Tag: Bhajan Lal Sharma

  • ಪ್ರಧಾನಿ ಮೋದಿ ನನ್ನ ನೆಚ್ಚಿನ ನಟ: ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ರಾಜಸ್ಥಾನ ಸಿಎಂ

    ಪ್ರಧಾನಿ ಮೋದಿ ನನ್ನ ನೆಚ್ಚಿನ ನಟ: ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ರಾಜಸ್ಥಾನ ಸಿಎಂ

    – ವಿಪಕ್ಷಗಳಿಗೆ ಆಹಾರವಾಯ್ತು ಸಿಎಂ ಭಜನ್‌ ಲಾಲ್‌ ಶರ್ಮಾ ಹೇಳಿಕೆ

    ಜೈಪುರ: ಪ್ರಧಾನಿ ನರೇಂದ್ರ ಮೋದಿ‌ ನನ್ನ ನೆಚ್ಚಿನ ನಟ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನೀಡಿದ ಹೇಳಿಕೆ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ವಿರೋಧ ಪಕ್ಷಗಳು ಪ್ರಧಾನಿ ಮತ್ತು ಬಿಜೆಪಿಯನ್ನು ಅಪಹಾಸ್ಯ ಮಾಡಲು ಮುಂದಾಗಿದ್ದಾರೆ.

    ಜೈಪುರದಲ್ಲಿ ನಡೆದ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುದ್ದಿಗಾರರೊಂದಿಗಿನ ಸಂವಾದದಲ್ಲಿ ಶರ್ಮಾ ಅವರು ಈ ಹೇಳಿಕೆ ನೀಡಿದ್ದಾರೆ.

    ಶರ್ಮಾ ಅವರನ್ನು ಸಂವಾದದ ಸಮಯದಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಕೇಳಲಾಯಿತು. ನಗುತ್ತಾ ಅವರು ‘ನರೇಂದ್ರ ಮೋದಿ ಜಿ’ ಎಂದು ಉತ್ತರಿಸಿದ್ದಾರೆ. ಈ ಪ್ರತಿಕ್ರಿಯೆಯು ವಿರೋಧ ಪಕ್ಷದ ನಾಯಕರಿಗೆ ಆಹಾರವಾಗಿದೆ. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋತಾಸ್ರಾ, ಮೋದಿ ಜಿ ನಾಯಕನಲ್ಲ. ಆದರೆ ನಟ ಎಂದು ನಾವು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇವೆ. ಈಗ, ಬಿಜೆಪಿ ಮುಖ್ಯಮಂತ್ರಿಗಳು ಸಹ ತಡವಾಗಿಯಾದರೂ, ಮೋದಿ ಸಾರ್ವಜನಿಕ ನಾಯಕರಲ್ಲ ಎಂದು ಹೇಳಿದ್ದಾರೆ. ಕ್ಯಾಮೆರಾ ಕೌಶಲ್ಯ, ಟೆಲಿಪ್ರೊಂಪ್ಟರ್‌ಗಳು, ವೇಷಭೂಷಣಗಳು ಮತ್ತು ಭವ್ಯ ಭಾಷಣಗಳಲ್ಲಿ ಮೋದಿ ನಿಪುಣರು ಎಂಬುದನ್ನು ಒಪ್ಪಿಕೊಂಡಿದ್ದಾರೆಂದು ಟಾಂಗ್‌ ಕೊಟ್ಟಿದ್ದಾರೆ.

    ಭಜನ್ ಲಾಲ್ ಜಿ, ನೀವು ಸರಿಯಾಗಿಯೇ ಹೇಳಿದ್ದೀರಿ. ಪ್ರಧಾನಿ ಮೋದಿ ಒಳ್ಳೆಯ ನಟ. ಆದರೆ, ಇತ್ತೀಚೆಗೆ ಅವರ ಅತಿ ನಟನೆ ಸ್ವಲ್ಪ ಹೆಚ್ಚುತ್ತಿದೆ ಎಂದು ನೀವು ಭಾವಿಸುವುದಿಲ್ಲವೇ? ಎಂದು ಶರ್ಮಾ ಅವರನ್ನು ಟ್ಯಾಗ್ ಮಾಡಿ ಕಾಂಗ್ರೆಸ್ ನಾಯಕ ಪವನ್ ಖೇರಾ ಪೋಸ್ಟ್‌ ಹಾಕಿದ್ದಾರೆ. ಎಎಪಿ ತನ್ನ ಎಕ್ಸ್‌ ಖಾತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶದ ಶ್ರೇಷ್ಠ ನಟ. ಭೂತ, ವರ್ತಮಾನ ಅಥವಾ ಭವಿಷ್ಯದಲ್ಲಿ ಅವರನ್ನು ಮೀರಿಸಬಲ್ಲವರು ಯಾರೂ ಇಲ್ಲ ಎಂದು ಬಿಜೆಪಿ ಮುಖ್ಯಮಂತ್ರಿಗಳು ಮತ್ತು ನಾಯಕರು ಸ್ವತಃ ನಂಬುತ್ತಾರೆ ಎಂದು ಕಾಲೆಳೆದಿದೆ.

  • ಭಾರೀ ಕುತೂಹಲ ಹುಟ್ಟಿಸಿತು ವಸುಂಧರಾ ರಾಜೇ, ರಾಜಸ್ಥಾನ ಸಿಎಂ ಭೇಟಿ

    ಭಾರೀ ಕುತೂಹಲ ಹುಟ್ಟಿಸಿತು ವಸುಂಧರಾ ರಾಜೇ, ರಾಜಸ್ಥಾನ ಸಿಎಂ ಭೇಟಿ

    ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (Bhajanlal Sharma)  ಅವರು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ (Vasundhara Raje)  ಅವರನ್ನು ಭೇಟಿ ಮಾಡುವ ಮೂಲಕ ಭಾರೀ ಕುತೂಹಲ ಹುಟ್ಟಿಸಿದ್ದಾರೆ.

    ಭಜನ್‌ಲಾಲ್ ಶರ್ಮಾ ಅವರು ಸಿವಿಲ್ ಲೈನ್ಸ್‌ನಲ್ಲಿರುವ ರಾಜೇ ಅವರ ಅಧಿಕೃತ ನಿವಾಸದಲ್ಲಿ ಬೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಯಾದ ಒಂದೂವರೆ ತಿಂಗಳ ನಂತರ ಸಿಎಂ ಭಜನ್‌ಲಾಲ್ ಶರ್ಮಾ ಮೊದಲ ಬಾರಿಗೆ ವಸುಂಧರಾ ರಾಜೇ ಅವರನ್ನು ಭೇಟಿಯಾಗಿದ್ದು, ಇದೀಗ ರಾಜಸ್ಥಾನದ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

    ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಪಕ್ಷ ಬಹುಮತ ಪಡೆದ ನಂತರ ಮುಖ್ಯಮಂತ್ರಿ ಹುದ್ದೆಗೆ ವಸುಂಧರಾ ರಾಜೇ ಅವರನ್ನು ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ. ಪಕ್ಷದ ಹೈಕಮಾಂಡ್ ಡಿಸೆಂಬರ್ 12 ರಂದು ಮೊದಲ ಬಾರಿಗೆ ಭಜನ್‌ ಲಾಲ್ ಶರ್ಮಾ ಅವರನ್ನು ಆಯ್ಕೆ ಮಾಡಿತು. ಇದಾದ ಬಳಿಕ ರಾಜೇ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಡಿಸೆಂಬರ್ 30 ರಂದು ನಡೆದ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ‌ ಕೂಡ ಅವರು ಹಾಜರಾಗಿರಲಿಲ್ಲ. ಜನವರಿ 5 ರಂದು ಪಕ್ಷದ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶಾಸಕರಿಗೆ ಔತಣಕೂಟದಲ್ಲಿಯೂ ಅವರು ಭಾಗವಹಿಸಿರಲಿಲ್ಲ. ಇದನ್ನೂ ಓದಿ: ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ: ಮೋದಿ ಹೊಗಳಿದ ರೆಡ್ಡಿ

    ಭೇಟಿಯ ಹಿಂದಿನ ಗುಟ್ಟೇನು..?: ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ವಸುಂಧರಾ ರಾಜೇ ಅವರನ್ನು ರಾಜಸ್ಥಾನದ ಪ್ರಬಲ ನಾಯಕಿ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಕೆಣಕುವುದು ಪಕ್ಷಕ್ಕೆ ಇಷ್ಟವಿಲ್ಲ. ಹೀಗಾಗಿ ಹಾಲಿ ಸಿಎಂ ಭಜನಲಾಲ್ ಶರ್ಮಾ ಶುಕ್ರವಾರ ವಸುಂಧರಾ ರಾಜೇ ಅವರ ನಿವಾಸಕ್ಕೆ ಆಗಮಿಸಿ ಅವರನ್ನು ಭೇಟಿ ಮಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯವರು ಲೋಕಸಭೆ ಚುನಾವಣೆಗೆ ಮುನ್ನ ವಸುಂಧರಾ ರಾಜೆ ಅವರೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಲು ಈ ಮೂಲಕ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  • ಚರಂಡಿಗೆ ಉರುಳಿದ ಕಾರು- ರಾಜಸ್ಥಾನದ ನೂತನ ಸಿಎಂ ಗ್ರೇಟ್‌ ಎಸ್ಕೇಪ್‌

    ಚರಂಡಿಗೆ ಉರುಳಿದ ಕಾರು- ರಾಜಸ್ಥಾನದ ನೂತನ ಸಿಎಂ ಗ್ರೇಟ್‌ ಎಸ್ಕೇಪ್‌

    ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ (Bhajan lal Sharma) ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.

    ಸಿಎಂ ಅವರು ಜೈಪುರದಿಂದ ಭರತ್‌ ಪುರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಚರಂಡಿಗೆ ಜಾರಿದ್ದರಿಂದ ಮುಖ್ಯಮಂತ್ರಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆ ಬಳಿಕ ಭಜನ್‌ ಲಾಲ್‌ ಶರ್ಮಾ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಲಾಗಿದೆ.

    ಭಜನ್‌ ಲಾಲ್‌ ಅವರು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರು ಭರತ್‌ ಪುರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಭಜನ್‌ಲಾಲ್‌ ಶರ್ಮಾ ರಾಜಸ್ಥಾನ ಸಿಎಂ ಆಗಿ ಪ್ರಮಾಣ ವಚನ; ದಿಯಾ ಕುಮಾರಿ, ಪ್ರೇಮ್‌ ಚಂದ್‌ ಡಿಸಿಎಂ

    ಡಿಸೆಂಬರ್‌ 12 ರಂದು ಬಿಜೆಪಿಯು (BJP) ಭಜನ್‌ ಲಾಲ್‌ ಶರ್ಮಾ ಅವರನ್ನು ಸಿಎಂ ಹುದ್ದೆಗೆ ಅಚಚರಿಯ ಆಯ್ಕೆ ಮಾಡಿತ್ತು. ಭರತ್‌ ಪುರ ಜಿಲ್ಲೆಯ ಶರ್ಮಾ ಅವರು ಜೈಪುರದ ಸಂಗನೇರ್‌ ಕ್ಷೇತ್ರದಲ್ಲಿ 48,081 ಮತಗಳ ಅಂತರದಿಂದ ಗೆದ್ದಿದ್ದಾರೆ. ಚೊಚ್ಚಲ ಶಾಸಕರಾದ ಭಜನ್‌ ಲಾಲ್‌ ಶರ್ಮಾ ಅವರು ಕಳೆದ ಶುಕ್ರವಾರವಷ್ಟೇ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

  • ಆಕಾಂಕ್ಷಿಯೂ ಅಲ್ಲದೆ ಕೊನೇ ಸಾಲಿನಲ್ಲಿದ್ದ ಭಜನ್ ಲಾಲ್ ಸಿಎಂ ಆಗಿದ್ದು ಹೇಗೆ?

    ಆಕಾಂಕ್ಷಿಯೂ ಅಲ್ಲದೆ ಕೊನೇ ಸಾಲಿನಲ್ಲಿದ್ದ ಭಜನ್ ಲಾಲ್ ಸಿಎಂ ಆಗಿದ್ದು ಹೇಗೆ?

    – ಕರಸೇವೆಯಲ್ಲಿ ಭಾಗಿಯಾಗಿದ್ದ ರಾಜಸ್ಥಾನದ ನೂತನ ಮುಖ್ಯಮಂತ್ರಿ

    ಜೈಪುರ: ಛತ್ತೀಸ್‌ಗಢ, ಮಧ್ಯಪ್ರದೇಶದ ರೀತಿಯಲ್ಲೇ ರಾಜಸ್ಥಾನದಲ್ಲೂ (Rajasthan) ಬಿಜೆಪಿ ಹೈಕಮಾಂಡ್ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಸಿಎಂ ಆಯ್ಕೆಗೂ ಮುನ್ನ ಕೊನೇ ಸಾಲಿನಲ್ಲಿದ್ದ ಭಜನ್ ಲಾಲ್ ಶರ್ಮಾ (Bhajan Lal Sharma) ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿರುವುದೇ ಅಚ್ಚರಿಯಾಗಿದೆ.

    ಭಜನ್ ಲಾಲ್ ಶರ್ಮಾ 1992ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಆರ್‌ಎಸ್‌ಎಸ್ ಕಾರ್ಯಕರ್ತರೂ ಆಗಿದ್ದರು. ಶರ್ಮಾ ಕರಸೇವೆಯಲ್ಲಿ ಭಾಗಿಯಾಗುವ ಮೂಲಕ ರಾಜಕೀಯ ಜೀವನವನ್ನು ಆರಂಭಿಸಿದ್ದರು. ಕರಸೇವೆಯಲ್ಲಿ ಭಾಗಿಯಾಗಿದ್ದಕ್ಕೆ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

    ಇದಕ್ಕೂ ಮೊದಲು ಗ್ರಾಮ ಸರಪಂಚರಾಗಿದ್ದ ಇವರು ಬಳಿಕ ಹಂತಹಂತವಾಗಿ ಬಿಜೆಪಿಯಲ್ಲಿ (BJP) ವಿವಿಧ ಸ್ಥಾನಗಳಿಗೆ ಆಯ್ಕೆಯಾದರು. ಬಳಿಕ 2023ರಲ್ಲಿ ಜೈಪುರದ ಸಂಗನೇರ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಎಣ್ಣೆ ಶಾಕ್ ಫಿಕ್ಸ್ – ಜನವರಿಯಿಂದ ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ

    ಚುನಾವಣೆ ಬಳಿಕ ಸಿಎಂ ಆಯ್ಕೆಗೂ ಮುನ್ನ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಎಲ್ಲಾ 115 ಶಾಸಕರ ಫೋಟೋ ಸೆಷನ್ ಹಮ್ಮಿಕೊಳ್ಳಲಾಗಿತ್ತು. ಸಿಎಂ ಸ್ಥಾನ ಆಕಾಂಕ್ಷಿಗಳೆಲ್ಲರೂ ಮೊದಲ ಸಾಲಿನಲ್ಲಿ ಕುಳಿತಿದ್ದರೆ, ಭಜನ್ ಲಾಲ್ ಶರ್ಮಾ ಮಾತ್ರ ಹಿಂದಿನ ಸಾಲಿನಲ್ಲಿ ನಿಂತಿದ್ದರು. ಆದರೆ ಶಾಸಕಾಂಗ ಪಕ್ಷದ ಸಭೆ ಬಳಿಕ ಎಲ್ಲವೂ ಉಲ್ಟಾ ಆಯ್ತು. ಹಿಂದಿನ ಸಾಲಿನಲ್ಲಿದ್ದ ಶರ್ಮಾ ಮುಂದಿನ ಸಾಲಿಗೆ ಆಗಮಿಸಿ ಅಚ್ಚರಿ ಮೂಡಿಸಿದರು.

    ಭಜನ್ ಲಾಲ್ ಶರ್ಮಾ ಮೂಲತಃ ರಾಜಸ್ಥಾನದ ಭರತ್‌ಪುರದವರು. ಎಬಿವಿಪಿ ಮೂಲದವರಾಗಿದ್ದರಿಂದ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡು ಹಲವು ವರ್ಷಗಳಿಂದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆ ಶರ್ಮಾ ಭರತ್‌ಪುರದಿಂದಲೇ ಸ್ಪರ್ಧಿಸುವ ಇಚ್ಛೆಯಿಂದ ಟಿಕೆಟ್ ಕೇಳಿದ್ದರು. ಆದರೆ ಪಕ್ಷದ ವರಿಷ್ಠರು ಭರತ್‌ಪುರದಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಿದೆ. ಅಲ್ಲಿ ನೀವು ಗೆಲ್ಲುವ ಸಾಧ್ಯತೆ ಇಲ್ಲ ಎಂದು ಸಾಂಗಾನೇರ್ ಕ್ಷೇತ್ರದಿಂದ ಟಿಕೆಟ್ ಕೊಡಿಸಿದ್ದರು. ಇದನ್ನೂ ಓದಿ: ನಿರುದ್ಯೋಗ ಯುವಕ-ಯುವತಿಯರಿಗೆ ಗುಡ್‌ನ್ಯೂಸ್ – ಡಿ.21ರಿಂದ `ಯುವ ನಿಧಿ’ಗೆ ನೋಂದಣಿ

  • ರಾಜಸ್ಥಾನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ

    ರಾಜಸ್ಥಾನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ

    ಜೈಪುರ: ಛತ್ತೀಸ್‌ಗಢ, ಮಧ್ಯಪ್ರದೇಶದ ರೀತಿಯಲ್ಲಿ ರಾಜಸ್ಥಾನದಲ್ಲೂ (Rajasthan) ಬಿಜೆಪಿ (BJP) ಹೈಕಮಾಂಡ್ ಅಚ್ಚರಿಯ ನಿರ್ಧಾರ ಕೈಗೊಂಡಿದ್ದು, ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ (Bhajan Lal Sharma) ಅವರನ್ನು ಆಯ್ಕೆ ಮಾಡಿದೆ.

    ಇವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಾಗಿದ್ದು, ಈ ಮೂಲಕ ಬಿಜೆಪಿ ಹೈಕಮಾಂಡ್ ಮತ್ತೊಂದು ಅಚ್ಚರಿಯ ಆಯ್ಕೆ ಮಾಡಿದೆ. ಮುಂದಿನ ಲೋಕಸಭೆ ಚುನಾವಣೆಗಾಗಿ ಹೊಸ ಮುಖಗಳನ್ನು ಬಿಜೆಪಿ ಹೈಕಮಾಂಡ್ ಮಾಡಿದಂತಿದೆ. ಈ ಮೂಲಕ ಛತ್ತೀಸ್‌ಗಢ, ಮಧ್ಯಪ್ರದೇಶ ಇದೀಗ ರಾಜಸ್ಥಾನದಲ್ಲಿಯೂ ಹೊಸ ಮುಖಕ್ಕೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಇದನ್ನೂ ಓದಿ: 30 ದಿನಗಳ ಒಳಗಡೆ ಮನೆ ಖಾಲಿ ಮಾಡಿ: ಮೊಯಿತ್ರಾಗೆ ನೋಟಿಸ್‌

    ಸಾಂಗನೇರ್ ಕ್ಷೇತ್ರದ ಶಾಸಕರಾಗಿರುವ ಭಜನ್ ಲಾಲ್ ಶರ್ಮಾ ಅಮಿತ್ ಶಾ ಆಪ್ತರಾಗಿದ್ದಾರೆ. ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಭಜನ್ ಲಾಲ್ ಶರ್ಮಾ ಬ್ರಾಹಣ ಸಮುದಾಯದವರಾಗಿದ್ದು, 48,000 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಪ್ರೇಮ್ ಚಂದ್ ಬೈರ್ವಾ ಹಾಗೂ ದಿಯಾ ಕುಮಾರಿ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕದ ರೈತರಿಗೆ ಪ್ರಧಾನಿ ಮೋದಿ ವಿಶೇಷ ಪ್ಯಾಕೇಜ್ ಘೋಷಿಸಬೇಕು – ಸುಮಲತಾ ಮನವಿ

    ಬಾಬಾ ಬಾಲಕನಾಥ್, ಮಾಜಿ ಸಿಎಂ ವಸುಂಧರಾ ರಾಜೇ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅಶ್ವಿನಿ ವೈಷ್ಣವ್ ಅವರೊಂದಿಗೆ ಜೈಪುರ ರಾಜಮನೆತನದ ದಿಯಾ ಕುಮಾರಿ ರಾಜ್ಯ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ ಮತ್ತು ಹಿರಿಯ ನಾಯಕ ಕಿರೋಡಿ ಲಾಲ್ ಮೀನಾ ಕೂಡ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಮುಖ್ಯಮಂತ್ರಿ ರೇಸ್‌ನಲ್ಲಿ ಎಲ್ಲರನ್ನೂ ಹಿಂದಿಕ್ಕಿ, ಭಜನ್ ಲಾಲ್ ಶರ್ಮಾ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನ – ಸಂಜಯ್‌ ರಾವತ್‌ ವಿರುದ್ಧ ದೇಶದ್ರೋಹದ ಕೇಸ್‌