Tag: bhootayyana maga ayyu

  • 45 ವರ್ಷದ ಹಿಂದೆ ವಿಷ್ಣುವರ್ಧನ್ ಬಳಸಿದ್ದ ಕಲ್ಲನ್ನು ಗಿಫ್ಟ್ ನೀಡಲಿದ್ದಾರೆ ಚಿಕ್ಕಮಗಳೂರಿನ ಜನ

    45 ವರ್ಷದ ಹಿಂದೆ ವಿಷ್ಣುವರ್ಧನ್ ಬಳಸಿದ್ದ ಕಲ್ಲನ್ನು ಗಿಫ್ಟ್ ನೀಡಲಿದ್ದಾರೆ ಚಿಕ್ಕಮಗಳೂರಿನ ಜನ

    ಚಿಕ್ಕಮಗಳೂರು: ಸಾಹಸಸಿಂಹ, ನಟ ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬಕ್ಕೆ ಅವರ ಕುಟುಂಬಸ್ಥರು ಹಾಗೂ ಪತ್ನಿ ಭಾರತಿ ವಿಷ್ಣುವರ್ಧನ್‍ಗೆ ಚಿಕ್ಕಮಗಳೂರಿನ ಜನ ಎಂದೂ ಮರೆಯದ ವಿಶೇಷವಾದ ಕಲ್ಲನ್ನು ಉಡುಗೊರೆಯಾಗಿ ನೀಡಲಿದ್ದಾರೆ.

    ಸ್ವತಃ ವಿಷ್ಣುವರ್ಧನ್ ಅವರೇ ಹಿಡಿದು ಚಿತ್ರಕ್ಕಾಗಿ ಬಳಸಿದ್ದ ಕಲ್ಲು. 45 ವರ್ಷಗಳಿಂದ ಆ ಸಾಧಾರಣ ಕಲ್ಲನ್ನು ರಕ್ಷಣೆ ಮಾಡಿಕೊಂಡು ಬಂದಿರುವ ಮಲೆನಾಡಿಗರು, ಈಗ ಆ ಕಲ್ಲನ್ನು ಅವರ ಕುಟುಂಬಸ್ಥರಿಗೆ ನೀಡಲು ಮುಂದಾಗಿದ್ದಾರೆ. ನೋಡೋಕೆ ಇದೊಂದು ಕಲ್ಲಷ್ಟೆ. ಆದರೆ ಈ ಕಲ್ಲನ್ನು ಹಿಡಿದು ವಿಷ್ಣುವರ್ಧನ್ ನಟಿಸಿದ್ದ ನಟನೆ, ತೋರಿದ ಭಾವ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರೋದಂತು ಸತ್ಯ. ಅಂತಹ ಕಲ್ಲನ್ನು ಭಾರತಿ ವಿಷ್ಣುವರ್ಧನ್ ಉಡುಗೊರೆಯಾಗಿ ಪಡೆಯಲಿದ್ದಾರೆ. ಇದನ್ನು ಓದಿ: ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    ಆ ಕಲ್ಲು ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಸಿನಿಮಾ, ‘ಭೂತಯ್ಯನಮಗ ಅಯ್ಯು’ ಚಿತ್ರದಲ್ಲಿ ವಿಷ್ಣುವರ್ಧನ್ ಕತ್ತಿಯನ್ನ ಮಸೆದ ಕಲ್ಲು. ಈ ಚಿತ್ರದ ಶೇಕಡ 60ರಷ್ಟು ಭಾಗ ಚಿತ್ರೀಕರಣಗೊಂಡಿದ್ದು ಚಿಕ್ಕಮಗಳೂರು ತಾಲೂಕಿನ ಕಳಸಾಪುರದಲ್ಲಿ. ಆ ಕಲ್ಲನ್ನು ಅದೇ ಊರಿನ ಜನ 45 ವರ್ಷಗಳಿಂದ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಹಳೇ ಮನೆಯಲ್ಲಿದ್ದ ಕಲ್ಲನ್ನು ಹೊಸ ಮನೆಗೂ ಕೊಂಡೊಯ್ದಿದ್ದಾರೆ. ಬೇರೆ-ಬೇರೆ ಸಿನಿಮಾದವರು ಶೂಟಿಂಗ್‍ಗೆ ಬಂದಾಗ ಕೇಳಿದಾಗಲು ಕೊಟ್ಟಿಲ್ಲ. ದುಡ್ ಕೊಡುತ್ತೇವೆ ಎಂದರು ಇಲ್ಲ ಅಂದಿದ್ದಾರೆ. ಈಗ ಆ ಕಲ್ಲನ್ನು ಊರಿನ ಯುವಕರು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಅವರ ಮನೆಯವರಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬದಂದು ಅವರ ಮನೆಗೆ ತೆರಳಿ ಭಾರತಿ ಅವರ ಕೈಗೆ ಅದನ್ನು ನೀಡಲು ಗ್ರಾಮದ ಯುವಕರು ನಿರ್ಧರಿಸಿದ್ದಾರೆ.

    ಊರಿನ ಜನ ಅದರಲ್ಲಿ ವಿಷ್ಣುವರ್ಧರನ್ನು ಕಾಣುತ್ತಿದ್ದು, ಅವರ ಮಾತು-ಕಥೆ, ಜನರೊಂದಿಗೆ ಬೆರೆಯುತ್ತಿದ್ದ ಅವರ ಮುಕ್ತ ಮನಸ್ಸನು ಆ ಕಲ್ಲಿನಲ್ಲಿ ಕಾಣುತ್ತಿದ್ದಾರೆ. 45 ವರ್ಷದಿಂದ ಯಾರಿಗೂ ಕೊಟ್ಟಿಲ್ಲ. 45 ವರ್ಷಗಳಿಂದ ವಿಷ್ಣು ಅವರ ವ್ಯಕ್ತಿತ್ವವನ್ನು ಕಲ್ಲಿನಲ್ಲಿ ಕಾಣುತ್ತಿದ್ದಾರೆ. ಇದು ಬದುಕಿನ ಸಾರ್ಥಕತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಭಾರತಿ ವಿಷ್ಣುವರ್ಧನ್ ಅವರ ಜೀವಮಾನದಲ್ಲಿ ಸಾವಿರಾರು, ಲಕ್ಷಾಂತರ ಉಡುಗೊರೆಗಳನ್ನ ಪಡೆದಿರಬಹುದು. ಆದರೆ ಈ ಉಡುಗೊರೆಯಂತಹಾ ಸ್ಪೆಷಲ್ ಗಿಫ್ಟ್ ಅವರಿಗೆ ಎಂದೂ ಸಿಕ್ಕಿರೋದಿಲ್ಲ ಎಂಬ ಭಾವನೆ ಯುವಕರದ್ದು.

    https://www.facebook.com/publictv/videos/2503585009931141/

  • ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    – ಮೆರವಣಿಗೆ ಜಾಗಕ್ಕೆ ಭೂತಯ್ಯನ ಸರ್ಕಲ್ ಹೆಸರು
    – ಕಟ್ಟೆ ಕಟ್ಟಿ ಹೂವಿನ ಗಿಡ ನೆಟ್ಟು ಮರ ರಕ್ಷಣೆ

    ಚಿಕ್ಕಮಗಳೂರು: ಭೂತಯ್ಯನ ಮಗ ಅಯ್ಯು. ಭಾರತೀಯ ಚಿತ್ರರಂಗದ ಜೀವಂತ ದಂತಕಥೆ. 50 ವರ್ಷಗಳಲ್ಲಿ ಸಾವಿರಾರು ಸಿನಿಮಾಗಳು ಬಂದರೂ ಜನಮಾನಸದಲ್ಲಿ ಹಚ್ಚಹಸಿರಾಗಿರೋ ಸಿನಿಮಾ. ಆ ಚಿತ್ರದ ಒಂದೊಂದು ದೃಶ್ಯವೂ ಒಂದೊಂದು ಇತಿಹಾಸ. ದೇವಯ್ಯ ನೇಣು ಹಾಕಿಕೊಂಡಿದ್ದು, ಭೂತಯ್ಯನ ಮೃತನ ದೇಹವನ್ನ ಊರಲ್ಲಿ ಮೆರವಣಿಗೆ ಮಾಡಿದ್ದು, ಎರಡು ರೂಪಾಯಿಯಲ್ಲಿ ನಾಲ್ವರು ಅನ್ನ… ಅನ್ನ…. ಅಂತ ಊಟ ಮಾಡಿದ್ದು. ಎಷ್ಟೇ ಬಾರಿ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಎನ್ನುವ ದೃಶ್ಯಗಳವು. ಆದ್ರೆ, ದೇವಯ್ಯ ನೇಣು ಹಾಕಿಕೊಂಡ ಮರ, ನಾಲ್ವರು ಊಟ ಮಾಡಿದ ಆ ಮನೆ ಇಂದಿಗೂ ಹಾಗೆಯೇ ಇದೆ.

    ಕಳಸಾಪುರ ಗ್ರಾಮದ ಮಧ್ಯೆ ಇರೋ ಈ ಮರವನ್ನ ಊರಿನ ಯುವಕರು ಮರದ ಸುತ್ತಲೂ ಕಟ್ಟೆ ಕಟ್ಟಿ ಮರದ ಸುತ್ತಲೂ ಹೂವಿನ ಗಿಡ ಹಾಕಿ ರಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿ ಕೂಡ ಹಾಗೆ ಇದ್ದು, ಮನೆಗಳಿಗೆ ಸುಣ್ಣ ಬಣ್ಣ ಬಳಿದಿರುವುದರಿಂದ ಹೊಸತು ಎಂದು ಅನ್ನಿಸಿಕೊಳ್ಳುತ್ತಿದೆ. ಊರಿನ ಜನ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿಗೆ ಭೂತಯ್ಯನ ಸರ್ಕಲ್ ಎಂದೇ ಹೆಸರಿಟ್ಟಿದ್ದಾರೆ. ಅಂದು ಚಿಕ್ಕ ಹುಡುಗರಾಗಿದ್ದವರು ವೃದ್ಧರಾಗಿ ಎಲ್ಲಾ ಜಾಗವನ್ನು ನೆನೆದು “ಇದೇ ಆ ಜಾಗ, ಇದೇ ಜಾಗ” ಎಂದು ಚಿತ್ರಕ್ಕಾಗಿ ಸಹಕರಿಸಿದ್ದನ್ನ ನೆನೆಯುತ್ತಿದ್ದಾರೆ. ಇದೇ ಚಿತ್ರದಲ್ಲಿ ವಿಷ್ಣುವರ್ಧನ್ ತಂದೆ ದೇವಯ್ಯನ ಪಾತ್ರಧಾರಿ ನೇಣು ಬಿಗಿದುಕೊಂಡಿದ್ದು ಇದೇ ಮರದಲ್ಲಿ.

    1974 ರಲ್ಲಿ ತೆರೆಕಂಡ ಸಿದ್ದಲಿಂಗಯ್ಯ ನಿರ್ದೇಶನದ ಭೂತಯ್ಯನಮಗ ಅಯ್ಯು ಚಿತ್ರದಲ್ಲಿ ಎರಡು ರೂಪಾಯಿಗೆ ನಾಲ್ವರು “ಅನ್ನ ಅನ್ನ” ಅಂತ ಊಟ ಮಾಡಿದ ಹೋಟೆಲ್ ಈಗಲೂ ಹಾಗೆಯೇ ಇದೆ. ಮನೆ ಚಿತ್ರಕ್ಕಾಗಿ ಹೋಟೆಲ್ ಮಾಡಿಕೊಂಡಿದ್ದರು. ಹೊಟೇಲ್ ಮಾಲೀಕನೊಂದಿಗೆ ನಟ ದಿನೇಶ್ ಹಾಗೂ ಸಹಚರರು ಕೂರುವುದಕ್ಕೂ ದುಡ್ ಕೊಡ್ಬೇಕಾ ಸ್ವಾಮಿ ಅಂದಿದ್ದು ಇದೇ ಜಾಗದಲ್ಲಿ. ಇಂದಿಗೂ ಆ ದೃಶ್ಯ ಕಂಡು ಜನ ಹುಸಿ ನಗ್ತಾರೆ. ಲೋಕನಾಥ್ ಉಪ್ಪಿನಕಾಯಿ ಜಾಡಿ ಕದಿಯುತ್ತಿದ್ದದ್ದು ಮನೆ, ವಿಷ್ಣುವರ್ಧನ್ ಮಚ್ಚನ್ನ ಮಸೆದ ಜಾಗ ಸೇರಿ ಚಿತ್ರದ ಒಂದೊಂದು ದೃಶ್ಯದ ಜಾಗ ಕಂಡು ಸಿನಿಮಾವನ್ನ ನೆನೆಯುತ್ತಿದ್ದಾರೆ.

    ಹತ್ತಾರು ಕೋಟಿ ಬಂಡವಾಳ ಹೂಡಿ ತೆಗೆದ ಸಿನಿಮಾಗಳು ನೂರು ದಿನ ಓಡುವಷ್ಟರಲ್ಲಿ ಮಕಾಡೆ ಮಲಗಿರುತ್ತದೆ. ಸಾಲದಕ್ಕೆ ಸಿನಿಮಾದ ಗೆಲುವಿಗಾಗಿ ಚಿತ್ರತಂಡ ಐಟಂ ಸಾಂಗ್, ಅದು-ಇದು ಅಂತೆಲ್ಲಾ ಸರ್ಕಸ್ ಮಾಡಿರುತ್ತದೆ. ಆದರೆ ಅಪ್ಪಟ ಹಳ್ಳಿ ಸೊಗಡಿನ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. 45 ವರ್ಷವಾದ್ರು ಈ ಚಿತ್ರದ ಒಂದೊಂದು ದೃಶ್ಯ ಕೂಡ ಗ್ರಾಮಸ್ಥರಿಗೆ ಕಣ್ಣಿಗೆ ಕಟ್ಟಿದಂತಿದೆ.