Tag: Bhojegowda

  • ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದವನು ಅಯೋಗ್ಯ: ಎಂಎಲ್‍ಸಿ

    ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದವನು ಅಯೋಗ್ಯ: ಎಂಎಲ್‍ಸಿ

    ಮಡಿಕೇರಿ: ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದು ಪಠ್ಯದಲ್ಲಿ ಸೇರಿಸಿದವನೊಬ್ಬ ಮೂರ್ಖ ಹಾಗೂ ಅಯೋಗ್ಯ ಎಂದು ಎಂಎಲ್‍ಸಿ ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

    ಕೊಡಗಿನ ಸೋಮವಾರಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ಸರ್ವ ಜನಾಂಗದ ಶಾಂತಿಯನ್ನು ಸಾರಿದವರು. ಅವರು ಈ ನಾಡಿನ ಆಸ್ತಿ ಆಗಿದ್ದಾರೆ. ಪಠ್ಯ ಪರಿಷ್ಕರಣೆ ಸಂದರ್ಭ ಅವರ ಬಗ್ಗೆ ಇನ್ನಷ್ಟು ಹೆಚ್ಚು ಮಾಹಿತಿ ಸಂಗ್ರಹಿಸಿ ಕೊಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

    ಪಠ್ಯ ಪರಿಷ್ಕರಣೆಗೂ ಮುನ್ನ ಸರ್ಕಾರಕ್ಕೆ ಅವನ ಹಿನ್ನೆಲೆ ಗೊತ್ತಿರಲಿಲ್ಲವೇ.? ಎಲ್ಲರೂ ಹೇಳಿದ ಮೇಲೆ ಪಠ್ಯಪುಸ್ತಕ ಸಮಿತಿ ವಿಸರ್ಜನೆ ಮಾಡಿದ ಸರ್ಕಾರಕ್ಕೆ ನಾಚಿಕೆ ಆಗಬೇಕು. ಆದರೆ ಇಷ್ಟೆಲ್ಲಾ ಅಯೋಗ್ಯ ಕೆಲಸ ಮಾಡಿದ್ದಾನೆಂದು ಹೇಳಿದ ಮೇಲೆ ಸಮಿತಿ ವಿಸರ್ಜನೆ ಮಾಡಿದ ನಿಮಗೆ ನಾಚಿಕೆ ಆಗಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಜೆಡಿಎಸ್‍ನಿಂದ ಶಾಸಕ ಗುಬ್ಬಿ ಶ್ರೀನಿವಾಸ್, ಶ್ರೀನಿವಾಸ್ ಗೌಡ ಉಚ್ಚಾಟನೆ

    ರೋಹಿತ್ ಚಕ್ರತಿರ್ಥನನ್ನು ಸಮಿತಿ ಸದಸ್ಯನನ್ನಾಗಿಯೂ ಮಾಡಬೇಕಾಗಿರಲಿಲ್ಲ. ಆದರೂ ಅಧ್ಯಕ್ಷನನ್ನಾಗಿ ಮಾಡಲಾಯಿತು. ಇಂತಹ ಅಯೋಗ್ಯನನ್ನು ಇಡೀ ಸಮಾಜದಿಂದ ದೂರ ಇಡಬೇಕು. ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಲು ಯತ್ನಿಸಿದ ಅವನ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಎಂದು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಶೀಘ್ರವೇ ಸಿಡಿಎಸ್‌ ನೇಮಕ: ರಾಜನಾಥ್‌ ಸಿಂಗ್‌ ಮಾಹಿತಿ

  • ಕಡೆಗಣಿಸಿ ಮಾಡುವ ಸಾಧನೆಯಾದರೂ ಏನು- ಭೋಜೇಗೌಡಗೆ ಅಂಗಾರ ಟಾಂಗ್

    ಕಡೆಗಣಿಸಿ ಮಾಡುವ ಸಾಧನೆಯಾದರೂ ಏನು- ಭೋಜೇಗೌಡಗೆ ಅಂಗಾರ ಟಾಂಗ್

    ಚಿಕ್ಕಮಗಳೂರು: ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಭೋಜೇಗೌಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

    ತಮ್ಮ ಮೇಲಿನ ಆರೋಪಕ್ಕೆ ತಾಲೂಕಿನ ಸಖರಾಯಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಪಕ್ಷದ, ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿಲ್ಲ. ಯಾವುದೇ ಸಭಾ ಕಾರ್ಯಕ್ರಮ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ ಯಾವುದೇ ಪ್ರತ್ಯೇಕ ಇಲಾಖೆಯವರನ್ನು ಕರೆದು ಸಭೆಯನ್ನೇ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಇತ್ತೀಚೆಗೆ ನ್ಯಾಷನಲ್ ಹೈವೇ, ಲೋಕೋಪಯೋಗಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ಮಾಡಿದ್ದೇನೆ. ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿ ಸಭೆ ಮಾಡಿಲ್ಲ. ಈಗ ಕೋವಿಡ್ ಇರುವುದರಿಂದ ಪಂಚಾಯಿತಿಗೆ ಭೇಟಿ ಕೊಡುತ್ತಿದ್ದೇನೆ. ಯಾವ ಸಮಸ್ಯೆ ಇದೆ, ಯಾವ ರೀತಿ ಕೋವಿಡ್ ಎದುರಿಸುತ್ತಿದ್ದಾರೆ. ಏನಾದರೂ ಸಮಸ್ಯೆ ಇದೆಯಾ, ಪರಿಹಾರವೇನು ಎಂದು ಚರ್ಚಿಸುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಓಡಾಡಿ ಕೆಲಸ ಮಾಡುತ್ತಿದ್ದೇನೆ, ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಸಭಾ ಕಾರ್ಯಕ್ರಮ ನಡೆಸಿ, ಅವರನ್ನು ಕರೆಯದಿದ್ದರೆ ಅಥವಾ ಅಪಮಾನ ಮಾಡಿದ್ದರೆ ಆಗ ಮಾತನಾಡಬಹುದು. ಸಣ್ಣಪುಟ್ಟ ವಿಷಯಕ್ಕೆ ರಾಜಕೀಯ ಮಾಡಿದರೆ ಏನೂ ಹೇಳಲು ಆಗುವುದಿಲ್ಲ ಎಂದು ನಯವಾಗೇ ಉತ್ತರಿಸಿದ್ದಾರೆ. ಕ್ಷೇತ್ರದ ಜನ ಆರು ಬಾರಿ ಆಯ್ಕೆ ಮಾಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಯಾರನ್ನೂ ಕಡೆಗಣಿಸಿಲ್ಲ. ಕಡೆಗಣಿಸಿ ಸಾಧನೆ ಮಾಡುವುದಾದರೂ ಏನು? ನನ್ನ ಇಲಾಖೆ, ನನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಕೆಲಸ ಮಾಡಬೇಕಿದೆ. ಭೋಜೇಗೌಡರು ರಾಜಕೀಯದಲ್ಲಿ ನನಗಿಂತ ಹಿರಿಯರು, ಅನುಭವಿಗಳು ಕೂಡ. ಸ್ಥಾನದ ಮಹತ್ವವನ್ನು ತಿಳಿದು ಕೆಲಸ ಮಾಡಿದರೆ ಯಾವ ಸಮಸ್ಯೆ ಬರುವುದಿಲ್ಲ ಎಂದರು.

  • ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಚಿಕ್ಕಮಗಳೂರು: ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ. ಜಿಲ್ಲಾಧಿಕಾರಿ ಉದ್ದೇಶ ಪೂರ್ವಕವಾಗಿ ಮಾಡಿದ್ದರೆ ಪ್ರಿವಿಲೇಜ್ ಮೂವ್ ಮಾಡಿ ಏನೆಂದು ತೋರಿಸುತ್ತಿದ್ದೆ. ಆದರೆ, ಇಲ್ಲಿ ಜಿಲ್ಲಾಧಿಕಾರಿಯನ್ನು ರಾಜಕಾರಣದ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಭೋಜೇಗೌಡರು, ಇಂದು ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ. ಯಾವುದೇ ಸಭೆ-ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಕೂತು ಪ್ರತಿಭಟನೆ ನಡೆಸಿದರು.

    ಜಿಲ್ಲಾ ಮಂತ್ರಿಗಳಿಗೆ ಪ್ರೋಟೋಕಾಲ್ ಏನೆಂದು ಗೊತ್ತಿಲ್ಲವೇ? ಎಂಟು ಬಾರಿ ಶಾಸಕರಾಗಿದ್ದಾರೆ, ನಾನು ಹೇಳಿಕೊಡಬೇಕಾ? ಒಂದು-ಎರಡು ಬಾರಿಯಲ್ಲ ಹಲವು ಬಾರಿ ಹೇಳಿದ್ದೇನೆ. ಅವರು ನಮಗೆ ಬುದ್ಧಿ ಹೇಳಬೇಕು. ಸರ್ಕಾರ ಅವರಿಗೆ ಜನರ ದುಡ್ಡಲ್ಲಿ ಎಲ್ಲಾ ಅಧಿಕಾರಿಗಳನ್ನು ನೀಡಿದೆ. ಕೈಗೊಬ್ಬ-ಕಾಲಿಗೊಬ್ಬ ಪಿಎಗಳು ಇದ್ದಾರೆ. ಪಿಎಗಳ ಮೂಲಕ ಶಾಸಕರಿಗೆ ನಿಮ್ಮ ಪ್ರವಾಸದ ಕಾರ್ಯಕ್ರಮವನ್ನು ತಿಳಿಸಲು ಆಗುವುದಿಲ್ಲವೇ? ನಿಮ್ಮ ತಿಂಗಳ ಪ್ರವಾಸದ ಕಾಪಿ ಹಾಕುವುದಿಲ್ಲವೇ, ಕಾರ್ಯಕ್ರಮದ ಕಾಪಿಯನ್ನು ಶಾಸಕರಿಗೆ ಏಕೆ ಕಳಿಸುವುದಿಲ್ಲ ಎಂದು ಸಚಿವ ಅಂಗಾರ ವಿರುದ್ಧ ಕಿಡಿಕಾರಿದ್ದಾರೆ.

    ಆರಂಭದಲ್ಲೇ ಜಿಲ್ಲಾ ಮಂತ್ರಿಗಳಿಗೂ ಹೇಳಿದ್ದೇನೆ. ಪ್ರಾಣೇಶ್ ಇದ್ದರೂ ನಿನ್ನದು ಬರಬೇಕು ಕಣಯ್ಯ ಎಂದಿದ್ದೇನೆ. ಅವರು ಉಪಸಭಾಪತಿ ಗೌರವವಿದೆ, ಸಮಾಧಾನದಲ್ಲಿ ಹೇಳಿದ್ದೇನೆ. ಅಧಿಕಾರಿಗಳ ಸಭೆಗಳಲ್ಲಿ ಭೋಜೇಗೌಡ ಇರುವುದಿಲ್ಲ ಸಭೆಯಲ್ಲಿ ಶಾಸಕರು, ಸಂಸದರು ಕೂತಾಗ ನಮಗೆ ಬೇರೆಯವರು ಕೇಳುತ್ತಾರೆ. ನಾನೊಬ್ಬ ಜನಪ್ರತಿನಿಧಿಯಾಗಿ ಸಭೆಗೆ ಹೋಗಿಲ್ಲ ಅಂದರೆ ಜನ ಏನೆಂದು ತಿಳಿದುಕೊಳ್ಳುತ್ತಾರೆ. ನೀವು ಶಿಷ್ಟಾಚಾರವನ್ನು ಪಾಲನೆ ಮಾಡಿದ್ದೀರಾ? ನಾನು ಶಾಸಕ ಅಲ್ವಾ. 6 ಜಿಲ್ಲೆ 39 ತಾಲೂಕಿನಲ್ಲಿ ನನಗೆ ಪ್ರೋಟೋಕಾಲ್ ಇದೆ ಎಂದು ಹೇಳಿದರು. ಇದನ್ನೂ ಓದಿ: ಉತ್ತಮ ಆಡಳಿತ ಕೊಡುವ ಮನೋಭಾವ ಇದ್ರೆ ಖಾತೆ ಕ್ಯಾತೆ ಬರಲ್ಲ- ಅಸಮಾಧಾನಿತರನ್ನು ಚಿವುಟಿದ ಅಂಗಾರ

    ಇದು ನನ್ನ ನೋಡೆಲ್ ಕ್ಷೇತ್ರ. ನಿಮ್ಮ ಗುಂಪುಗಾರಿಕೆ ಇದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ನನಗೆ ಅದು ಗೊತ್ತಿದೆ. ಆ ಶಾಸಕರು, ಈ ಶಾಸಕರನ್ನು ಕರೆಯಬಾರದು ಎಂದು ನಿಮ್ಮ ಗುಂಪುಗಾರಿಕೆಯಿಂದ ನಿಮ್ಮ ಪಕ್ಷದ ಕಚೇರಿಯಲ್ಲಿ ಅಥವಾ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಹೇಳಿ ಅಂಗಾರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

  • ವಿಶ್ರಾಂತಿಗಾಗಿ ಕಾಡಿನ ಮಧ್ಯೆ ಇರೋ ಕಾಫಿ ಎಸ್ಟೇಟ್ ಸೇರಿದ ಎಚ್‍ಡಿಕೆ

    ವಿಶ್ರಾಂತಿಗಾಗಿ ಕಾಡಿನ ಮಧ್ಯೆ ಇರೋ ಕಾಫಿ ಎಸ್ಟೇಟ್ ಸೇರಿದ ಎಚ್‍ಡಿಕೆ

    ಚಿಕ್ಕಮಗಳೂರು: ರಾಜಕೀಯ ಜಂಜಾಟದಿಂದ ಬೇಸತ್ತು, ವಿಶ್ರಾಂತಿಗಾಗಿ ಜೆಡಿಎಸ್ ನಾಯಕರೊಂದಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಕಾಡಿನ ಮಧ್ಯದಲ್ಲಿ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಉದ್ಯಮಿ ವಿ.ಜಿ ಸಿದ್ದಾರ್ಥ್ ಅವರ ಅಂತ್ಯಕ್ರಿಯೆಗೆ ಚಿಕ್ಕಮಗಳೂರಿಗೆ ಹೆಚ್‍ಡಿಕೆ ಆಗಮಿಸಿದ್ದರು. ಅಂದಿನಿಂದ ಚಿಕ್ಕಮಗಳೂರಿನಲ್ಲೇ ಮಾಜಿ ಸಿಎಂ ಇದ್ದಾರೆ. ಆತ್ಮೀಯ ಸ್ನೇಹಿತ ರಂಗನಾಥ್ ಅವರ ಮನೆಯಲ್ಲಿ ಹೆಚ್‍ಡಿಕೆ ವಾಸ್ತವ್ಯ ಹೂಡಿದ್ದಾರೆ.

    ಕೊಪ್ಪದ ಗುಡ್ಡೆತೋಟದಲ್ಲಿ ರಂಗನಾಥ್ ಅವರ ಮನೆಯಿದ್ದು ಅಲ್ಲಿಯೇ ಹೆಚ್‍ಡಿಕೆ ಅವರು ತಂಗಿದ್ದಾರೆ. ಅವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಕೂಡ ಸಾಥ್ ನೀಡಿದ್ದಾರೆ.

    ಕೆಲ ದಿನಗಳಿಂದ ರಾಜ್ಯದಲ್ಲಿ ನಡೆದ ರಾಜಕೀಯ ಜಂಜಾಟದಿಂದ ಜೆಡಿಎಸ್ ನಾಯಕರು ರೋಸಿಹೋಗಿದ್ದರು. ಹೀಗಾಗಿ ಕಾಡಿನ ಮಧ್ಯೆ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿ, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

  • ಬೋಜೇಗೌಡರನ್ನು ಮರಳಲ್ಲಿ ಹೂತ ಸಾರಾ ಮಹೇಶ್!

    ಬೋಜೇಗೌಡರನ್ನು ಮರಳಲ್ಲಿ ಹೂತ ಸಾರಾ ಮಹೇಶ್!

    ಉಡುಪಿ: ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರು ಮೂಳೂರು ಬೀಚ್‍ನಲ್ಲಿ ಸುಡು ಬಿಸಿಲಿನಲ್ಲಿ ಮರಳಿನಲ್ಲಿ ಶಾಸಕ ಬೋಜೇಗೌಡರನ್ನು ಸ್ಯಾಂಡ್ ಥೆರಪಿಗಾಗಿ ಹೂತುಹಾಕಿದ್ದಾರೆ.

    ಚುನಾವಣಾ ಪ್ರಚಾರದ ಬಳಿಕ ಸಿಎಂ, ಮಾಜಿ ಪಿಎಂ ಜೊತೆ ಸಚಿವರು ಜೆಡಿಎಸ್ ಶಾಸಕರು ಉಡುಪಿಯ ಸಾಯಿರಾಧ ಹೆಲ್ತ್ ರೆಸಾರ್ಟ್ ನಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಉಡುಪಿಯ ಕಾಪುವಿನ ಮೂಳೂರು ರೆಸಾರ್ಟಿ ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ವರಿಷ್ಠರಿಗೆ ಜೆಡಿಎಸ್ ನಾಯಕರು, ಸಚಿವರು ಸಾಥ್ ಕೊಟ್ಟಿದ್ದಾರೆ.

    ಈ ಸಂದರ್ಭ ಸ್ಯಾಂಡ್ ಥೆರಪಿ ಪಡೆಯುತ್ತಿದ್ದ ಬೋಜೇಗೌಡರನ್ನು ಸಾರಾ ಮಹೇಶ್ ಅವರು ಮರಳಿನಲ್ಲಿ ಹೂತು ಹಾಕಿದ್ದರು. ಸ್ಯಾಂಡ್ ತೆರೆಪಿ ಬಳಿಕ ಸುಡುವ ಮರಳಿನಿಂದ ಪಾರಾಗಲು ಬೋಜೇಗೌಡರು ಸಮುದ್ರಕ್ಕೆ ಹಾರಿದರು.

    ಈ ವೇಳೆ ಸಾರಾ ಮಹೇಶ್ ಹಾರೆಯಿಂದ ಬೊಜೇಗೌಡರಿಗೆ ತಲೆಯವರೆಗೆ ಮರಳು ಹಾಕುತ್ತ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸುಡು ಬಿಸಿಲಿಗೆ ಮರಳು ಬಿಸಿಯಾಗಿದ್ದು, ಮರಳಿನಲ್ಲಿದ್ದ ಬೋಜೇಗೌಡರು ಎದ್ದು ಬಿದ್ದು ಸಮುದ್ರದ ಕಡೆ ಓಡಿ ಸಮುದ್ರಸ್ನಾನ ಮಾಡಿದರು. ಈ ದೃಶ್ಯವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

  • ಹಾಲು ಕುಡಿದವರೇ ಬದುಕಲ್ಲ, ಎಣ್ಣೆ ಕುಡಿದವ್ರು ಬದುಕ್ತಾರಾ: ಬಿಜೆಪಿಗೆ ಮಾತಿನಲ್ಲೇ ಕುಕ್ಕಿದ ಭೋಜೇಗೌಡ

    ಹಾಲು ಕುಡಿದವರೇ ಬದುಕಲ್ಲ, ಎಣ್ಣೆ ಕುಡಿದವ್ರು ಬದುಕ್ತಾರಾ: ಬಿಜೆಪಿಗೆ ಮಾತಿನಲ್ಲೇ ಕುಕ್ಕಿದ ಭೋಜೇಗೌಡ

    ಉಡುಪಿ: ರಾಮನಗರ ಬೆಳವಣಿಗೆ ಬಿಜೆಪಿಗೆ ನಮ್ಮ ಸಮ್ಮಿಶ್ರ ಸರ್ಕಾರದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಕೊಡುಗೆ ಅಂತ ವಿಧಾನಪರಿಷತ್ ಸದಸ್ಯ ಭೋಜೇಗೌಡ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನಗರ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ 63ನೇ ರಾಜ್ಯೋತ್ಸವ ಕೊಡುಗೆ ಇದು. ದೀಪಾವಳಿ ಹಬ್ಬದ ಉಡುಗೊರೆಯನ್ನು ಫಲಿತಾಂಶದ ದಿನ ಸಮ್ಮಿಶ್ರ ಸರಕಾರ ಕೊಡುತ್ತದೆ. ಹಾಲು ಕುಡಿದವರೇ ಬದುಕಲ್ಲ, ವಿಷ ಕುಡಿದವರೇ ಬದುಕ್ತಾರೇನ್ರೀ? 1 ಲಕ್ಷ ಮತಗಳ ಅಂತರದಲ್ಲಿ ರಾಮನಗರದಲ್ಲಿ ಗೆಲ್ಲುತ್ತೇವೆ. ರಾಮನಗರದ ಬೆಳವಣಿಗೆಗೆ ಅಭ್ಯರ್ಥಿಯೇ ಮಾಸ್ಟರ್ ಮೈಂಡ್ ಎಂದು ಬಿಜೆಪಿಯವರಿಗೆ ಮಾತಿನಲ್ಲೇ ಕುಕ್ಕಿದರು.

    ಇದೇ ವೇಳೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ಮಾತಿನ ಮೇಲೆ ನಿಗಾ ಇರಿಸಲಿ. ನಮ್ಮ ಅಭ್ಯರ್ಥಿಯನ್ನು ಕಂಡವರ ಮಕ್ಕಳೆಂದು ಹೇಳುತ್ತಾರೆ. ಮಧು ಬಂಗಾರಪ್ಪ ಕಂಡವರ ಮಕ್ಕಳಾ? ರಾಮನಗರದಲ್ಲಿ ಯಾರು ಯಾರ ಮಕ್ಕಳನ್ನು ತಂದು ನೀವು ನಿಲ್ಲಿಸಿದ್ರಿ? ಹುಟ್ಟಿಸಿ, ಬೆಳೆಸಿದ ವ್ಯಕ್ತಿಗೆ ನಾಮಕರಣ ಮಾಡಿದರೆ, ನಿಮ್ಮ ಮಕ್ಕಳಗಲ್ಲ ಸ್ವಾಮಿ ಅಂತ ದೂರಿದರು.

    ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಸತ್ತಿದೆ. ಪಕ್ಕದ ತಟ್ಟೆಯ ನೋಣವನ್ನು ಕಂಡು ಹೀಯಾಳಿಸಬೇಡಿ. ಯಡಿಯೂರಪ್ಪ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ರಾಮನಗರ ಬೆಳವಣಿಗೆ ರಾಷ್ಟ್ರೀಯ ಪಕ್ಷಕ್ಕೆ ಬಹಳ ಆಘಾತ ಆಗಿದೆ. ಪ್ರಜಾಪ್ರಭುತ್ವ ಮಾರಕ ಅಂತ ನೀವು ಹೇಳ್ತೀರಿ, ಆದರೆ ಆಪರೇಷನ್ ಕಮಲ ಮಾರಕ ಅಲ್ವಾ? ಗೆದ್ದ ಶಾಸಕರನ್ನೇ ಖರೀದಿ ಮಾಡಿದ್ದು ಮರೆತು ಹೋಯ್ತೇ ನಿಮಗೆ ಎಂದು ಸವಾಲು ಹಾಕಿದರು.

    ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರಾಜಕೀಯವನ್ನು ರಾಜಕೀಯವಾಗಿ ಎದುರಿಸಿದ್ದಾರೆ. ಡಿಕೆಶಿಯವರು ರೆಡ್ಡಿಯಂತೆ ಹೇಡಿಯ ರಾಜಕೀಯ ಮಾಡಿಲ್ಲ. ರೆಡ್ಡಿ ಬ್ರದರ್ಸ್ ಭೂಗತವಾಗಿ ಕೆಲಸ ಮಾಡುವವರು. ರೆಡ್ಡಿ ಅಂಡರ್ ಗ್ರೌಂಡ್ ವ್ಯಾಪಾರದವರು. ಜನಾರ್ದನ ರೆಡ್ಡಿ ಸಮಾಜಘಾತುಕ ಶಕ್ತಿ. ಅವರು ಮತ್ತೆ ಭೂಗತ ಲೋಕಕ್ಕೆ ಹೋಗೋದು ಸೂಕ್ತ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv