ವಡೋದರ: ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ಎಲ್ಲೀಸ್ ಪೆರ್ರಿ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ವಡೋದರಾದಲ್ಲಿ ಶುಕ್ರವಾರ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿಯು ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳನ್ನು ಪೇರಿಸಿತು. ಗೆಲ್ಲಲು ಬೃಹತ್ ಗುರಿ ಪಡೆದ ಆರ್ ಸಿಬಿ ವನಿತೆಯರ ಬಳಗ ಇನ್ನೂ 9 ಎಸೆತಗಳು ಬಾರಿ ಇರುವಾಗಲೇ 202 ರನ್ ಸಿಡಿಸಿ ಗೆದ್ದು ಬೀಗಿತು.

ಗೆಲುವಿಗೆ ಟರ್ನಿಂಗ್ ಸಿಕ್ಕಿದ್ದೆಲ್ಲಿ?
14ನೇ ಓವರ್ ಕಳೆಯುತ್ತಿದ್ದಂತೆ ರಿಚಾ – ಕನಿಕಾ ಹೊಡಿ ಬಡಿ ಆಟಕ್ಕೆ ಮುಂದಾದರು. ವಿಕೆಟ್ ಬಿಟ್ಟುಕೊಡದೇ ಗುಜರಾತ್ ಬೌಲರ್‌ಗಳನ್ನ ಬೆಂಡೆತ್ತಿದ್ದರು. ಇವರಿಬ್ಬರ ಸ್ಫೋಟಕ ಆಟದಿಂದ ಕೊನೆಯ 27 ಎಸೆತಗಳಲ್ಲಿ ತಂಡಕ್ಕೆ 79 ರನ್ ಸೇರ್ಪಡೆಯಾಯಿತು. 15, 16, 17, 18, 19ನೇ ಓವರ್‌ಗಳಲ್ಲಿ ಕ್ರಮವಾಗಿ 16, 23, 16, 17, 7 ರನ್ ಸೇರ್ಪಡೆಯಾಯಿತು. ಇದು ಆರ್‌ಸಿಬಿ ಗೆಲುವಿಗೆ ಕಾರಣವಾಯಿತು.
ದಾಖಲೆಯ ಚೇಸಿಂಗ್:
ಗುಜರಾತ್ ವಿರುದ್ಧದ ಗೆಲುವಿನೊಂದಿಗೆ ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿ ದಾಖಲೆಯ ಜಯಕ್ಕೆ ಪಾತ್ರವಾಯಿತು. ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧವೇ ಮುಂಬೈ ಇಂಡಿಯನ್ಸ್ 191 ರನ್, ಆರ್‌ಸಿಬಿ 189 ರನ್, ಯುಪಿ ವಾರಿಯರ್ಸ್ 179 ರನ್ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಅದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ 172 ರನ್‌ಗಳ ಚೇಸಿಂಗ್ ಮಾಡಿದ್ದು ದೊಡ್ಡ ಮೊತ್ತದ ಚೇಸಿಂಗ್ ಆಗಿತ್ತು. ಇದೀಗ ಆರ್‌ಸಿಬಿ ಎಲ್ಲ ದಾಖಲೆಗಳನ್ನ ನುಚ್ಚುನೂರು ಮಾಡಿದೆ.

ಆರ್‌ಸಿಬಿಗೆ ಆರಂಭಿಕ ಆಘಾತ:
ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 2 ಓವರ್‌ಗಳಲ್ಲಿ 14 ರನ್ ಗಳಿಸಿದ್ದರೂ ಆರಂಭಿಕ 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಎಲ್ಲಿಸ್ ಪೆರ್ರಿ ಆರ್‌ಬಿಗೆ ಆಸರೆಯಾದರು. 25 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಪೆರ್ರಿ ಒಟ್ಟು 34 ಎಸೆತಗಳಲ್ಲಿ 57 ರನ್ (2 ಸಿಕ್ಸರ್, 6 ಬೌಂಡರಿ) ಚಚ್ಚಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ರಾಘ್ವಿ ಬಿಸ್ಟ್ 25 ರನ್‌ಗಳ ಕೊಡುಗೆ ನೀಡಿದರು.
97 ರನ್‌ಗಳ ಜೊತೆಯಾಟ:
ಇವರಿಬ್ಬರ ವಿಕೆಟ್ ಪತನದ ಬಳಿಕ ಒಟ್ಟಾದ ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಕೊನೆಯವರೆಗೂ ವಿಕೆಟ್ ಬಿಟ್ಟುಕೊಡದೇ ಹೋರಾಟ ನಡೆಸಿದರು. ಗುಜರಾತ್ ಬೌಲರ್ ಗಳನ್ನು ಚೆಂಡಾಡಿದ ಇಬ್ಬರು ಬ್ಯಾಟರ್ ಗಳು ತಂಡವನ್ನು ಗೆಲುವಿನ ದಡ ಸೇರಿಸಿದರು. ಮುರಿಯದ 5ನೇ ವಿಕೆಟ್‌ಗೆ ಕನಿಕಾ ಅಹುಜಾ ಹಾಗೂ ರಿಚಾ ಘೋಷ್ ಜೋಡಿ ಕೇವಲ 37 ಎಸೆತಗಳಲ್ಲಿ ಸ್ಫೋಟಕ 93 ರನ್‌ಗಳ ಜೊತೆಯಾಟ ನೀಡಿತು. ಇದರಿಂದ ಆರ್‌ಸಿಬಿಗೆ ಗೆಲುವು ಸುಲಭವಾಯಿತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಗುಜರಾತ್ ಜೈಂಟ್ಸ್ ಮಹಿಳಾ ತಂಡ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತು. ಪವರ್ ಪ್ಲೇನಲ್ಲಿ 39 ರನ್‌ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು. ಅಲ್ಲದೇ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಕೇವಲ 68 ರನ್ ಗಳಿಸಿತ್ತು. ಇದರಿಂದ ಗುಜರಾತ್ 150 ರನ್‌ಗಳ ಗಡಿ ದಾಟುವುದೂ ಕಷ್ಟವೆಂದೇ ಭಾವಿಸಲಾಗಿತ್ತು.
ಆಶ್ಲೀ ಗಾರ್ಡ್ನರ್ ಆರ್ಭಟ:
ನಿಧಾನಗತಿಯ ಬ್ಯಾಟಿಂಗ್‌ನಿಂದ ಗುಜರಾತ್ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಶ್ಲೀ ಗಾರ್ಡ್ನರ್ ಜೀವ ತುಂಬಿದರು. ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನ ಹಿಗ್ಗಾಮುಗ್ಗ ಬೆಂಡೆತ್ತಿದ್ದರು. ಕೇವಲ 25 ಎಸೆತಗಳಲ್ಲೇ 3 ಬೌಂಡರಿ, 4 ಸಿಕ್ಸರ್ ನೆರವಿನೊಂದಿಗೆ ಸ್ಫೋಟಕ ಫಿಫ್ಟಿ ಸಿಡಿಸಿದರು. 213.51 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಗಾರ್ಡ್ನರ್ ಒಟ್ಟು 37 ಎಸೆತಗಳಲ್ಲಿ 79 ರನ್ (8 ಸಿಕ್ಸರ್, 3 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇದರೊಂದಿಗೆ ಡಿಯಾಂಡ್ರಾ ಡಾಟಿನ್ 25 ರನ್, ಸಿಮ್ರಾನ್ ಶೈಕ್ 11 ರನ್ ಹಾಗೂ ಹರ್ಲೀನ್ ಡಿಯೋಲ್ 9 ರನ್ ಕೊಡುಗೆ ನೀಡಿದರು.

ಪಂದ್ಯದ ಗತಿ ಬದಲಿಸಿದ ಗಾರ್ಡ್ನರ್ ಸಿಕ್ಸರ್
13 ಓವರ್ ಕಳೆದರೂ ಗುಜರಾತ್, 3 ವಿಕೆಟ್‌ಗೆ 98 ರನ್‌ಗಳನ್ನಷ್ಟೇ ಗಳಿಸಿತ್ತು. ಆದ್ರೆ 14ನೇ ಓವರ್‌ನಲ್ಲಿ ಪ್ರೇಮಾ ರಾವತ್ ಬೌಲಿಂಗ್‌ಗೆ ಆಶ್ಲೀ ಗಾರ್ಡ್ನರ್ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿದರು. ಇದರೊಂದಿಗೆ ಒಂದೇ ಓವರ್‌ನಲ್ಲಿ 21 ರನ್ ತಂಡಕ್ಕೆ ಸೇರ್ಪಡೆಯಾಯಿತು. ಅಲ್ಲದೇ ಗುಜರಾತ್ ಆಟಗಾರ್ತಿಯರು 18, 19ನೇ ಓವರ್‌ಗಳಲ್ಲಿ ತಲಾ 20 ರನ್ ಚಚ್ಚಿದರು. ಇದು ದೊಡ್ಡ ಮೊತ್ತಕ್ಕೆ ಕಾರಣವಾಯಿತು.
ಆರ್‌ಸಿಬಿ ಪರ ರೇಣುಕಾ ಸಿಂಗ್ 2 ವಿಕೆಟ್ ಕಿತ್ತರೆ, ಕನಿಕಾ ಅಹುಜಾ, ಜಾರ್ಜಿಯಾ ವೇರ್ಹ್ಯಾಮ್, ಪ್ರೇಮಾ ರಾವತ್ ತಲಾ ಒಂದೊಂದು ವಿಕೆಟ್ ಪಡೆದರು.