Tag: bhartruhari mahtab

  • Parliament Session: ಸಂಸದರಾಗಿ ಮೋದಿ, ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

    Parliament Session: ಸಂಸದರಾಗಿ ಮೋದಿ, ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

    – ನೂತನ ಸಂಸದರಿಗೆ ಹೃದಯಪೂರ್ವಕ ಸ್ವಾಗತ ಕೋರಿದ ಮೋದಿ

    ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Session) ಸೋಮವಾರ (ಜೂ.24) ಆರಂಭಗೊಂಡಿದ್ದು, ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ (Bhartruhari Mahtab) ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣ ವಚನ ಬೋಧಿಸಿದರು. ನಂತರ ಸಂಸತ್‌ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಾರಣಾಸಿ ಕ್ಷೇತ್ರದ ಸಂಸರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಅಧಿವೇಶನದ ಮೊದಲ ದಿನವಾದ ಸೋಮವಾರ 280 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದು, ಮಂಗಳವಾರ 264 ಹೊಸದಾಗಿ ಚುನಾಯಿತರಾದ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26 ರಂದು ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ.

    ಜೂನ್ 27 ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲಿನ ಚರ್ಚೆ ಜೂನ್ 28 ರಂದು ಪ್ರಾರಂಭವಾಗುತ್ತದೆ. ಜುಲೈ 2 ಅಥವಾ 3 ರಂದು ಪ್ರಧಾನಿ ಮೋದಿ ಚರ್ಚೆಗೆ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಬಳಿಕ ಎರಡೂ ಸದನಗಳು ಮುಂದೂಡಿಕೆಯಾಗಲಿದ್ದು ಕೇಂದ್ರ ಬಜೆಟ್ ಮಂಡನೆಗಾಗಿ ಜುಲೈ 22 ರಂದು ಮತ್ತೆ ಸೇರಲಿವೆ.

    ಮೋದಿ ಪ್ರತಿಕ್ರಿಯೆ:
    ಸಂಸತ್‌ ಪ್ರವೇಶಿಸುವ ಮುನ್ನ 18ನೇ ಲೋಕಸಭೆ ಅಧಿವೇಶನ ಮೊದಲ ದಿನದ ಹಿನ್ನೆಲೆ ಕಲಾಪಕ್ಕೂ ಮುನ್ನ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಇದು ಅದ್ಭುತವಾದ ದಿನವಾಗಿದೆ. ಸ್ವಾತಂತ್ರ‍್ಯದ ನಂತರ ಮೊದಲ ಬಾರಿಗೆ, ನಮ್ಮದೇ ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯುತ್ತಿದೆ. ಇದು ಹಳೆಯ ಸಂಸತ್ತಿನ ಕಟ್ಟಡದಲ್ಲಿ ನಡೆಯುತ್ತಿತ್ತು. ಈ ಮಹತ್ವದ ದಿನದಂದು, ಹೊಸದಾಗಿ ಚುನಾಯಿತರಾದ ಎಲ್ಲಾ ಸಂಸದರಿಗೆ ನಾನು ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ ಎಂದು ಹೇಳಿದರು.

    ಮುಂದುವರಿದು 18ನೇ ಲೋಕಸಭೆ ಕಲಾಪ ಆರಂಭವಾಗುತ್ತಿದ್ದು, ವಿಶ್ವದ ಅತಿದೊಡ್ಡ ಚುನಾವಣೆಯನ್ನು ಅತ್ಯಂತ ಅದ್ಧೂರಿ ಮತ್ತು ವೈಭವಯುತವಾಗಿ ನಡೆಸಲಾಯಿತು. ಈ ಚುನಾವನೆಯು ಬಹಳ ಮಹತ್ವದ್ದಾಗಿತ್ತು. ದೇಶದ ಜನರು ಸತತ 3ನೇ ಬಾರಿಗೆ ಸೇವೆ ಸಲ್ಲಿಸಲು ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಶ್ಲಾಘಿಸಿದರು.

  • 6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಭರ್ತೃಹರಿ ಮಹತಾಬ್‌ ರಾಜೀನಾಮೆ

    6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಭರ್ತೃಹರಿ ಮಹತಾಬ್‌ ರಾಜೀನಾಮೆ

    ಭುವನೇಶ್ವರ: ಒಡಿಶಾದ ಕಟಕ್‌ನಿಂದ 6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜು ಜನತಾ ದಳದ (BJD) ಭರ್ತೃಹರಿ ಮಹತಾಬ್ (Bhartruhari Mahtab) ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

    ಮಹತಾಬ್ ಅವರು 1998, 1999, 2004, 2009, 2014 ಮತ್ತು 2019 ರಲ್ಲಿ ಒಡಿಶಾದ ಕಟಕ್ ಸಂಸದೀಯ ಕ್ಷೇತ್ರದಿಂದ ಸತತ ಆರು ಲೋಕಸಭಾ ಚುನಾವಣೆ ಗೆದ್ದಿದ್ದರು. ಇದನ್ನೂ ಓದಿ: ಪತಿಯ ಬಂಧನದ ಬೆನ್ನಲ್ಲೇ ಮೋದಿ ವಿರುದ್ಧ ಸಿಡಿದೆದ್ದ ಕೇಜ್ರಿವಾಲ್‌ ಪತ್ನಿ

    1998 ರ ಲೋಕಸಭಾ ಚುನಾವಣೆಯಲ್ಲಿ ಮಹತಾಬ್ ಅವರು ಕಾಂಗ್ರೆಸ್ ಪಕ್ಷದ ಸೈಯದ್ ಮುಸ್ತಾಫಿಜ್ ಅಹ್ಮದ್ ಅವರನ್ನು 1,12,694 ಮತಗಳ ಅಂತರದಿಂದ ಸೋಲಿಸುವ ಮೂಲಕ ಕಟಕ್ ಸ್ಥಾನವನ್ನು ಮೊದಲ ಬಾರಿಗೆ ಗೆದ್ದರು. ಬಳಿಕ 1999 ಮತ್ತು 2004 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಕನ್ಹು ಚರಣ್ ಲೆಂಕಾ ಮತ್ತು ಜಯಂತಿ ಪಟ್ನಾಯಕ್ ಅವರನ್ನು ಸೋಲಿಸುವ ಮೂಲಕವು ಗೆಲುವಿನ ನಗೆ ಬೀರಿದ್ದರು.

    2009 ರ ಲೋಕಸಭಾ ಚುನಾವಣೆಯಲ್ಲಿ 2,36,292 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಿಭೂತಿ ಭೂಷಣ್ ಮಿಶ್ರಾ ಅವರನ್ನು ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಕಟಕ್ ಸ್ಥಾನವನ್ನು ಉಳಿಸಿಕೊಂಡರು. ಅಂತೆಯೇ 2014 ಹಾಗೂ 2019ರಲ್ಲಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಂಸದ ಸ್ಥಾನವನ್ನು ಅಲಂಕರಿಸಿದ್ದರು.

    ಸದ್ಯ ಮಹತಾಬ್‌ ಅವರು ತಮ್ಮ ರಾಜೀನಾಮೆ ಪತ್ರವನ್ನು ಬಿಜೆಡಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌ ಅವರಿಗೆ ಕಳುಹಿಸಿದ್ದಾರೆ. ಪಕ್ಷದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಇಲ್ಲದ ಕಾರಣ ರಾಜೀನಾಮೆ ನೀಡಿರುವುದಾಗಿ ಮಹತಾಬ್‌ ತಿಳಿಸಿದ್ದಾರೆ.

    ಒಡಿಶಾದಲ್ಲಿ 2024 ರ ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು 4 ಹಂತಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತದಾನ ನಡೆಯಲಿದೆ.