Tag: Bhupender Yadav

  • ಮಹದಾಯಿ ಯೋಜನೆಗೆ ಅನುಮತಿ ವಿಳಂಬ – ಕೇಂದ್ರದ ಸಭೆಯಲ್ಲಿ ಕರ್ನಾಟಕ ತೀವ್ರ ಆಕ್ಷೇಪ

    ಮಹದಾಯಿ ಯೋಜನೆಗೆ ಅನುಮತಿ ವಿಳಂಬ – ಕೇಂದ್ರದ ಸಭೆಯಲ್ಲಿ ಕರ್ನಾಟಕ ತೀವ್ರ ಆಕ್ಷೇಪ

    ನವದೆಹಲಿ: ಮಹದಾಯಿ ಕುಡಿಯುವ ನೀರಿನ ಯೋಜನೆಗೆ (Mahadayi Project) ಅನುಮತಿ ನೀಡುವ ಸಂಬಂಧ ಕೇಂದ್ರ ಸರ್ಕಾರದ (Central Government) ಮುಂದೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

    ಕುಡಿಯುವ ನೀರಿನ ಯೋಜನೆಗೆ ಗೋವಾ (Goa) ಅನಗತ್ಯ ಖ್ಯಾತೆ ತೆಗೆದಿದೆ. ಯೋಜನೆ ಜಾರಿಗೆ ನ್ಯಾಯಾಲಯವೇ ತಡೆಯಾಜ್ಞೆ ನೀಡಿಲ್ಲ. ಕೇಂದ್ರ ಸರ್ಕಾರ ಅನುಮತಿ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.

    ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ್ ಪ್ರಸಾದ್, ಸುಪ್ರೀಂ ಕೋರ್ಟ್ ಹಾಗೂ ಜಲ ಆಯೋಗದ ಅನುಮತಿ ನಡುವೆಯೂ ಪರಿಸರ ಇಲಾಖೆ ಅನುಮತಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಭೆಯಲ್ಲಿ ಮಾತನಾಡಿದ ಅವರು, ಮಹದಾಯಿ ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರಿನ ಯೋಜನೆಯಾಗಿದೆ. ಯೋಜನೆಗೆ ಅನುಮತಿ ನೀಡಬಹುದು ಎಂದು ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳಿ 9 ತಿಂಗಳು ಕಳೆದಿದೆ. 2018 ರಲ್ಲೆ ಮಹದಾಯಿ ನ್ಯಾಯಮಂಡಳಿ ನೀರು ಹಂಚಿಕೆ ಮಾಡಿದೆ. ಯೋಜನೆಗೆ ಒಪ್ಪಿಗೆ ನೀಡಬಹುದು ಎಂದು 2020ರಲ್ಲೇ ಸುಪ್ರೀಂ ಕೋರ್ಟ್ ಹೇಳಿದೆ. 2022 ರಲ್ಲಿ ಜಲ ಆಯೋಗ ಯೋಜನೆಯ ಡಿಪಿಆರ್‌ಗೆ ಅನುಮತಿ ನೀಡಿದೆ ಎಂದಿದ್ದಾರೆ.

    ಯೋಜನೆಗೆ ಅನುಮೋದನೆ ನೀಡಲು ಯಾವುದೇ ಸಮಸ್ಯೆಗಳಿಲ್ಲ, ಗೋವಾ ಆಕ್ಷೇಪ ಕಂಡು ಯೋಜನೆಗೆ ಅರಣ್ಯ ಪರಿಸರ ಇಲಾಖೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಮತ್ತೊಂದು ಕಡೆ ಗೋವಾ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ನಮ್ಮ ಅನುಮತಿ ಇಲ್ಲದೇ ಯೋಜನೆ ಆರಂಭಿಸುವಂತ್ತಿಲ್ಲ ಎಂದು ಷೋಕಾಸ್ ನೋಟಿಸ್ ನೀಡಿದ್ದಾರೆ. ಹಾಗೇ ನೋಟಿಸ್ ನೀಡಲು ಗೋವಾಕ್ಕೆ ಅಧಿಕಾರವೇ ಇಲ್ಲ. ಗೋವಾ ಆಕ್ಷೇಪ ಬದಿಗಿಟ್ಟು ಕುಡಿಯುವ ನೀರಿನ ಯೋಜನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

    ಕೇಂದ್ರದ ಮುಂದೆ ಪ್ರಬಲ ಆಕ್ಷೇಪ ಮಂಡಿಸಿದ ಬಳಿಕ ಕರ್ನಾಟಕದಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿರುವ ಸಚಿವ ಭೂಪೇಂದ್ರ ಯಾದವ್ (Bhupender Yadav), ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

  • ಭೂಪೇಂದ್ರ ಯಾದವ್ ಭೇಟಿ ಮಾಡಿದ ಈಶ್ವರ್ ಖಂಡ್ರೆ – ಹುಲಿ ಅಭಯಾರಣ್ಯ ಬಾಕಿ ಹಣ ಬಿಡುಗಡೆಗೆ ಮನವಿ

    ಭೂಪೇಂದ್ರ ಯಾದವ್ ಭೇಟಿ ಮಾಡಿದ ಈಶ್ವರ್ ಖಂಡ್ರೆ – ಹುಲಿ ಅಭಯಾರಣ್ಯ ಬಾಕಿ ಹಣ ಬಿಡುಗಡೆಗೆ ಮನವಿ

    ನವದೆಹಲಿ: ಕೇಂದ್ರ ಪ್ರಾಯೋಜಿತ ಹುಲಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2022-23ನೇ ಸಾಲಿನಲ್ಲಿ ಮಂಜೂರಾದ ಸುಮಾರು 60 ಕೋಟಿ ರೂ. ಪೈಕಿ 30 ಕೋಟಿ ರೂ. ಬಾಕಿ ಬರಬೇಕಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ (Bhupender Yadav) ಅವರಿಗೆ ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ ಈಶ್ವರ್ ಖಂಡ್ರೆ, ಹುಲಿ ಯೋಜನೆಯಡಿ ಕಾಳಿ, ಭದ್ರಾ, ನಾಗರಹೊಳೆ, ಬಂಡಿಪುರ ಮತ್ತು ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು 61 ಕೋಟಿ ರೂ. ಸೇರಿ ಒಟ್ಟು ಸುಮಾರು 91.99 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಕೋರಿದ್ದು, ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಈಶ್ವರ್ ಖಂಡ್ರೆ (Eshwara Khandre) ತಿಳಿಸಿದ್ದಾರೆ.

    ಅರಣ್ಯ ರಕ್ಷಣೆ ಮತ್ತು ವಿಸ್ತರಣೆಗಾಗಿ ಕಾಂಪಾ ನಿಧಿಯಡಿ 2023-24ರ ಸಾಲಿನಲ್ಲಿ ರಾಜ್ಯದಿಂದ ಸುಮಾರು 362 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ 140 ಕೋಟಿ ರೂ.ಗೆ ಮಾತ್ರ ಮಂಜೂರಾತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಉಳಿದ 222 ಕೋಟಿ ರೂ. ಬಾಕಿ ನಿಧಿಯ ಮಂಜೂರಾತಿಗೂ ಮನವಿ ಮಾಡಲಾಗಿದ್ದು, ಇದಕ್ಕೆ ಅಗತ್ಯವಾದ ಎಲ್ಲ ನಿಬಂಧನೆಗಳನ್ನೂ ಪೂರೈಸಲಾಗುವುದು ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆ ಅಕ್ಕಿ ನೀಡುತ್ತಿಲ್ಲ: ಖಂಡ್ರೆ ವಾಗ್ದಾಳಿ

    ನಗರ-ವನ ಯೋಜನೆ ಅಡಿ ರಾಜ್ಯದ 9 ನಗರಗಳಿಗಾಗಿ 26 ಕೋಟಿ 70 ಲಕ್ಷ ರೂ. ಯೋಜನೆ ಅನುಮೋದನೆ ನೀಡುವಂತೆಯೂ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದ್ದು, ಭೂಪೇಂದ್ರ ಯಾದವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇದನ್ನೂ ಓದಿ: ಫೇಕ್ ನ್ಯೂಸ್‌ಗಳ ಮೂಲ ಪತ್ತೆಹಚ್ಚಿ- ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

  • ಅಶೋಕ್ ಜೊತೆ ಮುನಿಸು – ಅರ್ಧದಲ್ಲೇ ಇಳಿದ ಸೋಮಣ್ಣ

    ಅಶೋಕ್ ಜೊತೆ ಮುನಿಸು – ಅರ್ಧದಲ್ಲೇ ಇಳಿದ ಸೋಮಣ್ಣ

    ಬೆಂಗಳೂರು: ಸಚಿವ ಆರ್. ಅಶೋಕ್ (R.Ashoka) ಮತ್ತು ಸಚಿವ ವಿ. ಸೋಮಣ್ಣ (V.Somanna) ನಡುವಿನ ಗೊಂದಲದಿಂದ ಇಂದು ಆಯೋಜಿಸಿದ್ದ ಬಿಜೆಪಿ (BJP) ವಿಜಯಸಂಕಲ್ಪ ರಥಯಾತ್ರೆ ಮೊಟಕುಗೊಂಡ ಪ್ರಸಂಗ ನಾಗರಭಾವಿಯಲ್ಲಿ ನಡೆದಿದೆ.

    ಬೆಳಗ್ಗೆ ಗೋವಿಂದರಾಜನಗರದ ಟೋಲ್‍ಗೇಟ್ ನಿಂದ ನಾಯಂಡನಹಳ್ಳಿವರೆಗೂ (Nayandanahalli) ವಿಜಯ ಸಂಕಲ್ಪ ರಥಯಾತ್ರೆ ನಿಗದಿಯಾಗಿತ್ತು. ಯಾತ್ರೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಭೂಪೇಂದ್ರ ಯಾದವ್ (Bhupender Yadav), ನಾಗರಭಾವಿ (Nagarabhavi) ವೃತ್ತದವರೆಗೂ ಇದ್ದು ಬಳಿಕ ಹೊರಟರು. ಇವರ ಹಿಂದೆಯೇ ಅಶೋಕ್ ಸಹ ಇಳಿದು ನಡೆದಿದ್ದಾರೆ. ನಾಯಂಡಹಳ್ಳಿವರೆಗೂ ರಥಯಾತ್ರೆಯಲ್ಲಿರುವಂತೆ ಸೋಮಣ್ಣ ಕೇಳಿಕೊಂಡ್ರೂ ಅಶೋಕ್ ಒಪ್ಪದೇ ಹೊರ ಹೋಗಿದ್ದಾರೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕ್ರೆಡಿಟ್ ನಮ್ಮ ಸರ್ಕಾರಕ್ಕೇ ಸಲ್ಲಬೇಕು: ಪ್ರತಾಪ್ ಸಿಂಹಗೆ ಸಿದ್ದು ಟಾಂಗ್


    ಇದರಿಂದ ಕೋಪಗೊಂಡ ಸೋಮಣ್ಣ ನಾಗರಭಾವಿಯಲ್ಲೇ ರಥಯಾತ್ರೆ ಮೊಟಕುಗೊಳಿಸಿದ್ದಾರೆ. ತಮ್ಮ ಕ್ಷೇತ್ರದಲ್ಲೇ ರಥಯಾತ್ರೆ ನಡೆಯುತ್ತಿದ್ದರೂ ಸೋಮಣ್ಣ ಯಾತ್ರೆ ಬಗ್ಗೆ ಚಿಂತಿಸದೆ ಹೊರಟಿದ್ದಾರೆ. ಬೆಳಗ್ಗೆ ತಾನೇ ಸೋಮಣ್ಣರನ್ನು ಹೊಗಳಿದ್ದ ಅಶೋಕ್, ಸೋಮಣ್ಣ ಕ್ಷೇತ್ರದಲ್ಲಿ ನಡೆದ ರಥಯಾತ್ರೆಯ ಬಗ್ಗೆ ನಿರಾಸಕ್ತಿ ತೋರಿದ್ದಾರೆ. ಇದನ್ನೂ ಓದಿ: ಮಂಡ್ಯ ‘ಕೈ’ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಕಾರಿಗೆ ಮೊಟ್ಟೆ ಎಸೆದ ಕಾರ್ಯಕರ್ತರು

  • ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆ!

    ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆ!

    ನವದೆಹಲಿ: ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ದೇಶದಲ್ಲಿ ಕಳೆದ ವರ್ಷ 125 ಹುಲಿಗಳು ಸಾವನ್ನಪ್ಪಿವೆ. ಅದೇ ರೀತಿ 2020ರಲ್ಲಿ 106 ಹುಲಿಗಳು ಸಾವನ್ನಪ್ಪಿದ್ದವು ಎಂದು ಸರ್ಕಾರ ಗುರುವಾರ ತಿಳಿಸಿದೆ.

    ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ 2019ರಲ್ಲಿ 106 ಹುಲಿಗಳು ಸಾವನ್ನಪ್ಪಿದ್ದರೆ, 2021ರಲ್ಲಿ ಹುಲಿಗಳ ಸಾವಿನ ಸಂಖ್ಯೆ 127ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಆಜಾನ್ ರೀತಿಯಲ್ಲೇ ರಾಮಜಪ ಮಾಡಿದ ಕಾಳಿಶ್ರೀ

    ಕಳೆದ ವರ್ಷ ದೇಶದಲ್ಲಿ ಅತೀ ಹೆಚ್ಚು ಹುಲಿಗಳ ಸಾವು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. 42 ಮಧ್ಯಪ್ರದೇಶ, 27 ಮಹಾರಾಷ್ಟ್ರ, 15 ಕರ್ನಾಟಕ, 9 ಹುಲಿಗಳು ಉತ್ತರ ಪ್ರದೇಶದಲ್ಲಿ ಸಾವನ್ನಪ್ಪಿವೆ ಎಂದು ತಿಳಿಸಿದರು.

    ಕಾಡಿನಲ್ಲಿ ಜೀವಿಸುವ ಹುಲಿಗಳ ಸರಾಸರಿ ಜೀವಿತಾವಧಿ ಸಾಮಾನ್ಯವಾಗಿ 10 ರಿಂದ 12 ವರ್ಷ ಇರುತ್ತದೆ. ನೈಸರ್ಗಿಕ ಪರಿಸರ ವ್ಯವಸ್ಥೆಯಲ್ಲಿ ವೃದ್ಧಾಪ್ಯ, ರೋಗಗಳು, ಕಾದಾಟ, ವಿದ್ಯುತ್ ಸ್ಪರ್ಶ, ರಸ್ತೆ-ರೈಲು ಅಪಘಾತಗಳಂತಹ ಕಾರಣಕ್ಕೆ ಹೆಚ್ಚಿನ ಹುಲಿಗಳು ಸಾವನ್ನಪ್ಪಿವೆ ಎಂದು ಯಾದವ್ ತಿಳಿಸಿದ್ದಾರೆ.

    ಪ್ರಾಣಿ-ಮಾನವ ಸಂಘರ್ಷಗಳನ್ನು ನಿರ್ವಹಿಸಲು ಸರ್ಕಾರ ಪ್ರಯತ್ನ ಪಡುತ್ತಿದೆ. ಹುಲಿಗಳ ಬೇಟೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯ ಖಗೋಳಶಾಸ್ತ್ರಜ್ಞರಿಂದ ನೂತನ ಪ್ರಯತ್ನ – ಎಐ ತಂತ್ರಜ್ಞಾನ ಬಳಸಿ ವಾಸಯೋಗ್ಯ ಗ್ರಹಗಳ ಪತ್ತೆ

    ದೇಶದಲ್ಲಿ ಹುಲಿಗಳ ಸಾವು ಹೆಚ್ಚಾಗಿದ್ದರೂ ಅವುಗಳ ಸಂಖ್ಯೆ ದ್ವಿಗುಣಗೊಂಡಿದೆ. 2014ರಲ್ಲಿ 2,226 ಹುಲಿಗಳು ಇದ್ದು, ಇತ್ತೀಚೆಗೆ ಎಂದರೆ 2018ರಲ್ಲಿ ಹುಲಿಗಳ ಸಂಖ್ಯೆ 2,967 ರಷ್ಟು ಇವೆ. ವಿಶ್ವದಲ್ಲೇ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ಭಾರತವೇ ಆಗಿದೆ. ಜಾಗತಿಕ ಹುಲಿ ಗಣತಿ ಪ್ರಕಾರ ಶೇ.75 ಕ್ಕಿಂತಲೂ ಹೆಚ್ಚು ಪಾಲು ಭಾರತದಲ್ಲಿಯೇ ಇದೆ ಎಂದು ಯಾದವ್ ತಿಳಿಸಿದರು.