Tag: bidar

  • ಬೀದರ್‌ನಲ್ಲಿ ಇಂದು ಇಬ್ಬರನ್ನು ಬಲಿ ಪಡೆದ ಕೊರೊನಾ

    ಬೀದರ್‌ನಲ್ಲಿ ಇಂದು ಇಬ್ಬರನ್ನು ಬಲಿ ಪಡೆದ ಕೊರೊನಾ

    -411ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

    ಬೀದರ್: ಕಳೆದ ಐದು ದಿನಗಳಿಂದ ಗಡಿ ಜಿಲ್ಲೆ ಬೀದರ್ ನಲ್ಲಿ ಕೊರೊನಾ ತನ್ನ ಸಾವಿನ ಸರಣಿ ಶುರು ಮಾಡಿದೆ. ಜಿಲ್ಲೆಯಲ್ಲಿ ಇಂದು ಕೂಡಾ ಮಹಾಮಾರಿ ಕೊರೊನಾ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಕಿಡ್ನಿ, ಜ್ವರ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ 45 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ.

    ಬೀದರಿನ ಮಾಂಗರವಾಡಿಯ ನಿವಾಸಿ ಜೂನ್ 13 ರಂದು ಬ್ರೀಮ್ಸ್ ಗೆ ದಾಖಲಾಗಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ತೆಲಂಗಾಣ ಕಂಟಕದಿಂದಾಗಿ ಕೊರೊನಾ ಬಂದಿರಬಹುದು ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಇನ್ನು ಬಸವಕಲ್ಯಾಣ ನಿವಾಸಿ 70 ವರ್ಷದ ವೃದ್ಧ ಮಹಾಮಾರಿಗೆ ಬಲಿಯಾಗಿದ್ದಾರೆ.

    ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 70 ವರ್ಷದ ವೃದ್ಧ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಡೆಡ್ಲಿ ಕೊರೊನಾದ ರುದ್ರ ನರ್ತನ ನೋಡಿ ಜಿಲ್ಲೆಯ ಜನವರು ತೀವ್ರ ಆತಂಕಗೊಂಡಿದ್ದಾರೆ. ಬಸವ ಕಲ್ಯಾಣ, ಭಾಲ್ಕಿ, ಚಿಟ್ಟಗುಪ್ಪ ಹಾಗೂ ಬೀದರ್ ತಾಲೂಕು ಸೇರಿದಂತೆ ಇಂದು ಒಟ್ಟು 10 ಜನರಿಗೆ ಇಂದು ಕೊರೊನಾ ಸೋಂಕು ದೃಢವಾಗಿದೆ.

    ಇಂದು 10 ಪಾಸಿಟಿವ್ ಕೇಸ್ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 411ಕ್ಕೆ ಏರಿಕೆಯಾಗಿದೆ. 411 ಜನ ಸೋಂಕಿತರ ಪೈಕಿ 254 ಗುಣಮುಖರಾಗಿ ಬಿಡುಗಡೆಯಾದ್ದು, 146 ಜನಕ್ಕೆ ಇನ್ನು ಸೋಂಕು ಸಕ್ರಿಯವಾಗಿದೆ. ಇಂದು ಇಬ್ಬರನ್ನು ಬಲಿ ಪಡೆಯುವ ಮೂಲಕ ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

  • ಬೀದರ್‌ನಲ್ಲಿ ಕೊರೋನಾಘಾತ- ಮಹಾಮಾರಿಗೆ ಇಂದು ಯುವಕ ಬಲಿ

    ಬೀದರ್‌ನಲ್ಲಿ ಕೊರೋನಾಘಾತ- ಮಹಾಮಾರಿಗೆ ಇಂದು ಯುವಕ ಬಲಿ

    ಬೀದರ್: ದಿನೇ ದಿನೇ ಗಡಿ ಜಿಲ್ಲೆ ಬೀದರ್‍ನಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಜ್ವರದಿಂದ ಬಳಲುತ್ತಿದ್ದ 26 ವರ್ಷದ ಯುವಕನನ್ನು ಕೊರೊನಾ ಮಾಹಾಮಾರಿ ಇಂದು ಬಲಿ ತೆಗೆದುಕೊಂಡಿದೆ.

    ಜೂನ್ 10 ಅನಾರೋಗ್ಯ ಕಾರಣ ಬ್ರೀಮ್ಸ್ ಗೆ ದಾಖಲಾಗಿದ್ದ ಯುವಕ ಜೂನ್ 15 ರಂದು ಚಿಕಿತ್ಸೆ ಫಲಕಾರಿಯಾಗದೆ ಬ್ರೀಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ಬಳಿಕ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಯುವಕನಿಗೆ ಕೊರೊನಾ ಪಾಸಿಟಿವ್ ಸೋಂಕು ಇರುವುದು ಧೃಡವಾಗಿದೆ.

    ಇಂದು ಕೂಡ ಗಡಿ ಜಿಲ್ಲೆ ಬೀದರ್ ನಲ್ಲಿ 12 ಮಂದಿಯಲ್ಲಿ ಕೊರೊನಾ ಧೃಡವಾಗಿದೆ. ಬಸವಕಲ್ಯಾಣ, ಔರಾದ್, ಬೀದರ್ ತಾಲೂಕಿನ ಒಂದು ವರ್ಷದ ಮಗು ಸೇರಿದಂತೆ 11 ಜನಕ್ಕೆ ಸೋಂಕು ಧೃಡವಾಗಿದೆ. ಒಟ್ಟು 12 ಪಾಸಿಟಿವ್ ಕೇಸ್ ನಲ್ಲಿ ಮುಂಬೈ ಕಂಟಕದಿಂದ 11 ಜನರಿಗೆ ಸೋಂಕು ಧೃಡವಾಗಿದ್ದು ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ.

    ಅದರಲ್ಲಿ 239 ಜನ ಗುಣಮುಖರಾಗಿ ಬಿಡುಗಡೆಯಾದ್ರೆ, 148 ಜನರಿಗೆ ಮಹಾಮಾರಿ ಇನ್ನೂ ಜೀವಂತವಾಗಿದೆ. ಇಂದು ಮೊತ್ತೊಂದು ಬಲಿ ಪಡೆಯುವ ಮೂಲಕ ಮಹಾಮಾರಿ 8 ಜನರನ್ನು ಬಲಿ ಪಡೆದಂತಾಗಿದೆ.

  • ಗಡಿ ಜಿಲ್ಲೆ ಬೀದರ್‌ನ್ನು ಕಾಡುತ್ತಿದೆ ಮುಂಬೈ ಕಂಟಕ- ಇಂದು ಒಂದೇ ದಿನ 42 ಪ್ರಕರಣ ಪತ್ತೆ

    ಗಡಿ ಜಿಲ್ಲೆ ಬೀದರ್‌ನ್ನು ಕಾಡುತ್ತಿದೆ ಮುಂಬೈ ಕಂಟಕ- ಇಂದು ಒಂದೇ ದಿನ 42 ಪ್ರಕರಣ ಪತ್ತೆ

    – ಸೋಂಕಿತರ ಸಂಖ್ಯೆ 350ಕ್ಕೆ ಏರಿಕೆ

    ಬೀದರ್: ಗಡಿ ಜಿಲ್ಲೆಯನ್ನು ಮುಂಬೈ ಕಂಟಕ ಬಿಟ್ಟು ಬಿಡದೆ ಕಾಡುತ್ತಿದ್ದು, ಇಂದು ಒಂದೇ ದಿನ 42 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಜಿಲ್ಲೆಯ ಜನ ತೀವ್ರ ಆತಂಕಗೊಂಡಿದ್ದಾರೆ.

    ಮುಂಬೈ ಕಂಟಕದಿಂದಲೇ ಬೀದರ್ ನಲ್ಲಿ ಇಂದು 42 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗಿದೆ. ಮುಂಬೈಗೂ ಬಸವಕಲ್ಯಾಣಕ್ಕೂ ಅವಿನಾಭಾವ ಸಂಬಂಧ ಎಂಬಂತಾಗಿದ್ದು, ಇಂದು ತಾಲೂಕಿನ 30 ಜನ ವಲಸೆ ಕಾರ್ಮಿಕರಿಗೆ ಮಹಾಮಾರಿ ಅಂಟಿದೆ. ಜೊತೆಗೆ ಬೀದರ್ ತಾಲೂಕಿನಲ್ಲಿ 8 ಹಾಗೂ ಚಿಟ್ಟಗುಪ್ಪ ತಾಲೂಕಿನ 4 ಜನ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ.

    ಇಂದು ಪತ್ತೆಯಾದ 42 ಸೋಂಕಿತರ ಪೈಕಿ 40 ಜನ ಮುಂಬೈನಿಂದ ಜಿಲ್ಲೆಗೆ ಬಂದವರಾಗಿದ್ದಾರೆ. ಅಲ್ಲದೆ ತೆಲಂಗಾಣದಿಂದ ಚಿಟ್ಟಗುಪ್ಪಗೆ ಬಂದ ಒಬ್ಬನಿಗೆ ಸೋಂಕು ಧೃಡವಾಗಿದೆ. 35 ವರ್ಷದ ಮಹಿಳೆ ರೋಗಿ ನಂ.6,697ಗೆ ಸೋಂಕು ಹೇಗೆ ತಗುಲಿತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತೆಲೆ ಕೆಡಿಸಿಕೊಂಡಿದ್ದು, ಪತ್ತೆ ಕಾರ್ಯ ಮಾಡುತ್ತಿದ್ದಾರೆ.

    ಇಂದು 42 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ಇದರಲ್ಲಿ 203 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 141 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 6 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಮುಂಬೈ ಕಂಟಕದಿಂದ ಮುಕ್ತಿ ಯಾವಾಗ ಎಂದು ಜಿಲ್ಲೆಯ ಜನ ಕೇಳುವಂತಾಗಿದೆ.

  • ಬೀದರ್‌ನಲ್ಲಿ ಮತ್ತೆ 14 ಜನರಿಗೆ ಕೊರೊನಾ: ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆ

    ಬೀದರ್‌ನಲ್ಲಿ ಮತ್ತೆ 14 ಜನರಿಗೆ ಕೊರೊನಾ: ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆ

    ಬೀದರ್: ಇಂದು ಜಿಲ್ಲೆಯ 14 ಜನರಲ್ಲಿ  ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆಯಾಗಿದೆ.

    ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಲೇ ಇದ್ದು, ಬಸವಕಲ್ಯಾಣ ತಾಲೂಕಿನಲ್ಲೇ ಇಂದು 14 ಪ್ರಕರಣ ಪತ್ತೆಯಾಗಿವೆ. ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರಗಾಂವ್ ತಾಂಡಾದಲ್ಲಿ 4, ಬಸವಕಲ್ಯಾಣ ನಗರದ ಕೈಕಾಡಿಗಲ್ಲಿ 1, ಹೊಸಪೇಟ ಗಲ್ಲಿಯಲ್ಲಿ 02, ಧನ್ನೂರವಾಡಿಯಲ್ಲಿ 2, ಕಿಟ್ಟಾದಲ್ಲಿ 4 ಹಾಗೂ ರಾಜೇಶ್ವರ ಗ್ರಾಮದಲ್ಲಿ ಒಂದು ಪ್ರಕರಣ ದೃಢವಾಗಿದೆ.

    ಸದ್ಯ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಇಂದು 14 ಜನ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆಯಾಗಿದೆ. 181 ಜನ ಮಹಾಮಾರಿಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 111 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಮಾರಿಗೆ ಜಿಲ್ಲೆಯಲ್ಲಿ 6 ಜನ ಬಲಿಯಾಗಿದ್ದಾರೆ. ಮುಂಬೈ ಕಂಟಕ ಜಿಲ್ಲೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ.

  • ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಊಟ ಇಲ್ಲ- ಸೌಲಭ್ಯ ನೀಡದೇ ನಿರ್ಲಕ್ಷ್ಯ ಮಾಡಿತಾ ಬ್ರಿಮ್ಸ್?

    ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಊಟ ಇಲ್ಲ- ಸೌಲಭ್ಯ ನೀಡದೇ ನಿರ್ಲಕ್ಷ್ಯ ಮಾಡಿತಾ ಬ್ರಿಮ್ಸ್?

    ಬೀದರ್: ಕೋವಿಡ್ 19 ನಿರ್ವಹಣೆಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡ್ತಿದೆ. ಆದರೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಹಾಗೂ ಸೌಕರ್ಯಗಳು ಸಿಗ್ತಿದ್ಯಾ ಅನ್ನೋ ಪ್ರಶ್ನೆ ಮೂಡಲು ಗಡಿ ಜಿಲ್ಲೆಯ ಸೋಂಕಿತರ ಆಕ್ರೋಶವೇ ಕಾರಣವಾಗಿದೆ.

    ಹೌದು. ಮುಂಬೈ ಕಂಟಕದಿಂದ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗ್ತಿದ್ದು ಸೋಂಕಿತರ ಸಂಖ್ಯೆ ತ್ರಿಶತಕದತ್ತ ಬಂದು ನಿಂತಿದೆ. ಹೀಗಿದ್ದರೂ ಬ್ರಿಮ್ಸ್ ಆಸ್ಪತ್ರೆ ಕೋವಿಡ್ ವಿಶೇಷ ವಾರ್ಡಿನಲ್ಲಿರೋ 124 ಸೋಂಕಿತರಿಗೆ ಯಾವುದೇ ಸೌಲಭ್ಯ ನೀಡದೇ ನಿರ್ಲಕ್ಷ್ಯ ಮಾಡ್ತಿರುವ ಆರೋಪ ಕೇಳಿಬಂದಿದೆ. ವಿಶೇಷ ವಾರ್ಡಿನಲ್ಲಿ ಸೋಂಕಿತ ಗರ್ಭಿಣಿಯರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆಲ್ಲಾ ಸರಿಯಾದ ಊಟ, ನೀರು ಸೇರಿ ಯಾವುದೇ ಮೂಲಭೂತ ಸೌಕರ್ಯ ನೀಡ್ತಿಲ್ಲವಂತೆ. ಇದರಿಂದ ಬೇಸತ್ತ ಸೋಂಕಿತರು ಸ್ವತಃ ತಾವೇ ವಿಡಿಯೋ ಮಾಡಿ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಇಲ್ಲಿಯವರೆಗೆ 270 ಪಾಸಿಟಿವ್ ಕೇಸ್ ದೃಢವಾಗಿವೆ. ಇದರಲ್ಲಿ 140 ಮಂದಿ ಮಹಾಮಾರಿಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈಗಾಗಲೇ 6 ಮಂದಿಯನ್ನು ಬಲಿ ಪಡೆದಿರುವ ಮಹಾಮಾರಿ ಇನ್ನೂ ಬಲಿ ಪಡೆಯಲು ಹೊಂಚುಹಾಕ್ತಿದೆ. ಇಂತಹ ಹೊತ್ತಲ್ಲಿ ಸೋಂಕಿತರಿಗೆ ಒಳ್ಳೆಯ ಚಿಕಿತ್ಸೆ ನೀಡಿ ಕೊರೊನಾದಿಂದ ರಕ್ಷಿಸಬೇಕಾದ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಮಾಡ್ತಿರೋದು ವಿಪರ್ಯಾಸದ ಸಂಗತಿ.

    ಸೋಂಕಿನಿಂದ ಮೊದಲೇ ಕುಗ್ಗಿ ಹೋಗಿರುವ ಜನರಿಗೆ ಆತ್ಮಸ್ಥೈರ್ಯ ನೀಡಬೇಕಿದ್ದ ವೈದ್ಯರು ಈ ರೀತಿ ನಿರ್ಲಕ್ಷ್ಯ ಮಾಡ್ತಿರೋದು ಶೋಚನೀಯವಾಗಿದೆ. ಸರ್ಕಾರ ಕೋಟಿ ಕೋಟಿ ಖರ್ಚು ಮಾಡ್ತಿದ್ರೂ ಸೋಂಕಿತರು ವಿಶೇಷ ವಾರ್ಡ್ ಗಳಲ್ಲಿ ಇರಲು ಭಯಪಡ್ತಿದ್ದಾರೆ.

  • ಬೀದರ್‌ಗೆ ಮುಂಬೈ ಕಂಟಕ- ಇಂದು 48 ಮಂದಿಗೆ ಕೊರೊನಾ

    ಬೀದರ್‌ಗೆ ಮುಂಬೈ ಕಂಟಕ- ಇಂದು 48 ಮಂದಿಗೆ ಕೊರೊನಾ

    ಬೀದರ್: ದಿನೇ ದಿನೇ ಡೆಡ್ಲಿ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿದ್ದು, ಮುಂಬೈ ಹಾಗೂ ಹೈದ್ರಾಬಾದ್ ಕಂಟಕದಿಂದಾಗಿ ಇಂದು ಗಡಿ ಜಿಲ್ಲೆ ಬೀದರ್ ನಲ್ಲಿ 48 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ಬಸವಕಲ್ಯಾಣ ತಾಲೂಕಿನಲ್ಲಿ 29 ವಲಸೆ ಕಾರ್ಮಿಕರಿಗೆ, ಕಮಲಾನಗರ ತಾಲೂಕಿನಲ್ಲಿ 4, ಚಿಟ್ಟಗುಪ್ಪ ತಾಲೂಕಿನಲ್ಲಿ 3, ಹುಮ್ನಬಾದ್ ತಾಲೂಕಿನಲ್ಲಿ 8 ಹಾಗೂ ಭಾಲ್ಕಿ ತಾಲೂಕಿನ 4 ಜನ ವಲಸೆ ಕಾರ್ಮಿಕರಿಗೆ ಕೊರೊನಾ ಇರುವುದು ಪತ್ತೆಯಾಗಿದೆ. ಒಟ್ಟು 48 ಪ್ರಕರಣದಲ್ಲಿ 41 ಪಾಸಿಟಿವ್ ಪ್ರಕರಣಗಳು ಮುಂಬೈ ಕಂಟಕದಿಂದ, ಹೈದ್ರಾಬಾದ್ ನಿಂದ ಜಿಲ್ಲೆಗೆ ಬಂದಿದ್ದ 4 ವಲಸೆ ಕಾರ್ಮಿಕರಿಗೆ ಸೋಂಕು ಧೃಡವಾಗಿದೆ. ಇನ್ನು ಚಿಟ್ಟಗುಪ್ಪ ತಾಲೂಕಿನ ರೋಗಿ ನಂ.2,967 ಹಾಗೂ 2,968 ಸೋಂಕಿತರ ಸಂಪರ್ಕದಿಂದ 30 ವರ್ಷದ ಇಬ್ಬರು ಮಹಿಳೆಯರಿಗೆ ಹಾಗೂ ರೋಗಿ ನಂ.1,430 ಸಂಪರ್ಕದಿಂದ 12 ವರ್ಷದ ಬಾಲಕಿ ಸೇರಿ 3 ಜನರಿಗೆ ಸೋಂಕು ಧೃಡವಾಗಿದೆ.

    ಮುಂಬೈ ಕಂಟಕದ ಜೊತೆಗೆ ಇಂದು ಹೈದ್ರಾಬಾದ್ ಕಂಟಕ ಕೂಡಾ ಜಿಲ್ಲೆಗೆ ಶಾಕ್ ನೀಡಿದ್ದು, ಜಿಲ್ಲೆಯ ಜನ ಆತಂಕಗೊಂಡಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ. ಇದರಲ್ಲಿ 167 ಸಕ್ರಿಯ ಪ್ರಕರಣಗಳಿದ್ದು, 97 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮಾಹಾಮಾರಿಯಿಂದಾಗಿ ಜಿಲ್ಲೆಯಲ್ಲಿ 6 ಜನ ಸಾವನ್ನಪ್ಪಿದ್ದಾರೆ.

  • ಯಾವ ಪಕ್ಷದವರೂ ನಮ್ಮನ್ನ ಖರೀದಿಸಲು ಸಾಧ್ಯವಿಲ್ಲ: ಕಾಂಗ್ರೆಸ್ ಶಾಸಕ

    ಯಾವ ಪಕ್ಷದವರೂ ನಮ್ಮನ್ನ ಖರೀದಿಸಲು ಸಾಧ್ಯವಿಲ್ಲ: ಕಾಂಗ್ರೆಸ್ ಶಾಸಕ

    -ಇದ್ರೂ ಕಾಂಗ್ರೆಸ್, ಸತ್ತರೂ ಕಾಂಗ್ರೆಸ್

    ಬೀದರ್: ಯಾವ ಪಕ್ಷದವರೂ ನಮ್ಮನ್ನು ಖರೀದಿಸಲು ಸಾಧ್ಯವಿಲ್ಲ. ನಾವು ಇದ್ದರೂ ಕಾಂಗ್ರೆಸ್, ಸತ್ತರೂ ಕಾಂಗ್ರೆಸ್ ಎಂದು ಬಸವಕಲ್ಯಾಣದ ಶಾಸಕ ಬಿ.ನಾರಾಯಣ್ ಆಕ್ರೋಶ ಹೊರಹಾಕಿದ್ದಾರೆ.

    ಪಕ್ಷದ ಕಾರ್ಯಕರ್ತರು ಮತ್ತು ಕ್ಷೇತ್ರದ ಜನತೆಯ ಬೆನ್ನಿಗೆ ಚೂರಿ ಹಾಕುವ ಕೆಲಸ ನಾನು ಮಾಡಲ್ಲ. ಅನಾವಶ್ಯಕವಾಗಿ ನಮ್ಮ ಹೆಸರು ಬಳಕೆಯಾಗ್ತಿರೊ ಬಗ್ಗೆ ಮಾಹಿತಿ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ನಮ್ಮನ್ನು ಖರೀದಿ ಮಾಡೋರು ಯಾವ ಪಕ್ಷದಲ್ಲಿಯೂ ಇಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿ ಕಿಡಿ ಕಾರಿದರು.

    ಇನ್ನು ಇದೇ ವೇಳೆ ಮಾತನಾಡಿದ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್, ಸಚಿವರಾಗಿರುವ ರಮೇಶ್ ಜಾರಕಿಹೊಳಿ ನಮ್ಮನ್ನು ಭೇಟಿಯೂ ಆಗಿಲ್ಲ. ಯಾವ ಮಾತುಕತೆ ನಮ್ಮೊಂದಿಗೆ ನಡೆದಿಲ್ಲ. ರಮೇಶ್ ಜಾರಕಿಹೊಳಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ವ್ಯಕ್ತಿ. ಅಲ್ಲಿ ಇಬ್ಬರಿದ್ದಾರೆ, ಇಲ್ಲಿ ಒಬ್ಬರಿದ್ದಾರೆ ಅಂತಾ ಹೇಳುತ್ತಿದ್ದಾರೆ. ಕಾಂಗ್ರೆಸ್‍ನಿಂದ ನಾನು ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಕ್ಷಕ್ಕೆ ನಾವು ನಿಷ್ಠರಾಗಿದ್ದೇವೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದರು.

  • 2 ದಿನದಲ್ಲಿ ಬೀದರ್‌ಗೆ ಮಿಡತೆ ಸೈನ್ಯ ಎಂಟ್ರಿ – ದಾಳಿ ತಡೆಯಲು ಏನೆಲ್ಲ ಕ್ರಮಕೈಗೊಳ್ಳಲಾಗಿದೆ?

    2 ದಿನದಲ್ಲಿ ಬೀದರ್‌ಗೆ ಮಿಡತೆ ಸೈನ್ಯ ಎಂಟ್ರಿ – ದಾಳಿ ತಡೆಯಲು ಏನೆಲ್ಲ ಕ್ರಮಕೈಗೊಳ್ಳಲಾಗಿದೆ?

    ಬೀದರ್: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಾಳಿ ಮಾಡಿರುವ ಮಿಡತೆಗಳ ದಂಡು ಈಗ ರಾಜ್ಯದ ಬೀದರ್ ಜಿಲ್ಲೆಗೂ ದಾಳಿ ಮಾಡುವ ಸಾಧ್ಯತೆಯಿದೆ.

    ರೈತರ ತೋಟದ ಮೇಲೆ ದಾಳಿ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮಿಡತೆ ಸೈನ್ಯ ಎದುರಿಸಲು ಬೀದರ್ ಕೃಷಿ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿದ್ಯಾನಂದ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 4 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದ್ದು, ಇದರಲ್ಲಿ ಕಬ್ಬು, ತರಕಾರಿ ಹಾಗೂ ಹಣ್ಣುಗಳನ್ನು ರೈತರು ಬೆಳೆದಿದ್ದಾರೆ. ಈಗಾಗಲೇ ರೈತರಿಗೆ ಕ್ರಿಮಿನಾಶಕ ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಲಾಗಿದೆ. ಒಂದು ಬಾರಿ ಕ್ರಿಮಿನಾಶಕ ಸಿಂಪಡಿಸಿದರೆ ನಾಲ್ಕು ಐದು ದಿನಗಳವರೆಗೆ ಕೀಟಗಳಿಂದ ತಡೆಯಬಹುದಾಗಿದೆ. ಒಂದು ವೇಳೆ ಮಿಡತೆ ದಾಳಿ ಮಾಡಿದರೆ ಎಲ್ಲಾ ರೀತಿ ಕ್ರಿಮಿನಾಶಕಗಳು ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ವಿದ್ಯಾನಂದ್ ಮಾಹಿತಿ ನೀಡಿದರು.

    ಪ್ರಮುಖವಾಗಿ ಜಿಲ್ಲೆಯ ಗಡಿ ಭಾಗದ ತಾಲೂಕುಗಳಾದ ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ್ ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಮಟೆ ಹಾಗೂ ಭಿತ್ತಿ ಪತ್ರ ಹಂಚಲು ಕೃಷಿ ಇಲಾಖೆ ನಿರ್ಧಾರ ಮಾಡಿದೆ. ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    ಸದ್ಯ ಮಹಾರಾಷ್ಟ್ರದ ನಾಗ್ಪುರದಲ್ಲಿ ಮಿಡತೆ ಸೈನ್ಯ ದಾಳಿ ಮಾಡಿದ್ದು, ಸೊಲ್ಲಾಪುರ ಕಡೆಯಿಂದ ಬೀದರಿಗೆ ಮಿಡತೆಗಳ ದಂಡು ಎರಡು ದಿನಗಳಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ.

    ಗಾಳಿ ಯಾವ ಭಾಗಕ್ಕೆ ಹೆಚ್ಚು ಬೀಸುತ್ತದೆಯೋ ಆ ಭಾಗಕ್ಕೆ ಹಿಂಡುಹಿಂಡಾಗಿ ವಲಸೆ ಹೋಗುತ್ತವೆ. ದಿನಕ್ಕೆ 200 ಕಿ.ಮೀಗೂ ಹೆಚ್ಚು ದೂರ ಸಾಗುವ ಸಾಮರ್ಥ್ಯ ಈ ಮಿಡತೆಗಳಿಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮಿಡತೆ ಹಾವಳಿ ಹೆಚ್ಚಿರುವ ಕಾರಣ ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ಮುಂಜಾಗೃತ ಕ್ರಮಕೈಗೊಳ್ಳಲಾಗಿದೆ.

    https://twitter.com/She_Vaani/status/1264782021253005313

    ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿರುವ ಮಿಡತೆಗಳು ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ, ಹರ್ಯಾಣ, ಗುಜರಾತ್ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೃಷಿ ತೋಟಕ್ಕೆ ನುಗ್ಗಿ ಬೆಳೆಯನ್ನು ಹಾನಿ ಮಾಡುತ್ತಿವೆ. ಈಗ ಮಹಾರಾಷ್ಟ್ರದ ವಿದರ್ಭ, ಅಮರಾವತಿ, ವರ್ಧಾ, ನಾಗಪುರ ಜಿಲ್ಲೆಗಳಲ್ಲಿ ದಾಳಿ ಮಾಡಿದೆ. ಈಗಾಗಲೇ ರೈತರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಬೆಳೆಗಳ ಮೇಲೆ ಕೀಟನಾಶಕ ಸಿಂಪಡಿಸಲು ಸೂಚನೆ ನೀಡಲಾಗಿದೆ.

    ಪ್ರತಿವರ್ಷ ಮಿಡತೆಗಳು ಪಾಕಿಸ್ತಾನ, ಇರಾನ್ ದಾಳಿ ಮಾಡುತ್ತಿರುತ್ತವೆ. ಮಿಡತೆ ಕಾಟ ತಡೆಯಲು ಪಾಕಿಸ್ತಾನ ತುರ್ತು ಪರಿಸ್ಥಿತಿಯನ್ನು ಪ್ರಕಟಿಸಿದೆ. ಮಿಡತೆಗಳಲ್ಲಿ ಹಲವು ಉಪಜಾತಿಗಳಿವೆ. ಅದರಲ್ಲೂ ಮರುಭೂಮಿ ಮಿಡತೆ ಭಾರೀ ಅಪಾಯಕಾರಿಯಾಗಿದ್ದು ಬೆಳೆಗಳನ್ನು ತಿನ್ನುತ್ತಾ ವಲಸೆ ಹೋಗುತ್ತವೆ.

    https://twitter.com/Hidderkaran/status/1265961458959110146

    ಪೂರಕ ವಾತವಾರಣ ಸಿಕ್ಕಿದಾಗ ಈ ಮರಭೂಮಿ ಮಿಡತೆಗಳು ಸಿಕ್ಕಾಪಟ್ಟೆ ಮೊಟ್ಟೆ ಇಡುತ್ತವೆ. ಕೇವಲ 1 ಚದರ ಮೀಟರ್‍ನಲ್ಲಿ 5000 ಮೊಟ್ಟೆಗಳ ಕ್ಲಸ್ಟರ್ ಇಡುತ್ತದೆ. ಮರಿಯಾದ ನಂತರ ಆಹಾರ ಅರಸುತ್ತಾ ಹೋಗುವ ಮಿಡತೆಗಳು ಕೃಷಿ ಭೂಮಿಯಲ್ಲಿ ಪೈರುಗಳನ್ನು ನೋಡಿದ ಕೂಡಲೇ ಇಳಿಯುತ್ತವೆ. ಕೋಟಿ ಸಂಖ್ಯೆಯ ಮಿಡತೆಗಳು ಒಂದೇ ಬಾರಿ ಬೆಳೆಯನ್ನು ತಿಂದು ತೇಗಿ ಮುಂದಕ್ಕೆ ಹೋಗುತ್ತವೆ.

    ಜಾಗತಿಕ ತಾಪಮಾನ ಏರಿಕೆ ಅಥವಾ ಬಹಳ ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆಯಾಗಿ ವಾತಾವರಣದಲ್ಲಿ ಬದಲಾವಣೆಗಳಾದಾಗ ಈ ರೀತಿ ಮಿಡತೆಗಳ ದಾಳಿಯಾಗುತ್ತದೆ.

  • ಬೀದರಿಗೆ ಮಿಡತೆ ಸೈನ್ಯ ದಾಳಿ ಸಾಧ್ಯತೆ – ಸಕಲ ಸಿದ್ಧತೆ ಮಾಡ್ಕೊಂಡ ಕೃಷಿ ಇಲಾಖೆ

    ಬೀದರಿಗೆ ಮಿಡತೆ ಸೈನ್ಯ ದಾಳಿ ಸಾಧ್ಯತೆ – ಸಕಲ ಸಿದ್ಧತೆ ಮಾಡ್ಕೊಂಡ ಕೃಷಿ ಇಲಾಖೆ

    ಬೀದರ್: ಪಾಕಿಸ್ತಾನದ ಮೂಲಕ ದೇಶದ ನಾನಾ ರಾಜ್ಯಗಳಿಗೆ ದಾಳಿ ಮಾಡಿರುವ ಮಿಡತೆ ಸೇನೆಗೆ ದೇಶದ ರೈತರು ಆತಂಕಗೊಂಡಿದ್ದಾರೆ. ಈ ಮಿಡತೆ ದಂಡು ಕರ್ನಾಟಕದ ಗಡಿ ಜಿಲ್ಲೆ ಬೀದರಿಗೂ ದಾಳಿ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಉತ್ತರ ಭಾರತ, ಮಹಾರಾಷ್ಟ್ರ ಆಯ್ತು, ಈಗ ಕರ್ನಾಟಕಕ್ಕೂ ಮಿಡತೆ ಆತಂಕ

    ಮಿಡತೆ ಸೈನ್ಯ 500 ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ನಾಗಪುರದಲ್ಲಿ ದಾಳಿ ಮಾಡಿವೆ. ಈ ಹಿನ್ನೆಲೆಯಲ್ಲಿ ಈ ಮಿಡತೆ ಸೈನ್ಯ ಗಡಿ ಜಿಲ್ಲೆ ಬೀದರಿಗೆ ದಾಳಿ ಮಾಡುವ ಸಾಧ್ಯತೆಯಿಂದಾಗಿ ಮಿಡತೆ ದಾಳಿ ಎದುರಿಸಲು ಬೀದರ್ ಕೃಷಿ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಪ್ರಮುಖವಾಗಿ ಜಿಲ್ಲೆಯ ಗಡಿ ಭಾಗದ ತಾಲೂಕುಗಳಾದ ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ್‍ನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಮಟೆ ಹಾಗೂ ಬಿತ್ತಿ ಪತ್ರ ಹಂಚಲು ಕೃಷಿ ಇಲಾಖೆ ನಿರ್ಧಾರ ಮಾಡಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೃಷಿ ಜಂಟಿ ನಿರ್ದೇಶಕರು ಈಗಾಗಲೇ ಸೂಚನೆ ನೀಡಿದ್ದಾರೆ. ಸೊಲ್ಲಾಪುರ ಕಡೆಯಿಂದ ಬೀದರಿಗೆ ಮಿಡತೆಗಳು ದಂಡು ಎರಡು ದಿನಗಳಲ್ಲಿ ಎಂಟ್ರಿಯಾಗುವ ಸಾಧ್ಯತೆ ಇದೆ.

    ಒಟ್ಟು 4 ಲಕ್ಷ ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಕಬ್ಬು, ತರಕಾರಿ ಹಾಗೂ ಹಣ್ಣುಗಳನ್ನು 30 ಸಾವಿರ ಎಕರೆಯಲ್ಲಿ ರೈತರು ಬೆಳೆದಿದ್ದಾರೆ. ಒಂದು ವೇಳೆ ಮಿಡತೆ ದಾಳಿ ಮಾಡಿದರೆ ಎಲ್ಲಾ ರೀತಿ ಕ್ರಿಮಿನಾಶಕಗಳನ್ನ ರೈತ ಸಂಪರ್ಕ ಕೇಂದ್ರದಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ರೈತರಿಗೆ ಒದಗಿಸುತ್ತೇವೆ ಎಂದು ಜಂಟಿ ಕೃಷಿ ನಿರ್ದೇಶಕರಾದ ವಿದ್ಯಾನಂದ ಮಾಹಿತಿ ನೀಡಿದ್ದಾರೆ.

    ಒಂದು ವೇಳೆ ಗಾಳಿ ದಿಕ್ಕು ಬದಲಾದರೆ ಮಧ್ಯಪ್ರದೇಶದ ಕಡೆ ಹೋಗುತ್ತವೆ ಎಂದು ಕೃಷಿ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದು, ಜಿಲ್ಲೆಯ ರೈತರು ಈ ಕಡೆ ಮಿಡತೆ ದಂಡು ಸುಳಿಯದಿರಲಿ ಎನ್ನುತ್ತಿದ್ದಾರೆ.

  • ಬೀದರ್‌ನಲ್ಲಿ ಮುಂದುವರೆದ ‘ಮಹಾ’ ಕಂಟಕ: ಇಂದು ಮತ್ತೆ 12 ಜನರಲ್ಲಿ ಕೊರೊನಾ ಪತ್ತೆ

    ಬೀದರ್‌ನಲ್ಲಿ ಮುಂದುವರೆದ ‘ಮಹಾ’ ಕಂಟಕ: ಇಂದು ಮತ್ತೆ 12 ಜನರಲ್ಲಿ ಕೊರೊನಾ ಪತ್ತೆ

    ಬೀದರ್: ಮಹಾರಾಷ್ಟ್ರದಿಂದ ವಾಪಸಾದವರಿಂದ ಕೊರೊನಾ ಸೋಂಕು ಕಂಟಕವಾಗಿ ಪರಿಣಮಿಸಿದ್ದು, ಗಡಿ ಜಿಲ್ಲೆಯಲ್ಲಿ ಇಂದು ಮತ್ತೆ 12 ಜನ ವಲಸೆ ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿದೆ.

    ಇಂದು 12 ಹೊಸ ಪ್ರಕರಣ ಪತ್ತೆಯಾದ ಹಿನ್ನೆಲೆ ಜಿಲ್ಲೆಯ ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಬಸವಕಲ್ಯಾಣ ತಾಲೂಕಿನ ಕೊಹಿನೂರು, ಶಿರಗುರ, ಗದಲೆಗಾಂವ್(ಕೆ), ಬಟಗೇರಾ, ಲಾಡವಂತಿ ಹಾಗೂ ಅಟ್ಟೂರ ಗ್ರಾಮಗಳಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರೆದಿದೆ. ಎಲ್ಲರೂ ಮಹಾರಾಷ್ಟ್ರದ ಮುಂಬೈಯಿಂದ ವಾಪಸಾದವರಾಗಿದ್ದು, ಇವರೆಲ್ಲರೂ ಸ್ಥಳೀಯ ಕ್ವಾರಂಟೈನ್‍ಗೆ ಒಳಗಾಗಿದ್ದರು.

    ಬಸವಕಲ್ಯಾಣ ತಾಲೂಕಿನ ಶಿರಗುರ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ 20 ವರ್ಷದ ಯುವಕ ರೋಗಿ ನಂ.2318 ಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೊಸ ಪ್ರಕರಣಗಳು ಪತ್ತೆಯಾಗುವುದರ ಮಧ್ಯೆಯೇ ಇಂದು ಜಿಲ್ಲಾ ಕೊರೊನಾ ಆಸ್ಪತ್ರೆಯಲ್ಲಿ ಮೂವರು ಗುಣಮುಖರಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 107ಕ್ಕೆ ತಲುಪಿದೆ. ಒಟ್ಟು 24 ಜನ ಗುಣಮುಖರಾದ್ದಾರೆ. ಈ ವರೆಗೆ ಒಟ್ಟು ಮೂವರು ಕೊರೊನಾಗೆ ಬಲಿಯಾಗಿದ್ದು, ಉಳಿದ 81 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.