Tag: Bhimanayak

  • ಡಿಸಿಎಂ, ಮಿನಿಸ್ಟರ್ ಬೇಡ ಕೆಎಂಎಫ್ ಅಧ್ಯಕ್ಷ ಸ್ಥಾನ ಸಾಕು: ಬಾಲಚಂದ್ರ ಜಾರಕಿಹೊಳಿ

    ಡಿಸಿಎಂ, ಮಿನಿಸ್ಟರ್ ಬೇಡ ಕೆಎಂಎಫ್ ಅಧ್ಯಕ್ಷ ಸ್ಥಾನ ಸಾಕು: ಬಾಲಚಂದ್ರ ಜಾರಕಿಹೊಳಿ

    ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನ ನನಗೆ ಸಚಿವ ಸ್ಥಾನಕ್ಕಿಂತಲೂ ಹೆಚ್ಚು. ಡಿಸಿಎಂ, ಮಿನಿಸ್ಟರ್ ಹುದ್ದೆ ಬೇಡ, ಕೆಎಂಎಫ್ ಅಧ್ಯಕ್ಷ ಸ್ಥಾನ ಒಂದೇ ಸಾಕು ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ಸಚಿವ ಸ್ಥಾನ ಸಿಗದಿರುವ ಕುರಿತು ಯಾವುದೇ ಅಸಮಾಧಾನ ಇರಲಿಲ್ಲ. ನನ್ನ ಆಲೋಚನೆಗಳೇ ಬೇರೆ ಇದ್ದವು, ಹೀಗಾಗಿ ನನಗೆ ಯಾವುದೇ ಸ್ಥಾನ ಬೇಡ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕೆಎಂಎಫ್ ಅಧ್ಯಕ್ಷನಾಗುವುದು ನನ್ನ ಆಸೆಯಾಗಿತ್ತು, ರಾಜಕೀಯದ ಭವಿಷ್ಯದ ದೃಷ್ಟಿಯಿಂದ ಕೆಎಂಎಫ್ ಅಧ್ಯಕ್ಷನಾಗಲು ನಿರ್ಧರಿಸಿದೆ. ಇದಕ್ಕಾಗಿ ಸಾಕಷ್ಟು ಪ್ರಯತ್ನವೂ ನಡೆದಿದ್ದು, ಇದರ ಭಾಗವಾಗಿ ನನ್ನ ಪರವಾಗಿ ಕೆಎಂಎಫ್‍ನ 6 ನಿರ್ದೇಶಕರು ನನ್ನ ಭೇಟಿ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಂದು ಮನವಿ ಮಾಡಿದರು. ಹೀಗಾಗಿ ನಾನು ಯೋಜನೆ ರೂಪಿಸಿಕೊಂಡು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

    ನಾನು ಸಹಕಾರ ವಲಯದಿಂದ ಬಂದಿರುವವನು. ರೈತರ ಸೇವೆ ಮಾಡಲು ಒಳ್ಳೆಯ ಅವಕಾಶ ಎಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಒಲವು ತೋರಿದೆ. ಕೆಎಂಎಫ್ ದೊಡ್ಡ ಸಂಸ್ಥೆ, ಬೆಳಗಾವಿ ಡೈರಿಯಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಹೀಗಾಗಿ ಕೆಎಂಎಫ್ ಅಧ್ಯಕ್ಷನಾಗಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

    ಕೆಎಂಎಫ್‍ನ ಒಟ್ಟು 12 ನಿರ್ದೇಶಕರ ಪೈಕಿ 6 ಜನ ನನಗೆ ಸಹಕಾರ ನೀಡುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದೆ, ಅವರೂ ಸಹ ಒಪ್ಪಿಗೆ ಸೂಚಿಸಿದರು. ಕಾಂಗ್ರೆಸ್‍ನ ಭೀಮಾನಾಯ್ಕ್ ಸಹ ಆಕಾಂಕ್ಷಿಯಾಗಿದ್ದಾರೆ. ಅವರೂ ಪ್ರಯತ್ನ ಪಡುತ್ತಿದ್ದಾರೆ. ಜೆಡಿಎಸ್‍ನಿಂದ ಎಚ್.ಡಿ.ರೇವಣ್ಣ ಅವರೂ ಸಹ ಪ್ರಯತ್ನ ಪಡುತ್ತಿದ್ದಾರೆ. ನಾನು ಅವಿರೋಧವಾಗಿ ಆಯ್ಕೆಯಾಗಲು ತೀರ್ಮಾನಿಸಿದ್ದೇನೆ. ಈ ಸಂಬಂಧ ಎಚ್.ಡಿ.ರೇವಣ್ಣ, ಭೀಮಾನಾಯ್ಕ್ ಜೊತೆಗೂ ಚರ್ಚೆ ನಡೆಸುತ್ತೇನೆ. ಕೆಎಂಎಫ್ ನಿರ್ದೇಶಕರ ಜೊತೆಗೂ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

    ಎಲ್ಲರೂ ಒಪ್ಪಿದಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತೇನೆ. ಯಾರೂ ಒಪ್ಪದಿದ್ದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಹಿಂದೆ ನಾಲ್ವರು ನಿರ್ದೇಶಕರನ್ನು ಎಚ್.ಡಿ.ರೇವಣ್ಣ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಬಾಲಚಂದ್ರ ಜಾರಕಿಹೊಳಿ, ರೇವಣ್ಣ ಅವರು ಯಾರನ್ನೂ ಹೈಜಾಕ್ ಮಾಡಿರಲಿಲ್ಲ. ನಿರ್ದೇಶಕರೇ ಒಪ್ಪಿ ರೇವಣ್ಣ ಪರ ಇದ್ದರು ಎಂದು ರೇವಣ್ಣ ಪರ ಬಾಲಚಂದ್ರ ಬ್ಯಾಟಿಂಗ್ ಮಾಡಿದ್ದಾರೆ.

    ಎಲ್ಲರನ್ನೂ ಒಪ್ಪಿಸಲು ಪ್ರಯತ್ನಿಸುತ್ತೇನೆ. ಒಂದು ವೇಳೆ ಒಪ್ಪದಿದ್ದಲ್ಲಿ ಚುನಾವಣೆ ನಡೆಯಲಿ, ನನಗೆ ಗೆಲ್ಲುವ ಭರವಸೆ ಇದೆ. ಚುನಾವಣೆಯಲ್ಲಿ ನಾನು ಖಂಡಿತಾ ಗೆಲ್ಲುತ್ತೇನೆ. ಎಷ್ಟು ಜನ ನಿರ್ದೇಶಕರು ನನ್ನ ಪರ ಇದ್ದಾರೆ ಎಂಬುದು 31 ರಂದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

  • ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ರೇವಣ್ಣ ಕಣ್ಣು – ಭೀಮಾನಾಯ್ಕ್ `ಕೈ’ಕೊಡುವ ಭೀತಿ

    ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ರೇವಣ್ಣ ಕಣ್ಣು – ಭೀಮಾನಾಯ್ಕ್ `ಕೈ’ಕೊಡುವ ಭೀತಿ

    ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ಮಂತ್ರಿ ಸ್ಥಾನದ ಜೊತೆಗೆ ಮತ್ತೊಂದು ಪ್ರಭಾವಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

    ಕೆಎಂಎಫ್ ಅಧ್ಯಕ್ಷ ಸ್ಥಾನ ಬೇಕು ಎಂದು ರೇವಣ್ಣ ಪಟ್ಟು ಹಿಡಿದಿದ್ದು, ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಳಿ ಈಗಾಗಲೇ ಬೇಡಿಕೆ ಇಟ್ಟಿದ್ದಾರೆ. ಎಚ್‍ಡಿಡಿ ಅವರೂ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇತ್ತ ಕಾಂಗ್ರೆಸ್ ಕೂಡ ತಮ್ಮ ಅತೃಪ್ತ ಶಾಸಕ ಭೀಮಾನಾಯ್ಕ್ ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡುತ್ತೀವಿ ಎಂದು ಭರವಸೆ ಕೊಟ್ಟಿದೆ. ಒಂದು ವೇಳೆ ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗದಿದ್ದರೆ ಭೀಮಾನಾಯ್ಕ್ ರಾಜೀನಾಮೆಗೂ ಸಿದ್ಧರಿದ್ದಾರೆ ಎನ್ನಲಾಗಿದೆ.

    ಇಬ್ಬರನ್ನು ಸಮಾಧಾನ ಮಾಡಲಾಗದೇ ತಲೆಕೆಡಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸದ್ಯಕ್ಕೆ ಅಮೆರಿಕದಿಂದ ಸಿಎಂ ಬರುವಿಕೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

  • ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್‍ಗೆ ಶಾಸಕ ಭೀಮಾನಾಯ್ಕ್ ಎಚ್ಚರಿಕೆ

    ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್‍ಗೆ ಶಾಸಕ ಭೀಮಾನಾಯ್ಕ್ ಎಚ್ಚರಿಕೆ

    ಬಳ್ಳಾರಿ: ಸಿಎಂ ಕುರ್ಚಿ ಖಾಲಿಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಮಾತನಾಡಬಾರದು. ಆ ರೀತಿಯಲ್ಲಿ ಮಾತನಾಡಿದರೆ ಮುಂದಿನ ಅನಾಹುತಕ್ಕೆ ವಿಶ್ವನಾಥ್ ಕಾರಣರಾಗುತ್ತಾರೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಎಚ್ಚರಿಕೆ ನೀಡಿದ್ದಾರೆ.

    ಬಳ್ಳಾರಿ ರಾಯಚೂರು ಕೊಪ್ಪಳ ಹಾಲೂ ಒಕ್ಕೂಟದ ನಿರ್ದೇಶಕರಾಗಿ ಶಾಸಕ ಭೀಮಾನಾಯ್ಕ್ ಆಯ್ಕೆಯಾಗಿದ್ದು, ಪ್ರಮಾಣಪತ್ರ ಸ್ವೀಕರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರದಲ್ಲಿ ಏನೂ ಬದಲಾವಣೆ ಆಗಲ್ಲ. ನಾನು ಕಾಂಗ್ರೆಸ್ ಪಕ್ಷದ ಚಿಹ್ನೆಯಡಿಯಲ್ಲಿ ಗೆಲುವು ಸಾಧಿಸಿದ್ದೇನೆ. ಹೀಗಾಗಿ ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

    ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ವಿಚಾರದ ಬಗ್ಗೆ ಶಾಸಕರ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಭೀಮಾನಾಯ್ಕ್, ಮುಂದಿನ ಚುನಾವಣೆಯ ನಂತರ ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ನಮ್ಮೆಲ್ಲರ ಬಯಕೆಯಾಗಿದೆ. ಆದರೆ ಜೆಡಿಎಸ್‍ರ ರಾಜಾಧ್ಯಕ್ಷ ವಿಶ್ವನಾಥ್ ಪದೇ ಪದೇ ಸಿದ್ದರಾಮಯ್ಯ ವಿರುದ್ಧ ಮಾತನಾಡಬಾರದು. ಇದು ಒಳ್ಳೆಯ ಬೆಳವಣಿಗೆಯಲ್ಲ, ವಿಶ್ವನಾಥ್ ಹೇಳಿಕೆಯಿಂದ ಮೈತ್ರಿ ಧರ್ಮಕ್ಕೆ ಧಕ್ಕೆ ಆಗುವ ಲಕ್ಷಣಗಳು ಇವೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ಬಳ್ಳಾರಿ ಕೈ ನಾಯಕರ ಕಿತ್ತಾಟಕ್ಕೆ ಬ್ರೇಕ್ – ಕೆಪಿಸಿಸಿ ಮೊದಲ ಹಂತದ ಸಂಧಾನ ಸಕ್ಸಸ್

    ಬಳ್ಳಾರಿ ಕೈ ನಾಯಕರ ಕಿತ್ತಾಟಕ್ಕೆ ಬ್ರೇಕ್ – ಕೆಪಿಸಿಸಿ ಮೊದಲ ಹಂತದ ಸಂಧಾನ ಸಕ್ಸಸ್

    ಬಳ್ಳಾರಿ: ಬಳ್ಳಾರಿ ಕಾಂಗ್ರೆಸ್ ನಾಯಕರ ನಡುವೆ ಆರಂಭವಾಗಿದ್ದ ಕಿತ್ತಾಟಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಬ್ರೇಕ್ ಹಾಕಲು ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದು, ಶಾಸಕ ಆನಂದ್ ಸಿಂಗ್ ಹಾಗೂ ಭೀಮಾನಾಯ್ಕ ನಡುವಿನ ಅಸಮಾಧಾನವನ್ನು ಶಮನಗೊಳಿಸಲು ಯಶಸ್ವಿಯಾಗಿದ್ದಾರೆ.

    ಈಗಲ್ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಜಗಳ ನಡೆಯಲು ಪ್ರಮುಖ ಕಾರಣವೇ ಭೀಮಾನಾಯ್ಕ್ ನಡುವಿನ ಅಸಮಾಧಾನ. ಸದ್ಯ ಇಬ್ಬರ ನಡುವಿನ ಗುದ್ದಾಟಕ್ಕೆ ಬ್ರೇಕ್ ಹಾಕಿರುವ ಕೆಪಿಸಿಸಿ ಮೊದಲ ಹಂತವಾಗಿ ಹಗರಿಬೊಮ್ಮನಹಳ್ಳಿಯಲ್ಲಿ ಆನಂದ್ ಸಿಂಗ್ ಅಭಿಮಾನಿ ಬಳಗ ತೆರೆದಿದ್ದ ಕಚೇರಿಯನ್ನು ತೆರವುಗೊಳಿಸಲು ಯಶಸ್ವಿಯಾಗಿದ್ದಾರೆ.

    ಕಳೆದ ಮೂರು ತಿಂಗಳ ಹಿಂದೆ ಶಾಸಕ ಭೀಮಾನಾಯ್ಕ್ ಕ್ಷೇತ್ರದಲ್ಲಿ ಆನಂದ್ ಸಿಂಗ್ ಅಭಿಮಾನಿಗಳು ಕಚೇರಿ ತೆರೆದು ಸಾಮಾಜಿಕ ಕಾರ್ಯಗಳನ್ನು ನಡೆಸಲು ಆರಂಭಿಸಿದ್ದರು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಸಂಧಾನ ಸಫಲವಾದ ಕಾರಣ ಇಂದು ಬೆಳಗ್ಗೆ ಕಚೇರಿಯನ್ನು ತೆರವುಗೊಳಿಸಲಾಗಿದೆ.

    ಇತ್ತ ಆನಂದ್ ಸಿಂಗ್ ಹಾಗು ಭೀಮಾನಾಯ್ಕ್ ನಡುವೆ ಸಂಧಾನ ಯಶಸ್ವಿಯಾಗುತ್ತಿದಂತೆ ಕೆಪಿಸಿಸಿ ನಾಯಕರು ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಸಂಧಾನ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಿದ್ದರಾಮಯ್ಯ ಕರೆದು ಬುದ್ದಿ ಹೇಳಿದ್ರೂ ಮಾತು ಕೇಳ್ತಿಲ್ಲ ‘ಕೈ’ ಶಾಸಕರು

    ಸಿದ್ದರಾಮಯ್ಯ ಕರೆದು ಬುದ್ದಿ ಹೇಳಿದ್ರೂ ಮಾತು ಕೇಳ್ತಿಲ್ಲ ‘ಕೈ’ ಶಾಸಕರು

    – ಇದು ಕಾಂಗ್ರೆಸ್ ಶಾಸಕರಿಬ್ಬರ ಕಾಳಗದ ಬಿಗ್ ಸ್ಟೋರಿ

    ಬಳ್ಳಾರಿ: ಬಳ್ಳಾರಿ ಜಿಲ್ಲಾ ಕಾಂಗ್ರೆಸ್‍ನಲ್ಲಿನ ಕಿತ್ತಾಟ, ಭಿನ್ನಮತಗಳಿಗೆ ಕೊನೆಯೇ ಇಲ್ಲ ಅನ್ನಿಸುತ್ತಿದೆ. ಸಚಿವ ಸ್ಥಾನಕ್ಕಾಗಿ ಕಿತ್ತಾಡಿದ್ದಾಯ್ತು, ಜಿಲ್ಲಾಧಿಕಾರಿ ವಿಚಾರದಲ್ಲಿ ಪತ್ರ ಸಮರ ನಡೆಸಿದ್ದಾಯ್ತು, ಈಗ ಮತ್ತೊಂದು ಕಿತ್ತಾಟ ಶುರುವಾಗಿದೆ. ಅದು ಮಾಜಿ ಸಿಎಂ ಸಿದ್ದರಾಮಯ್ಯರ ಶಿಷ್ಯರಾದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ನಡುವೆ ಶೀತಲ ಸಮರ ನಡೆದಿದೆ.

    ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಇವರಿಬ್ಬರು ಶಾಸಕರು ಬಹಿರಂಗವಾಗಿ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು. ತಮ್ಮ ಕ್ಷೇತ್ರಗಳಲ್ಲಿ ಪರಸ್ಪರ ಹಸ್ತಕ್ಷೇಪದ ಇವರಿಬ್ಬರು ದೂರು ನೀಡಿದ್ದರು. ಈ ವೇಳೆ ಸ್ವತಃ ಸಿದ್ದರಾಮಯ್ಯ, ಇಬ್ಬರನ್ನು ಸಮಾಧಾನಪಡಿಸಿ ಬುದ್ದಿ ಹೇಳಿದ್ದರು. ಆದರೂ ದೊಡ್ಡವರ ಮಾತು ಕೇಳದ ಶಾಸಕ ಆನಂದಸಿಂಗ್, ಭೀಮಾನಾಯ್ಕ್ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಅಳಿಯ ಸಂದೀಪಸಿಂಗ್ ಮೂಲಕ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆಗೆ ಕೈ ಹಾಕಿದ್ದಾರೆ. ಇದಕ್ಕಾಗಿ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಎರಡು ಮನೆ, ಕಚೇರಿಗಳನ್ನ ಬಾಡಿಗೆ ತಗೆದುಕೊಂಡಿದ್ದಾರಂತೆ. ಇದರಿಂದ ಶಾಸಕರಿಬ್ಬರು ಕಿತ್ತಾಡಿಕೊಂಡಿದ್ದು, ಕಾರ್ಯಕರ್ತರಲ್ಲಿ ಇರಸುಮುರುಸು ಉಂಟು ಮಾಡಿದೆ.

    ಕಳೆದೆರಡು ಚುನಾವಣೆಯಲ್ಲಿ ಭೀಮಾನಾಯ್ಕ್ ತಮ್ಮ ಸಹಾಯದಿಂದಲೇ ಗೆದ್ದಿದ್ದು ಅನ್ನೋ ಆನಂದಸಿಂಗ್ ಇದೀಗ ಅವರ ವಿರುದ್ಧವೇ ಕಾಂಗ್ರೆಸ್ ಕಾರ್ಯಕರ್ತರನ್ನ ಎತ್ತಿಗಟ್ಟಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ತಮ್ಮ ಬೆಂಬಲಿಗನ್ನ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಬಳ್ಳಾರಿ ಕಾಂಗ್ರೆಸ್ ಅಂದ್ರೆ ಕಿತ್ತಾಟ, ಕಾಳಗ ಎನ್ನುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಳ್ಳತನವಾಗಿದ್ದ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರನ ವಜ್ರ-ಚಿನ್ನಾಭರಣ ಪತ್ತೆ!

    ಕಳ್ಳತನವಾಗಿದ್ದ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರನ ವಜ್ರ-ಚಿನ್ನಾಭರಣ ಪತ್ತೆ!

    ಬಳ್ಳಾರಿ: ಸಂಡೂರು ತಾಲೂಕಿನ ಸುಶೀಲನಗರ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದು, ಈ ಮೂಲಕ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರ ಕೃಷ್ಣಾನಾಯ್ಕ್ ಗೆ ಸೇರಿದ ವಜ್ರಾಭರಣಗಳು ಪತ್ತೆಯಾಗಿವೆ.

    ಸುಶೀಲನಗರ ನಿವಾಸಿ ಖೀರೂನಾಯ್ಕ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಸುಮಾರು 132.700 ಮಿ.ಗ್ರಾಂ ತೂಕದ ವಜ್ರ ಮತ್ತು ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಜ್ರಾಭರಣಗಳ ಮೌಲ್ಯ ಸುಮಾರು 15.90 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

    ಏನಿದು ಪ್ರಕರಣ?: 2017ರ ಜನವರಿ 3 ರಂದು ಸುಶೀಲ ನಗರ ಗ್ರಾಮದ ಉಮಾನಾಯ್ಕ್ ರ ಪತ್ನಿ ಜ್ಯೋತಿಬಾಯಿಯರನ್ನು ಕಟ್ಟಿ, ಜೀವ ಬೆದರಿಕೆ ಹಾಕಿ ಸುಮಾರು 17 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ವಜ್ರದ ಅಭರಣಗಳನ್ನು ದೋಚಿಕೊಂಡು ಪರಾಗಿಯಾಗಿದ್ದರು. ಈ ಸಂಬಂಧ ಜ್ಯೋತಿಬಾಯಿ ಸಂಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಈ ಬಂಗಾರದ ಆಭರಣಗಳು ಬೆಂಗಳೂರಿನ ವಿಶೇಷ ಭೂ ಸ್ವಾಧಿನಾಧಿಕಾರಿ ಹಾಗೂ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರ ಕೃಷ್ಣಾನಾಯ್ಕ್ ಗೆ ಸೇರಿದ್ದಾಗಿದೆ. ಕೃಷ್ಣಾನಾಯ್ಕ್ ರಿಂದ ತಗೆದುಕೊಂಡು ಬಂದಿದ್ದ ಬಂಗಾರದ ಆಭರಣಗಳನ್ನು ಜ್ಯೋತಿಭಾಯಿ ತಮ್ಮ ಮನೆಯಲ್ಲಿರಿಸಿದ್ದಾಗ ಆರೋಪಿಗಳು ಕಳ್ಳತನ ಮಾಡಿದ್ದರೆಂದು ದೂರು ದಾಖಲಾಗಿತ್ತು. ಕಳ್ಳತನದ ಆರೋಪಿ ಖೀರೂನಾಯ್ಕ್ , ಜ್ಯೋತಿಭಾಯಿ ಅವರ ಅಕ್ಕನ ಗಂಡ ಎಂದು ತಿಳಿದುಬಂದಿದೆ.

    ಬಳ್ಳಾರಿ ಡಿಸಿಬಿ ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಸನ್‍ಸಾಬ್ ಮತ್ತು ಪಿ.ಎಸ್.ಐ. ರಷೀದ್ ಅಹಮ್ಮದ್ ನೇತೃತ್ವದಲ್ಲಿ ಎಸ್.ದಿನಕರ, ಎಸ್.ಮಂಜುನಾಥ, ಸುಧೀರ್‍ಕುಮಾರ್, ಎಂ.ನವಾಬ್, ಬಿ.ಎಂ.ಸದ್ಯೋಜಾತಯ್ಯ, ಧಾರಾಸಿಂಗ್ ಉಮಾಮಹೇಶ್ವರ, ಕೆ.ಸುರೇಶ್, ಪಿ.ಲಲಿತಮ್ಮ ಅವರನ್ನು ಒಳಗೊಂಡ ತಂಡವನ್ನು ಈ ಪ್ರಕರಣದ ಪತ್ತೆಗಾಗಿ ನಿಯೋಜಿಸಲಾಗಿತ್ತು.