Tag: bhoganandishwara

  • ನಂದಿ ಗ್ರಾಮದಲ್ಲಿ ಅದ್ಧೂರಿ ಶಿವೋತ್ಸವ

    ನಂದಿ ಗ್ರಾಮದಲ್ಲಿ ಅದ್ಧೂರಿ ಶಿವೋತ್ಸವ

    ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಇಂದು ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದಲ್ಲಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಶಿವೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ಆರಂಭವಾಗಿದೆ.

    ಕ್ಷೇತ್ರದ ಶಾಸಕ, ಸಚಿವ ಡಾ.ಕೆ ಸುಧಾಕರ್ ಫೌಂಡೇಶನ್ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಂದಿ ಶಿವೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಿವೋತ್ಸವಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಿರಿಗೆರೆ ಶಿವಾಚಾರ್ಯ ಶ್ರೀಗಳು ಹಾಗೂ ಸದ್ಗುರು ಮಧುಸೂದನಸಾಯಿ ಶಂಖ ಊದುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಗೋಕರ್ಣ, ಮುರುಡೇಶ್ವರದಲ್ಲಿ ವಿಜ್ರಂಭಣೆಯ ಶಿವರಾತ್ರಿ ಆಚರಣೆ

    ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ಶಿವೋತ್ಸವ ಕಾರ್ಯಕ್ರಮ ಅರಂಭವಾಯಿತು. ಶಿವರಾತ್ರಿ ಜಾಗರಣೆ ಪ್ರಯುಕ್ತ ವೇದಿಕೆ ಕಾರ್ಯಕ್ರಮದ ನಂತರ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುಲಿವೆ. ಈ ನಂದಿ ಶಿವೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಹಾಡುಗಾರರಾದ ಅನನ್ಯ ಭಟ್, ರಘು ದೀಕ್ಷಿತ್, ವಿಜಯ್ ಪ್ರಕಾಶ್, ಭರತನಾಟ್ಯ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ, ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿ ತಮ್ಮ ಕಲಾ ಪ್ರದರ್ಶನ ಮಾಡಲಿದ್ದಾರೆ. ಜೊತೆಗೆ ನಗೆ ಹಬ್ಬ ಕಾರ್ಯಕ್ರಮ ಸಹ ಆಯೋಜನೆ ಮಾಡಲಾಗಿದ್ದು ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಲೇಸರ್ ಶೋ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಶಿವರಾತ್ರಿ ಪ್ರಯುಕ್ತ ಜೆಪಿ ಪಾರ್ಕ್‌ನಲ್ಲಿ ಅಹೋರಾತ್ರಿ ಕಾರ್ಯಕ್ರಮ – 1 ಸಾವಿರ ಸಾಧಕರಿಗೆ ಸನ್ಮಾನ

    ವೈಭವದ ಶಿವೋತ್ಸವದ ಅಂಗವಾಗಿ ಇಡೀ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲಾಗಿದ್ದು, ನಾಳೆ ನಂದಿ ಶ್ರೀ ಭೋಗನಂದಿಶ್ವರನ ಜೋಡಿ ಬ್ರಹ್ಮ ರಥೋತ್ಸವ ನೆರವೇರಲಿದೆ. ಶಿವರಾತ್ರಿ ಹಿನ್ನೆಲೆ ಈಗಾಗಲೇ ಸಾವಿರಾರು ಮಂದಿ ಭಕ್ತರು ನಂದಿ ಗ್ರಾಮದ ಭೋಗನಂದೀಶ್ವರನ ಆಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

  • ಶ್ರೀಭೋಗನಂದೀಶ್ವರ ಆಲಯದಲ್ಲಿ ಭಕ್ತರು ದೀಪ ಹಚ್ಚುವಂತಿಲ್ಲ: ಡಿಸಿ

    ಶ್ರೀಭೋಗನಂದೀಶ್ವರ ಆಲಯದಲ್ಲಿ ಭಕ್ತರು ದೀಪ ಹಚ್ಚುವಂತಿಲ್ಲ: ಡಿಸಿ

    ಚಿಕ್ಕಬಳ್ಳಾಪುರ: ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶೀ ಕ್ಷೇತ್ರವೆಂದೇ ಪ್ರತೀತಿಯಾಗಿರೋ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ ದೇಗುಲ ಹಾಗೂ ಆವರಣದಲ್ಲಿ ಈ ಬಾರಿ ದೀಪ ಹಚ್ಚುವಂತಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

    ನಾಳೆ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಶ್ರೀಭೋಗನಂದೀಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳು ನೇರವೇರಲಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಸೋಮವಾರದ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಕೊರೊನಾ ಭೀತಿ ಆತಂಕದಿಂದ ಜಿಲ್ಲಾಡಳಿತ ಕೆಲ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ನಾಳೆ ಬೆಳಗ್ಗೆ 5 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಒಂದು ಬಾರಿಗೆ ದೇವಾಲಯದೊಳಗೆ ಕೇವಲ 300 ಮಂದಿಗಷ್ಟೇ ಪ್ರವೇಶಕ್ಕೆ ಅನುಮತಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರು ದೇವರ ದರ್ಶನ ಪಡೆಯಬೇಕಿದ್ದು, ಮಾಸ್ಕ್ ಹಾಕಿದರೆ ಮಾತ್ರ ದೇವಾಲಯದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.

    ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಪ್ರವೇಶ ಕಲ್ಪಿಸಲಾಗುವುದು. ಮತ್ತೊಂದೆಡೆ ಪ್ರತಿ ವರ್ಷ ಕಾರ್ತಿಕ ಸೋಮವಾರದಂದು ದೇವಾಲಯಕ್ಕೆ ಬರುವ ಭಕ್ತರು ದೇವಾಲಯದೊಳಗೆ ಹಾಗೂ ಕಳೆದ ವರ್ಷದಿಂದ ದೇವಾಲಯದ ಹೊರಭಾಗದಲ್ಲಿ ದೀಪ ಹಚ್ಚಿ ದೇವರಿಗೆ ಆರತಿ ಬೆಳಗಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ಭಕ್ತರು ದೇವರ ದರ್ಶನ ಪಡೆಯಬಹುದು. ದೀಪದಾರತಿ ಮಾಡಲು ಅವಕಾಶವಿಲ್ಲ ಅಂತ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

    ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಭಕ್ತರನ್ನ ನಿಯಂತ್ರಿಸುವ ಸಲುವಾಗಿ ಬ್ಯಾರಿಕೇಡ್, ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗುವುದಾಗಿ ಅಂತ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.