Tag: bhatkala

  • ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರಿಗೆ ಪಾಸ್ಮಾ ಚಿಕಿತ್ಸೆ – ಇಂದು ಒಂದೇ ದಿನ 12 ಕೊರೊನಾ ಪ್ರಕರಣ ಪತ್ತೆ

    ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರಿಗೆ ಪಾಸ್ಮಾ ಚಿಕಿತ್ಸೆ – ಇಂದು ಒಂದೇ ದಿನ 12 ಕೊರೊನಾ ಪ್ರಕರಣ ಪತ್ತೆ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇಂದು ಒಂದೇ ದಿನ 12 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇ 8ರ ಬೆಳಗ್ಗೆಯ ಹೆಲ್ತ್ ಬುಲೆಟಿನ್ ಪ್ರಕಟಣೆ ಪ್ರಕಾರ ಭಟ್ಕಳ ಪಟ್ಟಣದಲ್ಲಿಯೇ 12 ಪ್ರಕರಣಗಳು ದೃಢಪಟ್ಟಿದೆ. ಈ 12 ಮಂದಿಗೆ ಮೇ 6ಕ್ಕೆ ಸೋಂಕು ಪತ್ತೆಯಾದ ಯುವತಿ ರೋಗಿ-659 ಅವರ ಸಂಪರ್ಕದಿಂದ ಕೊರೊನಾ ತಗುಲಿದೆ. ಈ ಪೈಕಿ 10 ಮಂದಿ ಯುವತಿಯ ಕುಟುಂಬದವರಾಗಿದ್ದಾರೆ. ಉಳಿದಂತೆ ಓರ್ವ ಸ್ನೇಹಿತೆ ಮತ್ತು ಇನ್ನೊಬ್ಬರು ಪಕ್ಕದ ಮನೆಯವರಾಗಿದ್ದಾರೆ ಎಂದು ತಿಳಿಸಿದರು.

    ಸೋಂಕಿನ ಮೂಲ ಪತ್ತೆಯಾಗಿದ್ದರಿಂದ ಸಮುದಾಯಕ್ಕೆ ಹರಡಿಲ್ಲ ಎಂಬುದು ಖಚಿತವಾಗಿದೆ. ಕೋವಿಡ್-19 ಸೋಂಕು ಈವರೆಗೆ ಜಿಲ್ಲೆಯ ಕಂಟೈನ್‍ಮೆಂಟ್ ಪ್ರದೇಶವಾದ ಭಟ್ಕಳದಲ್ಲಿದ್ದು, ಉಳಿದ ಪ್ರದೇಶಗಳ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಭಟ್ಕಳ ನಗರದಿಂದ ಮೂರು ಕುಟುಂಬಗಳು ಮಂಗಳೂರಿನ ನ್ಯೂರೋ ಆಸ್ಪತ್ರೆಗೆ ಆರೋಗ್ಯ ಚಿಕಿತ್ಸೆಗೆ ಹೋಗಿ ಬಂದಿವೆ ಎಂಬ ಮಾಹಿತಿ ದೊರೆತಿದೆ ಎಂದರು.

    ಹೀಗಾಗಿ ಜಿಲ್ಲೆಯ ಜನರು ಚಿಕಿತ್ಸೆಗೆ ಮಂಗಳೂರಿನ ನ್ಯೂರೋ ಆಸ್ಪತ್ರೆಗೆ ಹೋಗಿ ಬಂದಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಮತ್ತು ಜ್ವರ, ಕೆಮ್ಮು ಇದ್ದರೆ ಸ್ವಯಂ ಚಿಕಿತ್ಸೆಗೆ ಮುಂದಾಗದೇ ವೈದ್ಯರ ಸಲಹೆ ಪಡೆಯಬೇಕು ಎಂದು ಸೂಚಿಸಿದರು.

    ಭಟ್ಕಳ ಹೊರತುಪಡಿಸಿ ಜಿಲ್ಲೆಯ ಉಳಿದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಯಥಾವತ್ತಾಗಿ ಅನುಸರಿಸಬೇಕು. ವಿದೇಶ ಹಾಗೂ ಹೊರ ರಾಜ್ಯಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬರುವವರನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಕ್ವಾರಂಟೈನ್ ಮಾಡಲಾಗುವುದು.

    ಭಟ್ಕಳ ಕಂಟೈನ್‍ಮೆಂಟ್ ಪ್ರದೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಬಿಗಿಗೊಳಿಸಲಾಗುವುದು. ಮಾನವೀಯ ನೆಲೆಯಲ್ಲಿ ಹಿಂದೆ ನೀಡುತ್ತಿದ್ದ ಪಾಸ್ ಹಾಗೂ ಸಡಿಲಿಕೆಗಳು ಇನ್ನು ಮುಂದೆ ನೀಡಲಾಗುವುದಿಲ್ಲ. ಭಟ್ಕಳ ಸಂಪೂರ್ಣ ಸೀಲ್ ಮಾಡಲಾಗುತ್ತಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ಜೊತೆ ಯಾರೂ ಕೂಡ ಭಟ್ಕಳಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತದೆ. ಹಿಂದಿನ ನಿಯಮಕ್ಕಿಂತ ಕಠಿಣ ನಿಯಮ ಜಾರಿಮಾಡಲಾಗುತ್ತದೆ. ಇದಕ್ಕೆ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್ ಅವರು ಮಾತನಾಡಿ, ಸೋಂಕಿತರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್-19 ವಾರ್ಡಿಗೆ ಶಿಫ್ಟ್ ಮಾಡಲಾಗುತ್ತಿದೆ. ಅವರಿಗೆ ವೈದ್ಯಕೀಯ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ಸಾರ್ವಜನಿಕರು ಆರೋಗ್ಯ ಸಮೀಕ್ಷೆಯಲ್ಲಿ ಭಾಗಿಯಾಗಿ ಮಾಹಿತಿ ನೀಡಬೇಕೆಂದರು.

    ಸೋಂಕಿತರಿಗೆ ಪಾಸ್ಮಾ ಚಿಕಿತ್ಸೆ:
    ಜಿಲ್ಲೆಯಲ್ಲಿ 24 ಮಂದಿ ಸೋಂಕಿತರಿದ್ದು, ಇದರಲ್ಲಿ 11 ಮಂದಿ ಗುಣಮುಖರಾಗಿದ್ದಾರೆ. ಇವರನ್ನು ಪ್ರತ್ತೇಕವಾಗಿಡಲಾಗಿದ್ದು, ಇವರ ಆರೋಗ್ಯ ಉತ್ತಮವಾಗಿದೆ. ಗುಣಮುಖರಾದವರ ರಕ್ತವನ್ನು ಪಡೆದು ಪ್ಲಾಸ್ಮ ಚಿಕಿತ್ಸೆ ಮೂಲಕ ಸೋಂಕಿತರ ಚಿಕಿತ್ಸೆ ನೀಡಲು ಐಸಿಎಮ್‍ಆರ್ ಅವರಿಗೆ ಅವಕಾಶ ಕೇಳಿ ಜಿಲ್ಲಾಡಳಿತ ಪತ್ರ ಬರೆದಿದ್ದು, ಅವರಿಂದ ಒಪ್ಪಿಗೆ ಬಂದ ನಂತರ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ಎಂ. ರೋಷನ್ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಉತ್ತರ ಕನ್ನಡ ಜಿಲ್ಲೆಯ ಸೊಂಕಿತರ ವಿವರ:
    1) ಮಾರ್ಚ್ 22ರಂದು ಮೊದಲ ಕೊರೊನಾ ಸೋಂಕಿತ ಪ್ರಕರಣ ವರದಿ, ರೋಗಿ-26 22ವರ್ಷದ ಯುವಕ.

    2) ಮಾರ್ಚ್ 24 ರಂದು 2 ಪ್ರಕರಣ, ರೋಗಿ-35 40 ವರ್ಷದ ವ್ಯಕ್ತಿ ಹಾಗೂ ರೋಗಿ-36 65 ವರ್ಷದ ವೃದ್ಧ.

    3) ಮಾರ್ಚ್ 28ರಂದು 5 ಪ್ರಕರಣ, ರೋಗಿ-62 22 ವರ್ಷದ ಯುವಕ, ರೋಗಿ-65 54 ವರ್ಷದ ಮಹಿಳೆ(ರೋಗಿ-36 ಅವರ ಪತ್ನಿ), ರೋಗಿ-66 28 ವರ್ಷದ ಯುವತಿ(ರೋಗಿ-36 ಜೊತೆ ಸಂಪರ್ಕ), ರೋಗಿ-67 23 ವರ್ಷದ ಯುವಕ(ರೋಗಿ-36 ಜೊತೆ ಸಂಪರ್ಕ), ರೋಗಿ-76 24 ವರ್ಷದ ಯುವಕ(ಸೋಂಕಿತ ರೋಗಿ-35 ಜೊತೆ ಸಂಪರ್ಕ).

    4) ಮಾರ್ಚ್ 31ರಂದು ಒಂದು ಪ್ರಕರಣ, ರೋಗಿ-98 26 ವರ್ಷದ ಯುವಕ(ರೋಗಿ-62 ಜೊತೆ ಸಂಪರ್ಕ).

    5) ಏಪ್ರಿಲ್ 8ರಂದು ಒಂದು ಪ್ರಕರಣ, ರೋಗಿ-176 26 ವರ್ಷದ ಗರ್ಭಿಣಿ ಮಹಿಳೆ(ಐಎಲ್‍ಐ ಪ್ರಕರಣ).

    6) ಏಪ್ರಿಲ್ 14ರಂದು ಒಂದು ಪ್ರಕರಣ ರೋಗಿ-160 ಪುರುಷ(ರೋಗಿ-176 ಪತಿ).

    7) ಮೇ 5ರಂದು ಒಂದು ಪ್ರಕರಣ, ರೋಗಿ-659 18 ವರ್ಷದ ಯುವತಿ.

    8) ಮೇ 8ರಂದು 12 ಪ್ರಕರಣ, ಈ ಎಲ್ಲಾ ಸೋಂಕಿತರು ರೋಗಿ-659 ಅವರ ಸಂಪರ್ಕದಲ್ಲಿದ್ದರು. ರೋಗಿ-739, 25 ವರ್ಷದ ಮಹಿಳೆ. ರೋಗಿ-740, 18 ವರ್ಷದ ಯುವತಿ. ರೋಗಿ-741, 11 ವರ್ಷದ ಬಾಲಕಿ. ರೋಗಿ-742, 39 ವರ್ಷದ ಮಹಿಳೆ. ರೋಗಿ-743, 33 ವರ್ಷದ ವ್ಯಕ್ತಿ. ರೋಗಿ-744, 75 ವರ್ಷದ ವೃದ್ಧೆ. ರೋಗಿ-745, 12 ವರ್ಷದ ಬಾಲಕಿ. ರೋಗಿ-746, 83 ವರ್ಷದ ವೃದ್ಧ. ರೋಗಿ-747, 5 ತಿಂಗಳ ಹೆಣ್ಣು ಮಗು. ರೋಗಿ-748, 3 ವರ್ಷದ ಬಾಲಕಿ, ರೋಗಿ-749, 60 ವರ್ಷದ ವೃದ್ಧ ಹಾಗೂ ರೋಗಿ-750, 22 ವರ್ಷದ ಮಹಿಳೆ.

  • ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

    ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

    – ರಂಜಾನ್‍ಗೂ ಯಾವುದೇ ವಿನಾಯಿತಿ ಇಲ್ಲ

    ಕಾರವಾರ: ಮೇ 3ರ ತನಕ ಭಟ್ಕಳದಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರಿಯಲ್ಲಿದ್ದು, ರಂಜಾನ್ ಹಬ್ಬಕ್ಕೂ ಇದರಿಂದ ವಿನಾಯಿತಿ ಇಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಇಂದು ಸಂಜೆ ಭಟ್ಕಳಕ್ಕೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಭಟ್ಕಳದ ತಂಜೀಂ ಸಂಸ್ಥೆ ರಂಜಾನ್ ಹಬ್ಬಕ್ಕಾಗಿ ತಮಗೆ ದಿನದಲ್ಲಿ ಕನಿಷ್ಟ 2 ಗಂಟೆಯಾದರೂ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಮನವಿಯನ್ನು ನಯವಾಗಿ ತಿರಸ್ಕರಿಸಿದ ಸಚಿವರು ಮೇ 3ರ ತನಕ ನಿಯಮದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಮುಸ್ಲಿಂ ಮಾತ್ರವಲ್ಲದೇ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಯಾವುದೇ ಧರ್ಮದ ಸಾರ್ವಜನಿಕವಾಗಿ ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶವಿಲ್ಲ ಎಂದರು.

    ಮೇ 3ರವರೆಗೂ ಈ ಹಿಂದಿನ ನಿಯಮಗಳೇ ಜಾರಿಯಲ್ಲಿರಲಿವೆ. ನಂತರದ ದಿನಗಳಲ್ಲಿ ಜಿಲ್ಲೆಯ ಮತ್ತು ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ರಾಜ್ಯ ಮತ್ತು ಜಿಲ್ಲೆಗಳ ಬೆಳವಣಿಗೆಗಳನ್ನು ಗಮನಿಸಿ ಚರ್ಚೆ ನಡೆಸಿ ತಿಳಿಸಲಾಗುವುದು. ಏಪ್ರಿಲ್ 26, 27ರೊಳಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಕೊರೊನಾ ಮುಕ್ತವಾಗಲು ಎಲ್ಲಾ ಹೋರಾಟ ನಡೆಸುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಕೇಳಿಕೊಂಡರು.

    ಡಿಸ್ಚಾರ್ಜ್ ಸಮ್ಮರಿ ವಿತರಣೆ
    ಭಟ್ಕಳದಲ್ಲಿ ಪತ್ತೆಯಾದ ಮೊದಲ 3 ಪ್ರಕರಣಗಳ ಸೋಂಕಿತರು ಗುಣಮುಖರಾಗಿ ಬಂದಿದ್ದು, ಅವರಿಗೆ ಸಚಿವ ಶಿವರಾಮ್ ಹೆಬ್ಬಾರ್ ಡಿಸ್ಚಾರ್ಜ್ ಸಮ್ಮರಿ ವಿತರಿಸಿ ಅಭಿನಂದಿಸಿದರು. ಮನೆಯಲ್ಲಿದ್ದು ಇತರರಲ್ಲೂ ಜಾಗೃತಿ ಮೂಡಿಸುವಂತೆ ಮನವಿ ಮಾಡಿ ಆಸ್ಪತ್ರೆಯಿಂದ ಬೀಳ್ಕೊಟ್ಟರು.

    ಈ ವೇಳೆ ಶಾಸಕ ಸುನೀಲ್ ನಾಯ್ಕ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ ಕುಮಾರ್, ನೊಡಲ್ ಅಧಿಕಾರಿ ಡಾ. ಶರದ್ ನಾಯಕ, ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಡಿಎಚ್‍ಒ ಡಾ.ಮೂರ್ತಿರಾಜ್ ಭಟ್, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇದ್ದರು.

  • ಭಟ್ಕಳದ ಗರ್ಭಿಣಿಗೆ ಉಡುಪಿಯಲ್ಲಿ ಚಿಕಿತ್ಸೆ – ಮಾನವೀಯತೆ ಮೆರೆದ ಜಿಲ್ಲಾಡಳಿತ

    ಭಟ್ಕಳದ ಗರ್ಭಿಣಿಗೆ ಉಡುಪಿಯಲ್ಲಿ ಚಿಕಿತ್ಸೆ – ಮಾನವೀಯತೆ ಮೆರೆದ ಜಿಲ್ಲಾಡಳಿತ

    ಉಡುಪಿ: ಉತ್ತರ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತ ಗರ್ಭಿಣಿಗೆ ಉಡುಪಿಯಲ್ಲಿ ಚಿಕಿತ್ಸೆ ಶುರು ಮಾಡಲಾಗಿದೆ. ಈ ಮೂಲಕ ಉಡುಪಿ ಜಿಲ್ಲಾಡಳಿತ ಮಾನವೀಯತೆ ಮೆರೆದಿದೆ.

    ಭಟ್ಕಳ ಮೂಲದ 26 ವರ್ಷದ ಗರ್ಭಿಣಿಯನ್ನು ಉಡುಪಿ ಜಿಲ್ಲೆಗೆ ಶಿಫ್ಟ್ ಮಾಡಲಾಗಿದೆ. ಉಡುಪಿ ನಗರದಲ್ಲಿರುವ ಟಿಎಂಎಪೈ ಆಸ್ಪತ್ರೆಯಲ್ಲಿ ವಿಶೇಷ ನಿಗಾದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯನ್ನು ಉಡುಪಿಗೆ ಶಿಫ್ಟ್ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಡಳಿತವನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡಿದ್ದರು.

    ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾನವೀಯತೆ ಮೆರೆದಿದ್ದು, ಉಡುಪಿಯಲ್ಲಿ ಚಿಕಿತ್ಸೆ ಕೊಡುವುದಾಗಿ ಸಮ್ಮತಿ ನೀಡಿದ್ದಾರೆ. ಭಟ್ಕಳದಿಂದ ಕೊರೊನಾ ಸೋಂಕಿತ ಗರ್ಭಿಣಿಯನ್ನು ಉಡುಪಿಗೆ ಶಿಫ್ಟ್ ಮಾಡಿ ಚಿಕಿತ್ಸೆ ಶುರು ಮಾಡಲಾಗಿದೆ. ಉಡುಪಿಯ ಟಿಎಂಎಪೈ ಆಸ್ಪತ್ರೆಯನ್ನು ಕೊರೊನಾ ರೋಗಿಗಳಿಗಾಗಿ ಸಂಪೂರ್ಣವಾಗಿ ಮೀಸಲಿಡಲಾಗಿದೆ. ಇಲ್ಲಿ ವೆಂಟಿಲೇಷನ್ ಮತ್ತು ಐಸಿಯು ವಿಭಾಗದಲ್ಲಿ ಕೆಎಂಸಿ ಮಣಿಪಾಲದ ನುರಿತ ತಜ್ಞ ವೈದ್ಯರನ್ನು ನೇಮಕ ಮಾಡಲಾಗಿದೆ. ಅವರಿಂದಲೇ ಸದ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಎಚ್‍ಒ ಡಾ.ಸುಧೀರ್ ಚಂದ್ರ ಸೂಡಾ, ಮಾನವೀಯತೆಯ ನೆಲೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ನಮ್ಮ ಜಿಲ್ಲೆಯ ಕೊರೊನಾ ರೋಗಿಗಳಿಗಾಗಿಯೇ ಈ ಆಸ್ಪತ್ರೆಯನ್ನು ಈವರೆಗೆ ಮೀಸಲಿಟ್ಟಿದ್ದೆವು. ವಿಶೇಷ ಪ್ರಕರಣ ಆಗಿರುವುದರಿಂದ ಮಹಿಳೆಗೆ ಇಲ್ಲಿ ಚಿಕಿತ್ಸೆ ಕೊಡುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲ ವಿಷಯದಲ್ಲಿ ಇದನ್ನು ಮುಂದುವರಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

  • ಉತ್ತರ ಕನ್ನಡದಲ್ಲಿ ಗರ್ಭಿಣಿಗೆ ಕೊರೊನಾ – ಜಿಲ್ಲೆಯಲ್ಲಿ 9ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಉತ್ತರ ಕನ್ನಡದಲ್ಲಿ ಗರ್ಭಿಣಿಗೆ ಕೊರೊನಾ – ಜಿಲ್ಲೆಯಲ್ಲಿ 9ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಕಾರವಾರ: ದೇಶದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ಉತ್ತರ ಕನ್ನಡ ಜಿಲ್ಲೆಯಲ್ಲಿ ಹತೋಟಿಗೆ ಬರುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಭಟ್ಕಳದಲ್ಲಿ ಗರ್ಭಿಣಿ ಒಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

    26 ವರ್ಷದ ಐದು ತಿಂಗಳ ಗರ್ಭಿಣಿಗೆ ಸೋಂಕು ಇರುವುದು ದೃಢಪಟ್ಟಿದೆ. ಈಕೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಈಕೆಯ ಪತಿ ದುಬೈನಿಂದ ವಾಪಸ್ಸಾಗಿದ್ದರು. ಆದರೆ ಪತಿಯ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾಗೆ ಮತ್ತೊಂದು ಸಾವು- ಮತ್ತೆ ಆರು ಮಂದಿಗೆ ಸೋಂಕು

    ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಮಾರ್ಚ್ 17ರಂದು ಮುಂಬೈಗೆ ವಿಮಾನದ ಮೂಲಕ ಬಂದಿಳಿದಿದ್ದರು. ಮುಂಬೈನಲ್ಲಿ ಸುಮಾರು 4 ದಿನ ಉಳಿದಿದ್ದರು. ಆ ನಂತರ ರೈಲಿನಲ್ಲಿ ಭಟ್ಕಳಕ್ಕೆ ಬಂದಿದ್ದರು. ಭಟ್ಕಳ ರೈಲು ನಿಲ್ದಾಣದಿಂದ ಸ್ನೇಹಿತನ ಬೈಕ್‍ನಲ್ಲಿ ಮನೆಗೆ ತೆರಳಿದ್ದರು.

    ದುಬೈನಿಂದ ಬಂದವರಾಗಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯ ಪತಿಯ ಕೈಗೆ ಹೋಂ ಕ್ವಾರಂಟೈನ್ ಮುದ್ರೆ ಹಾಕಿದ್ದರು. ಮಾರ್ಚ್ 31ರಂದು ಮಹಿಳೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಆಕೆಯನ್ನು ಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ ಪತಿಯ ಕೈ ಮೇಲೆ ಕ್ವಾರಂಟೈನ್ ಮುದ್ರೆ ಇರುವುದನ್ನು ಗಮನಿಸಿ ವೈದ್ಯರ ಗಮನಕ್ಕೆ ತಂದಿದ್ದಾರೆ. ನಂತರ ಇಬ್ಬರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಈ ವೇಳೆ ಪತ್ನಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದ್ದು, ಪತಿಯ ವರದಿ ನೆಗೆಟಿವ್ ಬಂದಿದೆ. ಇದೀಗ ಪತಿಯ ಗಂಟಲಿನ ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಸೋಂಕಿತ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಇನ್ನೊಮ್ಮೆ ಕಳುಹಿಸಲಾದ ಪತಿಯ ಗಂಟಲಿನ ದ್ರವದ ಮಾದರಿಯ ವರದಿ ಬರಬೇಕಿದ್ದು, ಅಲ್ಲಿಯವರೆಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಗರ್ಭಿಣಿಯ ಪತಿಗೆ ಕೊರೊನಾ ಇದ್ದು ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಅದು ಅವರಲ್ಲಿ ಕಾಣಿಸಿಕೊಳ್ಳದೇ ಇರಬಹುದು. ಅಥವಾ ಅವರಲ್ಲಿದ್ದ ವೈರಾಣು ನಾಶವಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಅವರು 14 ದಿನಗಳ ಕ್ವಾರಂಟೈನ್ ಪೂರೈಸಿದ ಬಳಿಕ ಪತ್ನಿಯೊಂದಿಗೆ ಸಂಪರ್ಕ ಹೊಂದಿದ್ದು, ಈ ವೇಳೆ ವೈರಾಣು ಆಕೆಗೆ ತಗುಲಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ.

  • 50 ಸಾವಿರಕ್ಕೆ ನನ್ನನ್ನು ಖರೀದಿಸಲು ಯತ್ನಿಸಿದ್ದರು: ಬಿಜೆಪಿ ಮಾಜಿ ಸಚಿವರ ವಿರುದ್ಧ ಮಹಿಳೆ ಆರೋಪ

    50 ಸಾವಿರಕ್ಕೆ ನನ್ನನ್ನು ಖರೀದಿಸಲು ಯತ್ನಿಸಿದ್ದರು: ಬಿಜೆಪಿ ಮಾಜಿ ಸಚಿವರ ವಿರುದ್ಧ ಮಹಿಳೆ ಆರೋಪ

    ಬೆಂಗಳೂರು: ದೇಶದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಮೀಟೂ ಈಗ ರಾಜ್ಯ ರಾಜಕೀಯದಲ್ಲೂ ಸದ್ದು ಮಾಡಿದ್ದು, ಬಿಜೆಪಿ ಮುಖಂಡ, ಮಾಜಿ ಸಚಿವ ಶಿವಾನಂದ ನಾಯ್ಕ್ ವಿರುದ್ಧ ಆರೋಪ ಕೇಳಿ ಬಂದಿದೆ.

    ಈ ಹಿಂದೆ ರಾಜ್ಯ ಬಿಜೆಪಿಯಲ್ಲಿ ಕೆಲಸ ಮಾಡಿದ್ದ ಮಾಧುರಿ ಎಂಬವರು ತಮ್ಮ ಫೇಸ್‍ಬುಕ್ ನಲ್ಲಿ ಭಟ್ಕಳ ಮಾಜಿ ಶಾಸಕ ಶಿವಾನಂದ ನಾಯಕ್ ಮೇಲೆ ಆರೋಪ ಮಾಡಿದ್ದಾರೆ.

    ಸಾರ್ವಜನಿಕ ಸಭೆಯಲ್ಲಿ ಶಿವಾನಂದ ನಾಯಕ್ ಅವರ ಪರಿಚಯವಾಯಿತು. ಬಳಿಕ ಅವರ ಖಾಸಗಿ ಫೋನ್ ನಂಬರ್ ಪಡೆದು, ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ತಮಗೆ 100ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದು, ಊಟ, ಕಾಪಿಗೆ ಬಂದು ತಮ್ಮೊಂದಿಗೆ ರಾತ್ರಿ ಪೂರ್ಣ ಕಾಲ ಕಳೆಯುವಂತೆ ಹೇಳಿದ್ದರು ಎಂದು ಆರೋಪಿಸಿದ್ದಾರೆ.

    ಎಫ್‍ಬಿ ಪೋಸ್ಟ್ ನಲ್ಲಿ ಏನಿದೆ?
    ನಾನು ಕೆಲ ಮುಖಂಡರಿಗೆ ಫೋನ್ ನಂಬರ್ ನೀಡಿದ್ದನ್ನು ಅವರು ಗ್ರೀನ್ ಸಿಗ್ನಲ್ ಎಂದೇ ಭಾವಿಸಿದ್ದರು. ನನ್ನನ್ನು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಕಾಫಿಗಾಗಿ ಕರೆದಿದ್ದರು. ಕಾಫಿ ಕುಡಿಯುವಾಗ ಯಾವ ರೂಮ್ ಬುಕ್ ಮಾಡಲಿ ಎಂದು ಕೇಳಿದ್ದರು. ಯಾಕೆ ಎಂದು ಕೇಳಿದಾಗ ನಿಮ್ಮ ಪ್ರಿಫರೆನ್ಸ್ ನೋಡಬೇಕು ವಿತ್ ಟಬ್ ಆರ್ ವಿಥೌಟ್ ಟಬ್ ಎಂದಿದ್ದರು. ನಾನು ಕೂಡಲೇ ಕಾಫಿಯನ್ನು ಅವರ ಮುಖದ ಮೇಲೆ ಎಸೆದಿದ್ದೆ. ಆಗ ನನಗೆ 500 ರೂ.ಗಳ ಬಂಡಲ್ ಹಣ ಕೊಡಲು ಬಂದಿದ್ರು. ನನ್ನ ಕೈ ಹಿಡಿದು ಎಳೆದಾಡಿದರು. ಅವರು 50 ಸಾವಿರ ರೂ.ಗೆ ನನ್ನನ್ನು ಖರೀದಿಸಬಹುದು ಎಂದುಕೊಂಡಿದ್ದರು. ಇದಕ್ಕೆ ನಾನು, ನೀವು ಇಲ್ಲಿಂದ ಹೊರಗಡೆ ಹೋಗ್ತೀರಾ ಅಥವಾ ಹೊಡೆಯಬೇಕೇ ಎಂದು ಪ್ರಶ್ನಿಸಿದೆ. ಕೂಡಲೇ ಅವರು ಹೊರಟು ಹೋದರು. ಈ ಘಟನೆಯಾದ ಬಳಿಕ 100 ಬಾರಿ ನನಗೆ ಕರೆ ಮಾಡಿದ್ದು ನನಗೆ ನೆನಪಿದೆ. ಆ ಸಮಯದಲ್ಲಿ ಮೊಬೈಲ್ ನಲ್ಲಿ ಯಾವುದೇ ಬ್ಲಾಕ್ ಆಯ್ಕೆಗಳು ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ..

    ಈ ಕುರಿತು ಪ್ರತಿಕ್ರಿಯಿಸಿರುವ ಶಿವಾನಂದ್ ನಾಯ್ಕ್, ವೈಯಕ್ತಿಕವಾಗಿ ಅವರ ಪರಿಚಯ ನನಗಿಲ್ಲ. ಅವರು ಯಾರೆಂಬುದೇ ನನಗೆ ಗೊತ್ತಿಲ್ಲ. ಅಂತಹ ಯಾವುದೇ ಆರೋಪವನ್ನು ಅವರು ಸಾಬೀತು ಪಡಿಸಲಿ, ನಾನು ಯಾವುದೇ ಹೆಣ್ಣು ಮಕ್ಕಳ ಜೊತೆ ಆ ರೀತಿ ನಡೆದುಕೊಂಡಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದೇನೆ. ಅವರ ಹೇಳಿಕೆಗಳು ಸುಳ್ಳು, ನನ್ನನ್ನು ಮುಂದಿನ ಲೋಕಸಭಾ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲು ಉದ್ದೇಶ ಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ದೂರನ್ನು ದಾಖಲಿಸುತ್ತೇನೆ ಎಂದು ತಿಳಿಸಿದರು.

    ಫೇಸ್‍ಬುಕ್ ನಲ್ಲಿ ಬಿಜೆಪಿ ನಾಯಕರ ಬಗ್ಗೆ ಹೇಳಿಕೊಂಡಿದ್ದ ಮಾಧುರಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಈ ಹಿಂದೆ ಪ್ರಕಟಿಸಿದ್ದ ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: #MeToo ಸುಳಿಯಲ್ಲಿ ಕೇಂದ್ರ ಸಚಿವ ಸದಾನಂದಗೌಡ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಗೋವಾ, ಬೆಳಗಾವಿ, ಧಾರವಾಡ, ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನ ಹಂಚಿಕೊಂಡಿದೆ ಉತ್ತರ ಕನ್ನಡ ಜಿಲ್ಲೆ. ಹಚ್ಚ ಹಸುರಿನ ಸೀರೆಯುಟ್ಟು ಸದಾ ಮದುವಣಗಿತ್ತಿಯಂತೆ ಕಂಗೊಳಿಸೋ ಈ ಜಿಲ್ಲೆಗೆ ಅರಬ್ಬೀ ಸಮುದ್ರ ಕಿರೀಟಕ್ಕೊಂದು ಗರಿ ಇಟ್ಟಂತೆ. ರವೀಂದ್ರ ನಾಥರಿಗೆ ಗೀತಾಂಜಲಿ ಬರೆಯೋದಕ್ಕೆ ಸ್ಪೂರ್ತಿ ನೀಡಿದ್ದು ಕಾರವಾರದ ಕಡಲ ತೀರವಂತೆ. ಆದ್ರೆ, ಅಭಿವೃದ್ಧಿ ಅನ್ನೋ ವಿಚಾರ ಬಂದಾಗ ಮಾತ್ರ ಉತ್ತರ ಕನ್ನಡ ಜಿಲ್ಲೆ ನಿರುತ್ತರವಾಗಿ ಬಿಡುತ್ತದೆ. ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲ ಜಿಲ್ಲೆಯ ಪ್ಲಸ್ ಪಾಯಿಂಟ್ ಆಗಿದ್ರೂ ಕೈಗೆಟುಕದೇ ಇರೋ ಅಭಿವೃದ್ಧಿಯೇ ಈ ಜಿಲ್ಲೆಗೆ ತಟ್ಟಿದ ಮಹಾನ್ ಶಾಪ. ಇಂತಿಪ್ಪ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಚುನಾವಣೆ ರಂಗು ರಂಗೇರಿದೆ.

    ಹಸಿರ ಕಾನನದ ನಡುವೆ ರಮ್ಯ ತಾಣಗಳ ವೈಭವ
    ಉತ್ತರ ಕರ್ನಾಟಕಕ್ಕೆ ಹೋಗೋರು ಬನವಾಸಿಗೆ ಹೋಗಿಲ್ಲ ಅಂದ್ರೆ ನಿಮ್ಮ ಪ್ರವಾಸ ಪರಿಪೂರ್ಣವಾಗೋಕೆ ಸಾಧ್ಯಾನೇ ಇಲ್ಲ. ಮಹಾಕವಿ ಪಂಪನೇ ವರ್ಣಿಸಿರುವಂತೆ ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನ ಬನವಾಸಿ ದೇಶಮಂ ಅಂತಾ ಈ ಸ್ಥಳವನ್ನು ಮನಬಿಚ್ಚಿ ವರ್ಣಿಸಿದ್ದಾನೆ.

    ಇನ್ನು ಬೇಲೆಕೇರಿಯ ಅದಿರು ನಾಪತ್ತೆ ಪ್ರಕರಣವನ್ನು ಯಾರಾದ್ರೂ ಮರೆಯೋದುಂಟೇ..? ಬೇಲೆಕೇರಿ ಅತ್ಯಂತ ಹಳೆಯ ಹಾಗೂ ಸುಂದರ ಬಂದರು. ಉತ್ತರ ಕನ್ನಡದ ಭಟ್ಕಳ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಹೆಬ್ಬಾಗಿಲಾಗಿತ್ತಂತೆ. ಭಯೋತ್ಪಾದಕ ಚಟುವಟಿಕೆಗಳು ಈ ಊರಿಗೆ ಕಪ್ಪು ಮಸಿ ಬಳೀತಾದ್ರೂ ಇಂದಿಗೂ ಭಟ್ಕಳ ಶಾಂತ ಸಮುದ್ರದಂತೆ ಕಂಗೊಳಿಸುತ್ತದೆ.

    ಕಾರವಾರದಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿದೆ ದಾಂಡೇಲಿ. ಸಿಂಥೇರಿ ರಾಕ್ಸ್, ನಾಗಝರಿ ವ್ಯಾಲಿ, ಕಾವಲಾ ಕೇವ್ಸ್ ಹಗೆ ದಾಂಡೇಲಿಯಲ್ಲಿ ನೋಡೋದಕ್ಕೆ ಅನೇಕ ಸ್ಥಳಗಳಿವೆ. ಅರಣ್ಯದಲ್ಲಿರೋ ವಸತಿ ಗೃಹದಲ್ಲಿ ಉಳಿದುಕೊಂಡು ಪ್ರವಾಸವನ್ನ ಕೂಲಾಗಿ ಅನುಭವಿಸಬಹುದು.

    ಕಾರವಾರದಿಂದ ಸರಿ ಸುಮಾರು 60 ಕಿಲೋಮೀಟರ್ ದೂರದಲ್ಲಿರೋ ಪುಣ್ಯ ಕ್ಷೇತ್ರವೇ ಗೋಕರ್ಣ. ಶಿವನ ಆತ್ಮಲಿಂಗದ ಒಂದು ತುಣುಕು ಇಲ್ಲಿದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಈ ಕ್ಷೇತ್ರ ವಾರಣಾಸಿಯಷ್ಟೇ ಪವಿತ್ರ ಅನ್ನೋದು ಭಕ್ತರ ಅಂಬೋಣ. ಇನ್ನುಳಿದಂತೆ ಕಾರವಾರ ಸಮುದ್ರ ತೀರ, ಶಿರಸಿಯ ಮಾರಿಕಾಂಬ ದೇವಾಲಯ, ಶ್ಯಾಮಲೆಯ ತಟದಲ್ಲಿರೋ ಸೊಂದಾ ಮಠ, ಹಾಗೆಯೇ ಪ್ರಸಿದ್ಧ ಪ್ರವಾಸೀ ತಾಣವಾಗಿರೋ ಯಾಣ ಕೂಡಾ ನೋಡುಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತೆ.

    ದಕ್ಷಿಣ ಕನ್ನಡದಲ್ಲಿ ತೆಂಕು ತಿಟ್ಟು, ಉತ್ತರ ಕನ್ನಡದಲ್ಲಿ ಬಡಾ ಬಡಗುತಿಟ್ಟಿನ ತಾಳ ಮೇಳ..!
    ಯಕ್ಷಗಾನದಲ್ಲಿ ತೆಂಕು ತಿಟ್ಟು, ಬಡಗು ತಿಟ್ಟು ಹಾಗೂ ಬಡಾ ಬಡಗುತಿಟ್ಟು ಅನ್ನೋ ಪ್ರಬೇಧಗಳಿವೆ. ಇದ್ರಲ್ಲಿ ಉತ್ತರ ಕನ್ನಡದವರು ಬಡಾ ಬಡಗು ತಿಟ್ಟನ್ನಾಡುತ್ತಾರೆ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಶೇಣಿ ಗೋಪಾಲಕೃಷ್ಣ ಭಟ್ ಹೀಗೆ ಉತ್ತರಕನ್ನಡ ಘಟಾನುಘಟಿ ಯಕ್ಷಕರ್ಮಿಗಳ ತವರೂರು. ಇಂದಿಗೂ ಮನೋರಂಜನೆಗಾಗಿ ಸಿನಿಮಾ, ಟಿವಿ ಮಾಧ್ಯಮಗಳಿದ್ರೂನೂ ಉತ್ತರ ಕನ್ನಡದ ಮಂದಿ ಮಾತ್ರ ಯಕ್ಷಗಾನವನ್ನ ತಮ್ಮ ಉಸಿರಲ್ಲಿ ಉಸಿರಾಗಿಸ್ಕೊಂಡಿದ್ದಾರೆ.

    ಉತ್ತರ ಕನ್ನಡದಲ್ಲಿ ಉತ್ತರವೇ ಇಲ್ಲದ ಪ್ರಶ್ನೆಗಳು ಹಲವಾರು..!
    ಇಷ್ಟೆಲ್ಲಾ ವೈಶಿಷ್ಟ್ಯತೆಗಳ ನಡುವೆ ಉತ್ತರ ಕನ್ನಡದಲ್ಲಿ ಈ ಬಾರಿ ಅತೀ ಹೆಚ್ಚು ಸದ್ದು ಮಾಡಿದ್ದು ಪರೇಶ್ ಮೇಸ್ತಾ ಸಾವು. ಇದು ದೊಡ್ಡ ಮಟ್ಟದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಪರಿಣಾಮ ಬೀರೋ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು, ಅಭಿವೃದ್ಧಿ ಹಾಗೂ ಉತ್ತರ ಕನ್ನಡ ಒಂದು ರೀತಿಯಲ್ಲಿ ಎಣ್ಣೆ ಸೀಗೆ ಇದ್ದಂತೆ. ಅಭಿವೃದ್ಧಿ ಅನ್ನೋದನ್ನ ನೋಡಿಯೇ ಕಾಲವಾಗಿದೆ. ಹಾಗಾದ್ರೆ, ಕ್ಷೇತ್ರವಾರು ಲೆಕ್ಕಾಚಾರಗಳು, ಕಳೆದ ಬಾರಿಯ ಫಲಿತಾಂಶ ಹಾಗೂ ಈ ಬಾರಿಯ ಕ್ಯಾಂಡಿಡೇಟ್ ಗಳ ವಿವರಗಳನ್ನು ನೋಡೋಣ ಬನ್ನಿ.

    ಕಾರವಾರ ಈ ಬಾರಿ ಯಾರ ಪಾಲಿನ ವರ..?

    ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾ ಕಾರವಾರದಲ್ಲಿದೆ. ಕರ್ನಾಟಕದ ಎರಡನೇ ಅತೀ ಪ್ರಮುಖ ಬಂದರೂ ಕೂಡಾ ಹೌದು. ಇಲ್ಲಿನ ಜನ ಪಕ್ಷ ನೋಡೋರೇ ಅಲ್ಲ. ಯಾವ ವ್ಯಕ್ತಿ ಸೂಕ್ತ, ಯಾರ ವರ್ಚಸ್ಸು ಇಲ್ಲಿ ವರ್ಕೌಟ್ ಆಗುತ್ತೋ ಅವರಿಗೇ ಇಲ್ಲಿನ ಮತದಾರ ಜೈ ಅಂತಾನೆ. 2013ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಜಂಪ್ ಆಗಿದ್ದ ಆನಂದ್ ಅಸ್ನೋಟಿಕರ್ ಇಲ್ಲಿ ಮಕಾಡೆ ಮಲಗಿದ್ರು. ಈ ಬಾರಿ ಆಸ್ನೋಟಿಕರ್ ಜೆಡಿಎಸ್ ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೆಡಿಎಸ್ ಇಲ್ಲಿ ಇದ್ದೂ ಇಲ್ಲದಂತಿದ್ರೂ ಆಸ್ನೋಟಿಕರ್ ಹೆಸರು ಸ್ವಲ್ಪ ಮಟ್ಟಿಗೆ ಪರಿಗಣಿತಗೊಳ್ಬೋದು. ಇನ್ನುಳಿದಂತೆ ಬಿಜೆಪಿಯಿಂದ ರೂಪಾಲಿ ನಾಯ್ಕ್, ಕಾಂಗ್ರೆಸ್ ನಿಂದ ಸತೀಶ್ ಸೈಲ್ ಕೃಷ್ಣ ಕಣದಲ್ಲಿದ್ದಾರೆ. ಸೋ ಇಲ್ಲಿ ಮತದಾರ ಯಾರಿಗೆ ಜೈ ಅಂತಾನೆ ಅನ್ನೋದೇ ಸದ್ಯದ ಕುತೂಹಲ.

    ಕುಮಟಾದಲ್ಲಿ ಗೆಲುವಿನ ತಮಟೆ ಹೊಡೆಯೋರು ಯಾರು..?
    ಕುಮಟಾ ಹೊನ್ನವರ ಕ್ಷೇತ್ರದ ಹಾಲಿ ಶಾಸಕಿ ಶಾರದಾ ಮೋಹನ ಶೆಟ್ಟಿ. ಈ ಬಾರಿಯೂ ಇವರೇ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್ ನಿಂದ ಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ್ ನಾಯ್ಕ್ ಬಿರುಸಿನ ಪ್ರಚಾರ ನಡೆಸ್ತಾ ಇದ್ದಾರೆ. 2013ರಲ್ಲಿ ಜೆಡಿಎಸ್ ನಿಂದ ಕಂಟೆಸ್ಟ್ ಮಾಡಿ ಕೇವಲ 420 ಮತಗಳಿಂದ ಸೋಲು ಕಂಡಿದ್ದ ದಿನಕರ್ ಶೆಟ್ಟಿ ಈ ಬಾರಿ ಭಾಜಪಾದ ಹುರಿಯಾಳು. ಕಳೆದ ಬಾರಿ ಶಾರದ ಮೋಹನ್ ಶೆಟ್ಟಿ 36,756 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ರು. ಜೆಡಿಎಸ್ ನ ದಿನಕರ್ ಕೇಶವ್ ಶೆಟ್ಟಿ 36,336 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತರಾಗ್ಬೇಕಾಯ್ತು.

    ಭಟ್ಕಳದಲ್ಲಿ ಗೆಲುವಿನ ಅಟ್ಟಕ್ಕೇರೋರು ಯಾರು..?
    ಕಳೆದ ಬಾರಿ ಪಕ್ಷೇತರವಾಗಿ ನಿಂತು ಗೆದ್ದು ಬೀಗಿದ್ದ ಮಂಕಾಳ ವೈದ್ಯ ಈ ಬಾರಿ ಕಾಂಗ್ರೆಸ್ ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುನಿಲ್ ನಾಯ್ಕ್ ಈ ಬಾರಿ ಬಿಜೆಪಿಯ ಕಟ್ಟಾಳು. ಜೆಡಿಎಸ್ ಇನಾಯಿತುಲ್ಲಾ ಷಾ ಬಂದ್ರಿಯವರಿಗೆ ಟಿಕೆಟ್ ಕೊಡೋದಕ್ಕೆ ಬಯಸಿದ್ರೂ ಕೊನೆಗೆ ಯಾರನ್ನೂ ಕಣಕ್ಕಿಳಿಸದೆ ಸೈಲೆಂಟಾಗಿದೆ.

    ಹಳಿಯಾಳದಲ್ಲಿ ಗೆಲುವಿನ ಹಳಿಯಲ್ಲಿ ಓಡೋರು ಯಾರು..?
    ಹಳಿಯಾಳ ಕ್ಷೇತ್ರ ಸಚಿವ ಆರ್.ವಿ ದೇಶಪಾಂಡೆಯವ್ರ ಸಾಮ್ರಾಜ್ಯ. 1983ರಿಂದ ಸತತ ಆರು ಎಲೆಕ್ಷನ್ ಗೆದ್ದಿರೋ ದೇಶಪಾಂಡೆಗೆ ಇಲ್ಲಿ ಸೋಲಿನ ರುಚಿ ತೋರಿಸೋರು ಯಾರು ಇಲ್ಲ ಅನ್ನೋ ಪರಿಸ್ಥಿತಿ ಇತ್ತು. ಆದ್ರೆ, 2008ರಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿಸಿದ್ದ ಸುನಿಲ್ ಹೆಗಡೆ ದೇಶಪಾಂಡೆಯವ್ರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ರು. ಆದ್ರೆ, 2013ರಲ್ಲಿ ಮತ್ತೆ ದೇಶಪಾಂಡೆ ಗೆಲುವಿನ ನಗೆ ಬೀರಿದ್ರು. ಈಗ ಇಬ್ಬರೂ ಮತ್ತೆ ಮುಖಾಮುಖಿಯಾಗ್ತಿದ್ದಾರೆ. ಜೆಡಿಎಸ್ ನಿಂದ ಕೆ. ರಮೇಶ್ ಈ ಬಾರಿ ಕಣದಲ್ಲಿದ್ದಾರೆ.

    ಶಿರಸಿಯಲ್ಲಿ ಯಾರ ಶಿರಕ್ಕೆ ಗೆಲುವಿನ ಮುಕುಟ..?
    ಬಿಜೆಪಿಯಿಂದ ಶಿರಸಿಯನ್ನು ಹೇಗಾದ್ರೂ ಮಾಡಿ ಕಸಿಯಲೇಬೇಕು ಅನ್ನೋ ಪಣಕ್ಕೆ ಬಿದ್ದಿವೆ ಕಾಂಗ್ರೆಸ್ ಹಾಗೂ ಜೆಡಿಎಸ್. 1999ರಿಂದಲೂ ಇಲ್ಲಿ ಬಿಜೆಪಿಯದ್ದೇ ಅಬ್ಬರ. ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ. ದಿ.ರಾಮಕೃಷ್ಣ ಹೆಗಡೆ ಕುಟುಂಬದ ಶಶಿಭೂಷಣ ಹೆಗಡೆ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದು ಕದನ ಕಣ ಕುತೂಹಲ ಮೂಡಿಸಿದೆ. ಹೀಗಾಗಿ, ಶಿರಸಿ ಹವ್ಯಕರ ಮತ ಬ್ಯಾಂಕ್ ಒಡೆದು ಹೋಗುವ ಸಾಧ್ಯತೆ ದಟ್ಟವಾಗಿದೆ. ದಿ.ಎಸ್ ಬಂಗಾರಪ್ಪ ಅವ್ರ ದೂರದ ಸಂಬಂಧಿ ಭೀಮಣ್ಣ ನಾಯ್ಕ್ ಕೂಡಾ ಕಣದಲ್ಲಿದ್ದು ಈ ಬಾರಿ ಘಟಾನುಘಟಿ ನಾಯಕ್ರ ಸಂಬಂಧಿಕರದ್ದೇ ಚರ್ಚೆ ಶಿರಸಿಯಲ್ಲಿ ಜೋರಾಗಿದೆ.

    ಯಲ್ಲಾಪುರದ ಅರಸ ಯಾರಾಗ್ತಾರೆ..?
    ಯಲ್ಲಾಪುರದ ಜನರಿಗೆ ಬಿಜೆಪಿ ಫೆವರೇಟ್ ಅನ್ನೋದು ಸದ್ಯಕ್ಕಿರೋ ಟ್ರೆಂಡ್. ಯಾಕಂದ್ರೆ ಇಲ್ಲಿ ಜನಪ್ರತಿನಿಧಿಗಳು ಯಾರಾಗ್ಬೇಕು ಅನ್ನೋದನ್ನ ನಿರ್ಧರಿಸೋರೇ ಹವ್ಯಕ ಬ್ರಾಹ್ಮಣ, ಲಿಂಗಾಯತ ಹಾಗೂ ನಾಮಧಾರಿಗಳು. ಆದ್ರೆ, 2013ರಲ್ಲಿ ಈ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಹೋಗಿತ್ತು. ಹಾಲಿ ಶಾಸ್ ಕಾಂಗ್ರೆಸ್ ನ ಶಿವರಾಮ ಹೆಬ್ಬಾರ್ ಈ ಬಾರಿಯೂ ಕಣದಲ್ಲಿದ್ದಾರೆ. ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ತೆನೆ ಹೊತ್ತಿದ್ದ ರವೀಂದ್ರನಾಥ್ ಈ ಬಾರಿ ಜೆಡಿಎಸ್ ನಿಂದ ಪೈಪೋಟಿ ಕೊಡೋಕೆ ನಿಂತಿದ್ದಾರೆ. ಇನ್ನು ಬಿಜೆಪಿಯಿಂದ ವಿಎಸ್ ಪಾಟೀಲ್ ರಣಕಣಕ್ಕೆ ಧುಮುಕಿದ್ದಾರೆ. ಆದ್ರೆ, ಮತದಾರ ಈ ಬಾರಿ ಯಾರಿಗೆ ಕೃಪಾಕಟಾಕ್ಷ ತೋರ್ತಾನೆ ಅನ್ನೋದಕ್ಕೆ ಮೇ 15ರವರೆಗೆ ಕಾಯ್ಲೇಬೇಕು.

  • ಮರಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರ್- ಓರ್ವನ ದುರ್ಮರಣ

    ಮರಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರ್- ಓರ್ವನ ದುರ್ಮರಣ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಇಲ್ಲಿನ ಭಟ್ಕಳ ಪಟ್ಟಣದ ಸಾಗರ ರಸ್ತೆಯ ಕಿತ್ತರೆ ಬಸ್ ನಿಲ್ದಾಣದ ಬನೀ ಅಪಘಾತ ಸಂಭವಿಸಿದೆ. 18 ವರ್ಷದ ಸೈಫನ್ ಮೃತ ಯುವಕ. ಘಟನೆಯಲ್ಲಿ ಗಾಯಗೊಂಡವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಕಾರಿನಲ್ಲಿದ್ದವರು ಭಟ್ಕಳ ಪಟ್ಟಣದ ಮದೀನಾ ಕಾಲೋನಿ ನಿವಾಸಿಗಳಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಭಟ್ಕಳಕ್ಕೆ ಬರುವಾಗ ಅಪಘಾತ ನಡೆದಿದೆ. ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.