Tag: Bhoomi Pooja

  • ರಾಮ ಮಂದಿರ ಶಿಲಾನ್ಯಾಸಕ್ಕೆ ವಿಶೇಷ ಆಹ್ವಾನಿತನಾಗಿ ಹೊರಟಿದ್ದೇನೆ: ಮಾದಾರ ಚನ್ನಯ್ಯ ಸ್ವಾಮೀಜಿ

    ರಾಮ ಮಂದಿರ ಶಿಲಾನ್ಯಾಸಕ್ಕೆ ವಿಶೇಷ ಆಹ್ವಾನಿತನಾಗಿ ಹೊರಟಿದ್ದೇನೆ: ಮಾದಾರ ಚನ್ನಯ್ಯ ಸ್ವಾಮೀಜಿ

    – ಇಂದು ಸಂಜೆ ಹೊರಡಲು ಸಕಲ ಸಿದ್ಧತೆಗಳಾಗಿವೆ

    ಚಿತ್ರದುರ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸಮಸ್ತ ಭಾರತೀಯರ ಭಾವನೆಗಳ ಪ್ರತೀಕ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

    ನಗರದ ಮಾದಾರಚನ್ನಯ್ಯ ಗುರುಪೀಠದಲ್ಲಿ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ನಮಗೂ ಆಹ್ವಾನ ಬಂದಿದೆ. ಈ ಹಿನ್ನಲೆ ಇಂದು ಅಯೋಧ್ಯೆಗೆ ತೆರಳಲು ಸಕಲಸಿದ್ಧತೆಗಳಾಗಿವೆ. ಐತಿಹಾಸಿಕ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದು ಸಂತೋಷ ತಂದಿದೆ. ಇಂದು ಸಂಜೆ ಅಯೋಧ್ಯೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಸಾಕ್ಷೀಕರಿಸುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ ಎಂದರು.

    ರಾಮಮಂದಿರ ನಿರ್ಮಾಣದ ಈ ಸುವರ್ಣ ಸಮಯಕ್ಕೆ ದೇಶದ ಜನ ಕಾತುರರಾಗಿದ್ದಾರೆ. ಹೀಗಾಗಿ ರಾಮಮಂದಿರ ನಿರ್ಮಾಣ ಕಾರ್ಯ ಯಶಸ್ವಿಯಾಗಲಿ. ಅಯೋಧ್ಯೆಗೆ ನಮ್ಮೊಂದಿಗೆ ರಾಜ್ಯದ 8 ಜನ ಗಣ್ಯರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಲಾಗಿದೆ ಎಂಬ ಮಾಹಿತಿ ಇದೆ. ರಾಮ ಮಂದಿರದ ಹೋರಾಟ ಹುಟ್ಟಿದ ಸಂದರ್ಭದಲ್ಲಿ ನಾವೇ ಹುಟ್ಟಿರಲಿಲ್ಲ ಆದರೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಾವುಗಳು ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

    ದೇಶದಲ್ಲಿ ನಂಬಿಕೆಗಳ ಆಧಾರದ ಮೇಲೆ ಆಚರಣೆಗಳು ನಡೆಯುತ್ತವೆ. ಅಯೋಧ್ಯೆ ಎಂದರೆ ನಂಬಿಕೆಗಳ ಕರ್ಮಭೂಮಿ ಎಂಬ ಭಾವನೆ ಎಲ್ಲರಲ್ಲಿದೆ. ಇಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಈವರೆಗೆ ಭಾಗಿ ಆಗಿದ್ದೇವೆ. ಹೀಗಾಗಿ ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದನ್ನು ಪ್ರತ್ಯೇಕವಾಗಿ ಚಿಂತನೆ ಮಾಡುವಂಥದ್ದೇನು ಇಲ್ಲ ಎಂದರು.

  • ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ

    ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ

    ಲಕ್ನೋ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಐತಿಹಾಸಿಕ ಕ್ಷಣಕ್ಕೆ ಇನ್ನು ಎರಡು ದಿನ. ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಈ ಶುಭ ಸಂದರ್ಭಕ್ಕೆ ಅಯೋಧ್ಯೆ ಸಿಂಗಾರಗೊಂಡಿದೆ. ಕೊರೊನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.

    ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಯ ಐತಿಹಾಸಿಕ ಕ್ಷಣಕ್ಕಾಗಿ ರಾಮ ಮಂದಿರ ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ಪುರುಷೋತ್ತಮ ರಾಮನ ಮಂದಿರಕ್ಕಾಗಿ ಅಯೋಧ್ಯೆ ಭರ್ಜರಿಯಾಗಿ ಅಲಂಕೃತಗೊಂಡಿದೆ. ಭಾರೀ ಭದ್ರತೆಯನ್ನು ಸಹ ಕೈಗೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.

    ಮುಖ್ಯವೇದಿಕೆಯಲ್ಲಿ ಐವರಿಗೆ ಮಾತ್ರ ಸ್ಥಾನ ಕಲ್ಪಿಸಲಾಗುತ್ತಿದೆ. ಪ್ರಧಾನಿ ಮೋದಿ, ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ನೃತ್ಯ ಗೋಪಾಲದಾಸ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಸೇರಿದಂತೆ ಒಟ್ಟು ಐವರಷ್ಟೇ ವೇದಿಕೆ ಅಲಂಕರಿಸಲಿದ್ದಾರೆ. ಭದ್ರತಾ ಕಾರಣಗಳಿಂದಾಗಿ 200 ಗಣ್ಯರ ಬದಲಿಗೆ 170 ಗಣ್ಯರಿಗೆ ಅವಕಾಶ ನೀಡಲಾಗಿದೆ. ಮಂದಿರದ ಕನಸು ಕಂಡಿದ್ದ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗಿಯಾಗಲಿದ್ದಾರೆ.

    ಅಚ್ಚರಿ ತರುತ್ತೆ ಮಂದಿರ ತಂತ್ರಜ್ಞಾನ
    ಬರೋಬ್ಬರಿ 15 ಪೀಳಿಗೆಯಿಂದ ದೇಶ ಹಾಗೂ ವಿದೇಶಗಳಲ್ಲಿ 131 ದೇವಾಲಯಗಳ ವಿನ್ಯಾಸ ಮಾಡಿರುವ ಅಹಮದಾಬಾದ್‍ನ ಖ್ಯಾತ ಶಿಲ್ಪಿ ಚಂದ್ರಕಾಂತ್ ಸೋಂಪುರ ನೇತೃತ್ವದಲ್ಲಿ ಅವರ ಕುಟುಂಬ ಎಲ್ಲ ಕಾಲಕ್ಕೂ ಸಲ್ಲುವ, ಭವ್ಯ ರಾಮ ಮಂದಿರ ನಿರ್ಮಿಸಲಿದೆ.

    ವಿಶ್ವ ಹಿಂದೂ ಪರಿಷತ್ ಜೊತೆ ಸೇರಿ 1989ರಿಂದಲೇ ರಾಮಮಂದಿರ ವಿನ್ಯಾಸ ರೂಪಿಸಿದ್ದ ಚಂದ್ರಕಾಂತ್ ಸೋಂಪುರ, ಇದೀಗ ವಿನ್ಯಾಸದಲ್ಲಿ ಅಲ್ಪ ಮಾರ್ಪಾಡು ಮಾಡಿದ್ದಾರೆ. ನಾಗರ ಶೈಲಿಯಲ್ಲಿ ಮರ್ಯಾದ ಪುರುಷೋಷತ್ತಮ ಮಂದಿರ ನಿರ್ಮಾಣವಾಗಲಿದೆ. ಈ ಮೊದಲು 270 ಅಡಿ ಉದ್ದ, 145 ಅಡಿ ಅಗಲ, 141 ಅಡಿ ಎತ್ತರದ ಮಂದಿರ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ರಾಮಮಂದಿರ ಬರೋಬ್ಬರಿ 360 ಅಡಿ ಉದ್ದ, 235 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ.

    ಒಟ್ಟು 366 ಸ್ಥಂಭಗಳನ್ನು ಬಳಸಿ ದೇಗುಲ ನಿರ್ಮಾಣ
    ರಾಮ ಮಂದಿರದ ತಳಭಾಗ 25 ಅಡಿ ಇರಲಿದೆ. ಅದರ ಮೇಲೆ ಡಿಸೈನ್‍ನಲ್ಲಿ 6 ಅಡಿ ಆವರಣ ಇರಲಿದೆ. 16.03 ಅಡಿ ಎತ್ತರದ ಒಟ್ಟು 366 ಸ್ಥಂಭಗಳನ್ನು ಮಂದಿರ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ನೆಲಮಹಡಿಯಲ್ಲಿ 161 ಸ್ಥಂಭ ಇರಲಿದ್ದು, ಇಲ್ಲಿಯೇ ರಾಮನ ಮೂರ್ತಿ ನಿರ್ಮಾಣ ಮಾಡಲಾಗುತ್ತದೆ. ಮೊದಲ ಅಂತಸ್ತಿನಲ್ಲಿ ರಾಮ್‍ಲಲ್ಲಾನ ಗರ್ಭಗುಡಿ ಇರಲಿದೆ. ಇದು ಅಷ್ಟಭುಜಾಕೃತಿಯಲ್ಲಿ ಇರಲಿದೆ. ಇದರ ಪಕ್ಕದಲ್ಲೇ ರಾಮ್ ದರ್ಬಾರ್ ಪ್ರಾಂಗಣ, ಇದರ ಎಡಭಾಗದಲ್ಲಿ ನೃತ್ಯ ಮಂಟಪ, ಅದರ ಹಿಂಬದಿಯಲ್ಲಿ ರಂಗಮಂಟಪ ಇರಲಿದೆ.

    ಭೂಗರ್ಭದಲ್ಲಿ ಅಡಕವಾಗಲಿದೆ ಮಂದಿರ ಇತಿಹಾಸ
    ಮುಂದೆಂದೂ ರಾಮಜನ್ಮಭೂಮಿ ವಿವಾದ ತಲೆ ಎತ್ತಬಾರದು ಎಂಬ ಕಾರಣಕ್ಕೆ, ಮುಂದಿನ ತಲೆಮಾರುಗಳಿಗೆ ರಾಮಮಂದಿರದ ಭವ್ಯ ಐತಿಹ್ಯ ತಿಳಿಯಬೇಕು ಎಂಬ ಉದ್ದೇಶದಿಂದ ರಾಮಮಂದಿರದ 2 ಸಾವಿರ ಅಡಿ ಆಳದಲ್ಲಿ ಮಂದಿರದ ಸಂಪೂರ್ಣ ಇತಿಹಾಸವುಳ್ಳ ತಾಮ್ರದ ಕೆತ್ತನೆಯ ಸಂಪುಟ (ಟೈಮ್ ಕ್ಯಾಪ್ಸುಲ್) ಹುದುಗಿಸಿಡಲು ಸಿದ್ಧತೆ ನಡೆದಿದೆ.

  • ಅಯೋಧ್ಯೆ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು!

    ಅಯೋಧ್ಯೆ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು!

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರದಿಂದ ಸಾಗಿವೆ. ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಗೆ 1.25 ಲಕ್ಷದ ಮಣ್ಣಿನ ಹಣತೆಗಳು ತಯಾರಾಗುತ್ತಿವೆ.

    ಈ ಸಂಬಂಧ ಮಣ್ಣಿನ ಮಡಿಕೆ ತಯಾರಕರು ಮಾತನಾಡಿ, 1.25 ಲಕ್ಷ ಮಣ್ಣಿನ ಹಣತೆಗಳನ್ನು ಮಾಡಿಕೊಡುವಂತೆ ಆರ್ಡರ್ ಬಂದಿದೆ. ಈ ಗ್ರಾಮದಲ್ಲಿ ಸುಮಾರು 40 ಕುಟುಂಬಗಳಿವೆ. ಸದ್ಯ ನಾವು ಹಣತೆಗಳನ್ನು ಮಾಡುವ ಬ್ಯುಸಿಯಲ್ಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಇತ್ತ ಭಾನುವಾರ ಸಿಎಂ ಆದಿತ್ಯನಾಥ್ ಭೇಟಿ ನೀಡಲಿದ್ದಾರೆ. ಆದರೆ ಅಯೋಧ್ಯೆ ರಥಯಾತ್ರೆ ನಡೆಸಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಜಿ ಉಪ ಪ್ರಧಾನಿ ಎಲ್‍ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಗೆ ರಾಮಮಂದಿರ ಟ್ರಸ್ಟ್ ಆಹ್ವಾನ ನೀಡಿಲ್ಲ. ವೇದಿಕೆ ಮೇಲೆ ಅಲಂಕರಿಸುವ ಗಣ್ಯರ ಲಿಸ್ಟ್‍ನಲ್ಲಿ ಇವರಿಬ್ಬರ ಹೆಸರಿಲ್ಲ. ಇದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಫೋನ್ ಮೂಲಕ ಆಹ್ವಾನ ನೀಡೋದಾಗಿ ಟ್ರಸ್ಟ್ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಕೇಂದ್ರದ ಮಾಜಿ ಸಚಿವೆ ಉಮಾಭಾರತಿ, ಮಾಜಿ ಸಿಎಂ ಕಲ್ಯಾಣ್ ಸಿಂಗ್‍ಗೆ ಆಹ್ವಾನ ಹೋಗಿದೆ. ರಾಮಮಂದಿರ ನಿರ್ಮಾಣ ಟ್ರಸ್ಟಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಧನ ಸಂಗ್ರಹಕ್ಕೆ ಕೊಂಕು ನುಡಿದವರಿಗೆ ತಿರುಗೇಟು ನೀಡಿದ್ದಾರೆ. ಒಳ್ಳೆಯ ಕೆಲಸಕ್ಕೆ ವಿಘ್ನ ಎದುರಾಗೋ ಸಾಮಾನ್ಯ ಅಂತ ಮಂದಿರ ವಿರೋಧಿಗಳ ಕಿವಿ ಹಿಂಡಿದ್ದಾರೆ. ಇತ್ತ ತುಮಕೂರು ಗ್ರಾಮಾಂತರ ಬಳಿ ಶ್ರೀರಾಮ ಸೃಷ್ಟಿಸಿದ ಎನ್ನಲಾಧ ನಾಮದ ಚಿಲುಮೆಯ ನೀರನ್ನು ಅಯೋಧ್ಯೆಗೆ ಕಳಿಸಿಕೊಡಲಾಗಿದೆ.  ಇದನ್ನೂ ಓದಿ: ಅಯೋಧ್ಯೆಗೆ ದಾಳಿ ಮಾಡಲು ಐಎಸ್‍ಐ ಸಂಚು – ಗುಪ್ತಚರ ಇಲಾಖೆ

  • ರಾಮ ಮಂದಿರ ಶಿಲಾನ್ಯಾಸ- ಬೆಳಗ್ಗೆ 11.15ಕ್ಕೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮನ

    ರಾಮ ಮಂದಿರ ಶಿಲಾನ್ಯಾಸ- ಬೆಳಗ್ಗೆ 11.15ಕ್ಕೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮನ

    – ಐವರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ

    ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖ ಗಣ್ಯರ ಪಟ್ಟಿಯನ್ನು ಸಹ ಮಾಡಿಕೊಳ್ಳಲಾಗಿದೆ. ಈ ಪ್ರಕಾರ ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 11.15ಕ್ಕೆ ಅಯೋಧ್ಯೆಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಪ್ರಧಾನಿ ಮೋದಿ ಬೆಳಗ್ಗೆ 11.15ಕ್ಕೆ ಅಯೋಧ್ಯೆಗೆ ಆಗಮಿಸಿ ಸುಮಾರು ಮೂರು ಗಂಟೆಗಳ ಸಮಯವನ್ನು ಕಳೆಯಲಿದ್ದು, ಮಧ್ಯಾಹ್ನ 2ಕ್ಕೆ ಮತ್ತೆ ದೆಹಲಿಗೆ ಮರಳಿದ್ದಾರೆ ಎನ್ನಲಾಗಿದೆ.

    ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ಹನುಮಾನ್ ಗರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನಂತರ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆಯೋಜಕರು ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ ಸೇರಿ ವೇದಿಕೆ ಮೇಲೆ ಐದು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ರಾಮ ಮಂದಿರ ಟ್ರಸ್ಟ್‍ನ ಮುಖ್ಯಸ್ಥ ಮಹಾಂತ್ ನೃತ್ಯಗೋಪಾಲ್ ದಾಸ್ ವೇದಿಕೆ ಮೇಲೆ ಉಪಸ್ಥಿತರಿರಲಿದ್ದಾರೆ ಎಂದಿದ್ದಾರೆ.

    ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದ್ದು, ಉತ್ತರ ಪ್ರದೇಶ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರು ಭೂಮಿ ಪೂಜೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಿದ್ಧತೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

  • ರಾಮ ಮಂದಿರ ಶಿಲಾನ್ಯಾಸದ ದಿನ ಉಗ್ರರ ದಾಳಿ ಸಾಧ್ಯತೆ- ಗುಪ್ತಚರ ದಳ ಎಚ್ಚರಿಕೆ

    ರಾಮ ಮಂದಿರ ಶಿಲಾನ್ಯಾಸದ ದಿನ ಉಗ್ರರ ದಾಳಿ ಸಾಧ್ಯತೆ- ಗುಪ್ತಚರ ದಳ ಎಚ್ಚರಿಕೆ

    – ಜಮ್ಮು ಕಾಶ್ಮೀರ, ಅಯೋಧ್ಯೆಯಲ್ಲಿ ದಾಳಿಗೆ ಪ್ಲಾನ್
    – 370ನೇ ವಿಧಿ ರದ್ದತಿಗೆ ವರ್ಷ ತುಂಬುವ ಹಿನ್ನೆಲೆ ದಾಳಿಗೆ ಸಂಚು

    ನವದೆಹಲಿ: ಜಮ್ಮು ಕಾಶ್ಮೀರ ಹಾಗೂ ಅಯೋಧ್ಯೆಯ ರಾಮ ಮಂದಿರ ಶಿಲಾನ್ಯಾಸದ ವೇಳೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ.

    ಆಗಸ್ಟ್ 5 ರಂದು ಜಮ್ಮು ಕಾಶ್ಮೀರ ಹಾಗೂ ರಾಮ ಮಂದಿರ ಶಿಲಾನ್ಯಾಸ ನಡೆಯುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ದಳ ತಿಳಿಸಿದೆ. ಅಲ್ಲದೆ ಅಂದು 370ನೇ ವಿಧಿ ರದ್ದು ಪಡಿಸಿ ಒಂದು ವರ್ಷವಾಗಲಿದೆ. ಹೀಗಾಗಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲ ವಾರಗಳ ಹಿಂದೆ ಗುಪ್ತಚರ ದಳಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಆಕಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ.

    ಹಲವು ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಸ್ಪೆಷಲ್ ಸರ್ವೀಸ್ ಗ್ರೂಪ್ ಅಫ್ಘಾನಿಸ್ಥಾನದ ಜಲಾಲಾಬಾದ್‍ನಲ್ಲಿ ತರಬೇತಿ ನೀಡುತ್ತಿದ್ದು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದು ಪಡಿಸಿ ವರ್ಷ ತುಂಬುತ್ತಿರುವ ಹಿನ್ನೆಲೆ ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಗುಪ್ತಚರ ದಳ ವಿವರವಾದ ಮಾಹಿತಿ ನೀಡಿದ ಬಳಿಕ ಅಯೋಧ್ಯೆ, ದೆಹಲಿ ಹಾಗೂ ಜಮ್ಮು ಕಾಶ್ಮೀರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

    ಜಮ್ಮು ಕಾಶ್ಮೀರದಲ್ಲಿ ದಾಳಿ ನಡೆಸಲು ಜಾಲಾಬಾದ್‍ನಲ್ಲಿ ಸುಮಾರು 20 ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಎಸ್‍ಎಸ್‍ಜಿ ಸೇನೆ ತರಬೇತಿ ನೀಡಿದೆ. ಮೇ 26 ಹಾಗೂ ಮೇ 29ರ ಮಧ್ಯೆ ದಾಳಿ ನಡೆಸುವ ಸಾಧ್ಯತೆ ಇತ್ತು. ಆದರೆ ಭದ್ರತಾ ಸಿಬ್ಬಂದಿ ಹೆಚ್ಚು ಎಚ್ಚರಿಕೆ ವಹಿಸಿದ್ದರಿಂದ ದಾಳಿ ನಡೆಸಲು ಸಾಧ್ಯವಾಗಿಲ್ಲ ಎಂದು ಗುಪ್ತಚರ ದಳ ತಿಳಿಸಿದೆ.

    ಪಾಕಿಸ್ತಾನ ಸೇನೆ 20-25 ಉಗ್ರರನ್ನು ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮೂಲಕ ಹಾಗೂ ಇನ್ನೂ ಐದಾರು ಜನರನ್ನು ಭಾರತ-ನೇಪಾಳ ಗಡಿಯಿಂದ ಒಳ ನುಸುಳಲು ಸಹಾಯ ಮಾಡುತ್ತಿದೆ. ಹೀಗಾಗಿ ಎಲ್ಲ ಏಜೆನ್ಸಿಗಳನ್ನು ಹಾಗೂ ಪೊಲೀಸರನ್ನು ಎಸ್‍ಒಪಿಯಂತೆ ಎಚ್ಚರದಿಂದಿರಲು ಸೂಚಿಸಲಾಗಿದೆ.

    ಆಗಸ್ಟ್ 5ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ. ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕೇಂದ್ರ ಸಚಿವೆ ಉಮಾ ಭಾರತಿ ಹಾಗೂ ಆರ್‍ಎಸ್‍ಎಸ್‍ನ ಹಲವು ಗಣ್ಯರು ಭಾಗಿಯಾಗುವ ನಿರೀಕ್ಷೆ ಇದೆ.

  • ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಲಕ್ನೋ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ. ಕಾರ್ಯಕ್ರಮವನ್ನು ಟಿವಿಯಲ್ಲೇ ವೀಕ್ಷಿಸಿ ಎಂದು ಭಕ್ತರಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಮನವಿ ಮಾಡಿಕೊಂಡಿದೆ.

    ಆಗಸ್ಟ್ ರಂದು ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಆದರೆ ಕೋವಿಡ್ 19 ನಿಂದಾಗಿ ಯಾರೂ ಅಯೋಧ್ಯೆಗೆ ಬರಬೇಡಿ. ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಿ. ಅಲ್ಲದೆ ಅಂದು ಸಜೆ ಎಲ್ಲರೂ ದೀಪ ಬೆಳಗಿ ಎಂದು ಟ್ರಸ್ಟ್ ತಿಳಿಸಿದೆ.

    ರಾಮಮಂದಿರ ನಿರ್ಮಾಣವನ್ನು ಭೂಮಿ ಪೂಜೆಯ ಮೂಲಕ ಪ್ರಾರಂಭಿಸುವ ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 5ರಂದು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆ ಇದೆ. 3 ಅಥವಾ 5ರಂದು ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಆಗಮಿಸುವಂತೆ ಈಗಾಗಲೇ ಪ್ರಧಾನಿಯವರಿಗೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟ್ ಸದಸ್ಯರು ಮಾಹಿತಿ ನಿಡಿದ್ದಾರೆ.  ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಕೊರೊನಾ ವೈರಸ್ ಭೀತಿಯಿಂದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮಮಂದಿರ ಭೂಮಿ ಪೂಜೆ ನೆರವೇರಿಸಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ಭೂಮಿ ಪೂಜೆ ಕಾರ್ಯಕ್ರಮಕ್ಕೆ ನಾನು ಅಯೋಧ್ಯೆಗೆ ಹೋಗಬಲ್ಲೆ. ಆದರೆ ಲಕ್ಷಾಂತರ ರಾಮನ ಭಕ್ತರ ಕಥೆ ಏನು, ಅವರನ್ನು ನೀವು ತಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಮಾಡಿ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದರು. ಆದರೆ ಠಾಕ್ರೆ ಸಲಹೆಗೆ ವಿಶ್ವ ಹಿಂದೂ ಪರಿಷತ್ ಆಕ್ರೋಶ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಅಯೋಧ್ಯೆಗೆ ದಾಳಿ ಮಾಡಲು ಐಎಸ್‍ಐ ಸಂಚು – ಗುಪ್ತಚರ ಇಲಾಖೆ

  • ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಬೇಕೆಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಲಹೆಗೆ ವಿಶ್ವ ಹಿಂದೂ ಪರಿಷತ್ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಶಿವ ಸೇನೆ ಸುಖಾಸುಮ್ಮನೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಿರುಗೇಟು ನೀಡಿದೆ.

    ವಿಶ್ವ ಹಿಂದೂ ಪರಿಷತ್‍ನ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಉದ್ಧವ್ ಠಾಕ್ರೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದು ಅವರ ವಿತಂಡ ವಾದವನ್ನು ತೋರಿಸುತ್ತದೆ. ಬಾಳಾ ಸಾಹೇಬ್ ಠಾಕ್ರೆಯವರ ಪಕ್ಷದವರು ಈ ರೀತಿಯಾಗಿ ಹೇಳಿಕೆ ನೀಡಿದ್ದಕ್ಕೆ ನಾವು ಬೇಸರ ವ್ಯಕ್ತಪಡಿಸುತ್ತೇವೆ ಎಂದು ಹರಿಹಾಯ್ದಿದ್ದಾರೆ.

    ಭೂಮಿ ಪೂಜೆ ಅದೊಂದು ಶುಭ ಆಚರಣೆಯಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲು ಸಾಧ್ಯವಿಲ್ಲ. ಯಾವುದೇ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕಾದಲ್ಲಿ ಮಾತೃಭೂಮಿಗೆ ಪೂಜೆ ಸಲ್ಲಿಸಬೇಕು. ಭೂಮಿ ಅಗಿಯಲು ಹಾಗೂ ಕಟ್ಟಡ ನಿರ್ಮಾಣ ಮಾಡಲು ಅವಳ ಅನುಮತಿ ಪಡೆಯಬೇಕು. ಈ ಮೂಲಕ ನಮ್ಮ ಮುಂದಿನ ಯೋಜನೆಗೆ ಅವಳ ಆಶೀರ್ವಾದ ಪಡೆಯಬೇಕಿದೆ ಎಂದು ತಿಳಿಸಿದರು.

    ಕೊರೊನಾ ವೈರಸ್ ಹಿನ್ನೆಲೆ ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಬೇಕು ಎಂದು ಉದ್ಧವ್ ಠಾಕ್ರೆ ಸಾಮ್ನಾ ಪತ್ರಿಕೆಯಲ್ಲಿನ ಸಂದರ್ಶನದಲ್ಲಿ ಹೇಳಿದ್ದರು.

    ಈ ಕುರಿತು ವಿಶ್ವ ಹಿಂದೂ ಪರಿಷತ್ ನಾಯಕರು ಪ್ರತಿಕ್ರಿಯಿಸಿ, ಕೊರೊನಾ ವೈರಸ್ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಲ್ಲದೆ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಕೇವಲ 200 ಜನ ಭಾಗವಹಿಸುತ್ತಾರೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಈಗಗಲೇ ವಿಶ್ವ ಹಿಂದೂ ಪರಿಷತ್ ಹೇಳಿದೆ ಎಂದು ಉದ್ಧವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದೆ.

    ಇತ್ತೀಚೆಗೆ ಸಾಮ್ನಾದಲ್ಲಿ ಬಿತ್ತರವಾದ ಉದ್ಧವ್ ಠಾಕ್ರೆ ಅವರ ಸಂದರ್ಶನದಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದ್ದು, ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಬಹುದು. ಇದು ಸಂತಸದ ಕ್ಷಣವಾಗಿದೆ. ಹೀಗಾಗಿ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ನಾವು ಕೊರೊನಾ ಸೋಂಕು ಹೆಚ್ಚು ಹರಡಲು ಅವಕಾಶ ಮಾಡಿಕೊಡಬೇಕೆ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

    ಇದು ಸಾಮಾನ್ಯ ಮಂದಿರ ನಿರ್ಮಾಣದ ವಿಚಾರವಲ್ಲ, ಕೊರೊನಾ ಮಹಾಮಾರಿ ವಿರುದ್ಧ ಇಂದು ನಾವು ಹೋರಾಡುತ್ತಿದ್ದೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಹ ನಿಷೇಧ ಹೇರಲಾಗಿದೆ. ಭೂಮಿ ಪೂಜೆ ಕಾರ್ಯಕ್ರಮಕ್ಕೆ ನಾನು ಅಯೋಧ್ಯೆಗೆ ಹೋಗಬಲ್ಲೆ. ಆದರೆ ಲಕ್ಷಾಂತರ ರಾಮನ ಭಕ್ತರ ಕಥೆ ಏನು, ಅವರನ್ನು ನೀವು ತಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಮಾಡಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

    ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಸದಸ್ಯರ ಮಾಹಿತಿಯಂತೆ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಬಹುದು ಎಂದು ಹೇಳಲಾಗಿದೆ.

  • ದೊಡ್ಡಗೌಡ್ರ ಕುಟುಂಬವನ್ನು ಬಿಡದ ವಾಸ್ತು, ಶಾಸ್ತ್ರ- ಮಗನ ಮದ್ವೆಗೆ ಎಚ್‍ಡಿಕೆ ದಂಪತಿಯಿಂದ ಭೂಮಿಗೆ ಶಕ್ತಿ ಪೂಜೆ

    ದೊಡ್ಡಗೌಡ್ರ ಕುಟುಂಬವನ್ನು ಬಿಡದ ವಾಸ್ತು, ಶಾಸ್ತ್ರ- ಮಗನ ಮದ್ವೆಗೆ ಎಚ್‍ಡಿಕೆ ದಂಪತಿಯಿಂದ ಭೂಮಿಗೆ ಶಕ್ತಿ ಪೂಜೆ

    ರಾಮನಗರ: ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿವಾಹ ಕಾರ್ಯ ನಡೆಯಲಿರುವ ಅರ್ಚಕರಹಳ್ಳಿ ಸಮೀಪದ ಜಮೀನಿನಲ್ಲಿ ಶುಕ್ರವಾರ ಭೂಮಿಗೆ ಶಕ್ತಿ ತುಂಬುವ ವಿಶೇಷ ಪೂಜೆ-ಹವನಗಳನ್ನ ವಾಸ್ತುತಜ್ಞರು, ಅರ್ಚಕರ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದಂಪತಿ ನಡೆಸಲಿದ್ದಾರೆ.

    ಅಂದಹಾಗೇ 54 ಎಕರೆ ಪ್ರದೇಶದಲ್ಲಿ ನಡೆಯಲಿರುವ ಮದುವೆ ಪ್ರದೇಶದಲ್ಲಿ ಸೆಂಟ್ರೆಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆ ಹಾಗೂ ಉಳಿಕೆ ಭೂಮಿ ಸರ್ಕಾರಿ ಹಾಗೂ ಇತರರ ಒಡೆತನದಲ್ಲಿದೆ. ಹೀಗಾಗಿ ಮದುವೆ ಕಾರ್ಯಕ್ಕೆ ಯಾವುದೇ ವಿಘ್ನ ಉಂಟಾಗದಿರಲಿ ಎಂಬ ಉದ್ದೇಶದಿಂದ ಶುಭ ಶುಕ್ರವಾರ ವಿಶೇಷ ಪೂಜೆಯನ್ನ ಎಚ್‍ಡಿ ಕುಮಾರಸ್ವಾಮಿ ದಂಪತಿ ಹಮ್ಮಿಕೊಂಡಿದ್ದಾರೆ.

    ಮಹಾಶಿವರಾತ್ರಿ ದಿನವೇ ಭೂಮಿ ಪೂಜೆ ಸಲ್ಲಿಸಲು ಅನೇಕ ಕಾರಣಗಳಿವೆ ಎನ್ನಲಾಗಿದೆ. ಶಿವನಿಗೆ ಪ್ರಿಯವಾದ ದಿನ ಶುಭಲಗ್ನವಾದ ಬೆಳಗ್ಗೆ 7.30ರಿಂದ 9.35ರೊಳಗೆ ಪೂಜೆ ಸಲ್ಲಿಸಿದರೆ ಎಲ್ಲವೂ ಶುಭವಾಗಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಕುಟುಂಬ ಸಮೇತರಾಗಿ ಎಚ್‍ಡಿಕೆ ಪೂಜೆ ಸಲ್ಲಿಸಲಿದ್ದಾರೆ.

    ಇಷ್ಟು ಮಾತ್ರವಲ್ಲದೇ, ವಾಸ್ತು ಶಾಸ್ತ್ರದ ಪ್ರಕಾರವೇ ಮದುವೆ ಸೆಟ್ ಹಾಕಬೇಕಿರುವ ಹಿನ್ನೆಲೆಯಲ್ಲಿ ವಾಸ್ತು ತಜ್ಞರು ಈ ಪೂಜೆಯಲ್ಲಿ ಭಾಗಿಯಾಗಲಿದ್ದು, ವಾಸ್ತು ನಿವಾರಣಾ ಪೂಜೆಯನ್ನು ನಡೆಸಲಿದ್ದಾರೆ. ಜೋತಿಷಿಗಳು, ಶಾಸ್ತ್ರಿಗಳು, ವಾಸ್ತು ತಜ್ಞರು ಒಟ್ಟಿಗೆ ಪೂಜೆ ನೆರವೇರಿಸಲಿರುವುದು ಸಾಕಷ್ಟು ಕೂತುಹಲಕ್ಕೂ ಕಾರಣವಾಗಿದೆ.

    ವಿಘ್ನ ನಿವಾರಕ ಗಣಪನಿಗೆ ಮೊದಲ ಪೂಜೆ ಸಲ್ಲಿಸಿ, ಮದುವೆ ಸೆಟ್ ಹಾಕಲು ಭೂಮಿ ಪೂಜೆ ಸಹ ನಡೆಯಲಿದೆ. ಈಗಾಗಲೇ ಕುರುಚಲು ಕಾಡಿನಂತಿದ್ದ ಜಾಗವನ್ನ ಕಳೆದ ಐದು ದಿನಗಳಿಂದ ನಿರಂತರವಾಗಿ ಜೆಸಿಬಿ ಯಂತ್ರಗಳ ಮೂಲಕ ಸಮತಟ್ಟು ಮಾಡುವ ಕಾರ್ಯವನ್ನ ಮಾಡಲಾಗುತ್ತಿದೆ.