Tag: bharatbandh

  • 10 ವರ್ಷ ಕಾಲ ರೈತರು ಪ್ರತಿಭಟನೆಗೆ ಸಿದ್ದರಿದ್ದಾರೆ – ರಾಕೇಶ್ ಟಿಕಾಯತ್

    10 ವರ್ಷ ಕಾಲ ರೈತರು ಪ್ರತಿಭಟನೆಗೆ ಸಿದ್ದರಿದ್ದಾರೆ – ರಾಕೇಶ್ ಟಿಕಾಯತ್

    ನವದೆಹಲಿ: ಕೃಷಿ ಕಾಯ್ದೆಯ ವಿರುದ್ಧ 10 ವರ್ಷ ಪ್ರತಿಭಟನೆ ನಡೆಸಲು ರೈತರು ಸಿದ್ಧರಿದ್ದಾರೆ ಎಂದು ಭಾರತೀಯ ಕಿಸಾನ್ ಯುನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.

    ಪಾಣಿಪತ್ ನಲ್ಲಿ ನಡೆದ ಮಹಾಪಂಚಾಯತ್ ನಲ್ಲಿ ಮಾತನಾಡಿದ ಅವರು, ಕಳೆದ 10 ತಿಂಗಳಿನಿಂದ ಮನೆಯನ್ನು ತೊರೆದು ಪ್ರತಿಭಟನೆ ನಡೆಸುತ್ತಿರುವ ರೈತರು 10 ವರ್ಷಗಳ ಕಾಲ ಪ್ರತಿಭಟನೆಗೆ ಸಿದ್ಧರಿದ್ದಾರೆ ಎಂದಿದ್ದಾರೆ.

    ಈಗಿನ ಸರ್ಕಾರ ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯದಿದ್ದರೆ ಮುಂದೆ ಬರಲಿರುವ ಸರ್ಕಾರ ಹಿಂದಕ್ಕೆ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ರೈತರಿಂದ ವಿನೂತನ ಪ್ರತಿಭಟನೆ

    ಯಾವುದೇ ಕಾರಣಕ್ಕೂ ನಾವು ಈ ಕಾಯ್ದೆಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರತಿಭಟನೆ ವೇಳೆ ಡಿಸಿಪಿ ಮೇಲೆ ಕಾರು ಹತ್ತಿಸಲು ಯತ್ನ 

    ರೈತರು ದೆಹಲಿಯ ಗಡಿಯಿಂದ ಹಿಂದಿರುಗಲ್ಲ. ಆದ್ರೆ ಒಂದು ಷರತ್ತಿನ ಮೇಲೆ ರೈತರು ಹಿಂದಿರಗಬಹುದು. ಅದು ಮೂರು ಕಾನೂನುಗಳನ್ನ ರದ್ದುಗೊಳಿಸಿ, ಎಂಎಸ್‍ಪಿ ಗೆ ಕಾನೂನು ರೂಪಿಸಿದ ದಿನ ಎಂದು ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.

  • ನಾಳೆ ಕರ್ನಾಟಕ ಬಂದ್‌ – ಏನು ಇರುತ್ತೆ? ಏನು ಇರಲ್ಲ?

    ನಾಳೆ ಕರ್ನಾಟಕ ಬಂದ್‌ – ಏನು ಇರುತ್ತೆ? ಏನು ಇರಲ್ಲ?

    ಬೆಂಗಳೂರು: ಕೃಷಿ ಸಂಬಂಧಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್‍ಗೆ ಕರೆ ನೀಡಿದೆ. ಸಹಜವಾಗಿಯೇ ಕರ್ನಾಟಕದಲ್ಲಿಯೂ ಕೂಡ ಭಾರತ್ ಬಂದ್‍ಗೆ ರೈತ ನಾಯಕರು ಕರೆ ನೀಡಿದ್ದಾರೆ. ರೈತರ ಈ ಉದ್ದೇಶಿತ ಬಂದ್‍ಗೆ ಬೆಂಬಲ ಸೂಚಿಸುವ ವಿಚಾರದಲ್ಲಿ ಹಲವು ಸಂಘ ಸಂಸ್ಥೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

    ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ನಾಳೆ ಭಾರತ್ ಬಂದ್‍ಗೆ ಬೆಂಬಲ ಘೋಷಿಸಿವೆ. ಆದರೆ ಕನ್ನಡ ಪರ ಸಂಘಟನೆಗಳಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕೆಲ ಸಂಘಟನೆಗಳು ಬಂದ್‍ನಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ರೆ, ಇನ್ನೂ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಘೋಷಿಸಿ ಸುಮ್ಮನಾಗಿವೆ.

    ದಿನ ಬೆಳಗಾದರೆ ಕೆಲಸ ಮಾಡ್ಬೇಕು, ಹೊಟ್ಟೆ ತುಂಬಿಸಿಕೊಳ್ಳಬೇಕು ಎನ್ನುವ ಅನಿವಾರ್ಯತೆಯಲ್ಲಿ ಇರುವವರಿಗೆ ಬಂದ್‍ನಲ್ಲಿ ಪಾಲ್ಗೊಳ್ಳುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿ ಹಲವು ಸಂಘ ಸಂಸ್ಥೆಗಳು ಕೈ ತೊಳೆದುಕೊಂಡಿವೆ.

    ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನನಗೆ ಬಂದ್‍ಗೆ ಸಂಬಂಧ ಇಲ್ಲ ಅಂತಾ ಆಟೋ ಓಡಿಸಬೇಡಿ, ಹೋಟೆಲ್ ತೆಗೆಯೋಕೆ ಹೋಗಬೇಡಿ. ಕೃಷಿ ಆಧಾರಿತ ಬದುಕು ನಮ್ಮದು. ರೈತರಿಗಾಗಿ ಹೋರಾಟ ಮಾಡಿ. ಬೆಂಬಲ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಮಧ್ಯೆ, ರೈತ, ದಲಿತ,ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಅನಿರ್ದಿಷ್ಟವಧಿ ಪ್ರತಿಭಟನೆ ಶುರು ಮಾಡಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಸ್ವಾತಂತ್ರ್ಯ ಹೋರಾಟಗಾರ ಹೆಚ್‍ಎಸ್ ದೊರೆಸ್ವಾಮಿ ಸೇರಿ ಹಲವರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರ ರಾಜ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.

    ಬಂದ್‌ಗೆ ಬೆಂಬಲ ನೀಡಿದವರು ಯಾರು?
    ಲಾರಿ ಮಾಲೀಕರ ಸಂಘ, ಎಪಿಎಂಪಿಸಿ ವ್ಯಾಪಾರಿಗಳು, ಕಾರ್ಮಿಕರ ಸಂಘ, ಎಐಟಿಯುಸಿ, ಸಿಐಟಿಯು ಬೆಂಬಲ, ಓಲಾ-ಊಬರ್ ಚಾಲಕರ ಸಂಘ, ಆಟೋ ಸಂಘಟನೆಗಳು, ಖಾಸಗಿ ಶಾಲೆಗಳು ಬೆಂಬಲ ನೀಡಿದ್ದು ನಾಳೆ ಇಡೀ ದಿನ ಆನ್‍ಲೈನ್ ಕ್ಲಾಸ್ ಇರುವುದಿಲ್ಲ. ಅಂಗನವಾಡಿ ನೌಕರರ ಸಂಘ, ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ, ಬ್ಯಾಂಕ್ ಯೂನಿಯನ್ ಬೆಂಬಲ ನೀಡಿವೆ.

    ವಾಹನ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿದ್ದರೂ ವಾಹನ ರಸ್ತೆಗೆ ಇಳಿಸಬೇಕೋ ಬೇಡವೋ ಎಂಬುದನ್ನು ಚಾಲಕರ ವಿವೇಚನೆಗೆ ಬಿಡಲಾಗಿದೆ.

    ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟ, ಕರವೇ ನಾರಾಯಣಗೌಡರ ಬಣದಿಂದ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಕರವೇ ಪ್ರವೀಣ್ ಶೆಟ್ಟಿ ಬಣ ನೈತಿಕ ಬೆಂಬಲ ನೀಡಿವೆ.

  • ಹೆಚ್ಚು ಕಡಿಮೆ ಆದ್ರೆ ನೀವೇ ಜವಾಬ್ದಾರಿ, ಬಿ ಕೇರ್ ಫುಲ್: ಭಾಸ್ಕರ್ ರಾವ್

    ಹೆಚ್ಚು ಕಡಿಮೆ ಆದ್ರೆ ನೀವೇ ಜವಾಬ್ದಾರಿ, ಬಿ ಕೇರ್ ಫುಲ್: ಭಾಸ್ಕರ್ ರಾವ್

    ಬೆಂಗಳೂರು: ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಕರೆದಿರುವ ಭಾರತ್ ಬಂದ್‍ಗೆ ಎಲ್ಲೆಡೆ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. ಈಗಾಗಲೇ 46 ಸಂಘಟನೆಗಳು ಪ್ರತಿಭಟನೆಗೆ ಅವಕಾಶವನ್ನು ಪಡೆದುಕೊಂಡಿವೆ. ಆದರೆ ಪೊಲೀಸ್ ಇಲಾಖೆ ತುಂಬಾ ಎಚ್ಚರಿಕೆಯಿಂದ ಇರಬೇಕು ಅಂತ ಸೂಚನೆ ನೀಡಲಾಗಿದೆ.

    ನಾಳೆಯ ಭಾರತ್ ಬಂದ್‍ಗೆ ಖಡಕ್ ಸೂಚನೆಗಳನ್ನು ನೀಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪ್ರತಿಯೊಂದು ಸ್ಟೇಷನ್ ವ್ಯಾಪ್ತಿಯ ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮ ಎಚ್ಚರಿಕೆಯನ್ನೂ ಮೀರಿ ಪ್ರತಿಭಟನಾ ರ‍್ಯಾಲಿಗಳು, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸೋದು, ಕಲ್ಲು ತೂರಾಟ ಮಾಡಿದ ಕುರಿತು ವರದಿಯಾದರೆ ಅದಕ್ಕೆ ಇನ್ಸ್‍ಪೆಕ್ಟರ್‍ಗಳೇ ಜವಾಬ್ದಾರಿ ಎಂದು ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ: ಬುಧವಾರ ಭಾರತ್ ಬಂದ್ – ಏನು ಇರುತ್ತೆ? ಏನು ಇರಲ್ಲ?

    ಇಂದು ರಾತ್ರಿಯಿಂದಲೇ ಅತಿ ಹೆಚ್ಚು ಗಸ್ತು ತಿರುಗಲು ಸೂಚನೆ ನೀಡಲಾಗಿದೆ. ಬೆಳ್ಳಂಬೆಳಗ್ಗೆ ಸಂಚರಿಸುವ ಬಸ್‍ಗಳಿಗೂ ಭದ್ರತೆಯನ್ನು ಒದಗಿಸಬೇಕು. ಗುಂಪು ಸೇರಿ ಹೊಂಚು ಹಾಕುವವರ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

  • ಕೇಂದ್ರ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ..!

    ಕೇಂದ್ರ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ..!

    ಬಳ್ಳಾರಿ: ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್ ಎರಡನೇಯ ದಿನವಾದ ಇಂದು ಕೂಡ ಬಳ್ಳಾರಿಯಲ್ಲಿ ಮುಂದುವರಿದಿದೆ. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಶವಯಾತ್ರೆಯ ಮೂಲಕ ವಿನೂತನವಾಗಿ ಪ್ರತಿಭಟನೆ ಕೈಗೊಂಡಿದ್ದಾರೆ.

    ಬಂದ್ ಕರೆ ಹಿನ್ನೆಲೆಯಲ್ಲಿ ಇಂದು ಸಹ ಬಳ್ಳಾರಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಬಂದ್ ಪ್ರತಿಭಟನೆ ತೀವ್ರಗೊಂಡಿದೆ. ಬಂದ್ ವೇಳೆ ನಾಲ್ಕು ಸಾರಿಗೆ ಬಸ್ ಗಳಿಗೆ ಕಲ್ಲು ತೂರಿದ ಪರಿಣಾಮ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಇಂದು ಮುಂಜಾನೆ 6-7 ಗಂಟೆಯವರೆಗೆ ಬಸ್ ಸಂಚಾರ ಆರಂಭವಾಗಿತ್ತು. ಆದ್ರೆ ಕಳೆದ ರಾತ್ರಿಯಿಂದ ನಾಲ್ಕು ಬಸ್ ಗಳ ಮೇಲೆ ಕಲ್ಲು ತೂರಿದ ಪರಿಣಾಮ ಸಾರಿಗೆ ಬಸ್ ಚಾಲಕರು ಬಸ್ ಗಳನ್ನು ರೋಡಿಗಿಳಿಸಿಲ್ಲ.

    ಕಾರ್ಮಿಕ ಸಂಘಟನೆಗಳ ಮುಖಂಡರು ಇಂದು ಸಹ ಕೆಲ ಗಂಟೆಗಳ ಕಾಲ ಸಾರಿಗೆ ಬಸ್ ಡಿಪೋ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಡಿಪೋದಿಂದ ರಾಯಲ್ ವೃತ್ತದ ವರಗೆ ಕೇಂದ್ರ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿಗೆ ಬೆಂಕಿ ಹಚ್ಚಿದರು. ಅಲ್ಲದೇ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ನಗರದ ರಾಯಲ್ ವೃತ್ತದಲ್ಲಿ ಅಡುಗೆ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು. ಮಂಗಳವಾರ ಇಡೀ ದಿನ ಬಂದ್ ಆಗಿದ್ದ ಅಂಗಡಿ ಮುಂಗಟ್ಟುಗಳು ಇಂದು ಬಹುತೇಕವಾಗಿ ತೆರೆದಿದ್ದು ಸ್ವಲ್ಪಮಟ್ಟಿಗೆ ಜನಜೀವನ ಯಥಾವತ್ತಾಗಿ ಸಾಗಿದೆ.

    ಇಂದಿನ ಬಂದ್ ವೇಳೆ ಏನೇ ಅನಾಹುತ ಕಾರ್ಯ ನಡೆದ್ರೂ ಅದಕ್ಕೆ ಸರ್ಕಾರವೇ ನೇರ ಹೊಣೆಯೆಂದು ಕೆಎಸ್ ಆರ್ ಟಿಸಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆದಿ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv