ಬೀದರ್: ರೇಡಿಯಂ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ, ಲಕ್ಷಾಂತರ ರೂ. ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಟೂರಿಸ್ಟ ಲಾಡ್ಜ್ ಬಳಿ ಬುಧವಾರ ರಾತ್ರಿ ನಡೆದಿದೆ.
ಮಸ್ತಾನ್ ಆರ್ಟ್ಸ್ ಎನ್ನುವ ಅಂಗಡಿಗೆ ಬೆಂಕಿ ತಗುಲಿದ್ದು, ಅಂಗಡಿಯಲ್ಲಿದ್ದ ಕಂಪ್ಯೂಟರ್ ಹಾಗೂ ಇತರೆ ಯಂತ್ರಗಳು ಸೇರಿದಂತೆ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅವಘಡದಿಂದ ಸುಮಾರು 4 ಲಕ್ಷ ರೂಪಾಯಿಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೀದರ್: ಕೆಸ್‍ಆರ್ ಟಿಸಿ ಬಸ್ ಹರಿದು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ವೃದ್ಧನ ಸಹಾಯಕ್ಕೆ ಬಾರದೇ ಮಾನವೀಯತೆ ಮರೆತ ಆಘಾತಕಾರಿ ಘಟನೆಯೊಂದು ಬೀದರ್ ನ ಕೆಇಬಿ ರಸ್ತೆಯಲ್ಲಿ ನಡೆದಿದೆ.
ನರಸಪ್ಪ ಎಂಬ ವೃದ್ಧ ನಿನ್ನೆ ರಾತ್ರಿ ರಸ್ತೆ ದಾಟುವಾಗ ಕೆಎಸ್‍ಆರ್‍ಟಿಸಿ ಬಸ್ಸೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಾಯಗೊಂಡ ವೃದ್ಧ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಅವರ ಸಹಾಯಕ್ಕಾಗಿ ಅಗಲಾಚುತ್ತಿದ್ದರು. ಆದ್ರೆ ಯಾರೊಬ್ಬರು ಅವರಿಗೆ ಸಹಾಯ ಮಾಡಲಿಲ್ಲ. ಬದಲಾಗಿ ನರೆರೆದವರೆಲ್ಲರೂ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುವುದರಲ್ಲೇ ಬ್ಯುಸಿಯಾಗಿದ್ದರು. ಬಳಿಕ 20 ನಿಮಿಷಗಳ ನಂತರ ಆಂಬುಲೆನ್ಸ್ ಗೆ ಕೆಲವರು ಫೋನ್ ಮಾಡಿದ್ರು.
ಒಟ್ಟಿನಲ್ಲಿ ಅಪಘಾತವಾದಾಗ ಗಾಯಗೊಂಡವರಿಗೆ ಸಹಾಯ ಮಾಡುವುದನ್ನು ಮರೆತು ಮೊಬೈಲ್ ನಲ್ಲಿ ಚಿತ್ರೀಕರಿಸುವ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುವುದು ವಿಪರ್ಯಾಸವೇ ಸರಿ.
ಬೀದರ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯ ಪ್ರವಾಸ ಇಂದು ಅಂತ್ಯವಾಗಲಿದೆ. ಇಂದು ರಾಹುಲ್ ಗಾಂಧಿ ಕಲಬುರ್ಗಿಯಲ್ಲಿ ದಿವಂಗತರಾದ ಇಬ್ಬರು ಕಾಂಗ್ರೆಸ್ ನಾಯಕರುಗಳ ಮನೆಗಳಿಗೆ ಭೇಟಿ ಕೊಡಲಿದ್ದಾರೆ. ಇದನ್ನೂ ಓದಿ: ರಾಹುಲ್ ಪ್ರಧಾನಿ ಆಗೋವರೆಗೆ ಚಪ್ಪಲಿಯೇ ಹಾಕಲ್ಲ – ಅಭಿಮಾನಿಯಿಂದ ಶಪಥ
ಮಾಜಿ ಸಿಎಂ ಎನ್ ಧರ್ಮಸಿಂಗ್ ಹಾಗೂ ಮಾಜಿ ಸಚಿವ ಖಮರುಲ್ ಇಸ್ಲಾಮ್ ರವರ ಮನೆಗಳಿಗೆ ಇಂದು ಬೆಳಗ್ಗೆ ಭೇಟಿ ಕೊಡಲಿರುವ ರಾಹುಲ್ ಗಾಂಧಿ ಉಭಯ ನಾಯಕರ ಕುಟುಂಬ ಸದಸ್ಯರುಗಳಿಗೆ ಸಾಂತ್ವಾನ ಹೇಳಲಿದ್ದಾರೆ. ಬಳಿಕ ಕಲಬುರ್ಗಿಯ ವಾಣಿಜ್ಯೋದ್ಯಮಿಗಳ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಆ ಬಳಿಕ ಮಧ್ಯಾಹ್ನಕ್ಕೆ ರಾಹುಲ್ ಹೆಲಿಕಾಪ್ಟರ್ ಮೂಲಕ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ತೆರಳಲಿದ್ದಾರೆ. ಇದನ್ನೂ ಓದಿ: ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಒಂದು ಮಾತು ಎತ್ತಲಿಲ್ಲ- ರಾಹುಲ್ ವಿರುದ್ಧ ಶೆಟ್ಟರ್ ವಾಗ್ದಾಳಿ
ಬಸವಕಲ್ಯಾಣದಲ್ಲಿ ರಾಹುಲ್ ಗಾಂಧಿ ಅನುಭವ ಮಂಟಪಕ್ಕೆ ಭೇಟಿ ಕೊಡಲಿದ್ದಾರೆ. ಇಡೀ ದಿನ ಕಾಂಗ್ರೆಸ್ ನ ರಾಜ್ಯ ನಾಯಕರುಗಳು ರಾಹುಲ್ ಗಾಂಧಿಗೆ ಸಾಥ್ ನೀಡಲಿದ್ದಾರೆ. ಮದ್ಯಾಹ್ನ 1 ಗಂಟೆ ನಂತರ ರಾಹುಲ್ ಗಾಂಧಿ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸ್ಸಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಪ್ರವಾಸ
ಬೀದರ್: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕತ್ತು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಕರೆನೀಡಿದ್ದ ಬೀದರ್ ಬಂದ್ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಇಂದು ಎಬಿವಿಪಿ, ಎಸ್‍ಎಫ್‍ಐ ಸೇರಿದಂತೆ ವಿವಿಧ ಸಂಘಟನೆಗಳು ಬೀದರ್ ಬಂದ್ ಗೆ ಕರೆ ನೀಡಿದ್ದವು. ಈ ವೇಳೆ ಅತ್ಯಾಚಾರ ಕೃತ್ಯ ಖಂಡಿಸಿ 2 ಸಾವಿರಕ್ಕೂ ಹೆಚ್ಚಿನ ಜನರು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿದ್ದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ನಗರದ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನಾಕಾರರು ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸರ್ಕಲ್ ನ ಒಂದು ಭಾಗದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದ್ದು ಮತ್ತೊಂದು ಭಾಗದಲ್ಲಿ ಸಂಚಾರ ಸುಗಮ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದರು.
ಲಾಠಿ ಚಾರ್ಜ್ ನಂತರ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ ಭಗವಂತ ಖೂಬಾ ಅವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ರೇಪ್ ಪ್ರಕರಣ?
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಇದೇ ತಿಂಗಳ 27 ರಂದು ಭಾಲ್ಕಿ ತಾಲೂಕಿ ಕೋಸಮ್ ಗ್ರಾಮದ ಪೂಜಾ (20) ವಿದ್ಯಾರ್ಥಿನಿ ಕೊಲೆಯಾಗಿತ್ತು. ವಿದ್ಯಾರ್ಥಿನಿ ಪೂಜಾ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಬಿಎ ಎರಡನೇಯ ವರ್ಷದಲ್ಲಿ ಓದುತ್ತಿದ್ದಳು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿ ಶಂಶುದ್ದೀನ್ (24) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕೊಲೆಯಾದ ವಿದ್ಯಾರ್ಥಿನಿ ಪೂಜಾಳನ್ನು ಆರೋಪಿ ಕಳೆದ ಎರಡು ವರ್ಷದಿಂದ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಆರೋಪಿಯ ಪ್ರೀತಿಯನ್ನು ನಿರಾಕರಿಸಿದಾಗ ಒತ್ತಾಯ ಪೂರ್ವಕವಾಗಿ ಪೂಜಾಳನ್ನು ಅರಣ್ಯ ಪ್ರದಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದ.
ವಿವಿದ ಸಂಘಟನೆಗಳ ಹೋರಾಟಗಾರರು ಬಂದ್ ನಡೆಸಿದ್ದರು ನಗರದಲ್ಲಿ ಶಾಲಾ – ಕಾಲೇಜುಗಳಿಗೆ ರಜೆ ನೀಡಿರಲಿಲ್ಲ. ಅಲ್ಲದೇ ಸಾರಿಗೆ ಬಸ್ ಸಂಚಾರ ಎಂದಿನಂತೆ ನಡೆಯಲು ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೀದರ್: ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕತ್ತು ಕುಯ್ದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಭಾಲ್ಕಿ ತಾಲೂಕಿ ಕೋಸಮ್ ಗ್ರಾಮದ ಪೂಜಾ(20) ಕೊಲೆಯಾಗಿದ್ದು, ಈಕೆ ಅಕ್ಕಮಹಾದೇವಿ ಕಾಲೇಜಿನಲ್ಲಿ ಬಿಎ ಎರಡನೇಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸದ್ಯ ಹತ್ಯೆ ಆರೋಪಿ 24 ವರ್ಷದ ಸಂಶುದ್ದೀನ್‍ನ್ನು ಪೊಲೀಸರು ಬಂಧಿಸಿದ್ದಾರೆ.
ಪೂಜಾಳನ್ನು ಸಂಶುದ್ದೀನ್ ಎರಡು ವರ್ಷದಿಂದ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನಂತೆ. ಪ್ರೀತಿ ನಿರಾಕರಿಸಿದ್ದಕ್ಕೆ ಒತ್ತಾಯಪೂರ್ವಕವಾಗಿ ಕರೆದೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ದನ್ನೂರಾ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಇದೀಗ ಮುಗಿಲುಮುಟ್ಟಿದೆ.
ಬೀದರ್: ತಾಲೂಕಿನ ನೌಬಾದ್‍ನಲ್ಲಿ ದುಷ್ಕರ್ಮಿಗಳು ಹಳೆಯ ದ್ವೇಷಕ್ಕೆ ಬೆಳೆಗೆ ಬೆಂಕಿಹಚ್ಚಿ ಅಟ್ಟಹಾಸ ಮೆರೆದ್ದಾರೆ. ಲಕ್ಷ ಲಕ್ಷ ಬೆಲೆ ಬಾಳುವ ತೊಗರಿ ಹಾಗೂ ಕಾರಳು ಕಟಾವು ಮಾಡಿಟ್ಟಿದ್ದ ರಾಶಿಗೆ ಕೀಡಿಗೇಡಿಗಳು ಬೆಂಕಿ ಹಂಚಿದ್ದಾರೆ.
ಈ ಕೃತ್ಯಕ್ಕೆ ಸಂಬಂಧಿಕರಲ್ಲಿ ಇದ್ದ ಹಳೆಯ ದ್ವೇಷವೇ ಕಾರಣ ಎಂದು ರೈತ ಬಂಡೆಪ್ಪಾ ಆರೋಪಿಸಿದ್ದಾರೆ. ಈಗ ಬಂಡೆಪ್ಪಾ ಬೆಳೆ ಕಳೆದುಕೊಂಡು ಇಗಾ ಪೊಲೀಸ್ ಠಾಣೆ ಸುತ್ತಿ ಸುತ್ತಿ ಬೇಸತ್ತಿದ್ದಾರೆ.
ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಈ ಕುರಿತು ಮನವಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಕೊಲೆ ಮಾಡಲು ಕೀಡಿಗೇಡಿಗಳು ಸಂಚು ರೂಪಿಸಿ ಯತ್ನ ಮಾಡಿ ವಿಫಲರಾಗಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ರೈತ ಬಂಡೆಪ್ಪಾ ಅಂಗಲಾಚುತ್ತಿದ್ದಾರೆ.
ಬೀದರ್: ಎಲ್ಲಾದ್ರೂ ಒಂದು ರೂಪಾಯಿಗೆ ಒಂದು ಸೀರೆ ಸಿಗಲು ಸಾಧ್ಯವೆ…? ಇಲ್ಲ ಅನ್ನೋದಾದ್ರೆ ಇಲ್ಲಿ ಕೇಳಿ. ನೀವು ಗಡಿ ಜಿಲ್ಲೆ ಬೀದರ್‍ಗೆ ಬಂದ್ರೆ ಖಂಡಿತವಾಗಿ ಒಂದು ರೂಪಾಯಿಗೆ ಒಂದು ಸೀರೆಯನ್ನ ಪಡೆಯಬಹುದು. ಅದರಲ್ಲೂ ಒಂದು ವೇಳೆ ವೋಟರ್ ಐಡಿ ತೋರಿಸಿದ್ರೆ ಸೀರೆ ಉಚಿತ.
2018ಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗಲಿ ಎಂದು ಅವರ ಅಭಿಮಾನಿಯೊಬ್ಬರು ಒಂದು ರೂಪಾಯಿಗೆ ಒಂದು ಸೀರೆ ನೀಡುತ್ತಿದ್ದಾರೆ. ಬೀದರ್‍ನ ಸೃಷ್ಠಿ-ದೃಷ್ಠಿ ಸ್ಯಾರಿ ಸೆಂಟರ್‍ನ ಮಾಲೀಕರಾದ ಚಂದ್ರಶೇಖರ್ ಪಸರ್ಗೆ, ಒಂದು ರೂಪಾಯಿಗೆ ಒಂದು ಸೀರೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.
15 ದಿನಗಳ ಕಾಲ ಬಂಪರ್ ಆಫರ್ ನೀಡುತ್ತಿದ್ದು, ಮಹಿಳಾ ಮಣಿಯರು ಕ್ಯೂನಲ್ಲಿ ನಿಂತು ಸೀರೆ ಖರೀದಿಸುತ್ತಿದ್ದಾರೆ. ಕುಮಾರಸ್ವಾಮಿಗಾಗಿ 5 ಲಕ್ಷ ಸೀರೆ ಹಂಚು ಎಂದು ಚಂದ್ರಶೇಖರ್ ಅವರಿಗೆ ತಿರುಪತಿ ವೆಂಕಟೇಶ್ವರ ಕನಸಿನಲ್ಲಿ ಬಂದು ಹೇಳಿದ್ದಾನಂತೆ. ಅಲ್ಲದೆ ಮತ್ತೊಮ್ಮೆ ಎಚ್‍ಡಿಕೆ ಸಿಎಂ ಆಗಲಿ ಎಂದು ತಿರುಪತಿಗೆ ಹರಕೆ ಹೊತ್ತುಕೊಂಡಿದ್ದಾರೆ.
ಬೀದರ್: ಮರ ಕಡಿಯುವಾಗ ಮಿಷನ್ ಕೈಕೊಟ್ಟಿದ್ದರಿಂದ ಸುಮಾರು 1 ಗಂಟೆಗಳ ಕಾಲ ಗರ್ಭಿಣಿ ಆಂಬುಲೆನ್ಸ್ ನಲ್ಲೇ ನರಳಾಟ ಅನುಭವಿಸಿರುವ ಘಟನೆ ಬೀದರ್ ತಾಲೂಕಿನ ಕೌಠೌ ಗ್ರಾಮದ ಬಳಿ ನಡೆದಿದೆ.
ಕೌಠೌ ಗ್ರಾಮದ ಬಳಿ ಇರುವ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಂದು ಗಂಟೆಗಳ ಕಾಲ ಆಂಬುಲೇನ್ಸ್ ನಲ್ಲಿ ಗರ್ಭಿಣಿಯ ನರಳಾಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಕಡಿಯುವ ಮುನ್ನ ಮುನ್ನೆಚ್ಚರಿಕೆಯಾಗಿ ಜೆಸಿಬಿ ತರದೆ ಮರ ಕಡಿಯಲು ಹೋಗಿದ್ದಾರೆ. ಆದರೆ ಮರ ಕಡಿಯುತ್ತಿದ್ದಂತೆ ಮಿಷನ್ ಕೈಕೊಟ್ಟಿದೆ. ಇದರಿಂದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೇ ಮಾರ್ಗವಾಗಿ ಗರ್ಭಿಣಿಯೊಬ್ಬರು ಆಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಬೀದರ್ ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದರು. ಆದರೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಧ ಕಿಲೋಮೀಟರ್ ದೂರದ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ಗರ್ಭಿಣಿ ನರಳಾಟ ಅನುಭವಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಗರ್ಭಿಣಿಯ ನರಳಾಟ ನೋಡಿ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಕೈ ಜೋಡಿಸಿ ರಸ್ತೆಯಲ್ಲಿದ್ದ ಮರವನ್ನು ಪಕಕ್ಕೆ ಸರಿಸಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾನವೀಯತೆ ಮರೆದಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಜೆಸಿಬಿ ತರಿಸಿ ರಸ್ತೆ ಕ್ಲೀನ್ ಮಾಡಿದ್ದಾರೆ.
ಬೀದರ್: ಕೌಟುಂಬಿಕ ಸಮಸ್ಯೆ ಹಿನ್ನಲೆಯಿಂದಾಗಿ ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆಯೊಂದು ಬೀದರ್ ನಲ್ಲಿ ನಡೆದಿದೆ.
ಈ ಘಟನೆ ಬೀದರ್ ನ ಮಂಗಲ್‍ಪೇಟೆ ಬಳಿ ನಡೆದಿದ್ದು, ಮೃತರನ್ನು ವಿನೋದ್(40), ಮಕ್ಕಳಾದ ಏಡಿಷನ್(10) ಮತ್ತು ಜೆನ್ನಿಫರ್(7) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಆಂತರಿಕ ಭದ್ರತಾ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿನೋದ್ ಕುಟುಂಬ ಕ್ರಿಸ್ ಮಸ್ ಹಬ್ಬಕ್ಕೆಂದು ಬೀದರ್ ಗೆ ಬಂದಿದ್ದರು. ಕೌಟುಂಬಿಕ ಸಮಸ್ಯೆಯಿಂದ ವಿನೋದ್ ವಿಷ ಸೇವಿಸಿ ಮಕ್ಕಳಿಗೂ ನೀಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಗಂಡ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಪತ್ನಿ ಶಾಂಪಿಂಗ್ ಹೋಗಿದ್ದರು ಎಂದು ಹೇಳಲಾಗುತ್ತಿದ್ದು, ಆತ್ಮಹತ್ಯೆಯ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ. ಸಾಲಬಾಧೆಯಿಂದ ಆತ್ಯಹತ್ಯೆಗೆ ಶರಣರಾಗಿದ್ದಾರೆ ಎಂದು ಪತ್ನಿಯ ತಂದೆ ಆರೋಪ ಮಾಡುತ್ತಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್: ಕೂಲಿ ಮಾಡಿ ನಾಲ್ಕು ಕಾಸು ಸಂಪಾದಿಸಿ ಸ್ವಾಭಿಮಾನದಿಂದ ಬದುಕಬೇಕು ಎಂದು ಕನಸು ಕಾಣುತ್ತಾ ಬೀದರ್‍ನಿಂದ ಮುಂಬೈಗೆ ಹೋಗಿದ್ದ ವಿಕಲಚೇತನ ಬಾಬು ಜೀವನ ಈಗ ಸೂತ್ರ ಹರಿದ ಗಾಳಿಪಟವಾಗಿದೆ.
ಕೆಲವು ತಿಂಗಳ ಹಿಂದೆ ಕೂಲಿ ಕೆಲಸ ಮಾಡುವಾಗ ಬಿಲ್ಡಿಂಗ್ ಮೇಲಿಂದ ಬಿದ್ದು ಕಬ್ಬಿಣದ ರಾಡ್ ಕಾಲು ಹಾಗೂ ಹೊಟ್ಟೆ ಸೇರಿದ್ರಿಂದ ಕಾಲಿನ ಸ್ವಾಧೀನ ಕಳೆದುಕೊಂಡು ತುತ್ತಿನ ಚೀಲ ತುಂಬಿಸಲು ನರಕಯಾತನೆ ಅನುಭವಿಸುತ್ತಿದ್ದಾರೆ. ಬಿಲ್ಡಿಂಗ್ ಮಾಲೀಕರಾಗಲಿ, ಕಾರ್ಮಿಕ ಇಲಾಖೆಯಾಗಲಿ ಬಾಬು ಅವರ ಸಹಾಯಕ್ಕೆ ಬಾರದೇ ಇರುವ ಕಾರಣ ಮತ್ತಷ್ಟು ನೋವು ಅನುಭವಿಸುತ್ತಿದ್ದಾರೆ.
ಕಿತ್ತು ತಿನ್ನುವ ಬಡತನ ಬಾಬು ಅವರನ್ನು ಭಿಕ್ಷೆಗೆ ದೂಡಿದೆ. ಪ್ರತಿ ದಿನ ಬೀದರ್ ರೈಲ್ವೆ ನಿಲ್ದಾಣಕ್ಕೆ ಬಂದು ಭಿಕ್ಷೆ ಬೇಡಿ 100 ರಿಂದ 200 ಸಂಪಾದನೆ ಮಾಡುತ್ತಾರೆ. ಆದ್ರೆ ಪೊಲೀಸರು ಭಿಕ್ಷಾಟನೆಗೆ ಬ್ರೇಕ್ ಹಾಕ್ತಿರೋದ್ರಿಂದ ಯಾರಾದ್ರೂ ದಾನಿಗಳು ಒಂದು ಟೀ ಅಂಗಡಿ ಹಾಕಿಕೊಟ್ರೆ ಜೀವನ ಸಾಗಿಸುತ್ತೆನೆ ಎಂದು ಬಾಬು ಮನವಿ ಮಾಡಿಕೊಳ್ಳುತ್ತಾರೆ.
ಪತ್ನಿ, ತಾಯಿ ಹಾಗೂ ಮೂರು ಮಕ್ಕಳ ಹೊಟ್ಟೆಪಾಡಿಗಾಗಿ ಏನಾದರೂ ಕೆಲಸ ಮಾಡ್ತೀನಿ ಎನ್ನುವ ಇವರ ಆತ್ಮವಿಶ್ವಾಸ ಇಲ್ಲಿಯವರೆಗೂ ಕರೆತಂದಿದೆ. ಇನ್ನು ಪತ್ನಿ ಜಗದೇವಿ ಪ್ರತಿದಿನ ಕೂಲಿಗೆ ಹೋಗಿ ಸಂಸಾರ ಸಾಗಿಸಲು ಪತಿಗೆ ಸಾಥ್ ನೀಡುತ್ತಿದ್ದಾರೆ. ಈ ಕ್ಷೇತ್ರದ ಸನ್ಮಾನ್ಯ ಶಾಸಕ ಅಶೋಕ್ ಖೇಣಿ ಅವರು ಕ್ಷೇತ್ರವನ್ನು ಸಿಂಗಾಪೂರ ಮಾಡುವುದಾಗಿ ಹೇಳಿ ಹೋಗಿದ್ದು ಬಿಟ್ರೆ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಕಲರ್ ಕಲರ್ ಕನಸು ಕಂಡು ದೂರದ ಮುಂಬೈಗೆ ಹೋಗಿ ಕಾಲು ಕಳೆದುಕೊಂಡು ಈಗ ಜೀವನಕ್ಕಾಗಿ ಭಿಕ್ಷೆ ಬೇಡುತ್ತಿರುವ ಈ ವಿಕಲಚೇತನನ ಬಾಬು ಅವರಿಗೆ ಯಾರಾದ್ರೂ ದಾನಿಗಳು ಸಹಾಯ ಮಾಡಿ ಮಾನವೀಯತೆ ತೋರಿಸಬೇಕಿದೆ.