Tag: Bhutan

  • ದಾರಿಯುದ್ದಕ್ಕೂ ನಿಂತು ಮೋದಿಯನ್ನು ಸ್ವಾಗತಿಸಿದ ಭೂತಾನ್ ಜನತೆ

    ದಾರಿಯುದ್ದಕ್ಕೂ ನಿಂತು ಮೋದಿಯನ್ನು ಸ್ವಾಗತಿಸಿದ ಭೂತಾನ್ ಜನತೆ

    ಥಿಂಪು: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಯ ಹಿನ್ನೆಲೆಯಲ್ಲಿ ಇಂದು ನೆರೆಯ ಭೂತಾನ್ ದೇಶವನ್ನು ತಲುಪಿದ್ದಾರೆ. ಅಲ್ಲಿನ ಜನತೆ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಭೂತಾನ್ ಪ್ರಧಾನಿ ಲೋಟೈ ತ್ಸೆರಿಂಗ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಥಿಂಪುವಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂತಾನ್ ಪ್ರಧಾನಿ ಡಾ.ಲೋಟೈ ತ್ಸೆರಿಂಗ್ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಪುಟ್ಟ ಬಾಲಕಿಯೊಬ್ಬರು ಮೋದಿ ಅವರಿಗೆ ಪುಷ್ಪಗುಚ್ಚ ನೀಡಿ, ವಿಶೇಷ ಗೌರವ ಸಲ್ಲಿಸಿದಳು.

    ಥಿಂಪು ವಿಮಾನ ನಿಲ್ದಾಣದಲ್ಲಿ ಅನೇಕರು ಭಾರತ ತ್ರಿವರ್ಣ ಧ್ವಜ ಹಿಡಿದು ಮೋದಿ ಅವರನ್ನು ಸ್ವಾಗತಿಸಿ, ಮೋದಿ ಪರ ಘೋಷಣೆ ಕೂಗಿದರು. ವಿಮಾನ ನಿಲ್ದಾಣದಿಂದ ವಾಹನದಲ್ಲಿ ಪ್ರಯಾಣ ಬೆಳೆಸಿದ ಮೋದಿ ಅವರಿಗೆ ದಾರಿಯುದ್ದಕ್ಕೂ ಮಹಿಳೆಯರು, ವಿದ್ಯಾರ್ಥಿಗಳು, ಶಿಕ್ಷಕರು, ಜನಸಾಮಾನ್ಯರು ಕೈಬಿಸಿ ಆತ್ಮೀಯತೆ ಮೆರೆದರು.

    ಭೂತಾನ್‍ಗೆ ತಲುಪಿದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಭೂತಾನ್ ಪ್ರಧಾನಿಯ ಆತ್ಮೀಯ ಸ್ವಾಗತ ನಿಜಕ್ಕೂ ತುಂಬಾ ಖುಷಿಕೊಟ್ಟಿದೆ. ಅಲ್ಲದೇ ತ್ಸೆರಿಂಗ್ ಆತಿಥ್ಯ ಹೃತ್ಪೂರ್ವಕವಾಗಿತ್ತು ಎಂದು ಹೇಳಿದ್ದಾರೆ.

    ಭೂತಾನ್ ಪ್ರಧಾನಿ ಲೋಟೈ ತ್ಸೆರಿಂಗ್ ಅವರು ಟ್ವೀಟ್ ಮಾಡಿ, ದಾರಿಯುದ್ದಕ್ಕೂ ನಿಂತು ಸ್ವಾಗತಕೋರಿದ ಮಹಿಳೆಯರು, ವಿದ್ಯಾರ್ಥಿಗಳು, ಶಿಕ್ಷಕರು, ಜನಸಾಮಾನ್ಯರಿಗೆ ಪ್ರಧಾನಿ ಕೈಬಿಸಿ ಪ್ರತಿಕ್ರಿಯೆ ನೀಡಿದರು. ಇದು ಅವರ ಆತ್ಮೀಯತೆಯನ್ನು ತೋರಿಸುತ್ತದೆ ಹಾಗೂ ಮಕ್ಕಳ ಮೇಲಿನ ವಾತ್ಸಲ್ಯವನ್ನು ಸ್ಪಷ್ಟಪಡಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೊದಲ ವಿದೇಶಿ ಪ್ರವಾಸ ಕೈಗೊಂಡಿದ್ದು ನೆರೆಯ ಭೂತಾನ್ ದೇಶಕ್ಕೆ. ಹೀಗಾಗಿ ಭೂತಾನ್ ಹಾಗೂ ಭಾರತದ ಸಂಬಂಧ ಮತ್ತಷ್ಟು ಉತ್ತಮಗೊಂಡಿತು.

  • ವೀಸಾ ಬೇಡ, ಆಧಾರ್ ಕಾರ್ಡ್ ಇದ್ರೆ ಭೂತಾನ್, ನೇಪಾಳಕ್ಕೆ ಎಂಟ್ರಿ!

    ವೀಸಾ ಬೇಡ, ಆಧಾರ್ ಕಾರ್ಡ್ ಇದ್ರೆ ಭೂತಾನ್, ನೇಪಾಳಕ್ಕೆ ಎಂಟ್ರಿ!

    ನವದೆಹಲಿ: ಇನ್ಮುಂದೆ ನಮ್ಮ ನೆರೆಯ ದೇಶಗಳಾದ ಭೂತಾನ್ ಹಾಗೂ ನೇಪಾಳಕ್ಕೆ ಪ್ರಯಾಣಿಸಲು 15 ವರ್ಷದೊಳಗಿನ ಮಕ್ಕಳಿಗೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ವಿಸಾದ ಅಗತ್ಯವಿಲ್ಲ, ಆಧಾರ್ ಕಾರ್ಡ್ ಇದ್ದರೆ ಸಾಕು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

    ಭಾರತೀಯರು ಪಾಸ್‍ಪೋರ್ಟ್ ಹೊಂದಿದ್ದರೆ, ಭಾರತ ಸರ್ಕಾರ ನೀಡಿದ ಫೋಟೋ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನೀಡಿದ ಚುನಾವಣಾ ಗುರುತಿನ ಚೀಟಿ ಇದ್ದರೆ ವೀಸಾ ಬೇಕಾಗಿಲ್ಲ, ಹಾಗೆಯೇ ಈ ಎರಡು ದೇಶಗಳಿಗೆ ಹೋಗಬಹುದು ಎಂದು ಸಚಿವಾಲಯ ತಿಳಿಸಿದೆ.

    ಮೊದಲೆಲ್ಲ 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 15 ವರ್ಷದೊಳಗಿನವರು ನೇಪಾಳ ಮತ್ತು ಭೂತಾನ್‍ಗೆ ಹೋಗುವುದಕ್ಕೆ ಗುರುತು ಪರಿಶೀಲನೆಗಾಗಿ ಹಲವು ದಾಖಲೆಗಳನ್ನು ನೀಡಬೇಕಾಗಿತ್ತು. ಗುರುತಿಗಾಗಿ ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಕಾರ್ಡ್ ಅಥವಾ ರೇಷನ್ ಕಾರ್ಡ್‍ನ್ನು ಮಾತ್ರ ಸಲ್ಲಿಸಲು ಅವಕಾಶವಿತ್ತು. ಆದರೆ ಆಧಾರ್ ಕಾರ್ಡ್‍ನ್ನು ಸಲ್ಲಿಸಲು ಅವಕಾಶವಿರಲಿಲ್ಲ.

    ಆದರೆ ಇನ್ಮುಂದೆ ಹಾಗೆ ಆಗಲ್ಲ. ಯಾಕೆಂದರೆ ಆಧಾರ್ ಕಾರ್ಡ್ ಅನ್ನು ಕೂಡ ಗುರುತಿನ ದಾಖಲೆಗಳಾಗಿ ಪರಿಗಣಿಸಬಹುದು. ಅಲ್ಲದೆ ಪ್ರಯಾಣಿಕರು ಆಧಾರ್ ಕಾರ್ಡ್ ಅನ್ನು ಪ್ರಯಾಣ ದಾಖಲೆಯಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಷ್ಟೇ ಅಲ್ಲದೆ 15 ರಿಂದ 18 ವರ್ಷದೊಳಗಿನ ಯುವಕ-ಯುವತಿಯರಿಗೆ ಭಾರತ ಮತ್ತು ನೇಪಾಳಕ್ಕೆ ಪ್ರಯಾಣಿಸಲು ಶಾಲೆಯ ಪ್ರಾಂಶುಪಾಲರಿಂದ ಪಡೆದ ಗುರುತಿನ ಚೀಟಿಯನ್ನು ಬಳಸಬಹುದಾಗಿದೆ. ಹಾಗೆಯೇ ಒಂದೇ ಕುಟುಂಬ ಹಲವರು ಒಟ್ಟಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಎಲ್ಲರಿಗೂ ಪಾಸ್‍ಪೋರ್ಟ್ ಅಥವಾ ಚುನಾವಣೆ ಐಡಿಗಳನ್ನು ತೋರಿಸುವ ಅಗತ್ಯವಿಲ್ಲ. ಬದಲಿಗೆ ಆ ಕುಟುಂಬಸ್ಥರಲ್ಲಿ ಹಿರಿಯರಾದವರು ಸರ್ಕಾರದಿಂದ ಮಾನ್ಯತೆ ಪಡೆದ ದಾಖಲೆಗಳನ್ನು ಹೊಂದಿದ್ದರೆ ಸಾಕು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಹಾಗೆಯೇ ಭಾರತೀಯರು ಭೂತಾನ್‍ಗೆ ತೆರಳಲು ಅವರ ಬಳಿ 6 ತಿಂಗಳು ಅವಧಿ ಇರುವ ಭಾರತದ ಪಾಸ್‍ಪೋರ್ಟ್ ಅಥವಾ ಚುನಾವಣೆ ಐಡಿ ಇರಬೇಕು. ಪ್ರತಿ ದಿನವು ಭೂತಾನ್ ಹಾಗೂ ಭಾರತ ಗಡಿ ಭಾಗದಲ್ಲಿ 8 ರಿಂದ 10 ಸಾವಿರ ಕೂಲಿ ಕಾರ್ಮಿಕರು ಓಡಾಡುತ್ತಾರೆ. ಅಲ್ಲದೆ ನೇಪಾಳದಲ್ಲಿ ಸುಮಾರು 6 ಲಕ್ಷ ಭಾರತೀಯರು ವಾಸವಾಗಿದ್ದಾರೆ. ಆದರಿಂದ ಆಧಾರ್ ಕಾರ್ಡ್ ಅನ್ನು ಗುರುತಿನ ದಾಖಲೆಯಾಗಿ ಪರಿಗಣಿಸಲು ಗೃಹ ಸಚಿವಾಲಯ ನಿಯಮ ಜಾರಿಗೊಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಯನ್ನ ಕೂಸುಮರಿ ರೀತಿ ಹೊತ್ತು ನಡೆದ ಭೂತಾನ್ ಮಾಜಿ ಪ್ರಧಾನಿ -ಫೋಟೋ ವೈರಲ್

    ಪತ್ನಿಯನ್ನ ಕೂಸುಮರಿ ರೀತಿ ಹೊತ್ತು ನಡೆದ ಭೂತಾನ್ ಮಾಜಿ ಪ್ರಧಾನಿ -ಫೋಟೋ ವೈರಲ್

    ನವದೆಹಲಿ: ಭೂತಾನ್ ಮಾಜಿ ಪ್ರಧಾನಿ ತಮ್ಮ ಪತ್ನಿ ಟಾಶಿ ಡೋಮ ಅವರನ್ನು ಕೂಸುಮರಿ ಮಾಡಿ ಬೆನ್ನಮೇಲೆ ಹೊತ್ತು ನಡೆದಿರುವ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

    ಅಂದಹಾಗೇ ಮಾಜಿ ಪ್ರಧಾನಿ ಶೆರಿಂಗ್ ಟೋಬ್ಗೆ ತಮ್ಮ ಪತ್ನಿ ಜೊತೆ ಭೂತಾನ್ ಪ್ರದೇಶವೊಂದಕ್ಕೆ ಭೇಟಿ ನೀಡಿದ್ದ ವೇಳೆ ಘಟನೆ ನಡೆದ್ದು, ಈ ವೇಳೆ ಬೆಟ್ಟವೊಂದರ ರಸ್ತೆಯಲ್ಲಿ ಕೆಸರು ತುಂಬಿದ್ದರಿಂದ ಪತ್ನಿಯ ಕಾಲು ಕೊಳಕಾಗದಿರಲಿ ಎಂಬ ಉದ್ದೇಶದಿಂದ ಪತ್ನಿಯನ್ನು ಹೊತ್ತು ಸಾಗಿದ್ದಾರೆ.

    ಈ ಫೋಟೋವನ್ನು ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ತ್ರೀ ನಿಷ್ಠ ಸೇವೆಗಾಗಿ ಜಗತ್ ಪ್ರಸಿದ್ಧಿಯಾದ ಇಂಗ್ಲೆಂಡ್ ಸರ್ ವಾಲ್ಟರ್ ರ‍್ಯಾಲೆ ಮಾಡಿದಂತಹ ತ್ಯಾಗವನ್ನೇನೂ ನಾನು ಮಾಡಿಲ್ಲ. ಅದರೂ, ಒಬ್ಬ ಪುರುಷ ತನ್ನ ಸಂಗಾತಿಗಾಗಿ ಏನನ್ನು ಮಾಡಬಹುದೋ ಅದನ್ನೇ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಟೋಬ್ಗೆ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಬಾಹುಬಲಿ ಚಿತ್ರದಲ್ಲಿ ನಟ ಪ್ರಭಾಸ್ ಸ್ಕ್ರೀನ್ ಮೇಲೆ ಪತ್ನಿ ದೇವಸೇನಾ ಅನುಷ್ಕಾರ ತಮ್ಮ ಭುಜದ ಮೇಲೆ ನಡೆಸಿದ ಘಟನೆಯನ್ನು ನೆನಪು ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇಲ್ಲಿ ಗಂಡನನ್ನ ಗುರಿ ಮಾಡಲಾಗಿದೆ ಎಂದು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದರೆ ಕೆಲವರು ಪುರುಷನ ನಮ್ರತೆ ಎಂದು ಬರೆದು ಕೊಂಡಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ನವದೆಹಲಿ: ಮೊದಲ ಬಾರಿಗೆ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಭೂತಾನ್ ದೊರೆ ಜಿಗ್ಮೆ ನಾಮ್‍ಗೆಲ್ ವಾಗ್ಚುಕ್ ಅವರ ಒಂದೂವರೆ ವರ್ಷದ ಪುತ್ರನಿಗೆ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಕರ್ನಾಟಕದ ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಚನ್ನಪಟ್ಟಣದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಾಜ್ಯದ ಕೀರ್ತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದ್ದಾರೆ.

    ಮಹಾರಾಜ, ರಾಣಿ ಮತ್ತು ಯುವ ರಾಜಕುಮಾರನ ಬಳಿ ಇದ್ದ ಚನ್ನಪಟ್ಟಣದ ಗೊಂಬೆಯನ್ನು ನೋಡಿದ್ದಾರೆ. ಚನ್ನಪಟ್ಟಣದ ಗೊಂಬೆಯಂತೆಯೇ ಇರುವ ಯುವರಾಜನನ್ನು ನೋಡಲು ಸಂತೋಷವಾಗುತ್ತದೆಂದು ಹರ್ಷ ವ್ಯಕ್ತಪಡಿಸಿ ನಿರ್ಮಾಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

    ಬುಧವಾರ ರಾಜ ಪರಿವಾರದ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಏರ್ಪಡಿಸಿದ್ದ ಓತಣಕೂಟದಲ್ಲಿ ಇತ್ತೀಚೆಗಷ್ಟೆ ಮುಕ್ತಾಯವಾದ 17 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿಯ ಚೆಂಡೊಂದನ್ನು ಉಡುಗೊರೆಯನ್ನು ನೀಡಿದ್ದರು. ಈ ಓತಣ ಕೂಟದಲ್ಲೇ ಸಚಿವೆ ನಿರ್ಮಲಾ ಚನ್ನಪಟ್ಟಣದ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಮೊದಲ ಬಾರಿಗೆ ಭಾರತಕ್ಕೆ ಬಂದ ಪುಟ್ಟ ಯುವರಾಜಕುಮಾರ ಎಲ್ಲರ ಗಮನ ಕೇಂದ್ರಿಕರಿಸಿದ್ದರು. ವಿಶೇಷವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೂತಾನ್ ರಾಜನ ಪರಿವಾರವನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಿ ಯುವರಾಜನ ಕೈಹಿಡಿದು ನಿಂತಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.