Tag: bharat ratna

  • ವಿವಾದಿತ ಟಿಪ್ಪು ಜಯಂತಿ ಆಚರಿಸ್ತಾರೆ, ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ- ಪೇಜಾವರ ಶ್ರೀ

    ವಿವಾದಿತ ಟಿಪ್ಪು ಜಯಂತಿ ಆಚರಿಸ್ತಾರೆ, ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ- ಪೇಜಾವರ ಶ್ರೀ

    – ಯತ್ನಾಳ್ ತಪ್ಪು ಮಾಡಿಲ್ಲ, ಕ್ರಮ ಕೈಗೊಳ್ಳಬೇಕಿಲ್ಲ

    ಬಾಗಲಕೋಟೆ: ವಿವಾದಿತ ಟಿಪ್ಪು ಜಯಂತಿಯನ್ನು ಆಚರಿಸುತ್ತಾರೆ, ವಿವಾದ ಇಲ್ಲದ ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇದು ಸರಿಯಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದಿತ ಕೆಲಸ ಮಾಡಿದ ಟಿಪ್ಪುಗೆ ಇವರು ಗೌರವ ಕೊಡುತ್ತಾರೆ, ಜಯಂತಿ ಮಾಡುತ್ತಾರೆ. ಆದರೆ ಕೊಡಗು, ಕೇರಳದವರು ಟಿಪ್ಪು ಬಗ್ಗೆ ಭಾರಿ ಅಸಮಧಾನ ಹೊಂದಿದ್ದಾರೆ. ಹೀಗಿದ್ದರೂ ಅವರ ಜಯಂತಿ ಆಚರಿಸುತ್ತಾರೆ. ವಿವಾದ ಇಲ್ಲದ ವ್ಯಕ್ತಿ ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಈ ರೀತಿ ಮಾಡುವುದು ಸರಿಯಲ್ಲ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಅವರಿಗೆ ಗೌರವ ಕೊಡಬೇಕು ಎಂದರು.

    ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಸಂಚು ಇತ್ತು ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಅವರು, ಈ ಕುರಿತು ಕೋರ್ಟ್ ತೀರ್ಪು ಕೊಟ್ಟಿದೆ. ಹತ್ಯೆಯಲ್ಲಿ ಸಾವರ್ಕರ್ ಕೈವಾಡ ಇಲ್ಲ ಎಂದು ಹೇಳಿದೆ. ಅಲ್ಲದೆ ಆರ್‍ಎಸ್‍ಎಸ್‍ಗೂ ಗಾಂಧಿ ಹತ್ಯೆಗೂ ಸಂಬಂಧ ಇಲ್ಲ ಎಂದು ತೀರ್ಪು ಬಂದಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂದರು.

    ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ, ಅವರು ತುಂಬಾ ಸಾಹಸ ಮಾಡಿದ್ದಾರೆ. ಬ್ರಿಟಿಷರು ಬಂಧಿಸಿದಾಗ ಸಮುದ್ರಕ್ಕೆ ಹಾರಿ ತಪ್ಪಿಸಿಕೊಂಡು ಸಾಹಸ ಮಾಡಿ ಬಂದವರು. ಅವರಿಗೆ ಸರಿಯಾದ ಗೌರವ ಕೊಡಬೇಕು. ದೇಶಭಕ್ತರ ಬಗ್ಗೆ ಕೆಟ್ಟಮಾತು ಸಲ್ಲದು. ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರ ಇದ್ದಿದ್ದರೆ ಶಿಕ್ಷೆ ಆಗಬೇಕಿತ್ತು. ನಿರಪರಾಧಿ ಎಂದು ತೀರ್ಪು ಬಂದ ಮೇಲೆ ಹೀಗೆಲ್ಲ ಹೇಳುವುದು ತಪ್ಪು ಎಂದು ವಿವರಿಸಿದರು.

    ನೆರೆ ಪರಿಹಾರಕ್ಕೆ ಬೇಗ ಪರಿಹಾರ ದೊರೆಯಲಿ ಎಂದು ಮಾತನಾಡಿದ್ದಾರೆ. ಅವರು ತಪ್ಪು ಮಾಡಿಲ್ಲ, ಬಿಜೆಪಿಯವರು ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪೇಜಾವರ ಶ್ರೀಗಳು ಇದೇ ವೇಳೆ ಸೂಚಿಸಿದ್ದಾರೆ.

    ಯತ್ನಾಳರು ತಪ್ಪು ಮಾಡಿಲ್ಲ, ಅವರ ವಿರುದ್ಧ ಯಾವುದೇ ಕ್ರಮ ಬೇಡ, ಯಾವುದೇ ಕೆಟ್ಟ ಉದ್ದೇಶದಿಂದ ಹೇಳಿಲ್ಲ. ಹಣ ಬಂದಿಲ್ಲ ಅಂತ ಕಳಕಳಿಯಿಂದ ಹೇಳಿದ್ದಾರೆ. ಹೀಗಾಗಿ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಬೇಡ ಎಂದು ಸ್ವಾಮೀಜಿ ಬಿಜೆಪಿ ಮುಖಂಡರಿಗೆ ಸೂಚನೆ ನೀಡಿದ್ದಾರೆ.

    ಇಡೀ ಕರ್ನಾಟಕ ಒಂದಾಗಬೇಕು, ವೀರಶೈವ ಬೇರೆ ಲಿಂಗಾಯತ ಬೇರೆ ಅಲ್ಲ ಎಲ್ಲರೂ ಒಂದಾಗಬೇಕು. ಪ್ರತ್ಯೇಕತೆ ಬರಬಾರದು ದಲಿತರು, ಬ್ರಾಹ್ಮಣರು, ಲಿಂಗಾಯತರು ಒಂದಾಗಬೇಕು. ಎಡಗೈ ಬಲಗೈ ಎಲ್ಲರೂ ಒಂದಾಗಬೇಕು. ಕರ್ನಾಟಕ ಅಖಂಡವಾಗಿರಬೇಕು ಎಂದರು.

  • ಸ್ವಾತಂತ್ರ್ಯ ಹೋರಾಟದ ಗಂಧ ಗಾಳಿ ಗೊತ್ತಿಲ್ಲದ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು: ರವಿಕುಮಾರ್

    ಸ್ವಾತಂತ್ರ್ಯ ಹೋರಾಟದ ಗಂಧ ಗಾಳಿ ಗೊತ್ತಿಲ್ಲದ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು: ರವಿಕುಮಾರ್

    – ಭಾರತ ರತ್ನವನ್ನು ಗಾಂಧಿ ಫ್ಯಾಮಿಲಿಗೆ ಬರೆದುಕೊಟ್ಟಿದ್ದಾರಾ?

    ಕಲಬುರಗಿ: ಮಹಾತ್ಮ ಗಾಂಧಿ ಹತ್ಯೆಗೆ ವೀರ ಸಾವರ್ಕರ್ ಸಂಚು ರೂಪಿಸಿದ್ದರು, ಅಂಥವರಿಗ್ಯಾಕೆ ಭಾರತ ರತ್ನ ಕೊಡ್ತಿದಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ಮುಖಂಡ ಎನ್ ರವಿಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರವಿಕುಮಾರ್, ಸಿದ್ದರಾಮಯ್ಯ ಅವರು ಹತ್ಯೆಗೆ ಸಂಚು ರೂಪಿಸಿದ್ದರ ಬಗ್ಗೆ ಸ್ಟಡಿ ಮಾಡಿದ್ದಾರಾ? ಮಹಾತ್ಮ ಗಾಂಧಿ ಹತ್ಯೆ ವಿಚಾರದಲ್ಲಿ ಆರ್‍ಎಸ್‍ಎಸ್ ಹಾಗೂ ವೀರ ಸಾವರ್ಕರ್ ಪಾತ್ರವಿಲ್ಲ ಎಂದು ನ್ಯಾಯಲಯವೇ ಹೇಳಿದ್ದು, ಸ್ವಾತಂತ್ರ್ಯ ಹೋರಾಟದ ಗಂಧ ಗಾಳಿ ಗೊತ್ತಿಲ್ಲದ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

    ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಎಂದು ಹೆಸರು ಬಂದಿದ್ದು ಸಾವರ್ಕರ್ ಗೆ ಮಾತ್ರ. ಹೀಗಾಗಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಓದಿ ತಿಳಿದುಕೊಳ್ಳಲಿ ಎಂದು ಹೇಳಿದರು. ಭಾರತ ರತ್ನ ಗಾಂಧಿ ಫ್ಯಾಮಿಲಿಗೆ ಮಾತ್ರ ಕೊಡಬೇಕು ಅಂತಾ ಬರೆದುಕೊಟ್ಟಿದ್ದಾರಾ? ಅಂಬೇಡ್ಕರ್‍ರವರಿಗೆ ಕಾಂಗ್ರೆಸ್ ಪಕ್ಷ ಯಾಕೆ ಭಾರತ ರತ್ನ ನೀಡಲಿಲ್ಲ ಎಂದು ರವಿಕುಮಾರ್ ಪ್ರಶ್ನಿಸಿದರು. ಇದನ್ನು ಓದಿ: ಅಧಿಕಾರದಲ್ಲಿ ಮುಂದುವರಿದಿದ್ರೆ ಕೊಲೆಗಡುಕರಿಗೆ ಪ್ರಶಸ್ತಿ ಕೊಡ್ತಿದ್ರು: ಸಿದ್ದುಗೆ ಸಿಟಿ ರವಿ ತಿರುಗೇಟು

    ಕೆಲ ವಿಷಯಗಳಲ್ಲಿ ಸಿದ್ದರಾಮಯ್ಯ ನೀಚ ರಾಜಕಾರಣ ಮಾಡುತ್ತಿದ್ದು, ಆತ್ಮ ಇಲ್ಲದ ವ್ಯಕ್ತಿ ಅಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದರು. ಮಹಾರಾಷ್ಟ್ರ ಚುನಾವಣೆಯಲ್ಲಿ ಐವತ್ತಕ್ಕಿಂತ ಜಾಸ್ತಿ ಸಿಟ್ ಬಂದರೆ ನಾನು ರಾಜೀನಾಮೆ ಕೊಡುತ್ತೇನೆ. ಕಡಿಮೆ ಸಿಟ್ ಬಂದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಸವಾಲ್ ಹಾಕಿದರು.

  • ಇತಿಹಾಸ ಗೊತ್ತಿಲ್ಲದ ಸಿದ್ದರಾಮಯ್ಯರಿಂದ ಹುಚ್ಚು ಹುಚ್ಚು ಹೇಳಿಕೆ – ಈಶ್ವರಪ್ಪ

    ಇತಿಹಾಸ ಗೊತ್ತಿಲ್ಲದ ಸಿದ್ದರಾಮಯ್ಯರಿಂದ ಹುಚ್ಚು ಹುಚ್ಚು ಹೇಳಿಕೆ – ಈಶ್ವರಪ್ಪ

    ಶಿವಮೊಗ್ಗ: ವೀರ ಸಾವರ್ಕರ್ ಅವರಿಗೆ ಭಾರತ ರತ್ನ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ರಾಜಕೀಯ ನಾಯಕರುಗಳ ಮಧ್ಯೆ ಟಾಕ್ ವಾರ್ ನಡೆಯುತ್ತಿದ್ದು, ಇದೀಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಹೆಸರು ನಾಲಗೆಯಲ್ಲಿ ತರುವುದಕ್ಕೂ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ತೃಪ್ತಿಪಡಿಸಲು ಸಾವರ್ಕರ್ ಬಗ್ಗೆ ಹೀಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಸಾವರ್ಕರ್ ಅವರನ್ನು ಬ್ರಿಟಿಷರು ಸರೋವರದಾಚೆ ಅಂಡಮಾನ್ ಜೈಲಿನಲ್ಲಿ ಇಟ್ಟಿದ್ದರು. ಆ ಜೈಲನ್ನು ಸಿದ್ದರಾಮಯ್ಯ ಒಂದು ಸಾರಿ ನೋಡಿಕೊಂಡು ಬರಲಿ. ಕಾಂಗ್ರೆಸ್ ನವರು ಬೇರೆ ಬೇರೆ ಕಾರಣಕ್ಕೆ ಜೈಲಿಗೆ ಹೋಗುತ್ತಿದ್ದಾರೆ, ಆದರೆ ಸಾವರ್ಕರ್ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋದವರು. ಸಾವರ್ಕರ್ ಇಂದಿಗೂ ಯುವಕರಿಗೆ ಸ್ಫೂರ್ತಿ. ಹೀಗಿರುವಾಗ ಇತಿಹಾಸ ಗೊತ್ತಿಲ್ಲದ ಸಿದ್ದರಾಮಯ್ಯ ಹುಚ್ಚು ಹುಚ್ಚಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಇದನ್ನು ಓದಿ: ಸಿಟಿ ರವಿ ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದ್ದಾರೆ ಅರ್ಥವಾಗಿಲ್ಲ- ಸಿದ್ದರಾಮಯ್ಯ

    ಅಲ್ಲದೆ ಸಿದ್ದಗಂಗಾ ಸ್ವಾಮೀಜಿಯವರಿಗೆ ಭಾರತ ರತ್ನ ಕೊಡಿ ಎಂದು ನಾವು ಹೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ನಾವು ಹೇಳಿದ ತಕ್ಷಣ ಅದನ್ನು ಮಾಡುವುದಿಲ್ಲ. ಭಾರತ ರತ್ನ ಯಾರಿಗೆ ಕೊಡಬೇಕು ಎನ್ನುವುದನ್ನು ಚಿಂತನೆ ನಡೆಸುತ್ತಿದೆ. ಸಿದ್ದಗಂಗಾ ಶ್ರೀಗಳಿಗೆ ಇಂದಲ್ಲಾ ನಾಳೆ ಭಾರತ ರತ್ನ ಸಿಗಲಿದೆ ಎಂದು ಇದೇ ವೇಳೆ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

  • ಸಿದ್ದರಾಮಯ್ಯನವರಿಗೆ ಗಟ್ಸ್ ಇದ್ರೆ ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಎನ್ನಬೇಕಿತ್ತು-ಜೋಶಿ

    ಸಿದ್ದರಾಮಯ್ಯನವರಿಗೆ ಗಟ್ಸ್ ಇದ್ರೆ ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಎನ್ನಬೇಕಿತ್ತು-ಜೋಶಿ

    ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯನವರು ವೀರಸಾರ್ವಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರಿಗೆ ಗಟ್ಸ್ ಇದ್ದರೆ ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಎಂದು ಕೇಳಬೇಕಿತ್ತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಮೊದಲು ಭಾರತರತ್ನ ನೀಡದೇ ರಾಜೀವಗಾಂಧಿಯವರಿಗೆ ಕೊಡಲಾಯಿತು. ಅವರ ರಾಹುಲ್ ಗಾಂಧಿಯವರ ತಾತ, ತಾಯಿ ಪ್ರಧಾನಿಯಾಗಿದ್ದಕ್ಕೆ ಅವರಿಗೆ ಪ್ರಧಾನಿ ಸ್ಥಾನ ಬಳುವಳಿಯಾಗಿ ಕೊಡಲಾಯಿತು. ಆದರೆ ಸಂವಿಧಾನ ಬರೆದಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲಿಲ್ಲ ಎಂದು ಹರಿಹಾಯ್ದರು.

    ದೇಶಕಂಡ ಅಪ್ರತಿಮ ವೀರಸಾರ್ವಕರ್ ಅವರ ಬಗ್ಗೆ ಅಪಮಾನ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಈ ನಡೆಯನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಮೊದಲು ಇತಿಹಾಸವನ್ನು ಸರಿಯಾಗಿ ಓದಿಕೊಂಡು ಮಾತನಾಡಲಿ. ಇನ್ನು ಮುಂದೆ ದಾವುದ್ ಇಬ್ರಾಹಿಂಗೂ ಕಾಂಗ್ರೆಸ್ ನವರು ಭಾರತ ರತ್ನ ಕೊಡಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯಮಾಡಿದರು.

    ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಪ್ರತಿಭಟನೆಗೆ ಕುಳಿತಿರುವುದು ಗಮನಕ್ಕೆ ಇಲ್ಲ. ಮಹದಾಯಿ ಇತ್ಯರ್ಥಕ್ಕೆ ನಮ್ಮ ಕಡೆಯಿಂದ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಶೀಘ್ರ ಈ ವಿಚಾರ ಇತ್ಯರ್ಥಗೊಳ್ಳಲಿದೆ ಎಂದರು.

  • ಸಾವರ್ಕರ್ ಬದಲಿಗೆ ಗೋಡ್ಸೆಗೆ ಭಾರತ ರತ್ನ ನೀಡಿ: ಕಾಂಗ್ರೆಸ್ ನಾಯಕ

    ಸಾವರ್ಕರ್ ಬದಲಿಗೆ ಗೋಡ್ಸೆಗೆ ಭಾರತ ರತ್ನ ನೀಡಿ: ಕಾಂಗ್ರೆಸ್ ನಾಯಕ

    ಮುಂಬೈ: ವಿ.ಡಿ.ಸಾವರ್ಕರ್ ಬದಲಿಗೆ ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಗೆ ಭಾರತ ರತ್ನ ನೀಡಿ ಎಂದು ಬಿಜೆಪಿಗೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟಾಂಗ್ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಎನ್‍ಡಿಎ ಪ್ರಣಾಳಿಕೆಯಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದಾಗಿ ಬಿಜೆಪಿ ಘೋಷಿಸಿದ್ದು, ಇದಕ್ಕೆ ಮನೀಶ್ ತಿವಾರಿ ಅವರು ತಿರುಗೇಟು ನೀಡಿದ್ದಾರೆ. ಸಾವರ್ಕರ್ ಬದಲಿಗೆ ಗಾಂಧಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಎಂದು ಹರಿಹಾಯ್ದಿದ್ದಾರೆ.

    ಸಾವರ್ಕರ್ ಅವರು ಮಹಾತ್ಮಾ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ್ದಾರೆ. ಈ ವರ್ಷ ನಾವು ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಎನ್‍ಡಿಎ ಸರ್ಕಾರವು ಸಾವರ್ಕರ್ ಬದಲಿಗೆ ನೇರವಾಗಿ ಗೋಡ್ಸೆಗೆ ಭಾರತರತ್ನ ನೀಡಬೇಕು ಎಂದು ಹೇಳುವ ಮೂಲಕ ವ್ಯಂಗ್ಯವಾಗಿ ಕಿಡಿಕಾರಿದರು.

    ಇದಕ್ಕೂ ಮುನ್ನ ಬುಧವಾರ ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಕೂಡ ಸಾವರ್ಕರ್ ಅವರ ನಂತರ ಭಾರತ ರತ್ನಕ್ಕೆ ಮುಂದಿನ ಹೆಸರು ಗೋಡ್ಸೆ ಇರಬಹುದು ಎಂದು ಎನ್‍ಡಿಎ ಪ್ರಣಾಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಸಾವರ್ಕರ್ ಅವರ ಇತಿಹಾಸ ಎಲ್ಲರಿಗೂ ತಿಳಿದಿದೆ. ಸಾವರ್ಕರ್ ಅವರು ಗಾಂಧಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಸಾಕ್ಷ್ಯಾಧಾರದ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಯಿತು. ಇಂದು ಈ ಸರ್ಕಾರ ಅವರಿಗೆ ಭಾರತ ರತ್ನ ನೀಡುವುದಾಗಿ ಘೋಷಿಸಿದೆ. ಮುಂದಿನ ಸಾಲಿನಲ್ಲಿ ಗೋಡ್ಸೆ ಇರಬಹುದು ಎಂದು ಅಲ್ವಿ ಹೇಳಿದ್ದರು.

    ಇತ್ತೀಚೆಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನವನ್ನು ಜ್ಯೋತಿರಾವ್ ಪುಲೆ, ಸಾವಿತ್ರಿಬಾಯಿ ಪುಲೆ ಹಾಗೂ ವೀರ್ ಸಾವರ್ಕರ್ ಅವರಿಗೆ ನೀಡುವ ಕುರಿತು ಪ್ರಸ್ತಾಪಿಸಿದೆ.

  • ಕಾಂಗ್ರೆಸ್ ಸಾವರ್ಕರ್‌ಗೆ ಭಾರತರತ್ನ ನೀಡದೆ ಅವಮಾನಿಸಿದೆ – ಮೋದಿ

    ಕಾಂಗ್ರೆಸ್ ಸಾವರ್ಕರ್‌ಗೆ ಭಾರತರತ್ನ ನೀಡದೆ ಅವಮಾನಿಸಿದೆ – ಮೋದಿ

    ಮುಂಬೈ: ಹಿಂದುತ್ವದ ವಿಚಾರವಾದಿ ವಿ.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ನೀಡದೆ ಕಾಂಗ್ರೆಸ್ ಅವಮಾನಿಸಿದೆ. ಅವರ ಮೌಲ್ಯಗಳು ರಾಷ್ಟ್ರ ನಿರ್ಮಾಣಕ್ಕೆ ಆಧಾರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ ನಿರಾಕರಿಸಿತು. ಅಲ್ಲದೆ ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡದೆಯೂ ಅವಮಾನಿಸಿದೆ. ಮಾತ್ರವಲ್ಲದೆ ಇದೀಗ ಜಮ್ಮು ಕಾಶ್ಮೀರದ 370ನೇ ವಿಧಿ ರದ್ದು ಪಡಿಸಿರುವುದನ್ನು ಸಹ ವಿರೋಧಿಸುತ್ತಿದೆ. ಆದರೆ ನಾವು ಸಾವರ್ಕರ್ ಅವರ ಸಂಸ್ಕಾರಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಆಧಾರವನ್ನಾಗಿಸಿಕೊಂಡಿದ್ದೇವೆ ಎಂದರು.

    ಅಕ್ಟೋಬರ್ 21ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿ ನಿನ್ನೆಯಷ್ಟೇ ಬಿಡುಗಡೆ ಮಾಡಿದ್ದು, ಇದರಲ್ಲಿ ಸಹ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದು ಪ್ರಮುಖ ಅಂಶವಾಗಿದೆ. ಪ್ರಣಾಳಿಕೆಯಲ್ಲಿ ಘೋಷಣೆಯಾದ ಮರುದಿನವೇ ಇಂದು ಪ್ರಧಾನಿ ನರೇಂದ್ರ ಮೋದಿ ಇದೇ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ವಿರೋಧ ಪಕ್ಷಗಳು ನಾಚಿಕೆ ಇಲ್ಲದವು, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಪಡಿಸಿದ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮಾಹಾರಾಷ್ಟ್ರ ಚುನಾವಣೆಯ ಸಂದರ್ಭದಲ್ಲಿ 370ನೇ ವಿಧಿ ಏನು ಎಂದು ಬಹಿರಂಗವಾಗಿ ಪ್ರಶ್ನಿಸುವ ಜನರಿದ್ದಾರೆ. ನಾನು ಅಂತಹವರಿಗೆ ಹೇಳಲು ಬಯಸುತ್ತೇನೆ, ಮಹಾರಾಷ್ಟ್ರದಂತೆಯೇ ಜಮ್ಮು ಕಾಶ್ಮೀರದ ಜನರು ಸಹ ಭಾರತಕ್ಕೆ ಸೇರಿದವರು ಎಂದರು.

    ಕಾಂಗ್ರೆಸ್-ಎನ್‍ಸಿಪಿಯದ್ದು ಭ್ರಷ್ಟ ಮೈತ್ರಿ, ಇದು ಮಹಾರಾಷ್ಟ್ರವನ್ನು ಒಂದು ದಶಕ ಹಿಂದಕ್ಕೆ ಕೊಂಡೊಯ್ದಿದೆ ಎಂದು ಮೈತ್ರಿ ಕುರಿತು ವಾಗ್ದಾಳಿ ನಡೆಸಿದರು.

  • ಸಾವರ್ಕರ್‌ಗೆ ಭಾರತರತ್ನ – ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಭರವಸೆ

    ಸಾವರ್ಕರ್‌ಗೆ ಭಾರತರತ್ನ – ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಭರವಸೆ

    – ಸಂಕಲ್ಪಪತ್ರ ಹೆಸರಿನ ಪ್ರಾಣಳಿಕೆ ಬಿಡುಗಡೆ
    – 5 ವರ್ಷದಲ್ಲಿ 1 ಕೋಟಿ ಉದ್ಯೋಗ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಈ ಬಾರಿ ಮತ್ತೆ ಅಧಿಕಾರಕ್ಕೆ ಏರಿದರೆ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಭಾರತರತ್ನವನ್ನು ಮರಣೋತ್ತರವಾಗಿ ನೀಡಲಾಗುವುದು ಎಂದು ಭರವಸೆ ನೀಡಿದೆ.

    ಬಿಜೆಪಿ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದೆ.

    ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದರು. 44 ಪುಟಗಳ ಸಂಕಲ್ಪ ಪತ್ರದ ಮೂಲಕ ಮತದಾರರಿಗೆ ಅನೇಕ ಭರವಸೆಗಳನ್ನು ಬಿಜೆಪಿ ನೀಡಲಾಗಿದೆ. ಸಾವರ್ಕರ್ ಅವರಿಗೆ ಭಾರತರತ್ನ ನೀಡಬೇಕು ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ.

    ಸಾವರ್ಕರ್ ಯಾರು?
    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಜನಿಸಿದ್ದ ಸಾವರ್ಕರ್ ಹಿಂದೂ ಮಹಾಸಭಾವನ್ನು ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಭಾರತ ಪಾಕಿಸ್ತಾನ ವಿಭಜನೆ ಮಾಡಲು ಒಪ್ಪಿಗೆ ನೀಡಿದ್ದಕ್ಕೆ ಗಾಂಧೀಜಿ ಅವರನ್ನು ಕಟುವಾಗಿ ವಿರೋಧಿಸಿದ್ದರು. ನಾಥೂರಾಮ್ ಗೂಡ್ಸೆ ಹಿಂದೂ ಮಹಾಸಭಾದ ಸದಸ್ಯನಾಗಿದ್ದ ಮತ್ತು ಗಾಂಧೀಜಿ ಹತ್ಯೆಯ ಮಾಸ್ಟರ್ ಮೈಂಡ್ ಸಾವರ್ಕರ್ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ಅಡಿ ಸರ್ಕಾರ ಬಂಧಿಸಿದ್ದರೂ ಗಾಂಧೀಜಿ ಹತ್ಯೆಯಲ್ಲಿ ಭಾಗಿಯಾದ ಬಗ್ಗೆ ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆಗೊಳಿಸಿತ್ತು.

    ಸಂಕಲ್ಪ ಪತ್ರದಲ್ಲಿ ಏನಿದೆ?
    ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸಲಾಗುತ್ತದೆ. ಕೃಷಿಯಲ್ಲಿ ಬಳಸುವ ವಿದ್ಯುತ್ ಸೌರಶಕ್ತಿಯನ್ನು ಆಧರಿಸಿರುತ್ತದೆ ಮತ್ತು ರೈತರಿಗೆ 12 ಗಂಟೆಗಳಿಗಿಂತ ಹೆಚ್ಚಿನ ವಿದ್ಯುತ್ ಒದಗಿಸಲಾಗುವುದು. 2022ರ ವೇಳೆಗೆ 5 ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಹೂಡಿಕೆ ಮಾಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ.

    ಗೋದಾವರಿ ಕಣಿವೆಯಿಂದ ಪಶ್ಚಿಮದಿಂದ ಹರಿಯುವ ನದಿಗಳ ನೀರನ್ನು ನಿಲ್ಲಿಸಿ ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರದ ಬರ ಪೀಡಿತ ಭಾಗಕ್ಕೆ ಸಾಗಿಸಲಾಗುತ್ತದೆ. ಈ ಮೂಲಕ ಮುಂಬರುವ 5 ವರ್ಷಗಳಲ್ಲಿ ಮಹಾರಾಷ್ಟ್ರವನ್ನು ಬರಗಾಲದಿಂದ ಮುಕ್ತಗೊಳಿಸುತ್ತೇವೆ. ಮೂಲ ಸೌಕರ್ಯಗಳಿಗಾಗಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು.

    ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಒಟ್ಟು 30 ಸಾವಿರ ಕಿಲೋ ಮೀಟರ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಅಷ್ಟೇ ಅಲ್ಲದೆ ಸಮಾಜ ಸುಧಾರಕ ಜ್ಯೋತಿ ರಾವ್ ಫುಲೆ, ಪತ್ನಿ ಸಾವಿತ್ರಿಭಾಯಿ ಫುಲೆ ಹಾಗೂ ವಿಡಿ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ.

  • ಪ್ರಣಬ್ ಮುಖರ್ಜಿಗೆ ಭಾರತರತ್ನ ಪ್ರದಾನ

    ಪ್ರಣಬ್ ಮುಖರ್ಜಿಗೆ ಭಾರತರತ್ನ ಪ್ರದಾನ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಭಾರತ ರತ್ನ ಗೌರವವನ್ನು ಪ್ರದಾನ ಮಾಡಿದರು.

    ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಬ್ ಅವರ ಜತೆಗೆ ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶ್‍ಮುಖ್ ಹಾಗೂ ಅಸ್ಸಾಮಿ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಭಾರತರತ್ನವನ್ನು ನೀಡಿ ಗೌರವಿಸಲಾಯಿತು. ನಾನಾಜಿ ದೇಶ್‍ಮುಕ್ ಮತ್ತು ಭೂಪೇನ್ ಹಜಾರಿಕಾ ಅವರ ಪರವಾಗಿ ಕುಟುಂಬ ಸದಸ್ಯರು ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು.

    ದಶಕಗಳ ಕಾಲ ದೇಶಕ್ಕೆ ಪ್ರಣಬ್ ಮುಖರ್ಜಿ ಸಲ್ಲಿಸಿದ ಕೊಡುಗೆಗಾಗಿ ಪ್ರಧಾನಿ ಮೋದಿ ಸರ್ಕಾರ ಈ ವರ್ಷದ ಜನವರಿಯಲ್ಲಿ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಖಾತೆ ಸೇರಿದಂತೆ ನಾನಾ ಬಗೆಯ ಖಾತೆಗಳನ್ನು ನಿಭಾಯಿಸಿದ ಮುಖರ್ಜಿ ಅವರು 2012ರಲ್ಲಿ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 2017ರವರೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ಮುಖರ್ಜಿ ಜವಾಬ್ದಾರಿ ವಹಿಸಿದ್ದರು.

    ಜನಸಂಘದ ಪ್ರಮುಖ ನಾಯಕ ನಾನಾಜಿ ದೇಶ್‍ಮುಖ್ ನಾಗರಿಕರಿಗೆ ಶಿಕ್ಷಣ, ಆರೋಗ್ಯ ಕ್ಷೇತ್ರ ಸಿಗಬೇಕೆಂದು ಹೋರಾಡಿದ ಸಾಮಾಜಿಕ ಕಾರ್ಯಕರ್ತರು. ರಾಜ್ಯಸಭಾ ಸದಸ್ಯರಾಗಿಯೂ ನಾನಾಜಿ ಹೊಣೆ ನಿಭಾಯಿಸಿದ್ದರು. 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೂ ನಾನಾಜಿ ಭಾಜನರಾಗಿದ್ದರು.

    ಅಸ್ಸಾಂನ ಸಾದಿಯಾ ಗ್ರಾಮದ ಭೂಪೇನ್ ದೊಡ್ಡ ಸಾಧಕರಾಗಿದ್ದು, ಗೀತೆರಚನೆಕಾರ, ಸಂಗೀತ ನಿರ್ದೇಶಕ, ಗಾಯಕ, ಕವಿ, ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 1975ರಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿ, 1985ರಲ್ಲಿ ಕೇಂದ್ರ ಸಂಗೀತ ನಾಟಕ ಪ್ರಶಸ್ತಿ, 1977 ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ, 1992 ದಾದಾ ಸಾಹೇಬ್ ಫಾಲ್ಕೆ, 2012ರಲ್ಲಿ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಸರ್ಕಾರ ನೀಡಿ ಗೌರವಿಸಿತ್ತು.

  • ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ‘ಭಾರತ ರತ್ನ’ ನೀಡಿ – ಪ್ರಧಾನಿಗಳಿಗೆ ಸಿಎಂ ಎಚ್‍ಡಿಕೆ ಪತ್ರ

    ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ‘ಭಾರತ ರತ್ನ’ ನೀಡಿ – ಪ್ರಧಾನಿಗಳಿಗೆ ಸಿಎಂ ಎಚ್‍ಡಿಕೆ ಪತ್ರ

    ಬೆಂಗಳೂರು: ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪುರಸ್ಕಾರ ನೀಡಲು ಪ್ರಧಾನಿ ಮೋದಿ ಅವರಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಶಿವಕುಮಾರ ಸ್ವಾಮೀಜಿಗಳ ಕುರಿತು ಸವಿವರವಾಗಿ ತಿಳಿಸಿರುವ ಸಿಎಂ ಎಚ್‍ಡಿಕೆ, ಮರಣೋತ್ತರವಾಗಿ ಭಾರತರತ್ನ ನೀಡುವಂತೆ ಮನವಿ ಮಾಡಿದ್ದಾರೆ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಸ್ವಾಮೀಜಿಗಳು ಲಿಂಗೈಕ್ಯರಾದ ವೇಳೆ ಸಿಎಂ ಸ್ವತಃ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದರು. ಅಲ್ಲದೇ ರಾಜ್ಯ ಬಿಜೆಪಿ ನಾಯಕರು ಕೂಡ ಈ ಪ್ರಯತ್ನದಲ್ಲಿ ಸದನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದ್ದರು.

    ಪತ್ರದಲ್ಲಿ ಏನಿದೆ?
    ಐತಿಹಾಸಿಕ ಹಿನ್ನೆಲೆಯನ್ನ ಹೊಂದಿರುವ ತುಮಕೂರು ಸಿದ್ದಗಂಗಾ ಮಠ ಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. 1941ರಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಠದ ಜವಾಬ್ದಾರಿಯನ್ನ ಸ್ವೀಕಾರ ಮಾಡಿದ್ದರು. 1908ರ ಏಪ್ರಿಲ್ 1 ರಂದು ಶಿವಕುಮಾರಸ್ವಾಮೀಜಿಗಳು ಜನಿಸಿದ್ದು, ಅವರು ಲಿಂಗೈಕ್ಯರಾಗುವವರೆಗೂ ಮಠವನ್ನ ಮುನ್ನಡೆಸಿ, ಸಾಮಾಜಿಕ ಸೇವೆಯಲ್ಲಿ ಮಾದರಿ ಎನಿಸುವ ಕಾರ್ಯ ಮಾಡಿದ್ದಾರೆ.

    ಶ್ರೀ ಸಿದ್ದಗಂಗಾ ಎಜುಕೇಷನ್ ಸೊಸೈಟಿ ಸ್ಥಾಪಿಸಿ ದೇಶದ ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಸುಮಾರು 130ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳನ್ನು ತೆರೆದು ಬಡ ಜನರಿಗೆ ಶಿಕ್ಷಣ ಸೇವೆಯನ್ನು ನೀಡಿದ್ದಾರೆ. ಈ ಸಂಸ್ಥೆಗಳು ಸಂಸ್ಕೃತ, ಇಂಜಿನಿಯರಿಂಗ್, ತಂತ್ರಜ್ಞಾನ ಸೇರಿದಂತೆ ಎಲ್ಲಾ ಶಿಕ್ಷಣ ನೀಡಿ ಬಹುದೊಡ್ಡ ಕೊಡುಗೆ ನೀಡಿವೆ. ಅಲ್ಲದೇ ಸಿದ್ದಗಂಗಾ ಮಠ ಕೂಡ ಸುಮಾರು 9 ಸಾವಿರ ಮಕ್ಕಳಿಗೆ ಶಿಕ್ಷಣ, ವಸತಿ, ಊಟ ಸೌಲಭ್ಯವನ್ನು ನೀಡಿದೆ.

    ಏಳು ದಶಕಗಳ ಕಾಲ ಶಿವಕುಮಾರಸ್ವಾಮೀಜಿಗಳು ತ್ರಿವಿಧ ದಾಸೋಹಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಸಮಾಜಕ್ಕೆ ಲೋಕೋಪಕಾರ, ಶಿಕ್ಷಣ, ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣಕ್ಕೆ ಅವರು ನೀಡಿರುವ ಬೆಲೆ ಕಟ್ಟಲಾಗದ ಕೊಡುಗೆ ಜೀವನದ ವಿವಿಧ ಹಂತಗಳಲ್ಲಿ ಸಮಾಜಕ್ಕೆ ಅಗಾಧ ಕೊಡುಗೆ ನೀಡುವ ಬಹುದೊಡ್ಡ ವರ್ಗವನ್ನು ಸೃಷ್ಟಿಸಿದೆ.

    ಜನರಿಗೆ ಸ್ವಾಮೀಜಿಗಳು ನೀಡಿರುವ ಸೇವೆಯಿಂದ ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಎಲ್ಲಾ ರಾಜಕೀಯ ಮತ್ತು ನಾಗರೀಕರು, ಸಂಸ್ಥೆಗಳು ಮತ್ತು ಸಂಘಟಗಳಿಂದ ಭಾರತ ರತ್ನ ನೀಡುವ ಸಲುವಾಗಿ ಹಲವು ಜ್ಞಾಪನೆಗಳನ್ನು ಸ್ವೀಕರಿಸಲಾಗಿದೆ. 2019ರ ಜನವರಿ 21 ರಂದು ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಮರಣೋತ್ತರ ಭಾರತ ಪ್ರಶಸ್ತಿಗೆ ಪರಿಗಣಿಸ ಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ – ಸಂಸತ್‍ನಲ್ಲಿ ಪ್ರಸ್ತಾಪಿಸಿದ ಸಂಸದ ಮುದ್ದ ಹನುಮೇಗೌಡ

    ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ – ಸಂಸತ್‍ನಲ್ಲಿ ಪ್ರಸ್ತಾಪಿಸಿದ ಸಂಸದ ಮುದ್ದ ಹನುಮೇಗೌಡ

    ನವದೆಹಲಿ: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ತುಮಕೂರು ಸಂಸದ ಮುದ್ದ ಹನುಮೇಗೌಡ ಅವರು ಲೋಕಸಭಾ ಕಲಾಪದ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.

    ಕನ್ನಡದಲ್ಲೇ ಸಭಾಧ್ಯಕ್ಷರಲ್ಲಿ ಮನವಿ ಮಾಡಿದ ಅವರು, ವಿಶ್ವದಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಶತಾಯುಷಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಅಕ್ಷರ ದಾಸೋಹ, ಜ್ಞಾನ ದಾಸೋಹ, ಅನ್ನ ದಾಸೋಹ ಮೂಲಕ ಕೋಟ್ಯಂತರ ಭಕ್ತರನ್ನು ಹೊಂದಿದ್ದಾರೆ. ಅಲ್ಲದೇ ತಮ್ಮ 111 ವರ್ಷಗಳ ಜೀವನವನ್ನು ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಭಾರತ ರತ್ನ ಗೌರವವನ್ನು ನೀಡಬೇಕು ಎಂದು ಕೋರಿದರು.

    ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಶಿಫಾರಸು ಮಾಡಿದೆ. ಆದರೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಕೋಟ್ಯಂತರ ಭಕ್ತರ ಕೋರಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಆದ್ದರಿಂದ ಶ್ರೀಗಳಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ಪ್ರಶಸ್ತಿಯನ್ನ ನೀಡಬೇಕು. ಶ್ರೀಗಳಿಗೆ ಪ್ರಶಸ್ತಿ ನೀಡದಿರುವುದು ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ. ಆದ್ದರಿಂದ ಶೀಘ್ರದಲ್ಲೇ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಶ್ರೀಗಳ ಸ್ಮರಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv