Tag: Bhaskar Rao

  • ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್-ಸುಳ್ಳು ಹೇಳಿ ತಗ್ಲಾಕೊಂಡ ಜನ

    ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್-ಸುಳ್ಳು ಹೇಳಿ ತಗ್ಲಾಕೊಂಡ ಜನ

    – ಗಾಡಿ ಪಾರ್ಕ್ ಮಾಡಿ, ಮನೆಗೆ ಹೋಗಿ

    ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಇಂದು ಬೆಳ್ಳಂಬೆಳಗ್ಗೆ ವಾಕಿಂಗ್ ಡ್ರೆಸ್‍ನಲ್ಲೇ ರಸ್ತೆಗಿಳಿದಿದ್ದಾರೆ. ತಾವೇ ಖುದ್ದು ವಾಹನ ತಪಾಸಣೆ ನಡೆಸಿ, ಮುಲಾಜಿಲ್ಲದೆ ವಾಹನಗಳನ್ನು ಸೀಜ್ ಮಾಡಿದ್ದಾರೆ.

    ನಗರದ ಟೌನ್ ಹಾಲ್ ಬಳಿ ಭಾಸ್ಕರ್ ರಾವ್ ಚೆಕಿಂಗ್ ಮಾಡಿದ್ದು, ಎಲ್ಲಿಂದ ಬರ್ತಾ ಇರೋದು, ಗಾಡಿ ಸೈಡ್‍ಗೆ ಹಾಕು, ಪಾಸ್ ಇದ್ಯಾ, ಗಾಡಿ ನಿಲ್ಲಿಸು. ದೂರ ನಿಲ್ಲಪ್ಪ ನೀನು ಎಂದು ಹೇಳುತ್ತಲೇ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಸೀಜ್ ಮಾಡಿದ್ದಾರೆ. ಹೀಗೆ ಸುಖಾಸುಮ್ಮನೆ ಓಡಾಡುತ್ತಿದ್ದ ಇನ್ನೋವಾ ಕಾರನ್ನು ಮುಲಾಜಿಲ್ಲದೆ ಸೀಜ್ ಮಾಡಿದ್ದಾರೆ.

    ಕಮೀಷನರ್ ಎದುರೇ ಪಾಸ್ ಇಲ್ಲದೆ ವಾಹನಗಳ ಓಡಾಟ ಹೆಚ್ಚಾಗಿದ್ದು, ಹಲವು ಬೈಕ್, ಕಾರುಗಳನ್ನು ಜಪ್ತಿ ಮಾಡಿಸಿದ್ದಾರೆ. ಕೆಎಸ್‍ಆರ್‍ಟಿಸಿ ಸಿಬ್ಬಂದಿ, ಆರ್ಮಿ ಪ್ಲೇಟ್ ಹಾಕಿದ್ದ ವಾಹನಗಳು ಸೇರಿ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೈಕ್ ನಲ್ಲಿ ದೇವಸ್ಥಾನಕ್ಕೆ ಹೊರಟವರು, ಅಂತ್ಯಕ್ರಿಯೆಗೆ ಹೊರಟವರು, ತರಕಾರಿಗೆ ಹೊರಟವರು, ನೆಂಟರ ಮನೆಗೆ ಹೊರಟವರು ಕಮೀಷನರ್‍ಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಕಮಿಷನರ್ ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ವಾಹನ ತಪಾಸಣೆ ಸರಿಯಾಗಿ ಅಗ್ತಿಲ್ಲ. ಮತ್ತಷ್ಟು ಬಿಗಿಗೊಳಿಸಿ ಚೆಕಿಂಗ್ ಮಾಡಬೇಕು ಎಂದು ಕಂಟ್ರೋಲ್ ರೂಂ ಮೂಲಕ ಮತ್ತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಾಕಿ ಟಾಕಿ ಮೂಲಕ ವಾಹನಗಳನ್ನು ಸರಿಯಾಗಿ ತಪಾಸಣೆ ಮಾಡಿ. ಬಹುತೇಕ ಮಂದಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಆದರೂ ತಪಾಸಣೆ ಸರಿಯಾಗಿ ಅಗ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

  • ಬೆಂಗ್ಳೂರಿನಲ್ಲಿ ಇಂದು ಪೊಲೀಸ್ ಲಾಠಿಗೆ ಅಲ್ಪ ವಿರಾಮ

    ಬೆಂಗ್ಳೂರಿನಲ್ಲಿ ಇಂದು ಪೊಲೀಸ್ ಲಾಠಿಗೆ ಅಲ್ಪ ವಿರಾಮ

    – ಸಿಬ್ಬಂದಿಗೆ ಕಮಿಷನರ್ ಖಡಕ್ ಸೂಚನೆ

    ಬೆಂಗಳೂರು: ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ನಗರದ ಎಲ್ಲಾ ಪೊಲೀಸರು ಲಾಠಿ ಇಲ್ಲದೇ ಕರ್ತವ್ಯ ನಿರ್ವಹಿಸಬೇಕು ಎಂದು ನಗರ ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಭಾಸ್ಕರ್ ರಾವ್ ಖಡಕ್ ಸೂಚನೆ ನೀಡಿದ್ದಾರೆ.

    ಇಂದು ಬಂದೋಬಸ್ತ್‌ಗೆ ಬರುವ ನಗರದ ಎಲ್ಲ ಪೊಲೀಸರು ಲಾಠಿ ಇಲ್ಲದೇ ಕರ್ತವ್ಯ ನಿರ್ವಹಿಸಬೇಕು. ಅಲ್ಲದೇ ಸಿಬ್ಬಂದಿ ತಮ್ಮ ಲಾಠಿಗಳನ್ನು ಠಾಣೆಯಲ್ಲೇ ಇಟ್ಟು ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸ್ ಸೇರಿ ಯಾರೂ ಲಾಠಿ ಬಳಸಬಾರದು. ಆದರೆ ಸಿಎಆರ್ ಮತ್ತು ಕೆಎಸ್‌ಆರ್‌ಪಿ ಸಿಬ್ಬಂದಿ ಮಾತ್ರ ಲಾಠಿ ಬಳಸಬಹುದು ಎಂದು ಭಾಸ್ಕರ್ ರಾವ್ ಖಡಕ್ ಸೂಚನೆ ಕೊಟ್ಟಿದ್ದಾರೆ.

    ಈ ಮೂಲಕ ಬೆಂಗಳೂರಿನಲ್ಲಿ ಇವತ್ತು ಪೊಲೀಸ್ ಲಾಠಿಗೆ ಅಲ್ಪ ವಿರಾಮ ಕೊಟ್ಟಿದ್ದಂತಾಗಿದೆ. ಈಗಾಗಲೇ ಎಲ್ಲ ವಲಯ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿದೆ. ಯಾರಿಗೆ ಎಷ್ಟು ಪಾಸ್ ನೀಡಬೇಕು ಅಂತ ನಿರ್ಧರಿಸುವ ಹೊಣೆಗಾರಿಕೆಯನ್ನು ಆಯಾ ವಲಯದ ಡಿಸಿಪಿಗಳಿಗೆ ನೀಡಲಾಗಿದೆ. ಸಾರ್ವಜನಿಕರು ಪಾಸ್ ಬಗ್ಗೆ ಹೇಳಿದರೆ ಮಾಹಿತಿ ನೀಡಬೇಕು. ಯಾವುದೇ ರೀತಿಯೂ ಅವರಿಗೆ ತೊಂದರೆ ಕೊಡಬಾರದು ಎಂದು ಪೊಲೀಸ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತರು ಸೂಚನೆ ಕೊಟ್ಟಿದ್ದಾರೆ.

    ಇನ್ನೂ ಹಗಲು-ರಾತ್ರಿ ಎನ್ನದೇ ಕರ್ತವ್ಯದಲ್ಲಿರುವ ಎಲ್ಲ ಪೊಲೀಸ್ ಸಿಬ್ಬಂದಿ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಪೊಲೀಸರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಪೊಲೀಸರಿಗೆ ಯಾವುದೇ ರೀತಿ ತೊಂದರೆ ಆಗಬಾರದು. ಹೀಗಾಗಿ ಎಲ್ಲ ಠಾಣೆಗಳಲ್ಲಿ ಸಿಬ್ಬಂದಿಗೆ ನೀರು ಮತ್ತು ಊಟ ವಸತಿ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.

    ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಭಾಸ್ಕರ್ ನೀಡಿರುವ ಸೂಚನೆಗಳು:
    * ದಿನಪತ್ರಿಕೆ ಹಂಚುವ ಹುಡುಗರಿಗೆ ತೊಂದರೆ ಕೊಡಬಾರದು.
    * ತರಕಾರಿ ಮಾರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
    * ಮಾಸ್ಕ್ ಹಾಗೂ ಸ್ಯಾನಿಟೈಸರ್​ಗಳನ್ನ ಕಡ್ಡಾಯವಾಗಿ ಬಳಸಬೇಕು.
    * ಪೊಲೀಸ್ ಸಿಬ್ಬಂದಿ ಯಾವುದೇ ಕಾರಣಕ್ಕೂ ಬಲಪ್ರಯೋಗ ಮಾಡುವಂತಿಲ್ಲ.
    * ಪುಡ್ ಡೆಲಿವರಿ ಬಾಯ್‍ಗಳಿಗೆ ಅಡ್ಡಿಪಡಿಸಬಾರದು..
    * ಬೈಕ್‍ಗಳಲ್ಲಿ ಅನಗತ್ಯವಾಗಿ ತಿರುಗಾಡಿದರೆ ತಿಳಿ ಹೇಳಬೇಕು, ಬಲಪ್ರಯೋಗ ಮಾಡಬಾರದು.
    * ಈಗಾಗಲೇ ನಗರದಲ್ಲಿ 12. 500 ಪಾಸ್ ವಿತರಣೆ ಮಾಡಲಾಗಿದೆ. ಹೀಗಾಗಿ ಪಾಸ್ ಹೊಂದಿರುವವರಿಗೆ ಗೌರವ ನೀಡಬೇಕು.
    * ಎಲ್ಲಾ ಠಾಣೆಗಳಲ್ಲಿ 10 ಮೈಕ್ ಸೆಟ್‍ಗಳು ಇರಬೇಕು.
    * ಮೈಕ್ ಸೆಟ್‍ಗಳಲ್ಲಿ ದಯವಿಟ್ಟು ಮನೆಗೆ ಹೋಗಿ ಹೊರಗೆ ಬರಬೇಡಿ ಅಂತ ಸಲಹೆ ಸೂಚನೆಗಳನ್ನ ನೀಡಬೇಕು.
    * ಡಯಾಲಿಸಿಸ್ ಅಂತ ವೈದ್ಯಕೀಯ ತುರ್ತು ಚಿಕಿತ್ಸೆಗೆ ತೆರಳುವವರಿಗೆ ಗೌರವದಿಂದ ಕಳುಹಿಸಿಕೊಡಬೇಕು.
    * ಮಹಿಳೆಯರು, ಮಕ್ಕಳು, ಹಾಗೂ ವೃದ್ಧರ ಜೊತೆ ಗೌರವಯುತವಾಗಿ ಮಾತಾಡಬೇಕು.
    * ದಿನಸಿ ಅಂಗಡಿ, ಕಿರಾಣಿ ಶಾಪ್, ಮಾಂಸದ ಅಂಗಡಿಯವರಿಗೆ ಸಾಮಾಜಿಕ ಅಂತರದ ಬಗ್ಗೆ ತಿಳಿಸಬೇಕು.
    * ಮೂರು ಅಡಿ ಅಂತರ ಕಾಯ್ದುಕೊಳ್ಳುವ ಬಗ್ಗೆ ತಿಳಿಸಬೇಕು.
    * ಜನರು ಗುಂಪು ಸೇರಬಾರದು, ಗುಂಪು ಸೇರದಂತೆ ತಿಳಿಹೇಳಿ ನೋಡಿಕೊಳ್ಳಬೇಕು.
    * ಪ್ರತಿ ಠಾಣೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿ ತೆರೆಯಬೇಕು.

  • ಕೊರೊನಾ ಬಂದ್ಮೇಲೆ ಗಂಡ-ಹೆಂಡ್ತಿ ಜಗಳ ಜಾಸ್ತಿಯಾಗಿದೆ: ಭಾಸ್ಕರ್ ರಾವ್

    ಕೊರೊನಾ ಬಂದ್ಮೇಲೆ ಗಂಡ-ಹೆಂಡ್ತಿ ಜಗಳ ಜಾಸ್ತಿಯಾಗಿದೆ: ಭಾಸ್ಕರ್ ರಾವ್

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಭೀತಿಯ ಬಳಿಕ ನಗರದಲ್ಲಿ ಗಂಡ-ಹೆಂಡತಿ ಜಗಳ ಜಾಸ್ತಿಯಾಗಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

    ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಬಂದ ಮೇಲೆ ಕ್ರೈಂ ರೇಟ್ ಕಡಿಮೆಯಾಗಿದೆ. ಕೊಲೆ ಸುಲಿಗೆ ಪ್ರಕರಣಗಳು ಕಡಿಮೆ ಆಗಿವೆ. ಆದರೆ ರಸ್ತೆ ಅಪಘಾತ ಜಾಸ್ತಿಯಾಗಿದೆ. ರಸ್ತೆ ಖಾಲಿ ಇರುವುದರಿಂದ ರಸ್ತೆ ಅಪಘಾತ ಆಗುತ್ತಿದೆ. ಅಲ್ಲದೆ ಡೊಮೆಸ್ಟಿಕ್ ವೈಲೆನ್ಸ್ (ಗಂಡ-ಹೆಂಡತಿ ಜಗಳ) ಕೂಡ ಜಾಸ್ತಿಯಾಗಿದೆ. ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ ಎಂದು ಆಯುಕ್ತರು ತಿಳಿಸಿದರು.

    ನಾಳೆಯ ಬಗ್ಗೆ ಜನರಿಗೆ ಮನವಿ ಮತ್ತು ಒತ್ತಾಯ ಮಾಡಲಾಗುತ್ತಿದೆ. ಈ ವಿಚಾರವನ್ನು ಯಾರೂ ಲಘುವಾಗಿ ಪರಿಗಣಿಸಬೇಡಿ. ಲಘುವಾಗಿ ಪರಿಗಣಿಸಿದರೆ ಪ್ರಕರಣ ದಾಖಲು ಮಾಡಲಾಗುತ್ತದೆ. ಐಪಿಸಿ ಸೆಕ್ಷನ್ ಒಳಗೆ ನಮಗೆ ಅವಕಾಶ ಇದೆ. ಹೀಗಾಗಿ ಒತ್ತಾಯ ಪೂರಕವಾಗಿ ಹೇಳುತ್ತೇವೆ ಎಂದು ತಿಳಿಸಿದರು.

    ಕೊರೊನಾ ವಿರುದ್ಧ ಹೋರಾಡಲು ಎಲ್ಲರೂ ಕೈ ಜೋಡಿಸಬೇಕು. ಬ್ಯಾರಿಕೇಡ್ ಹಾಕ್ತೀವಿ. ಹೊರಗೆ ಬರುವವರಿಗೆ ಒಳಗೆ ಹೋಗೋಕೆ ಹೇಳ್ತೀವಿ. ಹೀಗಾಗಿ ಕೇಳದೆ ಇದ್ದರೆ ಪ್ರಕರಣ ದಾಖಲು ಮಾಡಲಾಗುತ್ತಿದೆ ಎಂದು ಹೇಳಿದರು.

  • ಕಳ್ಳಕಾಕರು, ರೌಡಿಗಳ ಜೊತೆ ಪೊಲೀಸ್ರು ಒಡನಾಟ ಹೊಂದಿರೋದು ಗೊತ್ತಾದ್ರೆ ಕ್ರಮ: ಭಾಸ್ಕರ್ ರಾವ್

    ಕಳ್ಳಕಾಕರು, ರೌಡಿಗಳ ಜೊತೆ ಪೊಲೀಸ್ರು ಒಡನಾಟ ಹೊಂದಿರೋದು ಗೊತ್ತಾದ್ರೆ ಕ್ರಮ: ಭಾಸ್ಕರ್ ರಾವ್

    ಬೆಂಗಳೂರು: ರವಿ ಪೂಜಾರಿಯನ್ನು ಕರೆತಂದ ನಂತರ ಸಾಕಷ್ಟು ವಿಚಾರಗಳು ಹೊರ ಬರುತ್ತಿದೆ. ಆತ ಈ ಹಿಂದೆ ಮಾಡಿದ ಅಕ್ರಮಗಳು ಒಂದೊಂದಾಗಿ ಬಯಲಿಗೆ ಬರುತ್ತಿದ್ದರೆ, ಅಧಿಕಾರಿಯೊಬ್ಬರು ರವಿ ಪೂಜಾರಿ ಜೊತೆ ಒಡನಾಟ ಹೊಂದಿರುವ ಬಗ್ಗೆ ಆಘಾತಕಾರಿ ವಿಚಾರ ಹೊರಬಂದಿದೆ.

    ಅಧಿಕಾರಿಯೊಬ್ಬರು ಸಿಸಿಬಿಯಲ್ಲಿ ಕಾರ್ಯ ನಿರ್ವಹಿಸುವುದು ಸೂಕ್ತ ಅಲ್ಲ. ತನಿಖೆಯಲ್ಲಿ ಪಾರದರ್ಶಕತೆ ಇರಬೇಕು. ಹೀಗಾಗಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರಿಗೆ ಬೇರೆ ಪೋಸ್ಟ್ ತೋರಿಸಲಾಗಿದೆ. ಸರ್ಕಾರದ ವಿರುದ್ಧ, ದೇಶದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಗ್ಯಾರಂಟಿ. ಜನರಿಗೆ ಮೋಸ ಮಾಡಿ ದೇಶಕ್ಕೆ ಮೋಸ ಮಾಡಿರುವ ಒಬ್ಬ ಕ್ರಿಮಿನಲ್ ಜೊತೆ ಸಂಪರ್ಕ ಇರುವ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಶಿಸ್ತಿನ ಕ್ರಮಕೈಗೊಳ್ಳುವ ಬಗ್ಗೆ ನಾವು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಭಾಸ್ಕರ್ ರಾವ್ ರೌಡಿಗಳ ಜೊತೆ ಸಂಪರ್ಕ ಹೊಂದಿರುವ ಪೊಲೀಸರಿಗೆ ಎಚ್ಚರಿಕೆ ನೀಡಿದರು.

    ರೌಡಿಗಳ ಜೊತೆ ಸಂಪರ್ಕ ಇರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ. ಸ್ಲಂ ದೊರೆಗಳೇ ಇರಲಿ, ಯಾರೇ ಇರಲಿ ಅವರ ಜೊತೆ ಪೊಲೀಸರ ಸಂಪರ್ಕ ಹೊಂದಿದ್ದರೆ ಅವರ ವಿರುದ್ಧ ಕ್ರಮ ಗ್ಯಾರಂಟಿ. ಇಂತಹ ಕ್ರಿಮಿನಲ್‍ಗಳ ಜೊತೆ ಬರ್ತ್ ಡೇ ಪಾರ್ಟಿ ಮಾಡಿಕೊಳ್ಳುವುದು, ಅವರ ಜೊತೆ ವ್ಯವಹಾರಗಳನ್ನು ನಡೆಸುವುದು ಕಂಡು ಬಂದರೆ ಅವರ ಮೇಲೆ ಕ್ರಮ ಕಟ್ಟಿಟ್ಟ ಬುತ್ತಿ. ರಿಯಲ್ ಎಸ್ಟೆಟ್ ಮಾಡಿಸುವುದು, ಡೀಲಿಂಗ್ ಮಾಡಿಸುವುದು ಮಾಡಿದ್ದು ಗೊತ್ತಾದರೆ ಕ್ರಮ ನಿಶ್ಚಿತ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

  • ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸಲ್ಲ: ಭಾಸ್ಕರ್ ರಾವ್ ಆದೇಶ

    ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸಲ್ಲ: ಭಾಸ್ಕರ್ ರಾವ್ ಆದೇಶ

    ಬೆಂಗಳೂರು: ಕೊರೊನಾ ಭಯದಿಂದ ಇಡೀ ಬೆಂಗಳೂರು ಆತಂಕಕ್ಕೀಡಾಗಿದೆ. ಆದರೆ ಪೊಲೀಸರು ಪ್ರತಿದಿನ ವಾಹನ ಸವಾರರಿಗೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡಬೇಕು, ನಿಲ್ಲಿಸುವಂತಿಲ್ಲ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ನೀಡಿದ್ದಾರೆ.

    ಕೊರೊನಾ ವೈರಸ್‍ಗೆ ಬೆದರಿರುವ ಪೊಲೀಸರು ಪ್ರತಿದಿನ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡುವಾಗ ಸೋಂಕಿತ ವಾಹನ ಸವಾರರ ಉಸಿರು ನಮಗೆ ತಗುಲಿ ನಮಗೂ ಸಂಕಷ್ಟ ಎದುರಾಗುತ್ತೆ ಅಂತ ಗೋಳಿಡುತ್ತರುವಾಗಲೇ ಪೊಲೀಸ್ ಆಯುಕ್ತರು ಈ ಹೇಳಿಕೆ ನೀಡಿದ್ದಾರೆ.

    ಯಾವುದೇ ಕಾರಣಕ್ಕೂ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡೋದನ್ನು ನಿಲ್ಲಿಸೋದಕ್ಕೆ ಸಾಧ್ಯವಿಲ್ಲ. ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ಮಾಡದೇ ಇರೋದು ಅತ್ಯಂತ ದೊಡ್ಡ ಅಪರಾಧ ಆಗುತ್ತೆ. ಅದಕ್ಕಾಗಿ ನಾವು ಡ್ರಿಂಕ್ ಅಂಡ್ ಡ್ರೈವ್ ನಿರಂತರವಾಗಿ ಚೆಕ್ ಮಾಡಿಸ್ತೀವಿ. ಈಗಾಗಲೇ ಇದರ ಬಗ್ಗೆ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರಿಂದ ಮಾಹಿತಿಯನ್ನು ಕೇಳಿದ್ದೀವಿ. ಅವರು ಕೂಡ ಯಾವುದೇ ಭಯಪಡುವ ಅಗತ್ಯ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಚೆಕ್ಕಿಂಗ್ ಮುಂದುವರೆಸಿದ್ದೇವೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

  • ನಾವು ಬೆಂಗ್ಳೂರು ಪೊಲೀಸರು, ಆಟವಾಡಿದ್ರೆ ಸುಮ್ಮನಿರಲ್ಲ: ಭಾಸ್ಕರ್ ರಾವ್ ವಾರ್ನಿಂಗ್

    ನಾವು ಬೆಂಗ್ಳೂರು ಪೊಲೀಸರು, ಆಟವಾಡಿದ್ರೆ ಸುಮ್ಮನಿರಲ್ಲ: ಭಾಸ್ಕರ್ ರಾವ್ ವಾರ್ನಿಂಗ್

    ಬೆಂಗಳೂರು: ನಾವು ಬೆಂಗಳೂರು ಪೊಲೀಸರು. ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ರೆ ಸಹಿಸಲ್ಲ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನಾಕಾರರಿಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ನಾವು ಬೇರೆ ಕಡೆಯಂತೆ ಲಾಠಿಚಾರ್ಜ್ ಮಾಡಿಲ್ಲ. ಹಾಗಾಂತ ನಮ್ಮ ಮುಂದೆ ನಾಟಕ ಮಾಡಿದ್ರೆ ಹುಷಾರ್ ಅಂತ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.

    ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಪ್ರಕರಣ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಭಾಸ್ಕರ್ ರಾವ್ ಇಂದು ಮಾಹಿತಿ ನೀಡಿದ್ರು. ಗೃಹ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ನಾವು ಪ್ರತಿಭಟನೆಗಳಿಗೆ ಅವಕಾಶ ಕೊಡುತ್ತಾನೇ ಇದ್ದೇವೆ. ಯಾವುದೇ ಪ್ರತಿಭಟನೆಯಲ್ಲಿ ಹೀಗೆ ಆಗಿಲ್ಲ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಇಂತಹ ಕಾರ್ಯಕ್ರಮ ಸಹಿಸೋಕೆ ಸಾಧ್ಯವೇ ಇಲ್ಲ. ಮಾಡೋದೆಲ್ಲ ಮಾಡಿ ಏನು ಮಾಡಿಲ್ಲ ಅಂತ ನಾಟಕ ಮಾಡೋದು ಬೇಡ ಅಂತ ಕಾರ್ಯಕ್ರಮ ಆಯೋಜಕರಿಗೆ ತರಾಟೆಗೆ ತೆಗೆದುಕೊಂಡ್ರು.

    ಪ್ರಕರಣಕ್ಕೆ ಸಂಬಂಧಿಸಿಂತೆ ಅಮೂಲ್ಯಳ ವಿರುದ್ಧ ದೇಶದ್ರೋಹದ ಕೇಸ್ ಹಾಕಲಾಗಿದೆ. ಮಾತ್ರವಲ್ಲ ಆಯೋಜಕರ ಮೇಲೆ ಕೇಸ್ ಹಾಕಿ ಅಗತ್ಯ ತನಿಖೆ ಮಾಡ್ತೀವಿ. ಯಾರನ್ನು ಕೂಡ ಸುಮ್ಮನೆ ಬಿಡೊಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕೃತ್ಯ ಮಾಡಿದ್ರೆ ನಾವು ಸಹಿಸಲ್ಲ ಅಂತ ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ.

    ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡೋವಾಗ ಹುಷಾರಾಗಿ ಇರಬೇಕು. ಜನರು ಇದ್ದಾರೆ ಎಂದು ಉದ್ರೇಕದ ಮಾತು ಆಡೋದು ಸರಿಯಲ್ಲ. ಅದನ್ನ ನೋಡಿ ಕಣ್ಣುಮುಚ್ಚಿ ಕುಳಿತಿಕೊಳ್ಳಲು ಆಗಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಬೇರೆ ಬೇರೆ ಕಡೆ ಪ್ರತಿಭಟನೆ ಆದಾಗ ಲಾಠಿ ಚಾರ್ಜ್ ಆಗಿದೆ. ಬೆಂಗಳೂರಿನಲ್ಲಿ ಅಂತಹ ಒಂದು ಘಟನೆ ಸಹ ಆಗಿಲ್ಲ. ನಿಮ್ಮ ಸ್ವಾರ್ಥಕ್ಕೆ ವೇದಿಕೆ ಬಳಸಿಕೊಂಡು ಕಾನೂನು ಸುವ್ಯವಸ್ಥೆ ಹಾಳು ಮಾಡಬೇಡಿ ಅಂತ ಸಂದೇಶ ರವಾನೆ ಮಾಡಿದ್ದಾರೆ.

  • ನಾನು ಕನ್ನಡಿಗ, ಇಲ್ಲೇ ಹುಟ್ಟಿದ್ದೀನಿ ಇಲ್ಲೇ ಸಾಯ್ತಿನಿ: ಭಾಸ್ಕರ್ ರಾವ್

    ನಾನು ಕನ್ನಡಿಗ, ಇಲ್ಲೇ ಹುಟ್ಟಿದ್ದೀನಿ ಇಲ್ಲೇ ಸಾಯ್ತಿನಿ: ಭಾಸ್ಕರ್ ರಾವ್

    ಬೆಂಗಳೂರು: ನಾನು ಹುಟ್ಟು ಕನ್ನಡಿಗನಾಗಿದ್ದೇನೆ. ಇಲ್ಲೇ ಹುಟ್ಟಿದ್ದೇನೆ. ಇಲ್ಲೇ ಸಾಯುತ್ತೇನೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

    ಸಿಎಎ ಮತ್ತು ಗುರುವಾರದ ಕರ್ನಾಟಕ ಬಂದ್‍ಗೆ ಭಾಸ್ಕರ್ ರಾವ್ ಅನುಮತಿ ನಿರಾಕರಿಸಿದರು. ಕೆಲ ಸಂಘಟನೆ ಮುಖ್ಯಸ್ಥರು ಪೊಲೀಸ್ ಕಮಿಷನರ್ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಗರಂತೆ ವರ್ತಿಸುತ್ತಿದ್ದಾರೆ. ಅವರು ಬಿಜೆಪಿ ಸೇರಿಕೊಳ್ಳಲಿ. ಭಾಸ್ಕರ್ ರಾವ್ ಕನ್ನಡ ವಿರೋಧಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, ನಾನು ಹುಟ್ಟು ಕನ್ನಡಿಗ, ಇಲ್ಲೇ ಹುಟ್ಟಿದ್ದೇನೆ ಇಲ್ಲೇ ಸಾಯುತ್ತೇನೆ. ಇಲ್ಲೇ ನೌಕರಿ ಕೂಡ ಮಾಡುತ್ತಿದ್ದೀನಿ. ಯಾರೋ ಕನ್ನಡ ಪರ ಸಂಘಟನೆ ಸದಸ್ಯರಿಂದ ಕಲಿಯುವ ಆಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

    ಅಲ್ಲದೆ ಕಾನೂನು ಇರೋದು ಜನರ ರಕ್ಷಣೆಗೆಗಾಗಿ, ನಾನಿರೋದು 1 ಕೋಟಿ 44 ಲಕ್ಷ ಜನ ಬೆಂಗಳೂರಿಗರ ರಕ್ಷಣೆಗೆಗಾಗಿ. ನಿಮ್ಮಿಂದ ನಾನು ಕನ್ನಡ ಕಲಿಯೋ ಆಗತ್ಯವಿಲ್ಲ ಎಂದು ಸಂಘಟನೆ ಮುಖ್ಯಸ್ಥರ ವಿರುದ್ಧ ಗರಂ ಆದರು.

  • ಕಮಿಷನರ್ ಭಾಸ್ಕರ್ ರಾವ್ ಸಾಚಾ ಅಲ್ಲ: ನಮ್ಮ ಕರವೇ ಅಧ್ಯಕ್ಷ ಜಯರಾಜು ನಾಯ್ಡು

    ಕಮಿಷನರ್ ಭಾಸ್ಕರ್ ರಾವ್ ಸಾಚಾ ಅಲ್ಲ: ನಮ್ಮ ಕರವೇ ಅಧ್ಯಕ್ಷ ಜಯರಾಜು ನಾಯ್ಡು

    ಬೆಂಗಳೂರು: ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸಾಚನಾ? ಅವರ ಮೇಲೆ ಆಡಿಯೋ ಹಗರಣ ಇದೆ. ಇದನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ನಮ್ಮ ನಮ್ಮ ಕರವೇ ಅಧ್ಯಕ್ಷ ಜಯರಾಜು ನಾಯ್ಡು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ನಗರದ ಮೌರ್ಯ ಸರ್ಕಲ್ ಬಳಿ ಮಾತನಾಡಿದ ಅವರು, ನಿನ್ನೆ ರಾತ್ರಿ ಮಿನರ್ವ ಸರ್ಕಲ್ ಬಳಿ ನಾವೆಲ್ಲ ಇದ್ದೆವು. ಅಲ್ಲಿ ಪೊಲೀಸ್ ಸರ್ಪಗಾವಲು ಇತ್ತು. ತಾಕತ್ತಿದ್ರೆ ನಮ್ಮನ್ನು ಬಂಧಿಸಿ ನೋಡೋಣ ಎಂದು ಕಮಿಷನರ್ ಭಾಸ್ಕರ್ ರಾವ್‍ಗೆ ನೇರ ಸವಾಲು ಹಾಕಿದರು. ಕಮಿಷನರ್ ಬಿಜೆಪಿ ಪರ ಕೆಲಸ ಮಾಡೋದಿದ್ರೆ ಡ್ರೆಸ್ ಬಿಚ್ಚಿ, ಆರ್‍ಎಸ್‍ಎಸ್‍ಗೆ ಇಲ್ಲ, ಬಿಜೆಪಿಗೆ ಸೇರಿ ಎಂದು ಕಿಡಿಕಾರಿದರು.

    ಇನ್ನೂ ಸಿಎಂ ಮೇಲೆಯೂ ಕಿಡಿಕಾರಿ, ಸಿಎಂ ನಾಲಾಯಕ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಕನ್ನಡಿಗರ ಹೋರಾಟದ ಬಗ್ಗೆ ಕಾಳಜಿ, ಬದ್ಧತೆ ಇದ್ದರೆ ಪ್ರತಿಭಟನಾ ಸ್ಥಳಕ್ಕೆ ಬರಬೇಕಿತ್ತು ಎಂದು ಜಯರಾಜು ನಾಯ್ಡು ತಮ್ಮ ಆಕ್ರೋಶವನ್ನು ಹೊರಹಾಕಿದರು.

    ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್‍ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‍ಗೆ ಕರೆ ನೀಡಲಾಗಿದೆ.

  • ವಿಶ್ವದ ಸಂಚಾರ ದಟ್ಟಣೆಯಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ – ಒಪ್ಪಿಕೊಂಡ ಭಾಸ್ಕರ್ ರಾವ್

    ವಿಶ್ವದ ಸಂಚಾರ ದಟ್ಟಣೆಯಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ – ಒಪ್ಪಿಕೊಂಡ ಭಾಸ್ಕರ್ ರಾವ್

    -ತಜ್ಞರು, ಟಾಮ್ ಟಾಮ್ ಸಿಬ್ಬಂದಿಯ ಜೊತೆ ಕಮೀಷನರ್ ಸಭೆ

    ಬೆಂಗಳೂರು: ಸಿಲಿಕಾನ್ ಸಿಟಿ ವಿಶ್ವದ 57 ರಾಷ್ಟ್ರಗಳ 416 ನಗರಗಳಲ್ಲಿ ಸಂಚಾರ ದಟ್ಟಣೆಯಲ್ಲಿ ಮೊದಲ ಸ್ಥಾನ ಪಡೆದಿದೆ. ತೀವ್ರ ಸಂಚಾರ ದಟ್ಟಣೆ ಹಾಗೂ ಜನರ ಸಮಯವನ್ನು ಹಾಳು ಮಾಡುವ ವಿಶ್ವದ 10 ನಗರಗಳಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ.

    ಟಾಮ್ ಟಾಮ್ ಸಂಸ್ಥೆಯ ವರದಿಯಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಬೆಳಕು ಚೆಲ್ಲಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಹ ಒಪ್ಪಿಕೊಂಡಿದ್ದಾರೆ. ಗುರುವಾರ ಈ ಬಗ್ಗೆ ತಜ್ಞರು ಮತ್ತು ಟಾಮ್ ಟಾಮ್ ಸಿಬ್ಬಂದಿಯ ಜೊತೆ ಕಮೀಷನರ್ ಸಭೆ ನಡೆಸಿದ್ದಾರೆ.

    ನಗರದಲ್ಲಿ ಬಹುತೇಕ ಕಡೆ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಸಂಚಾರ ದಟ್ಟಣೆ ಅಧಿಕವಾಗಿದೆ. ಶೇ. 65ಕ್ಕಿಂತ ಹೆಚ್ಚು ಟೂ ವೀಲರ್ ಗಳು ರಸ್ತೆಗಿಳಿಯುತ್ತಿವೆ. ಸಾರ್ವಜನಿಕ ಸಾರಿಗೆಯನ್ನು ಸಹ ಪರಿಣಾಮಕಾರಿಯಾಗಿ ಬಳಸಿಕೊಳ್ಳದಿರುವುದು ಸಮಸ್ಯೆಗೆ ಕಾರಣ.

    ಒಂದು ಮನೆಯಲ್ಲಿ ಮೂರು ನಾಲ್ಕು ಕಾರುಗಳು ಇರುವುದು. ಒಬ್ಬರಿಗೇ ಕಾರು ಎತ್ತುವುದು ಸಹ ಟ್ರಾಫಿಕ್ ಕಿರಿಕಿರಿಗೆ ಕಾರಣವಾಗಿದೆ ಎಂದು ಕಮೀಷನರ್ ಹೇಳಿದ್ದಾರೆ. ವಿಶ್ವದಲ್ಲಿ ಅತೀ ಸಂಚಾರ ದಟ್ಟಣೆಯ ನಗರ ಎನ್ನುವ ಕುಖ್ಯಾತಿಗೆ ಬೆಂಗಳೂರಿಗೆ ಅಂಟಿಕೊಂಡಿದೆ.

  • ಶಾಲಾ ವಾಹನಗಳಲ್ಲಿ ಸಂಚರಿಸುವ ನಿಮ್ಮ ಮಕ್ಕಳು ಎಷ್ಟು ಸೇಫ್ – ಪೋಷಕರಿಗೆ ಭಾಸ್ಕರ್ ರಾವ್ ಪ್ರಶ್ನೆ

    ಶಾಲಾ ವಾಹನಗಳಲ್ಲಿ ಸಂಚರಿಸುವ ನಿಮ್ಮ ಮಕ್ಕಳು ಎಷ್ಟು ಸೇಫ್ – ಪೋಷಕರಿಗೆ ಭಾಸ್ಕರ್ ರಾವ್ ಪ್ರಶ್ನೆ

    ಬೆಂಗಳೂರು: ಪೊಲೀಸ್ ಕಮೀಷನರ್ ಬಾಸ್ಕರ್ ರಾವ್, ಶಾಲಾ ವಾಹನವೊಂದರ ಫೋಟೋ ಹಾಕಿ ಶಾಲೆ ಆಡಳಿತ ಮಂಡಳಿ ಮತ್ತು ಪೋಷಕರನ್ನು ಪ್ರಶ್ನಿಸಿದ್ದಾರೆ.

    4+1 ಜನರ ಸಾಮಥ್ರ್ಯವುಳ್ಳ ಓಮಿನಿ ವಾಹನದಲ್ಲಿ 15 ಮಕ್ಕಳು ಪ್ರಯಾಣಿಸುತ್ತಿದ್ದಾರೆ. ಈ ರೀತಿಯ ವಾಹನಗಳನ್ನು ತಡೆದ್ರೆ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ವಾಹನದ ಸಿಲಿಂಡರ್ ಮೇಲೆ ಮಕ್ಕಳು ಕುಳಿತಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಸಾಗಿಸುವ ವಾಹನಗಳು ಅಪಘಾತಕ್ಕೊಳಗಾಗುವ ಸಾಧ್ಯತೆಗಳಿರುತ್ತವೆ. ಒಂದ ವೇಳೆ ಅಪಘಾತ ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.

    ಭಾಸ್ಕರ್ ರಾವ್ ಟ್ವೀಟಿಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನಿಮ್ಮ ಕರ್ತವ್ಯವನ್ನು ನೀವು ಮಾಡಿ. ಯಾರ ಮುಲಾಜಿಗೆ ಒಳಗಾಗೋದು ಒಳಿತಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ. ಮಕ್ಕಳ ಸುರಕ್ಷತೆಯನ್ನು ಶಾಲೆಗಳು ಯೋಚನೆ ಮಾಡಿ, ಉತ್ತಮವಾದ ವಾಹನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಬರೆದುಕೊಂಡು ಅದೇ ರೀತಿ ಬೇರೆ ಶಾಲಾ ವಾಹನಗಳ ಫೋಟೋ ಹಂಚಿಕೊಂಡಿದ್ದಾರೆ.