Tag: bhopal

  • ಈ ವ್ಯಕ್ತಿಗೆ ಪ್ರತಿದಿನ ತಿನ್ನಲು ಬೇಕು 3 ಕೆಜಿ ಮೆಣಸಿನಕಾಯಿ: ವಿಡಿಯೋ ನೋಡಿ

    ಈ ವ್ಯಕ್ತಿಗೆ ಪ್ರತಿದಿನ ತಿನ್ನಲು ಬೇಕು 3 ಕೆಜಿ ಮೆಣಸಿನಕಾಯಿ: ವಿಡಿಯೋ ನೋಡಿ

    ಭೋಪಾಲ್: ಊಟದ ಮಧ್ಯದಲ್ಲಿ ಒಂದು ಮೆಣಸಿನಕಾಯಿ ಬಂದರೆ ಅಬ್ಬಾ ಎಂದು ಕಣ್ಣು ಮೇಲೆ ಮಾಡುವುದುಂಟು. ಆದರೆ ಇಲ್ಲೊಬ್ಬ ವ್ಯಕ್ತಿಗೆ ಪ್ರತಿದಿನ ತಿನ್ನಲು 3 ಕೆಜಿ ಮೆಣಸಿನಕಾಯಿ ಬೇಕು.

    ಹೌದು, ನೀವು ನಂಬ್ಲೇಬೇಕು. ಮಧ್ಯ ಪ್ರದೇಶ ರಾಜ್ಯದ 40 ವರ್ಷದ ಪ್ಯಾರೇ ಮೋಹನ್ ಅವರು ಪ್ರತಿದಿನ 3 ಕೆ.ಜಿ. ಮೆಣಸಿಕಾಯಿ ಅಥವಾ ಮೆಣಸಿನ ಪುಡಿಯನ್ನು ತಿನ್ನುತ್ತಾರೆ. ಹಸಿ ಮೆಣಸಿನಕಾಯಿ ಅಥವಾ ಕೆಂಪು ಮೆಣಸಿನಕಾಯಿ ಅಥವಾ ಕರಿ ಮೆಣಸು ಪುಡಿಯನ್ನು ತಿಂದು ಜೀರ್ಣಿಸಿಕೊಳ್ತಾರೆ.

    ಮೋಹನ್ ಮೆಣಸಿನಕಾಯಿ ತಿನ್ನುವ ಮೂಲಕ ಸುತ್ತಮುತ್ತಲಿನ ಹಳ್ಳಿಯಲ್ಲಿ ಫೇಮಸ್ ಆಗಿದ್ದಾರೆ. ಮೋಹನ್ ಮೆಣಸಿನಕಾಯಿಗಳನ್ನು ತಿನ್ನುವುದನ್ನು ನೋಡುವುದಕ್ಕಾಗಿ ಜನರು ಗ್ರಾಮಕ್ಕೆ ಆಗಮಿಸುತ್ತಾರೆ. ಮೂರು ಮಕ್ಕಳ ತಂದೆಯಾಗಿರುವ ಮೋಹನ್ ಇದೂವರೆಗೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬಂದಿಲ್ಲ. ಪ್ರತಿದಿನ ಇಷ್ಟು ಖಾರ ತಿಂದ್ರೂ ಮೋಹನ್ ಆರೋಗ್ಯವಾಗಿದ್ದಾರೆ.

    ಇವನು ಚಿಲ್ಲಿ ಕಿಂಗ್: ಮೋಹನ್ ಭಾರತದಲ್ಲಿ 3 ಕೆಜಿ ಮೆಣಸಿಕಾಯಿಗಳನ್ನು ತಿಂದು ಫೇಮಸ್ ಆಗಿದ್ದರೆ, ಚೀನಾದಲ್ಲಿರುವ ಲೀ ಯೋಂಗಿಜಿ ಎಂಬವರು ಪ್ರತಿದಿನ 2.5 ಕೆಜಿ ಮೆಣಸಿನಾಯಿಗಳನ್ನು ತಿನ್ನುವ ಮೂಲಕ ಫೇಮಸ್ ಆಗಿದ್ದಾರೆ.

    ಲೀ ಯೋಂಗಿಜಿ ಮೆಣಸಿನ ಕಾಯಿ ತಿನ್ನುವುದರಿಂದ ಜನ ಅವರಿಗೆ ‘ಚಿಲ್ಲಿ ಕಿಂಗ್’ ಎಂದು ಬಿರುದು ನೀಡಿದ್ದಾರೆ. 10 ವರ್ಷಗಳ ಹಿಂದೆ ಯೋಂಗಿಜಿ ಎರಡು ಬೌಲ್ ಮೆಣಸಿನ ಪುಡಿ ತಿಂದು ನೀರು ಕುಡಿದು ಆಸ್ಪತ್ರೆಗೆ ಹೋಗಿದ್ದರಂತೆ, ಆದರೆ ವೈದ್ಯರು ಮಾತ್ರ ಎಲ್ಲರಂತೆ ಇದ್ದಿಯಾ ಎಂದು ಹೇಳಿದ್ದರು ಎಂದು ಲೀ ಯೋಂಗಿಜಿ ಹೇಳ್ತಾರೆ.

    ಅಂದಿನಿಂದ ಯೋಂಗಿಜಿ ಅವ್ರಿಗೆ ಸ್ನ್ಯಾಕ್ ರೂಪದಲ್ಲಿ ಪ್ರತಿದಿನ ಮೆಣಸಿಣಕಾಯಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

    https://www.youtube.com/watch?v=KgvkJvzqY94

     

     

     

     

     

  • ವಾಟರ್ ಟ್ಯಾಂಕರೊಂದು ಬೈಕ್ ಸವಾರರ ಮೇಲೆ ಹರಿದ ವೀಡಿಯೋ ನೋಡಿ!

    ವಾಟರ್ ಟ್ಯಾಂಕರೊಂದು ಬೈಕ್ ಸವಾರರ ಮೇಲೆ ಹರಿದ ವೀಡಿಯೋ ನೋಡಿ!

    ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನ ಷಹಜಹಾನಾಬಾದ್ ಎಂಬಲ್ಲಿ ಮಂಗಳವಾರ ಸಂಜೆ ನಡೆದ ಭೀಕರ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ನಡೆದಿದ್ದೇನು?: ಷಹಜಹಾನಾಬಾದ್ ನಲ್ಲಿ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ನೀರಿನ ಟ್ಯಾಂಕರ್ ಏಕಾಏಕಿ ಬೈಕ್ ಸವಾರರ ಮೇಲೆ ಹರಿದು ಆದರ್ಶ ಆಸ್ಪತ್ರೆ ಕಟ್ಟಡ ಒಳಗೆ ನುಗ್ಗಿದೆ. ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇನ್ನು ಘಟನೆಯ ಬಳಿಕ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ ಅಂತಾ ಘಟನೆಯ ಪ್ರತ್ಯಕ್ಷದರ್ಶಿಗಳಾದ ಫಯಾಜ್, ಐಶ್ಬಾಗ್ ಮತ್ತು ಅಮಾನುಲ್ಲಾಹ್ ತಿಳಿಸಿದ್ದಾರೆ ಅಂತಾ ಅಲ್ಲಿನ ಪೊಲೀಸರು ಹೇಳಿದ್ದಾರೆ.

    ಬ್ರೆಕ್ ಫೈಲ್ ಆಗಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿತ್ತೋ ಅಥವಾ ಇನ್ನೇನಾದ್ರೂ ತಾಂತ್ರಿಕ ದೋಷಗಳಿಂದಾಗಿ ಈ ಅವಘಡ ಸಂಭವಿಸತ್ತೋ ಅನ್ನೋದರ ಬಗ್ಗೆ ತನಿಖೆಯ ಬಳಿಕವಷ್ಟೇ ಹೊರಬರಬೇಕಿದೆ. ಸದ್ಯ ಆರೋಪಿ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=C5pgmxoQk3Q&feature=youtu.be

  • ಪಡಿತರ ಅಂಗಡಿಯಲ್ಲಿ ಸೀಮೆಎಣ್ಣೆ ಡ್ರಮ್‍ಗೆ ಆಕಸ್ಮಿಕ ಬೆಂಕಿ: 13ಕ್ಕೂ ಹೆಚ್ಚು ಮಂದಿ ಸಜೀವ ದಹನ

    ಪಡಿತರ ಅಂಗಡಿಯಲ್ಲಿ ಸೀಮೆಎಣ್ಣೆ ಡ್ರಮ್‍ಗೆ ಆಕಸ್ಮಿಕ ಬೆಂಕಿ: 13ಕ್ಕೂ ಹೆಚ್ಚು ಮಂದಿ ಸಜೀವ ದಹನ

    ಭೋಪಾಲ್: ಪಡಿತರ ಅಂಗಡಿಯಲ್ಲಿ ಸೀಮೆ ಎಣ್ಣೆ ವಿತರಿಸುತ್ತಿರೋ ಸಂದರ್ಭದಲ್ಲಿ ಸೀಮೆ ಎಣ್ಣೆ ಡ್ರಮ್ ಗೆ ಆಕಸ್ಮಿಕ ಬೆಂಕಿ ಹತ್ತಿಕೊಂಡ ಪರಿಣಾಮ 13ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಘಟನೆ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

    ಘಟನೆ ವಿವರ: ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಬಾರ್ಗಿ ಗ್ರಾಮದ ಸಹಕಾರಿ ಸೊಸೈಟಿಯಲ್ಲಿ ಸೀಮೆಎಣ್ಣೆ ಸೇರಿದಂತೆ ಪಡಿತರ ಹಂಚಿಕೆ ಮಾಡೋ ವೇಳೆ ಸುಮಾರು 50 ಮಂದಿ ಗ್ರಾಮಸ್ಥರು ಸಾಲಲ್ಲಿ ನಿಂತಿದ್ರು. ಈ ವೇಳೆ 100 ಲೀಟರ್ ಸೀಮೆಎಣ್ಣೆ ಡ್ರಮ್‍ಗೆ ಆಕಸ್ಮಿಕ ಬೆಂಕಿ ತಗುಲಿ ಈ ಅನಾಹುತ ಸಂಭವಿಸಿದೆ. ಡ್ರಮ್‍ನಲ್ಲಿ ಅರ್ಧ ಮಾತ್ರ ಸೀಮೆಎಣ್ಣೆ ಇದ್ದದ್ರಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ ಅಂತಾ ಹೇಳಲಾಗುತ್ತಿದೆ.

    ಸ್ಫೋಟ ನಡೆದಾಗ ಸೊಸೈಟಿಯ ಒಳಗೆ ಸುಮಾರು 25 ಮಂದಿ ಇದ್ರು. ಅದ್ರಲ್ಲಿ 13 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗ್ರಾಮಸ್ಥರು 18 ಮಂದಿ ಸತ್ತಿದ್ದಾರೆ ಅಂತ ಹೇಳಿದ್ರೆ, 14 ಮಂದಿ ಮೃತಪಟ್ಟಿರೋದಾಗಿ ಡಿಐಜಿ ಹೇಳಿದ್ದಾರೆ.

    ಪ್ರಧಾನಿ ಸಂತಾಪ: ಘಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. `ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗುವಂತೆ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಘಟನೆಯ ಕುರಿತು ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿ ಅಂತಾ ತಿಳಿಸಿದ್ದಾರೆ.

    ಪರಿಹಾರ ಘೋಷಣೆ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ. ಸೀಮೆ ಎಣ್ಣೆ ಹಂಚಿತ್ತಿರೋ ಸಂದರ್ಭದಲ್ಲಿ ನಡೆದ ಈ ದುರ್ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಮೃತ ಕುಟುಂಬಗಳಿಗೆ ದುಃಖ ಭರಿಸುವ ಹಾಗೂ ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಅಂತಾ ದೇವರಲ್ಲಿ ಪ್ರಾರ್ಥಿಸುವುದಾಗಿ ಚೌಹಾಣ್ ಟ್ವೀಟ್ ಮಾಡಿದ್ದಾರೆ.

  • 6 ವರ್ಷಗಳ ಹಿಂದೆ ತಂದೆ ತಾಯಿಯನ್ನ ಕೊಂದು ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದ ಕೊಲೆ ಆರೋಪಿ!

    – ಲಿವಿಂಗ್ ಟುಗೆದರ್ ಸಂಗಾತಿಯನ್ನು ಕೊಂದು ಮನೆಯಲ್ಲೇ ಗೋರಿ ಕಟ್ಟಿದ್ದ

    ಭೋಪಾಲ್: ವ್ಯಕ್ತಿಯೊಬ್ಬ ಲಿವಿಂಗ್ ಟುಗೆದರ್‍ನಲ್ಲಿದ್ದ ತನ್ನ ಸಂಗಾತಿಯನ್ನು ಕೊಂದು ತನ್ನ ಮನೆಯಲ್ಲೇ ಗೋರಿ ಕಟ್ಟಿದ್ದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ ಬಂಧಿತ ಆರೋಪಿ ತನ್ನ ತಂದೆ ತಾಯಿಯನ್ನೂ ಕೊಂದು ಮನೆಯ ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾನೆ.

    ಮಧ್ಯಪ್ರದೇಶದ ಭೋಪಾಲ್ ನಿವಾಸಿ ಉದ್ಯಾನ್ ದಾಸ್ ಎರಡು ತಿಂಗಳ ಹಿಂದೆ ತನ್ನ ಸಂಗಾತಿ ಆಕಾಂಕ್ಷಾಳನ್ನು ಕೊಂದು ಆಕೆಯ ಶವವನ್ನ ಪೆಟ್ಟಿಗೆಯಲ್ಲಿ ಹಾಕಿ ಮನೆಯಲ್ಲೇ ಗೋರಿ ಕಟ್ಟಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಾನ್ ದಾಸ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಈತ 6 ವರ್ಷಗಳ ಹಿಂದೆ ತನ್ನ ತಂದೆ ತಾಯಿಯನ್ನೂ ಕೊಂದಿರುವುದಾಗಿ ಹೇಳಿದ್ದಾನೆ. 2010-11 ರಲ್ಲಿ ತನ್ನ ತಂದೆ ತಾಯಿಯನ್ನು ಕೊಂದು ರಯ್‍ಪುರದ ಮನೆಯ ಕಾಂಪೌಂಡ್‍ನಲ್ಲಿ ಹೂತಿರುವುದಾಗಿ ಉದ್ಯಾನ್ ದಾಸ್ ಹೇಳಿದ್ದಾನೆ.

    ಈತ ನೀಡಿರುವ ಈ ಆಘಾತಕಾರಿ ಹೇಳಿಕೆಯ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ನಾವು ರಾಯ್‍ಪುರಕ್ಕೆ ಪೊಲೀಸ್ ತಂಡವನ್ನು ಕಳಿಸುತ್ತಿದ್ದೇವೆ. ಉದ್ಯಾನ್ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿರುವುದರಿಂದ ಈತ ಹೇಳುವುದೆಲ್ಲವನ್ನೂ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

    ಮೊದಲು ಉದ್ಯಾನ್ ದಾಸ್ ನೀಡಿದ್ದ ಹೇಳಿಕೆಯಲ್ಲಿ, ಭೋಪಾಲ್‍ನ ಬಿಇಹೆಚ್‍ಇಎಲ್‍ನ ನಿವೃತ್ತ ಅಧಿಕಾರಿಯಾದ ತನ್ನ ತಂದೆ ರಾಯ್‍ಪುರ್‍ನಲ್ಲಿ ಫ್ಯಾಕ್ಟರಿ ನಡೆಸುತ್ತಿದ್ದು, 2010ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಿದ್ದ. ತನ್ನ ತಾಯಿ ಇಂದ್ರಾಣಿ ಅಮೆರಿಕದಲ್ಲಿದ್ದಾರೆ ಎಂದು ಹೇಳಿದ್ದ. ಆರೋಪಿ ತುಂಬಾ ಚಾಲಾಕಿಯಾಗಿದ್ದು, ಇಂಗ್ಲಿಷ್‍ನಲ್ಲಿ ಸಾರಾಗವಾಗಿ ಮಾತಾಡ್ತಾನೆ. ಕಾನ್ಫಿಡೆಂಟ್ ಆಗಿ ಸುಳ್ಳು ಹೇಳ್ತಾನೆ ಅಂತ ಪೊಲೀಸರು ಹೇಳಿದ್ದಾರೆ.

    ಉದ್ಯಾನ್ ಈ ಹಿಂದೆ ಹೇಳಿದಂತೆ ಐಐಟಿ ಮಾಡಿಲ್ಲ, ಆತ ದ್ವಿತೀಯ ಪಿಯುಸಿ ಪಾಸ್ ಆಗಿದ್ದಾನೆ ಅಷ್ಟೆ. ಈತ ಐಷಾರಾಮಿ ಜೀವನ ನಡೆಸುತ್ತಿದ್ದ. ಈತನ ಪೋಷಕರಿಗೆ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಫ್ಲಾಟ್ ಇದ್ದು, ಅದರಿಂದ ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಬರುತ್ತದೆ. ರಾಯುಪುರ್‍ನಲ್ಲಿರುವ ಫ್ಲಾಟ್‍ನಿಂದ 7 ಸಾವಿರ ರೂ. ತಿಂಗಳ ಬಾಡಿಗೆ ಹಾಗೂ ಭೋಪಾಲ್‍ನ ಸಾಕೇತ್ ನಗರದಲ್ಲಿ ಈತ ವಾಸವಿರುವ ಕಟ್ಟಡದಲ್ಲಿ ಕೆಳ ಮಹಡಿಯ ಬಾಡಿಗೆ ಮನೆಯಿಂದ 5 ಸಾವಿರ ರೂ. ತಿಂಗಳ ಬಾಡಿಗೆ ಬರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಉದ್ಯಾನ್ ಮತ್ತು ಆತನ ತಂದೆಯ ಜಾಯಿಂಟ್ ಅಕೌಂಟ್‍ನಲ್ಲಿ 8.5 ಲಕ್ಷ ಫಿಕ್ಸ್ಡ್ ಡೆಪಾಸಿಟ್ ಇದ್ದು ಇದರ ಬಡ್ಡಿಯೂ ಕೂಡ ಉದ್ಯಾನ್‍ಗೆ ಸಿಗುತ್ತಿತ್ತು. ಉದ್ಯಾನ್ ತನ್ನ ಪೋಷಕರ ಪಿಂಚಣಿ ಹಣವನ್ನೂ ಕೂಡ ಡ್ರಾ ಮಾಡಿಕೊಳ್ಳುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಉದ್ಯಾನ್ ಲಿವಿಂಗ್ ಟುಗೆದರ್‍ನಲ್ಲಿದ್ದ ಗೆಳತಿ ಆಕಾಂಕ್ಷಾಳನ್ನು ಕೊಂದು ಆಕೆಯ ಶವವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ, ಅದರ ಮೇಲೆ ಸಿಮೆಂಟ್, ನೀರು ಮತ್ತು ಕಾಂಕ್ರೀಟ್ ಸುರಿದು ಮನೆಯಲ್ಲೇ ಗೋರಿ ಕಟ್ಟಿದ್ದ. ಗೋರಿಯನ್ನೇ ತನ್ನ ಮಂಚದಂತೆ ಮಾಡಿಕೊಂಡು ಪ್ರತಿದಿನ ಇದರ ಮೇಲೆ ಮಲಗುತ್ತಿದ್ದ. ಆಕಾಂಕ್ಷಾ ಎರಡು ತಿಂಗಳಿನಿಂದ ಫೋನ್ ಮಾಡದ ಕಾರಣ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾಲ್ ಟ್ರೇಸ್ ಮಾಡಿ ಉದ್ಯಾನ್‍ನನ್ನು ಬಂಧಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು.

    ಇದನ್ನೂ ಓದಿ: ಅಮೆರಿಕಗೆ ಹೋಗ್ತಿದ್ದೀನಿ ಅಂತ ಹೇಳಿ ಉದ್ಯಾನ್ ಜೊತೆ ಲಿವಿಂಗ್ ಟುಗೆದರ್‍ನಲ್ಲಿದ್ದ ಆಕಾಂಕ್ಷಾ

     

  • ಲಿವಿಂಗ್ ಟುಗೆದರ್ ಸಂಗಾತಿಯನ್ನ ಕೊಂದು ಮನೆಯಲ್ಲೇ ಗೋರಿ ಕಟ್ಟಿದ

    – ಹೆಣವಿದ್ದ ಸಿಮೆಂಟ್ ಚಪ್ಪಡಿಯ ಮೇಲೆ ಪ್ರತಿದಿನ ಮಲಗ್ತಿದ್ದ

    ಭೋಪಾಲ್: ಲಿವಿಂಗ್ ಟುಗೆದರ್‍ನಲ್ಲಿದ್ದ ತನ್ನ ಸಂಗಾತಿಯನ್ನು ಕೊಂದು ಸಿಮೆಂಟ್ ಗೋರಿಯೊಳಗೆ ಆಕೆಯ ಶವವನ್ನು ಹೂತಿಟ್ಟಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಇಲ್ಲಿನ ಸಾಕೇತ್ ನಗರದ ನಿವಾಸಿಯಾಗಿದ್ದ 32 ವರ್ಷದ ಉದ್ಯಾನ್ ದಾಸ್ ಬಂಧಿತ ಆರೋಪಿ. ಐಷಾರಾಮಿ ಜೀವನ ನಡೆಸುತ್ತಿದ್ದ ಉದ್ಯಾನ್ ಮರ್ಸೀಡಿಸ್ ಬೆಂಜ್ ಕಾರ್‍ನಲ್ಲಿ ಓಡಾಡುತ್ತಿದ್ದ. ತನ್ನ ಮನೆಯಲ್ಲಿ ಒಬ್ಬನೇ ವಾಸವಿದ್ದ. ಉದ್ಯಾನ್‍ಗೆ ಎರಡು ವರ್ಷದ ಹಿಂದೆ ಫೇಸ್‍ಬುಕ್‍ನಲ್ಲಿ 28 ವರ್ಷದ ಆಕಾಂಕ್ಷಾ ಶರ್ಮಾಳ ಪರಿಚಯವಾಗಿತ್ತು. ಆಕಾಂಕ್ಷಾ 2 ವರ್ಷದ ಹಿಂದೆ ಅಮೆರಿಕಗೆ ಹೋಗುತ್ತಿರುವುದಾಗಿ ಪೋಷಕರಿಗೆ ಹೇಳಿ ಪಶ್ಚಿಮ ಬಂಗಾಳದ ಬಂಕುರಾದ ತನ್ನ ಮನೆಯಿಂದ ಬಂದಿದ್ದಳು. ಅದ್ರೆ ಆಕೆ ಅಮೆರಿಕಗೆ ಹೋಗದೆ ಭೋಪಾಲ್‍ಗೆ ಬಂದು ಉದ್ಯಾನ್ ದಾಸ್‍ನೊಂದಿಗೆ ವಾಸವಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

    ಎರಡು ತಿಂಗಳ ಹಿಂದಿನವರೆಗೆ ಸ್ನೇಹಿತರಿಗೆ ಹಾಗೂ ಕುಟುಂಬಸ್ಥರಿಗೆ ಆಕಾಂಕ್ಷಾಳಿಂದ ಫೋನ್ ಬರುತ್ತಿತ್ತು. ಆದ್ರೆ ಫೋನ್ ಬರೋದು ನಿಂತಾಗ ಅನುಮಾನಗೊಂಡ ಆಕಾಂಕ್ಷಾ ತಂದೆ ಬಂಕುರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಂಕುರಾ ಪೊಲೀಸರು ಕಾಲ್ ಟ್ರೇಸ್ ಮಾಡಿದಾಗ ಭೋಪಾಲ್ ವಿಳಾಸ ಸಿಕ್ಕಿದ್ದು, ಈ ಬಗ್ಗೆ ಉದ್ಯಾನ್ ದಾಸ್‍ನನ್ನು ಪ್ರಶ್ನಿಸಿದ್ದಾರೆ. ಮೊದಲಿಗೆ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ಉದ್ಯಾನ್ ದಾಸ್, ನಂತರ ಆಕಾಂಕ್ಷಾಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಮನೆಯಲ್ಲೇ ಗೋರಿ ಕಟ್ಟಿದ: ಆಕಾಂಕ್ಷಾಳನ್ನು ಕೊಂದ ನಂತರ ಉದ್ಯಾನ್ ಮೊದಲನೇ ಮಹಡಿಯಲ್ಲಿದ್ದ ತನ್ನ ಮನೆಯ ಒಳಗೆಯೇ ಒಂದು ಮರದ ಪೆಟ್ಟಿಗೆಯಲ್ಲಿ ಆಕೆಯ ಮೃತದೇಹವನ್ನು ಹಾಕಿ ಅದರ ಮೇಲೆ ಸಿಮೆಂಟ್, ನೀರು ಮತ್ತು ಕಾಂಕ್ರೀಟ್ ತುಂಬಿ ಚಪ್ಪಡಿಯಂತೆ ಮಾಡಿದ್ದ. ಸಿಮೆಂಟ್ ಒಣಗಿದ ನಂತರ ಇದನ್ನೇ ತನ್ನ ಮಂಚದಂತೆ ಮಾಡಿಕೊಂಡು ಪ್ರತಿದಿನ ಅದರ ಮೇಲೆಯೇ ಮಲಗುತ್ತಿದ್ದುದಾಗಿ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಗುರುವಾರ ರಾತ್ರಿ ಪೊಲೀಸರು ಸುಮಾರು 3 ಗಂಟೆಗಳ ಕಾಲ ಡ್ರಿಲ್ಲಿಂಗ್ ಮಾಡಿ ಸಿಮೆಂಟ್ ಚಪ್ಪಡಿಯೊಳಗಿದ್ದ ಆಕಾಂಕ್ಷಾ ಮೃತದೇಹದ ಅಂಗಾಂಗಗಳನ್ನು ಹೊರತೆಗೆದಿದ್ದಾರೆ.

    ಐಷಾರಾಮಿ ಜೀವನ ನಡೆಸ್ತಿದ್ದ: ಪ್ರಕರಣದ ಸಂಬಂಧ ಗ್ರೌಂಡ್ ಫ್ಲೋರ್‍ನಲ್ಲಿ ವಾಸವಿದ್ದ ಉದ್ಯಾನ್ ನೆರೆಹೊರೆಯವರು ಹೇಳಿಕೆ ನೀಡಿದ್ದು, ಆ ಯುವತಿ ಹಲವು ಬಾರಿ ಮನೆಗೆ ಬರೋದನ್ನ ನೋಡಿದ್ದೆವು. ಆದ್ರೆ ಕೊನೆಯ ಬಾರಿ ಆಕೆಯನ್ನು ನೋಡಿದ್ದು ಎರಡು ತಿಂಗಳ ಹಿಂದೆ. ಕಳೆದ 25 ವರ್ಷಗಳಿಂದ ನಮಗೆ ಉದ್ಯಾನ್ ಗೊತ್ತು. ಆದ್ರೆ ಆತ ಯಾರೊಂದಿಗೂ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಆತ ಐಷಾರಾಮಿ ಜೀವನ ನಡೆಸುತ್ತಿದ್ದ. ರಾಯ್‍ಪುರ್‍ನಲ್ಲಿ ಫ್ಯಾಕ್ಟರಿ ಇದೆ ಎಂದು ಹೇಳುತ್ತಿದ್ದ. ಆತ ಅವನ ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದರಿಂದ ಪೋಷಕರೇ ಆತನಿಗೆ ಹಣ ಕೊಡುತ್ತಿರಬಹುದು ಎಂದುಕೊಂಡಿದ್ದೆವು ಅಂತ ಹೇಳಿದ್ದಾರೆ.

    ಪೊಲೀಸರು ಉದ್ಯಾನ್‍ನನ್ನು ವಿಚಾರಣೆ ಮಾಡಿದಾಗ ತಾನು ಐಐಟಿ ಮಾಡಿದ್ದು, ಅಮೆರಿಕದಲ್ಲಿ ಕೆಲಸ ಮಾಡಿದ್ದೆ ಎಂದು ಹೇಳಿದ್ದಾನೆ. ಅಲ್ಲದೆ ಆಕಾಂಕ್ಷಾಳೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದು, ಅಮೆರಿಕದಲ್ಲಿ ವಾಸವಿರುವ ತನ್ನ ತಾಯಿಯನ್ನು ನೋಡಲು ಕೂಡ ಹೋಗಿದ್ದೆವು. ತನ್ನ ತಂದೆ ಕೆಲವು ವರ್ಷದ ಹಿಂದೆ ನಿಧನರಾಗಿರುವುದಾಗಿ ಹೇಳಿದ್ದಾನೆ.

    ಕೊಲೆಗೆ ಕಾರಣವೇನು?: ಆಕಾಂಕ್ಷಾಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದ್ದ ವಿಷಯ ತಿಳಿದು ಕೊಲೆ ಮಾಡಿದ್ದಾಗಿ ಉದ್ಯಾನ್ ಹೇಳಿದ್ದಾನಾದ್ರೂ ಕೊಲೆಗೆ ಸೂಕ್ತ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯಕ್ಕೆ ಉದ್ಯಾನ್ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಂಡಿರೋ ಪೊಲೀಸರು, ಸಿಮೆಂಟ್ ಚಪ್ಪಡಿಯಿಂದ ಹೊರತೆಗೆದ ಆಕಾಂಕ್ಷಾ ಅಂಗಾಂಗಗಳನ್ನು ಡಿಎನ್‍ಎ ಪರೀಕ್ಷೆಗಾಗಿ ಕಳಿಸಿದ್ದಾರೆ.