Tag: BESCOM

  • ಬೆಂಗ್ಳೂರಲ್ಲಿ ಗಣೇಶ ಪ್ರತಿಷ್ಠಾಪನೆ: 5 ಸಾವಿರ ರೂ. ಕಟ್ಟಿದ್ರೆ ಮಾತ್ರ ಎನ್‍ಒಸಿ

    ಬೆಂಗ್ಳೂರಲ್ಲಿ ಗಣೇಶ ಪ್ರತಿಷ್ಠಾಪನೆ: 5 ಸಾವಿರ ರೂ. ಕಟ್ಟಿದ್ರೆ ಮಾತ್ರ ಎನ್‍ಒಸಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಣೇಶನನ್ನು ಕೂರಿಸಬೇಕಾದರೆ 5 ಸಾವಿರ ರೂ. ಹಣವನ್ನು ಪಾವತಿಸಿ ನಿರಪೇಕ್ಷಣಾ ಪತ್ರವನ್ನು ಪಡೆಯಬೇಕು.

    ಹೌದು. ಅಗ್ನಿಶಾಮಕ ಇಲಾಖೆ ಮತ್ತು ತುರ್ತು ಸೇವೆಗಳ ಡಿಜಿಪಿ 5 ಸಾವಿರ ರೂ. ನೀಡಿದರೆ ಮಾತ್ರ ನಿರಪೇಕ್ಷಣಾ ಪತ್ರ(ಎನ್‍ಒಸಿ) ನೀಡುವಂತೆ ಆದೇಶ ಹೊರಡಿಸಿದ್ದಾರೆ.

    ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ಸೋಮವಾರದಿಂದ ನಿರಾಪೇಕ್ಷಣಾ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಇದಕ್ಕಾಗಿಯೇ ಪೊಲೀಸ್, ಅಗ್ನಿಶಾಮಕ ಮತ್ತು ಬೆಸ್ಕಾಂ ಅಧಿಕಾರಿಗಳನ್ನು ಏಕಗವಾಕ್ಷಿ ಕೇಂದ್ರಗಳಿಗೆ ನಿಯೋಜಿಸಲಾಗಿದೆ.

    ಗಣೇಶ ಮೂರ್ತಿ ಕೂರಿಸಲು 5 ಸಾವಿರ ಹಣ ಅಗ್ನಿ ಶಾಮಕ ಇಲಾಖೆ ಆದೇಶ ಹಿನ್ನಲೆಯಲ್ಲಿ ಸರ್ಕಾರದ ನೀತಿಗೆ ನಗರದಲ್ಲಿ ತೀವ್ರ ವಿರೋಧ ಕೇಳಿ ಬಂದಿದೆ. ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯಿಂದ ವಿರೋಧಿಸಿದ್ದು ಬುಧವಾರ ನಗರದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ.

    ಆದೇಶದಲ್ಲಿ ಏನಿದೆ?
    2018-19 ನೇ ಸಾಲಿನಲ್ಲಿ ನಡೆಯುವ ಗಣೇಶ ಹಬ್ಬದ ಕಾರ್ಯಕ್ರಮಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವತಿಯಿಂದ ನೀಡಲಾಗುವ ನಿರಪೇಕ್ಷಣಾ ಪತ್ರಗಳಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಹಾಗೂ ಉಪವಲಯ ಕಚೇರಿಗಳಲ್ಲಿ ದಿನಾಂಕ: 11-09-2018 ರಿಂದ ಸಮಯ ಬೆಳಿಗ್ಗೆ 9 ರಿಂದ ರಾತ್ರಿ 11 ಘಂಟೆಯವರೆಗೆ ಲಭ್ಯವಿದ್ದು ಕಾರ್ಯನಿರ್ವಹಿಸಿ ವಿವಿಧ ಸಂಘ ಸಂಸ್ಥೆಗಳಿಂದ ಬರುವ ಅರ್ಜಿಗಳಿಗೆ ಏಕಗವಾಕ್ಷಿ ಸೇವೆಯಡಿ ಸರ್ಕಾರ ಆದೇಶ ಸಂಖ್ಯೆ: ಒಇ 196 ಕಅಸೇ 2017, ದಿನಾಂಕ 27-10-2017 ರಂತೆ ನಿಗದಿ ಪಡಿಸಿರುವ ಶುಲ್ಕವನ್ನು ರೂ. 5,000 ಲೆಕ್ಕ ಶೀರ್ಷಿಕೆ 0070-60-109-0-02 ಗೆ ಮೇಲ್ಕಂಡವರಿಂದ ಕಟ್ಟಿಸಿಕೊಂಡು ಈ ಪತ್ರದೊಂದಿಗೆ ನೀಡಲಾಗಿರುವ ನಿರಾಪೇಕ್ಷಣಾ ಪತ್ರದ ಮಾದರಿಯಲ್ಲೇ ನೀಡಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ಸಮಾಪನಾ ವರದಿಯನ್ನು ಕೇಂದ್ರ ಕಚೇರಿಗೆ ನೀಡಲು ಈ ಮೂಲಕ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=NA8CdNiDJBM

  • ಗಣೇಶ ಹಬ್ಬಕ್ಕೆ ಬೆಸ್ಕಾಂ ಹೊಸ ರೂಲ್ಸ್!

    ಗಣೇಶ ಹಬ್ಬಕ್ಕೆ ಬೆಸ್ಕಾಂ ಹೊಸ ರೂಲ್ಸ್!

    ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಣೇಶ ವಿಗ್ರಹ ಸ್ಥಾಪಿಸಿ, ಸಂಗೀತ, ಲೈಟಿಂಗ್ ನೀಡಿ ಭರ್ಜರಿಯಾಗಿ ಹಬ್ಬ ಸಂಭ್ರಮಾಚರಣೆ ಮಾಡುವ ಉದ್ದೇಶ ಹೊಂದಿದ್ದ ಮಂದಿಗೆ ಬೆಸ್ಕಾಂ ಶಾಕ್ ನೀಡಲು ಸಿದ್ಧತೆ ನಡೆಸಿದೆ.

    ಗಣೇಶನ ಹಬ್ಬ ಬಂದರೆ ನಗರದ ಬೀದಿಗಳಲ್ಲಿ ಗಣೇಶ್ ವಿಗ್ರಹ ಸ್ಥಾಪಿಸಿ ಬಣ್ಣಬಣ್ಣದ ಲೈಟಿಂಗ್ ವ್ಯವಸ್ಥೆ ಮಾಡುವ ಹಲವು ಮಂದಿ ಅನಧಿಕೃತವಾಗಿ ವಿದ್ಯುತ್ ಪಡೆಯುವುದಕ್ಕೆ ಕಡಿವಾಣ ಹಾಕಲು ಬೆಸ್ಕಾಂ ಮುಂದಾಗಿದೆ. ಗಣೇಶ ವಿಗ್ರಹ ಸ್ಥಾಪನೆ ಮಾಡುವ ಮುನ್ನ ಬೆಸ್ಕಾಂಗೆ ಮಾಹಿತಿ ಸಂಪರ್ಕ ಪಡೆಯವುದು ಕಡ್ಡಾಯವಾಗಿದ್ದು, ಮಾಹಿತಿ ನೀಡದೇ ವಿದ್ಯುತ್ ಪಡೆದರೆ ದಂಡ ವಿಧಿಸುವ ಕುರಿತು ಬೆಸ್ಕಾಂ ಚಿಂತನೆ ನಡೆಸಿದೆ. ಈ ನಿಯಮ ಉಲ್ಲಂಘಿಸಿದರೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.

    ಸಂಪರ್ಕ ಪಡೆಯುವುದು ಹೇಗೆ?
    ನಗರದಲ್ಲಿ ಗಣೇಶ ವಿಗ್ರಹ ಮೂರ್ತಿ ಸ್ಥಾಪಿಸಲು ಇಚ್ಛಿಸುವವರು ವಿದ್ಯುತ್ ಸಂಪರ್ಕ ಪಡೆಯಲು ಸ್ಥಳೀಯ ಬೆಸ್ಕಾಂ ಉಪವಿಭಾಗಕ್ಕೆ ಪತ್ರ ಬರೆದು ನಿಗದಿ ಪಡಿಸಿದ ಹಣ ಪಾವತಿ ಮಾಡಬೇಕು. ಬಳಿಕ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ತಾತ್ಕಾಲಿಕ ಸಂಪರ್ಕ ನೀಡಲಿದ್ದಾರೆ ಎಂದು ಪ್ರಧಾನ ವ್ಯವಸ್ಥಾಪಕರಾದ ಜಯಂತಿ ತಿಳಿಸಿದ್ದಾರೆ.

    ದೇಶಾದ್ಯಂತ ಗಣೇಶನ ಹಬ್ಬವನ್ನು ಜಾತ್ಯಾತೀತವಾಗಿ ಆಚರಿಸುವ ಸಂಸ್ಕೃತಿ ಇದ್ದು, ಈ ವೇಳೆ ಕಾನೂನು ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಸ್ಕಾಂನಿಂದ ಗ್ರಾಹಕರಿಗೆ ಮತ್ತೊಂದು ಶಾಕ್!

    ಬೆಸ್ಕಾಂನಿಂದ ಗ್ರಾಹಕರಿಗೆ ಮತ್ತೊಂದು ಶಾಕ್!

    ಚಿಕ್ಕಬಳ್ಳಾಪುರ: ಚುನಾವಣೆಗೂ ಮುನ್ನವೇ ಪ್ರತಿ ಯೂನಿಟ್ ಗೆ 30 ಪೈಸೆ ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ್ದ ಬೆಸ್ಕಾಂ, ಈಗ ಮತ್ತೊಂದು ಶಾಕ್ ಕೊಟ್ಟಿದೆ.

    ಹೌದು. ಪ್ರತಿ ವರ್ಷದಂತೆ ಈ ಬಾರಿಯೂ ವಾರ್ಷಿಕ ವಿದ್ಯುತ್ ಬಳಕೆಗೆ ಅನುಗುಣವಾಗಿ ಪ್ರತಿಯೊಬ್ಬ ಗ್ರಾಹಕರು ಹೆಚ್ಚುವರಿ ಯೂನಿಟ್ ಗಳ ಬಳಕೆ ಆಧಾರದ ಮೇಲೆ ಹೆಚ್ಚುವರಿ ಡಿಪಾಸಿಟ್ ಹಣ ಪಾವತಿ ಮಾಡುವಂತೆ ಗ್ರಾಹಕರಿಗೆ ಬೆಸ್ಕಾಂ ಡಿಮ್ಯಾಂಡ್ ನೋಟಿಸ್ ವಿತರಿಸುತ್ತಿದೆ.

    ಜೂನ್ ತಿಂಗಳ ವಿದ್ಯುತ್ ಬಿಲ್ ಜೊತೆ ಜೊತೆಗೆ ಇಡೀ ವರ್ಷ ಬಳಸಿರುವ ಹೆಚ್ಚುವರಿ ಯೂನಿಟ್ ಗಳ ಆಧಾರದ ಮೇಲೆ ಇಂತಿಷ್ಟು ಅಂತ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸುವಂತೆ ಗ್ರಾಹಕರಿಗೆ ಬೆಸ್ಕಾಂ ನೋಟಿಸ್ ನೀಡಿದೆ. ವಿದ್ಯುತ್ ಬಿಲ್ ಜೊತೆಗೆ ಹೆಚ್ಚುವರಿ ಭದ್ರತಾ ಹಣದ ನೋಟಿಸ್ ನೋಡ್ತಿರೋ ಜನ ನಾವ್ಯಾಕೆ ಹೆಚ್ಚುವರಿ ಹಣ ಕಟ್ಟಬೇಕು ಅಂತ ಕಕ್ಕಾ ಬಿಕ್ಕಿಯಾಗಿ ಗೊಂದಲಕ್ಕೀಡಾಗುತ್ತಿದ್ದಾರೆ.

    ಬೆಸ್ಕಾಂ ನ ನಿಯಮದಂತೆ ವಿದ್ಯುತ್ ಕನೆಕ್ಷನ್ ಪಡೆದು ಮೀಟರ್ ಆಳವಡಿಕೆ ವೇಳೆ ಇಂತಿಷ್ಟು ಯೂನಿಟ್ ಗಳ ಬಳಕೆಗೆ ಇಂತಿಷ್ಟು ಹಣ ಅಂತ ಭದ್ರತಾ ಠೇವಣಿ ಪಾವತಿಸಿರಲಾಗಿರುತ್ತೆ. ಆದ್ರೆ ಆ ಯೂನಿಟ್ ಗಳ ಬಳಕೆ ಮೀರಿ ಹೆಚ್ಚುವರಿ ಯೂನಿಟ್ ಬಳಕೆ ಮಾಡಿದ್ದಲ್ಲಿ, ಅದಕ್ಕೂ ಮಾಮೂಲಿ ನಿಗದಿತ ಯೂನಿಟ್ ದರದ ಹಣಕ್ಕಿಂತ ಹೆಚ್ಚುವರಿಯಾಗಿ ದರ ವಸೂಲಿ ಕೂಡ ಮಾಡುತ್ತೆ. ಅದಲ್ಲದೆ ವಾರ್ಷಿಕ ವಿದ್ಯುತ್ ಬಳಕೆಗೆ ಅನುಗುಣವಾಗಿ ಹೆಚ್ಚುವರಿ ಭದ್ರತಾ ಠೇವಣಿ ಕೂಡ ಪಾವತಿಸಿ ಅಂತ ಪ್ರತಿ ವರ್ಷ ಡಿಮ್ಯಾಂಡ್ ನೋಟಿಸ್ ನೀಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಗ್ರಾಹಕರ ಪ್ರಶ್ನೆಯಾಗಿದೆ.

    ಅಸಲಿಗೆ ಗ್ರಾಹಕರಿಂದ ಪಡೆಯುವ ಡಿಪಾಸಿಟ್ ಹಣವನ್ನು ವಿದ್ಯುತ್ ಕನೆಕ್ಷನ್ ಡಿಸ್ಕನೆಕ್ಟ್ ಮಾಡಿದ ಸಂದರ್ಭದಲ್ಲಿ ಬಡ್ಡಿ ಸಮೇತ ಹಣವನ್ನು ಬೆಸ್ಕಾಂ ವಾಪಾಸ್ ನೀಡುತ್ತೆ. ಆದ್ರೆ ಮೊದಲೇ ತಿಂಗಳ ಕರೆಂಟ್ ಬಿಲ್ ಕಟ್ಟೋಕೆ ಕಷ್ಟ ಪಡೋ ಹಲವು ಕುಟುಂಬಗಳಿಗೆ ಪ್ರತಿ ವರ್ಷವೂ ಈ ರೀತಿ ಡಿಪಾಸಿಟ್ ಏರಿಕೆ ಮಾಡ್ತಾ ಹೋದ್ರೇ ಕಟ್ಟೋದು ಹೇಗೆ ಅಂತ ಗ್ರಾಹಕರು ಚಿಂತಿತರಾಗಿದ್ದಾರೆ.

  • ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರ ಸಾವು

    ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರ ಸಾವು

    ಚಿಕ್ಕಬಳ್ಳಾಪುರ: 11 ಕೆ ವಿ ವಿದ್ಯುತ್ ಲೈನ್ ದುರಸ್ಥಿ ವೇಳೆ ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರನೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ವೀರಾಪುರ ಬಳಿ ನಡೆದಿದೆ.

    ಬೆಸ್ಕಾಂ ನ ಹೊರಗುತ್ತಿಗೆ ನೌಕರ ತೌಶೀಫ್ (20) ಮೃತ ಯುವಕ. ಕಳೆದ ರಾತ್ರಿ ಮಳೆಗೆ ನೆಲಕ್ಕುರುಳಿದ್ದ 11 ಕೆ ವಿ ವಿದ್ಯುತ್ ಲೈನ್ ದುರಸ್ಥಿ ವೇಳೆ ಏಕಾಏಕಿ ವಿದ್ಯುತ್ ಹರಿದಿದೆ. ಈ ವೇಳೆ ಕಂಬದ ಮೇಲಿದ್ದ ತೌಶೀಫ್ ಗೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

    ಈ ಘಟನೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • 6 ತಿಂಗಳಿನಿಂದ ಸಂಬಳವಾಗದೆ ಮನನೊಂದ ಬೆಸ್ಕಾಂ ಉದ್ಯೋಗಿ ಆತ್ಮಹತ್ಯೆಗೆ ಯತ್ನ

    6 ತಿಂಗಳಿನಿಂದ ಸಂಬಳವಾಗದೆ ಮನನೊಂದ ಬೆಸ್ಕಾಂ ಉದ್ಯೋಗಿ ಆತ್ಮಹತ್ಯೆಗೆ ಯತ್ನ

    ತುಮಕೂರು: ಕಳೆದ 6 ತಿಂಗಳಿನಿಂದ ಸಂಬಳ ಆಗದ ಹಿನ್ನೆಲೆಯಲ್ಲಿ ಮನನೊಂದ ಬೆಸ್ಕಾಂ ಗ್ರಾಮ ವಿದ್ಯುತ್ ಪ್ರತಿನಿಧಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಈ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ನಡೆದಿದೆ. ಮಣಕಿಕೆರೆ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರೋ ಎಸ್ ಕುಮಾರ್ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಬೆಸ್ಕಾಂ ಎಇಇ ಚಂದ್ರುನಾಯಕ ಕಾರಣ ಇಲ್ಲದೆ ಕಳೆದ 6 ತಿಂಗಳಿನಿಂದ ಸಂಬಳ ತಡೆ ಹಿಡಿದಿದ್ದರು ಅನ್ನೋ ಆರೋಪ ಕೇಳಿಬಂದಿದೆ.

    ಈ ಹಿನ್ನೆಲೆಯಲ್ಲಿ ಕುಮಾರ್ ಸಂಸಾರ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಗುರುವಾರ ರಾತ್ರಿ ಹಾಲ್ಕುರಿಕೆ ಗ್ರಾಮದ ತನ್ನ ತೋಟದಲ್ಲಿ ಡೆತ್ ನೋಟ್ ಬರೆದಿಟ್ಟು ವಿಷ ಕುಡಿದಿದ್ದಾರೆ.

    ಕುಮಾರ್ ವಿಷ ಕುಡಿದಿರೋದನ್ನು ಗಮನಿಸಿದ ಅಕ್ಕಪಕ್ಕದವರು ತಕ್ಷಣೆ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಬೆಸ್ಕಾಂ ನೌಕರರ ನಿರ್ಲಕ್ಷ್ಯ- 300ಕ್ಕೂ ಹೆಚ್ಚು ಟಿವಿಗಳು ಕರೆಂಟ್ ಗೆ ಆಹುತಿ

    ಬೆಸ್ಕಾಂ ನೌಕರರ ನಿರ್ಲಕ್ಷ್ಯ- 300ಕ್ಕೂ ಹೆಚ್ಚು ಟಿವಿಗಳು ಕರೆಂಟ್ ಗೆ ಆಹುತಿ

    ಚಿತ್ರದುರ್ಗ: ಬೆಸ್ಕಾಂ ನೌಕರರ ನಿರ್ಲಕ್ಷ್ಯದಿಂದಾಗಿ ಮುನ್ನೂರಕ್ಕೂ ಹೆಚ್ಚು ಟಿವಿಗಳು ಕರೆಂಟ್ ಗೆ ಆಹುತಿಯಾಗಿದ್ದು, ಟಿವಿಗಳನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಕೂಲಿ ನಾಲಿ ಮಾಡಿ ಬದುಕುವ ಕಡು ಬಡ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿರೊ ವೆಂಕಟೇಶ್ವರ ಬಡಾವಣೆಯು ಇಂಡಸ್ಟ್ರಿಯಲ್ ಏರಿಯಾ ಪಕ್ಕದಲ್ಲಿದ್ದು, ವಿದ್ಯುತ್ ವೋಲ್ಟೇಜ್ ಏರುಪೇರಾಗಿ ವಿದ್ಯುತ್ ಉಪಕರಣಗಳೆಲ್ಲಾ ಆಹುತಿಯಾಗಿವೆ. ಅಷ್ಟೇ ಅಲ್ಲದೇ ಒಂದೇ ವರ್ಷದಲ್ಲಿ ನಾಲ್ಕು ಬಾರಿ ಬಡವರ ಮನೆಗಳಲ್ಲಿರೋ ಟಿವಿ, ಮಿಕ್ಸಿ, ಫ್ಯಾನ್ ಹಾಗು ಬೆಲೆಬಾಳುವ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದ್ದು, ನಾಗರೀಕರು ಮನೆಯಲ್ಲಿ ವಾಸಿಸಲು ಭಯಪಡುವಂತಾಗಿದೆ.

    ಈ ಬಗ್ಗೆ ಹಲವು ಬಾರಿ ಚಿತ್ರದುರ್ಗದ ಹಿರಿಯ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ದಿನ ತಡವಾದರು ವಿದ್ಯುತ್ ಕಟ್ ಮಾಡುವ ಬೆಸ್ಕಾಂ ನೌಕರರು, ಸಮಸ್ಯೆ ಆದಾಗ ಮಾತ್ರ ತಿರುಗಿ ನೋಡಲ್ಲ ಎಂದು ನಾಗರೀಕರು ಬೆಸ್ಕಾಂ ಇಲಾಖೆಗೆ ಹಿಡಿಶಾಪ ಹಾಕಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

  • ರಾಜ್ಯದಲ್ಲಿ ಶುರುವಾಯ್ತು ಲೋಡ್ ಶೆಡ್ಡಿಂಗ್-ಬೇಸಿಗೆ ಆರಂಭಕ್ಕೂ ಮುನ್ನವೇ ಕತ್ತಲೆ ಭಾಗ್ಯ

    ರಾಜ್ಯದಲ್ಲಿ ಶುರುವಾಯ್ತು ಲೋಡ್ ಶೆಡ್ಡಿಂಗ್-ಬೇಸಿಗೆ ಆರಂಭಕ್ಕೂ ಮುನ್ನವೇ ಕತ್ತಲೆ ಭಾಗ್ಯ

    ಬೆಂಗಳೂರು: ರಾಜ್ಯದ ಪವರ್ ಮಿನಿಸ್ಟರ್‍ಗೆ ಐಟಿ ಶಾಕ್ ಕೊಟ್ರೆ, ಪವರ್ ಮಿನಿಸ್ಟರ್ ರಾಜ್ಯಕ್ಕೆ ಕರೆಂಟ್ ಶಾಕ್ ನೀಡಿದ್ದಾರೆ.

    ಕರುನಾಡಿನ ಜನರಿಗೆ ಕತ್ತಲೆ ಭಾಗ್ಯ ಸಿಕ್ಕಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಶುರುವಾಗುವ ಲೋಡ್ ಶೆಡ್ಡಿಂಗ್ ಈಗಲೇ ಶುರುವಾಗಿದೆ. ಯುಪಿಎಸ್‍ಎಲ್, ಆರ್‍ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಘಟಕದ ಯೂನಿಟ್ ಮಂಗಳವಾರದಿಂದ ಸ್ಥಗಿತಗೊಂಡಿದೆ.

    ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಾದ ಹಿನ್ನೆಲೆಯಲ್ಲಿ ಬೆಸ್ಕಾಂ ಐಇಎಕ್ಸ್‍ನಿಂದ ವಿದ್ಯುತ್ ಖರೀದಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಈಗಾಗಲೇ ಶುರುವಾಗಿದ್ದು ದಿನಕ್ಕೆ ಹತ್ತು ಗಂಟೆ ವಿದ್ಯುತ್ ಸಿಕ್ಕರೆ ಹೆಚ್ಚು ಅನ್ನುವಂತಾಗಿದೆ. ಈ ವಿದ್ಯುತ್ ಸಮಸ್ಯೆ ಯಾವತ್ತೂ ಬಗೆಹರಿಯಲಿದೆ ಅನ್ನೋ ಬಗ್ಗೆ ಬೆಸ್ಕಾಂ ಇನ್ನೂ ಮಾಹಿತಿ ನೀಡಿಲ್ಲ.

  • ಒಂಟಿಯಾಗಿ ಜೀವಿಸ್ತಿರೋ 75 ವರ್ಷದ ಅಜ್ಜಿಗೆ ಬೇಕಿದೆ ವಿದ್ಯುತ್ತಿನ ಬೆಳಕು

    ಒಂಟಿಯಾಗಿ ಜೀವಿಸ್ತಿರೋ 75 ವರ್ಷದ ಅಜ್ಜಿಗೆ ಬೇಕಿದೆ ವಿದ್ಯುತ್ತಿನ ಬೆಳಕು

    ನೆಲಮಂಗಲ: ತನ್ನ ಇಳಿ ವಯಸ್ಸಿನಲ್ಲಿ ಯಾರ ಹಂಗಿಲ್ಲದೆ, ಸ್ವಾವಲಂಬಿಯಾಗಿ ಜೀವನವನ್ನ ನಡೆಸುತ್ತಿರುವ ವೃದ್ಧೆಯ ಹೆಸರು ಅರಸಮ್ಮ. ಸುಮಾರು 75 ವರ್ಷ ವಯಸ್ಸು. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮದ ನಿವಾಸಿ.

    ಒಂದು ಕಾಲದಲ್ಲಿ ಈ ಗ್ರಾಮ ರಾಜಮಹಾರಾಜರು ಆಳ್ವಿಕೆ ಮಾಡಿದ್ದ ಗಂಗರಸರ ರಾಜಧಾನಿಯಾಗಿ ಬಡವರ ಏಳಿಗೆಗಾಗಿ ಶ್ರಮಿಸುತ್ತಿದ್ದ ಕೇಂದ್ರ ಸ್ಥಾನವಾಗಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ಪತಿಯನ್ನು ಕಳೆದುಕೊಂಡ ಇವರಿಗೆ ಮಕ್ಕಳು ಕೂಡ ಇಲ್ಲ. ಆದರೆ ಗಂಡನ ನೆನಪಿನಲ್ಲಿರುವುದು ಒಂದು ಹಳೆಯ ಸೂರು ಮಾತ್ರ. ಅಜ್ಜಿ ಗಟ್ಟಿಮುಟ್ಟಾಗಿದ್ದಾಗ ಕೂಲಿನಾಲಿ ಮಾಡಿ ಜೀವನ ನಡೆಸುತಿದ್ದರು. ಆದ್ರೆ ಇದೀಗ ವಯಸ್ಸಾಗಿದ್ರು ಅವರಿವರ ಮನೆಕೆಲಸ ಮಾಡಿ ಬದುಕಿನ ಬಂಡಿ ದೂಡುತ್ತಿದ್ದಾರೆ.

     

    ದುರಂತ ಅಂದ್ರೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದ್ರೂ, ಈ ವೃದ್ಧೆಯ ಮನೆಗೆ ಮಾತ್ರ ವಿದ್ಯುತ್ ಸಂಪರ್ಕವಿಲ್ಲದೆ ಪ್ರತಿನಿತ್ಯ ದೀಪದ ಬೆಳಕಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು, ಸ್ಥಳೀಯ ಪಂಚಾಯಿತಿ, ಸೇರಿದಂತೆ ಹಲವರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಈ ವೃದ್ಧೆಯ ಮನೆಗೂ ವಿದ್ಯುತ್ ಕಂಬಕ್ಕೂ ಕೇವಲ 200 ಮೀಟರ್ ಇದ್ದು, ಸರ್ಕಾರದ ಯಾವುದಾದರೂ ಒಂದು ಯೋಜನೆಯ ಮೂಲಕ ಉಚಿತವಾಗಿ ಸಂಪರ್ಕವನ್ನ ನೀಡಬಹುದಾಗಿದೆ. ಆದ್ರೆ ಜಡ್ಡು ಗಟ್ಟಿರುವ ನಮ್ಮ ವ್ಯವಸ್ಥೆ ಕುರುಡಾಗಿದೆ.

    ಒಟ್ಟಾರೆ ಈ ವೃದ್ಧ ಮಹಿಳೆಯ ಮನೆಗೆ ಇನ್ನಾದರೂ ವಿದ್ಯುತ್ ಸಂಪರ್ಕದ ವ್ಯವಸ್ಥೆಯಾಗಬೇಕಿದೆ. ಬೆಸ್ಕಾಂ ಅಧಿಕಾರಿಗಳಿಗೆ ಹೇಳಿ ನನಗೆ ಬೆಳಕು ಕೊಡಿ ಅಂತ ಈ ಅಜ್ಜಿ ಇದೀಗ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

  • ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್- ಸವಾರನಿಗೆ ಗಂಭೀರ ಗಾಯ

    ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್- ಸವಾರನಿಗೆ ಗಂಭೀರ ಗಾಯ

    ಬೆಂಗಳೂರು: ಚಲಿಸುತ್ತಿದ್ದ ಬೈಕ್ ಮೇಲೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ನಡೆದಿದೆ.

     

    36 ವರ್ಷದ ಉಮೇಶ್ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳಪೆ ಕಾಮಗಾರಿಯಿಂದ ನಿರ್ಮಾಣ ಮಾಡಿರುವ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಘಟನೆ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈವರೆಗೆ ನೆಲಮಂಗಲ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿಲ್ಲ.

     

  • ಇನ್ಮುಂದೆ ಬೆಂಗ್ಳೂರಲ್ಲಿ ಕರೆಂಟ್ ಯಾವಾಗ ಹೋಗುತ್ತೆ ಅಂತ ಮೊದಲೇ ಗೊತ್ತಾಗುತ್ತದೆ!

    ಬೆಂಗಳೂರು: ಇಷ್ಟು ದಿನ ವಿದ್ಯುತ್ ಯಾವಾಗ ಕಡಿತಗೊಳ್ಳುತ್ತೆ ಪುನಃ ಯಾವಾಗ ಬರುತ್ತೆ ಅನ್ನೋದು ನಮಗೆ ತಿಳಿತಾನೇ ಇರಲಿಲ್ಲ. ಆದ್ರೆ ಇನ್ಮುಂದೆ ಇದೇ ಟೈಂಗೆ ಕರೆಂಟ್ ಹೋಗುತ್ತೆ ಅನ್ನೋದು ಜನರಿಗೂ ಗೊತ್ತಾಗತ್ತೆ. ಈ ಮೂಲಕ ಬೆಸ್ಕಾಂ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗ್ತಿದೆ.

    ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲ. ಸಿಲಿಕಾನ್ ಸಿಟಿಯಲ್ಲೂ ವಿದ್ಯುತ್ ಸಮಸ್ಯೆ ಇದ್ದೇ ಇದೆ. ಯಾವ ಕ್ಷಣದಲ್ಲಿ ವಿದ್ಯುತ್ ಕಡಿತಗೊಳ್ಳುತ್ತೆ ಅನ್ನೋದು ಗೊತ್ತೇ ಆಗಲ್ಲ. ಈ ಟೈಮಲ್ಲಿ ಬೆಸ್ಕಾಂಗೆ ಜನರು ಹಿಡಿಶಾಪ ಹಾಕ್ತಾರೆ. ಹೀಗಾಗಿ ಇದಕ್ಕೆ ಪರಿಹಾರವೆಂಬಂತೆ ಬೆಸ್ಕಾಂ ವಿದ್ಯುತ್ ಪೂರೈಕೆ ಕಡಿತಗೊಳಿಸೋಕು ಮುನ್ನ ಗ್ರಾಹಕರ ಗಮನಕ್ಕೆ ತರಲು ಮುಂದಾಗಿದೆ. ಕರೆಂಟ್ ಇನ್ನೇನು ಹೋಗುತ್ತೆ ಅನ್ನೋಕೂ ಹತ್ತು ನಿಮಿಷಗಳ ಮೊದಲು ಗ್ರಾಹಕರ ಸೆಲ್ ಫೋನ್‍ಗೆ ಅಲರ್ಟ್ ಮೆಸೇಜ್ ಬರಲಿದೆ.

    ಈಗಾಗಲೇ ಬೆಸ್ಕಾಂ ಅಧಿಕಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕಲೆಕ್ಟ್ ಮಾಡ್ತಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 40 ಲಕ್ಷ ಗ್ರಾಹಕರಿದ್ದು, ಈಗಾಗ್ಲೆ 30 ಲಕ್ಷ ಗ್ರಾಹಕರ ನಂಬರ್ ಸಂಗ್ರಹಿಲಾಗಿದೆ. ಕೇವಲ ನಗರ ಪ್ರದೇಶಕ್ಕೆ ಮಾತ್ರವಲ್ಲದೇ ಸಿಲಿಕಾನ್ ಸಿಟಿ ಮುತ್ತಮುತ್ತಲ ಹಳ್ಳಿಗಳ ಗ್ರಾಹಕರು ಕೂಡ ಇದರ ಉಪಯೋಗ ಪಡೆಯಬಹುದಾಗಿದೆ.

    ವಿದ್ಯುತ್ ಸಮಸ್ಯೆ ಬಗ್ಗೆ ಮುಂದಾಲೋಚಿಸಿರೋ ಬೆಸ್ಕಾಂ ಈ ಹೊಸ ಐಡಿಯಾವನ್ನ ಚಾಲನೆಗೆ ತರ್ತಿದೆ. ಈ ಮೂಲಕ ಗ್ರಾಹಕ ಸ್ನೇಹಿ ಆಗಲು ಹೊರಟಿದೆ.