲಕೋಟೆಯಲ್ಲಿ 2, ದಾವಣಗೆರೆಯಲ್ಲಿ 3, ಹಾವೇರಿ, ವಿಜಯಪುರ ಹಾಗೂ ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858ಕ್ಕೆ ಏರಿದೆ.

  • ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಸಚಿವ ಪ್ರಭು ಚೌವ್ಹಾನ್

    ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಸಚಿವ ಪ್ರಭು ಚೌವ್ಹಾನ್

    ಬೀದರ್: ಸಾಮಾಜಿಕ ಅಂತರ ಕಾಪಾಡದೆ ಬೆಂಬಲಿಗರೊಂದಿಗೆ ಆಹಾರದ ಕಿಟ್ ಹಂಚುವ ಮೂಲಕ ಲಾಕ್‍ಡೌನ್ ನಿಯಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಉಲ್ಲಂಘನೆ ಮಾಡಿದ್ದಾರೆ.

    ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಸಚಿವರೇ ಮುಂಜಾಗ್ರತಾ ಕ್ರಮಕೈಗೊಳ್ಳದೆ ನಿಯಮ ಉಲ್ಲಂಘನೆ ಮಾಡಿದ್ದರಿಂದ ಆಹಾರ ಧಾನ್ಯದ ಕಿಟ್ ಪಡೆಯಲು ನಾ ಮುಂದು ತಾ ಮುಂದು ಎಂದು ಸಾವಿರಾರು ಜನ ಮುಗಿಬಿದ್ದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಒಂದು ಕ್ಷಣ ಆಹಾರ ಧಾನ್ಯ ಹಂಚುವ ಸ್ಥಳ ಜಾತ್ರೆಯಂತಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ.

    ಇಂದು ಬೀದರ್ ನಗರದ ನೌಬಾದ್ ನಲ್ಲಿ ಜಿಎನ್ ಫೌಂಡೇಶನ್ ನಿಂದ ಆಹಾರ ಧ್ಯಾನ ಕಿಟ್ ಪಡೆಯಲು ಸಾವಿರಾರು ಜನ ಮುಗಿ ಬಿದ್ದದನ್ನು ನೋಡಿದ ಸಚಿವರು ಅಲ್ಲಿಂದ ಕಾಲ್ಕಿತ್ತರು. ಈಗಾಗಾಲೇ ಜಿಲ್ಲೆಯಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಒಬ್ಬರನ್ನು ಬಲಿ ಪಡೆಯುವ ಜೊತೆಗೆ ತನ್ನ ಸಂಖ್ಯೆಯನ್ನು 23ಕ್ಕೆ ಏರಿಕೆ ಮಾಡಿಕೊಂಡಿದೆ.

  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆ

    ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆ

    -ಇವತ್ತು ಒಂದೇ ದಿನ 16 ಮಂದಿಗೆ ಸೋಂಕು
    -ಬೀದರ್ ನಲ್ಲಿ 7 ಮಂದಿಗೆ ಕೊರೊನಾ

    ಬೆಂಗಳೂರು: ಇವತ್ತು ಒಂದೇ ದಿನ 16 ಮಂದಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾದಿಂದ 26 ಮಂದಿ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ರೋಗಿ 590ರಿಂದಲೇ 7 ಜನಕ್ಕೆ ಕೊರೊನಾ ಸೋಂಕು ತಗುಲಿದೆ. ಇನ್ನು ಬೆಂಗಳೂರಿನ 40 ವರ್ಷದ ಪುರುಷನಿಗೆ ಸೋಂಕು ಹೇಗೆ ಕಾಣಿಸಿಕೊಂಡಿತ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ಸೋಂಕಿತರ ವಿವರ:
    ಸಂಜೆ ಬಿಡುಗಡೆಯಾದ ಬುಲೆಟಿನ್
    1. ರೋಗಿ 643: ಬೀದರ್ ನಿವಾಸಿ 35 ವರ್ಷದ ಮಹಿಳೆ. ರೋಗಿ 590ರ ಜೊತೆ ಸಂಪರ್ಕ
    2. ರೋಗಿ 644: ಬೀದರ್ ನಿವಾಸಿ 46 ವರ್ಷದ ಮಹಿಳೆ. ರೋಗಿ 590ರ ಜೊತೆ ಸಂಪರ್ಕ
    3. ರೋಗಿ 645: ಬೀದರ್ ನಿವಾಸಿ 50 ವರ್ಷದ ಮಹಿಳೆ. ರೋಗಿ 590ರ ಜೊತೆ ಸಂಪರ್ಕ

    4. ರೋಗಿ 646: ಬೀದರ್ ನಿವಾಸಿ 16 ವರ್ಷದ ಬಾಲಕ. ರೋಗಿ 590ರ ಜೊತೆ ಸಂಪರ್ಕ
    4. ರೋಗಿ 647: ಬೀದರ್ ನಿವಾಸಿ 72 ವರ್ಷದ ವೃದ್ಧೆ. ರೋಗಿ 590ರ ಜೊತೆ ಸಂಪರ್ಕ
    5. ರೋಗಿ 648: ಬೀದರ್ ನಿವಾಸಿ 22 ವರ್ಷದ ಯುವಕ. ರೋಗಿ 590ರ ಜೊತೆ ಸಂಪರ್ಕ
    6. ರೋಗಿ 649: ಬೀದರ್ ನಿವಾಸಿ 60 ವರ್ಷದ ವೃದ್ಧ. ರೋಗಿ 590ರ ಜೊತೆ ಸಂಪರ್ಕ
    7. ರೋಗಿ 650: ಬೆಂಗಳೂರ ನಗರದ 40 ವರ್ಷದ ಪುರುಷ. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
    8. ರೋಗಿ 651: ದಾವಣಗೆರೆಯ 48 ವರ್ಷದ ಮಹಿಳೆ. ರೋಗಿ 533ರ ಜೊತೆ ದ್ವಿತೀಯ ಸಂಪರ್ಕ

    ಬೆಳಗ್ಗೆ ಕಲಬುರಗಿಯಲ್ಲಿ 56 ವರ್ಷದ ಪುರುಷ ಸಾವನ್ನಪ್ಪಿರುವ ಬಗ್ಗೆ ಆರೋಗ್ಯ ಇಲಾಖೆ ತಿಳಿಸಿತ್ತು. ಸಂಜೆ ಬುಲೆಟಿನ್ ನಲ್ಲಿ ದಾವಣಗೆರೆಯ 48 ವರ್ಷದ ಮಹಿಳೆ (ರೋಗಿ 651) ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಮೇ 1ರಂದು ಆಸ್ಪತ್ರೆಗೆ ದಾಖಲಾಗಿದ್ದರು. ದಾವಣಗೆರೆಯಲ್ಲಿ ಇದು ಎರಡನೇ ಸಾವು ಆಗಿದೆ. ಇಂದು ಒಟ್ಟು 28 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

  • ವರದಿ ನೆಗೆಟಿವ್ – ಜಮಾತ್‍ಗೆ ಹೋಗಿ ಬಂದಿದ್ದ 3 ಮಂದಿ ಡಿಸ್ಚಾರ್ಜ್

    ವರದಿ ನೆಗೆಟಿವ್ – ಜಮಾತ್‍ಗೆ ಹೋಗಿ ಬಂದಿದ್ದ 3 ಮಂದಿ ಡಿಸ್ಚಾರ್ಜ್

    ಬೀದರ್: ಕಳೆದ 23 ದಿನಗಳಿಂದ ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿದ 3 ಜನ ಕೊರೊನಾ ಶಂಕಿತರ ವರದಿ ನೆಗೆಟಿವ್ ಬಂದ ಹಿನ್ನೆಲೆ ಇಂದು ಮಧ್ಯಾಹ್ನ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

    ದೆಹಲಿ ತಬ್ಲಿಘಿ ಜಮಾತ್‍ಗೆ ಹೋಗಿ ಬಂದಿದ್ದ ದುಬಲಗುಂಡಿ ಗ್ರಾಮದ ಇಬ್ಬರು ಹಾಗೂ ಹಳ್ಳಿಖೇಡ ಬಿ ಪಟ್ಟಣದ ಒಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, ಅಂಬುಲೆನ್ಸ್ ಮೂಲಕ ಅವರ ಊರುಗಳಿಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಆಸ್ಪತ್ರೆಯ ಮೇಲ್ವಿಚಾರಕ ಡಾ. ನಾಗನಾಥ್ ಹುಲಸೂರೆ ಮಾತನಾಡಿ, ಈ ಮೂರು ಮಂದಿಗೆ ಮುಂದಿನ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಬೇಕು. ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಬೇಕು. 14 ದಿನಗಳ ಕಾಲ ಯಾವುದೇ ಕಡೆ ಸಂಚಾರ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ, ಪಿ.ಎಸ್.ಐ ರವಿಕುಮಾರ್, ಡಾ. ಬಸವಂತ ಗುಮ್ಮೆ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಡಾ. ಚೈತ್ರೇಶ್, ಡಾ. ರೋಹಿತ್ ರಗೋಜಿ, ಡಾ. ಇಂದ್ರಜೀತ್ ಚಂದಾ, ಡಾ. ದಿಲೀಪ್ ಡೊಂಗರೆ, ಡಾ. ನುಫೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಆಲಿಕಲ್ಲು ಸಹಿತ ಭಾರೀ ಮಳೆ – ರಾಯಚೂರಿನಲ್ಲಿ ಸಿಡಿಲಿಗೆ ಓರ್ವ ಸಾವು

    ಆಲಿಕಲ್ಲು ಸಹಿತ ಭಾರೀ ಮಳೆ – ರಾಯಚೂರಿನಲ್ಲಿ ಸಿಡಿಲಿಗೆ ಓರ್ವ ಸಾವು

    ರಾಯಚೂರು/ಬೀದರ್: ರಾಜ್ಯದ ಕೆಲವು ಕಡೆ ಜೋರಾಗಿ ಮಳೆರಾಯ ಅಬ್ಬರಿಸಿದ್ದು, ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಿಂಚೇರಿತಾಂಡಾದ ಬಳಿ ನಡೆದಿದೆ.

    ಜಿಲ್ಲೆಯಲ್ಲಿ ಗುಡುಗು ಸಿಡಿಲು ಸಹಿತ ಮಳೆ ಸುರಿಯುತ್ತಿದೆ. ಆದರೆ ಸೋಮನಾಥ್ (25) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಡಿದ ಸಿಡಿಲಿನ ಆಘಾತದಿಂದ ಸಾವು ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಲಿಂಗಸುಗೂರು, ಸಿರವಾರ ತಾಲೂಕಿನಲ್ಲಿ ಹೆಚ್ಚು ಮಳೆ ಸುರಿಯುತ್ತಿದ್ದು, ಗಾಳಿ ಸಹಿತ ಸುರಿದ ಮಳೆಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದುವರೆಗೆ ಸುಮಾರು 8,135 ಹೆಕ್ಟರ್ ಬೆಳೆ ಹಾನಿಯಾಗಿದ್ದು. ಭತ್ತ, ಪಪ್ಪಾಯ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ.

    ಯಾದಗಿರಿ ಜಿಲ್ಲೆಯಾದ್ಯಂತ ಗಾಳಿ ಸಹಿತ ಧಾರಕಾರ ಮಳೆಯಾಗುತ್ತಿದೆ. ಶಹಪುರ, ಸುರಪುರದಲ್ಲಿ ಆಲಿಕಲ್ಲು ಮಳೆಯೊಂದಿಗೆ ಗುಡುಗು, ಸಿಡಿಲಿನ ಅಬ್ಬರ ಜೋರಾಗಿದೆ. ಬಿರು ಬಿಸಿಲಿನ ಧಗೆಯಿಂದ ತತ್ತರಿಸಿದ ಜನತೆಗೆ ಮಳೆರಾಯ ತಂಪೆರೆದಿದ್ದಾರೆ.

    ಇನ್ನೂ ಬಿರು ಬಿಸಿಲಿನಿಂದ ಕೆಂಗೆಟ್ಟಿದ್ದ ಗಡಿ ಜಿಲ್ಲೆಯ ಬೀದರ್ ಜನರಿಗೆ ಇಂದು ಮಳೆರಾಯ ತಂಪೆರೆದಿದ್ದಾನೆ. ಸತತ ಒಂದು ಗಂಟೆಯಿಂದ ಗುಡುಗು, ಸಿಡಿಲು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ರೈತರು ಹಾಗೂ ಜನರು ಹರ್ಷಗೊಂಡಿದ್ದಾರೆ. ಜಿಲ್ಲೆಯ ಬಹುತೇಕ ಕುಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಇಂದು ವರುಣ ಆಗಮನದಿಂದಾಗಿ ಎಲ್ಲರು ಸಂತೋಷಗೊಂಡಿದ್ದಾರೆ.

  • ಜಮಾತ್‍ನಿಂದ ಬಂದವರ ತಲಾಶ್‍ಗೆ ಇಳಿದ ವೈದ್ಯರು – ಮಾಹಿತಿ ನೀಡಲು ನಕಾರ

    ಜಮಾತ್‍ನಿಂದ ಬಂದವರ ತಲಾಶ್‍ಗೆ ಇಳಿದ ವೈದ್ಯರು – ಮಾಹಿತಿ ನೀಡಲು ನಕಾರ

    ಬೀದರ್: ಮಹಾಮಾರಿ ಕೊರೊನಾಗೆ ಈಗಾಗಾಲೇ ವಿಶ್ವವೇ ತಲ್ಲಣವಾಗಿದ್ದು, ದೇಶದಲ್ಲಿ ಕೂಡಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಗಡಿ ಜಿಲ್ಲೆ ಬೀದರ್ ನಿಂದ ಜಮಾತ್‍ಗೆ 28 ಜನ ಹೋಗಿದ್ದಾರೆ ಎಂದು ಮೊದಲು ಮಾಹಿತಿ ಸಿಕ್ಕಿತ್ತು. ಆದರೆ ಈಗ 25 ಜನರಲ್ಲ ಈ ಸಂಖ್ಯೆ ಬಹಳ ಜಾಸ್ತಿಯಿದೆ ಎನ್ನುವ ವಿಚಾರ ಜಿಲ್ಲಾಡಳಿತಕ್ಕೆ ಸಿಕ್ಕಿದೆ.

    ಜಿಲ್ಲಾಧಿಕಾರಿ ಸೂಚನೆ ಮೇರೆಗೆ ವಿದೇಶದಿಂದ ಹಾಗೂ ದೆಹಲಿಯ ಜಮಾತ್‍ನಿಂದ ಬಂದವರ ತಲಾಶ್‍ಗೆ ವೈದ್ಯರ ಹಾಗೂ ಆಶಾ ಕಾರ್ಯಕರ್ತೆಯರು ಫೀಲ್ಡಿಗೆ ಇಳಿದಿದ್ದಾರೆ. ಆದರೆ ಈ ವೈದ್ಯರ ಟೀಂಗೆ ಜನರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ವೈದ್ಯರ ಹಾಗೂ ಆಶಾ ಕಾರ್ಯಕರ್ತೆಯರು ಆತಂಕದಲ್ಲಿ ದೆಹಲಿಯಿಂದ ಬಂದ ಜನರನ್ನು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಜಮಾತ್ ಗೆ ಹೋಗಿದ್ದ 28 ಜನರ ಪೈಕಿ 10 ಜನಕ್ಕೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

    ಈ ಭಯದಿಂದ ಜಿಲ್ಲಾಡಳಿತ ಮಾಹಿತಿ ಸಂಗ್ರಹಣೆಗೆ ಹೋದರೆ ಜನರು ಸಾಥ್ ನೀಡದೆ ವಿನಾಕಾರಣ ವೈದ್ಯರ ಬಳಿ ಸಿಕ್ಕಾಪಟ್ಟೆ ಪ್ರಶ್ನೆ ಕೇಳುತ್ತಿದ್ದಾರೆ. ಜೀವದ ಹಂಗು ತೊರೆದು ಕೊರೊನಾ ನಿಯಂತ್ರಿಸಲು ಶ್ರಮ ಪಡುತ್ತಿದ್ದಾಗ ಜನ ನಮಗೆ ಸಹಕಾರ ನೀಡುತ್ತಿಲ್ಲ ಎಂದು ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದ್ದಾರೆ.

    ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ತಬ್ಲಿಘಿ ಝಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಈ ಸಂಬಂಧ ಆರೋಗ್ಯ ಇಲಾಖೆಯ ಉಚಿತ ಆರೋಗ್ಯ ಸಹಾಯ 080-29711171ಕ್ಕೆ ಕರೆ ಮಾಡಿ ಸಂಪರ್ಕಿಸಬೇಕೆಂದು ಹೇಳಿದೆ.

    ದೇಶಾದ್ಯಂತ ತಬ್ಲಿಘಿ ಜಮಾತ್‍ಗೆ ತೆರಳಿದವರು ಮತ್ತು ಅವರ ಸಂಪರ್ಕಕ್ಕೆ ಬಂದ ಒಟ್ಟು 26 ಸಾವಿರ ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.