Tag: Bhagavad Gita

  • ಯಾವನೋ ವೆಲ್ಲೆಸ್ಲಿ, ಕರ್ಜನ್‌ರೇ ಲಾರ್ಡ್ ಎನ್ನುವಂತಿರುವ ಪಾಠ ಸರಿಯಿಲ್ಲ: ಸಿಎಂ ರಾಜಕೀಯ ಕಾರ್ಯದರ್ಶಿ

    ಯಾವನೋ ವೆಲ್ಲೆಸ್ಲಿ, ಕರ್ಜನ್‌ರೇ ಲಾರ್ಡ್ ಎನ್ನುವಂತಿರುವ ಪಾಠ ಸರಿಯಿಲ್ಲ: ಸಿಎಂ ರಾಜಕೀಯ ಕಾರ್ಯದರ್ಶಿ

    ಚಿಕ್ಕಮಗಳೂರು: ಮಕ್ಕಳಿಗೆ ಗೊತ್ತಾಗಬೇಕಿರುವುದು ಹೇಗೆ ಬದುಕಬೇಕು, ಈ ದೇಶ ಯಾವ ರೀತಿ ಧರ್ಮದ ಆಧಾರದ ಮೇಲಿತ್ತು ಎನ್ನುವುದು. ಹೀಗಾಗಿ ಭಗವದ್ಗೀತೆಯನ್ನು ಪಠ್ಯಪುಸ್ತಕಕ್ಕೆ ತರಬೇಕು ಎನ್ನುವ ಬಗ್ಗೆ ಸರ್ಕಾರ ಆಲೋಚನೆ ಮಾಡುತ್ತಿರುವಲ್ಲಿ ವಾಸ್ತವಿಕತೆ ಇದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹೇಳಿದರು.

    1947ರಲ್ಲಿ ಸ್ವಾತಂತ್ರ‍್ಯದ ಬಳಿಕ ಬಂದ ಮೊದಲ ಸರ್ಕಾರ ಭಾರತಕ್ಕೆ ಆಕ್ರಮಣಾಕಾರರಾಗಿ ಬ್ರಿಟಿಷರು, ಮೊಘಲರು, ಡಚ್ಚರು ಬಂದಿದ್ದರು ಎಂದು ತೋರಿಸಬೇಕಿತ್ತು. ನಾನು-ನೀವು ಓದಿರೋ ಪಾಠದಲ್ಲಿ ಯಾವನೋ ಲಾರ್ಡ್ ವೆಲ್ಲೆಸ್ಲಿ, ಲಾರ್ಡ್ ಕರ್ಜನ್‌ನನ್ನು ತಂದು ಅವರನ್ನೇ ಲಾರ್ಡ್ ಎಂದು ಹೇಳಿಕೊಟ್ಟಿರುವುದು ದುರಂತ. ಅಲೆಕ್ಸಾಂಡರ್‌ನನ್ನು ಮಕ್ಕಳಿಗೆ ಗ್ರೇಟ್ ಎಂದು ಹೇಳಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗೆ ಹೇಳುತ್ತಿರುವ ಪಾಠವೇ ಸರಿಯಿಲ್ಲ ಎಂದರು. ಇದನ್ನೂ ಓದಿ: ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಜಪಾನ್ 3.2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ: ಮೋದಿ

    ಇದೀಗ ತಡವಾಗಿಯಾದರೂ ಈ ದೇಶದ ಒಳಗಡೆ ಈ ರೀತಿ ಆಲೋಚನೆ ಮಾಡುವಂತಹ ಒಂದು ನಾಯಕತ್ವ ಬಂದಿದೆ. ಆ ನಾಯಕತ್ವಕ್ಕೆ ಧನ್ಯವಾದ. ಕರ್ನಾಟಕ ಮಾತ್ರವಲ್ಲ, ದೇಶದ ತುಂಬಾ ಇದೇ ರೀತಿಯ ನಾಯಕತ್ವ ಬರಬೇಕು. ದೇಶದ ಧರ್ಮಗ್ರಂಥಗಳಾದ ರಾಮಾಯಣ, ಮಹಾಭಾರತವೇ ನಮಗೆ ಆಧಾರಸ್ತಂಭ. ಅವು ಒಂದೇ ನದಿಯ ಎರಡು ದಂಡೆಗಳು. ಕೇವಲ ಭಗವದ್ಗೀತೆ ಅಲ್ಲ. ರಾಮಾಯಣ-ಮಹಾಭಾರತದ ಎಲ್ಲಾ ಅಂಶಗಳೂ ಪಠ್ಯದಲ್ಲಿ ಬರಬೇಕು. ಆಗ ಧರ್ಮದ ಆಧಾರದ ಮೇಲೆ ದೇಶ ಉಳಿಯುತ್ತದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

    ಮಹಾಭಾರತ-ರಾಮಾಯಣ ಒಂದು ನದಿಯ ಎರಡು ದಂಡೆಗಳಿದ್ದಂತೆ. ಭಾರತ ಎರಡು ದಂಡೆಗಳ ಮಧ್ಯೆ ಹರಿಯುವ ನದಿ. ರಾಮಾಯಣ ಹಾಗೂ ಮಹಾಭಾರತ ನಿಜವಾಗಿ ನಡೆದಿರುವಂತಹ ಎರಡು ಘಟನೆಗಳು ಎನ್ನುವುದು ನಮ್ಮ ನಂಬಿಕೆ. ಶ್ರೀಕೃಷ್ಣ ಭಗವದ್ಗೀತೆಯನ್ನು ಜನ ಧರ್ಮದ ಆಧಾರದಲ್ಲಿ ಬದುಕಬೇಕೆಂದು ಹೇಳಿದ್ದಾರೆಯೇ ವಿನಃ ಬೇರೇನಕ್ಕೂ ಅಲ್ಲ ಎಂದರು.

  • ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಕಲಿಸಿ: ಸಿದ್ದರಾಮಯ್ಯ

    ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಕಲಿಸಿ: ಸಿದ್ದರಾಮಯ್ಯ

    ಉಡುಪಿ: ಪಠ್ಯದ ವಿಚಾರದಲ್ಲಿ ತಾರತಮ್ಯ ಬೇಡ. ಶಾಲೆಯಲ್ಲಿ ನೈತಿಕ ವಿದ್ಯೆ ಕಲಿಹಿಸುವುದಾದರೆ ಕಲಿಸಿ. ಭಗವದ್ಗೀತೆ ಕುರಾನ್ ಬೈಬಲ್ ಯಾವುದನ್ನಾದರೂ ಕಲಿಸಿ. ಆದರೆ ಶಾಲೆಯಲ್ಲಿ ತಾರತಮ್ಯ ಮಾಡಲು ಹೋಗಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಉಡುಪಿ ಜಿಲ್ಲೆ ಹಿರಿಯಡ್ಕದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಎಲ್ಲರೂ ಸ್ವತಂತ್ರರು, ನಮ್ಮದು ಸ್ವತಂತ್ರ ಭಾರತ ದೇಶವಾಗಿದೆ. ಯಾರು ಯಾರಿಗೂ ಬೆದರಿಕೆ ಹಾಕುವಂತಿಲ್ಲ. ವ್ಯಾಪಾರ ವಹಿವಾಟು ನಡೆಸಲು ಬೆದರಿಕೆ ಹಾಕುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್

    ಮುಸಲ್ಮಾನರಿಗೆ ವ್ಯಾಪಾರ ಬಹಿಷ್ಕಾರ ವಿಚಾರವಾಗಿ ಮಾತನಾಡಿ, ಕಾನೂನು ಇದಕ್ಕೆ ಅವಕಾಶ ಕೊಡುವುದಿಲ್ಲ. ಯಾರದೇ ಜಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಮನೆ, ಖಾಸಗಿ ಕಾರ್ಯಕ್ರಮವಾದರೆ ಅದು ಒಕೆ ಆದರೆ, ಇದು ಕಾನೂನು ವಿರುದ್ಧವಾದ ನಡವಳಿಕೆ. ಸರ್ಕಾರ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕರಾವಳಿ ಮಲೆನಾಡು ಬಯಲುಸೀಮೆ ಎಲ್ಲಾದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ

    ಸಿದ್ದರಾಮಯ್ಯ ಡಿಕೆಶಿ ಕಾಂಗ್ರೆಸ್ ಮುಗಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮೊದಲು ಆಯಮ್ಮ ಬಿಜೆಪಿಯನ್ನು ಮುಗಿಸದಿದ್ದರೆ ಸಾಕು ಎಂದು ಕಿಡಿಕಾರಿದ್ದಾರೆ. ಚುನಾವಣೆಗೆ ಬೇರೆ ಬೇರೆ ಇಶ್ಯೂಗಳಿವೆ. ಮೂರು ವರ್ಷದ ಸಾಧನೆಯನ್ನು ಇವರು ಚುನಾವಣೆಯ ವಿಷಯ ಮಾಡಲಿ. ಭಾವನಾತ್ಮಕ ವಿಚಾರಗಳನ್ನು ಚುನಾವಣೆಗೆ ತರಬೇಡಿ ಎಂದು ಬಿಜೆಪಿ ಹಿಂದೂ ಅಸ್ತ್ರಕ್ಕೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

  • ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್

    ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್

    ಕಾರವಾರ: ಮದರಸಾಗಳನ್ನು ಶಿಕ್ಷಣ ಪದ್ಧತಿಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಉತ್ತರಕನ್ನಡ ಜಿಲ್ಲೆಯಲ್ಲಿ ಹೇಳಿದರು.

    ಕುಮಟಾ ತಾಲೂಕಿನ ಗೋಕರ್ಣದ ವಿಷ್ಣುಪೀಠ ವಿದ್ಯಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮದರಸಾ ಶಿಕ್ಷಣದಿಂದಾಗಿ ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣ ಪದ್ಧತಿಯಿಂದ ದೂರ ಉಳಿಯಬಾರದು. ಅವರು ಸಹ ನಮ್ಮ ಎಲ್ಲಾ ಮಕ್ಕಳಂತೆ ಈ ಶಿಕ್ಷಣ ಪದ್ಧತಿಗೆ ಬರಬೇಕು ಎನ್ನುವ ಕಾರಣದಿಂದ ಮುಂದಿನ ದಿನದಲ್ಲಿ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ತಿಳಿಸಿದರು.

    ಈ ಬಗ್ಗೆ ಅಲ್ಪಸಂಖ್ಯಾತ ನಾಯಕರ ಗಮನಕ್ಕೂ ಬಂದಿದೆ. ಮದರಸಾಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗಿ ನಮ್ಮ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಇವತ್ತಿನ ಪ್ರಪಂಚದಲ್ಲಿ ಬದುಕುವುದಾದರೇ ಈ ಶಿಕ್ಷಣ ಪದ್ಧತಿ ಬೇಕು. ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಒಂದಷ್ಟು ಅವಕಾಶ ಮಾಡಿಕೊಟ್ಟಿದ್ದೇವೆ. ಆ ಪ್ರಕಾರವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಬಸ್ ಅವಘಡದಲ್ಲಿ ಕೂಲಿನಾಲಿ ಮಾಡುವ ಜನರಿದ್ದರೆ ಹೆಚ್ಚಿನ ಪರಿಹಾರ ನೀಡಬೇಕು: ಹೆಚ್‍ಡಿಕೆ

    ಹಿಜಬ್ ತೀರ್ಪಿನಿಂದ ಶಾಲಾ ಕಾಲೇಜಿಗೆ ಬಾರದೇ ಇರುವವರ ಕುರಿತು ಮಾತನಾಡಿದ ಅವರು, ಶಾಲೆಗೆ ಬರಲೇಬೇಕು ಎಂದು ಒತ್ತಾಯಿಸಿ ಅವರ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಶೇ.99.9ರಷ್ಟು ಆ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಒಂದು ಪರಸೆಂಟ್ ಮಾತ್ರ ಬರುತ್ತಿಲ್ಲ. ಅವರನ್ನು ಶಾಲೆಗೆ ಕರೆಸುವಂತಹ ಪ್ರಯತ್ನ ಮಾಡುತ್ತೇವೆ. ಆದರೆ ಎಳೆದುಕೊಂಡು ಬರುವ ಪ್ರಯತ್ನ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಎನ್‍ಇಪಿ ಬಗ್ಗೆ ಪಾಲಕರಲ್ಲಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. 20 ಸಾವಿರ ಶಾಲೆಯಲ್ಲಿ ಮಾತ್ರ ಪ್ರಾರಂಭ ಮಾಡುತ್ತಿದ್ದೇವೆ. ಮಿಕ್ಕ ಶಾಲೆಯಲ್ಲಿ ಈಗ ಹೇಗೆ ನಡೆಯುತ್ತದೆಯೋ ಹಾಗೆಯೇ ನಡಿಯುತ್ತದೆ. ಸಂಖ್ಯೆ ಮತ್ತು ಸಾಕ್ಷರತೆಗೆ ಹೆಚ್ಚು ಒತ್ತನ್ನು ಕೊಡುತ್ತಿದ್ದೇವೆ. ನಮ್ಮಲ್ಲಿ 48 ಸಾವಿರ ಶಾಲೆಗಳಿದ್ದರೂ ಮಕ್ಕಳ ಸಂಖ್ಯೆ ಕಡಿಮೆ ಇದೆ. ಎಲ್ಲಿ ಮಕ್ಕಳು ಹೆಚ್ಚು ಇರುತ್ತಾರೋ ಅಲ್ಲಿ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಬಿಜೆಪಿ ಮಾದರಿಯಲ್ಲೇ ನಾವು ಮುಂದಿನ ಚುನಾವಣೆ ಎದುರಿಸುತ್ತೇವೆ. ಬಸವರಾಜ್ ಹೊರಟ್ಟಿಯವರು ಬಿಜೆಪಿ ವೈಚಾರಿಕ ಸಂಘಟನೆ ವಿಚಾರ ಒಪ್ಪಿಕೊಂಡು ಬಂದರೆ ಸ್ವಾಗತಿಸುತ್ತೇವೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಮುಸ್ಲಿಮರ ಮತಗಳು ಬೇಕಿದೆ – ನಾವು ಮೈತ್ರಿಗೆ ಸಿದ್ಧ ಎಂದ ಜಲೀಲ್

    ಭಗವದ್ಗೀತೆ ಪಠ್ಯ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಕೊರತೆ ಇದೆ. ಇದು ಎಲ್ಲರಿಗೂ ಅರಿವಾಗಿದೆ. ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ನೈತಿಕ ಶಿಕ್ಷಣದ ತರಗತಿಯನ್ನು ಮಾಡುತ್ತೇವೆ. ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಎಂದು ಶಿಕ್ಷಣ ತಜ್ಞರ ಸಲಹೆ ಪಡೆದು ಮಾಡುತ್ತೇವೆ. ಭಗವದ್ಗೀತೆ ಧಾರ್ಮಿಕ ಅಲ್ಲ ಎಂದು ಪ್ರತಿಕ್ರಿಯಿಸಿದರು.

  • ನಾನು ಭಗವದ್ಗೀತೆ ವಿರೋಧಿಯಲ್ಲ: ಸಿದ್ದರಾಮಯ್ಯ

    ನಾನು ಭಗವದ್ಗೀತೆ ವಿರೋಧಿಯಲ್ಲ: ಸಿದ್ದರಾಮಯ್ಯ

    ಮಂಗಳೂರು: ನಾನು ಭಗವದ್ಗೀತೆ, ಬೈಬಲ್, ಕುರಾನ್ ಯಾವುದರ ವಿರೋಧಿಯೂ ಅಲ್ಲ. ನಮ್ಮದು ಬಹುಸಂಸ್ಕೃತಿ ಇರುವ ರಾಷ್ಟ್ರ, ನಮ್ಮಲ್ಲಿ ಸಹಬಾಳ್ವೆ ಇರಬೇಕು. ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇರೋನು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನದ್ದು ಸಾಫ್ಟ್ ಮತ್ತು ಹಾರ್ಡ್ ಹಿಂದುತ್ವ ಅಂತ ಇಲ್ಲ. ನಾವು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು. ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಕೊಡುತ್ತೇವೆ ಎಂದರು.

    ಶಾಲೆಗಳಲ್ಲಿ ಭಗವದ್ಗೀತೆ ಕಲಿಸೋ ಬಗ್ಗೆ ಚಿಂತನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೈತಿಕ ಶಿಕ್ಷಣ ಕಲಿಸಲು ನಮ್ಮ ಯಾವುದೇ ತಕರಾರು ಇಲ್ಲ. ನಾವು ಸಂವಿಧಾನದ ಜಾತ್ಯಾತೀತ ತತ್ವಗಳನ್ನು ನಂಬುತ್ತೇವೆ. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನು ಹೇಳಿಕೊಟ್ಟರೂ ನಮ್ಮ ವಿರೋಧ ಇಲ್ಲ. ಆದರೆ ಮಕ್ಕಳಿಗೆ ಅಗತ್ಯವಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು. ಇದನ್ನೂ ಓದಿ: ಖಾಲಿ ಸ್ಟ್ರಾಲರ್ಸ್ ಸಾಲಾಗಿಟ್ಟು ಯುದ್ಧದಲ್ಲಿ ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಿದ ಉಕ್ರೇನ್

    ಭಗವದ್ಗೀತೆ ಬಗ್ಗೆ ಸರ್ಕಾರ ತೀರ್ಮಾನ ಮಾಡಿಲ್ಲ, ಗುಜರಾತ್‍ನಲ್ಲಿ ಮಾಡಿದ್ದಾರೆ ಅಷ್ಟೇ. ಭಗವದ್ಗೀತೆ ಮನೆಯಲ್ಲಿ ಹೇಳಿಕೊಡ್ತಾರೆ, ದೇವರ ಬಗ್ಗೆ ಹೇಳ್ತಾರೆ. ರಾಮಾಯಣ, ಮಹಾಭಾರತ ಎಲ್ಲಾನೂ ಮನೆಯಲ್ಲಿ ಹೇಳಿ ಕೊಡ್ತಾರೆ. ನೈತಿಕ ಶಿಕ್ಷಣ ಬೇಕು, ಆದರೆ ಸಂವಿಧಾನಕ್ಕೆ ವಿರುದ್ಧವಾಗಿ ಯಾವುದೂ ನಡೆಯಬಾರದು ಎಂದು ತಿಳಿಸಿದರು.

    ಹಿಜಬ್ ವಿರೋಧಿಸಿ ಮುಸ್ಲಿಂ ಸಂಘಟನೆಗಳ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸಮಾಧಾನ ಇರೋರು ಬಂದ್ ಮಾಡಿದ್ದಾರೆ. ಕೋರ್ಟ್ ನಿರ್ಧಾರ ವಿರೋಧಿಸಬಾರದು. ಯಾವ ಧರ್ಮದವರೂ ಕೋಮುವಾದ ಮಾಡಬಾರದು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಕೆಲಸ ಆಗಲಿ ಎಂದು ಸಲಹೆ ನೀಡಿದರು.

    ಕಾಶ್ಮೀರ್ ಫೈಲ್ ಚಿತ್ರ ಕನ್ನಡಕ್ಕೆ ಡಬ್ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಸಿನಿಮಾ ಮಾಡಿ ತೋರಿಸೋದನ್ನ ಬೇಡ ಅನ್ನಲ್ಲ, ಆದರೆ ಸತ್ಯ ತೋರಿಸಲಿ. ಕಾಶ್ಮೀರದ ಉಗ್ರರ ಕೃತ್ಯ, ಪಂಡಿತರ ಜೊತೆಗೆ ಬೇರೆ ಯಾರಿಗೆ ಸಮಸ್ಯೆ ಆಗಿತ್ತು ಹೇಳಬೇಕು. ಆಗ ಯಾರ ಸರ್ಕಾರ ಇತ್ತು, ಏನ್ ಮಾಡಿತ್ತು ಸರ್ಕಾರ ಎಂದು ತೋರಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ: ಪ್ರತಾಪ್ ಸಿಂಹ

    ಕಾಶ್ಮೀರ್ ಫೈಲ್ಸ್ ರೀತಿಯೇ ಗುಜರಾತ್ ಘಟನೆ, ಲಖಿನ್ ಪುರ್ ಘಟನೆ ಎಲ್ಲಾನೂ ತೋರಿಸಬೇಕು. ನಾನು ಸಿನಿಮಾಗೆ ಹೋಗಲ್ಲ, ಥಿಯೇಟರ್ ಹೋಗಿ ಸಿನಿಮಾ ನೋಡಲ್ಲ. ಬಹಳ ಸಿನಿಮಾ ನೋಡಲ್ಲ, ಹಾಗೇನೇ ಕಾಶ್ಮೀರ್ ಫೈಲ್ ಕೂಡ ನೋಡಲ್ಲ ಎಂದರು.

  • ಭಗವದ್ಗೀತೆ ಅಳವಡಿಸುವುದು ಕೊರೊನಾ ಮಹಾಮಾರಿಗಿಂತ ಮಾರಕ: ತನ್ವೀರ್ ಸೇಠ್

    ಭಗವದ್ಗೀತೆ ಅಳವಡಿಸುವುದು ಕೊರೊನಾ ಮಹಾಮಾರಿಗಿಂತ ಮಾರಕ: ತನ್ವೀರ್ ಸೇಠ್

    ಮೈಸೂರು: ಭಗವದ್ಗೀತೆಯನ್ನು ಪಠ್ಯಕ್ರಮವಾಗಿ ಅಳವಡಿಸುವುದು ಕೊರೊನಾ ಮಹಾಮಾರಿಗಿಂತ ಮಾರಕ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು.

    ರಾಜ್ಯಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ನಿರ್ಧಾರ ಕೊರೊನಾ ಮಹಾಮಾರಿಗಿಂತಲೂ ಮಾರಕ. ಇಂತಹ ನಿರ್ಧಾರಗಳಿಂದ ಮಕ್ಕಳು ಶೈಕ್ಷಣಿಕವಾಗಿ ಕುಂಠಿತರಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ : ಪ್ರತಾಪ್ ಸಿಂಹ

    ಚುನಾವಣೆ ವೇಳೆ ರಾಜಕಾರಣ ಮಾಡೋದು ಸರಿ. ಅಧಿಕಾರ ಬಂದ ಮೇಲೆ ಜಾತ್ಯಾತೀತವಾಗಿ ನಡೆದುಕೊಳ್ಳುಬೇಕು. ಶಿಕ್ಷಣ ಬಿಟ್ಟು ಸರ್ಕಾರ ಅನ್ಯ ವಿಚಾರಗಳ ಬಗ್ಗೆ ಗಮನಹರಿಸಬಾರದು. ಈಗಾಗಲೇ ಕೊರೊನಾದಿಂದ ಎರಡು ವರ್ಷ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ. ಶಾಲೆಯಲ್ಲಿ ಸಮಾನತೆ ಕಾಪಾಡಿಕೊಳ್ಳಬೇಕು. ನ್ಯಾಯಾಲಯದ ತೀರ್ಪು ಸಹ ಸ್ಪಷ್ಟವಾಗಿ ಇದನ್ನೇ ಹೇಳಿದೆ ಎಂದು ತಿಳಿಸಿದರು.

    ಸರ್ಕಾರ ಸಹ ಮತಾಂತರ ಕಾಯಿದೆಯಲ್ಲಿ ಬಲವಂತದ ಮತಾಂತರ ಅಪರಾಧ ಅಂತ ಹೇಳಿಕೆ ನೀಡಿದೆ. ಇದೀಗ ಶಿಕ್ಷಣದಲ್ಲಿ ಧರ್ಮದ ವಿಚಾರ ಅಳವಡಿಸುವ ಮೂಲಕ ನಿಯಮ ಉಲ್ಲಂಘನೆ ಮಾಡ್ತಿದೆ. ಭಗವದ್ಗೀತೆ ಅಳವಡಿಸೋದ್ರಿಂದ ಏನಾಗುತ್ತೆ, ಏನಾಗಲ್ಲ ಅನ್ನೊದು ಪ್ರಶ್ನೆ ಅಲ್ಲ. ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಇದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ

  • ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ: ಪ್ರತಾಪ್ ಸಿಂಹ

    ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ: ಪ್ರತಾಪ್ ಸಿಂಹ

    ಮಡಿಕೇರಿ: ಗುಜರಾತ್‍ನಲ್ಲಿ  ಭಗವದ್ಗೀತೆ ಪಠ್ಯಕ್ಕೆ ಸೇರಿಸಲಾಗುವುದು ಎಂದು ಘೋಷಣೆಯಾದ ಬೆನ್ನಲ್ಲೇ ರಾಜ್ಯದಲ್ಲಿಯೂ ಈ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ ಎಂದು ಉತ್ತರಿಸಿದರು.

    ಭಗವದ್ಗೀತೆ ಪಠ್ತಪುಸ್ತಕಗಳಲ್ಲಿ ಸೇರಿಸುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ. ಖುರಾನ್ ಮತ್ತು ಬೈಬಲ್ ಧಾರ್ಮಿಕ ಗ್ರಂಥಗಳು. ಭಗವದ್ಗೀತೆಯಲ್ಲಿ ಜೀವನದ ಪಾಠ ಇದೆ, ನೈತಿಕತೆ ಇದೆ. ಅದು ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಭೋದಿಸುತ್ತದೆ. ಭಗವದ್ಗೀತೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಎಂದು ವಿವರಿಸಿದರು. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    ಬೇರೆ ಧರ್ಮಗ್ರಂಥಗಳಂತೆ ಭಗವದ್ಗೀತೆಯನ್ನು ಭಾವಿಸಬೇಡಿ. ಇದನ್ನು ಕಂಡಿತ ಪಠ್ಯದಲ್ಲಿ ಅಳವಡಿಸಲೇಬೇಕು ಎಂದು ಕೇಳಿಕೊಂಡರು.

    ಹಿಜಬ್ ವಿಚಾರದಲ್ಲಿ ಕೋರ್ಟ್ ತೀರ್ಪು ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮನೇ ಸುಪ್ರೀಂ ಅಂತ ಹೇಳುತ್ತಾರೆ. ದೇಶಕ್ಕಿಂತ ಧರ್ಮನೇ ಮುಖ್ಯ ಎನ್ನುತ್ತಿದ್ದಾರೆ. ಇದು ಹಿಜಬ್ ವಿಷಯದಲ್ಲಿ ಮತ್ತೊಮ್ಮೆ ಸಾಭೀತಾಗಿದೆ. ಕೋರ್ಟ್ ತೀರ್ಪನ್ನೇ ಧಿಕ್ಕರಿಸಿದ್ದಾರೆ. ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಅವರಿಗೆ ಅಂದೇ ಇದೆಲ್ಲಾ ಗೊತ್ತಾಗಿತ್ತು. ನಮ್ಮ ಜನರಿಗೆ ಈಗ ಅರ್ಥವಾಗಿದೆ ಎಂದು ಬಂದ್‍ಗೆ ಕರೆ ನೀಡಿದವರಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ

  • ಶಾಲಾ ಪಠ್ಯದಲ್ಲಿ ಭಗವದ್ಗೀತೆ – ಶಿಕ್ಷಣ ಸಚಿವರ ವಿರುದ್ಧ ಹೆಚ್‌ಡಿಕೆ ಕಿಡಿ

    ಶಾಲಾ ಪಠ್ಯದಲ್ಲಿ ಭಗವದ್ಗೀತೆ – ಶಿಕ್ಷಣ ಸಚಿವರ ವಿರುದ್ಧ ಹೆಚ್‌ಡಿಕೆ ಕಿಡಿ

    ಹಾಸನ: ರಾಜ್ಯದ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿಸಿ ನಾಗೇಶ್ ನೀಡಿರುವ ಹೇಳಿಕೆಗೆ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.

    ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಟಿ. ಮಾಯಗೌಡನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಭಗವದ್ಗೀತೆಯನ್ನು ಕುಟುಂಬದಲ್ಲೇ ನಮ್ಮ ತಂದೆ-ತಾಯಿ, ಹಿರಿಯರು ಹೇಳಿಕೊಡುತ್ತಾರೆ. ಸರ್ಕಾರದ ಕೆಲಸ ಏನಿದ್ದರೂ ಉತ್ತಮ ಶಿಕ್ಷಣ ನೀಡಿ ಮಕ್ಕಳ ಬದುಕನ್ನು ಕಟ್ಟಿಕೊಡುವುದು. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಂತಹ ವಿಚಾರಗಳು, ಪಠ್ಯಗಳು ಶಾಲೆಗಳಲ್ಲಿ ಇರಬೇಕು ಎಂದರು. ಇದನ್ನೂ ಓದಿ: ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು: ಹೆಚ್‍ಡಿಡಿ

    ನಾನು ಹಿಂದೂ ಬಂಧುಗಳಲ್ಲಿ ಮನವಿ ಮಾಡುತ್ತೇನೆ. ನಾನು ಹುಟ್ಟಿರುವುದೂ ಹಿಂದೂ ಕುಟುಂಬದಲ್ಲೇ. ನಮ್ಮ ಕುಟುಂಬ ದೈವದಲ್ಲಿ ಬಹಳ ನಂಬಿಕೆ ಇಟ್ಟು ಶ್ರದ್ಧೆಯಿಂದ ನಡೆದುಕೊಳ್ಳುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ನಮ್ಮ ಮಕ್ಕಳಿಗೆ ಬೇಕಿರುವುದು ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಶಿಕ್ಷಣ. ಮೊದಲು ಆ ಕಡೆ ಗಮನ ಕೊಡಿ ಎಂದು ಹೇಳಿದರು.

    ರಾಜ್ಯದಲ್ಲಿ ಕೇವಲ ಮತಬ್ಯಾಂಕ್‌ಗಾಗಿ ಇಂತಹ ಸೂಕ್ಷ್ಮ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಒಂದು ಕಾಲದಲ್ಲಿ ವಿದ್ಯೆ ಎನ್ನುವುದು ಒಂದು ವರ್ಗಕ್ಕೆ ಮಾತ್ರ ಸೇರಿದ್ದು ಎನ್ನುವ ವಾತಾವರಣ ಇತ್ತು. ಇಂದು ಅದೇ ವರ್ಗದ ಜನರು ಈ ರೀತಿಯ ವಾತಾವರಣ ಎಲ್ಲರ ಮೇಲೂ ಹೇರಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

    ಮಕ್ಕಳು ತಮ್ಮ ಜ್ಞಾನ ಬೆಳೆಸಿಕೊಳ್ಳಲು, ಉತ್ತಮ ವಿದ್ಯಾಭ್ಯಾಸ ಮಾಡಲು ಸಾಕಷ್ಟು ನ್ಯೂನತೆಗಳಿವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆಗಳಿವೆ. ಮೊದಲು ಅವುಗಳನ್ನು ಸರಿ ಮಾಡಬೇಕು. ಇದನ್ನು ಮಾಡುವುದು ಬಿಟ್ಟು ಸೂಕ್ಷ್ಮ ವಿಷಯಗಳನ್ನು ಕೆದಕಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಎಂದು ಭಗವದ್ಗೀತೆಯಲ್ಲಿ ಹೇಳಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ

    ಭಗವದ್ಗೀತೆಯಲ್ಲಿ ಇರುವುದು ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು. ಅರ್ಜುನ ಸಂಬಂಧಗಳ ವ್ಯಾಮೋಹಕ್ಕೆ ಸಿಲುಕಿ ಯುದ್ಧ ಮಾಡಲು ನಿರಾಕರಿಸಿ ಶಸ್ತ್ರ ತ್ಯಜಿಸಲು ಮುಂದಾದಾಗ ಶ್ರೀಕೃಷ್ಣ ಪರಮಾತ್ಮ ಆತನ ಕರ್ತವ್ಯಗಳನ್ನು ನೆನಪಿಸುತ್ತಾನೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೇ. ಕುಟುಂಬದಲ್ಲಿ ನೆಮ್ಮದಿ, ಸಾಮರಸ್ಯದ ಜೀವನ ಬೇಕು. ದೊಡ್ಡವರು ಚಿಕ್ಕವರೆನ್ನುವ ಗೌರವಭಾವನೆ ಬೇಕು ಎಂದು ಹೇಳಿದರು.

    ರಾಜ್ಯದಲ್ಲಿ ಸಮಸ್ಯೆಗಳು ಸಾಕಷ್ಟು ಇವೆ. ರೈತರ ಕಷ್ಟಗಳು ದೊಡ್ಡ ಪ್ರಮಾಣದಲ್ಲಿ ಇವೆ. ಈ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದು ಸಲಹೆ ನೀಡಿದರು.

  • ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ

    ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ

    ಬೆಂಗಳೂರು: ಎಲ್ಲ ತಿಳಿದವರೇ ಸೇರಿ ಪಠ್ಯ ಕ್ರಮ ರಚನೆ ಮಾಡಿದ್ದು, ಹೊಸದಾಗಿ ಸೇರಿಸೋ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಗವದ್ಗೀತೆ ಪಠ್ಯಕ್ಕೆ ಸೇರಿಸುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

    ಪಠ್ಯಕ್ರಮಗಳಲ್ಲಿ ಭಗವದ್ಗೀತೆಯನ್ನು ಸೇರಿಸಬೇಕು ಎಂಬುದನ್ನು ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಆರಂಭದಲೇ ನಾನು ಎನ್‍ಇಪಿ ವಿರೋಧ ಮಾಡಿರುವವನು. ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದಾರೆ. ಹೊಸದಾಗಿ ಏನನ್ನೂ ಸೇರಿಸುವ ಅವಶ್ಯಕತೆ ಇಲ್ಲ. ಎಲ್ಲ ಧರ್ಮದ ಆಚಾರ ವಿಚಾರಗಳನ್ನು ಜನ ತಿಳಿದುಕೊಳ್ಳೋದ್ರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    ಈಗಾಗಲೇ ಭಗವದ್ಗೀತೆ, ರಾಮಾಯಣ, ಇತರ ಧರ್ಮದ ವಿಚಾರಗಳು ಪಠ್ಯದಲ್ಲಿ ಇವೆ. ಕೆಂಗಲ್ ಹನುಮಂತಯ್ಯ ಸಿಎಂ ಆಗಿದ್ದಾಗ ಅವರು ಆಗಲೇ ಎರಡು ರೂಪಾಯಿಗೆ ಭಗವದ್ಗೀತೆ ಪ್ರತಿಗಳನ್ನು ಹಂಚಿದ್ದರು. ಇವರು ಹೊಸದಾಗಿ ದೊಡ್ಡಾದಾಗಿ ಏನ್ ಮಾಡಬೇಕಾಗಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

  • ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

    ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

    – ಮೋದಿ ಒಳ್ಳೆಯ ಪರಿಕಲ್ಪನೆ ಜಾರಿಗೆ ತಂದಿದ್ದಾರೆ

    ಚಾಮರಾಜನಗರ: ದೇಶಾದ್ಯಂತ ಸಂಚಲನ ಮೂಡಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಎಲ್ಲ ರಾಜಕೀಯ ಮುಖಂಡರು ನೋಡುತ್ತಿದ್ದು, ಸಿನಿಮಾ ನೋಡಬೇಕೆಂದು ಜನರಿಗೆ, ನೌಕರರಿಗೆ ಉತ್ತೇಜನವನ್ನು ಕೊಡುತ್ತಿದ್ದಾರೆ. ಅಂತೆಯೇ ಇದೀಗ ಸಚಿವ ವಿ. ಸೋಮಣ್ಣ ಕೂಡ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಚ್ಚಿ ಹೋಗಿರುವ ಇತಿಹಾಸವನ್ನು ಜನರಿಗೆ ತಿಳಿಸಿಕೊಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅಂತಹ ಘಟನೆಗಳು ನಡೆಯಬಾರದು ಎಂಬ ದೃಷ್ಟಿಯಿಂದ ಈ ಚಿತ್ರ ತಯಾರಾಗಿದೆ. ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನಾನೊಬ್ಬ ಎಲ್ ಬೋರ್ಡ್. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಪಠ್ಯ ಪುಸ್ತಕ ರಚನೆಗೆ ಸಮಿತಿಯಿದೆ. ಸಮಿತಿ ಅವರು ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ತಾರೆ. ಮುಂದಿನ ಪೀಳಿಗೆಗೆ ಏನು ತಿಳಿಸಬೇಕು ಎಂಬುದರ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.

    ವಂಶ ರಾಜಕಾರಣ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಪ್ರಧಾನಿ ಮೋದಿ ಒಳ್ಳೆಯ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ನನ್ನ ಮಗನಿಗೆ ಅದೃಷ್ಟ ಇದ್ರೆ ಶಾಸಕನಾಗುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬೀಳುತ್ತಾ ಬ್ರೇಕ್..? 

  • ಭಗವದ್ಗೀತೆ ಪಠ್ಯ ಸೇರ್ಪಡೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ: ಬಿ.ಸಿ. ನಾಗೇಶ್

    ಭಗವದ್ಗೀತೆ ಪಠ್ಯ ಸೇರ್ಪಡೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ: ಬಿ.ಸಿ. ನಾಗೇಶ್

    ಬೆಂಗಳೂರು: ರಾಜ್ಯದ ಪಠ್ಯದಲ್ಲೂ ಭಗವದ್ಗೀತೆ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ನಿರ್ಧಾರಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.

    ಈ ಕುರಿತಂತೆ ಪಬ್ಲಿಕ್ ಟಿ.ವಿ ಜೊತೆಗೆ ಮಾತನಾಡಿದ ಅವರು, ಮೈಸೂರು ಮಹಾರಾಜರ ಮತ್ತು ಕರ್ನಾಟಕದ ಇತಿಹಾಸದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಎಲ್ಲಾ ಪೋಷಕರು ನಮ್ಮ ಮಕ್ಕಳು ಜ್ಞಾನ ಸಂಪಾದನೆ ಮಾಡುತ್ತಿದ್ದಾರೆ. ಜ್ಞಾನಶೀಲರಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ ಹಳ್ಳಿಗಳಲ್ಲಿ ರಾಮಾಯಣ, ಮಹಾಭಾರತ ನಾಟಕಗಳು ನಡೆಯುತ್ತಿದ್ದೇವು. ಹಾಗಾಗಿ ಎಲ್ಲರಲ್ಲಿಯೂ ಸಂಸ್ಕಾರ ಬೆಳೆಯುತ್ತಿತ್ತು. ಆದರೀಗ ಇದರ ಕೊರತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    ಇದೇ ವೇಳೆ ಗುಜರಾತ್ ಮಾದರಿಯಲ್ಲಿ ರಾಜ್ಯದ ಪಠ್ಯದಲ್ಲೂ ಭಗವದ್ಗೀತೆ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಗುಜರಾತ್ ಸರ್ಕಾರದ ನಿರ್ಧಾರ ಉತ್ತಮವಾಗಿ ಇದೆ. ಮಕ್ಕಳಿಗೆ ಮಾರಲ್ ಸೈನ್ಸ್ ವಿಷಯಗಳು ಇವತ್ತು ಬೋಧನೆ ಆಗುತ್ತಿಲ್ಲ. ಹೀಗಾಗಿ ಭಗವದ್ಗೀತೆ ಅಂಶಗಳನ್ನು ತಿಳಿಸುವುದು ಬಹಳ ಮುಖ್ಯ. ರಾಜ್ಯದ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಬಗ್ಗೆ ಸಿಎಂ, ಶಿಕ್ಷಣ ತಜ್ಞರು, ಸಲಹಾ ಸಮಿತಿಗಳ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ- ಕಾಲೇಜುಗಳಲ್ಲಿ ಭಗವದ್ಗೀತೆ ಕಡ್ಡಾಯ ಮಾಡಲು ಗುಜರಾತ್ ಸರ್ಕಾರ ಮುಂದಾಗಿದ್ದು, ಆರನೇ ತರಗತಿಯಿಂದ 12ನೇ ತರಗತಿವರೆಗೂ ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು ಬೋಧಿಸುವುದು, ಪಠಣ ಮಾಡಲಾಗುತ್ತದೆ. ಭಗವದ್ಗೀತೆ ಎನ್ನುವುದು ಕೇವಲ ಗ್ರಂಥವಲ್ಲ. ಅದೊಂದು ಜೀವನ ವಿಧಾನ. ನಮ್ಮ ಸಂಸ್ಕೃತಿಯ ಪ್ರತೀಕ. ಇದು ಎಲ್ಲರಿಗೂ ಗೊತ್ತಾಗುವುದು ಅತ್ಯಗತ್ಯ ಎಂದು ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ಹೇಳಿದ್ದರು. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ