Tag: Bhramana Community

  • ಧ್ವಂಸಗೊಂಡಿದ್ದ ವೃಂದಾವನ ಭಕ್ತರ ನೆರವಿನಿಂದ ಮತ್ತೆ ನಿರ್ಮಾಣ

    ಧ್ವಂಸಗೊಂಡಿದ್ದ ವೃಂದಾವನ ಭಕ್ತರ ನೆರವಿನಿಂದ ಮತ್ತೆ ನಿರ್ಮಾಣ

    ಕೊಪ್ಪಳ: ಬುಧವಾರ ರಾತ್ರಿ ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಯರ ವೃಂದಾವನವನ್ನು ಭಕ್ತರ ನೆರವಿನಿಂದ ಮತ್ತೆ ನಿರ್ಮಾಣ ಮಾಡಲಾಗಿದೆ.

    9 ಯತಿಗಳ ನವವೃಂದಾವನದಲ್ಲಿ ವ್ಯಾಸರಾಯರ ವೃಂದಾವನವನ್ನ ನಿಧಿಗಾಗಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ವೃಂದಾವನ ಪುನರ್ ನಿರ್ಮಾಣ ಕಾರ್ಯಕ್ಕೆ ಇಂದು ಚಾಲನೆ ಸಿಕ್ಕಿತ್ತು. ಶುಕ್ರವಾರ ಮುಂಜಾನೆ ವ್ಯಾಸರಾಜ ಮಠಾಧೀಶರಾದ ವಿದ್ಯಾಶ್ರೀಶ ಶ್ರೀಗಳು, ಮಧ್ವಾಚಾರ್ಯ ಮಠದ ವಿದ್ಯಾಸಾಗರ ಮಾಧವ ತೀರ್ಥರ ನೇತೃತ್ವದಲ್ಲಿ ವ್ಯಾಸರಾಜರ ವೃಂದಾವನ ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಜೊತೆಗೆ ವಾಸ್ತುಶಿಲ್ಪಿ ನೀರಜ್ ಹಾಗೂ ತಮಿಳುನಾಡಿನ ರಾಘವಪ್ರಭ ಕಾರ್ಮಿಕರ ತಂಡ ವ್ಯಾಸರಾಯರ ವೃಂದಾವನ ಪುನರ್ ನಿರ್ಮಾಣ ಮಾಡಿದ್ದಾರೆ.

    ವ್ಯಾಸರಾಜರ ವೃಂದಾವನ ಪುನರ್ ನಿರ್ಮಾಣಕ್ಕೂ ಮುನ್ನ ನವವೃಂದಾವನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವೃಂದಾವನದ ಭಕ್ತರು ವಿಶೇಷ ಹೋಮ ಪೂಜೆ ಮಾಡಿ ವೃಂದಾವನ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದರು.

    ಸಾವಿರಾರು ಭಕ್ತರು ಬುಧವಾರದಿಂದ ವೃಂದಾವನದಲ್ಲಿ ಬೀಡು ಬಿಟ್ಟಿದ್ದು ವ್ಯಾಸರಾಯರ ವೃಂದಾವನ ನಿರ್ಮಾಣ ಮಾಡಿ ಪೂಜೆ ಮಾಡಿ ಹೋಗುತ್ತೇವೆ ಎಂದು ಶಪಥ ಮಾಡಿದ್ದರು.  ಅದರಂತೆ ಇಂದು ನಿರ್ಮಾಣ ಮಾಡಿ ಶಪಥ ಪೂರ್ಣಗೊಳಿಸಿದರು. ಪುನರ್ ನಿರ್ಮಾಣಕ್ಕೆ ಕೊಪ್ಪಳ ಜಿಲ್ಲಾಡಳಿತವೂ ಸಂಪೂರ್ಣ ಸಹಕಾರ ನೀಡಿದೆ.

    ರಾಜ್ಯಾದ್ಯಂತ ಪ್ರತಿಟನೆ: ವ್ಯಾಸರಾಯರ ವೃಂದಾವನ ಧ್ವಂಸ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಆರಂಭವಾಗಿವೆ. ಬ್ರಾಹ್ಮಣ ಸಮುದಾಯದವರು ರಾಜ್ಯಾದ್ಯಂತ ಪ್ರತಿಭಟನೆ ಮಾಡಿ ಕಿಡಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಕೊಪ್ಪಳ, ರಾಯಚೂರು ಸೇರಿದಂತೆ ನಾನಾ ಭಾಗದಲ್ಲಿ ಪ್ರತಿಭಟನೆ ಮಾಡಿದ ಬ್ರಾಹ್ಮಣ ಸಮುದಾಯದವರು, ಮನವಿ ಸಲ್ಲಿಸಿದ್ದಾರೆ.

    ವಿಜಯನಗರ ಸಾಮ್ರಾಜ್ಯದ ವೃಂದಾವನವನ್ನು ಹಾಳು ಮಾಡಿ ಇಡೀ ಹಿಂದೂ ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ ಕೂಡಲೇ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಬಂಧಿಸಬೇಕೆಂದು ಬೀದಿಗಿಳಿದು ಹೋರಾಟ ಮಾಡಿದ್ದಾರೆ.

    ವ್ಯಾಸರಾಯರ ವೃಂದಾವನ ಧ್ವಂಸ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ನಿಧಿಗಾಗಿ ವ್ಯಾಸರಾಯರ ವೃಂದಾವನ ಧ್ವಂಸ ಮಾಡಿದ್ದಾರೋ ಅಥವಾ ಬೇರೇ ಏನಾದ್ರೂ ಕಾರಣ ಇತ್ತೇ ಎನ್ನುವುದು ಪೊಲೀಸರ ತನಿಖೆಯ ನಂತರವೇ ತಿಳಿಯಲಿದೆ.

    ಯಾವಾಗ ರಾಜ್ಯಾದ್ಯಂತ ಪ್ರತಿಭಟನೆ ಆರಂಭವಾಯಿತೋ ಎಚ್ಚೆತ್ತ ಕೊಪ್ಪಳ ಪೊಲೀಸ್ ಇಲಾಖೆ ಕಿಡಿಗೇಡಿಗಳ ಬಂಧನಕ್ಕೆ ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಸುರೇಶ್ ತಳವಾರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದೆ.