Tag: bhavathi

  • ದೈವದ ಮಡಿಲಲ್ಲಿ ಬೆಚ್ಚಗೆ ಕುಳಿತ ಕಂದಮ್ಮನ ಫೋಟೋ ವೈರಲ್

    ದೈವದ ಮಡಿಲಲ್ಲಿ ಬೆಚ್ಚಗೆ ಕುಳಿತ ಕಂದಮ್ಮನ ಫೋಟೋ ವೈರಲ್

    – ಮಗುವಿನ ಮುಗ್ಧತೆಗೆ ಮೂಕವಿಸ್ಮಿತರಾದ ನೆಟ್ಟಿಗರು

    ಕಣ್ಣೂರು: ಕಳೆದ ಎರಡು ದಿನಗಳಿಂದ ದೈವದ ಮಡಿಲಲ್ಲಿ ಹೆಣ್ಣು ಮಗುವೊಂದು ಹೋಗಿ ಕುಳಿತುಕೊಳ್ಳುವ ದೃಶ್ಯ ಹಾಗೂ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವರು ವಾಟ್ಸಪ್ ಸ್ಟೇಟಸ್‍ಗೆ ಹಾಕಿ ಸಂಭ್ರಮಿಸುತ್ತಿದ್ದಾರೆ.

    ಹೌದು. ಕಣ್ಣೂರು ಜಿಲ್ಲೆಯ ಅಂಜಾರಕ್ಕಂಡಿಯಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಈ ಫೋಟೋಗಳನ್ನು ಸೆರೆ ಹಿಡಿದಿರೋದು ಅಭಿಜಿತ್ ಕಾನುಮಾರತ್ತ ಎಂಬ ಛಾಯಾಗ್ರಾಹಕ. ಭಗವತಿ ತೈಯ್ಯಂ ಮಡಿಲಲ್ಲಿ ಸ್ವಲ್ಪವೂ ಅಂಜಿಕೆಯಿಲ್ಲದೆ ಹೆಣ್ಣು ಮಗು ಕುಳಿತಿರುವುದು ನೆರೆದವರ ಹುಬ್ಬೇರಿಸುವಂತೆ ಮಾಡಿದೆ. ಇದರ ಕೆಲ ಫೋಟೋ ಹಾಗೂ ವೀಡಿಯೋಗಳನ್ನು ಸ್ಥಳದಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಸದ್ಯ ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಗುವಿನ ಮುಗ್ಧತೆಗೆ ಮಾರುಹೋಗಿರುವ ಜನ ಫೋಟೋ, ವೀಡಿಯೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಹೆಣ್ಣು ಮಗು ಭಗವತಿ ತೈಯಂ ಮಡಿಲಲ್ಲಿ ಬೆಚ್ಚಗೆ ಕುಳಿತಿರುವುದನ್ನು ಕಾಣಬಹುದಾಗಿದೆ.

    ವೀಡಿಯೋದಲ್ಲಿ ಏನಿದೆ..?: ದೈವ ಮಗುವನ್ನು ಕರೆಯುತ್ತಿದ್ದಂತೆಯೇ ಅದರ ಬಳಿಗೆ ಹೋಗುತ್ತಾಳೆ. ಅಲ್ಲದೆ ದೈವ ಎತ್ತಿಕೊಳ್ಳಲೆಂದು ಕೈ ಮುಂದೆ ಮಾಡಿದಾಗ ಹೆಣ್ಣು ಮಗು ಯಾವುದೇ ಅಂಜಿಕೆ-ಅಳುಕು ಇಲ್ಲದೆ ಕೈ ಮುಂದೆ ಮಾಡಿ ಎತ್ತಿಕೊಳ್ಳುವಂತೆ ಸೂಚನೆ ನೀಡುತ್ತಾಳೆ. ಈ ವೇಳೆ ದೈವ ಆಕೆಯನ್ನು ಎತ್ತಿಕೊಂಡು ತನ್ನ ಮಡಿಲಲ್ಲಿ ಕುಳ್ಳಿರಿಸುತ್ತದೆ. ಬಳಿಕ ತಲೆ ಸವರಿ ಬಿಗಿಯಾಗಿ ಅಪ್ಪಿಕೊಳ್ಳುತ್ತದೆ. ಅಂತೆಯೇ ಮಗು ಕೂಡ ದೈವದ ಎದೆಯಲ್ಲಿ ತಲೆಯಿಟ್ಟು ತನ್ನ ಮುಗ್ಧತೆ ಮೆರೆದಿದೆ.

    ಒಟ್ಟಿನಲ್ಲಿ ಈ ಚಿತ್ರ ನೋಡಿದರೆ ನೋ ವರ್ಡ್ಸ್ ಟು ಸೇ ಅಂತಾರಲ್ಲ ಹಂಗೆ ವರ್ಣಿಸಲು ಪದಗಳೇ ಇಲ್ಲ. ಇನ್ನೊಂದೆಡೆ ದೈವದ ಮುಖದಲ್ಲಿ ಇರುವ ಸಾಂತ್ವನದ ಭಾವವನ್ನು ಕೂಡ ಇಲ್ಲಿ ನಾವು ಗಮನಿಸಬಹುದು. ಮಗುವಿನ ಮುಖದಲ್ಲಿರುವ ಆ ಮುಗ್ಧತೆ, ನಿರ್ಲಿಪ್ತತೆ, ಬೆಚ್ಚನೆಯ ಭದ್ರತೆಯ ಭಾವನೆ ಪುಟ್ಟ ಕಂದಮ್ಮನ ಕಣ್ಣಲ್ಲಿ ಕಾಣಿಸುತ್ತಿದೆ. ದೈವವನ್ನು ಎರಡು ಪುಟ್ಟ ತೋಳುಗಳಿಂದ ತನ್ನೆಡೆಗೆ ಸೆಳೆದು ದೈವ ವೇಷಧಾರಿಯ ಜೊತೆ ಹೆಜ್ಜೆ ಹಾಕುತ್ತಿರಬೇಕಾದರೆ ಕಾಣಿಸುವ ದೃಶ್ಯ ನೋಡುಗರ ಮನಸೂರೆಗೊಳ್ಳುವುದಂತೂ ಸುಳ್ಳಲ್ಲ.