Tag: bidar

  • ಸರ್ಕಾರಿ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಸರ್ಕಾರಿ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಬೀದರ್: ಕಾರಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಸರ್ಕಾರಿ ಬಸ್ಸೊಂದು ಪಲ್ಟಿಯಾಗಿದ್ದು, 15ಕ್ಕೂ ಅಧಿಕ ಮಂದಿಗೆ ಗಾಯವಾಗಿರುವ ಘಟನೆ ಬೀದರಿನ ಹುಮನಾಬಾದ್ ತಾಲೂಕಿನ ದುಬಲಗುಂಡಿಯಲ್ಲಿ ನಡೆದಿದೆ.

    ಸುಮಾರು 27 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್‍ಗೆ ದುಬಲಗುಂಡಿ ಕ್ರಾಸಿನ ಬಳಿ ಕಾರೊಂದು ಅಡ್ಡ ಬಂದಿದೆ. ಈ ವೇಳೆ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬಸ್ ಚಾಲಕ ಸಡನ್ ಬ್ರೇಕ್ ಹಾಕಿದ್ದಾರೆ. ಈ ಕಾರಣದಿಂದ ಬಸ್ ರಸ್ತೆಯ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ.

    ಈ ಅಪಘಾತದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಂದಿಗೆ ಸಣ್ಣ ಪುಟ್ಟಗಾಯಗಳು ಆಗಿವೆ. ಆದರೆ ಅದೃಷ್ಟವಾಶತ್ ಯಾವುದೇ ಸಾವು ಸಂಭವಿಸಿಲ್ಲ. ಗಾಯಗೊಂಡ ಎಲ್ಲರನ್ನು ಹುಮನಾಬಾದ್ ಹಾಗೂ ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಶಾಸಕ ರಾಜಶೇಖರ್ ಪಾಟೀಲ್ ಬಂದು ಗಾಯಗೊಂಡವರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸವಕಲ್ಯಾಣದಲ್ಲೂ ಮ್ಯಾಜಿಕ್ ಮಾಡ್ತಾರಾ ‘ಬೈ ಎಲ್ಲೆಕ್ಷನ್ ಸ್ಪೆಷಲಿಸ್ಟ್’?

    ಬಸವಕಲ್ಯಾಣದಲ್ಲೂ ಮ್ಯಾಜಿಕ್ ಮಾಡ್ತಾರಾ ‘ಬೈ ಎಲ್ಲೆಕ್ಷನ್ ಸ್ಪೆಷಲಿಸ್ಟ್’?

    ಬೆಂಗಳೂರು/ಬೀದರ್: ಕೆ.ಆರ್ ಪೇಟೆ ಹಾಗೂ ಶಿರಾ ಉಪ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಎರಡು ಕ್ಷೇತ್ರವನ್ನು ಗೆದ್ದ ಹುಮ್ಮಸ್ಸಿನಲ್ಲಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜೇಯಂದ್ರ ಇದೀಗ ಉತ್ತರದಲ್ಲೂ ಉಪಚುನಾವಣಾ ಯಾಗ ಮಾಡಲು ಮುಂದಾಗಿದ್ದಾರೆ.

    ಉತ್ತರದ ಮಸ್ಕಿ, ಬಸವಕಲ್ಯಾಣಗಳತ್ತ ವಿಜಯೇಂದ್ರ ಚಿತ್ತ ಹರಿಸಿದ್ದು, ಉತ್ತರದ ಕ್ಷೇತ್ರಗಳಲ್ಲೂ ಕಮಾಲ್ ಮಾಡ್ತಾರಾ ಎಂಬ ಕುತೂಹಲ ಮೂಡಿದೆ. ಈ ಮೂಲಕ ತಮ್ಮ ಹ್ಯಾಟ್ರಿಕ್ ಗೆಲುವನ್ನು ಉತ್ತರ ಕರ್ನಾಟಕದಲ್ಲಿ ದಕ್ಕಿಸಿಕೊಳ್ತಾರಾ?, ಮಸ್ಕಿ, ಬಸವಕಲ್ಯಾಣ ಗೆಲ್ಲಲು ವಿಜಯೇಂದ್ರ ತಂತ್ರಗಾರಿಕೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ.

    ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗಳಿಗೆ ಈಗಿನಿಂದಲೇ ಅಖಾಡ ಸಿದ್ಧವಾಗ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಆರಂಭದಿಂದಲೇ ತಾಲೀಮು ನಡೆಸಲು ಶುರು ಮಾಡಿದೆ. ಉತ್ತರದ ಕ್ಷೇತ್ರಗಳನ್ನು ಗೆಲ್ಲಲು ವಿಜಯೇಂದ್ರ ಅಲ್ಲೇ ಮೊಕ್ಕಾಮು ಹೂಡಿದ್ದಾರೆ. ಕೆ.ಆರ್.ಪೇಟೆ, ಶಿರಾ ಮಾದರಿಯ ತಂತ್ರಗಾರಿಕೆಗಳಿಗಿಂತ ವಿಭಿನ್ನ ಸ್ಟ್ರಾಟೆಜಿಗೆ ವಿಜಯೇಂದ್ರ ಪ್ಲಾನ್ ಮಾಡುತ್ತಿದ್ದಾರೆ. ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳ ಆಳ-ಅಗಲಗಳ ಕಂಪ್ಲೀಟ್ ಸ್ಟಡಿ ಮಾಡುತ್ತಿದ್ದಾರೆ. ಈ ಮೂಲಕ ಶತಾಯಗತಾಯ ಉತ್ತರದಲ್ಲೂ ವಿಜಯ ಪತಾಕೆ ಹಾರಿಸಲು ವಿಜಯೇಂದ್ರ ಯೋಜನೆ ಹಾಕಿದ್ದಾರೆ.

    ವಿಜಯೇಂದ್ರ ಸ್ಟ್ರಾಟೆಜಿಗಳೇನು?
    ಈಗಿನಿಂದಲೇ ಪಕ್ಷ ಸಂಘಟನೆ, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವುದು. ಬೂತ್ ಮಟ್ಟದಿಂದ ಆರಂಭದಿಂದಲೇ ಚುನಾವಣೆಗೆ ಸಿದ್ಧತೆ ನಡೆಸುವುದು. ಬೂತ್ ಮಟ್ಟದಲ್ಲಿ ಮತದಾರರನ್ನು ಕಾರ್ಯಕರ್ತರ ಮೂಲಕ ತಲುಪಿ ಸರ್ಕಾರದ ಸಾಧನೆಗಳ ಮನವರಿಕೆ ಮಾಡುವುದು. ಚುನಾವಣೆಯಲ್ಲಿ ಪ್ರಭಾವ ಬೀರುವ ಸಮುದಾಯಗಳ ಮೇಲೆ ವಿಶೇಷ ಗಮನ ಹರಿಸುವುದು.

    ದೊಡ್ಡ ಮತ್ತು ಪ್ರಭಾವಿ ಸಮುದಾಯಯಗಳ ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡುವುದು. ಕ್ಷೇತ್ರದ ಪ್ರಬಲ ಸಮುದಾಯಗಳ ಮುಖಂಡರಿಗೆ ಸರ್ಕಾರ ಸಾಧನೆ, ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ಮನವರಿಕೆ ಮಾಡುವುದು. ನೀತಿ ಸಂಹಿತೆ ಜಾರಿಗೂ ಮುನ್ನ ಕೆಲ ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮುಂದುವರಿಕೆ ಮಾಡುವುದು. ಮಹಿಳಾ ಮತದಾರರನ್ನು ತಲುಪಲು ಸಹ ಸ್ಟ್ರಾಟೆಜಿ ರೆಡಿ ಮಾಡುತ್ತಿದ್ದು, ಮಹಿಳಾ ಸ್ವಸಹಾಯ ಸಂಘಗಗಳು, ಗ್ರಾಮೀಣ ಮಹಿಳೆಯರ ಸಮಸ್ಯೆಗಳ ಈಡೇರಿಕೆಗೆ ಆದ್ಯತೆ ನೀಡಿವುದಾಗಿದೆ.

  • ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ಗೆ ಕೊರೊನಾ ಸೋಂಕು ದೃಢ

    ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ಗೆ ಕೊರೊನಾ ಸೋಂಕು ದೃಢ

    ಬೀದರ್: ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದ ವೇಳೆ ಸೋಂಕು ದೃಢಪಟ್ಟಿದೆ. ಯಾವುದೇ ಗುಣಲಕ್ಷಣಗಳು ಕಂಡು ಬರದಿದ್ದರೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸೋಂಕು ದೃಢಪಡುತ್ತಿದ್ದಂತೆ 4-5 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. ಬಂಡೆಪ್ಪ ಖಾಶೆಂಪೂರ್ ಶಿರಾದಲ್ಲಿ ನಡೆದ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದರು. ಹೀಗಾಗೀ ಪ್ರಚಾರದ ವೇಳೆ ಕೊರೊನಾ ಸೋಂಕು ತಗುಲಿರುವ ಸಾದ್ಯತೆ ಇದೆ.

  • ಅಂಗನವಾಡಿ ಕಾರ್ಯಕರ್ತೆಯ ಬಳಿ ಲಂಚ – ಎಸಿಬಿ ಬಲೆಗೆ ಬಿದ್ದ ಲೇಡಿ ಆಫೀಸರ್

    ಅಂಗನವಾಡಿ ಕಾರ್ಯಕರ್ತೆಯ ಬಳಿ ಲಂಚ – ಎಸಿಬಿ ಬಲೆಗೆ ಬಿದ್ದ ಲೇಡಿ ಆಫೀಸರ್

    ಬೀದರ್: ವರ್ಗಾವಣೆ ಮಾಡಿಸಲು ಅಂಗನವಾಡಿ ಕಾರ್ಯಕರ್ತೆಯ ಬಳಿ ಲಂಚ ಪಡೆಯುವಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ತಾಲೂಕಾಧಿಕಾರಿ ಎಸಿಬಿ ಬಲೆಗೆ ಬಿದಿದ್ದಾರೆ.

    ವರ್ಗಾವಣೆ ಮಾಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶೋಭಾ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮುಂಗಡವಾಗಿ 30 ಸಾವಿರ ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ತಾಲೂಕಾಧಿಕಾರಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.

    ಹುಮ್ನಬಾದ್ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶೋಭಾ ವಿರುದ್ಧ ಸಿದ್ದಾರ್ಥ ಧಾನಾಜೀ ಎಂಬುವರು ಎಸಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಎಸಿಬಿ ಪೊಲೀಸರು ದಾಳಿ ಮಾಡಿ ಲಂಚದ ಸಮೇತ ತಾಲೂಕಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಎಸ್‍ಪಿ ಮಹೇಶ್ ಮೇಗಣ್ಣನವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

  • ಸ್ವಿಫ್ಟ್ ಕಾರ್‌ನಲ್ಲಿ ಸಾಗಿಸುತ್ತಿದ್ದ 50 ಕೆಜಿ ಗಾಂಜಾ ಜಪ್ತಿ- ಆರೋಪಿ ಬಂಧನ

    ಸ್ವಿಫ್ಟ್ ಕಾರ್‌ನಲ್ಲಿ ಸಾಗಿಸುತ್ತಿದ್ದ 50 ಕೆಜಿ ಗಾಂಜಾ ಜಪ್ತಿ- ಆರೋಪಿ ಬಂಧನ

    ಬೀದರ್: ತೆಲಂಗಾಣದಿಂದ ಬೀದರ್ ಜಿಲ್ಲೆಯ ಮೂಲಕ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ತೆಲಂಗಾಣದಿಂದ ಜಿಲ್ಲೆಯ ಔರಾದ್ ತಾಲೂಕಿನ ನವಲಾಸಪೂರದ ರಾಷ್ಟ್ರೀಯ ಹೆದ್ದಾರಿ 9ರ ಮೂಲಕ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ. 28 ವರ್ಷದ ದೇವಿದಾಸ್ ರಾಠೋಡ್ ಬಂಧಿತ ಆರೋಪಿ. ಬಂಧಿತನಿಂದ 5 ಲಕ್ಷ ರೂ. ಬೆಳೆ ಬಾಳುವ 50 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಅಲ್ಲದೆ ಒಂದು ಸ್ವಿಫ್ಟ್ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ. ಒಟ್ಟು 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಬೀದರ್ ಪೊಲೀಸರು ಜಪ್ತಿ ಮಾಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಜನವಾಡ ಪೊಲೀಸರು ದಾಳಿ ಮಾಡಿ ಆರೋಪಿ ಹಾಗೂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಮೂಲತಃ ತೆಲಂಗಾಣದ ಸಂಗಾರೆಡ್ಡಿಗೆ ಸೇರಿದವನಾಗಿದ್ದಾನೆ. ಎಸ್‍ಪಿ ನಾಗೇಶ್ ಡಿಎಲ್ ಮಾರ್ಗದರ್ಶನ ಹಾಗೂ ಎಎಸ್‍ಪಿ ಗೋಪಾಲ್ ಬ್ಯಾಕೋಡ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಜ್ಯದ ಕೆಲವೆಡೆ ಮತ್ತೆ ಮಳೆ- ಜನಜೀವನ ಅಸ್ತವ್ಯಸ್ತ, ರೈತರಲ್ಲಿ ಆತಂಕ

    ರಾಜ್ಯದ ಕೆಲವೆಡೆ ಮತ್ತೆ ಮಳೆ- ಜನಜೀವನ ಅಸ್ತವ್ಯಸ್ತ, ರೈತರಲ್ಲಿ ಆತಂಕ

    ಬೆಂಗಳೂರು: ಯಾದಗಿರಿ, ಬೀದರ್, ವಿಜಯಪುರ ಹಾಗೂ ರಾಯಚೂರಿನಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ.

    ಯಾದಗಿರಿ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆ ಅಬ್ಬರಕ್ಕೆ ರಸ್ತೆ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮಳೆ ಅರ್ಭಟಕ್ಕೆ ಜನರು ತಲ್ಲಣಗೊಂಡಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ, ಖಾನಾಪುರ ಎಸ್ ಗ್ರಾಮದೊಳಗೆ ನೀರು ನುಗ್ಗಿದೆ. 30 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ತಡರಾತ್ರಿಯಿಂದ ನಿದ್ದೆ ಮಾಡದೆ ಜನರು ಹೈರಾಣಾಗಿದ್ದಾರೆ. ನಗನೂರ ಗ್ರಾಮದ ರಸ್ತೆ ಜಲಾವೃತಗೊಂಡಿದೆ. ನಗನೂರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳು, ಖಾನಾಪುರ ಎಸ್ ಎಚ್ ಗ್ರಾಮದಲ್ಲಿ 10 ಮನೆಗಳಿಗೆ ನೀರು ನುಗ್ಗಿದೆ. ನೀರು ಖಾಲಿ ಮಾಡಲು ಜನ ಪರದಾಡಿದ್ದಾರೆ.

    ಬೀದರ್‍ನಲ್ಲಿ ತಡರಾತ್ರಿಯಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ರಾತ್ರಿಯಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ತಡರಾತ್ರಿ ಸುರಿದ ಮಳೆಗೆ ನಗರದ ಕೆಲವಡೆ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಪ್ರಾರಂಭ ಮಾಡಿದ್ದಾನೆ. ಈಗಾಗಲೇ ಮಹಾಮಳೆಗೆ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಲ್ಲಿ ಆತಂಕ ಶುರುವಾಗಿದೆ. ತಡರಾತ್ರಿ ಬೀದರ್ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು, ಇದೇ ರೀತಿ ಮಳೆ ಮುಂದುವರಿದ್ರೆ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿ ಗ್ಯಾರಂಟಿ ಎನ್ನುವಂತಾಗಿದೆ.

    ಇತ್ತ ವಿಜಯಪುರ ಜಿಲ್ಲೆಯಾದ್ಯಂತ ಕೂಡ ಮತ್ತೆ ಮಳೆ ಆರ್ಭಟ ಶುರುವಾಗಿದೆ. ನಿನ್ನೆ ಸಂಜೆ 7 ಗಂಟೆಗೆ ಶುರುವಾದ ಮಳೆ ಬಿಟ್ಟುಬಿಡದೆ ಈಗಲೂ ಮುಂದುವರಿದಿದೆ. ರಾತ್ರಿ ಇಡೀ ರಭಸದ ಮಳೆ ಸುರಿದಿದ್ದು, ಈಗ ಚಿಟಿಚಿಟಿ ಮಳೆಯಾಗುತ್ತಿದೆ. ಎರಡು ದಿನದಿಂದ ಶಾಂತನಾಗಿದ್ದ ವರುಣ ಇದೀಗ ನಿನ್ನೆಯಿಂದ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಇದರಿಂದ ರೈತರಲ್ಲಿ ಮತ್ತೆ ಆತಂಕ ಶುರುವಾಗಿದೆ.

    ರಾಯಚೂರಿನಲ್ಲಿ ಕೂಡ ಮತ್ತೇ ವರುಣನ ಆರ್ಭಟ ಶುರುವಾಗಿದ್ದು, ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ರಸ್ತೆಗಳಲ್ಲೆಲ್ಲಾ ನೀರು ತುಂಬಿ ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದ್ದರಿಂದ ರೈತರಲ್ಲಿ ಮತ್ತೆ ಆತಂಕ ಶುರುವಾಗಿದೆ.

  • ಸಕಲ ಸರ್ಕಾರಿ ಗೌರವಗಳೊಂದಿಗೆ ಶಾಸಕ ನಾರಾಯಣರಾವ್ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವಗಳೊಂದಿಗೆ ಶಾಸಕ ನಾರಾಯಣರಾವ್ ಅಂತ್ಯಕ್ರಿಯೆ

    ಬೀದರ್: ಕೊರೊನಾ ಸೋಂಕಿಗೆ ಬಲಿಯಾದ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು.

    ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಸಸ್ತಾಪುರ ಬಂಗ್ಲಾ ಬಳಿಯ ಶಾಸಕರ ನಿವೇಶನ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಿತು. ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿ ವಿಧಾನಗಳನುಸಾರ ಕೊರೊನಾ ನಿಯಮಗಳನ್ನನುಸರಿಸಿ ಅಗಲಿದ ಶಾಸಕರಿಗೆ ಅಂತಿಮ ನಮನ ಸಲ್ಲಿಸಲಾಯಿತು.

    ಅಂತ್ಯಕ್ರಿಯೆ ವೇಳೆ ಪೊಲೀಸ್ ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಗಲಿದ ಶಾಸಕರಿಗೆ ಗೌರವ, ಅಂತಿಮ ನಮನ ಸಲ್ಲಿಸಲಾಯಿತು. ಹಾರಕೂಡನ ಡಾ.ಚನ್ನವೀರ ಶಿವಾಚಾರ್ಯರು, ಭಾಲ್ಕಿಯ ಗುರುಬಸವ ಪಟ್ಟದೇವರು, ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಬೀದರ್ ಸಂಸದ ಭಗವಂತ್ ಖೂಬಾ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

    ಮಾಜಿ ಸಚಿವರು ಹಾಗೂ ಹಾಲಿ ಶಾಸಕರುಗಳಾದ ರಾಜಶೇಖರ್ ಪಾಟೀಲ ಹುಮನಾಬಾದ, ಬಂಡೆಪ್ಪ ಕಾಶೆಂಪೂರ, ಯುಟಿ ಖಾದರ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಚಂದ್ರಶೇಖರ್ ಪಾಟೀಲ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಎಸ್ಪಿ ಡಿ.ಎಲ್ ನಾಗೇಶ ಸೇರಿದಂತೆ ಹಿರಿಯ ರಾಜಕೀಯ ಧುರೀಣರು, ಅಧಿಕಾರಿಗಳು, ಶಾಸಕರ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

  • ನೋಡ ನೋಡ್ತಿದ್ದಂತೆ ನೀರು ಪಾಲಾಯ್ತು ಲಾರಿ – ವಿಡಿಯೋ ನೋಡಿ

    ನೋಡ ನೋಡ್ತಿದ್ದಂತೆ ನೀರು ಪಾಲಾಯ್ತು ಲಾರಿ – ವಿಡಿಯೋ ನೋಡಿ

    ಬೀದರ್: ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.

    ಜಿಲ್ಲೆಯ ಭಾಲ್ಕಿ ತಾಲೂಕಿನ ಜಮಖಂಡಿ ಗ್ರಾಮದ ಬಳಿ ಸೇತುವೆ ದಾಟುವಾಗ ಕೋಳಿ ಆಹಾರ ಸಾಗಾಟ ಮಾಡ್ತಿದ್ದ ಲಾರಿಯೊಂದು ನೋಡು ನೋಡುತ್ತಲೇ ನೀರು ಪಾಲಾದ ಘಟನೆ ನಡೆದಿದೆ.

    ಮಹಾರಾಷ್ಟ್ರದ ನಿಲಂಗ ಮೂಲಕ ಬೀದರ್‍ಗೆ ಆಗಮಿಸುತ್ತಿದ್ದ ಲಾರಿ ಮಳೆಯಿಂದ ಮುಳುಗಡೆಯಾದ ಜಮಖಂಡಿ ಗ್ರಾಮದ ಬಳಿಯ ಸೇತುವೆ ಬಳಿ ಲಾರಿ ಪಲ್ಟಿಯಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ರು ಭಂಡ ಧೈರ್ಯ ಮಾಡಿ ಬಂದಾಗ ನೀರಿನ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಆಹಾರ ಸಾಮಗ್ರಿಗಳು ನೀರು ಪಾಲಾಗಿವೆ.

    ಇತ್ತ ಮಹಾಮಳೆಗೆ ಜಿಲ್ಲೆಯ ಜೀವನದಿ ಮಂಜ್ರಾ ಉಕ್ಕಿ ಹರಿಯುತ್ತಿದೆ. ಔರಾದ್, ಬಸವಕಲ್ಯಾಣ ತಾಲೂಕಿನ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗಿದೆ. ಮಹಾಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ಹಲವು ಗ್ರಾಮಗಳು ಜಲಾವೃತ, ಹಲವು ಸೇತುವೆಗಳು ಮುಳುಗಡೆಯಾಗಿವೆ.

    ಬೀದರ್ ಪಟ್ಟಣದಲ್ಲಿ ಹಲವು ಮನೆಗಳಿಗೆ ನೀರು ನುದ್ದಿ ಅವಾಂತರ ಸೃಷಟಿಯಾಗಿದೆ. ಇನ್ನು ಹಲವು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.

  • ಬೀದರ್‌, ಕಲಬುರಗಿಯಲ್ಲಿ ವರುಣನ ಅಬ್ಬರ – ಗ್ರಾಮಗಳು ಜಲಾವೃತ, ಸೇತುವೆಗಳು ಮುಳುಗಡೆ

    ಬೀದರ್‌, ಕಲಬುರಗಿಯಲ್ಲಿ ವರುಣನ ಅಬ್ಬರ – ಗ್ರಾಮಗಳು ಜಲಾವೃತ, ಸೇತುವೆಗಳು ಮುಳುಗಡೆ

    – ಉಕ್ಕಿ ಹರಿಯುತ್ತಿರೋ ಜೀವನದಿ ಮಾಂಜ್ರಾ

    ಬೀದರ್/ಕಲಬುರಗಿ: ಮಹಾಮಳೆಗೆ ಬೀದರ್ ಜಿಲ್ಲೆಯಾದ್ಯಂತ ಹಲವು ಗ್ರಾಮಗಳು ಜಲಾವೃತವಾಗಿದ್ದು, ಸೇತುವೆಗಳು ಮುಳುಗಡೆಯಾಗಿ ಪ್ರವಾಹ ಸೃಷ್ಟಿಯಾಗಿದೆ. ಇಷ್ಟು ದಿನ ನೀರು ಇಲ್ಲದೆ ಖಾಲಿ ಖಾಲಿಯಾಗಿದ್ದ ಜಿಲ್ಲೆಯ ಜೀವನದಿ ಮಾಂಜ್ರಾ ಉಕ್ಕಿ ಹರಿಯುತ್ತಿದೆ. ಸತತ ಸುರಿದ ಮಹಾಮಳೆಗೆ ಬೀದರ್ ಪಟ್ಟಣದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ.

    ಬೀದರಿನಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಬಸವಕಲ್ಯಾಣ, ಭಾಲ್ಕಿ, ಕಮಲಾನಗರ, ಹುಮ್ನಾಬಾದ್ ಸೇರಿದಂತೆ ಜಿಲ್ಲೆಯಾದ್ಯಂತ ಅವಾಂತರಗಳು ಎದುರಾಗಿವೆ. ಬಸವಕಲ್ಯಾಣ ತಾಲೂಕಿನ ಸಿರಗಾಪೂರ್ ಗ್ರಾಮದ ಬಳಿರುವ ಸೇತುವೆ ಮುಳುಗಡೆಯಾಗಿ ಸಿರಗಾಪೂರ್ ಟು ಕೋಹಿನೂರು ಸಂಪರ್ಕ ಕಡಿತವಾಗಿದೆ. ಸಿರಗಾಪೂರ್ ಕೆರೆ ತುಂಬಿ ರಸ್ತೆ ಮೇಲೆ ನೀರು ಹರಿದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ಭಾಲ್ಕಿ ತಾಲೂಕಿನ ಉಚ್ಛ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮದ ಹನುಮಾನ್ ದೇವಸ್ಥಾನ ಹಾಗೂ ರಸ್ತೆಗಳು ಕರೆಯಂತಾಗಿವೆ. ಭಾಲ್ಕಿ ಹಾಗೂ ಔರಾದ್ ತಾಲೂಕಿನ ಮಾಂಜ್ರಾ ನದಿಯ ದಡದಲ್ಲಿರುವ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಸೋಯಾ, ಉದ್ದು, ತೊಗರಿ, ಕಬ್ಬು, ಜೋಳ ಸೇರಿದಂತೆ ಸಾವಿರಾರು ಎಕರೆಯ ಬೆಳೆಗಳು ಮಹಾಮಳೆಗೆ ನಾಶವಾಗಿದೆ.

    ಇನ್ನೂ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಹರಿದ ಹಿನ್ನೆಲೆ ಉತ್ತರಾದಿ ಮಠಕ್ಕೆ ನೀರು ನುಗ್ಗಿದೆ. ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದ ನಂತರ ಇದೀಗ ಕಲಬುರಗಿಯಲ್ಲಿ ಮಳೆಯ ಆರ್ಭಟ ಶುರುವಾಗಿದ್ದು, ಕೇವಲ ಎರಡು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ ಹಾಗೂ ಆಳಂದ ತಾಲೂಕಿನ ಜನ ಅಕ್ಷರಶಃ ನಲುಗಿ ಹೋಗಿವೆ.

    ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಮಳಖೇಡ ಸೇತುವೆ ಸಂಪೂರ್ಣ ಜಲಾವೃತಗೊಂಡು ವಾಘ್ದಾರಿ ಟೂ ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯ ಸಂಚಾರ ಸಂಪೂರ್ಣ ಬಂದ್ ಆಗಿದೆ. ನದಿಯ ಪಕ್ಕದಲ್ಲಿರುವ ಉತ್ತರಾದಿ ಮಠಕ್ಕೂ ನೀರು ನುಗ್ಗಿ ಇಡೀ ಮಠವೇ ಸಂಪೂರ್ಣ ಜಲಾವೃತಗೊಂಡಿದೆ. ಆಳಂದ ತಾಲೂಕಿನ ಸಾಲೆಗವ್ ಗ್ರಾಮದ ಹಳ್ಳದಲ್ಲಿ ಟ್ರ್ಯಾಕ್ಟರ್ ಪಲ್ಟಿ ಆಗಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್‌ನಲ್ಲಿದ್ದ 7 ಮಂದಿಯೂ ಈಜಿ ದಡ ಸೇರಿ ಬಚಾವ್ ಆಗಿದ್ದಾರೆ. ಚಿಂಚೋಳಿ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ.

     

    ಸದ್ಯ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನೆರಡು ದಿನ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ರಾಯಚೂರು ಮತ್ತು ಬಾಗಲಕೋಟೆಯಲ್ಲೂ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

  • ಕಲಬುರಗಿಯಲ್ಲಿ ಭಾರೀ ಮಳೆ – 5ಕ್ಕೂ ಹೆಚ್ಚು ಗ್ರಾಮಗಳಿಗೆ ಜಲದಿಗ್ಬಂಧನ

    ಕಲಬುರಗಿಯಲ್ಲಿ ಭಾರೀ ಮಳೆ – 5ಕ್ಕೂ ಹೆಚ್ಚು ಗ್ರಾಮಗಳಿಗೆ ಜಲದಿಗ್ಬಂಧನ

    – ರಾಯಚೂರು, ಬೀದರ್, ಬಳ್ಳಾರಿಯಲ್ಲೂ ವರುಣ ಪ್ರತಾಪ

    ಕಲಬುರಗಿ: ರಾಜ್ಯದಲ್ಲಿ ಹಲವೆಡೆ ಮತ್ತೆ ಮಳೆಯಾಗುತ್ತಿದೆ. ಕಲಬುರಗಿ ರಾಯಚೂರು, ಬೀದರ್ ಮತ್ತು ಬಳ್ಳಾರಿಯಲ್ಲಿ ಮಳೆಯ ಅಬ್ಬರಕ್ಕೆ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ.

    ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, 5ಕ್ಕೂ ಹೆಚ್ಚು ಗ್ರಾಮಗಳಿಗೆ ಜಲದಿಗ್ಬಂಧನವಾಗಿದೆ. ಚಿಂಚೋಳಿ ತಾಲೂಕಿನ ಹಲವೆಡೆ ಗ್ರಾಮಗಳಿಗೆ ನೀರು ನುಗ್ಗಿದ್ದು, ಮನೆಗಳು ಜಲಾವೃತವಾಗಿವೆ. 5ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜನ ಹೊರಬಾರಲಾರದೇ ಕಷ್ಟಪಡುವಂತಾಗಿದೆ.

    ಇದರ ಜೊತೆಗೆ ಮಳೆಯಲ್ಲಿ ಕೊಚ್ಚಿಹೋಗಿದ್ದ ತಹಶೀಲ್ದಾರ್ ಒಬ್ಬರನ್ನು ರಕ್ಷಣೆ ಮಾಡಲಾಗಿದೆ. ಮಳೆ ಹೆಚ್ಚಾದ ಕಾರಣ ಕಾರು ಹಳ್ಳದಲ್ಲಿ ಕೊಚ್ಚಿಹೋಗಿದೆ. ಈ ಸಮಯದಲ್ಲಿ ತಹಶೀಲ್ದಾರ್ ಅವರು ಮರವೇರಿ ಕುಳಿತ ಘಟನೆ ಕಲಬುರಗಿಯ ಚಿಂಚೋಳಿ ತಾಲೂಕಿನ ಗಣಾಪೂರ ಗ್ರಾಮದಲ್ಲಿ ನಡೆದಿದೆ. ಕೆಲಸ ಮುಗಿಸಿ ಬೀದರ್ ನಗರದ ಮನೆಗೆ ತೆರಳುವಾಗ ಮಳೆಯಲ್ಲಿ ಸಿಲುಕಿದ್ದ ತಹಶೀಲ್ದಾರ್ ಪಂಡಿತ್ ಬಿರಾದಾರ್ ಅವರನ್ನು ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ.

    ಕಳೆದ ರಾತ್ರಿಯಿಂದ ಬೀದರ್ ಜಿಲ್ಲೆಯಲ್ಲೂ ಕೂಡ ಧಾರಾಕಾರ ಮಳೆಯಾಗಿದ್ದು, ಹಲವು ಸೇತುವೆಗಳು ಪ್ರವಾಹಕ್ಕೆ ಮುಳುಗಡೆಯಾಗಿವೆ. ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಕಮಲಾನಗರ ತಾಲೂಕು ವ್ಯಾಪ್ತಿಯಲ್ಲಿ ಗ್ರಾಮಗಳ ಸಂಪರ್ಕ ಬಂದ್ ಆಗಿದ್ದು, ಜನರು ಪರಾದಡುವಂತಾಗಿದೆ. ಮಳೆಯ ಅಬ್ಬರಕ್ಕೆ ಮಾಂಜ್ರಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ಮಧ್ಯೆದಲ್ಲಿ ಸಿಲುಕಿ ಆಹಾರವಿಲ್ಲದೇ ನರಳುತ್ತಿದ್ದ 40 ಕೋತಿಗಳನ್ನು ರಕ್ಷಣೆ ಮಾಡಲಾಗಿದೆ.

    ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲೂ ಕೂಡ ವರುಣನ ಅಬ್ಬರ ಮುಂದುವರಿದಿದ್ದು, ಭಾರೀ ಮಳೆಗೆ ಸಂಡೂರಿನ ಮೈನಿಂಗ್‍ನಲ್ಲಿ ಮಣ್ಣು ಕುಸಿದಿದೆ. ಮಣ್ಣಿನಡಿ ಮೈನಿಂಗ್ ವಾಹನ ಸಿಲುಕಿಕೊಂಡಿದೆ. ನಿರಂತರ ಮಳೆಯಿಂದ ಮೈನಿಂಗ್ ವಾಹನ ಸವಾರರ ಪರದಾಡುವಂತಾಗಿದೆ. ನಿರಂತರ ಮಳೆಗೆ ಹೊಸಪೇಟೆ ತಾಲೂಕಿನಲ್ಲಿ ಡಣಾಯಕನಕೆರೆ ಕೋಡಿ ಒಡೆದಿದ್ದು, ನೀರು ನುಗ್ಗಿ ನೂರಾರು ಎಕರೆ ಬೆಳೆ ನಾಶವಾಗಿದೆ.

    ರಾಯಚೂರು ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಸಿಂಧನೂರು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಕೆರೆ ನೀರು ಜಮೀನಿಗೆ ನುಗ್ಗಿದರಿಂದ ಬೆಳೆ ಹಾಳಾಗಿದೆ.