Tag: Bhairati Basavaraj

  • ‘ಕುರಿ ಕಾಯೋನು’ ಚಿತ್ರಕ್ಕೆ ಶಾಸಕ ಭೈರತಿ ಬಸವರಾಜ್ ಚಾಲನೆ

    ‘ಕುರಿ ಕಾಯೋನು’ ಚಿತ್ರಕ್ಕೆ ಶಾಸಕ ಭೈರತಿ ಬಸವರಾಜ್ ಚಾಲನೆ

    ಳೆದ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ಕಲಾವಿದ, ಸಹಾಯಕ ನಿರ್ದೇಶಕನಾಗಿ ತೊಡಗಿಕೊಂಡಿರುವ ಮಹೇಶ್(ಓಂ) ಈಗ ಸ್ವತಂತ್ರ ನಿರ್ದೇಶಕನಾಗುತ್ತಿದ್ದಾರೆ. ಜೊತೆಗೆ ಹೀರೋ ಕೂಡ  ಆಗುತ್ತಿದ್ದಾರೆ. ಅವರ ನಟನೆ ಹಾಗೂ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಅನಿವಾಸಿ ಕನ್ನಡಿಗರಾದ ರಾಜೇಶ್, ಪ್ರಿಯಾ (Priya) ಅವರು  ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಸಮಾರಂಭದಲ್ಲಿ  ಶಾಸಕ ಭೈರತಿ ಬಸವರಾಜ್ ಅವರು ‘ಕುರಿ ಕಾಯೋನು’ ಚಿತ್ರದ  ಟೈಟಲ್ ಲಾಂಚ್ ಮಾಡುವ ಮೂಲಕ ಚಿತ್ರಕ್ಕೆ  ಚಾಲನೆ ನೀಡಿದರು. ಇದಕ್ಕೂ ಮೊದಲು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಎಂಟು ಜನ ಮುತ್ತೈದೆಯರಿಗೆ ಶಾಸಕರಿಂದ ಭಾಗಿನ ವಿತರಿಸಲಾಯಿತು. ನಂತರ ಮಾತನಾಡಿದ ಶಾಸಕರು, ಸ್ನೇಹಿತ ಮಹೇಶ್ (Mahesh) ಬಹಳ ವರ್ಷಗಳಿಂದ ಚಿತ್ರರಂಗದಲ್ಲಿದ್ದಾನೆ. ಈಗ ನಿರ್ದೇಶಕನಾಗಬೇಕೆಂದು ಹೊರಟಿದ್ದಾನೆ. ರಾಜ್ಯದ ಜನತೆ ಅವನಿಗೆ ಸಹಕಾರ ನೀಡಬೇಕು. ನನಗೆ ಆರೋಗ್ಯ ಸರಿ ಇಲ್ಲದಿದ್ರೂ ಈ ಯುವಕರಿಗೆ ಸ್ಪೂರ್ತಿ ನೀಡಲೆಂದು ಇಲ್ಲಿಗೆ ಬಂದಿದ್ದೇನೆ ಎಂದರು.

    ವಿದೇಶದಲ್ಲಿ ಹಲವಾರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ನಿರ್ಮಾಪಕಿ, ಮಿಸಸ್ ಇಂಡಿಯಾ ಯೂನಿವರ್ಸ್ ವಿನ್ನರ್  ಆಗಿರುವ ಪ್ರಿಯಾ ರಾಜೇಶ್ ಮಾತನಾಡಿ ನಾವು  ಮಹೇಶ್ ರನ್ನು 29 ವರ್ಷಗಳಿಂದ ನೋಡುತ್ತಿದ್ದೇವೆ. ತುಂಬಾ ಸ್ಟ್ರಗಲ್ ಮಾಡಿದ್ದಾರೆ. ಶ್ರೀಕೃಷ್ಣ, ಏಸು ಇವರೆಲ್ಲ ಕುರಿಗಾಹಿಗಳೇ ಆಗಿದ್ದರು. ಅದೇ ಕುರಿ ಕಾಯೋನ ಚಿತ್ರವನ್ನು ಮಹೇಶ್ ಮಾಡುತ್ತಿದ್ದಾರೆ. ಅವರಿಗೆ ನನ್ನ ಹಾಗೂ ರಾಜೇಶ್ ಇಬ್ಬರದೂ ಪೂರ್ತಿ  ಸಪೋರ್ಟ್ ಅವರಿಗಿದೆ ಎಂದರು. ಕೋ-ಪ್ರೊಡ್ಯೂಸರ್ ದೀಪು ಮಾತನಾಡಿ ಇದು ಎರಡನೇ ಚಿತ್ರ. 4 ತಿಂಗಳ ಹಿಂದೆ ಮಹೇಶ್ ಈ ಸಬ್ಜೆಕ್ಟ್ ಹೇಳಿದ್ದರು. ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾದ್ದಲ್ಲ. ಚಿತ್ರ ನೋಡೋವಾಗ ಅದು ಅರ್ಥವಾಗುತ್ತೆ ಎಂದರು.

    ‌ನಿರ್ದೇಶಕ, ನಾಯಕ ಮಹೇಶ್(ಓಂ) ಮಾತನಾಡುತ್ತ ಚಿಕ್ಕವನಿದ್ದಾಗ ಅಪ್ಪನ ಜೇಬಿನಿಂದ ಹಣ ಕದ್ದು ಸಿನಿಮಾ ನೋಡ್ತಿದ್ದೆ. ಓಂ ಸಿನಿಮಾದಿಂದ ಶಿವಣ್ಣ, ಸುದೀಪ್, ಪುನೀತ್, ವಿಜಯ್, ಇವರ ಜೊತೆಗೆಲ್ಲ ಕೆಲಸ ಮಾಡಿದ್ದೇನೆ.  ನಡುವೆ ಲೋನ್ ರಿಕವರಿ ಏಜೆಂಟಾಗಿಯೂ ಕೆಲಸ ಮಾಡಿದ್ದೇನೆ. ಮರಳು, ಜಲ್ಲಿ ಎತ್ತಿದ್ದೇನೆ. ಈಗ ಮೇಸ್ತ್ರಿ ಆಗಬೇಕೆಂದು ಹೊರಟಿದ್ದೇನೆ. ನಾನು ನಾಯಕನಾಗುತ್ತೇನೆ ಅಂದಾಗ ಕೆಲವರು ಹಾಸ್ಯ ಮಾಡಿದರು. ಸ್ನೇಹಿತರೆಲ್ಲ ನನಗೆ ಸಹಕಾರ ನೀಡಿದರು. ಈಗ ನಿಮ್ಮೆಲ್ಲರ ಆಶೀರ್ವಾದ ನಂಗೆ ಬೇಕಿದೆ. ‘ಕುರಿ ಕಾಯೋನು’ ಕಥೆಯ ಬಗ್ಗೆ ಹೇಳಬೇಕೆಂದರೆ,  ನಾಯಕ ಮುಗ್ಧ, ಆತನಿಗೆ ತನ್ನ ಕುರಿಗಳನ್ನು ಬಿಟ್ಟರೆ ಹೊರಗಿನ ಪ್ರಪಂಚವೇ ಗೊತ್ತಿರಲ್ಲ , ಕುರಿಯನ್ನು ಜೀವದಂತೆ ಪ್ರೀತಿಸುತ್ತಾನೆ. ಆ ಕುರಿಯನ್ನು ಯಾರೋ ಕೆಣಕಿದಾಗ ಆತ ಕೆರಳುತ್ತಾನೆ. ತನ್ನ ಕುರಿ ಕಳೆದುಹೋದಾಗ ವಿಚಲಿತನಾಗುತ್ತಾನೆ. ಗಣೇಶ ಹಬ್ಬಕ್ಕೆ ಮುಹೂರ್ತ ಮಾಡಿ, ಕೋಲಾರ, ಅಂತರಗಂಗೆ, ಮಲೆ ಮಾದೇಶ್ವರ ಬೆಟ್ಟ ಇತರೆಡೆ ಚಿತ್ರೀಕರಿಸುವ ಯೋಜನೆಯಿದೆ. ಚಿತ್ರದಲ್ಲಿ ಕೆ.ಆರ್.ಪುರ ಕ್ಷೇತ್ರದ ಸಾಕಷ್ಟು ಕಲಾವಿದರಿಗೆ ಅವಕಾಶ ನೀಡುತ್ತಿದ್ದೇವೆ. ಮುಖ್ಯವಾಗಿ ಚಿತ್ರದ ಕಥೆಗೆ ಟ್ವಿಸ್ಟ್  ನೀಡುವ ಸಿಎಂ ಪಾತ್ರವಿದ್ದು, ಅದನ್ನು ನಮ್ಮ ಶಾಸಕರಾದ ಭೈರತಿ ಬಸವರಾಜಣ್ಣ  ಅವರಿಂದಲೇ ಮಾಡಿಸುವ ಯೋಜನೆಯಿದೆ ಎಂದು ಹೇಳಿದರು. ನಿರ್ಮಾಪಕರಾದ ರಾಜೇಶ್, ಹಿರಿಯ ನಟ ಕೋಟೆ ಪ್ರಭಾಕರ್, ವೀಣಾ ಮಹೇಶ್ ಚಿತ್ರದ ಕುರಿತು ಮಾತನಾಡಿದರು. ಕುರಿ ಕಾಯೋನು ಚಿತ್ರದಲ್ಲಿ 4 ಹಾಡುಗಳಿದ್ದು ರಾಘವೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  • 1 ಲಕ್ಷ ದಿನಸಿ ಕಿಟ್ ವಿತರಿಸಿದ ಭೈರತಿ ಬಸವರಾಜ್

    1 ಲಕ್ಷ ದಿನಸಿ ಕಿಟ್ ವಿತರಿಸಿದ ಭೈರತಿ ಬಸವರಾಜ್

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಡವರು, ಶ್ರಮಿಕ ವರ್ಗದವರು, ಕೂಲಿ ಕಾರ್ಮಿಕರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಮ್ಮ ಕ್ಷೇತ್ರದ ಒಂದು ಲಕ್ಷ ಕುಟುಂಬಗಳಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ವಿವರಿಸಿದರು.

    ಕೆ.ಆರ್.ಪುರ ಕ್ಷೇತ್ರದ ಕೊತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಅಗತ್ಯ ಬಿದ್ದಲ್ಲಿ ಬಡಜನರಿಗೆ ಇನ್ನೂ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಕ್ಷೇತ್ರದ ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಹಂತ ಹಂತವಾಗಿ ನೀಡಲಾಗುತ್ತದೆ ಎಂದರು. ಇದನ್ನೂ ಓದಿ: ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ: ಉಪೇಂದ್ರ

    ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಗೆ ಉನ್ನತಿಕರಿಸಲು 13 ಕೋಟಿ ರೂ. ವೆಚ್ಚವಾಗಲಿದೆ. ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

    ಬಳಿಕ ಮಾತನಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 130 ಕೋಟಿ ಜನರಿಗೂ ಕೋವಿಡ್ ಲಸಿಕೆಯನ್ನು ನೀಡಲಾಗುವುದು. ಜೂನ್ ಅಂತ್ಯದ ವೇಳೆಗೆ ಕೇಂದ್ರದಿಂದ ರಾಜ್ಯಕ್ಕೆ 50 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಸಹ 15 ಲಕ್ಷ ಡೋಸ್ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷ ಡೋಸ್‍ನಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.

    ಕೊರೊನಾ ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆ.ಅರ್.ಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಒಂದು ಲಕ್ಷ ದಿನಸಿ ಕಿಟ್ ನ್ನು ಭೈರತಿ ಬಸವರಾಜ್ ವಿತರಣೆ ಮಾಡುತ್ತಿರುವುದು ಪುಣ್ಯದ ಕೆಲಸ. ಕ್ಷೇತ್ರದ ಜನ ಮತ ಹಾಕುವ ಮೂಲಕ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಅವರು ನಿಮಗೆ ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದಾರೆ. ಸದಾ ಜನರ ನಡುವೆ ಇರುವ ಬಸವರಾಜ್ ಅಂತಹವರು ಸಮಾಜಕ್ಕೆ ಅವಶ್ಯಕತೆ ಇದೆ. ಅವರಿಗೆ ತಮ್ಮ ಬೆಂಬಲ ಸದಾ ಇರಲಿ ಎಂದರು.

    ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನ ಸಭಾ ಕ್ಷೇತ್ರವಾಗಿದೆ. ಇದನ್ನು ಭೈರತಿ ಬಸವರಾಜ್ ಅವರು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಈ ಭಾಗದ ಲೋಕಸಭಾ ಸದಸ್ಯನಾಗಿ ಮತ್ತು ಕೇಂದ್ರ ಸಚಿವನಾಗಿ ನನ್ನ ಬೆಂಬಲ, ಸಹಕಾರ ಈ ಕ್ಷೇತ್ರಕ್ಕೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಕುರಿತು ಸಭೆ ಕರೆದಾಗಲ್ಲೆಲ್ಲ ನಾನು ಕೆ.ಅರ್.ಪುರ ಕ್ಷೇತ್ರದ ಬಗ್ಗೆ ಮತ್ತು ಭೈರತಿ ಬಸವರಾಜ ಅವರು ಅಲ್ಲಿ ಕೈಗೊಂಡಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹೀಗಾಗಿ ಬಸವರಾಜ್ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿದೆ ಎಂದರು.

    ಕೂತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪ, ವಿಜನಾಪುರದ ಸೈನಿಕ ಭವನ, ಕಲ್ಕರೆಯ ಎನ್.ಅರ್.ಐ ಲೇಔಟ್, ಟಿ.ಸಿ.ಪಾಳ್ಯದ ಸಂತ ಅಂತೋಣಿ ಶಾಲೆ, ಕುರುಡುಸೊಣ್ಣೆನಹಳ್ಳಿಯ ಲೇಕ್ ಮೌಂಟ್ ಶಾಲೆ, ಎಚ್.ಎ.ಎಲ್ ನ ವಿಭೂತಿಪುರ ಶಾಲೆ, ಉದಯ ನಗರದ ಜೈನ ಭವನ, ಎ.ನಾರಾಯಣಪುರದ ಎಮ್.ಇ.ಜಿ ಲೇಔಟ್, ದೇವಸಂದ್ರದ ಕೆಂಪೇಗೌಡ ಕ್ರೀಡಾಂಗಣಗಳಲ್ಲಿ ದಿನಸಿ ಕಿಟ್ ವಿತರಿಸಲಾಯಿತು.

    ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕೆ.ಅರ್.ಪುರ ಬಿಜೆಪಿ ಅಧ್ಯಕ್ಷ ಶಿವರಾಜ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ, ಬಿಜೆಪಿ ಹಿರಿಯ ಮುಖಂಡ ಗಣೇಶ, ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀಕಾಂತ್, ಜಯಪ್ರಕಾಶ್, ನಾಗರಾಜ್, ಸುರೇಶ್, ರಮೇಶ್, ಅಂತೋಣಿ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಭರ್ಜರಿ ಗೆಲುವಿನ ಖುಷಿಯಲ್ಲಿ ನೂತನ ಶಾಸಕರಿಂದ ರೌಂಡ್ಸ್

    ಭರ್ಜರಿ ಗೆಲುವಿನ ಖುಷಿಯಲ್ಲಿ ನೂತನ ಶಾಸಕರಿಂದ ರೌಂಡ್ಸ್

    ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಜಯಭೇರಿ ಭಾರಿಸಿದ ನೂತನ ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದಾರೆ.

    ಕೇವಲ ನೂತನ ಶಾಸಕರು ಮಾತ್ರವಲ್ಲ ಅವರೊಂದಿಗೆ ಕೆಲ ಬಿಜೆಪಿ ನಾಯಕರು ಕೂಡ ಮಠಕ್ಕೆ ಭೇಟಿಕೊಟ್ಟಿದ್ದಾರೆ. ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ನಿರ್ಮಲಾನಂದ ಸ್ವಾಮೀಜಿಗಳು ಇಬ್ಬರು ಶಾಸಕರು ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಿ ಎಂದು ಆಶೀರ್ವದಿಸಿದರು. ಇದೇ ವೇಳೆ ಮಾಧ್ಯಮಗಳ ಕೊತೆ ಮಾತನಾಡಿ, ಬಿಜೆಪಿ ನೀಡಿರುವ ಮಾತಿನಂತೆ ಗೆದ್ದ ಶಾಸಕರಿಗೆ ಮಂತ್ರಿ ಮಾಡಲಿದೆ ಎಂಬ ವಿಶ್ವಾಸ ಇದೆ ಎಂದು ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ತಿಳಿಸಿದರು.

    ಮಠದಿಂದ ಹೊರಟ ನಂತರ ಸಚಿವ ಸೋಮಣ್ಣ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಶಾಸಕರು ಪರಸ್ಪರ ಮಾತುಕತೆ ನಡೆಸಿದರು. ಈ ವೇಳೆ ಸೋಮಣ್ಣ ಅವರು ಮಾಧ್ಯಮಗಳ ಜೊತೆ ಮಾತನಾಡಿ, ನಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿದೆ. ಸೋತವರನ್ನ ಕೈ ಬಿಡದೆ ಸೂಕ್ತ ಸ್ಥಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

    ಎಸ್.ಟಿ ಸೋಮಶೇಖರ್ ಅವರು 27,686 ಮತಗಳ ಅಂತರದಿಂದ ಗೆಲ್ಲುವ ಮೂಲಕ ಯಶವಂತಪುರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಿಜೆಪಿ ಪರವಾಗಿ 1,44,676 ಮತಗಳು ಬಿದ್ದರೆ, ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಜವರಾಯಿಗೌಡ 1,16,990 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಕೇವಲ 15,707 ಮತಗಳನ್ನು ಪಡೆದಿದೆ. ಕಳೆದ ಚುನಾವಣೆಯಲ್ಲಿ ಸೋಮಶೇಖರ್ 10,711 ಮತಗಳಿಂದ ಗೆದ್ದಿದ್ದರು.

    ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಭೈರತಿ ಬಸವರಾಜ್ 63,405 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 1,39,833, ಕಾಂಗ್ರೆಸ್ ಪರವಾಗಿ 76,428 ಮತಗಳು ಚಲಾವಣೆಯಾದರೆ ಜೆಡಿಎಸ್‍ಗೆ 2,048 ಮತಗಳು ಬಿದ್ದಿದೆ. 2018ರ ಚುನಾವಣೆಯಲ್ಲಿ 32,729 ಮತಗಳಿಂದ ಭೈರತಿ ಬಸವರಾಜ್ ಜಯಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ನಂದೀಶ್ ರೆಡ್ಡಿ ಅವರಿಗೆ 1,02,675 ಮತಗಳು ಬಿದ್ದಿತ್ತು.

  • ಕೆ.ಆರ್.ಪುರಕ್ಕೆ ಭೈರತಿ, ನಂದೀಶ್ ರೆಡ್ಡಿ ಜೋಡೆತ್ತು- ಆರ್.ಅಶೋಕ್

    ಕೆ.ಆರ್.ಪುರಕ್ಕೆ ಭೈರತಿ, ನಂದೀಶ್ ರೆಡ್ಡಿ ಜೋಡೆತ್ತು- ಆರ್.ಅಶೋಕ್

    ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಲ್ಲಿನ ಬಂಡಾಯವನ್ನು ಶಮನ ಮಾಡುವತ್ತ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದು, ದಿನಕ್ಕೊಂದು ಕ್ಷೇತ್ರಕ್ಕೆ ಭೇಟಿ ನೀಡಿ ಸಂಧಾನ ಕಾರ್ಯ ಮಾಡುತ್ತಿದ್ದಾರೆ.

    ಇಂದು ಕಂದಾಯ ಸಚಿವ ಆರ್.ಅಶೋಕ್ ಕೆ.ಆರ್.ಪುರಕ್ಕೆ ಭೇಟಿ ನೀಡಿದ್ದು, ಭೈರತಿ ಬಸವರಾಜ್ ಹಾಗೂ ನಂದೀಶ್ ರೆಡ್ಡಿ ನಡುವಿನ ಅಸಮಾಧನವನ್ನು ತಿಳಿಸಿಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೆ.ಆರ್.ಪುರಕ್ಕೆ ಭೈರತಿ- ನಂದೀಶ್ ರೆಡ್ಡಿ ಜೋಡೆತ್ತು. ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕಾರ್ಯಕರ್ತರೇ ಇಲ್ಲ. ಬಸವರಾಜ್ ಅವರನ್ನು ಕರೆದುಕೊಂಡು ಬಂದಿದ್ದು ನಾನೇ ಮುಂಬೈನಲ್ಲಿ ಅನರ್ಹರ ಕಾವಲಿಗಿದ್ದಿದ್ದು ಭೈರತಿ ಬಸವರಾಜ್ ಎಂದರು.

    ನಂದೀಶ್ ರೆಡ್ಡಿ ನನ್ನ ಶಿಷ್ಯ, ಅವರ ಮನೆಯಲ್ಲಿ ಚಾಯ್ ಪೇ ಚರ್ಚಾ ಮಾಡುತ್ತೇವೆ. ಭೈರತಿ ಬಸವರಾಜ್ ಸಚಿವರಾಗುತ್ತಾರೆ. ಹಿಂದೆ ನಡೆದ ಘಟನೆಯನ್ನು ಮರೆಯಿರಿ. ದೇಶ, ರಾಜ್ಯ, ಕ್ಷೇತ್ರದ ಅಭಿವೃದ್ಧಿಗಾಗಿ ಕಮಲ ಗೆಲ್ಲಿಸಿ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಕಾರ್ಪೋರೇಟರ್ ಗಳಿಗೂ ಸಮನಾದ ಗೌರವ ಇರುತ್ತದೆ. ಬಸವ-ನಂದಿಯರನ್ನು ಹೊಲ ಬೆಳೆಯೋಕೆ ಬಿಡುತ್ತಿದ್ದೇವೆ ಎಂದು ಉಲ್ಲೇಖಿಸಿದರು.

    ಈ ಮೂಲಕ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಬಂಡಾಯವು ಶಮನವಾದಂತಾಗಿದ್ದು, ನಂದೀಶ್ ರೆಡ್ಡಿ ನಿವಾಸದಲ್ಲಿ ಸಂಧಾನ ಸಭೆ ನಡೆಸಿ ಸಚಿವ ಆರ್.ಅಶೋಕ್ ಬಂಡಾಯ ಶಮನಗೊಳಿಸಿದ್ದಾರೆ. ಭೈರತಿ ಬಸವರಾಜ್, ನಂದೀಶ್ ರೆಡ್ಡಿಯನ್ನು ಒಟ್ಟಿಗೆ ಕೂರಿಸಿ ಆರ್.ಅಶೋಕ್ ಸಂಧಾನ ಮಾಡಿದ್ದಾರೆ. ಅಲ್ಲದೆ ಒಟ್ಟಿಗೆ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಸಂಧಾನದ ನಂತರ ಭೈರತಿ ಬಸವರಾಜ್ ಪರ ಕೆಲಸ ಮಾಡಲು ನಂದೀಶ್ ರೆಡ್ಡಿ ಒಪ್ಪಿಕೊಂಡಿದ್ದಾರೆ. ಬಿಎಂಟಿಸಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದ ಬಳಿಕವೂ ನಂದೀಶ್ ರೆಡ್ಡಿ ಮುನಿಸು ಮುಂದುವರಿಸಿದ್ದರು.

  • ಚುನಾವಣೆಗೆ ಈಗಿನಿಂದಲೇ ತಯಾರಿ- ಭೈರತಿಯಿಂದ ಗೌರಿ ಹಬ್ಬಕ್ಕೆ ಸೀರೆ ಗಿಫ್ಟ್

    ಚುನಾವಣೆಗೆ ಈಗಿನಿಂದಲೇ ತಯಾರಿ- ಭೈರತಿಯಿಂದ ಗೌರಿ ಹಬ್ಬಕ್ಕೆ ಸೀರೆ ಗಿಫ್ಟ್

    ಬೆಂಗಳೂರು: ಉಪ ಚುನಾವಣೆಗೆ ಭರ್ಜರಿ ತಯಾರಿ ನಡೆದಿದ್ದು, ಕೆ.ಆರ್.ಪುರ ಅನರ್ಹ ಶಾಸಕ ಭೈರತಿ ಬಸವರಾಜ್ ಈಗಿನಿಂದಲೇ ಮತದಾರರನ್ನು ಮನವೊಲಿಸಲು ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಗೌರಿ ಹಬ್ಬಕ್ಕೆ ಸೀರೆ, ಅರಿಶಿನ, ಕುಂಕುಮ ಹಂಚುತ್ತಿದ್ದಾರೆ ಆರೋಪ ಕೇಳಿ ಬಂದಿದೆ.

    ಗೌರಿ ಗಣೇಶ ಹಬ್ಬದ ಗಿಫ್ಟ್ ನೀಡುವ ಮೂಲಕ ತದಾರರ ಮನವೊಲಿಸಲು ಭೈರತಿ ಮುಂದಾಗಿದ್ದಾರೆ. ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್‍ನಲ್ಲಿ ಅರಿಶಿನ ಕುಂಕುಮ ಬಳೆ ಸೀರೆ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಭೈರತಿ ಅವರು ತಮ್ಮ ಬೆಂಬಲಿಗರ ಮೂಲಕ ಈ ರೀತಿ ಮಾಡಿಸುತ್ತಿದ್ದಾರೆ. ಮುಂಬರುವ ಉಪ ಚುನಾವಣೆಗೆ ಈಗಲೇ ಸೀರೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಭೈರತಿ ಬಸವರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂನಲ್ಲಿದೆ. ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ.