Tag: Bhuneshwar Kumar

  • ದಿನೇಶ್ ಕಾರ್ತಿಕ್ ಇನ್, ಜಾಧವ್ ಔಟ್ – ಭುವಿ ಕಮ್ ಬ್ಯಾಕ್

    ದಿನೇಶ್ ಕಾರ್ತಿಕ್ ಇನ್, ಜಾಧವ್ ಔಟ್ – ಭುವಿ ಕಮ್ ಬ್ಯಾಕ್

    ಬರ್ಮಿಂಗ್‌ಹ್ಯಾಮ್‌: 2019ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೋಲುಂಡ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 2 ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.

    ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೊಹ್ಲಿ ಪಡೆಯಲ್ಲಿ ದಿನೇಶ್ ಕಾರ್ತಿಕ್ ಕೊನೆಗೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಭುವನೇಶ್ವರ್ ಕುಮಾರ್ ಕೂಡ ಮತ್ತೆ ತಂಡಕ್ಕೆ ಮರಳಿದ್ದಾರೆ. ಪರಿಣಾಮ ಕುಲ್ದೀಪ್ ಯಾದವ್ ತಂಡದಿಂದ ಹೊರಗುಳಿದಿದ್ದಾರೆ.

    ವಿಜಯ್ ಶಂಕರ್ ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ರಿಷಬ್ ಪಂತ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ಹಂತದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಬೇಕಾಗಿತ್ತು ಎಂದು ವಿಶ್ಲೇಷಕರು ಅಭಿಪ್ರಾಯ ಹಂಚಿಕೊಂಡಿದ್ದರು. ಆದರೆ ಸಿಕ್ಕ ಅವಕಾಶಗಳಲ್ಲಿ ಮಿಂಚಲು ವಿಫಲವಾದ ಹಿನ್ನೆಲೆಯಲ್ಲಿ ಕೇದಾರ್ ಜಾಧವ್ ಸ್ಥಾನ ಕಳೆದುಕೊಂಡಿದ್ದಾರೆ.

    ಜಾಧವ್ ಅವರು ಪಂದ್ಯದ ಕೆಲ ಓವರ್ ಗಳನ್ನು ಎಸೆಯುವ ಸಾಮರ್ಥ್ಯವನ್ನು ಹೊಂದಿದ್ದ ಕಾರಣವಾಗಿ ಅವರಿಗೆ ಮೊದಲು ಮಣೆ ಹಾಕಲಾಗಿತ್ತು. ಆದರೆ ಇದುವರೆಗೂ ಟೂರ್ನಿಯಲ್ಲಿ ಜಾಧವ್ 6 ಓವರ್ ಗಳನ್ನಷ್ಟೇ ಎಸೆದಿದ್ದು, ಯಾವುದೇ ವಿಕೆಟ್ ಪಡೆದಿಲ್ಲ. ಅದರಲ್ಲೂ ಜಾಧವ್‍ಗೆ 3 ಪಂದ್ಯಗಳಲ್ಲಿ ಮಾತ್ರ ಬೌಲ್ ಮಾಡಲು ಅವಕಾಶ ನೀಡಲಾಗಿತ್ತು. ಅಲ್ಲದೇ ಅಫ್ಘಾನಿಸ್ತಾನ ವಿರುದ್ಧ ಹೊರತು ಪಡಿಸಿ ಬ್ಯಾಟಿಂಗ್‍ನಲ್ಲೂ ಜಾಧವ್ ನೀರಸ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಜಾಧವ್‍ರನ್ನ ಕೈಬಿಟ್ಟು ಅನುಭವಿ ದಿನೇಶ್ ಕಾರ್ತಿಕ್‍ಗೆ ಅವಕಾಶ ನೀಡಲಾಗಿದೆ.

     

    ಅಂದಹಾಗೇ 2017 ಚಾಂಪಿಯನ್ ಟ್ರೋಫಿಯಿಂದ ಕಾರ್ತಿಕ್ 20 ಪಂದ್ಯಗಳನ್ನು ಆಡಿದ್ದು, 47ರ ಸರಾಸರಿ 425 ರನ್ ಸಿಡಿಸಿದ್ದಾರೆ. ಬಹುಮುಖ್ಯವಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಟೂರ್ನಿಗಳಲ್ಲಿ ಮ್ಯಾಚ್ ಫಿನಿಷರ್ ಆಗಿ ಮಿಂಚಿದ್ದರು. ಅಲ್ಲದೇ ಇಂಗ್ಲೆಂಡ್ ನೆಲದಲ್ಲಿ ಆಡಿರುವ ಅನುಭವವನ್ನು ಕಾರ್ತಿಕ್ ಹೊಂದಿದ್ದು, ಈ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಯಾವ ರೀತಿ ಆಡಲಿದ್ದಾರೆ ಎಂಬುವುದನ್ನು ಕಾದು ನೋಡಬೇಕಿದೆ.