Tag: Bhuvneshwar Kumar

  • 10.75 ಕೋಟಿ ಬಿಡ್‌ – ಅಭಿಮಾನಿಗಳ ಮನವಿಗೆ ಭುವಿ ಖರೀದಿ ಎಂದ ಆರ್‌ಸಿಬಿ

    10.75 ಕೋಟಿ ಬಿಡ್‌ – ಅಭಿಮಾನಿಗಳ ಮನವಿಗೆ ಭುವಿ ಖರೀದಿ ಎಂದ ಆರ್‌ಸಿಬಿ

    ಜೆಡ್ಡಾ: ಭುವನೇಶ್ವರ್‌ ಕುಮಾರ್‌ (Bhuvneshwar Kumar) ಮರಳಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡವನ್ನು ಸೇರಿದ್ದಾರೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್‌ ಹರಾಜು (IPL Mega Auction) ಪ್ರಕ್ರಿಯೆಯಲ್ಲಿ ವೇಗಿ ಭುವನೇಶ್ವರ್‌ ಕುಮಾರ್‌ ಅವರನ್ನು ಆರ್‌ಸಿಬಿ 10.75 ಕೋಟಿ ರೂ. ನೀಡಿ ಖರೀದಿಸಿದೆ.

    ಭುವನೇಶ್ವರ್‌ ಕುಮಾರ್‌ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್‌ ಮತ್ತು ಲಕ್ನೋ ಪೈಪೋಟಿ ನಡೆಸಿತ್ತು. ಆದರೆ ಬಿಡ್‌ ಮೌಲ್ಯ 10 ಕೋಟಿ ರೂ. ದಾಟುತ್ತಿದ್ದಂತೆ ಎರಡು ತಂಡಗಳು ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದರು.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಆರ್‌ಸಿಬಿ , ಅಭಿಮಾನಿಗಳು ಮನವಿ ಮಾಡಿದ್ದಕ್ಕೆ ಭುವನೇಶ್ವರ್‌ ಕುಮಾರ್‌ ಅವರನ್ನು ಖರೀದಿಸಿದ್ದೇವೆ ಎಂದು ತಿಳಿಸಿದೆ.

    ಹಾಗೆ ನೋಡಿದರೆ ಭುವನೇಶ್ವರ್‌ ಕುಮಾರ್‌ ಐಪಿಎಲ್‌ ಪ್ರಯಾಣ ಆರಂಭಿಸಿದ್ದೇ ಆರ್‌ಸಿಬಿಯಿಂದ. 2009 ರಲ್ಲಿ ಆರ್‌ಸಿಬಿ ಸೇರಿದ್ದ ಭುವನೇಶ್ವರ್‌ ಕುಮಾರ್‌ ಎರಡು ಆವೃತ್ತಿಗಳ ಕಾಲ ತಂಡದಲ್ಲಿದ್ದರು. ನಂತರ 2011 ರಲ್ಲಿ ಪುಣೆ ವಾರಿಯರ್ಸ್‌ ತಂಡವನ್ನು ಸೇರಿದ್ದರು. ಇದನ್ನೂ ಓದಿ: ಆರ್‌ಸಿಬಿಗೆ ಫಿಲ್‌ ಸಾಲ್ಟ್‌, ಜಿತೇಶ್‌ ಶರ್ಮಾ, ಹ್ಯಾಜಲ್‌ವುಡ್‌

    ಪುಣೆ ವಾರಿಯರ್ಸ್‌ ತಂಡವನ್ನು ವಿಸರ್ಜಿಸಿದ ಬಳಿಕ 2014ರ ಐಪಿಎಲ್‌ ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡ 4.5 ಕೋಟಿ ರೂ. ನೀಡಿ ಭುವಿಯನ್ನು ಖರೀದಿಸಿತ್ತು. 2016ರಲ್ಲಿ ಎಸ್‌ಆರ್‌ಹೆಚ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಈ ವೇಳೆ ಭುವಿ 23 ವಿಕೆಟ್‌ ಪಡೆಯುವ ಮೂಲಕ ಪರ್ಪಲ್‌ ಕ್ಯಾಪ್‌ ಪಡೆದಿದ್ದರು. 2018 ರಲ್ಲಿ ಭುವನೇಶ್ವರ್‌ ಕುಮಾರ್‌ ಅವರನ್ನು ಉಪನಾಯಕನಾಗಿ ನೇಮಿಸಲಾಯಿತು. ಇದನ್ನೂ ಓದಿ: IPL 2025 Auction: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಪಂತ್‌ ಸೇಲ್‌ – 27 ಕೋಟಿಗೆ ಲಕ್ನೋ ಪಾಲು

    2022ರ ಹರಾಜಿನಲ್ಲಿ ಹೈದರಾಬಾದ್‌ 4.2 ಕೋಟಿ ರೂ. ನೀಡಿ ಭುವಿಯನ್ನು ಖರೀದಿಸಿದ್ದ ಹೈದರಾಬಾದ್‌ ಈ ವರ್ಷ ತಂಡದಿಂದ ಬಿಡುಗಡೆ ಮಾಡಿತ್ತು.

  • 16 ಬೌಂಡರಿ, 14 ಸಿಕ್ಸರ್‌; ನೋ ಲಾಸ್‌ನಲ್ಲಿ ಸನ್‌ ರೈಸರ್ಸ್‌ ಪಾಸ್‌ – ಹೈದರಾಬಾದ್‌ಗೆ 10 ವಿಕೆಟ್‌ಗಳ ಅದ್ಧೂರಿ ಜಯ!

    16 ಬೌಂಡರಿ, 14 ಸಿಕ್ಸರ್‌; ನೋ ಲಾಸ್‌ನಲ್ಲಿ ಸನ್‌ ರೈಸರ್ಸ್‌ ಪಾಸ್‌ – ಹೈದರಾಬಾದ್‌ಗೆ 10 ವಿಕೆಟ್‌ಗಳ ಅದ್ಧೂರಿ ಜಯ!

    – ಹೆಡ್‌, ಅಭಿಷೇಕ್‌ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌
    – ಲಕ್ನೋ ಸೂಪರ್‌ ಜೈಂಟ್ಸ್‌ಗೆ ಪ್ಲೇ ಆಫ್‌ ಹಾದಿ ಕಠಿಣ

    ಹೈದರಾಬಾದ್‌: ಮತ್ತೊಮ್ಮೆ ಅಭಿಷೇಕ್‌ ಶರ್ಮಾ, ಟ್ರಾವಿಸ್‌ ಹೆಡ್‌ (Travis Head) ಅವರ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡವು ಲಕ್ನೋ ವಿರುದ್ಧ 10 ವಿಕೆಟ್‌ಗಳ ಅದ್ಧೂರಿ ಜಯ ಸಾಧಿಸಿದೆ. ಈ ಮೂಲಕ ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ. ಆದ್ರೆ ಹೀನಾಯ ಸೋಲಿನೊಂದಿಗೆ ಲಕ್ನೋ ಸೂಪರ್‌ ಜೈಂಟ್ಸ್‌ (LSG) ಪ್ಲೇ ಆಫ್‌ ಹಾದಿಯನ್ನು ಕಠಿಣವಾಗಿಸಿಕೊಂಡಿದೆ.

    ಕೋಲ್ಕತ್ತಾ ನೈಟ್‌ರೈಡರ್ಸ್‌ (KKR), ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಈಗಾಗಲೇ ತಲಾ 16 ಅಂಕಗಳೊಂದಿಗೆ ಪ್ಲೇ ಆಫ್‌ ಸಮೀಪದಲ್ಲಿವೆ. ಇದೀಗ 12 ರಲ್ಲಿ 7ನೇ ಗೆಲುವಿನೊಂದಿಗೆ 14 ಅಂಕ ಗಳಿಸಿ ಸನ್‌ ರೈಸರ್ಸ್‌ ಸಹ ಪ್ಲೇ ಆಫ್‌ ಪ್ರವೇಶಿಸಲು ಹತ್ತಿರವಾಗಿದೆ. 11 ಪಂದ್ಯಗಳಲ್ಲಿ ತಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಸಿಎಸ್‌ಕೆ, ಡೆಲ್ಲಿ ಕ್ಯಾಪಿಟಲ್ಸ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದು, ಲಕ್ನೋ 6ನೇ ಸ್ಥಾನದಲ್ಲೇ ಉಳಿಯುವಂತಾಗಿದೆ. ಮುಂದಿನ 2 ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದರೆ ಮಾತ್ರವೇ ಲಕ್ನೋಗೆ ಪ್ಲೇ ಆಫ್‌ ತಲುಪುವ ಹಾದಿ ಸಲೀಸಾಗಲಿದೆ. ಇದೇವೇಳೆ ಡೆಲ್ಲಿ, ಸಿಎಸ್‌ಕೆ ತಂಡಗಳೂ ಗೆಲುವು ಕಾಯ್ದುಕೊಂಡರೆ ಲಕ್ನೋ ತಂಡ ಪ್ಲೇ ಆಫ್‌ನಿಂದ ಹೊರಬೀಳಲಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿತ್ತು. 166 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹೈದರಾಬಾದ್‌ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ 9.4 ಓವರ್‌ಗಳಲ್ಲೇ 167 ರನ್‌ ಸಿಡಿಸಿ ಗೆಲುವು ದಾಖಲಿಸಿತು. ಇದನ್ನೂ ಓದಿ: 7 ದಿನಗಳ ಒಳಗಡೆ ವಿಚಾರಣೆಗೆ ಹಾಜರಾಗಿ – ನಡ್ಡಾ, ವಿಜಯೇಂದ್ರಗೆ ಬೆಂಗಳೂರು ಪೊಲೀಸರಿಂದ ಸಮನ್ಸ್‌

    ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ (Abhishek Sharma) ಹಾಗೂ ಟ್ರಾವಿಸ್‌ ಹೆಡ್‌ ಲಕ್ನೋ ತಂಡ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಇದರಿಂದಾಗಿ ಹೈದರಾಬಾದ್‌ ಪವರ್‌ ಪ್ಲೇ ನಲ್ಲೇ ಯಾವುದೇ ವಿಕೆಟ್‌ ನಷ್ಟವಿಲ್ಲದೇ 107 ರನ್‌ ಕಲೆಹಾಕಿತ್ತು. ಬಳಿಕವೂ ವಿಕೆಟ್‌ ಬಿಟ್ಟುಕೊಡದೇ ಬ್ಯಾಟಿಂಗ್‌ ಅಬ್ಬರ ನಿಲ್ಲಿಸದ ಬ್ಯಾಟರ್ಸ್‌ ಕೇವಲ 9.4 ಓವರ್‌ಗಳಲ್ಲೇ 167 ರನ್‌ ಚಚ್ಚಿ ಗೆಲುವಿನ ಮೆಟ್ಟಿಲೇರಿದರು.

    ಸನ್‌ ರೈಸರ್ಸ್‌ ಪರ 296.66 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಟ್ರಾವಿಸ್‌ ಹೆಡ್‌ 30 ಎಸೆತಗಳಲ್ಲಿ ಸ್ಫೋಟಕ 89 ರನ್‌ (8 ಸಿಕ್ಸರ್‌, 8 ಬೌಂಡರಿ) ಚಚ್ಚಿದರೆ, 267.85 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 28 ಎಸೆತಗಳಲ್ಲಿ 75 ರನ್‌ (6 ಸಿಕ್ಸರ್), 8 ಬೌಂಡರಿ) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಚೆನ್ನೈ ಕಂಪನಿಯಲ್ಲಿ 3 ಕೋಟಿ ರೂ. ಕೊಟ್ಟು ಪೆನ್‌ಡ್ರೈವ್‌ ಖರೀದಿಸಿದ್ದಾರೆ: ಜಿ.ಟಿ ದೇವೇಗೌಡ ಗಂಭೀರ ಆರೋಪ

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನಿಧಾನಗತಿಯ ಬ್ಯಾಟಿಂಗ್‌ನೊಂದಿಗೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 11.2 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ ಕೇವಲ 66 ರನ್‌ ಗಳಿಸಿತ್ತು. ಬಳಿಕ ಮುರಿಯದ 5ನೇ ವಿಕೆಟ್‌ಗೆ ಜೊತೆಗೂಡಿದ ನಿಕೋಲಸ್‌ ಪೂರನ್‌ ಹಾಗೂ ಆಯುಷ್‌ ಬದೋನಿ ಜೋಡಿ 52 ಎಸೆತಗಳಲ್ಲೇ 99 ರನ್‌ಗಳ ಜೊತೆಯಾಟ ನೀಡಿತು.

    ಇದರಿಂದ ಲಕ್ನೋ ತಂಡ 160 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿತು. ಜೊನೆಯವರೆಗೂ ಹೋರಾಡಿದ ಆಯುಷ್‌ ಬದೋನಿ 30 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 55 ರನ್‌ ಚಚ್ಚಿದರೆ, ನಿಕೋಲಸ್‌ ಪೂರನ್‌ 26 ಎಸೆತಗಳಲ್ಲಿ 1 ಸಿಕ್ಸರ್‌, 6 ಬೌಂಡರಿಯೊಂದಿಗೆ 48 ರನ್‌ ಬಾರಿಸಿದರು. ಇದರೊಂದಿಗೆ ಕೆ.ಎಲ್‌ ರಾಹುಲ್‌ 29, ಕೃನಾಲ್‌ ಪಾಂಡ್ಯ 24, ಕ್ವಿಂಟನ್‌ ಡಿಕಾಕ್‌ 2 ರನ್‌, ಸ್ಟೋಯ್ನಿಸ್‌ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌ 2 ವಿಕೆಟ್‌ ಕಿತ್ತರೆ, ಪ್ಯಾಟ್‌ ಕಮ್ಮಿನ್ಸ್‌ 1 ವಿಕೆಟ್‌ ಪಡೆದರು.

  • 8 ಓವರ್‌ 100 ರನ್‌ – ದುಬಾರಿಯಾದ ಭುವಿ, ಹರ್ಷಲ್‌: ರೋಹಿತ್‌ ಹೇಳಿದ್ದೇನು?

    8 ಓವರ್‌ 100 ರನ್‌ – ದುಬಾರಿಯಾದ ಭುವಿ, ಹರ್ಷಲ್‌: ರೋಹಿತ್‌ ಹೇಳಿದ್ದೇನು?

    ಮೊಹಾಲಿ: ಬುಮ್ರಾ(Jasprit Bumrah) ಅನುಪಸ್ಥಿತಿ ಟೀಂ ಇಂಡಿಯಾಗೆ(Team India) ಕಾಡುತ್ತಿದ್ದು ಮತ್ತೆ ಬೌಲರ್‌ಗಳು ಕೈಕೊಟ್ಟಿದ್ದಾರೆ. ಕೊನೆಯ ಓವರ್‌ಗಳಲ್ಲಿ ರನ್‌ಗೆ ಕಡಿವಾಣ ಹಾಕದ ಕಾರಣ ಭಾರತ(India) ಮತ್ತೆ ಸೋಲನ್ನು ಅನುಭವಿಸಿದೆ.

    ಕೊನೆಯ 24 ಎಸೆತಗಳಲ್ಲಿ ಆಸ್ಟ್ರೇಲಿಯಾ(Australia) 55 ರನ್‌ ಗಳಿಸಬೇಕಿತ್ತು. 17ನೇ ಓವರ್‌ ಎಸೆದ ಭುವನೇಶ್ವರ್‌ ಕುಮಾರ್‌(Bhuvneshwar Kumar) 15 ರನ್‌ ಕೊಟ್ಟರೆ 18ನೇ ಓವರ್‌ನಲ್ಲಿ ಹರ್ಷಲ್‌ ಪಟೇಲ್‌(Harshal Patel) 22 ರನ್‌ ನೀಡಿದರು. 19ನೇ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ 16 ರನ್‌ ಹೊಡೆಸಿಕೊಂಡಿದ್ದಾರೆ.

    ತಮ್ಮ 4 ಓವರ್‌ಗಳ ಕೋಟಾದಲ್ಲಿ ಭುವನೇಶ್ವರ್‌ ಕುಮಾರ್‌ 52 ರನ್‌, ಹರ್ಷಲ್‌ ಪಟೇಲ್‌ 49 ರನ್‌ ನೀಡಿದ್ದಾರೆ. ಇವರಿಬ್ಬರೇ 101 ರನ್‌ ನೀಡಿದ್ದು ಟೀ ಇಂಡಿಯಾಗೆ ಮುಳುವಾಯಿತು. ಭುವನೇಶ್ವರ್‌ ಕುಮಾರ್‌ ಏಷ್ಯಾ ಕಪ್‌ನಲ್ಲೂ 19ನೇ ಓವರ್‌ನಲ್ಲಿ ದುಬಾರಿ ರನ್‌ ನೀಡಿದ್ದರು. ಸೂಪರ್‌ ಸಿಕ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ 19 ರನ್‌ ನೀಡಿದ್ದರೆ ಶ್ರೀಲಂಕಾದ ವಿರುದ್ಧ 17 ರನ್‌ ಹೊಡೆಸಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ 16 ರನ್‌ ಹೊಡೆಸಿಕೊಂಡಿದ್ದಾರೆ. ಇಬ್ಬರು ಒಂದು ವಿಕೆಟ್‌ ಪಡೆಯದೇ ಇಷ್ಟು ರನ್‌ ಚಚ್ಚಿಸಿಕೊಂಡಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

    ಪದೇ ಪದೇ ಭುವನೇಶ್ವರ್‌ ಕುಮಾರ್‌ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಲಾಗುತ್ತಿದೆ. ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅರ್ಶ್‌ದೀಪ್‌ ಅವರನ್ನು ಕೈಬಿಟ್ಟಿದ್ದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಪಾಂಡ್ಯ, ಕೆ.ಎಲ್ ರಾಹುಲ್ ಕ್ಲಾಸಿಕ್ ಬ್ಯಾಟಿಂಗ್ – ಅಕ್ಷರ್ ಆಟ ವ್ಯರ್ಥ, ಆಸೀಸ್‌ಗೆ 4 ವಿಕೆಟ್‌ಗಳ ಜಯ

    ಬೌಲರ್‌ಗಳ ಬಗ್ಗೆ ನಾಯಕ ರೋಹಿತ್‌ ಶರ್ಮಾ(Rohith Sharma) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. 200 ರನ್‌ ಉತ್ತಮ ಮೊತ್ತವಾಗಿದ್ದು ನಾವು ಡಿಫೆಂಡ್‌ ಮಾಡಬಹುದಿತ್ತು. ನಮ್ಮ ಬ್ಯಾಟರ್‌ಗಳ ಪ್ರಯತ್ನ ಉತ್ತಮವಾಗಿತ್ತು. ಕೊನೆಯ 4 ಓವರ್‌ಗಳಲ್ಲಿ 60 ರನ್‌ ಬಂತು. ಅವರ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

    ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿದರೆ ಆಸ್ಟ್ರೇಲಿಯಾ 19.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 211 ರನ್‌ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು. 30 ಎಸೆತಗಳಲ್ಲಿ61 ರನ್‌(8 ಬೌಂಡರಿ, 4 ಸಿಕ್ಸರ್‌) ಚಚ್ಚಿದ ಕ್ಯಾಮರೂನ್‌ ಗ್ರೀನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    Live Tv
    [brid partner=56869869 player=32851 video=960834 autoplay=true]

  • 10 ವರ್ಷಗಳ ಬಳಿಕ ಟಿ20 ಕ್ರಿಕೆಟ್‍ನಲ್ಲಿ ಭುವನೇಶ್ವರ್ ಕುಮಾರ್ ವಿಶೇಷ ಸಾಧನೆ

    10 ವರ್ಷಗಳ ಬಳಿಕ ಟಿ20 ಕ್ರಿಕೆಟ್‍ನಲ್ಲಿ ಭುವನೇಶ್ವರ್ ಕುಮಾರ್ ವಿಶೇಷ ಸಾಧನೆ

    ಮುಂಬೈ: ಭಾರತ ತಂಡದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್ ಕಿತ್ತು ಮಿಂಚುವ ಮೂಲಕ 10 ವರ್ಷಗಳ ಬಳಿಕ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.

    ಭುವಿ 2012 ರಲ್ಲಿ ಟೀಮ್ ಇಂಡಿಯಾ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಪವರ್ ಪ್ಲೇ ಓವರ್‌ಗಳಲ್ಲಿ 3 ವಿಕೆಟ್ ಕಬಳಿಸಿ ಮಿಂಚು ಹರಿಸಿದ್ದರು. ಇದೀಗ 10 ವರ್ಷಗಳ ಬಳಿಕ ಅಂತಹದ್ದೇ ಸಾಧನೆಯನ್ನು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭುವಿ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪವರ್ ಪ್ಲೇ ಓವರ್‌ಗಳಲ್ಲಿ 3 ವಿಕೆಟ್ ಕಿತ್ತು ಕಾಡಿದರು. ಈ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಎರಡನೇ ಬಾರಿ ಈ ಸಾಧನೆಗೆ ಪಾತ್ರರಾದರು. ಇದನ್ನೂ ಓದಿ: ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

    ಇದಲ್ಲದೆ ಭುವಿ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ ಭಾರತದ ಬೌಲರ್‌ಗಳಾದ ಯಜುವೇಂದ್ರ ಚಹಲ್ 69 ಮತ್ತು ಜಸ್ಪ್ರೀತ್ ಬುಮ್ರಾ 67 ವಿಕೆಟ್ ಪಡೆದು ಮೊದಲ 2 ಸ್ಥಾನದಲ್ಲಿದ್ದರೆ, ಭುವಿ ಮೂರನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ನಟಿಸಿದ್ರಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ?: ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮಾಜಿ ಕ್ರಿಕೆಟ್ ನಾಯಕ

    https://twitter.com/AbdullahNeaz/status/1536010185449230341

    ಭುವನೇಶ್ವರ್ ಕುಮಾರ್ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 4 ಓವರ್ ಎಸೆದು ಕೇವಲ 13 ರನ್ ನೀಡಿ 4 ವಿಕೆಟ್ ಕಿತ್ತು ಶೈನ್ ಆದರು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148ರನ್ ಗಳಿಸಿ, ಎದುರಾಳಿ ದಕ್ಷಿಣ ಆಫ್ರಿಕಾಗೆ 149 ರನ್‍ಗಳ ಸಾಧಾರಣ ಮೊತ್ತದ ಗುರಿ ನೀಡಿತು. ಈ ರನ್‍ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 18.2 ಓವರ್‌ಗಳಲ್ಲಿ 6 ವಿಕೆಟ್‍ಗಳ ನಷ್ಟಕ್ಕೆ 149 ರನ್‍ಗಳಿಸುವ ಮೂಲಕ ಸತತ 2ನೇ ಗೆಲುವು ದಾಖಲಿಸಿತು.

  • ಐಪಿಎಲ್ ಇತಿಹಾಸದಲ್ಲಿ 1,400 ಡಾಟ್ ಬೌಲ್ ಎಸೆದು ದಾಖಲೆ ಬರೆದ ಭುವಿ

    ಐಪಿಎಲ್ ಇತಿಹಾಸದಲ್ಲಿ 1,400 ಡಾಟ್ ಬೌಲ್ ಎಸೆದು ದಾಖಲೆ ಬರೆದ ಭುವಿ

    ಮುಂಬೈ: ಸನ್‍ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದಲ್ಲಿ 1,400 ಡಾಟ್ ಬೌಲ್‍ಗಳನ್ನು ಎಸೆದು ಅತಿ ಹೆಚ್ಚು ಡಾಟ್ ಬಾಲ್ ಎಸೆದ ದಾಖಲೆ ಬರೆದಿದ್ದಾರೆ.

    2022ರ ಆವೃತ್ತಿಯ ಪವರ್ ಪ್ಲೇನಲ್ಲಿ ಆರಂಭಿಕ ಹಂತದಲ್ಲಿ ಅಷ್ಟೇನು ಹೇಳಿಕೊಳ್ಳುವಷ್ಟು ತಮ್ಮ ಕೈಚಳಕ ತೋರಿಸುವುದಿಲ್ಲ. ಆದರೆ ಡೆತ್ ಓವರ್‌ಗಳಲ್ಲಿ ಎದುರಾಳಿ ತಂಡದ ಬ್ಯಾಟ್ಸ್‌ಮ್ಯಾನ್‌ಗಳು ರನ್ ಹೊಡೆಯಲು ತಿಣುಕಾಡುವಂತೆ ಬೌಲಿಂಗ್ ಮಾಡುತ್ತಿದ್ದು, ಈ ಮೂಲಕ ಹೈದರಾಬಾದ್ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ರಿಂಗ್‍ನಲ್ಲಿಯೇ ಹೃದಯಾಘಾತ – ಚಾಂಪಿಯನ್ ಮೂಸಾ ಯಮಕ್ ವಿಧಿವಶ

    ಈ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಭುವನೇಶ್ವರ್ ಕುಮಾರ್ ಮೇಡನ್ ಓವರ್‌ಗೈದು 1 ವಿಕೆಟ್ ಪಡೆದುಕೊಂಡಿದ್ದರು. ಉತ್ತರ ಪ್ರದೇಶದ ಬೌಲರ್ ಆದ ಅವರು ಟೀಂ ಇಂಡಿಯಾದ ಪರ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಸಹ ಆಡಿದ ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಅವರನ್ನು 4.2 ಕೋಟಿ ನೀಡಿ ಎಸ್‍ಆರ್‌ಹೆಚ್ ತಂಡದಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ವಿರೋಚಿತ ಸೋಲು – ಕಣ್ಣೀರಿಟ್ಟ ರಿಂಕು ಸಿಂಗ್

    ಎಸ್‍ಆರ್‌ಹೆಚ್ ತಂಡವು ಈಗಾಗಲೇ ಪ್ಲೇ ಆಫ್‍ನಿಂದ ಬಹುತೇಕ ಹೊರಬಿದ್ದಿದ್ದು. ಲೀಗ್‍ನ ಒಂದೇ ಒಂದು ಪಂದ್ಯ ಬಾಕಿ ಉಳಿದಿದೆ. ಪ್ಲೇ ಆಫ್‍ನ ಓಟದಲ್ಲಿ ಉಳಿಯಬೇಕಾದರೆ ಅವರು ತಮ್ಮ ಮುಂದಿನ ಪಂದ್ಯವನ್ನು ಭಾರೀ ಅಂತರದಿಂದ ಗೆಲ್ಲಬೇಕಾದ ಅನಿವಾರ್ಯವಿದೆ. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮುಂದಿನ ಪಂದ್ಯಗಳನ್ನು ಸೋಲಬೇಕು ಆಗ ಹೈದರಾಬಾದ್‍ಗೆ ಪ್ಲೇ ಆಫ್ ಬಾಗಿಲು ತೆರೆದುಕೊಳ್ಳಲಿದೆ.

  • ಭಾರತದ ಪರ ಐಪಿಎಲ್‌ನಲ್ಲಿ ದಾಖಲೆ ಬರೆದ ಭುವಿ

    ಭಾರತದ ಪರ ಐಪಿಎಲ್‌ನಲ್ಲಿ ದಾಖಲೆ ಬರೆದ ಭುವಿ

    ಮುಂಬೈ: ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಬೌಲರ್‌ ಭುವನೇಶ್ವರ್‌ ಕುಮಾರ್‌ ಐಪಿಎಲ್‌ನಲ್ಲಿ ದಾಖಲೆ ಬರೆದಿದ್ದಾರೆ.

    ಐಪಿಎಲ್‌ನಲ್ಲಿ 150 ವಿಕೆಟ್‌ ಕಿತ್ತ ಭಾರತದ ಮೊದಲ ವೇಗದ ಬೌಲರ್‌ ಎಂಬ ಹೆಗ್ಗಳಿಕೆಗೆ ಭುವನೇಶ್ವರ್‌ ಕುಮಾರ್‌ ಪಾತ್ರವಾಗಿದ್ದಾರೆ. ಇದನ್ನೂ ಓದಿ: 2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

    ವೇಗದ ಬೌಲರ್‌ಗಳ ಪೈಕಿ ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಬ್ರಾವೋ (174), ಶ್ರೀಲಂಕಾದ ಲಸಿತ್‌ ಮಾಲಿಂಗ (170) ವಿಕೆಟ್‌ ಕಿತ್ತಿದ್ದಾರೆ. ಈಗ ಭುವನೇಶ್ವರ್‌ ಕುಮಾರ್‌ 150 ವಿಕೆಟ್‌ ಸಾಧನೆ ಮಾಡಿದ ಮೂರನೇ ವೇಗದ ಬೌಲರ್‌ ಎನಿಸಿಕೊಂಡಿದ್ದಾರೆ.

    ಭಾರತದ ಪರವಾಗಿ ಸ್ಪಿನ್ನರ್‌ಗಳಾದ ಅಮಿತ್‌ ಮಿಶ್ರಾ (166), ಪಿಯೂಶ್ ಚಾವ್ಲಾ(157), ಯಜುವೇಂದ್ರ ಚಹಲ್‌(151), ಹರ್ಭಜನ್‌ ಸಿಂಗ್‌ 150 ವಿಕೆಟ್‌ ಪಡೆದಿದ್ದಾರೆ. ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್‌ ಕುಮಾರ್‌ 22 ರನ್‌ ನೀಡಿ 3 ವಿಕೆಟ್‌ ಕಿತ್ತಿದ್ದರು. ಇದನ್ನೂ ಓದಿ: 6 ಸಿಕ್ಸ್, 8 ಫೋರ್ ಚಚ್ಚಿ ಮಿಲ್ಲರ್ ಮಿಂಚಿಂಗ್ – ಗುಜರಾತ್‍ಗೆ ರೋಚಕ ಜಯ

    ಭಾನುವಾರ ನಡೆದ ಪಂದ್ಯದಲ್ಲಿ ಹೈದರಬಾದ್‌ 7 ವಿಕೆಟ್‌ಗಳ ಜಯವನ್ನು ಸಾಧಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 20 ಓವರ್‌ಗಳಲ್ಲಿ 151 ರನ್‌ಗಳಿಗೆ ಆಲೌಟ್‌ ಆಯ್ತು. ಹೈದರಾಬಾದ್‌ 18.5 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 152 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿದೆ. ಒಟ್ಟು 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ದಿರುವ ಹೈದರಾಬಾದ್‌ ಅಂಕಪಟ್ಟಿಯಲ್ಲಿ ಸದ್ಯ 8 ಅಂಕಗೊಳೊಂದಿಗೆ 4ನೇ ಸ್ಥಾನದಲ್ಲಿದೆ.

  • ಟೀಂ ಇಂಡಿಯಾ ವೇಗಿ ಭುವನೇಶ್ವರ್ ದಂಪತಿಗೆ ಹೆಣ್ಣು ಮಗು ಜನನ

    ಟೀಂ ಇಂಡಿಯಾ ವೇಗಿ ಭುವನೇಶ್ವರ್ ದಂಪತಿಗೆ ಹೆಣ್ಣು ಮಗು ಜನನ

    ನವದೆಹಲಿ: ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದೆಹಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಬುಧವಾರ ಚೊಚ್ಚಲ ಮಗುವಿಗೆ ಜನ್ಮ ನೀಡಿದರು.

    ಭುವನೇಶ್ವರ್ ಕುಮಾರ್ ಹಾಗೂ ನೂಪುರ್ 2017ರ ನ. 23ರಂದು ಮೀರತ್‍ನಲ್ಲಿ ವಿವಾಹವಾಗಿದ್ದರು. ಈ ಜೋಡಿ ತಮ್ಮ 4ನೇ ವಾರ್ಷಿಕೋತ್ಸವವನ್ನು ನಿನ್ನೆ ಆಚರಿಸಿಕೊಂಡಿತ್ತು. ಭುವನೇಶ್ವರ್ ಅವರು ಕಳೆದ ವಾರ ನಡೆದ ಭಾರತ ನ್ಯೂಜಿಲ್ಯಾಂಡ್ ಟಿ-20 ಪಂದ್ಯದಲ್ಲಿ ಭಾಗಿಯಾಗಿದ್ದರು. 3-0 ಅಂತರದಿಂದ ಭಾರತ ಭರ್ಜರಿ ಜಯ ಗಳಿಸಿತ್ತು. ಈ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ಪರವಾಗಿ ಭುವನೇಶ್ವರ್ ಕುಮಾರ್ ಆಟವಾಡಿದ್ದರು. ಇದನ್ನೂ ಓದಿ: ಟೆಸ್ಟ್ ಸರಣಿ ಆರಂಭಕ್ಕೂ ಮೊದಲು ಭಾರತದ ಮುಂದಿದೆ ಈ 3 ಸವಾಲು

    ಭುವನೇಶ್ವರ್ ಕುಮಾರ್ ಅವರು 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಟವಾಡಿದ್ದರು. 2021ರ ಐಪಿಎಲ್ ಪಂದ್ಯ ದುಬೈನಲ್ಲಿ ನಡೆದಿತ್ತು. ಐಪಿಎಲ್‌ನಲ್ಲಿ ಸದ್ದು ಮಾಡದ ಭುವಿ ಟೀಂ ಇಂಡಿಯಾದಲ್ಲಿ ಭರ್ಜರಿ ಬೌಲಿಂಗ್‌ ಮೂಲಕ ನ್ಯೂಜಿಲೆಂಡ್‌ಗೆ ಕಂಟಕವಾಗಿ ಟೀಂ ಇಂಡಿಯಾ ಟಿ20 ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧಿಸಲು ನೆರವಾದರು.  ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಕನ್ನಡಿಗ ಕೆ.ಎಲ್ ರಾಹುಲ್ ಹೊರಕ್ಕೆ

  • 515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

    515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

    ಕೊಲಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದೆ. ಈ ನಡುವೆ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ಭುವನೇಶ್ವರ್ ಕುಮಾರ್ 5 ವರ್ಷಗಳಲ್ಲಿ 515 ಓವರ್ ಎಸೆದ ನಂತರ ಇದೀಗ ಸಣ್ಣ ತಪ್ಪೊಂದನ್ನು ಮಾಡಿದ್ದಾರೆ.

    ಹೌದು ಬೌಲರ್ ಎಸೆಯುವ ನೋ ಬಾಲ್‍ನಿಂದಾಗಿ ಅದೆಷ್ಟೊ ಪಂದ್ಯಗಳ ಚಿತ್ರಣ ಬದಲಾಗಿದೆ. ಹಾಗಾಗಿ ಬೌಲರ್ ನೋ ಬಾಲ್ ಎಸೆಯದೇ ಇರಲು ಸಾಕಷ್ಟು ಶ್ರಮವಹಿಸುತ್ತಾರೆ. ಅದರಲ್ಲೂ ನಿಗದಿತ ಓವರ್‍ ಗಳ ಪಂದ್ಯದಲ್ಲಿ ನೋ ಬಾಲ್‍ಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಒಂದು ನೋ ಬಾಲ್ ಮಾಡಿದರೆ ಅದು ಎದುರಾಳಿ ತಂಡಕ್ಕೆ ವರದಾನ ಒಂದು ಫ್ರೀ ಹಿಟ್ ಅವಕಾಶ ದೊರೆಯುತ್ತದೆ. ಹಾಗಾಗಿ ಸಾಕಷ್ಟು ಬೌಲರ್‍ ಗಳು ನೋ ಬಾಲ್ ಎಸಯದೇ ಇರಲು ಪ್ರಯತ್ನಿಸುತ್ತಾರೆ. ಇದನ್ನೂ ಓದಿ: 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ದಾಖಲೆ ನಿರ್ಮಿಸಿದ ದೀಪಕ್ ಚಹರ್

    ಭಾರತ ವೇಗಿ ಭುವನೇಶ್ವರ್ ಕುಮಾರ್ ಕೂಡ ನೋಬಾಲ್ ಬಗ್ಗೆ ಹೆಚ್ಚಿನ ಗಮನಹರಿಸಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬರೋಬ್ಬರಿ 5 ವರ್ಷಗಳ ಬಳಿಕ ಒಂದು ನೋ ಬಾಲ್ ಎಸೆದಿದ್ದಾರೆ.

    ಭುವಿ ಈ ಹಿಂದೆ 2015ರ ಅಕ್ಟೋಬರ್ ನಲ್ಲಿ ನಡೆದ ಪಂದ್ಯವೊಂದರಲ್ಲಿ ನೋ ಬಾಲ್ ಎಸೆದಿದ್ದರು. ಆ ಬಳಿಕ 5 ವರ್ಷಗಳು ಕಳೆದಿದೆ. ಈ ನಡುವೆ 3093 ಎಸೆತಗಳನ್ನು ಎಸೆದಿದ್ದಾರೆ. ಆದರೆ ಒಂದೇ ಒಂದು ನೋಬಾಲ್ ಕೂಡ ಮಾಡಿರಲಿಲ್ಲ. ಇದೀಗ ಶ್ರೀಲಂಕಾ ಸರಣಿಯಲ್ಲಿ ಒಂದು ನೋ ಬಾಲ್ ಮಾಡುವ ಮೂಲಕ 5 ವರ್ಷಗಳ ಬಳಿಕ ಗೆರೆದಾಟಿ ಬೌಲಿಂಗ್ ಮಾಡಿ ಎದುರಾಳಿ ತಂಡಕ್ಕೆ ಫ್ರೀ ಹಿಟ್ ಅವಕಾಶ ನೀಡಿದ್ದಾರೆ.

    ಇದನ್ನು ಗಮನಿಸುತ್ತಿದ್ದಂತೆ ಭುವಿ ತಮ್ಮ ಬೌಲಿಂಗ್ ಬಗ್ಗೆ ಎಷ್ಟು ಚಾಕಚಕ್ಯತೆ ಹೊಂದಿದ್ದಾರೆ ಎಂಬುದರ ಬಗ್ಗೆ ನೆಟ್ಟಿಗರು ಚರ್ಚೆಗಿಳಿದಿದ್ದಾರೆ. ಭುವನೇಶ್ವರ್ ನೋ ಬಾಲ್ ಎಸೆಯದೆ 5 ವರ್ಷಗಳಾಗಿತ್ತು ಇದೀಗ ಅ ತಪಸ್ಸು ಭಂಗವಾಗಿದೆ, ಕೊನೆಗೂ ನೋ ಬಾಲ್ ಎಸೆದಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, ಭುವನೇಶ್ವರ್ ಕ್ರಿಕೆಟ್ ಬಗ್ಗೆ ಇರುವಂತಹ ಬದ್ಧತೆ ಇದರಿಂದ ತಿಳಿಯುತ್ತದೆ ಎಂದು ಅಭಿಮಾನಿಯೊಬ್ಬರು ಹೊಗಳಿದ್ದಾರೆ. ಹೀಗೆ ಅನೇಕ ಮೆಚ್ಚುಗೆಯ ಮಾತುಗಳು ಕ್ರಿಕೆಟ್‍ವಲಯದಲ್ಲಿ ಕೇಳಿ ಬಂದಿದೆ.

  • ಲಂಕಾ ಪ್ರವಾಸ- ದಾಖಲೆ ಬರೆಯುವ ತವಕದಲ್ಲಿ ಭುವಿ

    ಲಂಕಾ ಪ್ರವಾಸ- ದಾಖಲೆ ಬರೆಯುವ ತವಕದಲ್ಲಿ ಭುವಿ

    ಕೊಲಂಬೋ: ಭಾರತ ಹಾಗೂ ಶ್ರೀಲಂಕಾ ನಡುವಿನ ಚುಟುಕು ಸರಣಿಯಲ್ಲಿ ಭಾರತ ತಂಡದ ಉಪನಾಯಕನಾಗಿರುವ ಭುವನೇಶ್ವರ್ ಕುಮಾರ್ ಹಲವು ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಸತತ ಗಾಯದಿಂದಾಗಿ ಭಾರತ ತಂಡದಿಂದ ಪದೇ ಪದೇ ಹೊರಗುಳಿಯುತ್ತಿದ್ದ ಭುವನೇಶ್ವರ್ ಕುಮಾರ್ ಇದೀಗ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಸಹಿತ ಹಿರಿಯ ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

    ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭುವನೇಶ್ವರ್ ಮುಂದಿನ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. ಇದರೊಂದಿಗೆ ವೈಯಕ್ತಿಕವಾಗಿ ಹಲವು ದಾಖಲೆಗಳ ಸನಿಹದಲ್ಲಿ ಭುವಿ ಇದ್ದಾರೆ. ಇದನ್ನೂ ಓದಿ: ಸಹಆಟಗಾರನಿಗೆ ಕನ್ನಡ ಮೇಷ್ಟ್ರಾದ ಗೌತಮ್

    ಭಾರತ ತಂಡದಲ್ಲಿರುವ ಸ್ವಿಂಗ್ ಸ್ಪೇಷಲಿಸ್ಟ್ ಎನಿಸಿಕೊಂಡಿರುವ ಭುವಿ ಚೆಂಡನ್ನು ಎರಡೂ ಕಡೆಗೆ ಸ್ವಿಂಗ್ ಮಾಡುವುದರಲ್ಲಿ ಎತ್ತಿದ ಕೈ. ಈಗಾಗಲೇ ಭಾರತ ತಂಡದ ಪರ ಆಡಿ, 117 ಏಕದಿನ ಪಂದ್ಯದಿಂದ 138 ವಿಕೆಟ್, 48 ಟಿ2ಂ ಪಂದ್ಯಗಳಿಂದ 45 ವಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್‍ನಲ್ಲಿ 21 ಪಂದ್ಯಗಳಿಂದ 63 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

    ಇದೀಗ ಲಂಕಾ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳು ನಡೆಯಲಿದೆ ಈ ಸರಣಿಯಲ್ಲಿ ಕೆಲ ಮೈಲಿಗಲ್ಲಿನತ್ತ ಭುವಿ ಚಿತ್ತ ನೆಟ್ಟಿದ್ದಾರೆ. ಏಕದಿನ ಮಾದರಿಯಲ್ಲಿ ಈಗಾಗಲೇ 138 ವಿಕೆಟ್ ಪಡೆದಿರುವ ಭುವಿ ಇನ್ನೂ 12 ವಿಕೆಟ್ ಪಡೆದರೆ 150 ವಿಕೆಟ್ ಕಿತ್ತ ಸಾಧನೆ ಮಾಡಲಿದ್ದಾರೆ. ಈ ಮೂಲಕ 150 ವಿಕೆಟ್ ಕಿತ್ತ ಭಾರತದ 14ನೇ ಅಟಗಾರ ಎಂಬ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ.

    ಟಿ20 ಕ್ರಿಕೆಟ್‍ನಲ್ಲಿ ಬೆಸ್ಟ್ ಬೌಲರ್ ಎನಿಸಿಕೊಂಡಿರುವ ಭುವಿ ಈಗಾಗಲೇ 45 ವಿಕೆಟ್ ಕಬಳಿಸಿದ್ದಾರೆ. ಇನ್ನೂ 5 ವಿಕೆಟ್ ಕಿತ್ತರೆ ವಿಕೆಟ್‍ಗಳ ಅರ್ಧಶತಕ ದಾಖಲಿಸಲಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‍ನಲ್ಲಿ 50 ವಿಕೆಟ್ ಕಿತ್ತ ಭಾರತ ಎರಡನೇ ವೇಗಿ ಎನಿಸಿಕೊಳ್ಳಲಿದ್ದಾರೆ. ಈಗಾಗಲೇ ಜಸ್ಪ್ರೀತ್ ಬೂಮ್ರಾ 50 ವಿಕೆಟ್ ಕಿತ್ತ ಮೊದಲ ವೇಗಿ ಎನಿಸಿಕೊಂಡಿದ್ದಾರೆ.

    ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಮತ್ತು ಟಿ20 ಸರಣಿ ಜುಲೈ 13 ರಂದು ಪ್ರಾರಂಭಗೊಳ್ಳಲಿದೆ.

  • ಐಪಿಎಲ್ 2020ರ ಟೂರ್ನಿಯಿಂದ ಭುವಿ ಔಟ್

    ಐಪಿಎಲ್ 2020ರ ಟೂರ್ನಿಯಿಂದ ಭುವಿ ಔಟ್

    – ಆಸ್ಟ್ರೇಲಿಯಾ ಟೂರ್ನಿಗೂ ಡೌಟ್

    ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ 19ನೇ ಓವರಿನಲ್ಲಿ ಕೇವಲ 1 ಎಸೆತ ಮಾತ್ರ ಬೌಲ್ ಮಾಡಿದ್ದ ಸನ್‍ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

    ಸ್ನಾಯು ಸೆಳೆತದ ಗಾಯದಿಂದ ಭುವನೇಶ್ವರ್ ಕುಮಾರ್ ಐಪಿಎಲ್‍ನಿಂದ ಹೊರಗುಳಿದಿದ್ದಾರೆ. ಅವರಿಗೆ ಗ್ರೇಡ್ 2 ಅಥವಾ ಗ್ರೇಡ್ 3 ಪ್ರಮಾಣದ ಗಾಯವಾಗಿರುವ ಸಾಧ್ಯತೆ ಇದೆ. ಪರಿಣಾಮ ಅವರು ಕನಿಷ್ಠ 6 ರಿಂದ 8 ವಾರಗಳ ಕಾಲ ಮೈದಾನದಿಂದ ದೂರ ಉಳಿಯಬೇಕಿದೆ. ಇದು ಅವರನ್ನು ಭಾರತ ಮತ್ತು ಆಸ್ಟ್ರೇಲಿಯಾ ಪ್ರವಾಸದಿಂದಲೂ ದೂರ ಮಾಡಬಹುದು ಎಂದು ಬಿಸಿಸಿಐ ವಕ್ತಾರರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    2016, 2017ರ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದಿದ್ದ ಭುವನೇಶ್ವರ್ ಗಾಯದ ಸಮಸ್ಯೆಯಿಂದ ಆವೃತ್ತಿಯಿಂದಲೇ ಹೊರ ನಡೆದಿರುವುದರಿಂದ ಡೇವಿಡ್ ವಾರ್ನರ್ ನಾಯಕತ್ವದ ಹೈದರಾಬಾದ್ ತಂಡಕ್ಕೆ ಭಾರೀ ಹಿನ್ನೆಡೆಯಾಗಲಿದೆ. ಕಳೆದ ಪಂದ್ಯದಲ್ಲಿ ಭುವಿ ಸ್ಥಾನದಲ್ಲಿ ತಂಡವನ್ನು ಕೂಡಿಕೊಂಡಿದ್ದ ಸಿದ್ದಾರ್ಥ್ ಕೌಲ್ ಮುಂಬೈ ವಿರುದ್ಧ 4 ಓವರ್ ಗಳಲ್ಲಿ 64 ರನ್ ನೀಡಿ ದುಬಾರಿಯಾಗಿದ್ದರು.

    ಭುಮಿ ಗಾಯದ ಸಮಸ್ಯೆ ತೀವ್ರವಾಗಿರುವ ಕಾರಣ ಅವರಿಗೆ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಗಾಯದ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ಐಪಿಎಲ್ ಟೂರ್ನಿ ಬಳಿಕ ಟೀಂ ಇಂಡಿಯಾ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಟೂರ್ನಿಗೂ ಭುವಿ ದೂರವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಆಡಿದ್ದು 4 ಎಸೆತವಾದ್ರೂ, ಐಪಿಎಲ್‍ನಲ್ಲಿ ಕೃನಾಲ್ ಪಾಂಡ್ಯ ಆಲ್‍ಟೈಮ್ ರೆಕಾರ್ಡ್

    ಗಾಯದ ಸಮಸ್ಯೆಯಿಂದ ಬಹು ಕಳೆದ ವರ್ಷ ಟೀಂ ಇಂಡಿಯಾದಿಂದ ದೂರವೇ ಉಳಿದಿದ್ದ ಭುವನೇಶ್ವರ್ ಐಪಿಎಲ್ ಟೂರ್ನಿಯ ಮೂಲಕ ಕಮ್‍ಬ್ಯಾಕ್ ಮಾಡಿದ್ದರು. ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೂರ್ನಿಯಿಂದಲೂ ಭುವಿ ಹೊರಗುಳಿದಿದ್ದರು. ಸದ್ಯ ಅವರು ಮತ್ತೊಮ್ಮೆ ಗಾಯದ ಸಮಸ್ಯೆಗೆ ಒಳಗಾಗಿರುವುದು ಅಭಿಮಾನಿಗಳಲ್ಲಿ ನಿರಾಸೆ ತಂದಿದೆ. ಇತ್ತ ವರ್ಷದ ಅಂತ್ಯದಲ್ಲಿ ಟೀಂ ಇಂಡಿಯಾ ಆಸೀಸ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಬೇಕಿದೆ.