Tag: bidar

  • ಬೀದರ್- ಕಳಪೆ ಕಾಮಗಾರಿ: ನೀರಿನ ರಭಸಕ್ಕೆ ಒಡೆದ ಬ್ಯಾರೇಜ್

    ಬೀದರ್- ಕಳಪೆ ಕಾಮಗಾರಿ: ನೀರಿನ ರಭಸಕ್ಕೆ ಒಡೆದ ಬ್ಯಾರೇಜ್

    ಬೀದರ್: ಕಾರಂಜಾ ಡ್ಯಾಂನಿಂದ ಹರಿಯಬಿಟ್ಟ ನೀರಿನಿಂದ ಭಾಲ್ಕಿ ತಾಲೂಕಿನ ಗೋಧಿಹಿಪ್ಪರಗಾ ಗ್ರಾಮದ ಬಳಿಯ ಬ್ಯಾರೆಜ್ ಕಂ ಬ್ರಿಡ್ಜ್ ಒಡೆದು ನೀರು ಪೋಲಾಗುತ್ತಿದೆ.

    ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿ ಕಾರಂಜಾ ನದಿಗೆ ಡ್ಯಾಂ ಕಟ್ಟಲಾಗಿದೆ. ಈ ಡ್ಯಾಂನಿಂದ ಪ್ರತಿನಿತ್ಯ 86 ಸಾವಿರ ಕ್ಯೂಸೆಕ್ ನೀರನ್ನು ಹರಿಯಬಿಡಲಾಗುತ್ತಿದೆ. ಆದರೆ ಕೇವಲ 8 ತಿಂಗಳ ಹಿಂದೆ ಗೋಧಿಹಿಪ್ಪರಗಾ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ನೀರಿನ ರಭಸಕ್ಕೆ ಒಡೆದು ಹೋಗಿದೆ. ಶುಕ್ರವಾರ ರಾತ್ರಿಯಿಂದ ನದಿಗೆ ನೀರನ್ನು ಹರಿಸಲಾಗುತ್ತಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

    ಮಾಸಿಮಾಡ ಮತ್ತು ಗೋಧಿಹಿಪ್ಪರಗಾ ಗ್ರಾಮದ ನಡುವೆ ಸಂಚಾರ ಕೂಡ ಕಡಿದು ಹೋಗಿದೆ. ಬ್ಯಾರೇಜ್ ಒಡೆದು ಹೋಗಿದ್ದ ಅಧಿಕಾರಿಗಳು ಮಾತ್ರ ನದಿಯ ನೀರನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಹತ್ತಾರು ಎಕರೆಯಲ್ಲಿ ರೈತರು ಬೆಳೆದಿದ್ದ ತರಕಾರಿ, ಕಬ್ಬು ನಾಶವಾಗಿವೆ.

    ಅವೈಜ್ಞಾನಿಕ ರೀತಿಯಲ್ಲಿ ನೀರು ಬಿಟ್ಟಿರುವುದು ಮತ್ತು ಕಳಪೆ ಗುಣಮಟ್ಟದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದ್ದರಿಂದ ಇಷ್ಟೆಲ್ಲಾ ಅನಾಹುತವಾಗಲು ಕಾರಣ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಬೀದರ್: ಬೇಸಿಗೆ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದೆ. ಜನರಿಗೇನೋ ಮಾತು ಬರುತ್ತೆ ಸಂಕಟ, ಸಮಸ್ಯೆಯನ್ನ ಹೇಳ್ಕೊಳ್ತಾರೆ. ಆದ್ರೆ ಪ್ರಾಣಿ-ಪಕ್ಷಿಗಳು ಏನು ಮಾಡ್ಬೇಕು? ಇಂಥ ಪಕ್ಷಿಗಳಿಗೆ ಬೀದರ್‍ನ ಮಸ್ಕಲ್ ಗ್ರಾಮಸ್ಥರು ಒಳ್ಳೇ ಐಡಿಯಾ ಮಾಡಿ ಆಶ್ರಯ ಕೊಟ್ಟಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮಸ್ಥರು ಪಕ್ಷಿಗಳಿಗೆ ಡಬ್ಬಗಳನ್ನು ನಿರ್ಮಾಣ ಮಾಡಿ ಆಶ್ರಯ ಕೊಟ್ಟಿದ್ದಾರೆ. ಗ್ರಾಮದ 2 ಕಡೆ 20ಕ್ಕೂ ಹೆಚ್ಚು ಡಬ್ಬಗಳನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ಇವುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ.

    ಮನುಷ್ಯನ ಅತಿಯಾಸೆಯಿಂದ ಅವಸಾನವಾಗ್ತಿರೋ ಕಾಡಿನಿಂದಾಗಿ ಪಕ್ಷಿಗಳಿಗೂ ಆಸರೆಯಿಲ್ಲದಂತಾಗಿದೆ. ಆದ್ರೆ ಈ ಗ್ರಾಮಸ್ಥರು ಮಾತ್ರ ಮೂರು ಕಾಲದಲ್ಲೂ ಪಕ್ಷಿಗಳಿಗೆ ಅನ್ನಾಹಾರ ನೀಡ್ತಿದ್ದಾರೆ. ಈಗಿನ ಬೇಸಿಗೆಯಲ್ಲಂತೂ ಪಾರಿವಾಳ, ಗುಬ್ಬಚ್ಚಿಗಳು ಖುಷಿಯಾಗಿ ಗ್ರಾಮಸ್ಥರ ಆತಿಥ್ಯ ಸ್ವೀಕರಿಸುತ್ತಿವೆ.

    https://www.youtube.com/watch?v=4EH1zg-enwo

     

  • ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮ- ವಿದ್ಯಾರ್ಥಿಗಳಿಗೆ ಬೇಕಿದೆ ಬಸ್ ವ್ಯವಸ್ಥೆ

    ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮ- ವಿದ್ಯಾರ್ಥಿಗಳಿಗೆ ಬೇಕಿದೆ ಬಸ್ ವ್ಯವಸ್ಥೆ

    ಬೀದರ್: ರಣ ಬಿಸಿಲಿನಲ್ಲಿ ತಲೆ ಮೇಲೆ ಪುಸ್ತಕ ಹಿಡಿದುಕೊಂಡು ಕಾಲೇಜಿಗೆ ಹೋರಟಿರುವ ವಿದ್ಯಾರ್ಥಿಗಳು. ಮೊತ್ತೊಂದು ಕಡೆ ಶಾಲೆಗೆ ಹೋಗಲು ವಿದ್ಯಾರ್ಥಿನಿಯರು ಮೈಲಿಗಟ್ಟಲೆ ಬ್ಯಾಗ್ ಹಾಕಿಕೊಂಡು ಸುಸ್ತಾಗಿ ನಡೆಯುತ್ತಿರುವ ದೃಶ್ಯ. ಸ್ವಾತಂತ್ರ್ಯ ಬಂದಾಗಿನಿಂದ ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲಾ ಅಂದ್ರೆ ನಂಬುತ್ತಿರಾ? ನಂಬಲೇಬೇಕು ಸ್ವಾಮಿ.

    ಇದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮದ ಕಥೆ. 4 ಸಾವಿರಕ್ಕೂ ಹೆಚ್ಚು ಜನರಿರುವ ಈ ಗ್ರಾಮ ಬಸ್ಸನ್ನೇ ಕಾಣದೆ ಇರುವುದು ವಿಪರ್ಯಾಸ. ಮಸ್ಕಲ್ ಗ್ರಾಮದಿಂದ ಸಂತಪೂರ್ ಹೋಬಳಿಗೆ ಬರೋಕೆ 5 ಕೀಲೊಮೀಟರ್, ಠಾಣಾಕುಶನೂರ್ ಪಾಲಿಟೆಕ್ನಿಕ್ ಕಾಲೇಜಿಗೆ ಹೋಗೋಕೆ ವಿದ್ಯಾರ್ಥಿಗಳು 10 ಕೀಲೋಮೀಟರ್ ನಡೆದುಕೊಂಡೆ ಹೋಗಬೇಕು. 600ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿದಿನದ ಗೋಳು ಇದು. ಈ ಗ್ರಾಮಕ್ಕೆ ಬಸ್ ಸಂಚಾರವಿಲ್ಲದ ಕಾರಣ ಎಷ್ಟೋ ವಿದ್ಯಾರ್ಥಿನಿಯರು ಶಿಕ್ಷಣವನ್ನೇ ತೊರೆದಿರುವುದು ಬೇಸರದ ಸಂಗತಿಯಾಗಿದೆ.

    ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿರುವುದು ಒಂದು ಕಡೆಯಾದ್ರೆ ಸಂಜೆಯಾಗುತ್ತಿದಂತ್ತೆ ಗ್ರಾಮಕ್ಕೆ ಮರಳಲು ವಿದ್ಯಾರ್ಥಿನಿಯರು ಭಯ ಪಡುತ್ತಿದ್ದಾರೆ. ರಾಜ್ಯದಲ್ಲಿ ಇಂದು ನಡೆಯುತ್ತಿರುವ ಅತ್ಯಾಚಾರಗಳು ವಿದ್ಯಾರ್ಥಿನಿಯರ ಭಯಕ್ಕೆ ಮತ್ತೊಂದು ಕಾರಣವಾಗಿದೆ. ಬಸ್ ಇಲ್ಲದಿದ್ರೂ ಈ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಗ್ರಾಮದಿಂದ ವಾಲಿಬಾಲ್ ಕ್ರೀಡೆಗೆ 5 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

    ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇನ್ನೂ ಬಸ್ ವ್ಯವಸ್ಥೆ ಇಲ್ಲದೆ ಇರುವುದು ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರ. ಇನ್ನು ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ತಿಲಾಂಜಲಿ ಇಡುತ್ತಿರುವುದು ಬೇಸರದ ಸಂಗತಿಯಾಗಿದೆ. ಬೆಳಕು ಕಾರ್ಯಕ್ರಮದಿಂದಾದ್ರೂ ನಮ್ಮ ಗ್ರಾಮದ ಮಕ್ಕಳಿಗೆ ಬೆಳಕು ಸಿಗಲಿ ಅಂತಾ ದೂರದ ಬೀದರ್‍ನಿಂದ ಬಂದಿದ್ದಾರೆ.

     

  • ಗಾಢ ಬಣ್ಣದ ಕ್ಯಾರೆಟ್ ಖರೀದಿಸೋ ಮುನ್ನ ಈ ಸ್ಟೋರಿ ಓದಿ

    ಗಾಢ ಬಣ್ಣದ ಕ್ಯಾರೆಟ್ ಖರೀದಿಸೋ ಮುನ್ನ ಈ ಸ್ಟೋರಿ ಓದಿ

    ಬೀದರ್: ಕ್ಯಾರೆಟ್ ತಿಂದ್ರೆ ವಿಟಮಿನ್ ಎ ಸಿಗುತ್ತೆ, ಕಣ್ಣಿಗೆ ಒಳ್ಳೆಯದು. ಹೀಗಾಗಿ ಮಾರುಕಟ್ಟೆಗಳಲ್ಲಿ ಕ್ಯಾರೆಟ್ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುತ್ತೆ. ಆದ್ರೆ ಸದ್ಯ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಗಾಢ ಬಣ್ಣದ ಕ್ಯಾರೆಟ್ ತಿನ್ನುವಾಗ ಎಚ್ಚರದಿಂರಬೇಕು.

    ಹೌದು. ಬೀದರ್‍ನ ಔರಾದ್ ತಾಲೂಕಿನಲ್ಲಿ ಗಜ್ಜರಿ ವ್ಯಾಪಾರಿಗಳು ದುಪ್ಪಟ್ಟು ಹಣ ಗಳಿಸೋಕೆ ಬಣ್ಣ ಬಳಸಿ ಕಲಬೆರಕೆ ದಂಧೆ ನಡೆಸ್ತಿದ್ದಾರೆ. ಹಲವು ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದು, ಕ್ಯಾರೆಟ್ ತಿಂದು ಗ್ರಾಹಕರಿಗೆ ಹೊಟ್ಟೆ ನೋವಿನ ಪ್ರಕರಣ ಜಾಸ್ತಿಯಾದಾಗ ತಾಲೂಕು ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಲಬೆರಕೆ ದಂಧೆಕೋರರು ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

    ಕ್ಯಾರೆಟ್ ಬಣ್ಣ ಗಾಢವಾಗಿಸೋಕೆ ಏನ್ ಮಾಡ್ತಾರೆ?: ಸಕ್ಕರೆ ಮಿಶ್ರಿತ ನೀರಿನಲ್ಲಿ ಕ್ಯಾರೆಟ್ ನೆನೆಸಿಡ್ತಿದ್ದಾರೆ. ರಾತ್ರಿಯಿಡೀ ಸಕ್ಕರೆ ಮಿಶ್ರಿತ ನೀರಲ್ಲಿ ನೆನೆಸಿಟ್ಟ ಕ್ಯಾರೆಟ್‍ಗೆ ಕಲರ್ ಬರುತ್ತೆ. ಇಂಥ ಕಲರ್‍ಗೆ ಮರುಳಾಗಿ ಜನ ಕ್ಯಾರೆಟ್ ಖರೀದಿ ಮಾಡ್ತಾರೆ.

    ತಿಂದ್ರೆ ಏನಾಗುತ್ತೆ?: ಈ ಸಕ್ಕರೆ ಲೇಪಿತ ಕ್ಯಾರೆಟ್ ತಿಂದ ಗ್ರಾಹಕರಿಗೆ ಹೊಟ್ಟೆ ನೋವು ಬರುತ್ತೆ. ಅಷ್ಟೇ ಅಲ್ಲದೇ ಮಧುಮೇಹ, ಶ್ವಾಸಕೋಶದ ತೊಂದರೆಗಳು, ಗ್ಯಾಸ್ಟಿಕ್ ಸಮಸ್ಯೆ, ಜೀರ್ಣಕ್ರಿಯಗೆ ಸಂಬಂಧಿಸಿದ ಹಲವು ಕಾಯಿಲೆಗಳು ಬರುವುದು ಖಚಿತ ಎಂದು ತಾಲೂಕು ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ್ ಹೇಳಿದ್ದಾರೆ.

  • ಬೀದರ್: ಮಗುವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ!

    ಬೀದರ್: ಮಗುವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ!

    ಬೀದರ್: ಮೇಕೆಯೊಂದು ಮಗುವಿನ ಆಕಾರದ ಮರಿಗೆ ಜನ್ಮ ನೀಡಿದ ವಿಚಿತ್ರ ಘಟನೆಯೊಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದಿದೆ.

    ರಾಜೇಶ್ವರ್ ಗ್ರಾಮದ ಸಾಜೀದ್ ಎಂಬವರ ಮೇಕೆ ಈ ವಿಸ್ಮಯಕಾರಿಗೆ ಸಾಕ್ಷಿಯಾಗಿದೆ.

    ಗ್ರಾಮದ ಸಾಜೀದ್ ಎಂಬವರ ಮನೆಯಲ್ಲಿರೋ ಮೇಕೆ ಸೋಮವಾರ ಸಂಜೆ ಮೂರು ಮರಿಗಳಿಗೆ ಜನ್ಮ ನೀಡಿದೆ. ಮೊದಲ ಎರಡು ಮರಿಗಳು ಮೇಕೆಯ ರೀತಿಯಲ್ಲಿದ್ದು, ಮೂರನೇ ಮರಿ ಮಾತ್ರ ಮಗುವಿನ ಹಾಗೆ ಇದ್ದು, ಗ್ರಾಮಸ್ಥರ ಆಚ್ಚರಿಗೆ ಕಾರಣವಾಗಿದೆ. ಇದೀಗ ಗ್ರಾಮಸ್ಥರು ಈ ವಿಶೇಷ ಮೇಕೆ ಮರಿಯನ್ನು ನೋಡಲು ಅಕ್ರಂ ಅವರ ಮನೆಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದು, ಕುತೂಹಲದಿಂದ ನೋಡಿ ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.

     

  • ಬೆಳಕು ಇಂಪ್ಯಾಕ್ಟ್: ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಸಿಕ್ತು ಶೌಚಾಲಯ

    ಬೆಳಕು ಇಂಪ್ಯಾಕ್ಟ್: ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಸಿಕ್ತು ಶೌಚಾಲಯ

    ಬೀದರ್: ಅಂತು ಇಂತು ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ನರಕಯಾತನೆಯಿಂದ ಮುಕ್ತಿ ಸಿಕ್ಕಿದೆ. ಶಾಲೆಯ ವಿದ್ಯಾರ್ಥಿನಿಯರು ಶೌಚಾಲಯ ಇಲ್ಲದೆ ನಕತಯಾತನೆ ಪಡುತ್ತಿರುವ ಬಗ್ಗೆ ಬೆಳಕು ಕಾರ್ಯಕ್ರಮದ ಮೂಲಕ ಪಬ್ಲಿಕ್ ಟಿವಿ ಪ್ರಸಾರ ಮಾಡಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಣ್ಣು ತೆರಿಸಿತ್ತು. ಇದಕ್ಕೆ ಅಧಿಕಾರಿಗಳು ಕೂಡಲೇ ಸ್ಪಂದನೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಒಟ್ಟು ಆರು ಶೌಚಾಲಯ ನಿರ್ಮಾಣ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದು ನಿಮ್ಮ ಪಬ್ಲಿಕ್ ಟಿವಿಯ ಬಿಗ್ ಇಂಪ್ಯಾಕ್ಟ್.

    ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ 160ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಜಯ ಸಿಕ್ಕಿದೆ. ಈ ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಟ್ಟು 190 ವಿದ್ಯಾರ್ಥಿಗಳು ಇದ್ದು ಶೇಕಡ 80 ರಷ್ಟು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಶೌಚ ಮಾಡಲು ಶೌಚಾಲಯವಿಲ್ಲದೆ ಬಯಲಲ್ಲಿ ಶೌಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ನಾಚಿಕೆಯಿಂದ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಹಂತಕ್ಕೆ ಬಂದಿದ್ದರು.

    ವಿದ್ಯಾರ್ಥಿನಿಯರು ಶೌಚಾಲಯವಿಲ್ಲದೆ ನರಕಯಾತನೆ ಪಡುತ್ತಿರುವ ಸುದ್ದಿಯನ್ನು ನಿಮ್ಮ ಪಬ್ಲಿಕ್ ಟಿವಿ `ಬೆಳಕು’ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿತ್ತು. ಇದರಿಂದ ಎಚ್ಚರಗೊಂಡ ಅಧಿಕಾರಿಗಳು 14ನೇ ಹಣಕಾಸು ಯೋಜನೆ ಅಡಿಯಲ್ಲಿ 1 ಲಕ್ಷ ರೂ. ವೆಚ್ಚ ಮಾಡಿ ಒಟ್ಟು ಆರು ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ.

    ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವಿಲ್ಲದೆ ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದ್ದು ಸುದ್ದಿ ಪ್ರಸಾರವಾದ ನಂತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಿದ್ರಲ್ಲಾ ಎಂಬ ಸಮಾಧಾನವಿದೆ. ಬಾಲಕಿಯರಿಗೆ ಅಷ್ಟೆ ಅಲ್ಲದೆ ಬಾಲಕರಿಗೂ ಶೌಚಾಲಯ ನಿಮಾರ್ಣ ಮಾಡಲು ಸ್ವತಃ ಶಾಲೆಯ ಶಿಕ್ಷಕರು ಪಣತೊಟ್ಟಿದ್ದು ಖುಷಿಯ ಸಂಗತಿಯಾಗಿದೆ.

    ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಬಾಲಕಿಯರ ನರಕಯಾತನೆ ಬಗ್ಗೆ ಸುದ್ದಿ ಮಾಡಿದ್ದಕ್ಕೆ ಇಂದು ಬಾಲಕಿಯರಿಗೆ ಬೆಳಕು ಸಿಕ್ಕಿದ್ದು ಸಂತೋಷದ ಸಂಗತಿಯಾಗಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತ್ತ ಒಂದು ಸ್ಟೋರಿಗೆ ಮಾನವೀಯತೆಯ ಬೆಲೆ ನಮ್ಮಿಂದ ಸಿಕ್ಕಿದೆ ಎಂಬ ಖುಷಿ ನಿಮ್ಮ ಪಬ್ಲಿಕ್ ಟಿವಿಗೆ ಇದೆ. ಸ್ಪಂದನೆ ನೀಡಿದ ಜನಪತ್ರಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ವಿದ್ಯಾರ್ಥಿನಿಯರ ಪರವಾಗಿ ಧನ್ಯವಾದಗಳು.

     

  • ರಾಯಚೂರಿನಲ್ಲಿ ಲವ್ ಜಿಹಾದ್…!?

    ರಾಯಚೂರಿನಲ್ಲಿ ಲವ್ ಜಿಹಾದ್…!?

    -ಸುಳ್ಳು ದಾಖಲೆ ಸೃಷ್ಠಿಸಿ ಅಪ್ರಾಪ್ತೆಯನ್ನ ಮದುವೆಯಾಗಲು ಮುಂದಾದ ಯುವಕ

    -ಬೀದರ್ ಯುವತಿಯ ನಕಲಿ ದಾಖಲೆಗಳು ಲಿಂಗಸುಗೂರಿನಲ್ಲಿ ಸೃಷ್ಠಿ

    ರಾಯಚೂರು: ರಾಯಚೂರಿನಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಳ್ಳು ದಾಖಲೆಗಳನ್ನ ಸೃಷ್ಠಿಸಿ ಅಪ್ರಾಪ್ತ ಹಿಂದೂ ಹುಡುಗಿಯನ್ನ ಮುಸ್ಲಿಂ ಹುಡುಗ ಮದುವೆಯಾಗಲು ಮುಂದಾಗಿರುವುದು ಬಯಲಾಗಿದೆ. ಸಂಬಂಧವೇ ಇಲ್ಲದ ಗ್ರಾಮದ ಸುಳ್ಳು ದಾಖಲೆಗಳನ್ನ ಸೃಷ್ಠಿಸಿರುವ ಈ ದೊಡ್ಡ ಜಾಲದ ಬಗ್ಗೆ ಅನುಮಾನ ಮೂಡಿಸಿದೆ. ಸದ್ಯ ಹುಡುಗನ ವಿರುದ್ದ ಹುಡುಗಿ ಪೋಷಕರು ಬೀದರ್‍ನಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ.

    ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಮದುವೆ ನೋಂದಣಿ ಕಚೇರಿಯಲ್ಲಿ ಮಾರ್ಚ್ 6, 2017 ರಂದು ವಿವಾಹಕ್ಕೆ ಅರ್ಜಿಹಾಕಿ ನಾಪತ್ತೆಯಾಗಿರುವ ಯುವಕ-ಯುವತಿ ಮೂಲತಃ ಬೀದರ್ ನವರು. ಆದ್ರೆ ಆಧಾರ್ ಕಾರ್ಡ್ ಹಾಗೂ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಪ್ರಕಾರ ಅಪ್ರಾಪ್ತೆಯಾಗಿರುವ ಯುವತಿಯ ನಕಲಿ ದಾಖಲೆಗಳನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆ ಹಾಗೂ ಇಲ್ಲಿನ ಮೆದಕಿನಾಳ ಗ್ರಾಮ ಪಂಚಾಯ್ತಿಯಲ್ಲಿ ಸೃಷ್ಠಿಸಲಾಗಿದೆ. ಅಲ್ಲದೆ ಮೆದಕಿನಾಳ ಗ್ರಾಮದ ಮತದಾರರ ಪಟ್ಟಿಗೆ ಸೇರಿಸುವಂತೆಯೂ ಅರ್ಜಿ ಸಲ್ಲಿಸಿದ್ದಾರೆ.

    ಯುವತಿ ನಾಪತ್ತೆಯಾದ ದಿನವೇ ಸೃಷ್ಠಿಯಾದ ಈ ಸುಳ್ಳು ದಾಖಲೆಗಳಿಂದ ಯುವತಿಗೆ 19 ವರ್ಷಗಳಾಗಿವೆ ಅಂತ ಮದುವೆಗೆ ಅರ್ಜಿ ಸಲ್ಲಿಸಲಾಗಿದೆ. ಬೀದರ್‍ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಶೇಖ್ ಜಮೀಲ್ ಅಪ್ರಾಪ್ತೆಯನ್ನ ಮದುವೆಯಾಗಲು ಮುಂದಾಗಿದ್ದಾನೆ. ಸುಳ್ಳು ದಾಖಲೆ ಸೃಷ್ಠಿಸಿ ಬಡ ಯುವತಿಯ ಮನ ಪರಿವರ್ತಿಸಿ ಲವ್ ಜಿಹಾದ್ ನಡೆದಿದೆ ಅಂತ ಗ್ರಾಮಸ್ಥರು, ಯುವತಿ ಪೋಷಕರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.

    ನಮಗೆ ಅರಿವಿಲ್ಲದೆ ಸುಳ್ಳು ದಾಖಲೆಯನ್ನ ಪಡೆದಿದ್ದಾರೆ ಅಂತ ಮೆದಕಿನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಬಿಲ್ ಕಲೆಕ್ಟರ್ ತಪ್ಪೊಪ್ಪಿಕೊಂಡಿದ್ದಾರೆ. ಮಾರ್ಚ್ 2 ರಂದು ನಕಲಿ ವಾಸಸ್ಥಳ ಪ್ರಮಾಣ ಪತ್ರ ಪಡೆದಿದ್ದು ಮೆದಕಿನಾಳ ಗ್ರಾ.ಪಂ.ನ ಸಿಸಿಟಿವಿ ಕ್ಯಾಮೆರಾದ ಅಂದಿನ ದೃಶ್ಯಾವಳಿಗಳನ್ನ ಅಳಿಸಿ ಹಾಕಲಾಗಿದೆ. ಇದೊಂದು ವ್ಯವಸ್ಥಿತ ಜಾಲದ ಕೆಲಸವೇನೋ ಅನ್ನೋ ಅನುಮಾನ ಮೂಡಿವೆ. ಬೀದರ್‍ನ ಮಹಿಳಾ ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತೆಯನ್ನ ಪೀಡಿಸುತ್ತಿದ್ದ ಶೇಖ್ ಜಮೀಲ್ ಮಾರ್ಚ್ 2 ರಂದು ಅವಳನ್ನ ಅಪಹರಿಸಿದ್ದಾನೆ ಅಂತ ಯುವತಿಯ ಪೋಷಕರು ಬೀದರ್‍ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಒಟ್ಟಿನಲ್ಲಿ, ಇಷ್ಟವಿಲ್ಲದಿದ್ದರೂ ಬಡ ಯುವತಿಯ ಮನವೊಲಿಸಿ ಅಥವಾ ಒತ್ತಾಯಪೂರ್ವಕವಾಗಿ ಶೇಖ್ ಜಮೀಲ್ ಲವ್ ಜಿಹಾದ್‍ಗೆ ಮುಂದಾಗಿದ್ದಾನೆ ಅಂತ ಆರೋಪ ಕೇಳಿಬಂದಿವೆ. ಸುಳ್ಳುದಾಖಲೆಗಳ ಸೃಷ್ಠಿ ಹಾಗೂ ಒಟ್ಟಾರೆ ಪ್ರಕರಣವನ್ನ ನೋಡಿದಾಗ ನಿಜಕ್ಕೂ ಲವ್ ಜಿಹಾದ್ ಜಾಲ ರಾಯಚೂರು ಹಾಗೂ ಬೀದರ್‍ನಲ್ಲಿ ಕೆಲಸ ಮಾಡುತ್ತಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿ ಮೂಡಿವೆ.

     

  • ಬೀದರ್: ನಾಲ್ವರು ಸರಗಳ್ಳರ ಬಂಧನ, ಚಿನ್ನಾಭರಣ ವಶ

    ಬೀದರ್: ನಾಲ್ವರು ಸರಗಳ್ಳರ ಬಂಧನ, ಚಿನ್ನಾಭರಣ ವಶ

    ಬೀದರ್: ಬಹುದಿನಗಳಿಂದ ಪೊಲೀಸರಿಗೆ ಬೇಕಾಗಿದ್ದ ನಾಲ್ವರು ಸರಗಳ್ಳರನ್ನು ಬೀದರ್ ನಗರದ ಗಾಂಧಿಗಂಜ್ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಮೈಕಲ್ ಕೊಡ್ಲಿಕರ್, ಉಮೇಶ್ ಭಾವಿದೊಡ್ಡಿ, ವಿನಯ್‍ಕುಮಾರ್ ಭಾವಿಕಟ್ಟಿ ಮತ್ತು ನಿಶಾಂತ್ ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ ಎರಡು ಪಲ್ಸರ್ ಬೈಕ್ ಹಾಗು 5.50 ಲಕ್ಷ ರೂ. ಬೆಲೆಬಾಳುವ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬಂಧಿತರ ಮೇಲೆ ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ ನಡೆದ ಕಾರ್ಯಚಾರಣೆ ಮಾಡಲಾಗಿತ್ತು.

     

  • ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರ ಬಂಧನ

    ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರ ಬಂಧನ

    ಬೀದರ್: ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರನ್ನು ಬೀದರ್ ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ.

    ಕಮಲಾಬಾಯಿ (33), ಅಂಬಾಬಾಯಿ (35), ರಮಾಬಾಯಿ (36) ಹಾಗೂ ರೇಖಾಬಾಯಿ (31) ಬಂಧಿತ ಮಹಿಳೆಯರು. ಈ ನಾಲ್ವರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಿಂದ ಮಹಾರಾಷ್ಟ್ರ ರಾಜ್ಯದ ಲಾಥೂರ್ ನಗರಕ್ಕೆ ಗಾಂಜಾ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಬಂಧಿತರಿಂದ 22 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರು ಬಸ್‍ನಲ್ಲಿ ಗಾಂಜಾ ಸಾಗಿಸುವ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಸದ್ಯ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬೀದರ್: ರಾಜ್ಯ ಮಟ್ಟದ ಜನಪರ ಉತ್ಸವಕ್ಕೆ ಅದ್ಧೂರಿ ಚಾಲನೆ

    ಬೀದರ್: ರಾಜ್ಯ ಮಟ್ಟದ ಜನಪರ ಉತ್ಸವಕ್ಕೆ ಅದ್ಧೂರಿ ಚಾಲನೆ

    ಬೀದರ್: ನಗರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಜನಪರ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಇಂದು ಅಧಿಕೃತವಾಗಿ ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿದರು.

    ಎರಡು ದಿನಗಳ ಕಾಲ ಈ ಉತ್ಸವ ನಡೆಯಲಿದ್ದು ಪ್ರತಿ ಜಿಲ್ಲೆಗಳಿಂದ ಹಾಗೂ ಸ್ಥಳೀಯ ಕಲಾವಿದ್ರು ಬಂದು ತಮ್ಮ ಕಲೆಯನ್ನು ಅನಾವರಣ ಮಾಡಲಿದ್ದಾರೆ. ನಗರದ ಅಂಬೇಡ್ಕರ್ ವೃತದಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು ವಿವಿಧ ಕಲಾತಂಡಗಳ ಬೃಹತ್ ಮೆರವಣೆಗೆ ಮೂಲಕ ನೆಹರು ಕ್ರಿಡಾಂಗಣಕ್ಕೆ ಬಂದು ತಲುಪಿದೆ.

    ಶ್ರೀ ವಿಜಯಕುಮಾರ್ ಸೋನಾರೆ ಅವರ ನೇತೃತ್ವದಲ್ಲಿ ಫೆ.20 ರಿಂದ ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಜ್ಯೋತಿಯಾತ್ರೆ ಮಾಡಿದ್ದು, ಇಂದು ವೇದಿಕೆಗೆ ಜ್ಯೋತಿ ಬಂದು ತಲುಪಿದೆ. ಮೊದಲ ಬಾರಿಗೆ ಗಡಿ ಜಿಲ್ಲೆ ಬೀದರ್‍ನಲ್ಲಿ ಈ ಉತ್ಸವ ನಡೆಯುತ್ತಿದ್ದು ಕವಿಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕಗಳು ಸೇರಿದಂತೆ ಹಲವು ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿವೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯಿಂದ ಉದ್ಘಾಟನಾ ಕಾರ್ಯಕ್ರಮ ನೆರವೇರಿದೆ. ವಿವಿಧ ಪಕ್ಷಗಳ ರಾಜಕೀಯ ನಾಯಕರು ಮತ್ತು ಕಲಾವಿದ್ರು ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.