Tag: Bhagya Jyothi

  • ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

    ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

    ಕೊಪ್ಪಳ: 2 ಬಲ್ಬ್ ಇರುವ ಮನೆಗೆ 1 ಲಕ್ಷ ಬಿಲ್ (Electricity Bill) ಬಂದಿದ್ದ ಕೊಪ್ಪಳದ (Koppala) ವೃದ್ಧೆಯ ಮನೆಗೆ ಜೆಸ್ಕಾಂ (GESCOM) ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಮೀಟರ್ ಪರಿಶೀಲನೆ ಮಾಡಿದ ಇಂಜಿನಿಯರ್ ಮೀಟರ್ ರೀಡಿಂಗ್ ತೊಂದರೆಯಿಂದ ತಪ್ಪಾಗಿ ಬಿಲ್ ಬಂದಿದೆ. ಅದನ್ನು ಸರಿಪಡಿಸುತ್ತೇವೆ ಎಂದು ವೃದ್ಧೆಗೆ ಧೈರ್ಯ ಹೇಳಿ ತೆರಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಸ್ಕಾಂನ ಎಕ್ಸಿಕ್ಯುಟಿವ್ ಇಂಜಿನಿಯರ್ ರಾಜೇಶ್, 2021 ರಿಂದ ಮೀಟರ್ ರೀಡಿಂಗ್ ತೊಂದರೆಯಾಗಿದೆ. ಇದರಿಂದ ಹೆಚ್ಚಿನ ಬಿಲ್ ಬಂದಿದೆ. ಇದು ಈಗ ಬಂದಿರುವ ಬಿಲ್ ಅಲ್ಲ. ಒಂದೇ ಬಾರಿಗೆ 70 ಸಾವಿರ ರೂ. ಬಿಲ್ ಬಂದಿದೆ. ನಂತರ ಹೆಚ್ಚಿಗೆ ಆಗುತ್ತಾ ಹೋಗಿದೆ. ಬಳಿಕ ಅಜ್ಜಿಗೆ ಧೈರ್ಯ ಹೇಳಿ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಸರಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ

    ನಮ್ಮ ಸಿಬ್ಬಂದಿಗಳ ಹಾಗೂ ಬಿಲ್ ಕಲೆಕ್ಟರ್ ತಪ್ಪಿನಿಂದಾಗಿ ಈ ಸಮಸ್ಯೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಯಾವುದೇ ಪ್ರಕರಣಗಳಿದ್ದರೂ ಗಮನಕ್ಕೆ ತರುವಂತೆ ಅವರು ತಿಳಿಸಿದ್ದಾರೆ. ಇನ್ನೂ ಬಿಲ್ ಕಟ್ಟುವಂತಿಲ್ಲ ಎನ್ನುತ್ತಿದ್ದಂತೆ ಅಜ್ಜಿ ಫುಲ್ ಖುಷಿಯಾಗಿದ್ದಾರೆ.

    ವೃದ್ಧೆ ಗಿರಿಜಮ್ಮ ಅವರ ಮನೆಗೆ 1,03,315 ರೂ. ಬಿಲ್ ನೀಡಲಾಗಿತ್ತು. ಇದರಿಂದ ಆತಂಕಕ್ಕೊಳಗಾದ ವೃದ್ಧೆ ಹಾಗೂ ಆಕೆಯ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ ಕಟ್ಟಲು ಸಾಧ್ಯವಿಲ್ಲ. ನಾವು ಇರುವುದು ಇಬ್ಬರೇ. ಎರಡೇ ಬಲ್ಬ್ ಇರುವುದು. ಹೇಗೆ ಇಷ್ಟೆಲ್ಲ ಬಿಲ್ ಬಂತು ಎಂದು ಗೋಳಾಡಿದ್ದರು. ಇದನ್ನು ‘ಪಬ್ಲಿಕ್ ಟಿವಿ’ ಗುರುವಾರ ಬೆಳಗ್ಗೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಈಗ ವೃದ್ಧೆಯ ಮನೆಗೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದೇ ಮಹಿಳೆ ಜೊತೆ ಅನುಚಿತ ವರ್ತನೆ – ನಿರ್ವಾಹಕನ ಮೇಲೆ ಸಂಬಂಧಿಕರಿಂದ ಹಲ್ಲೆ

  • 2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ

    2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ

    ಕೊಪ್ಪಳ: 2 ಬಲ್ಬ್ ಇರುವ ತಗಡಿನ ಶೆಡ್‍ನಲ್ಲಿ ವಾಸಿಸುವ ವೃದ್ಧೆಯೊಬ್ಬರ ಮನೆಗೆ ಜೆಸ್ಕಾಂ ಸಿಬ್ಬಂದಿ 1,03,315 ರೂ. ಬಿಲ್ ನೀಡಿದ ಘಟನೆ ಕೊಪ್ಪಳದಲ್ಲಿ (Koppala) ನಡೆದಿದೆ. ಇದರಿಂದ ಆತಂಕಕ್ಕೊಳಗಾದ ವೃದ್ಧೆ ಹಾಗೂ ಆಕೆಯ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ (Electricity Bill) ಕಟ್ಟಲು ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ.

    ವೃದ್ಧೆ ಗಿರಿಜಮ್ಮ ಎಂಬುವರ ಮನೆಗೆ ಈ ಬಿಲ್ ಬಂದಿದ್ದು, ಕಳೆದ ಆರು ತಿಂಗಳಿಂದ ಜೆಸ್ಕಾಂ (Gescom) ಸಿಬ್ಬಂದಿ ಇಷ್ಟೆಲ್ಲ ಬಿಲ್ ನೀಡುತ್ತಿದ್ದಾರೆ. ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದು, ಮೊದಲು ಪ್ರತಿ ತಿಂಗಳು 70 ರೂ. ನಿಂದ 80 ರೂ. ಬಿಲ್ ಬರುತ್ತಿತ್ತು. ಅದರಲ್ಲೂ ನಾವಿರುವುದು ಇಬ್ಬರೇ ನಾವೆಷ್ಟು ಕರೆಂಟ್ ಬಳಸುತ್ತೇವೆ? ಈಗ ಇದ್ದಕ್ಕಿದ್ದಂತೆ ಇಷ್ಟೆಲ್ಲ ಜಾಸ್ತಿಯಾಗಿದೆ ಎಂದು ವೃದ್ಧೆ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದೇ ಮಹಿಳೆ ಜೊತೆ ಅನುಚಿತ ವರ್ತನೆ – ನಿರ್ವಾಹಕನ ಮೇಲೆ ಸಂಬಧಿಕರಿಂದ ಹಲ್ಲೆ

    ಭಾಗ್ಯ ಜ್ಯೋತಿ (Bhagya Jyothi) ಯೋಜನೆಯ ಪ್ರಕಾರ 18 ಯೂನಿಟ್ ಸರ್ಕಾರವೇ ಪಾವತಿ ಮಾಡುತ್ತಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆ ಈ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಕೆ ಮಾಡಿದ್ದಾರೆ. ಮೀಟರ್ ಹಾಕಿದಾಗಿಂದ ಹತ್ತರಿಂದ ಇಪ್ಪತ್ತು ಸಾವಿರ ರೂ. ಬಿಲ್ ಬರುತ್ತಿದೆ. ಆದರೆ ಬಿಲ್ ಕೊಟ್ಟು ಹೋಗುವ ಸಿಬ್ಬಂದಿ ಹಣ ಕೇಳಲು ಮಾತ್ರ ಬರುತ್ತಿಲ್ಲ. ಒಂದು ವೇಳೆ ಬಂದರೆ ಎಂಬ ಭಯದಲ್ಲಿ ವೃದ್ಧೆ ಈ ಸಮಸ್ಯೆ ಬಗೆಹರಿಸುವಂತೆ ಸಿಕ್ಕ ಸಿಕ್ಕವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

    ಜೆಸ್ಕಾಂ ಸಿಬ್ಬಂದಿಗಳ ಯಡವಟ್ಟಿನಿಂದ ಈ ಬಡ ಜೀವ ಪರದಾಡುವಂತಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಈ ಸಮಸ್ಯೆಗೊಂದು ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ದರ ಭಾರೀ ಏರಿಕೆ – ಉತ್ತರ, ಮಧ್ಯ ಕರ್ನಾಟಕದಲ್ಲಿ ಇಂದು ಉದ್ಯಮ ಬಂದ್‌