Tag: BGP

  • ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್‍ನ ಶಾಸಕರು ಬರಲು ರೆಡಿ ಇದ್ದಾರೆ- ನಾರಾಯಣಗೌಡ

    ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್‍ನ ಶಾಸಕರು ಬರಲು ರೆಡಿ ಇದ್ದಾರೆ- ನಾರಾಯಣಗೌಡ

    ಮಂಡ್ಯ: ಬಿಜೆಪಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಶಾಸಕರಲ್ಲಿ ಕೆಲವರು ಬರಲು ರೆಡಿ ಇದ್ದಾರೆ. ಯಾರು ಯಾರು ಬರುತ್ತಾರೆ ಎಂದು ಈಗಲೇ ಹೇಳಿ ಬಿಟ್ಟರೆ ಮಾಧ್ಯಮದವರು ಬ್ಲಾಸ್ಟ್ ಮಾಡಿಬಿಡುತ್ತಾರೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ  ಕೆಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸಂಪರ್ಕದಲ್ಲಿ ಇರುವುದು ಸತ್ಯ. ಯಾರು ಯಾರು ಇದ್ದಾರೆ ಎಂದು ಬಹಿರಂಗ ಪಡಿಸಲು ಈಗ ಸಾಧ್ಯವಿಲ್ಲ. ಆ ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ ಎಂದು ಹೇಳಿದ್ದಾರೆ.

    ಶಾಸಕರು ಬಿಜೆಪಿಗೆ ಬರಲು ಸಿದ್ದವಾಗಿದ್ದಾರೆ. ಆದರೆ ನಮಗೆ ಅವಶ್ಯಕತೆ ಇಲ್ಲ. ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಹೀಗಾಗಿ ಅವರು ಯಾರು ಎಂದು ಸಮಯ ಬಂದಾಗ ಹೇಳುತ್ತೇನೆ. ಇನ್ನೂ 25 ವರ್ಷ ಬಿಜೆಪಿ ಸರ್ಕಾರವನ್ನು ಯಾರು ಕೂಡ ಟಚ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.

    ರಾಮ ಮಂದಿರ ನಿಧಿ ಸಂಗ್ರಹಣೆ ವಿಚಾರದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹಣ ಕೊಡುವುದಕ್ಕೆ ಇಷ್ಟ ಇಲ್ಲ ಎಂದರೆ ಕೊಡುವುದು ಬೇಡ. ಅದನ್ನು ಬಿಟ್ಟು ಈ ರೀತಿ ಮಾತನಾಡುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ದೇವಸ್ಥಾನ ಕಟ್ಟಲು ಅನುಮತಿ ನೀಡಿದೆ. ಹಣ ನೀಡದ ಮನೆಗಳಿಗೆ ಯಾವುದೇ ರೀತಿಯ ಮಾರ್ಕ್ ಮಾಡುತ್ತಿಲ್ಲ, ಯಾವ ಕಾರಣಕ್ಕೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

  • ಸಿದ್ದರಾಮಯ್ಯ ನಮ್ಮ ನಾಯಕ – ರಮೇಶ್ ಜಾರಕಿಹೊಳಿ

    ಸಿದ್ದರಾಮಯ್ಯ ನಮ್ಮ ನಾಯಕ – ರಮೇಶ್ ಜಾರಕಿಹೊಳಿ

    – ದಿನಕ್ಕೆ 2 ಬಾರಿ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ
    – ಮನಸ್ಸು ಮಾಡಿದ್ರೆ 5 ಕೈ ಶಾಸಕರು ರಾಜೀನಾಮೆ ನೀಡ್ತಾರೆ

    ಬೆಳಗಾವಿ: ದಿನಕ್ಕೆ ಎರಡು ಬಾರಿ ಸಿದ್ದರಾಮಯ್ಯ ಜತೆಗೆ ಮಾತಾಡುತ್ತೇನೆ. ಇಂದಿಗೂ ಮಾತನಾಡುತ್ತೇನೆ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳುವ ಮೂಲಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

    ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗ್ರಾ.ಪಂ ಸದಸ್ಯರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಿಸಿದ ಮಾತನಾಡಿದ ಅವರು ನಾನು ಮನಸ್ಸು ಮಾಡಿದ್ರೇ 24 ಗಂಟೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರನ್ನ ರಾಜೀನಾಮೆ ಕೊಡಿಸುತ್ತೇನೆ. ನೀವು ನಂಬಲು ಆಗಲ್ಲಾ. ಅಂತ ದೊಡ್ಡ ನಾಯಕರು ಬಿಜೆಪಿ ಬರಲು ತಯಾರಿದ್ದಾರೆ. ಟಾಪ್ 1 ರಿಂದ ಐದರ ವರೆಗಿನ ಕಾಂಗ್ರೆಸ್ ನಾಯಕರನ್ನ ಕರೆತರುತ್ತೇನೆ. ಅವರ ಹೆಸರನ್ನ ಕೇಳಿದ್ರೇ ನೀವು ಕೂಡ ಗಾಬರಿಯಾಗುತ್ತೀರಿ. ಕಾಂಗ್ರೆಸ್‍ನ ಮಹಾನ್ ನಾಯಕರನ್ನ ಬಿಜೆಪಿಗೆ ತರುತ್ತೇನೆ ಎಂದು ಹೇಳಿದ್ದಾರೆ

    ನಾವು ಬಿಜೆಪಿಯಲ್ಲಿ ಆನಂದದಿಂದ ಕೆಲಸ ಮಾಡುತ್ತಿದ್ದೇವೆ. ಹದಿನೇಳು ಜನರು ಶಾಸಕರು ಬಿಜೆಪಿಯಲ್ಲಿ ಗಟ್ಟಿಯಾಗಿರುತ್ತೇವೆ. ಕಾಂಗ್ರೆಸ್ ನಲ್ಲಿ ನಮ್ಮನ್ನ ಮೂಲೆಯಲ್ಲಿ ಕುಡಿಸಿದ್ದರು. ನಾವು ಮತ್ತೆ ಕಾಂಗ್ರೆಸ್‍ಗೆ ಹೋಗುವುದಿಲ್ಲ ಎಂದಿದ್ದಾರೆ.

    ಒಬ್ಬ ಹೆಣ್ಣು ಮಗಳಿದ್ದಾಳೆ ಅವರಿಗೆ ದೇವರು ಒಳ್ಳೆಯದು ಮಾಡಲಿ. ತಲೆ ಕೆಡಿಸಿಕೊಂಡು ಮಾತಾಡಿದ್ರೇ ಬಹಳ ಕಷ್ಟ ಆಗುತ್ತೆ. ಅವರ ಬಗ್ಗೆ ನಾವು ಕೆಟ್ಟದು ಮಾತಾಡುವುದಿಲ್ಲ. ನೀವು ಮಾತಾಡಬೇಡಿ ಎಂದು ಹೇಳು ಮೂಲಕವಾಗಿ ಅಧಿಕಾರದ ದುರುಪಯೋಗ ಮಾಡಿಕೊಂಡು ಕೆಲಸ ಮಾಡ್ತಿದ್ದಾರೆ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಮಾತನಾಡಿದ್ದಾರೆ.

    ಬೆಳಗಾವಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಬಿಜೆಪಿ ಅಧಿಕಾರಕ್ಕೆ ಇಲ್ಲ ಅದನ್ನ ತರುವ ಕೆಲಸ ಮಾಡುತ್ತೇವೆ. ಮುಂದಿನ ಭಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುವ ನಿರ್ಧಾರ ಮಾಡಿ ಸಂಕಲ್ಪ ಮಾಡಿದ್ದೇವೆ. ಇಂದಿನ ಕಾರ್ಯಕ್ರಮದಲ್ಲಿ 23 ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದಾರೆ. ಚುನಾವಣೆ ಫಲಿತಾಂಶ ಪೂರ್ತಿ ಬರುವ ಮುನ್ನ ರಮೇಶ್ ಜಾರಕಿಹೊಳಿಗೆ ಮುಖಭಂಗ ಅಂತಾ ಬಂತೂ. ಅತೀ ಶೀಘ್ರದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯರು ಎಷ್ಟಿದ್ದಾರೆ ಅಂತಾ ತೋರಿಸುತ್ತೇನೆ ಅಂತಾ ಮಾತುಕೊಟ್ಟಿದ್ದೆನೆ ಎಂದರು.

    ಮುಂದಿನ ಚುನಾವಣೆಯಲ್ಲಿ ಅರವತ್ತು ಸಾವಿರ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು. ಐವತ್ತು ಸಾವಿರಕ್ಕಿಂತ ಕಡಿಮೆ ಅಂತರದಲ್ಲಿ ಬಿಜೆಪಿ ಗೆದ್ದರೆ ಅದು ಸೋಲು ಅಂದುಕೊಳ್ಳುತ್ತೇನೆ. ನನ್ನನ್ನು ನಂಬಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಜನರು ಹೋಗಿದ್ದಾರೆ. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಜನರು ನನ್ನ ಜನರು. ಗ್ರಾಮೀಣ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನ ಮುಂದಿನ ದಿನಗಳಲ್ಲಿ ಬಿಜೆಪಿಗೆ ಕರೆದುಕೊಂಡು ಬರುವ ಜವಾಬ್ದಾರಿ ನನ್ನದು. ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಆಪರೇಷನ್ ಕಮಲ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾತನಾಡಿದ ಸರ್ಕಾರದ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಉದ್ಯೋಗ ಖಾತ್ರಿ ನಾನೇ ತಂದಿದ್ದೇನೆ ಅಂತಾ ಕೆಲವರು ಹೇಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಸರ್ಕಾರ ತಂದಿರುವುದು ಎಂದು ಹೇಳಿ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಟಾಂಗ್ ಕೊಟ್ಟಿದ್ದಾರೆ.

    ಗೋಕಾಕ್ ಗೆ ಕೊಟ್ಟಷ್ಟು ಅನುದಾನ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನೀಡಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದೆ. ಗ್ರಾಪಂ ಸದಸ್ಯರು ಒಟ್ಟಾಗಿ ಕೆಲಸ ಮಾಡಿ ಕ್ಷೇತ್ರ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದ್ದಾರೆ.

    ರಮೇಶ್ ಜಾರಕಿಹೊಳಿ ಮಾತಾಡಿದರೆ ಆ ಕೆಲಸ ಮಾಡುತ್ತಾರೆ. ನೀವೆಲ್ಲಾ ಹುಲಿ ಜತೆಗೆ ಇರೀ ಕುರಿ ಜತೆಗೆ ಇರಬೇಡಿ ಎಂದು ಹೇಳುವ ಮೂಲಕವಾಗಿ ಮಾಜಿ ಶಾಸಕ ಸಂಜಯ್ ಪಾಟೀಲ್, ಶಾಸಕಿ ಹೆಬ್ಬಾಳ್ಕರ್‍ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

  • ಎಪಿಎಂಸಿ ಮುಚ್ಚಿದ್ರೆ ಏನಾಯ್ತು? ಹೊರಗಡೆಯವರಿಗೆ ಅವಕಾಶ ನೀಡೋಣ – ಶೆಟ್ಟರ್

    ಎಪಿಎಂಸಿ ಮುಚ್ಚಿದ್ರೆ ಏನಾಯ್ತು? ಹೊರಗಡೆಯವರಿಗೆ ಅವಕಾಶ ನೀಡೋಣ – ಶೆಟ್ಟರ್

    – ಎಪಿಎಂಸಿಯಿಂದ ಮಧ್ಯವರ್ತಿಗಳಿಗೆ ಮಾತ್ರ ಲಾಭ
    – ಕಾಂಗ್ರೆಸ್ ಕುಮ್ಮಕ್ಕಿನಿಂದ ಪ್ರತಿಭಟನೆ

    ಹುಬ್ಬಳ್ಳಿ: ಎಪಿಎಂಸಿಯಿಂದ ರೈತರಿಗೆ ಲಾಭವಾಗಿಲ್ಲ. ಎಪಿಎಂಸಿ ಇಲ್ಲ ಅಂದ್ರೆ ಇಲ್ಲ, ಎಂಪಿಎಂಸಿ ಮುಚ್ಚಿದ್ರೆ ಏನಾಯ್ತು? ಹೊರಗಡೆಯವರಿಗೆ ಅವಕಾಶ ಕೊಟ್ಟು ನೋಡೋಣ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

     

    ಹುಬ್ಬಳ್ಳಿಯಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈತರು ಬೆಳೆದ ಕೃಷಿ ಉತ್ಪನ್ನಗಳಿಂದ ಇಷ್ಟು ವರ್ಷ ಎಪಿಎಂಸಿಯಲ್ಲಿ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದರು. ತಿದ್ದುಪಡಿ ಕಾಯ್ದೆಯಿಂದ ಹೊರಗಡೆ ವಹಿವಾಟು ನಡೆಸಲು ಅವಕಾಶ ಇರುವುದರಿಂದ ಅದರ ಲಾಭ ನೇರವಾಗಿ ರೈತರಿಗೆ ಸಿಗಲಿದೆ. ಆದರೆ ಕಾಂಗ್ರೆಸ್‍ನವರ ಕುಮ್ಮಕ್ಕಿನಿಂದ ಈಗ ಪ್ರತಿಭಟನೆ ನಡೆಯುತ್ತಿದೆ ಎಂದು ನಾಳೆ ನಡೆಯಲಿರುವ ರೈತರ ಪ್ರತಿಭಟನೆ ವಿರುದ್ಧ ಶೆಟ್ಟರ್ ಕಿಡಿಕಾರಿದ್ದಾರೆ.

    ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಕುಮ್ಮಕ್ಕಿನಿಂದ ಪ್ರತಿಭಟನೆ ನಡೆಯುತ್ತಿದೆ. ನಿಜವಾದ ರೈತರು ಅದರಲ್ಲಿ ಭಾಗಿಯಾಗಿಲ್ಲ. ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಯಾವುದೇ ವಿಷಯ ಇಲ್ಲದ ಕಾರಣ, ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ರಾಜಕೀಯ ಪ್ರೇರಿತ ಪ್ರತಿಭಟನೆಗೆ ರೈತರು ಬೆಂಬಲ ನೀಡಬಾರದೆಂದು ಜಗದೀಶ್ ಶೆಟ್ಟರ್ ಮನವಿ ಮಾಡಿದರು.

    ಪ್ರಧಾನಿ ನರೇಂದ್ರ ಮೋದಿಯವರದ್ದು ರೈತ ಪರವಾದ ಸರ್ಕಾರವಾಗಿದೆ. ಮೋದಿಯವರ ವರ್ಚಸ್ಸಿಗೆ ಕುಂದು ತರುವ ಕೆಲಸವನ್ನ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ನಿಜವಾದ ರೈತರು ನಾಳೆಯ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ.