ಬೀದರ್: ಜಿಲ್ಲೆಯಲ್ಲಿ ಇಂದು ಯೋಧ, ಮೂವರು ಪೊಲೀಸರು ಸೇರಿದಂತೆ 32 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.
ಆರೋಗ್ಯ ಸಮಸ್ಯೆಯಿಂದ ದೆಹಲಿಯಿಂದ ಬಸವಕಲ್ಯಾಣಕ್ಕೆ ಬಂದಿದ್ದ 35 ವರ್ಷದ ಯೋಧನಿಗೆ ಸೋಂಕು ವಕ್ಕರಿಸಿದೆ. ಜೊತೆಗೆ ನೌಬಾದ್‍ನ ಮೀಸಲು ಪಡೆಯ ಮೂವರು ಪೊಲೀಸರಿಗೂ ಕೊರೊನಾ ಪಾಸಿಟಿವ್ ಬಂದಿದೆ.
ಬೀದರ್, ಚಿಟ್ಟಗುಪ್ಪ, ಭಾಲ್ಕಿ, ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 32 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮುಂಬೈ, ತೆಲಂಗಾಣ ಕಂಟಕ ಹಾಗೂ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದ ಸೋಂಕು ಧೃಡವಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆಯಾಗಿದ್ದು, 500 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 126 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ ಕೊರೊನಾಗೆ 21 ಜನ ಬಲಿಯಾಗಿದ್ದಾರೆ. ಬಸವಣ್ಣನ ಕರ್ಮಭೂಮಿಯಲ್ಲಿ ಚೀನಾ ಮಹಾಮಾರಿಯ ಆರ್ಭಟಕ್ಕೆ ಜಿಲ್ಲೆಯ ಜನ ಹೈರಾಣಾಗಿ ಹೋಗಿದ್ದಾರೆ.
ಬೀದರ್: ಗಡಿ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ ಗೂ ಸೋಂಕು ತಗುಲಿದ್ದು, ಮುಖ್ಯ ಪೊಲೀಸ್ ಪೇದೆ ಸೇರಿ 7 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.
ಬೀದರ್ ಹಾಗೂ ಬಸವಕಲ್ಯಾಣ ತಾಲೂಕಿನ 7 ಜನಕ್ಕೆ ಇಂದು ಪಾಸಿಟಿವ್ ಧೃಡವಾಗಿದೆ. 7 ಜನರಲ್ಲಿ ನಗರದ ಗಾಂಧಿ ಗಂಜ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಪೇದೆಗೂ ಇಂದು ಮಹಾಮಾರಿ ವಕ್ಕರಿಸಿದೆ. ಕಂಟೈನ್ಮೆಟ್ ಝೋನ್ ಸಂಪರ್ಕ ಹಾಗೂ ಮುಂಬೈ ಕಂಟಕದಿಂದ ಸೋಂಕು ಧೃಡವಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 562ಕ್ಕೆ ಹೆಚ್ಚಳವಾಗಿದ್ದು, ಇದರಲ್ಲಿ 456 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 87 ಪ್ರಕರಣಗಳು ಸಕ್ರಿಯವಾಗಿವೆ. ಇಗಾಗಲೇ ಜಿಲ್ಲೆಯಲ್ಲಿ 19 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಪ್ರತಿ ದಿನ ಮಹಾಮಾರಿಯ ಆರ್ಭಟ ನೋಡಿ ಜಿಲ್ಲೆಯ ಜನ ಆತಂಕಗೊಂಡಿದ್ದಾರೆ.
ಬೀದರ್: ಕಲಬುರಗಿ, ದಕ್ಷಿಣ ಕನ್ನಡ ಮತ್ತು ಗಡಿ ಜಿಲ್ಲೆ ಬೀದರ್ ಸೇರಿದಂತೆ ಅನೇಕ ಕಡೆ ಬೆಳಗ್ಗೆಯಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರ ತಡರಾತ್ರಿ ಕೂಡ ಜಿಲ್ಲೆಯ ಹಲವು ಕಡೆ ಮಳೆಯಾಗಿದ್ದು, ಇಂದು ಜಿಲ್ಲೆಯಲ್ಲಿ ವರುಣದೇವ ಅಬ್ಬರಿಸುವ ಸಾಧ್ಯತೆ ಇದೆ. ರೈತರು ಬಿತ್ತನೆಗಾಗಿ ಬೀಜಗಳನ್ನು ಸಿದ್ಧ ಮಾಡಿಕೊಂಡು ಮಳೆಯಾಗಿ ಕಾದುಕುಳಿತ್ತಿದ್ದರು. ಹೀಗಾಗಿ ಇಂದು ವರುಣ ದೇವ ಕೃಪೆ ತೋರಿದ್ದಾನೆ.
ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಪ್ರಾರಂಭವಾದರು ಮಳೆಯಾಗದ ಕಾರಣ ರೈತರು ಆತಂಕಗೊಂಡಿದ್ದರು. ಆದರೆ ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ನೋಡಿ ಕೃಷಿ ಚಟುವಟಿಕೆ ಪ್ರಾರಂಭಿಸುವ ಮೂಲಕ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಾರೆ.
ರಾಜ್ಯದ ಕರಾವಳಿಯ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಮುಂಜಾನೆಯಿಂದ ಮಳೆ ಆರಂಭಗೊಂಡಿದೆ. ಕರಾವಳಿಗೆ ಮುಂಗಾರು ಮಳೆ ಪ್ರವೇಶವಾಗಿ ಇಪ್ಪತ್ತು ದಿನ ಕಳೆದಿದ್ದರೂ ಸರಿಯಾಗಿ ಮಳೆಯಾಗಿಲ್ಲ. ಕಳೆದ ಕೆಲದಿನಗಳಿಂದ ವಿಶ್ರಾಂತಿಯಲ್ಲಿದ್ದ ಮಳೆ ಇಂದು ಮುಂಜಾನೆಯಿಂದ ಸುರಿಯಲಾರಂಭಿಸಿದೆ. ಇಂದು ದಿನಪೂರ್ತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಜಿಲ್ಲೆಯ ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಇನ್ನುಳಿದಂತೆ ಜಿಲ್ಲಾದ್ಯಂತ ತುಂತುರು ಮಳೆಯಾಗುತ್ತಿದೆ.
ಕಲಬುರಗಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಹಲವೆಡೆ ಉತ್ತಮ ಮಳೆಯಾಗಿದೆ. ನಗರದ ಹಲವೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿನ ದಿನಸಿ ವಸ್ತುಗಳು ಹಾಗೂ ಎಲೆಕ್ಟ್ರಿಕಲ್ ವಸ್ತುಗಳು ನಾಶವಾಗಿವೆ. ಮಳೆಗಾಲ ಆರಂಭದಲ್ಲೇ ಸಮಸ್ಯೆಗಳು ಶುರುವಾಗಿವೆ. ಈಗಲಾದರೂ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಚರಂಡಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಂಗಳೂರು: ಇಂದು ಕೊರೊನಾ ರಾಜ್ಯದಲ್ಲಿ ಮಹಾ ದಾಖಲೆಯನ್ನು ಬರೆದಿದ್ದು, ಒಂದೇ ದಿನ 918 ಮಂದಿಗೆ ಸೋಂಕು ತಗುಲಿದೆ. ಕೊರೊನಾಗೆ 11 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನಲ್ಲಿ 3, ಬೀದರ್ 3, ಕಲಬುರಗಿ 2, ಗದಗ, ಬಳ್ಳಾರಿ ಮತ್ತು ಧಾರವಾಡದಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಐಸಿಯುನಲ್ಲಿ ಒಟ್ಟು 197 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 197 ಪೈಕಿ 125 ರೋಗಿಗಳು ಬೆಂಗಳೂರಿನಲ್ಲಿಯೇ ಇದ್ದಾರೆ. ಇಂದು ಒಟ್ಟು ಸಿಲಿಕಾನ್ ಸಿಟಿಯಲ್ಲಿ ಒಟ್ಟು 596 ಮಂದಿಗೆ ಸೋಂಕು ತಗುಲಿದೆ.
ಇಂದು ಕೊರೊನಾಗೆ ಬಲಿಯಾದವರ ವಿವರ: 1. ರೋಗಿ 7,204: ಬೆಂಗಳೂರಿನ 83 ವರ್ಷದ ವೃದ್ಧ. ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 27ರಂದು ನಿಧನರಾಗಿರುತ್ತಾರೆ. ವೃದ್ಧ ಕಿಡ್ನಿ ಸಮಸ್ಯೆ ಮತ್ತು ಡಯಾಬಿಟಿಸ್ ನಿಂದ ಬಳಲುತ್ತಿದ್ದರು. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
2. ರೋಗಿ 7,955: ಬೀದರ್ ಜಿಲ್ಲೆಯ 65 ವರ್ಷದ ವೃದ್ಧ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 16ರಂದು ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 26ರಂದು ನಿಧನರಾಗಿದ್ದಾರೆ. ವೃದ್ಧ ಕಿಡ್ನಿ ಸಮಸ್ಯೆ ಮತ್ತು ಡಯಾಬಿಟಿಸ್ ನಿಂದ ಬಳಲುತ್ತಿದ್ದರು.
3. ರೋಗಿ 8,216: ಬೆಂಗಳೂರಿನ 70 ವರ್ಷದ ವೃದ್ಧ. ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 17ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 25ರಂದು ನಿಧನರಾಗಿದ್ದಾರೆ. ಸೋಂಕಿನ ನಿಖರವಾದ ಮೂಲ ಪತ್ತೆಯಾಗಿಲ್ಲ.
4. ರೋಗಿ 9,833: ಕಲಬುರಗಿಯ 72 ವರ್ಷದ ವೃದ್ಧ. ಸಣ್ಣ ಪ್ರಮಾಣ ದಲ್ಲಿ ಶೀತ ಮತ್ತು ಜ್ವರ ಕಾಣಿಸಿಕೊಂಡಿತ್ತು. ಜೂನ್ 23ರಂದು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಜೂನ್ 26ರಂದು ನಿಧನರಾಗಿದ್ದಾರೆ. ಸೋಂಕಿನ ಮೂಲ ಪತ್ತೆಯಾಗಿಲ್ಲ. ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.
5. ರೋಗಿ 11,148: ಬೆಂಗಳೂರಿನ 74 ವರ್ಷದ ವೃದ್ಧೆ. ಎದೆನೋವು ಕಾಣಿಸಿಕೊಂಡಿದ್ದರಿಂದ ಜೂನ್ 15ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 20ರಂದು ನಿಧನರಾಗಿದ್ದಾರೆ. ವೃದ್ಧೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆದ್ರೆ ಸೋಂಕಿನ ಮೂಲ ತಿಳಿದು ಬಂದಿಲ್ಲ.
6. ರೋಗಿ 11,231: ಗದಗನ 95 ವರ್ಷದ ವೃದ್ಧೆ. ಅಜ್ಜಿ ಬೆಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 25ರಂದು ದಾಖಲಾಗಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಜೂನ್ 27ರಂದು ನಿಧನರಾಗಿದ್ದಾರೆ. ಡಯಾಬಿಟಿಸ್ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
7. ರೋಗಿ 11,278: ಕಲಬುರಗಿಯ 50 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆಯಿಂದ ಕಾಣಿಸಿಕೊಂಡಿತ್ತು. ಜೂನ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಜೂನ್ 26ರಂದು ನಿಧನರಾಗಿದ್ದಾರೆ.
8. ರೋಗಿ 11,322: ಬಳ್ಳಾರಿಕಯ 75 ವರ್ಷದ ವೃದ್ಧ. ತೀವ್ರ ಉಸಿರಾಟದ ತೊಂದರೆಯಿಂದ ಕಾಣಿಸಿಕೊಂಡಿತ್ತು. ಜೂನ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಜೂನ್ 26ರಂದು ನಿಧನರಾಗಿದ್ದಾರೆ.
9. ರೋಗಿ 11,406: ಧಾರವಾಡದ 73 ವರ್ಷದ ವೃದ್ಧ. ಸಾಮುದಾಯಿಕ ಪರೀಕ್ಷೆ ವೇಳೆ ಕೊರೊನಾ ತಗುಲಿರೋದು ಬೆಳಕಿಗೆ ಬಂದಿದೆ. ಸೋಂಕು ತಗುಲಿರೋದು ಖಚಿತವಾಗ್ತಿದ್ದಂತೆ ವೃದ್ಧನನ್ನು ಜೂನ್ 22ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 24ರಂದು ನಿಧನರಾಗಿದ್ದು, ವೃದ್ಧ ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.
10. ರೋಗಿ 11,437: ಬೀದರ್ ನ 65 ವರ್ಷದ ವೃದ್ಧ. ಸಾವನ್ನಪ್ಪಿದ ಬಳಿಕ ವೃದ್ಧನ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿತ್ತು. ಹಾಗಾಗಿ ಸೋಂಕಿನ ಮೂಲ ತಿಳಿದು ಬಂದಿಲ್ಲ.
11. ರೋಗಿ 11,438: ಬೀದರ್ ನ 73 ವರ್ಷದ ವೃದ್ಧೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆ ಜೂನ್ 20ರಂದು ನಿಧನರಾಗಿದ್ದರು. ಮರಣ ನಂತರ ವೃದ್ಧೆಯ ಶವವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಬೀದರ್: ರಾಜ್ಯದಲ್ಲಿ ಜನರು ಹೆಚ್ಚು ಓಡಾಡುವ ಏರಿಯಾಗಳನ್ನು ಲಾಕ್ ಡೌನ್ ಮಾಡಲಾಗುತ್ತೆ. ಆದರೆ ಬೆಂಗಳೂರನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಸಿಟಿ ಮಾರ್ಕೆಟ್, ತರಕಾರಿ ಮಾರ್ಕೆಟ್, ದಿನಸಿ ಮಾರ್ಕೆಟ್ ಗಳನ್ನು ಲಾಕ್ ಡೌನ್ ಮಾಡಲಾಗುತ್ತೆ. ಎಲ್ಲಿ ಹೆಚ್ಚು ಪಾಸಿಟಿವ್ ಕೇಸ್ ಬರುತ್ತೆ ಅಲ್ಲಿ ಲಾಕ್ ಡೌನ್, ಸೀಲ್ ಡೌನ್ ಮಾಡಲು ರಾಜ್ಯ ಸರ್ಕಾರ ಮುಂಜಾಗ್ರತೆ ತೆಗೆದುಕೊಂಡಿದೆ ಎಂದರು.
ಹೊರಗಡೆಯಿಂದ ಬರುತ್ತಿರುವವರಿಗೆ ಸೋಂಕು ಜಾಸ್ತಿಯಾಗುತ್ತಿದ್ದು ಇದನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ. ಹೀಗಾಗಿ 15 ದಿನಗಳಿಂದ ರಾಜ್ಯದಲ್ಲಿ ಸೋಂಕು ಜಾಸ್ತಿಯಾಗುತ್ತಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಆರ್ಥಿಕತೆ ಒಂದೇ ನೋಡುತ್ತಿಲ್ಲ. ಜನರ ಆರೋಗ್ಯವನ್ನು ಕೂಡ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಬೀದರ್: ಮಹಾಮಾರಿ ಕೊರೊನಾ ದಿನೇ ದಿನೇ ಅಟ್ಟಹಾಸ ಮೆರೆಯುತ್ತಿದ್ದು, ಜಿಲ್ಲೆಯಲ್ಲಿ ಇಂದು ಮತ್ತೆ 8 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಬಸವಕಲ್ಯಾಣದಲ್ಲಿ 3, ಚಿಟ್ಟಗುಪ್ಪದಲ್ಲಿ 3 ಹಾಗೂ ಬೀದರ್ ನಲ್ಲಿ 2 ಜಿಲ್ಲೆಯಲ್ಲಿ ಇಂದು ಒಟ್ಟು 8 ಜನರಿಗೆ ಕೊರೋನಾ ಪಾಸಿಟಿವ್ ಧೃಡವಾಗಿವೆ. ಬೀದರ್ ಹಾಗೂ ಚಿಟ್ಟಗುಪ್ಪದಲ್ಲಿ ಕಂಟೈನ್ಮೆಟ್ ಝೋನ್ ಸಂಪರ್ಕದಿಂದ ಸೋಂಕು ಧೃಡವಾಗಿದ್ದರೆ, ಮುಂಬೈನಿಂದ ಬಸವಕಲ್ಯಾಣಕ್ಕೆ ಬಂದ ವಲಸೆ ಕಾರ್ಮಿಕರಿಗೆ ಸೋಂಕು ತಗುಲಿದೆ.
ಇಂದು 8 ಜನರಿಗೆ ಸೋಂಕು ಧೃಡವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆಯಾಗಿದೆ. ಇದರಲ್ಲಿ 397 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 125 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಾಲೇ ಜಿಲ್ಲೆಯಲ್ಲಿ 15 ಜನರನ್ನು ಮಹಾಮಾರಿ ಬಲಿ ತೆಗೆದುಕೊಂಡಿದೆ. ಪ್ರತಿ ದಿನ ತನ್ನ ನಾಗಾಲೋಟವನ್ನು ಮುಂದುವರಿಸಿದ್ದು, ಡೆಡ್ಲಿ ವೈರಸ್‍ಗೆ ಜಿಲ್ಲೆಯ ಜನ ತೀವ್ರ ಆತಂಕಗೊಂಡಿದ್ದಾರೆ.
ಬೀದರ್: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಬೀದರ್‍ನ ಬ್ರಿಮ್ಸ್ ಮತ್ತೊಂದು ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಸೋಂಕಿತರು ಬಳಸುವ ಮತ್ತು ವೈದ್ಯರು, ಸಿಬ್ಬಂದಿ ಬಳಸಿದ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್‍ಗಳನ್ನ ಬೇಕಾಬಿಟ್ಟಿ ಎಸೆದು ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ಮತ್ತಷ್ಟು ಸೋಂಕು ಹರಡುವ ಆತಂಕ ಎದುರಾಗಿದೆ.
ಹೌದು. ಬ್ರೀಮ್ಸ್ ನ ಕೊರೊನಾ ವಿಶೇಷ ವಾರ್ಡಿನಲ್ಲಿರುವ ಸೋಂಕಿತರು ಬಳಸುವ ಬೆಡ್‍ಶೀಟ್ ಮತ್ತು ಇನ್ನಿತರ ಬಟ್ಟೆಗಳನ್ನು ಸಿಬ್ಬಂದಿ ಕ್ಲೀನ್ ಮಾಡುತ್ತಾರೆ. ಆಸ್ಪತ್ರೆಯ ಎಲ್ಲಾ ತ್ಯಾಜ್ಯವನ್ನು ಸಂಗ್ರಹ ಮಾಡ್ತಾರೆ. ಆದರೆ ಸೋಂಕಿತರ ಜೊತೆ ನೇರ ಸಂರ್ಪಕಕ್ಕೆ ಬರುವ ಇವರು ಕ್ಲೀನ್ ಮಾಡಿದ ನಂತರ ತಾವು ಧರಿಸಿರುವ ಮಾಸ್ಕ್, ಗ್ಲೌಸ್, ಪಿಪಿಟಿ ಕಿಟ್ ಸೇರಿದಂತೆ ಎಲ್ಲವನ್ನು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ಬ್ರೀಮ್ಸ್ ಆಸ್ಪತ್ರೆಯ ಕ್ಲಿನಿಂಗ್ ಸ್ಥಳದಿಂದ ಸಾರ್ವಜನಿಕರು ಹಾಗೂ ಪ್ರಾಣಿಗಳು ಓಡಾಡುವ ಮುಖ್ಯ ರಸ್ತೆಗೆ ಎಸೆಯುತ್ತಿದ್ದಾರೆ. ಜೊತೆಗೆ ಸೋಂಕಿತರ ಬಟ್ಟೆಗಳನ್ನು ಕ್ಲೀನ್ ಮಾಡಿದ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ. ಆರೋಗ್ಯ ಇಲಾಖೆ ನಿಯಮದ ಪ್ರಕಾರ ಒಂದು ಸಾರಿ ಬಳಸಿದ ಎಲ್ಲಾ ವಸ್ತುಗಳನ್ನು ನಿಯಮಿತವಾಗಿ ಡಿಸ್ಪೋರೆಜ್ ಮಾಡಬೇಕು. ಆದರೆ ಇಲ್ಲಿನ ಸಿಬ್ಬಂದಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಬಿಸಾಡುತ್ತಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 500 ಗಡಿ ದಾಟಿರುವ ಮಹಾಮಾರಿ ಕೊರೊನಾ 15 ಜನರನ್ನು ಬಲಿ ಪಡೆದಿದೆ. ಜೊತೆಗೆ ಅಂತರ್ ರಾಜ್ಯ ಕಂಟಕ ಜಿಲ್ಲೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಇದರ ನಡುವೆ ಸೋಂಕನ್ನ ತಡೆಯಬೇಕಾದ ಬ್ರೀಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿಸ್ತಿದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸೋಂಕಿತರ ಅಷ್ಟೆ ಅಲ್ಲ, ಕೆಲ ಸಿಬ್ಬಂದಿ ಗ್ಲೌಸ್ ಹಾಕದೇ, ಪಿಪಿಟಿ ಕಿಟ್, ಮಾಸ್ಕ್ ಕೂಡ ಹಾಕದೆ ನಿರ್ಲಕ್ಷ್ಯವಹಿಸಿದ್ದಾರೆ. ಇದನ್ನ ಪ್ರಶ್ನಿಸಿದ್ರೆ ಜಿಲ್ಲಾ ಆರೋಗ್ಯಾಧಿಕಾರಿಗಳು ತೇಪೆ ಹಾಕುವ ಕೆಲಸ ಮಾಡಿದ್ದಾರೆ.
ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಕೊರೊನಾ ತನ್ನ ಕದಂಬ ಬಾಹುಗಳನ್ನು ಜಿಲ್ಲೆಯಲ್ಲಿ ಚಾಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಇನ್ನಾದರೂ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಗೊಂಡು ಇಂತಹ ನಿರ್ಲಕ್ಷ್ಯಗಳಿಗೆ ಬ್ರೇಕ್ ಹಾಕಬೇಕಿದೆ.
ಬೀದರ್: ಮಹಾಮಾರಿ ಡ್ರ್ಯಾಗನ್ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಜಿಲ್ಲೆಯಲ್ಲಿ ಇಂದು ಕೂಡ 5 ಕೊರೊನಾ ಪಾಸಿಟಿವ್ ದೃಢವಾಗಿದೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ 3, ಬೀದರ್ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 5 ಜನ ವಲಸೆ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಮುಂಬೈ ಕಂಟಕ ಜಿಲ್ಲೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಇಂದು ಕೂಡಾ ಮುಂಬೈ ಕಂಟಕದಿಂದಲೇ 5 ಕೊರೊನಾ ಸೋಂಕು ದೃಢವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 502ಕ್ಕೇರಿದೆ.
ಜಿಲ್ಲೆಯ 502 ಸೋಂಕಿತರ ಪೈಕಿ 324 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇನ್ನು 163 ಜನರಿಗೆ ಸೋಂಕು ಸಕ್ರಿಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮಹಾಮಾರಿ 15 ಜನರನ್ನು ಬಲಿ ಪಡೆದಿದೆ. ಜಿಲ್ಲೆಯಲ್ಲಿ ಅಂತರ ರಾಜ್ಯದ ಆತಂಕ ಇದ್ದರೂ ಕೊರೊನಾ ನಿಯಮಗಳನ್ನು ಪಾಲನೆ ಮಾಡದೆ ಬೇಕಾಬಿಟ್ಟಿ ಸಂಚಾರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬಾರಿ ಕಂಟಕ ಎದುರಾಗುವ ಆತಂಕ ಮೂಡಿದೆ.
ಬೀದರ್/ಚಿತ್ರದುರ್ಗ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಅವ್ಯವಸ್ಥೆ ತಾಂಡವವಾಡುತ್ತಿದೆ. ಜೀವ ಉಳಿಸಿ ಅಂತ ಹೋದರೆ ಅದೊಂದು ಪ್ರಸಿದ್ಧ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ.
ಹೌದು. ಆರೋಗ್ಯ ಸಚಿವ ಶ್ರೀರಾಮುಲುರ ತವರು ಜಿಲ್ಲೆ ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಒಂದೆಡೆ ಖಾಲಿ ಖಾಲಿಯಾಗಿರುವ ಡಯಾಲಿಸಿಸ್ ವಾರ್ಡಿನ ಬೆಡ್‍ಗಳು, ಇನ್ನೊಂದೆಡೆ ಆಸ್ಪತ್ರೆ ಹೊರಗೆ ಡಯಾಲಿಸಿಸ್ ಚಿಕಿತ್ಸೆ ಸಿಗಲಾರದೇ ಕಂಗಾಲಾಗಿ ಕುಳಿತ ರೋಗಿಗಳು. ಕೊರೊನಾ ಮಧ್ಯೆ ಮುಖ್ಯವಾಗಿ ಸಿಗಬೇಕಿರುವ ಡಯಾಲಿಸಿಸ್ ಚಿಕಿತ್ಸೆ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.
ಕಳೆದ ಆರು ತಿಂಗಳಿಂದ ಜಿಲ್ಲಾಸ್ಪತ್ರೆಗೆ ಸರಿಯಾಗಿ ಡಯಾಲಿಸಿಸ್ ಮಾಡಿಸಲು ಅಗತ್ಯವಿರುವ ಮೆಡಿಸಿನ್ ರವಾನೆಯಾಗ್ತಿಲ್ಲ. ಒಂದು ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿಗೆ ಕೇವಲ ಎರಡು ದಿನ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ದಿಢೀರ್ ಅಂತ ಡಯಾಲಿಸಿಸ್ ಚಿಕಿತ್ಸೆ ನಿಲ್ಲಿಸಲಾಗಿದೆ. ಪರಿಣಾಮ ಕಿಡ್ನಿ ವೈಫಲ್ಯ ಹಾಗೂ ಹೃದಯಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜಿಲ್ಲೆಯ ರೋಗಿಗಳು ಪರದಾಡುವಂತಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ದಿಢೀರ್ ಅಂತ ಡಯಾಲಿಸಿಸ್ ನಿಲ್ಲಿಸಿರುವುದರ ಹಿಂದೆ ಸ್ಥಳೀಯ ಖಾಸಗಿ ಆಸ್ಪತ್ರೆಗಳ ಲಾಬಿ ಅಡಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜಿಲ್ಲಾ ಸರ್ಜನ್ ಡಾ. ಬಸವರಾಜ್ ಅವರನ್ನ ಕೇಳಿದ್ರೆ, ನಮ್ಮಲ್ಲಿ ತಾತ್ಕಲಿಕವಾಗಿ ಇಲ್ಲಿಯತನಕ ಚಿಕಿತ್ಸೆ ನೀಡಿದ್ದು, ಈಗ ಸಮಸ್ಯೆ ಹೆಚ್ಚಾಗಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇವೆ ಅಂತ ಸಲೀಸಾಗಿ ಹೇಳುತ್ತಾರೆ. ಒಟ್ಟಿನಲ್ಲಿ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲೇ ಡಯಾಲಿಸಿಸ್ ಚಿಕಿತ್ಸೆ ಸಿಕ್ತಿಲ್ಲ ಅಂದ್ರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ ಪಾಡಿದೆ ಅನ್ನೋದು ಗೊತ್ತಾಗುತ್ತೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕಿದೆ.
ಬ್ರೀಮ್ಸ್ ಆಸ್ಪತ್ರೆ ಮುಂದೆ ರೋಗಿ ನರಳಾಟ:
ಚಿತ್ರದುರ್ಗದ ಜಿಲ್ಲಾಸ್ಪತ್ರೆ ಪರಿಸ್ಥಿತಿ ಒಂದ್ಕಡೆಯಾದ್ರೆ ಬೀದರ್‍ನ ಬ್ರೀಮ್ಸ್ ಮತ್ತೊಂದು ಎಡವಟ್ಟು ಮಾಡಿದೆ. ಆಸ್ಪತ್ರೆ ಮುಂದೆ ರೋಗಿ ನರಳಾಡಿದರೂ ಸಿಬ್ಬಂದಿ ಮಾತ್ರ ನಿರ್ಲಕ್ಷ್ಯ ತೋರಿದ್ದಾರೆ. ಒಂದಿಲ್ಲೊಂದು ಎಡವಟ್ಟುಗಳಿಂದ ಸದಾ ಸುದ್ದಿಯಲ್ಲಿರುವ ಬ್ರೀಮ್ಸ್ ಕೊರೊನಾ ಮಧ್ಯೆ ಕೆಂಗಣ್ಣಿಗೆ ಗುರಿಯಾಗಿದೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನಿಗೆ ಚಿಕಿತ್ಸೆ ನೀಡದೆ ಬ್ರೀಮ್ಸ್ ಸಿಬ್ಬಂದಿ ಕಾಯಿಸಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ಚೀಟಿ ಬೇಕೆಂದು ಆಸ್ಪತ್ರೆಯ ಹೊರಗೆ 15 ನಿಮಿಷಗಳ ಕಾಲ ಕಾಯಿಸಿ ನಿರ್ಲಕ್ಷ್ಯ ತೋರಿದ್ದಾರೆ. ಬ್ರೀಮ್ಸ್ ಸಿಬ್ಬಂದಿ ಇಲ್ಲದ ಕಾರಣ ರೋಗಿಯ ತಂದೆಯೇ ಗ್ಲೂಕೋಸ್ ಬಾಟಲ್ ಹಿಡಿದು ವ್ಹೀಲ್‍ಚೇರ್ ತಳ್ಳಿಕೊಂಡು ಹೋಗಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಮಧ್ಯೆ ಸಾಮಾನ್ಯ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಕ್ತಿಲ್ಲ. ಸರ್ಕಾರದ ಕೆಲ ರೂಲ್ಸ್‍ಗಳನ್ನೇ ಮೀರಿ ಅಲ್ಲಿನ ಸಿಬ್ಬಂದಿ ವರ್ತಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಮುಚ್ಚಿ ಕುಳಿತಿರುವುದು ವಿಪರ್ಯಾಸ.
ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಕೊರೊನಾಗೆ ಇಂದು ಸಹ ಇಬ್ಬರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸರಣಿ ಮರಣ ಮೃದಂಗ ಮುಂದುವರಿದಿದೆ.
ನಗರದ ಗೌವಾನ್ ಚೌಕ್ ನಿವಾಸಿ 70 ವರ್ಷದ ವೃದ್ಧ ಸೈಯದ್ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಬಿಪಿ, ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧ ಜೂನ್ 18ರ ರಾತ್ರಿ ಬ್ರೀಮ್ಸ್ ಗೆ ದಾಖಲಾಗಿದ್ದರು. 18ರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಬೀದರ್ ತಾಲೂಕಿನ ಮಾಳೆಗಾಂವ್ ಗ್ರಾಮದ 46 ವರ್ಷದ ಬಸವರಾಜು ಸಹ ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಕುಡಿದ ಮತ್ತಿನಲ್ಲಿ ರಸ್ತೆ ಪಕ್ಕದಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ವ್ಯಕ್ತಿಯನ್ನು ಜೂನ್ 17ರಂದು ಬ್ರೀಮ್ಸ್ ಗೆ ದಾಖಲು ಮಾಡಲಾಗಿತ್ತು. 18 ರಂದು ಮೃತಪಟ್ಟದ್ದರು. ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ.
ಇವರಿಬ್ಬರಿಗೆ ಕೊರೊನಾ ಹೇಗೆ ವಕ್ಕರಿಸಿದೆ ಎಂದು ಆರೋಗ್ಯ ಇಲಾಖೆ ಪತ್ತೆ ಹಚ್ಚುತ್ತಿದೆ. ಕಳೆದ 6 ದಿನಗಳಲ್ಲಿ ಕೊರೊನಾಗೆ 9 ಜನ ಬಲಿಯಾಗಿದ್ದು, ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 15 ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 497 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 324 ಸಕ್ರಿಯ ಪ್ರಕರಣಗಳಿವೆ, 158 ಜನ ಗುಣಮುಖವಾಗಿ ಡಿಸ್ಚಾರ್ಜ್ ಆಗಿದ್ದಾರೆ.