ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ರಾತ್ರಿ ನಿಷೇಧಾಜ್ಞೆ ಜಾರಿಯಾಗಲಿದ್ದು, ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಜೂನ್ 1ರ ಮಧ್ಯರಾತ್ರಿಯಿಂದ ಜೂನ್ 30ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ. ರಾತ್ರಿ 9 ಗಂಟೆಯಿಂದ ಬೆಳಗಿನಜಾವ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳ ವಾಹನ ಸಂಚಾರ ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಅಲ್ಲದೆ ಸಾರ್ವಜನಿಕರು ಸಹ ರಾತ್ರಿ 9 ಗಂಟೆ ಬಳಿಕ ಮನೆಯಿಂದ ಹೊರ ಬರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಅಗತ್ಯ ಸಂದರ್ಭ ಹೊರತುಪಡಿಸಿ ಊಳಿದ ವೇಳೆ ಹೊರಗಡೆ ಓಡಾಡುವಂತಿಲ್ಲ. ನಿಯಮಗಳನ್ನು ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.
– ಸೈಬರ್ ಕೂಡ ಮನೆಯಿದ್ದಂಗೆ ಅದಕ್ಕೆ ಕಿಟಕಿ ಬಾಗಿಲು ಇರುತ್ತೆ
– ಪೊಲೀಸರಿಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ಠಾಣೆಗಳಿಗೆ ನಿರ್ದೇಶನ
ಬೆಂಗಳೂರು: ಅನಗತ್ಯವಾಗಿ ನಿಮ್ಮ ಹೆಣ್ಣು ಮಕ್ಕಳ ಫೋಟೋವನ್ನು ದಯವಿಟ್ಟು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಬೇಡಿ. ಇದರಿಂದ ನಿಮಗೆ ಅವಮಾನ ಮಾಡುತ್ತಾರೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಮಾಧ್ಯಮಗಳ ಜೊತೆ ಮಾತನಾಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಲಾಕ್‍ಡೌನ್ ಸಂದರ್ಭದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ. ಎಲ್ಲರೂ ಮನೆಯಲ್ಲೇ ಕೂತು ಸೈಬರ್ ಕ್ರೈಂ ಮಾಡಿದ್ದಾರೆ. ಕೆಲವರು ತರ್ಲೆ ಮಾಡಲು, ಫನ್ ಮಾಡಲು ಆನ್‍ಲೈನ್‍ನಲ್ಲಿ ಪಾಠ ಮಾಡುತ್ತಿದ್ದಾಗ ಅಶ್ಲೀಲ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ಬಂದರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಸೈಬರ್ ಕೂಡ ಮನೆಯಿದ್ದಂತೆ ಅದಕ್ಕೆ ಕಿಟಕಿ ಬಾಗಿಲು ಇರುತ್ತೆ. ಮನೆಯನ್ನ ಹೇಗೆ ಕಾಪಾಡುತ್ತೀವೋ ಹಾಗೆ ಆನ್‍ಲೈನ್ ಬಗ್ಗೆನೂ ಎಚ್ಚರಿಕೆ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ನಿಮ್ಮ ಮನೆಯ ಅಕ್ಕ-ತಂಗಿಯರು, ಪತ್ನಿಯರು, ಮಕ್ಕಳ ಫೋಟೋವನ್ನು ದಯವಿಟ್ಟು ಆನ್‍ಲೈನ್‍ನಲ್ಲಿ ಹಾಕಬೇಡಿ. ಕೆಲವರು ನಿಮ್ಮ ಮನೆಯವರ ಫೋಟೋವನ್ನ ಅಶ್ಲೀಲವಾಗಿ ಸೃಷ್ಟಿಸುತ್ತಾರೆ. ಇದರಿಂದ ನೀವು ಆತಂಕ ಪಡುತ್ತೀರ. ಹೀಗಾಗಿ ಅನಗತ್ಯವಾಗಿ ನಿಮ್ಮ ಹೆಣ್ಣು ಮಕ್ಕಳ ಫೋಟೋವನ್ನು ದಯವಿಟ್ಟು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಬೇಡಿ. ಇದರಿಂದ ನಿಮಗೆ ಅವಮಾನ ಮಾಡುತ್ತಾರೆ. ಇಂತಹ ಘಟನೆಗಳು ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಕೂತವರಿಂದ ನಡೆಯುತ್ತದೆ ಎಂದು ತಿಳಿಸಿದರು.
ಪೊಲೀಸ್ ಠಾಣೆಗಳಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕೊರೊನಾ ಜೊತೆ ಹೋರಾಟ ಮಾಡುತ್ತಿದ್ದೇವೆ. ನಾವು ಮಾರ್ಚ್ ನಿಂದಲೇ ಎಲ್ಲಾ ಪೊಲೀಸ್ ಠಾಣೆಯಲ್ಲೂ ಮಾಸ್ಕ್ ಧರಿಸುವುದು, ಬಿಸಿ ನೀರಿನಲ್ಲಿ ಕೈ ತೊಳೆಯುವುದರ ಬಗ್ಗೆ ಎಚ್ಚರಿಕೆ ನೀಡಿದ್ದೆವು. ಈಗ ಮಹಾಮಾರಿ ಎಲ್ಲಾ ಕಡೆ ಬಲಿ ತೆಗೆದುಕೊಳ್ಳುತ್ತಿದ್ದರಿಂದ ಪೊಲೀಸರು ಸುರಕ್ಷಿತರಾಗಿರಬೇಕು ಎಂದು ತಿಳಿಸಿದರು.
ಒಬ್ಬರನೊಬ್ಬರು ಕಾಪಾಡಿಕೊಳ್ಳಬೇಕು, ಹೆಡ್‌ಕಾನ್‌ಸ್ಟೇಬಲ್ ಅವರಿಗಿಂತ ಕೆಳ ಸಿಬ್ಬಂದಿಯನ್ನು ಕಾಪಾಡಿಕೊಳ್ಳಬೇಕು. ಎಎಸ್‍ಐ ತಮ್ಮ ಕೆಳ ಸಿಬ್ಬಂದಿಯನ್ನು ಕಾಪಾಡಬೇಕು. ಹೀಗೆ ಒಬ್ಬರಿಗೊಬ್ಬರು ಸಹಕಾರವನ್ನು ನೀಡಬೇಕು. ಸರ್ಕಾರದ ಬಲ ನಾವು, ನಾವೇ ಸೋಂಕಿತರಾದರೆ ತೊಂದರೆಯಾಗುತ್ತದೆ. ಪೊಲೀಸ್ ಠಾಣೆಯಲ್ಲೂ ಹಗ್ಗ ಕಟ್ಟಿ ಅಂತರ ಕಾಪಾಡಿಕೊಳ್ಳಬೇಕು. ಬಂದವರಿಗೆ ಸ್ಯಾನಿಟೈಸರ್ ನೀಡಬೇಕು. ಅನಗತ್ಯ ವಸ್ತುಗಳನ್ನ ವಿಲೇವಾರಿ ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಪೊಲೀಸ್ ಠಾಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಮುಖ್ಯವಾಗಿ ಎಲ್ಲೆಂದರಲ್ಲಿ ಉಗುಳಬಾರದು. ಸದಾ ಬಿಸಿ ನೀರು ಕುಡಿಯಲು ಸೂಚನೆ ನೀಡಿದ್ದೇನೆ. ಕೆಲವೊಂದು ಪೊಲೀಸ್ ಠಾಣೆಯಲ್ಲಿ ವಾಷಿಂಗ್ ಮೆಷಿನ್ ಕೂಡ ಇಡುತ್ತಿದ್ದೇವೆ. ಈ ಮೂಲಕ ಸ್ವಚ್ಛ ಬಟ್ಟೆಗಳನ್ನ ಬಳಸಲು ಸೂಚನೆ ನೀಡಲಾಗಿದೆ. ಸೋಂಕಿತ ಪೊಲೀಸರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಕುಟುಂಬಕ್ಕೂ ಒಳ್ಳೆಯ ಕಡೆ ಕ್ವಾರೆಂಟೈನ್ ಮಾಡಿಸಿದ್ದೇವೆ. ಸೋಂಕಿತ ಸಿಬ್ಬಂದಿಗೆ ಎಲ್ಲಾ ರೀತಿಯಲ್ಲಿ ಸೌಲಭ್ಯ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಬೆಂಗಳೂರು: ಲಾಕ್‍ಡೌನ್ 4.0 ಭಾಗವಾಗಿ ರಾಜ್ಯ ಸರ್ಕಾರ ಮಾರ್ಗಸೂಚಿ ರೂಪಿಸಿದ್ದು, ಭಾನುವಾರ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ ಎಂದು ನಿಯಮ ರೂಪಿಸಲಾಗಿತ್ತು. ಇದೀಗ ಭಾನುವಾರ ಜಾರಿಯಾಗುವ ಕರ್ಫ್ಯೂ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶನಿವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆ ನೀಡುವವರಿಗೆ ಮಾತ್ರ ವಿನಾಯ್ತಿ ಇರುತ್ತದೆ ಉಳೆದೆಲ್ಲವೂ ಬಂದ್ ಆಗಲಿದೆ. ಮಾಧ್ಯಮ, ಹಣ್ಣು, ತರಕಾರಿ, ಮಾಂಸ, ವೈದ್ಯರು, ನರ್ಸ್ ಹಾಗೂ ಅಂಬುಲೆನ್ಸ್ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಲಾಕ್‍ಡೌನ್ ಒಂದು ಮತ್ತು ಎರಡರ ಅವಧಿಯಲ್ಲಿ ಇದ್ದ ನಿಯಮಗಳೆಲ್ಲವೂ ಅನ್ವಯವಾಗುತ್ತವೆ. ಅನಗತ್ಯವಾಗಿ ಯಾರೂ ಹೊರಗೆ ಓಡಾಡಬಾರದು. ಬ್ಯಾರಿಕೇಡ್ ಹಾಕಿ ರಸ್ತೆ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ವಿವರಿಸಿದರು.
ಕರ್ಫ್ಯೂ ಅವಧಿಯಲ್ಲಿ ಸುಖಾ ಸುಮ್ಮನೆ ಓಡಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯಿಲ್ಲ. ತರಕಾರಿ, ಮೊಟ್ಟೆ, ಮಾಂಸ ಖರೀದಿಗೆ ತಮ್ಮ ವಾಹನಗಳನ್ನು ಬಳಸಬಹುದು. ಅಲ್ಲದೆ ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಲಿದೆ ಎಂದು ತಿಳಿಸಿದರು.
ಟ್ರಾಫಿಕ್ ಪೊಲೀಸ್ ಪೇದೆಗೆ ಕೊರೊನಾ ಸೋಂಕು ತಗುಲಿರುವ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಮಾಹಿತಿ ನೀಡಿದ್ದು, ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಅಲ್ಲದೆ ಸಂಪರ್ಕದಲ್ಲಿರುವವರ ಹುಡುಕಾಟ ಕಾರ್ಯ ನಡೆಯುತ್ತಿದೆ. ಯಾವ ಸಿಬ್ಬಂದಿ ಅವರ ಸಂಪರ್ಕಕ್ಕೆ ಬಂದಿದ್ದಾರೋ ಅವರನ್ನು ಕ್ವಾರಂಟೈನ್ ಮಾಡಲಾಗುವುದು. ಸಧ್ಯಕ್ಕೆ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಠಾಣೆಯ ಕೆಲಸ ನಿರಂತರವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಬಹುತೇಕ ಬೆಂಗಳೂರು ನಾಳೆಯಿಂದ ಓಪನ್ ಆಗಲಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬೆಂಗಳೂರಿಗರಿಗೆ ಬಹುತೇಕ ರಿಲೀಫ್ ನೀಡಿದ್ದಾರೆ. ಪಾಸ್ ಇಲ್ಲದೆಯೂ ಓಡಾಡಬಹುದು ಎಂದಿದ್ದಾರೆ. ಕೆಲವೊಂದು ಷರತ್ತು ವಿಧಿಸಲಾಗಿದ್ದು, ನಿಯಮ ಉಲ್ಲಂಘಿಸಿದ್ರೆ, ಸೆಕ್ಷನ್ 188ರ ಅಡಿ ಕೇಸ್ ದಾಖಲಿಸಲಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಾಳೆಯಿಂದ ಅಂದ್ರೆ ಸೋಮವಾರದಿಂದ ಪಾಸ್ ಇಲ್ಲದೆಯೂ ಓಡಾಡಬಹುದು. ಒಂದು ಪೊಲೀಸರು ಪರಿಶೀಲನೆಗೆ ತಡೆದಾಗ ರಸ್ತೆಗೆ ಬಂದಿದ್ದರ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು. ಉದ್ಯೋಗಿಗಳಾಗಿದ್ರೆ ಐಡಿ ಕಾರ್ಡ್ ತೋರಿಸಬೇಕು. ಸೋಮವಾರದಿಂದ ಟ್ರಾಫಿಕ್ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸತಕ್ಕದ್ದು, ಸಿಕ್ಕಿ ಬಿದ್ರೆ ದಂಡ ಪಾವತಿಸಬೇಕು. ಸಂಜೆ 6.30ರ ನಂತರ ಬೆಂಗಳೂರಿನಲ್ಲಿ ಕರ್ಫ್ಯೂ ಜಾರಿಯಾಗುತ್ತದೆ. ಸಂಜೆ 7 ರಿಂದ ಬೆಳಗ್ಗೆ 9 ಗಂಟೆವರೆಗೆ ಯಾರು ಮನೆಯಿಂದ ಹೊರ ಬರುವಂತಿಲ್ಲ.
ಕರ್ಫ್ಯೂ ಸಮಯದಲ್ಲಿ ಹೊರ ಬರುವ ಜನರು (ಐಟಿ/ಬಿಟಿ ಉದ್ಯೋಗಿಗಳು) ಪಾಸ್ ಪಡೆದು ಓಡಾಡಬೇಕು. ಸಂಜೆ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಎಲ್ಲ ವಿಧದ ಅಂಗಡಿಗಳು ಸೇರಿದಂತೆ ಮದ್ಯದಂಗಡಿಗಳು ಬಂದ್ ಮಾಡಬೇಕು. ಬೆಳಗ್ಗೆ 7 ರಿಂದ 9 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ವ್ಯವಹಾರದ ವೇಳೆ ಮಾಸ್ಕ್, ಗ್ಲೌಸ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯ.
ಸೋಮವಾರ ಬೆಂಗಳೂರಿನಲ್ಲಿ ಚಿನ್ನ, ಪಾತ್ರೆ, ಬಟ್ಟೆ ಸೇರಿದಂತೆ ಎಲ್ಲಾ ಅಂಗಡಿಗಳನ್ನು ತೆರೆಯಬಹುದು. ಇಲ್ಲಿಯೂ ಕೊರೊನಾ ನಿಯಮಗಳನ್ನು ವ್ಯಾಪಾರಸ್ಥರು ಪಾಲಿಸಬೇಕು. ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಾಲ್, ಪಾರ್ಕ್, ದೇವಸ್ಥಾನ, ಸಲೂನ್, ಬ್ಯೂಟಿ ಪಾರ್ಲರ್ ತೆರೆಯುವಂತಿಲ್ಲ. ಬಿಎಂಟಿಸಿ, ಕೆಎಸ್‍ಆರ್ ಟಿಸಿ, ಮೆಟ್ರೋ ಸಂಚಾರ ಇರಲ್ಲ. ಮದುವೆಯಲ್ಲಿ 50 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಅಂತ್ಯಕ್ರಿಯೆಗಳಲ್ಲಿ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಇನ್ನು ಬೇರೆ ರಾಜ್ಯಗಳಿಗೆ, ಜಿಲ್ಲೆಗಳಿಗೆ ಹೋಗುವವರು ನಾಳೆಯಿಂದ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು
ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಸೀಜ್ ಅದ ವಾಹನ ಸವಾರರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುಡ್‍ನ್ಯೂಸ್ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತೀರ್ಮಾನದಂತೆ ನಾಳೆಯಿಂದ ಸೀಜ್ ಆಗಿರುವ ವಾಹನಗಳ ಬಿಡುಗಡೆ ಮಾಡಲಾಗುತ್ತದೆ. ಆದರೆ ಏಕಾಏಕಿ ಜನರು ಬರುವ ಸಾಧ್ಯತೆಗಳು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ವಾಹನಗಳನ್ನು ಮಾರ್ಚ್ 30ರಿಂದ ಸೀಜ್ ಮಾಡಲಾಗಿದೆ. ಈವರೆಗೂ 47 ಸಾವಿರಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ. ಈಗ ವಾಹನಗಳನ್ನು ದಾಖಲಾತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಎಲ್ಲವನ್ನೂ ಒಂದೇ ದಿನ ಕೊಡುವುದಿಲ್ಲ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ನಿನ್ನೆ, ಮೊನ್ನೆ ಸೀಜ್ ಮಾಡಿದ ವಾಹನಗಳನ್ನು ನಾಳೆಯೇ ರಿಲೀಸ್ ಮಾಡುವುದಿಲ್ಲ. ಮಾರ್ಚ್ 30ರಂದು ಸೀಜ್ ಆದ ವಾಹಗಳನ್ನ ಮೊದಲು ಬಿಡುಗಡೆ ಮಾಡುತ್ತೇವೆ. ಆ ಬಳಿಕ ಕ್ಯಾಲೆಂಡರ್ ಸಿದ್ಧಪಡಿಸಿ ಅದರಂತೆ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡುತ್ತೇವೆ. ಜೊತೆಗೆ ಕೋರ್ಟ್ ಫೈನ್ ನೋಡಿಕೊಂಡು ಆ ನಿಯಮದ ಪ್ರಕಾರ ಆಯಾಯ ಪೊಲೀಸ್ ಠಾಣೆಗಳಲ್ಲೇ ವಾಹನಗಳನ್ನು ರಿಲೀಸ್ ಮಾಡಲಾಗುವುದು ಎಂದರು.
ಇನ್ನುಮುಂದೆ ವಾಹನಗಳನ್ನು ಸೀಜ್ ಮಾಡಲ್ಲ ಎಂದುಕೊಂಡರೆ ಅದು ತಪ್ಪು. ಇವತ್ತು ಕೂಡ ನಾವು ವಾಹನಗಳನ್ನು ವಶಕ್ಕೆ ಪಡೆಯಬಹುದು. ಲಾಕ್‍ಡೌನ್ ಸಂಪೂರ್ಣವಾಗಿ ತೆಗೆಯುವವರೆಗೂ ಪಾಸ್ ಇಲ್ಲದ ವಾಹನಗಳನ್ನು ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು: ಹೆಮ್ಮಾರಿ ಕೊರೊನಾ ಕಂಟ್ರೋಲ್‍ಗೆ ಲಾಕ್‍ಡೌನ್ ಘೋಷಿಸಿದ್ದರೂ ಬೆಂಗಳೂರಿಗರು ಎಚ್ಚೆತ್ತುಕೊಂಡಿಲ್ಲ. ನಾಯಿಯನ್ನು ಹೊರಗೆ ಓಡಾಡಿಸೋದು, ವಾಕಿಂಗ್‍ಗೆ ಹೋಗೋದು, ಸೈಕ್ಲಿಂಗ್ ಮಾಡೋದರ ನೆಪದಲ್ಲಿ ಮುಂಜಾನೆ ಮತ್ತು ಮುಸ್ಸಂಜೆ ವೇಳೆ ಮನೆಯಿಂದ ಹೊರ ಬರುತ್ತಿದ್ದರು. ಇದೀಗ ಇದಕ್ಕೂ ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಬ್ರೇಕ್ ಹಾಕಿದ್ದಾರೆ.
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರನ್ನು ಕಂಟ್ರೋಲ್ ಮಾಡೋಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಭಾರತದ್ಯಾಂತ ಇನ್ನೂ ಎರಡು ವಾರಗಳ ಕಾಲ, ಲಾಕ್‍ಡೌನ್ ಮುಂದುವರಿದಿದೆ. ಕಳೆದ 20 ದಿನಗಳಿಂದ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನರು ಮಾತ್ರ ಚಿಕ್ಕಪುಟ್ಟ ಕಾರಣಗಳನ್ನು ಹೇಳಿಕೊಂಡು ಓಡಾಡುತ್ತಿದ್ದರು. ಪೊಲೀಸರು ಇದ್ದರೂ ಕೂಡ ವಾಕಿಂಗ್ ಮಾಡೋ ನೆಪದಲ್ಲಿ ಕೆಲವರು ಹೊರಗೆ ಬಂದರೆ, ಇನ್ನು ಕೆಲವರು ನಾಯಿ ಜೊತೆಗೆ ವಾಕಿಂಗ್ ಬರುತ್ತಿದ್ದಾರೆ. ಪೊಲೀಸರು ಪ್ರಶ್ನೆ ಮಾಡಿದರೆ ನಾಯಿ ವಾಕಿಂಗ್ ಸರ್ ಅಂತ ಡ್ರಾಮಾ ಮಾಡುತ್ತಿರುವುದು ಹೆಚ್ಚಾಗಿದ್ದು, ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ವಾಕಿಂಗ್ ಮಾಡೋರು ಮನೆಯಲ್ಲಿ ಮಾಡಬೇಕು. ನಾಯಿ ಇದ್ದರೂ ಕೂಡ ಮನೆಯ ಅಕ್ಕಪಕ್ಕದಲ್ಲೇ ವಾಕಿಂಗ್ ಮಾಡಿಸಬೇಕು. ಬಿಬಿಎಂಪಿ ಯಾವುದೇ ಸೂಚನೆ ಕೊಟ್ಟರು ನಾವು ಸೂಕ್ತ ಬಂದೋಬಸ್ತ್ ಮಾಡುತ್ತೀವಿ. ಹೀಗಾಗಿ ರೋಡಿಗೆ ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ನಗರದ ಬಾರ್ಡರ್‌ಗಳಲ್ಲಿ ಸಿಸಿಟಿವಿ ಹಾಕುತ್ತೀವಿ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡುತ್ತೀವಿ. ಏಪ್ರಿಲ್ 20ರ ವರೆಗೆ ಬಿಗಿ ಪೊಲೀಸ್ ಕ್ರಮ ಕೈಗೊಳ್ಳುತ್ತೀವಿ. ಸಂಬಂಧಿಕರಿಗೆ ಹುಷಾರಿಲ್ಲ, ಅಜ್ಜ ತೀರಿಕೊಂಡಿದ್ದಾರೆ ಅವೆಲ್ಲ ನಡೆಯಲ್ಲ. 1.80 ಲಕ್ಷ ಪಾಸ್ ನೀಡಲಾಗಿದೆ. ಎಲ್ಲಾ ಪಾಸ್‍ಗಳು 20ರ ವರೆಗೂ ಮುಂದುವರಿಯುತ್ತೆ. ಎಮರ್ಜೆನ್ಸಿ ಪಾಸ್ ಬೇಕಾದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸೂಕ್ತ ದಾಖಲೆ ಕೊಟ್ಟು ಹೊಸ ಪಾಸ್ ಪಡೆಯಬಹುದು. ನಕಲಿ ಪಾಸ್ ಪಡೆದು ಸಿಕ್ಕಿ ಬಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೀವಿ ಎಂದು ವಾರ್ನ್ ಮಾಡಿದ್ದಾರೆ.
ಅಲ್ಲದೇ ಅಗತ್ಯ ವಸ್ತುಗಳ ಸರಬರಾಜು ಮಾಡಲು ಅವಕಾಶ ಇದೆ. ಬೆಂಗಳೂರನಲ್ಲಿ 30 ಸಾವಿರಕ್ಕೂ ಹೆಚ್ಚು ವಾಹನಗಳು ಜಪ್ತಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಾಗಿದೆ. ಅಂದಿನಿಂದ ಪೊಲೀಸರು ಹಗಲಿರುಳು ಎನ್ನದೇ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಪೊಲೀಸ್ ಸಿಬ್ಬಂದಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕೆಲವೊಂದು ಸೂಚನೆ ನೀಡಿದ್ದಾರೆ.
ಲಾಕ್‍ಡೌನ್‍ನಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಅಲ್ಲದೇ ನಾವು ಏನೇ ಬಂದೋಬಸ್ತ್ ಮಾಡಿದರೂ ಸಹ ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಕಮಿಷನರ್ ಸಿಬ್ಬಂದಿಗೆ ನೀಡಿದ ಕೆಲವು ಸೂಚನೆಗಳು:
* ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗಬಾರದು.
* ಮೀಡಿಯಾ, ಹಣ್ಣು, ತರಕಾರಿ, ಮೊಟ್ಟೆ, ಮಾಂಸ, ದಿನಸಿ ತರುವವರಿಗೆ ಯಾವುದೇ ಸಮಸ್ಯೆಯಾಗಬಾರದು.
* ಎಪಿಎಂಸಿಗೆ ಎಲ್ಲಾ ರಾಜ್ಯಗಳಿಂದ ಟ್ರಕ್‍ಗಳು, ಗೂಡ್ಸ್ ವೆಹಿಕಲ್ ಬರುತ್ತೆ, ಅವುಗಳನ್ನ ತಡೆಯಬಾರದು. ಖಾಲಿ ಟ್ರಕ್ ಇದ್ದರೂ ಸಹ ತಡೆಯಬಾರದು..
* ಎಪಿಎಂಸಿಗೆ ಬರುವ ಹಮಾಲಿಗಳು, ಕೂಲಿ ಕಾರ್ಮಿಕರಿಗೆ ತೊಂದರೆ ಆಗಬಾರದು.
* ಡಯಾಲಿಸಿಸ್, ಕಿಮೊತೆರಪಿ, ಹೆರಿಗೆ ಆಸ್ಪತ್ರೆಗೆ ಅಥವಾ ಇನ್ಯಾವುದೇ ಇರಲಿ, ಪಾಸ್ ಇರಲಿ, ಇಲ್ಲದೇ ಇರಲಿ ಸ್ಥಳದಲ್ಲಿ ಇರುವ ಅಧಿಕಾರಿ ಅವರಿಗೆ ಅಗೌರವ ತರದಂತೆ ಗೌರವಯುತವಾಗಿ ಅವಾಚ್ಯ ಶಬ್ದ ಬಳಸದಂತೆ ಕಳಿಸಿಕೊಡಬೇಕು.
* ಎಟಿಎಂ ಕೆಲಸಕ್ಕೆ ಹೋಗುವವರು, ಸರ್ಕಾರಿ ಅಧಿಕಾರಿಗಳು, ಎಲೆಕ್ಟ್ರಿಸಿಟಿ, ವಾಟರ್, ಸ್ಯಾನಿಟೈಸರ್, ಟ್ಯಾಂಕರ್ ನೀರು ಪೂರೈಸುವವರು, ಖಾಸಗಿ ಸೆಕ್ಯುರಿಟಿ ಸಿಬ್ಬಂದಿಗೆ ತೊಂದರೆಯಾಗಬಾರದು.
* ಕೊಟ್ಟಿರುವ ಪಾಸ್‍ಗಳನ್ನ ಮಾನವೀಯ ದೃಷ್ಟಿಯಿಂದ ಚೆಕ್ ಮಾಡಬೇಕು. ನಕಲಿ ಪಾಸ್‍ಗಳನ್ನ ಪತ್ತೆ ಮಾಡಬೇಕು. ಗಾಡಿ ಸೀಜ್ ಮಾಡುವುದರಿಂದ ಗಾಡಿ ವಾಪಸ್ ಕೊಡುವ ಪೇಪರ್ ಕೆಲಸ ಆಗಬೇಕು.
* ಜನರಿಂದ, ಮಾಧ್ಯಮಗಳಿಂದ ಪ್ರಶಂಸೆ ಬಂದಿರೋದು ತಲೆಗೆ ಹತ್ತಬಾರದು. ಇನ್ನೂ ಕೆಲಸ ಮಾಡೋದು ಬಾಕಿ ಇದೆ. ಜನರಿಗೆ ಅವಾಚ್ಯವಾಗಿ ನಿಂದಿಸೋದು, ಅವಮಾನ ಮಾಡೋದು ಮಾಡಬಾರದು.
* ಏನೇ ಬಂದೋಬಸ್ತ್ ಮಾಡಿದರೂ ಸಹ ಮಾನವೀಯತೆಯಿಂದ ಕೆಲಸ ಮಾಡಬೇಕು. ಹೀಗೆ ಅನೇಕ ರೀತಿಯ ಸೂಚನೆಗಳನ್ನು ಪೊಲೀಸ್ ಸಿಬ್ಬಂದಿಗೆ ತಿಳಿಸಿದ್ದಾರೆ.
ಅಲ್ಲದೇ ಪೊಲೀಸ್ ಸಿಬ್ಬಂದಿಯೂ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ಸೂಚಿಸಿದ್ದಾರೆ. ಪ್ರತಿದಿನ ಮೂರು ಲೀಟರ್ ನೀರು ಕುಡಿಯಬೇಕು, ಸಿಬ್ಬಂದಿಗೆ ನಾಲ್ಕು ಆರೆಂಜ್ ಜ್ಯೂಸ್ ಕೊಡಬೇಕು. ಒಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬೆಂಗಳೂರು: ಕೊರೊನಾ ವೈರಸ್ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ಎರಡು ವಾರ್ಡ್ ಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗುತ್ತಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಇಡೀ ಬೆಂಗಳೂರು ನಗರವನ್ನೇ ಸೀಲ್‍ಡೌನ್ ಮಾಡಲಾಗುತ್ತಿದೆ ಅಂತ ಸುದ್ದಿ ಬರುತ್ತಿದೆ. ಆದರೆ ಸರ್ಕಾರದ ಮುಂದೆ ಇಂತಹ ಯಾವುದೇ ಆಲೋಚನೆಗಳಿಲ್ಲ. ಸುಳ್ಳು ಸುದ್ದಿಯಿಂದಾಗಿ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಪಾದರಾಯನಪುರ ಮತ್ತು ಬಾಪೂಜಿ ನಗರ ವಾರ್ಡ್ ಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗುತ್ತಿದೆ. ಈ ಎರಡು ವಾರ್ಡ್ ಹೊರತುಪಡಿಸಿ ಬೇರೆ ಎಲ್ಲೂ ಸೀಲ್‍ಡೌನ್ ಇಲ್ಲ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿ ಅಂಡ್ ಐಜಿಪಿಯವರ ಜೊತೆ ಮಾತನಾಡಲಾಗಿದೆ. ಎರಡು ವಾರ್ಡ್ ನಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿನ ಜನಕ್ಕೆ ಅಗತ್ಯ ವಸ್ತುಗಳ ಪೂರೈಕೆಗಾಗಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ತಲುಪಿಸುವಂತೆ ಕೆಲಸ ಮಾಡಿ ಅಂತ ಕೇಳಿಕೊಳ್ಳುತ್ತಿದ್ದೇವೆ. ಜನರಿಗೆ ಧೈರ್ಯ ಕೊಡಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಭಾಸ್ಕರ್ ರಾವ್ ಕೇಳಿಕೊಂಡರು.
Dear citizens, I appeal to all of you not to panic & go out to buy essentials. Seal down orders are only in Ward 134 Bapuji Nagar & Ward 135 Padarayanapura due to fresh cases & to contain spread of #Covid19. Urge TV news channels to report facts & not speculate.@BlrCityPolice
ದಿನನಿತ್ಯದ ಅವಶ್ಯಕ ವಸ್ತುಗಳು ಸಿಗುತ್ತಿವೆ. ಹಾಲು, ದಿನಸಿ, ಔಷಧಿಗಳಿಗೆ ತೊಂದರೆಯಾಗಿಲ್ಲ. ಯಾರು ಕೂಡ ಆತಂಕಕ್ಕೆ ಒಳಗಾಗಬೇಕಿಲ್ಲ. ಮೆಡಿಕಲ್ ಎಮರ್ಜೆನ್ಸಿ ಇದ್ದವರಿಗೆ ಓಡಾಡಲು ಬಿಡಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರ 21,700 ವಾಹಕಗಳನ್ನು ಸೀಜ್ ಮಾಡಲಾಗಿದೆ. ಕೆಲವರು ಸುಳ್ಳು ದಾಖಲೆ ನೀಡಿ ಪಾಸ್ ಪಡೆದಿರುವುದು ಗೊತ್ತಗಿದೆ ಎಂದು ಮಾಹಿತಿ ನೀಡಿದರು.
ಶುಕ್ರವಾರ ಮತ್ತೆ 10 ಹೊಸ ಕೊರೊನಾ ಪ್ರಕರಣಗಳ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. ಗುರುವಾರ ಒಟ್ಟು 16 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ.
ಮೈಸೂರು 5, ಬೆಂಗಳೂರು 2 ಮತ್ತು ಕಲಬುರಗಿಯಲ್ಲಿ 1 ಕೊರೊನಾ ಪ್ರಕರಣ ಪತ್ತೆಯಾಗಿದೆ. ಮೈಸೂರಿನಲ್ಲಿ ತಂದೆಯಿಂದ 8 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರು ಗ್ರಾಮಾಂತರದ 11 ವರ್ಷದ ಬಾಲಕಿಗೂ ಕೊರೊನಾ ತಗುಲಿದೆ. ಈಕೆ ರೋಗಿ ನಂಬರ್ 206ರ ಪುತ್ರಿಯಾಗಿದ್ದಾಳೆ. ಗುರುವಾರ ಬಾಗಲಕೋಟೆಯ ಮೂರು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.
ರೋಗಿ ನಂಬರ್ 198: 48 ವರ್ಷದ ಪುರುಷನಾಗಿದ್ದು, ರೋಗಿ ನಂಬರ್ 167 ಮತ್ತು 168ರ ಜೊತೆ ಸಂಪರ್ಕದಲ್ಲಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ ನಂಬರ್ 199: 57 ವರ್ಷದ ಪುರುಷನಾಗಿದ್ದು, ರೋಗಿ ನಂಬರ್ 167 ಮತ್ತು 168ರ ಜೊತೆ ಸಂಪರ್ಕದಲ್ಲಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು: ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಕೂಡ ಲಾಕ್‍ಡೌನ್ ಅನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎನ್ನುವ ಬಗ್ಗೆ ಸ್ವತಃ ಗೃಹಮಂತ್ರಿಗಳು ಹಾಗೂ ಬೆಂಗಳೂರು ಕಮಿಷನರ್ ಖುದ್ದು ಚೆಕ್ ಪೋಸ್ಟ್ ಹಾಗೂ ಬಾರ್ಡರ್‌ಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ನಕಲಿ ಪಾಸ್‍ಗಳನ್ನು ಬಳಸಿ ಹಾಗೂ ಅನವಶ್ಯಕವಾಗಿ ಓಡಾಟ ಮಾಡುತ್ತಿದ್ದವರ ಪಾಸ್‍ಗಳನ್ನು ವಶಕ್ಕೆ ಪಡೆದು ವಾಹನಗಳನ್ನು ಸೀಜ್ ಮಾಡಿದ್ದಾರೆ.
ದೇಶಾದ್ಯಂತ ಲಾಕ್‍ಡೌನ್ ಹೇರಿದರೂ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಇದಕ್ಕೆ ತಮಿಳುನಾಡು ಕೂಡ ಹೊರತಲ್ಲ. ಈ ಹಿನ್ನೆಲೆಯಲ್ಲಿ ಖುದ್ದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಕಮಿಷನರ್ ಭಾಸ್ಕರ್ ರಾವ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಕರ್ನಾಟಕ-ತಮಿಳುನಾಡು ಗಡಿ ಅತ್ತಿಬೆಲೆಗೆ ದಿಢೀರ್ ಭೇಟಿ ನೀಡಿದ್ದಾರೆ. ಖುದ್ದು ಕಮೀಷನರ್ ವಾಹನಗಳ ತಪಾಸಣೆ ಮಾಡಿದ್ದಾರೆ.
ಕರ್ನಾಟಕದ ಅತ್ತಿಬೆಲೆ ಗಡಿ ಭಾಗದಲ್ಲಿ ತಮಿಳುನಾಡಿನ ಪೊಲೀಸರು ಚೆಕ್ ಪೋಸ್ಟ್ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಫುಲ್ ಗರಂ ಆಗಿದ್ದರು. ತಕ್ಷಣ ತಮಿಳುನಾಡು ಪೊಲೀಸರನ್ನು ಅವರ ಗಡಿಯಲ್ಲಿ ಚೆಕ್‍ಪೋಸ್ಟ್ ಹಾಕಿಕೊಳ್ಳುವಂತೆ ಸೂಚಿಸಿ ಎತ್ತಂಗಡಿ ಮಾಡಿಸಿದ್ದಾರೆ.
ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಮುಖ್ಯ ರಸ್ತೆಯ ಚೆಕ್ ಪೋಸ್ಟ್ ಗಳನ್ನು ತಪಾಸಣೆ ಮಾಡಿದರು. ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಸಾಕಷ್ಟು ನಕಲಿ ಪಾಸ್‍ಗಳಿರುವ ವಾಹನ ಸವಾರರು ಓಡಾಟ ನಡೆಸಿ, ಸಿಕ್ಕಿಬಿದ್ದಿದ್ದಾರೆ. ಅಂತಹ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.
ಲಾಕ್‍ಡೌನ್ ಪಾಲನೆ ಮಾಡದೇ ಬೀದಿಗಿಳಿಯುತ್ತಿರುವ ವಾಹನ ಸವಾರರಿಗೆ ಖುದ್ದು ಗೃಹ ಸಚಿವರು ಮತ್ತು ಬೆಂಗಳೂರು ಕಮೀಷನರ್ ರಿಯಾಲಿಟಿ ಚೆಕ್ ನಡೆಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರು: ಮಹಾಮಾರಿ ಕೊರೊನಾ ಓಡಿಸಲು ದೀಪ ಹಚ್ಚಿ ಎಂದು ಪ್ರಧಾನಿ ಮೋದಿ ಅವರು ನಾಡಿನ ಜನತೆಗೆ ಕರೆ ಕೊಟ್ಟಿದ್ದಾರೆ. ಇತ್ತ ಬೆಂಗಳೂರಲ್ಲಿ ದೀಪ ಹಚ್ಚೋ ಹೆಸರಲ್ಲಿ ರಸ್ತೆಗೆ ಬಂದರೆ ಕೇಸ್ ಹಾಕಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಜನ ಅಪ್ಪಿ ತಪ್ಪಿಯೂ ರಸ್ತೆಯಲ್ಲಿ ದೀಪ ಹಚ್ಚೋದಾಗಲಿ, ಪಂಜು ಹಚ್ಚುವುದಾಗಿ ಮಾಡುವಂತಿಲ್ಲ. ದೀಪ ಹಾಗೂ ಮೇಣದಬತ್ತಿಯನ್ನು ಅವರವರ ಮನೆಯ ಟೆರೆಸ್ ಹಾಗೂ ಬಾಲ್ಕನಿಯಲ್ಲಿ ಹಚ್ಚಬೇಕು. ಬೆಂಗಳೂರು ನಗರದಲ್ಲಿ ಸೆಕ್ಷನ್ 144 ಜಾರಿ ಇರುತ್ತೆ, ಯಾವುದೇ ಕಾರಣಕ್ಕೂ ಗುಂಪು ಸೇರದೇ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲೂ ದೀಪ ಹಚ್ಚಬಾರದು ಎಂದು ತಿಳಿಸಿದ್ದಾರೆ.
ರಾತ್ರಿ 9 ಗಂಟೆ 9 ನಿಮಿಷಕ್ಕೆ ಸರಿಯಾಗಿ ದೀಪ ಹಾಗೂ ಮೊಂಬತ್ತಿ ಹಚ್ಚಿಸಬೇಕು. ಒಂದು ವೇಳೆ ಲಾಕ್‍ಡೌನ್ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭಾಸ್ಕರ್ ರಾವ್ ವಾರ್ನಿಂಗ್ ಕೊಟ್ಟಿದ್ದಾರೆ.
ಶುಕ್ರವಾರ ಪ್ರಧಾನಿ ಮೋದಿ ಅವರು ಟ್ವಿಟ್ಟರಿನಲ್ಲಿ ಲೈವ್ ಬಂದಿದ್ದು, ಲಾಕ್‍ಡೌನ್ ಮುಖ್ಯ. ಇದು ಒಬ್ಬರ ಹೋರಾಟ ಅಲ್ಲ. ಇದಕ್ಕೆ ಸಾಮೂಹಿಕ ಶಕ್ತಿಯ ಅವಶ್ಯಕತೆ ಇದೆ. ಜನತಾ ಜನಾರ್ದನ ಈಶ್ವರನಾ ರೂಪವಾಗಿದೆ. ಹೀಗಾಗಿ ಅಂದಕಾರದ ನಡುವೆ ನಾವು ಪ್ರಕಾಶಮಾನವಾಗಿರಬೇಕು. ನಮ್ಮ ಬಡವರು ಕೊರೊನಾ ನಿರಾಸೆಯಿಂದ ಸಂಕಷ್ಟ ನಡುವೆ ಆಶಾಕಿರಣವಾಗಿದ್ದಾರೆ. ಆದ್ದರಿಂದ ಕೊರೊನಾ ಅನ್ನೋ ಅಂಧಕಾರದಿಂದ ಬೆಳಕಿನತ್ತ ಹೋಗುತ್ತಿದ್ದೇವೆ ಎಂದಿದ್ದರು.
ಏಪ್ರಿಲ್ 5ಕ್ಕೆ ಎಲ್ಲರೂ ಒಟ್ಟಾಗೋಣ. ಏಪ್ರಿಲ್ 5ಕ್ಕೆ ಮಹಾ ಶಕ್ತಿಯ ಜಾಗೃತಿ ಆಗಬೇಕಿದೆ. ಹೀಗಾಗಿ ರಾತ್ರಿ 9 ಗಂಟೆಗೆ ದೀಪ, ಮೇಣದ ಬತ್ತಿ, ಟಾರ್ಚ್, ಮೊಬೈಲ್ ಟಾರ್ಚ್ ಬೆಳಗಿಸಬೇಕು. ಆ ಬೆಳಕಿನಲ್ಲಿ ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ನಾವು ಇಬ್ಬರೇ ಇಲ್ಲ, ಎಲ್ಲರೂ ಒಗ್ಗಟಾಗಿದ್ದೇವೆ ಎನ್ನುವ ಸಂಕಲ್ಪ ಮಾಡಬೇಕು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮೋದಿ ಮತ್ತೊಮ್ಮೆ ಜನರಿಗೆ ಕರೆ ಕೊಟ್ಟಿದ್ದರು.