Tag: Bhoomi Pooja

  • ಅಯೋಧ್ಯೆ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದ ಟ್ರಸ್ಟ್ ಮುಖ್ಯಸ್ಥರಿಗೆ ಕೊರೊನಾ

    ಅಯೋಧ್ಯೆ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದ ಟ್ರಸ್ಟ್ ಮುಖ್ಯಸ್ಥರಿಗೆ ಕೊರೊನಾ

    – ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಗೆ ಆತಂಕ

    ಲಕ್ನೋ: ಶ್ರೀರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಮುಖ್ಯಸ್ಥ ಮಹಾಂತ್ ನಿತ್ಯ ಗೋಪಾಲದಾಸ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಧೃಢಪಟ್ಟಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವತಃ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

    ಮಹಾಂತ್ ನಿತ್ಯ ಗೋಪಾಲದಾಸ್ ಅವರನ್ನು ಆಸ್ಪತ್ರೆ ದಾಖಲಿಸಿದ್ದು, ಆರೋಗ್ಯ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಮಥುರಾ ಜಿಲ್ಲಾಧಿಕಾರಿಗಳಿಗೆ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಅಲ್ಲದೇ ಮಹಾಂತ್ ನಿತ್ಯ ಗೋಪಾಲದಾಸ್ ಆರೋಗ್ಯ ಸಂಬಂಧಿಸಿದ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

    ಮಹಾಂತ್ ಗೋಪಾಲದಾಸ್ ಅವರು ಅಗಸ್ಟ್ 5 ರಂದು ನಡೆದ ಶ್ರೀರಾಮನ ಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದರು. ಇದೇ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕೂಡಾ ಉಪಸ್ಥಿತರಿದ್ದರು. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಆತಂಕ ಹೆಚ್ಚಾಗಿದೆ.

  • ಹೊರಗಡೆ ದೇವರಿಲ್ಲ, ದೇವರು ನಮ್ಮ ಒಳಗಡೆಯೇ ಇದ್ದಾನೆ : ರಮ್ಯಾ

    ಹೊರಗಡೆ ದೇವರಿಲ್ಲ, ದೇವರು ನಮ್ಮ ಒಳಗಡೆಯೇ ಇದ್ದಾನೆ : ರಮ್ಯಾ

    ಬೆಂಗಳೂರು: ನಿಜವಾದ ಸಂತೋಷ ಒಗ್ಗಟ್ಟಿನಲ್ಲಿದೆ. ಹೊರಗಡೆ ದೇವರಿಲ್ಲ. ದೇವರು ನಮ್ಮ ಒಳಗಡೆಯೇ ಇದ್ದಾನೆ ಎಂದು ಕಾಂಗ್ರೆಸ್‌ ಮಾಜಿ ಸಂಸದೆ, ನಟಿ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಸಕ್ರಿಯವಾಗಿರುವರಮ್ಯಾ ಅವರು ರಾಮ ಮಂದಿರ ವಿಚಾರವಾಗಿ ಮೊದಲ ಬಾರಿಗೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    https://www.facebook.com/ramyaactressofficial/posts/10158218252710196

    ಹಿಂದೂಗಳು ಸಂತೋಷದಿಂದ ರಾಮ ಮಂದಿರ ನಿರ್ಮಾಣ ಮಾಡಲು ಮುಂದಾಗುತ್ತಿರುವುದನ್ನು ಕಂಡು ನನಗೆ ಸಂತಸವಿದೆ. ಮುಸ್ಲಿಮರು ಸಂತೋಷದಿಂದ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದನ್ನು ನೋಡಿ ನನಗೆ ಸಂತಸವಿದೆ. ಆದರೆ ಇಬ್ಬರೂ ಸಂತೋಷವಾಗಿರಲು ಅಥವಾ ದೇವರನ್ನು ಅರಿತುಕೊಳ್ಳಲು ದೇವಾಲಯ ಅಥವಾ ಮಸೀದಿ ಅಗತ್ಯವಿಲ್ಲ ಎಂದು ಅವರಿಗೆ ತಿಳಿದಾಗ ನನಗೆ ಹೆಚ್ಚು ಸಂತೋಷವಾಗುತ್ತದೆ. ನಿಜವಾದ ಸಂತೋಷ ಏಕತೆ/ ಒಗ್ಗಟ್ಟಿನಲ್ಲಿದೆ. ಹೊರಗಡೆ ದೇವರಿಲ್ಲ. ದೇವರು ನಮ್ಮ ಒಳಗಡೆಯೇ ಇದ್ದಾನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

    ರಾಜಕೀಯಕ್ಕೆ ಬಲಿಯಾಗಬೇಡಿ. ರಾಜಕೀಯ ಶಕ್ತಿ ಮತ್ತು ನಿಯಂತ್ರಣಕ್ಕಾಗಿ ಸೃಷ್ಟಿಸುವ ಬಿಕ್ಕಟ್ಟಿಗೆ ಬಲಿಯಾಗಬೇಡಿ. ಪ್ರಶ್ನಿಸುವ ಮೂಲಕ ಉತ್ತುಂಗಕ್ಕೆ ಏರಿ ಎಂದು ಹೇಳಿದ್ದಾರೆ.

    ಬುಧವಾರ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿದ್ದರು. ಗರ್ಭಗುಡಿ ನಿರ್ಮಾಣವಾಗುವ ಜಾಗದಲ್ಲಿ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ಭೂಮಿ ಪೂಜೆ ಕಾಯಕ್ರಮ ನಡೆದಿತ್ತು.

  • ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ – ಮೂರು ಬಾರಿ ಮೊಳಗಿತು ಕರ್ನಾಟಕದ ಕಂಪು

    ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ – ಮೂರು ಬಾರಿ ಮೊಳಗಿತು ಕರ್ನಾಟಕದ ಕಂಪು

    ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಭೂಮಿ ಪೂಜೆಯ ವೇದಿಕೆಯ ಕಾರ್ಯಕ್ರಮದಲ್ಲಿ ಕರ್ನಾಟಕದ ಕಂಪು ಮೊಳಗಿದೆ.

    ಮಧ್ಯಾಹ್ನ ಗರ್ಭಗುಡಿ ಇರುವ ಜಾಗದಲ್ಲಿ ಭೂಮಿ ಪೂಜೆ ನಡೆದ ಬಳಿಕ ವೇದಿಕೆಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮೂರು ಬಾರಿ ಕರ್ನಾಟಕ ಪ್ರಸ್ತಾಪವಾಯಿತು.

    ವೇದಿಕೆಯಲ್ಲಿ ಬಟನ್‌ ಒತ್ತುವ ಮೂಲಕ ಮೋದಿ ಶಿಲಾಫಲಕವನ್ನು ಅನಾವರಣಗೊಳಿಸಿದರು. ಇದಾದ ಬಳಿಕ ಪ್ರಧಾನಿಯನ್ನು ಕೋದಂಡರಾಮನ ವಿಗ್ರಹವನ್ನು ನೀಡುವ ಮೂಲಕ ಗೌರವಿಸಲಾಯಿತು. ಈ ವೇಳೆ ನಿರೂಪಕರು ಕರ್ನಾಟಕದಿಂದ ಈ ವಿಗ್ರಹವನ್ನು ತರಲಾಗಿದೆ ಎಂದು ತಿಳಿಸಿದರು.

    ಬೆಂಗಳೂರಿನ ಕೆಂಗೇರಿಯ ನಾಗದೇವನಹಳ್ಳಿಯ ನಿವಾಸಿ ರಾಮಮೂರ್ತಿ ಅವರು ಈ ಮೂರ್ತಿಗಳನ್ನು  ತಯಾರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ರಮಕ್ಕೆ ಮುನ್ನ ಈ ಮೂರ್ತಿಗಳು ಉತ್ತರ ಪ್ರದೇಶಕ್ಕೆ ತಲುಪಿದ್ದವು. ಉತ್ತರ ಪ್ರದೇಶ ಸರ್ಕಾರದ ಬೇಡಿಕೆ ಮೇರೆಗೆ ಕೋದಂಡರಾಮನ ಪ್ರತಿಮೆಯನ್ನು ಮಾಡಲಾಗಿತ್ತು. ಜುಲೈ 31 ರಂದು ರಾಮ, ಲವ, ಕುಶ ಮೂರು ಮೂರ್ತಿಗಳು ರವಾನೆಯಾಗಿದ್ದವು. ಇಂದು ನಡೆದ ಕಾರ್ಯಕ್ರಮದಲ್ಲಿ ಗಣ್ಯರಿಗೆ ಉಡುಗೊರೆಯಾಗಿ ನೀಡಲಾಗಿದೆ.

    ತೇಗದ ಮರದಿಂದ ರಾಮ ಮೂರ್ತಿಯನ್ನು ಮಾಡಲಾಗಿದೆ. ಕೋದಂಡರಾಮನ ಪ್ರತಿಮೆ ಮೂರು ಅಡಿ ಇದೆ. ಲವ-ಕುಶ ಒಂದೂವರೆ ಅಡಿ, ಮತ್ತೊಂದು ರಾಮನ ಮೂರ್ತಿ ಒಂದೂವರೆ ಅಡಿ ಇದೆ.

    ಇದಾದ ಬಳಿಕ ಕರ್ನಾಟಕದ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನನ್ನನ್ನು ಆಹ್ವಾನಿಸಿರುವುದು ನನ್ನ ಅದೃಷ್ಟ. ಕನ್ಯಾಕುಮರಿಯಿಂದ ಕ್ಷೀರಭವಾವನಿಯವರೆಗೆ, ಕೋಟೇಶ್ವರದಿಂದ ಕಾಮಾಖ್ಯದವರೆಗೆ, ಜಗನ್ನಾಥನಿಂದ ಕೇದಾರನಾಥದವರೆಗೆ, ಸೋಮನಾಥದವರೆಗೆ ಕಾಶಿ ವಿಶ್ವನಾಥ್, ಸಮ್ಮೇದ ಶಿಖರ್ಜಿಯಿಂದ ಶ್ರವಣಬೆಳಗೊಳದವರೆಗೆ …. ಇಂದು ಇಡೀ ದೇಶ, ವಿಶ್ವ ಭಗವಾನ್ ರಾಮನ ಘೋಷಣೆಯಲ್ಲಿ ಮುಳುಗಿದೆ ಎಂದು ಹೇಳಿದರು.

    ನಂತರ ರಾಮಾಯಣದ, ರಾಮನ ವ್ಯಕ್ತಿತ್ವದ ಬಗ್ಗೆ ಮೋದಿ ಮಾತನಾಡಿದರು. ದೇಶದಲ್ಲಿ ಹಲವಾರು ಭಾಷೆಗಳಲ್ಲಿ ರಾಮಾಯಣ ಬರೆಯಲಾಗಿದೆ. ಈ ವೇಳೆ ಕರ್ನಾಟಕದ ನಾಗಚಂದ್ರ ಬರೆದ ಕುಮದೇಂದು ರಾಮಾಯಣದ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದರು.

    ನಾಗಚಂದ್ರನಿಗೆ ಅಭಿನವ ಪಂಪ ಎಂಬ ಬಿರುದು ಇದೆ. ಇವನು ರಾಮಚಂದ್ರ ಚರಿತ ಪುರಾಣ ಮತ್ತು ಮಲ್ಲಿನಾಥ ಪುರಾಣ ಎಂಬ ಎರಡು ಚಂಪೂ ಕಾವ್ಯಗಳನ್ನು ರಚಿಸಿದ್ದಾನೆ. ರಾಮಚಂದ್ರ ಪುರಾಣಕ್ಕೆ ಪಂಪರಾಮಾಯಣವೆಂದೂ ಕರೆಯುತ್ತಾರೆ.

  • ಬಾಬ್ರಿ ಮಸೀದಿ ಇತ್ತು, ಮುಂದೆಯೂ ಇರಲಿದೆ: ಭೂಮಿ ಪೂಜೆಗೂ ಮುನ್ನ ಓವೈಸಿ ಟ್ವೀಟ್

    ಬಾಬ್ರಿ ಮಸೀದಿ ಇತ್ತು, ಮುಂದೆಯೂ ಇರಲಿದೆ: ಭೂಮಿ ಪೂಜೆಗೂ ಮುನ್ನ ಓವೈಸಿ ಟ್ವೀಟ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದಕ್ಕೂ ಮೊದಲು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ”ಬಾಬ್ರಿ ಮಸೀದಿ ಇತ್ತು. ಇನ್ನು ಮುಂದೆಯೂ ಇರಲಿದೆ ಇನ್ಷಾ ಅಲ್ಲಾಹ್” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಬಾಬ್ರಿ ಮಸೀದಿ ಹಾಗೂ ಅದರ ಧ್ವಂಸಕ್ಕೆ ಕುರಿತಾದ ಎರಡು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

    ಈ ಹಿಂದೆ ಟ್ವೀಟ್ ಮಾಡಿದ್ದ ಓವೈಸಿ, ಕರ್ತವ್ಯದಲ್ಲಿದ್ದಾಗ ಪ್ರಧಾನಮಂತ್ರಿಗಳು ಭೂಮಿ ಪೂಜೆಗೆ ಹಾಜರಾದರೆ ಅದು ಸಾಂವಿಧಾನಿಕ ಪ್ರಮಾಣವಚನದ ಉಲ್ಲಂಘನೆಯಾದಂತೆ. ಜಾತ್ಯತೀತತೆಯು ಸಂವಿಧಾನದ ಮೂಲ ರಚನೆಯ ಒಂದು ಭಾಗವಾಗಿದೆ. 1992ರಲ್ಲಿ ಕ್ರಿಮಿನಲ್ ಜನಸಮೂಹದಿಂದ ನೆಲಸಮಗೊಳ್ಳುವ ಮೊದಲು 400 ವರ್ಷಗಳ ಕಾಲ ಬಾಬ್ರಿ ಮಸೀದಿ ಅಯೋಧ್ಯೆಯಲ್ಲಿತ್ತು ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.

    ಸುಪ್ರೀಂ ತೀರ್ಪು:
    ವಿವಾದಾತ್ಮಕವಾಗಿದ್ದ ರಾಮಮಂದಿರ ಹಾಗೂ ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ತೀರ್ಪಿನಲ್ಲಿ ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕೆ 5 ಎಕ್ರೆ ಪ್ರತ್ಯೇಕ ಜಾಗ ನೀಡಬೇಕೆಂದು ಎಂದು ಹೇಳಿತ್ತು.

    ಮುಸ್ಲಿಮರಿಗೆ 5 ಎಕರೆ ಪರ್ಯಾಯ ಭೂಮಿ ನೀಡಬೇಕು. ದೇವಸ್ಥಾನ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸಬೇಕು. ರಾಮ ಮಂದಿರ ನಿರ್ಮಾಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ದೇವಸ್ಥಾನ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪಿಸಬೇಕು. ವಿವಾದಿತ 2.77 ಎಕರೆಯಲ್ಲಿ ಕೇವಲ ರಾಮಲಲ್ಲಾಗಷ್ಟೇ ಅಧಿಕಾರವಿದೆ. ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಬಾಬರ್ ಕಮಾಂಡರ್ ಮೀರ್ ಬಾಕಿ ಬಾಬ್ರಿ ಮಸೀದಿ ನಿರ್ಮಿಸಿದ್ದಾನೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

  • ಟೆಂಟ್‌ನಲ್ಲಿದ್ದ ಶ್ರೀರಾಮನಿಗೆ ಭವ್ಯ ದೇವಾಲಯ – ಭಾಷಣದಲ್ಲಿ ಶ್ರವಣಬೆಳಗೊಳವನ್ನು ಉಲ್ಲೇಖಿಸಿದ ಮೋದಿ

    ಟೆಂಟ್‌ನಲ್ಲಿದ್ದ ಶ್ರೀರಾಮನಿಗೆ ಭವ್ಯ ದೇವಾಲಯ – ಭಾಷಣದಲ್ಲಿ ಶ್ರವಣಬೆಳಗೊಳವನ್ನು ಉಲ್ಲೇಖಿಸಿದ ಮೋದಿ

    – ರಾಮನ ಅಸ್ತಿತ್ವವನ್ನು ನಾಶ ಮಾಡುವ ಪ್ರಯತ್ನ ನಡೆದಿತ್ತು
    – ಸುವರ್ಣ ಅಧ್ಯಾಯ ಪ್ರಾರಂಭ

    ಅಯೋಧ್ಯೆ: ಟೆಂಟ್‌ನಲ್ಲಿದ್ದ ಶ್ರೀರಾಮನಿಗೆ ಭವ್ಯವಾದ ದೇವಾಲಯ ನಿರ್ಮಾಣವಾಗಲಿದೆ. ಈ ರಾಮಮಂದಿರ ನಮ್ಮ ಸಂಪ್ರದಾಯಗಳ ಆಧುನಿಕ ಸಂಕೇತವಾಗಲಿದೆ. ಇದು ನಮ್ಮ ಭಕ್ತಿಯ, ನಮ್ಮ ರಾಷ್ಟ್ರೀಯ ಭಾವನೆಯ ಸಂಕೇತವಾಗಲಿದೆ. ಈ ದೇವಾಲಯವು ಕೋಟಿ ಜನರ ಸಾಮೂಹಿಕ ನಿರ್ಣಯದ ಶಕ್ತಿಯನ್ನು ಸಂಕೇತ. ಇದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ರಾಮ ಮಂದಿರ ಭೂಮಿಪೂಜೆಯ ಬಳಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ರಾಮನ ಅಸ್ತಿತ್ವವನ್ನು ನಾಶ ಮಾಡುವ ಪ್ರಯತ್ನ ನಡೆದಿತ್ತು. ಆದರೆ ರಾಮ ನಮ್ಮ ಜೊತೆಯಿದ್ದ. ರಾಮನಿಗೆ ಎಲ್ಲ ಪ್ರಜೆಗಳು ಒಂದೇ . ಭಾರತದ ಏಕತೆಯ ಪ್ರತಿರೂಪ ರಾಮ ಎಂದು ಬಣ್ಣಿಸಿದರು.

    ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನನ್ನನ್ನು ಆಹ್ವಾನಿಸಿರುವುದು ನನ್ನ ಅದೃಷ್ಟ. ಕನ್ಯಾಕುಮರಿಯಿಂದ ಕ್ಷೀರಭವಾವನಿಯವರೆಗೆ, ಕೋಟೇಶ್ವರದಿಂದ ಕಾಮಾಖ್ಯದವರೆಗೆ, ಜಗನ್ನಾಥನಿಂದ ಕೇದಾರನಾಥದವರೆಗೆ, ಸೋಮನಾಥದವರೆಗೆ ಕಾಶಿ ವಿಶ್ವನಾಥ್, ಶಿಖರ್ಜಿಯಿಂದ ಶ್ರವಣಬೆಳಗೊಳದವರೆಗೆ …. ಇಂದು ಇಡೀ ದೇಶ, ವಿಶ್ವ ಭಗವಾನ್ ರಾಮನ ಘೋಷಣೆಯಲ್ಲಿ ಮುಳುಗಿದೆ ಎಂದು ಹೇಳಿದರು.

    ಭಾಸ್ಕರ ಸನ್ನಿಧಿಯಲ್ಲಿ ಸರಯೂ ನದಿ ತೀರದಲ್ಲಿ ಸುವರ್ಣ ಅಧ್ಯಾಯ ಪ್ರಾರಂಭಗೊಂಡಿದೆ. ಅಯೋಧ್ಯೆ ರಾಮ ಜನ್ಮಭೂಮಿ ಇವತ್ತು ಮುಕ್ತವಾಗಿದೆ. ಅರ್ಪಣ, ತರ್ಪಣ, ಸಂಘರ್ಷ, ಸಂಕಲ್ಪದ ಕನಸು ಈಗ ನನಸಾಗಿದೆ ಎಂದು ತಿಳಿಸಿದರು.

    ಇಂಡೋನೇಷ್ಯಾದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದ್ದರೂ ಅಲ್ಲಿಯೂ ರಾಮಾಯಣವಿದೆ. ಕಾಂಬೋಡಿಯದಲ್ಲಿ ರಾಮನಿದ್ದಾನೆ. ಶ್ರೀಲಂಕಾದಲ್ಲೂ ರಾಮಾಯಣವಿದೆ. ರಾಮನ ಚರಿತ್ರೆಯನ್ನು ನಾವೆಲ್ಲ ಅಧ್ಯಯನ ಮಾಡಬೇಕು. ಶ್ರೀರಾಮನ ಸಾಮಾಜಿಕ ಸಾಮಾರಸ್ಯ ನಮಗೆ ಆದರ್ಶವಾಗಬೇಕು ಎಂದು ಕರೆ ನೀಡಿದರು.

    ಎಲ್ಲರ ಸಹಕಾರದಿಂದ ಈ ದೇವಾಲಯ ನಿರ್ಮಾಣವಾಗುತ್ತಿದೆ. ಇತಿಹಾಸವು ಇಂದು ಕೇವಲ ಸೃಷ್ಟಿಯಾಗುತ್ತಿಲ್ಲ, ಅದು ಸ್ವತಃ ಪುನರಾವರ್ತನೆಯಾಗುತ್ತಿದೆ. ಇಲ್ಲಿ ದೇವಾಲಯ ಮಾತ್ರ ಆರಂಭವಾಗುತ್ತಿಲ್ಲ. ಈ ಪ್ರದೇಶಕ್ಕೆ ಹೊಸ ಆರ್ಥಿಕ ಅವಕಾಶಗಳನ್ನು ತೆರೆಯಲಿದೆ ಎಂದು ಮೋದಿ ಹೇಳಿದರು.

  • ಅಯೋಧ್ಯೆಯಲ್ಲಿ ಭೂಮಿ ಪೂಜೆ – ರಾವಣ ದೇವಾಲಯದಲ್ಲಿ ಸಂಭ್ರಮಾಚರಣೆ

    ಅಯೋಧ್ಯೆಯಲ್ಲಿ ಭೂಮಿ ಪೂಜೆ – ರಾವಣ ದೇವಾಲಯದಲ್ಲಿ ಸಂಭ್ರಮಾಚರಣೆ

    ಅಯೋಧ್ಯೆ: ಇಂದು ರಾಮಜನ್ಮ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದರೆ ರಾವಣ ದೇವಾಲಯದಲ್ಲೂ ಸಂಭ್ರಮ ಮನೆ ಮಾಡಿದೆ.

    ಅಯೋಧ್ಯೆಯಿಂದ 650 ಕಿ.ಮೀ, ಗ್ರೇಟರ್‌ ನೋಯ್ಡಾದಿಂದ 10 ಕಿ.ಮೀ ದೂರದಲ್ಲಿರುವ ಗೌತಮ ಬುದ್ಧ ನಗರದ ಬಿಸ್ರಾಕ್‌ ಎಂಬಲ್ಲಿ ರಾವಣ ದೇವಾಲಯವಿದೆ. ಈ ದೇವಾಲಯದ ಅರ್ಚಕ ಮಹಾಂತ ರಾಮದಾಸ್‌ ಅವರು ಭೂಮಿ ಪೂಜೆ ನಡೆದ ಬಳಿಕ ಸಹಿ ಹಂಚಿ ಸಂಭ್ರಮಿಸುವುದಾಗಿ ಹೇಳಿದ್ದಾರೆ.

    ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವು, ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯುತ್ತಿರುವುದು ಸಂಭ್ರಮ ತಂದಿದೆ. ನಾನು ಲಾಡು ಹಂಚುವ ಮೂಲಕ ಈ ದಿನವನ್ನು ಸಂಭ್ರಮಿಸುತ್ತೇನೆ. ಈ ಜಾಗದಲ್ಲಿ ದೊಡ್ಡ ದೇವಾಲಯ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

    ಒಂದು ವೇಳೆ ರಾವಣ ಇಲ್ಲದೇ ಇದ್ದರೆ ರಾಮನ ಶಕ್ತಿ ಪ್ರಪಂಚಕ್ಕೆ ತಿಳಿಯುತ್ತಿರಲಿಲ್ಲ. ಒಂದು ವೇಳೆ ರಾಮ ಇಲ್ಲದೇ ಇದ್ದರೆ ರಾವಣ ಯಾರೂ ಎನ್ನುವುದು ಗೊತ್ತಾಗುತ್ತಿರಲಿಲ್ಲ ಎಂದು ತಿಳಿಸಿದರು.

    ರಾವಣ ಬಹಳ ಜ್ಞಾನವಂತ ವ್ಯಕ್ತಿ. ಸೀತೆಯನ್ನು ಅಪಹರಣ ಮಾಡಿದ ಬಳಿಕ ಆತ ನೇರವಾಗಿ ಅರಮನೆಗೆ ಕರೆದುಕೊಂಡು ಹೋಗಲಿಲ್ಲ. ಅಶೋಕವನದಲ್ಲಿ ಇಟ್ಟು ಆಕೆಯ ಭದ್ರತೆಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಿದ್ದ. ರಾಮನನ್ನು ನಾವು ಮರ್ಯಾದಾ ಪುರೋಷೋತ್ತಮ ಎಂದು ಕರೆಯುತ್ತೇವೆ. ಅದೇ ರೀತಿಯಾಗಿ ರಾವಣನೂ ಸೀತೆಗೆ ಹಿಂಸೆ ನೀಡದೇ ಘನತೆಯನ್ನು ಎತ್ತಿ ಹಿಡಿದಿದ್ದ ಎಂದು ಹೇಳುತ್ತಾರೆ.

    ಬಿಸ್ರಾಕ್‌ ರಾವಣನ ಜನ್ಮ ಸ್ಥಳವೆಂದು ಕಥೆಗಳು ಹೇಳುತ್ತವೆ. ಹೀಗಾಗಿ ಈ ಗ್ರಾಮದಲ್ಲಿ ರಾವಣನ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ರಾವಣ ಅಲ್ಲದೇ ಶಿವ, ಪಾರ್ವತಿ, ಕುಬೇರನ ದೇವಾಲಯವಿದೆ. ದೇವಾಲಯಕ್ಕೆ ಬರುವ ಶೇ.20 ರಷ್ಟು ಮಂದಿ ರಾವಣನನ್ನು ಪೂಜಿಸುತ್ತಾರೆ ಎಂದು ಮಹಾಂತ ರಾಮದಾಸ್‌ ಹೇಳುತ್ತಾರೆ.

  • ಬಿಎಸ್‍ವೈ, ಸಿ.ಟಿ ರವಿ 18 ದಿನ ಅಯೋಧ್ಯೆಯಲ್ಲಿ ಭಾಗಿಯಾಗಿದ್ದು ಈಗ ತೃಪ್ತಿ ತಂದಿದೆ: ಅಶೋಕ್

    ಬಿಎಸ್‍ವೈ, ಸಿ.ಟಿ ರವಿ 18 ದಿನ ಅಯೋಧ್ಯೆಯಲ್ಲಿ ಭಾಗಿಯಾಗಿದ್ದು ಈಗ ತೃಪ್ತಿ ತಂದಿದೆ: ಅಶೋಕ್

    – ರಾಜ್ಯದ ಜನರಲ್ಲಿ ಸಿಎಂ ಮನವಿ
    – ನಳಿನ್, ಸುಧಾಕರ್, ಸಿ.ಟಿ ರವಿ ಹೇಳಿದ್ದೇನು?

    ಬೆಂಗಳೂರು: ಶತಶತಮಾನದ ಕನಸಿನ ರಾಮಮಂದಿರ ನಿರ್ಮಾರ್ಣಕ್ಕಾಗಿ ಅಯೋಧ್ಯೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೇರವೇರಲಿದ್ದು, ಈ ಹಿನ್ನೆಲೆಯಲ್ಲಿ ಗಣ್ಯರು ಶುಭಹಾರೈಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಆರ್ ಅಶೋಕ್, ರಾಮ ಮಂದಿರ ನಿರ್ಮಾಣ ಸಲುವಾಗಿನ ಹೋರಾಟದಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಹಾಗೂ ಸಿ.ಟಿ ರವಿ ಅವರೊಂದಿಗೆ 18ದಿನಗಳ ಕಾಲ ಅಯೋಧ್ಯಾದಲ್ಲಿ ಭಾಗವಹಿಸಿದ್ದು ನಮಗೀಗ ತೃಪ್ತಿ ತಂದಿದೆ. ರಾಮಮಂದಿರ ನಿರ್ಮಾಣದ ಈ ಶತಶತಮಾನಗಳ ನಮ್ಮ ಮಹದಾಸೆ ಇಂದು ಪ್ರಧಾನಿ ಮೋದಿಯವರು ಭೂಮಿಪೂಜೆ ಸಲ್ಲಿಸಿ ನನಸಾಗಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    ಭೂಮಿಪೂಜೆಯ ಬಗ್ಗೆ ಮಂಗಳವಾರವೇ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿರುವ ಸಿಎಂ ಬಿಎಸ್‍ವೈ, ಪ್ರಧಾನಿ ನರೇಂದ್ರ ಮೋದಿಯವರು ನಾಳೆ(ಬುಧವಾರ) ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ, ನಾಡಿನ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿ ಇದ್ದಲ್ಲಿಂದಲೇ ವಿಶೇಷವಾಗಿ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವೀಟ್ ಮಾಡಿ, ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ, ನಾಡಿನ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿ ವಿಶೇಷವಾಗಿ ಪ್ರಾರ್ಥಿಸೋಣ ಎಂದಿದ್ದಾರೆ. ಇದನ್ನೂ ಓದಿ: ಸುತ್ತ 4 ಚಿಕ್ಕ ಮಂದಿರ – ರಾಮಮಂದಿರದ ಹೊರಗಡೆ ಏನೇನು ಇರಲಿದೆ?

    ಸಚಿವ ಸಿ.ಟಿ ರವಿ, ಶತಕೋಟಿ ಭಾರತೀಯರ ಶತಮಾನಗಳ ಹೋರಾಟದ ಫಲ, ಅಯೋದ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರದ ಭೂಮಿಪೂಜೆಯನ್ನು ಪ್ರಧಾನಿಯವರ ನೇತೃತ್ವದಲ್ಲಿ ನಡೆಯಲಿದೆ. ಈ ಐತಿಹಾಸಿಕ ಶುಭ ಸಂದರ್ಭದಲ್ಲಿ ತಮ್ಮೆಲ್ಲರಿಗೂ ಪ್ರಭು ಶ್ರೀರಾಮಚಂದ್ರ ಆಯುರಾರೋಗ್ಯ, ಸುಖ ಶಾಂತಿ, ನೆಮ್ಮದಿ ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಸಚಿವ ಸುಧಾಕರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಆಯ್ಯೋಧ್ಯಾ ನಗರದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ, ನಮ್ಮೆಲ್ಲರ ಕನಸ್ಸನ್ನು ನನಸಾಗಿಸುತ್ತಿದ್ದಾರೆ. ಇಂದು ನಾವೆಲ್ಲರೂ ನಮ್ಮ ಮನೆ-ಮನಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸೋಣ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

  • ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    – 366 ಸ್ತಂಭಗಳ ಆಧಾರ, 24 ಅಮೃತಶಿಲೆಯ ಬಾಗಿಲುಗಳು
    – ವಿಶ್ವದ ಮೂರನೇ ಅತೀದೊಡ್ಡ ಹಿಂದೂ ದೇಗುಲ

    ಲಕ್ನೋ: ಇಂದು ದೇಶದ ರಾಜಕೀಯ, ಸಾಮಾಜಿಕ ಚರಿತ್ರೆಯಲ್ಲಿ ಒಂದು ಅಪೂರ್ವ ದಿನ. ಶತಮಾನಗಳ ಕನಸು ನನಸಾಗುವ ಸಂದರ್ಭ ಬಂದಿದೆ.

    ಸರಿಯಾಗಿ ವರ್ಷದ ಹಿಂದೆ ಜಮ್ಮು ಕಾಶ್ಮೀರದಲ್ಲಿ 370ನೇ ಆರ್ಟಿಕಲ್ ರದ್ದು ಮಾಡಿದಾಗ ಅದನ್ನು ಐತಿಹಾಸಿಕ ಘಟ್ಟ ಎಂದು ಬಣ್ಣಿಸಲಾಗಿತ್ತು. ಇದು ದಶಕಗಳ ವಿವಾದವಷ್ಟೇ ಆಗಿತ್ತು. ಆದರೆ ಭರತ ಖಂಡದ ಅಸ್ತಿತ್ವದ ಚಿನ್ಹೆಯಾದ ರಾಮಜನ್ಮ ಭೂಮಿಯಲ್ಲಿ ಒಂದು ಮಸೀದಿ ನಿರ್ಮಾಣ ಆಗಿ ಶತಮಾನಗಳು ಕಳೆದು ಹೋಗಿದ್ವು. ಪುರಾತತ್ವ ಇಲಾಖೆಯಲ್ಲಿ ಮಾತ್ರವಲ್ಲ, ಮೊಗಲ್ ಸಾಮ್ರಾಜ್ಯದ ದಾಖಲೆಗಳಲ್ಲಿಯೂ ಮಂದಿರ ಸ್ಥಾನದಲ್ಲಿ ಮಸೀದಿ ನಿರ್ಮಾಣ ಮಾಡಿದ ಬಗ್ಗೆ ಸಾಕ್ಷ್ಯಗಳಿವೆ.

    ಶತಮಾನಗಳ ಕಾಲ ಎರಡು ಧರ್ಮೀಯರ ನಡುವೆ ಕಗ್ಗಂಟಾಗಿ ಉಳಿದಿದ್ದ ಸಮಸ್ಯೆಯನ್ನು ಅಂತಿಮವಾಗಿ 2019ರ ನವೆಂಬರ್ 09ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡುವ ಮೂಲಕ ಇತ್ಯರ್ಥ ಮಾಡಿತ್ತು. ಹಿಂದೂಗಳ ಪಾಲಿಗೆ ರಾಮಜನ್ಮಭೂಮಿ ದಕ್ಕಿತು. ಇಂದು ಶುಭ ಗಳಿಗೆಯಲ್ಲಿ ಕೋಟ್ಯಾನುಕೋಟಿ ಜನರ ಆಶಯ, ನಂಬಿಕೆ, ಕನಸಿನಂತೆ ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ. ಭರತ ಖಂಡದ ಐತಿಹಾಸಿಕ, ಪೌರಾಣಿಕ ಸ್ಮಾರಕದ ಪುನರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದೆ. ಇದಕ್ಕಾಗಿ ಅಯೋಧ್ಯೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.

    ಭಾರತೀಯರ ಆತ್ಮಗೌರವದ ಪ್ರಶ್ನೆಯಾದ ಶ್ರೀರಾಮಧಾಮದ ನಿರ್ಮಾಣ ಹೇಗಿರಲಿದೆ. ಇದರ ನೀಲ ನಕ್ಷೆ ಹೇಗಿರುತ್ತೆ? ಏನೆಲ್ಲಾ ವಿಶೇಷತೆಗಳು ಇಂದು ನಿರ್ಮಾಣ ಆಗುವ ರಾಮಮಂದಿರದಲ್ಲಿ ಅಡಕವಾಗಿ ಇರಲಿವೆ ಎಂಬುದನ್ನು ಒಂದೊಂದಾಗಿಯೇ ತೋರಿಸ್ತೀವಿ. ಮೊದಲಿಗೆ ರಾಮಮಂದಿರ ಯಾವ ಶೈಲಿಯಲ್ಲಿ ನಿರ್ಮಾಣ ಆಗಲಿದೆ ಅನ್ನೋದನ್ನು ನೋಡೋಣ

    ನಾಗರ ಶೈಲಿಯಲ್ಲಿ ರಾಮಮಂದಿರ:
    ಉತ್ತರ ಭಾರತದ ನಾಗರ ಶೈಲಿಯಲ್ಲಿ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣವಾಗಲಿದೆ. ಒಳಮುಖವಾಗಿ ತಿರುಗುವ ಗೋಪುರ ಇದರ ವೈಶಿಷ್ಟ್ಯವಾಗಿದ್ದು, ದ್ರಾವಿಡ ಶೈಲಿಯ ಪಿರಾಮಿಡ್ ಗೋಪುರಗಳಿಗೆ ಇದು ಸಂಪೂರ್ಣ ವಿರುದ್ಧವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಗೋಪುರಗಳ ನಿರ್ಮಾಣವಾಗಲಿದೆ. ಅತಿ ಉದ್ದದ ಗೋಪುರದ ಕೆಳಗೆ ಗರ್ಭಗುಡಿ ಇರಲಿದೆ. ವೃತ್ತಾಕಾರದಲ್ಲಿ ರಾಮಮಂದಿರ ಪರಿಧಿ ಇರಲಿದ್ದು, ನಾಗರ ಶೈಲಿಗೆ ಸೋಮನಾಥ ದೇಗುಲ ಉದಾಹರಣೆಯಾಗಿದೆ. ಶಿಲ್ಪಿ ಚಂದ್ರಕಾಂತ ಸೋಂಪುರ ನೇತೃತ್ವದಲ್ಲಿ ನಿರ್ಮಾಣವಾಗಲಿದೆ. (ಇವರ ಕುಟುಂಬ ತಲತಲಾಂತರಗಳಿಂದ 131 ದೇಗುಲ ನಿರ್ಮಿಸಿದೆ. ರಾಮಮಂದಿರ ನಿರ್ಮಾಣಕ್ಕಾಗಿ ಇವರನ್ನು 30 ವರ್ಷಗಳ ಹಿಂದೆಯೇ ಸಂಪರ್ಕಿಸಲಾಗಿತ್ತು ಎಂದು ತಿಳಿದು ಬಂದಿದೆ.)

    ರಾಮ ಮಂದಿರದ ಗರ್ಭಗುಡಿ:
    * ನಾಗರ ಶೈಲಿಯಲ್ಲಿ ಅಷ್ಟಭುಜಾಕೃತಿಯ ಗರ್ಭಗುಡಿ
    * ಗರ್ಭಗುಡಿ ಮೇಲ್ಭಾಗ ಅತ್ಯಂತ ಎತ್ತರದ ಶಿಖರ
    * ಶ್ರೀರಾಮಚಂದ್ರನ ವಿಗ್ರಹ ಪ್ರತಿಷ್ಠಾಪನೆ
    * ಗರ್ಭಗುಡಿಯ ಜಾಗದಲ್ಲೇ ಇಂದು ಅಡಿಗಲ್ಲು

    ಗರ್ಭಗುಡಿಯ ತಳಪಾಯಕ್ಕೆ ಕಲ್ಲು, ಮಣ್ಣಿನ ಇಟ್ಟಿಗೆಗಳ ಜೊತೆಗೆ ಚಿನ್ನ, ಬೆಳ್ಳಿಯ ಇಟ್ಟಿಗೆಗಳನ್ನು ಬಳಸಲಾಗುತ್ತಿದೆ. ಶುಭ ಅಭಿಜಿನ್ ಲಗ್ನದಲ್ಲಿ ಮಂದಿರಕ್ಕೆ ಭೂಮಿಪೂಜೆ ಮಾಡಲಾತ್ತದೆ. 40 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ಇಟ್ಟು ಭೂಮಿಪೂಜೆ ಮಾಡಲಾಗುತ್ತದೆ. ಗರ್ಭಗುಡಿಯ ತಳಪಾಯಕ್ಕೆ ಚಿನ್ನ, ಬೆಳ್ಳಿ ಇಟ್ಟಿಗೆಗಳ ಬಳಸಲಾಗುತ್ತದೆ. ಮನ್ನಾರ್‍ಗುಡಿಯ ಜೀಯಾರ್ ಸ್ವಾಮಿಯಿಂದ 5 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಇಟ್ಟಿಗೆ ನೀಡಿದ್ದು, ಜೈನ ಸಮುದಾಯ ಕೂಡ 24 ಕೆಜಿ ತೂಕ ಬೆಳ್ಳಿ ಇಟ್ಟಿಗೆಗಳನ್ನು ನೀಡಿದೆ.

    ಶ್ರೀರಾಮಧಾಮದ ವಿಸ್ತೀರ್ಣ
    * ವಿಶ್ವದ ಮೂರನೇ ಅತೀದೊಡ್ಡ ಹಿಂದೂ ದೇಗುಲ
    (ಮೊದಲನೆಯದ್ದು ಅಂಕೋರ್ ವ್ಯಾಟ್ (401 ಎಕರೆ), 2ನೇಯದ್ದು ತಿರುಚನಾಪಲ್ಲಿಯ ರಂಗನಾಥ ದೇಗುಲ (135 ಎಕರೆ))
    * 84 ಸಾವಿರ ಚದರಡಿ ಪ್ರದೇಶದಲ್ಲಿ ಪ್ರಧಾನ ಮಂದಿರ
    (ಮೊದಲು 37 ಸಾವಿರ ಚದರಡಿ ಎಂದು ಪ್ಲಾನ್ ಮಾಡಿಕೊಳ್ಳಲಾಗಿತ್ತು)
    * 161 ಅಡಿ ಎತ್ತರ (ಮೊದಲು 128 ಅಡಿ ಎಂದು ಪ್ಲಾನ್ ಮಾಡಲಾಗಿತ್ತು)
    * 360 ಅಡಿ ಉದ್ದ (ಮೊದಲು 270 ಅಡಿ ಎಂದು ಪ್ಲಾನ್ ಮಾಡಲಾಗಿತ್ತು)
    * 235 ಅಡಿ ಅಗಲ (ಮೊದಲು 145 ಅಡಿ ಎಂದು ಪ್ಲಾನ್ ಮಾಡಲಾಗಿತ್ತು)
    * ಒಂದೇ ಬಾರಿಗೆ 10 ಸಾವಿರ ಭಕ್ತರು ದರ್ಶನ ಮಾಡಬಹುದಾದಷ್ಟು ವಿಶಾಲ
    * 30 ಸಾವಿರ ಟನ್‍ಗಳಷ್ಟು ಬನ್ಸಿ ಪಹಾಡ್‍ಪುರ್ ಕಲ್ಲು (ಪಿಂಕ್ ಸ್ಟೋನ್)

    ಶ್ರೀರಾಮಧಾಮ ಎಷ್ಟು ಅಂತಸ್ತು
    * ಮೂರು ಅಂತಸ್ತಿನ ರಾಮಮಂದಿರ ನಿರ್ಮಾಣ
    * ನೆಲಮಹಡಿಯಲ್ಲಿ ರಾಮ್ ಲಲ್ಲಾ ವಿಗ್ರಹ
    * ನೆಲಮಹಡಿಯಲ್ಲಿ ಕೋಲಿ, ರಂಗಮಂಟಪ
    * ಮೊದಲ ಮಹಡಿಯಲ್ಲಿ ರಾಮದರ್ಬಾರ್ ಮೂರ್ತಿ (ರಾಮ-ಸೀತೆ-ಲಕ್ಷಣ ಮತ್ತು ಹನುಮಂತ)
    * ಮೊದಲ ಮಹಡಿಯಲ್ಲಿ ನೃತ್ಯ ಮಂಟಪ, ಗರ್ಭಗುಡಿ

    ಮಂದಿರಕ್ಕೆ ಪಂಚ ಗೋಪುರ
    * ರಾಮಮಂದಿರಕ್ಕೆ ಇರಲಿವೆ ಐದು ಗೋಪುರ
    * ಮೂರು ಗುಮ್ಮಟದ ಬದಲು ಐದು ಗುಮ್ಮಟ ನಿರ್ಮಾಣ
    * ಗರ್ಭಗುಡಿಯ ಮೇಲ್ಭಾಗದಲ್ಲಿ ಬರುವಂತೆ ಎತ್ತರದ ಶಿಖರ
    * ಗರ್ಭ ಗುಡಿಯ ಮೇಲ್ಭಾಗ 161 ಅಡಿ ಎತ್ತರದ ಶಿಖರ
    * ಶಿಖರದ ಮುಂಭಾಗ ಇಳಿಕೆ ಕ್ರಮದಲ್ಲಿ ಮೂರು ಗೋಪುರ
    * ದೇಗುಲದ ಎಡ- ಬಲ ಬದಿಯಲ್ಲಿ 2 ಚಿಕ್ಕ ಗೋಪುರ

    ಮಂದಿರಕ್ಕೆಷ್ಟು ಸ್ತಂಭ?
    * ರಾಮಮಂದಿರಕ್ಕೆ 366 ಸ್ತಂಭಗಳ ಆಧಾರ
    * ಮೊದಲ ಮಹಡಿಯಲ್ಲಿ 160 ಸ್ತಂಭ. ಉದ್ದ 15.6 ಅಡಿ
    * ಎರಡನೇ ಮಹಡಿಯಲ್ಲಿ 132 ಸ್ತಂಭ. ಉದ್ದ 14.6 ಅಡಿ
    * ಮೂರನೇ ಮಹಡಿಯಲ್ಲಿ 74 ಸ್ತಂಭ
    * ಪ್ರತಿ ಸ್ತಂಭದಲ್ಲಿಯೂ 16 ದೇವರ ಮೂರ್ತಿಗಳ ಕೆತ್ತನೆ

    ರಾಮಮಂದಿರಕ್ಕೆ ಸಿಂಹದ್ವಾರ
    * 24 ಅಮೃತಶಿಲೆಯ ಬಾಗಿಲುಗಳು
    * ದೇಗುಲದ 6 ಭಾಗದಲ್ಲಿ ಸಿಂಹದ್ವಾರ
    * ಮೂರು ಅಂತಸ್ತುಗಳಲ್ಲಿ 18 ಬಾಗಿಲು
    * 6 ಸಿಂಹದ್ವಾರಗಳಿಗೆ 10 ಅಡಿ ಅಗಲದ ಮಾರ್ಗ

  • ಅಯೋಧ್ಯೆಯಲ್ಲಿ ರಾಮ-ಲಕ್ಷ್ಮಣ ವಿಗ್ರಹಕ್ಕೆ ಮೀಸೆ ಬೇಕೇ ಬೇಕು: ಸಂಭಾಜಿ ಭಿಡೆ

    ಅಯೋಧ್ಯೆಯಲ್ಲಿ ರಾಮ-ಲಕ್ಷ್ಮಣ ವಿಗ್ರಹಕ್ಕೆ ಮೀಸೆ ಬೇಕೇ ಬೇಕು: ಸಂಭಾಜಿ ಭಿಡೆ

    ಪುಣೆ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವ ರಾಮ-ಲಕ್ಷ್ಮಣನ ವಿಗ್ರಹಕ್ಕೆ ಮೀಸೆ ಬೇಕು ಎಂದು ಹಿಂದುತ್ವ ಪ್ರತಿಪಾದಕ ಸಂಭಾಜಿ ಭಿಡೆ ಆಗ್ರಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಬುಧವಾರ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ನಡೆಯಲಿದೆ. ಭೂಮಿ ಪೂಜೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ತೆರಳಿ ಆಂಜನೇಯನಿಗೆ ಪೂಜೆ ಮಾಡಲಿದ್ದಾರೆ.

    ಈ ಸಂಬಂಧ ಈಗಾಗಲೇ ಶ್ರೀರಾಮಂದಿರ ಟ್ರಸ್ಟ್ ನ ಗೋವಿಂದಗಿರಿ ಜೀ ಮಹಾರಾಜ್ ಜೊತೆ ಮಾತನಾಡಿ, ನೀವು ಸ್ಥಾಪಿಸುವ ರಾಮ ಹಾಗೂ ಲಕ್ಷ್ಣಣ ಪ್ರತಿಮೆಗಳಿಗೆ ಮೀಸೆ ಇರಬೇಕು. ಒಂದು ವೇಳೆ ನೀವು ರಾಮ-ಲಕ್ಷ್ಮಣ ವಿಗ್ರಹಗಳಿಗೆ ಮೀಸೆ ಇಟ್ಟಿಲ್ಲವೆಂದರೆ, ನನ್ನಂತಹ ಭಕ್ತರಿಗೆ ದೇವಾಲಯ ನಿರ್ಮಿಸಿದರೂ ಪ್ರಯೋಜನವಿಲ್ಲದಂತಾಗುತ್ತದೆ ಎಂದಿದ್ದಾರೆ.

    ಶ್ರೀರಾಮಮಂದಿರಕ್ಕೆ ಭೂಮಿಪೂಜೆ ಮಾಡುವ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಆಗಸ್ಟ್ 5ರಂದು ನಡೆಯುವ ಕಾರ್ಯವನ್ನು ದಸರಾ, ದೀಪಾವಳಿ ಹಬ್ಬಗಳಂತೆ ಆಚರಿಸೋಣ ಎಂದು ಇದೇ ವೇಳೆ ಭಿಡೆ ಕರೆ ನೀಡಿದರು. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. 25 ನಿಮಿಷಗಳ ಕಾಲ ನಡೆಯಲಿರುವ ಪೂಜೆ ನಡೆಯಲಿದ್ದು, ಭೂಮಿ ಪೂಜೆ ಬಳಿಕ 45 ನಿಮಿಷ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಸರಯೂ ನದಿ ಬಳಿ ಮೋದಿ ತೆರಳಲಿದ್ದಾರೆ. ಒಟ್ಟು 2 ಗಂಟೆ 15 ನಿಮಿಷಕ್ಕೂ ಅಧಿಕ ಕಾಲ ಅಯೋಧ್ಯೆಯಲ್ಲಿ ಮೋದಿ ಇರಲಿದ್ದಾರೆ.

  • ಲ್ಯಾಂಡ್‌ ಆದ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ಹೋಗ್ತಿರೋದು ಯಾಕೆ?

    ಲ್ಯಾಂಡ್‌ ಆದ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ಹೋಗ್ತಿರೋದು ಯಾಕೆ?

    ಅಯೋಧ್ಯೆ: ಬುಧವಾರ ರಾಮ ದೇವಾಲಯದ ಭೂಮಿ ಪೂಜೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ತೆರಳಿ ಆಂಜನೇಯನಿಗೆ ಪೂಜೆ ಮಾಡಲಿದ್ದಾರೆ.

    ಬುಧವಾರ ಬೆಳಗ್ಗೆ 11.15ಕ್ಕೆ ಸಾಕೇತ್ ಕಾಲೇಜ್‍ನ ಹೆಲಿಪ್ಯಾಡ್‍ಗೆ ಮೋದಿ ದೆಹಲಿಯಿಂದ ಆಗಮಿಸಲಿದ್ದಾರೆ. ಬಳಿಕ ಹೆಲಿಪ್ಯಾಡ್‍ನಿಂದ ನೇರವಾಗಿ ಹನುಮಂತ ದೇವಾಲಯಕ್ಕೆ ತೆರಳಲಿದ್ದಾರೆ. ಇಲ್ಲಿ 7 ನಿಮಿಷಗಳ ಕಾಲ ಪೂಜೆಯಲ್ಲಿ ಭಾಗಿಯಾದ ಬಳಿಕ ರಾಮಜನ್ಮಭೂಮಿಗೆ ಗೇಟ್ ನಂ.3ರ ಮೂಲಕ ಆಗಮಿಸಲಿದ್ದಾರೆ.

    ಕಾರ್ಯಕ್ರಮ ಆಯೋಜನೆಗೊಂಡಿರುವ ಸ್ಥಳಕ್ಕೆ ನೇರವಾಗಿ ಮೋದಿ ತೆರಳಬಹದುಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಹನುಮಂತ ದೇವಾಲಯ ಅರ್ಚಕರಾಗಿರುವ ಮಾಧವನ್‌ ದಾಸ್‌ ಉತ್ತರ ನೀಡಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಹನುಮಂತ ಇಲ್ಲದೇ ರಾಮನ ಯಾವುದೇ ಕೆಲಸ ಆರಂಭಗೊಳ್ಳುವುದಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರು ಮೊದಲು ಹನುಮಂತನ ಪೂಜೆ ಮಾಡಿ ಆಶೀರ್ವಾದ ಪಡೆದ ಬಳಿಕ ರಾಮ ದೇವಸ್ಥಾನದ ಭೂಮಿ ಪೂಜೆಗೆ ತೆರಳುತ್ತಿದ್ದಾರೆ ಎಂದು ಅವರು ತಿಳಿಸಿದರು.

    ಭೇಟಿಯ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿಯಿಂದ ಬಂದಿರುವ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ. ಯಾರೂ ಪ್ರಧಾನಿಯನ್ನು ಸ್ಪರ್ಶಿಸುವಂತಿಲ್ಲ ಮತ್ತು ಪ್ರಸಾದ ನೀಡುವಂತಿಲ್ಲ ಎಂದು ಮಾಧವನ್‌ ದಾಸ್‌ ಹೇಳಿದರು.

    ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

    25 ನಿಮಿಷಗಳ ಕಾಲ ನಡೆಯಲಿರುವ ಪೂಜೆ ನಡೆಯಲಿದ್ದು, ಭೂಮಿ ಪೂಜೆ ಬಳಿಕ 45 ನಿಮಿಷ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಸರಯೂ ನದಿ ಬಳಿ ಮೋದಿ ತೆರಳಲಿದ್ದಾರೆ. ಒಟ್ಟು 2 ಗಂಟೆ 15 ನಿಮಿಷಕ್ಕೂ ಅಧಿಕ ಕಾಲ ಅಯೋಧ್ಯೆಯಲ್ಲಿ ಮೋದಿ ಇರಲಿದ್ದಾರೆ.