Tag: bengluru

  • 82 ರನ್‌ಗಳ ಜಯ – ಈ ಭರ್ಜರಿ ಗೆಲುವು ಆರ್‌ಸಿಬಿಗೆ ಹೇಗೆ ನೆರವಾಗುತ್ತೆ?

    82 ರನ್‌ಗಳ ಜಯ – ಈ ಭರ್ಜರಿ ಗೆಲುವು ಆರ್‌ಸಿಬಿಗೆ ಹೇಗೆ ನೆರವಾಗುತ್ತೆ?

    ಶಾರ್ಜಾ: ಇಂದಿನ ಪಂದ್ಯವನ್ನು 82 ರನ್‌ಗಳಿಂದ ಆರ್‌ಸಿಬಿ ಗೆಲ್ಲುವ ಮೂಲಕ ತನ್ನ ರನ್‌ರೇಟ್‌ ಉತ್ತಮ ಪಡಿಸಿದೆ.

    ಆರ್‌ಸಿಬಿ ಎರಡನೇ ಪಂದ್ಯವನ್ನು ಪಂಜಾಬ್‌ ವಿರುದ್ಧ ಆಡಿತ್ತು. 207 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಆರ್‌ಸಿಬಿ 17 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್‌ ಆಗಿತ್ತು. ಪರಿಣಾಮ ನೆಟ್‌ ರನ್‌ ರೇಟ್‌ -2.175ಕ್ಕೆ ಕುಸಿದಿತ್ತು. ಇದು ಆರ್‌ಸಿಬಿಗೆ ಭಾರೀ ಹೊಡೆತ ನೀಡಿತ್ತು.

    ಇಂದು ಪಂದ್ಯಕ್ಕೂ ಮುನ್ನ ಅಂಕ ಪಟ್ಟಿಯಲ್ಲಿ ಆರ್‌ಸಿಬಿ 4ನೇ ಸ್ಥಾನದಲ್ಲಿದ್ದರೂ -0.820 ನೆಟ್‌ ರನ್‌ ರೇಟ್‌ ಹೊಂದಿತ್ತು. 8 ಅಂಕಗಳಿಸಿದ್ದರೂ ನೆಟ್‌ ರನ್‌ ರೇಟ್‌ ಲೆಕ್ಕಾಚಾರ ನೋಡಿದರೆ ಕೊನೆಯ ಸ್ಥಾನದಲ್ಲೇ ಇತ್ತು. ಆದರೆ ಇಂದು 82 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: ಆರ್‌ಸಿಬಿಗೆ 82 ರನ್‍ಗಳ ಭರ್ಜರಿ ಗೆಲುವು – 2013ರ ನಂತರ ವಿಶೇಷ ಸಾಧನೆಗೈದ ಬೆಂಗಳೂರು

    8 ಪಂದ್ಯಗಳನ್ನು ಆಡಿರುವ ಮುಂಬೈ, ಡೆಲ್ಲಿ, ಆರ್‌ಸಿಬಿ  ಸಮಾನವಾಗಿ 10 ಅಂಕಗಳನ್ನು ಪಡೆಯುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಮುಂಬೈ +1.327, ಡೆಲ್ಲಿ +1.038, ಬೆಂಗಳೂರು -0.116 ನೆಟ್‌ ರನ್‌ ರೇಟ್‌ ಹೊಂದಿದೆ.

    ಒಟ್ಟು 8 ತಂಡಗಳು ಇರುವ ಕಾರಣ ಪ್ಲೇ ಆಫ್‌ಗೆ ಹೋಗುವ ಸಂದರ್ಭದಲ್ಲಿ ಎರಡು ತಂಡಗಳು ಸಮವಾಗಿ ಅಂಕ ಪಡೆದಿದ್ದರೆ ನೆಟ್‌ ರನ್‌ ರೇಟ್‌ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಪಂದ್ಯ ಸೋತರೂ ನೆಟ್‌ ರನ್‌ ರೇಟ್‌ ಚೆನ್ನಾಗಿದ್ದರೆ ಆ ತಂಡ ಪ್ಲೇ ಆಫ್‌ಗೆ ಹೋಗುತ್ತದೆ. ಈ ಕಾರಣಕ್ಕೆ ಇಂದಿನ ಭರ್ಜರಿ ಜಯದಿಂದ ಆರ್‌ಸಿಬಿ ನೆಟ್‌ ರನ್‌ ಏರಿಕೆಯಾಗಿದೆ.

  • ಡೋಂಟ್‌ ಕಿಲ್‌ ದಿ ಮೆಸೆಂಜರ್‌ – ಇಂದ್ರಜಿತ್‌ ಲಂಕೇಶ್‌

    ಡೋಂಟ್‌ ಕಿಲ್‌ ದಿ ಮೆಸೆಂಜರ್‌ – ಇಂದ್ರಜಿತ್‌ ಲಂಕೇಶ್‌

    ಬೆಂಗಳೂರು: “ಡೋಂಟ್‌ ಕಿಲ್‌ ದಿ ಮೆಸೆಂಜರ್‌” – ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಸದಸ್ಯತ್ವವನ್ನು ಪ್ರಶ್ನಿಸಿದ್ದಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಪತ್ರಿಕ್ರಿಯೆಯನ್ನು ನೀಡಿದ್ದಾರೆ.

    ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದರು. ನಾನು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ನಿರ್ದೇಶನ ಮಾಡಿದ್ದೇನೆ. ನಾವು ಸಿನಿಮಾದವರೇ, ನಾವು ಚಿತ್ರರಂಗಕ್ಕೆ ಸೇರಿದ್ದೇವೆ. ಚಿತ್ರರಂಗದ ಒಳಿತಿಗಾಗಿ ಈ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.

    ಈ ವಿಚಾರದಲ್ಲಿ ವಾಣಿಜ್ಯ ಮಂಡಳಿ ಏನಾದರೂ ಕ್ರಮ ತೆಗೆದುಕೊಂಡರೆ ನಾನು ಕಾನೂನಿನ ಮೊರೆ ಹೋಗುತ್ತೇನೆ ಎಂದು ಹೇಳಿದರು.

    ನಾನು ಒಬ್ಬ ಮೆಸೆಂಜರ್ ಅಷ್ಟೇ. ಸಿಸಿಬಿ ವಿಚಾರಣೆ ವಿಚಾರದಲ್ಲಿ ನಾನು ಏನ್ ಹೇಳಿದ್ದೇನೋ ಅದಕ್ಕೆ ನಾನು ಬದ್ಧವಾಗಿದ್ದೇನೆ. ಮಾಧ್ಯಮದಲ್ಲಿ ಏನ್ ಹೇಳಿದ್ದೇನೋ ಅದೆಲ್ಲವೂ ಸತ್ಯ. ಡ್ರಗ್ ಮಾಫಿಯಾ ವಿಚಾರದಲ್ಲಿ ನಾನು ಪೊಲೀಸರಿಗೆ ಪಾರಿವಾಳದಂತೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

    ನಾನು ಕೊಟ್ಟಿರುವ ಮಾಹಿತಿ ಆಧರಿಸಿ ಪೋಲೀಸರಿಗೆ ಸರಿಯಾಗಿ ತನಿಖೆ ಮಾಡಬೇಕು. ನೀಡಿದ ಮಾಹಿತಿಯನ್ನ ಆಧರಿಸಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನನ್ನ ಪರ ವಿರೋಧದ ಚರ್ಚೆ ಯ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಒಂದು ಪ್ರಕರಣದಿಂದ ಕಾನೂನಿನ ರೀತಿಯಲ್ಲಿ , ಚಿತ್ರರಂಗಕ್ಕೆ ಒಳ್ಳೆಯದಾದರೆ ಅದೇ ನನಗೆ ದೊಡ್ಡ ಸಂತೋಷ. ಮುಂದಾದರೂ ಆ ಕಳಂಕ ಬಾರದಂತೆ ನೋಡಿಕೊಳ್ಳಿ ಎಂದು ಇಂದ್ರಜಿತ್‌ ಲಂಕೇಶ್‌ ಮನವಿ ಮಾಡಿದರು.

  • ಬೆಂಗಳೂರಿನ ಪುಂಡರು ಅಮಾಯಕರು, ಮುಗ್ಧರಂತೆ – ಕೈ ನಾಯಕರಿಗೆ ‘ಪಬ್ಲಿಕ್’ ಪ್ರಶ್ನೆ

    ಬೆಂಗಳೂರಿನ ಪುಂಡರು ಅಮಾಯಕರು, ಮುಗ್ಧರಂತೆ – ಕೈ ನಾಯಕರಿಗೆ ‘ಪಬ್ಲಿಕ್’ ಪ್ರಶ್ನೆ

    ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಬಗ್ಗೆ ಇನ್ನೂ ಪೊಲೀಸ್ ತನಿಖೆ ನಡೆಯುತ್ತಿದೆ. ಪಾಲಿಕೆ ಸದಸ್ಯರ ಪಾತ್ರದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಷ್ಟರಲ್ಲೇ ಕೆಲ ಕಾಂಗ್ರೆಸ್ ನಾಯಕರು ಪುಂಡರಿಗೆ ಕ್ಲೀನ್‍ಚಿಟ್ ನೀಡಲು ಹೊರಟಂತೆ ಇದೆ.

    ಮೊನ್ನೆ ಮೊನ್ನೆಯಷ್ಟೇ ಡಿ.ಜೆ. ಹಳ್ಳಿ ಗಲಭೆಕೋರರಲ್ಲಿ ಕೆಲವರು ಅಮಾಯಕರು ಅಂತ ಶಾಸಕ ಜಮೀರ್ ಹೇಳಿಕೆ ಕೊಟ್ಟ ಬೆನ್ನಲ್ಲೇ ಇವತ್ತು ಕೂಡ, ಮೇಲ್ಮನೆ ಸದಸ್ಯ ಸಿ.ಎಂ. ಇಬ್ರಾಹಿಂ ಹಾಗೂ ಶಾಂತಿ ನಗರದ ಶಾಸಕ ಹ್ಯಾರೀಸ್ ಇದೇ ಜಪ ಮಾಡಿದ್ದಾರೆ.

    ಗಲಭೆ ಸಂಬಂಧ ಇವತ್ತು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರನ್ನು ಭೇಟಿಯಾದ ಕೈ ನಾಯಕರು ಹಾಗೂ ಮೌಲ್ವಿಗಳು, ಅಮಾಯಕರಿದ್ದರೆ ಬಿಟ್ಟು ಬಿಡಿ ಅಂತ ಒತ್ತಡ ಹೇರಿದ್ದಾರೆ. ಬಂಧಿತರಲ್ಲಿ ಕೆಲವರು ನಿರಾಪರಾಧಿಗಳಿದ್ದಾರೆ. ಅವರನ್ನು ಬಿಟ್ಟು ಕಳುಹಿಸಿ. ಆರೋಪಿಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

    ಪೋಸ್ಟ್ ಹಾಕಿದಾಕ್ಷಣ ಪೊಲೀಸರು ಕ್ರಮ ಕೈಗೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಹೇಳಿ ಗೂಬೆ ಕೂರಿಸಿದ್ದಾರೆ. ಇನ್ನೊಂದೆಡೆ, ಕೆಲವು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಕ್ಷಣವೇ ಬಿಡುಗಡೆ ಮಾಡಬೇಕೆಂದು ಶಾಸಕ ಹ್ಯಾರೀಸ್ ಹೇಳಿದ್ದಾರೆ.

    ಅಮಾಯಕರನ್ನು ಬಂಧಿಸಿದ್ರೆ ಬಿಟ್ಟು ಕಳುಹಿಸಿ ಅಂತ ಹೇಳಿದರೆ ಒತ್ತಡ ಆಗುವುದಿಲ್ಲವೇ ಎಂದು ಶಾಸಕ ಹ್ಯಾರೀಸ್‍ರನ್ನು ಪ್ರಶ್ನಿಸುತ್ತಿದ್ದಂತೆ ಸಿಟ್ಟಾಗಿದ್ದಾರೆ. ಈ ನಿಯೋಗದಲ್ಲೇ ಇದ್ದ ಮುಸ್ಲಿಂ ಜಮಾತ್ ಮುಖ್ಯಸ್ಥ ಮೊಹಮ್ಮದ್ ಸಾದ್, ಗಲಭೆಯಲ್ಲಿ ಕಾಣಿಸಿಕೊಂಡವವರೆಲ್ಲರೂ ಬೆಂಕಿ ಹಚ್ಚಿಲ್ಲ. ಕೆಲವರು ಅಲ್ಲಿಗೆ ಬಂದಿದ್ದಾರಷ್ಟೇ. ಹಾಗಾಗಿ, ಬಿಟ್ಟು ಕಳುಹಿಸಿ ಅಂತ ಮನವಿ ಮಾಡಿದ್ದೇವೆ ಎಂದಿದ್ದಾರೆ.

    ಇದೇ ವೇಳೆ, ಒಂದು ವಾರದಿಂದ ಹೇರಿರುವ ಕರ್ಫ್ಯೂವನ್ನು ಸಡಿಲಿಸಿ ಎಂದು ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ. ಕೆಲ ಕಾಂಗ್ರೆಸ್ ನಾಯಕರು ಗಲಭೆಕೋರರು ಅಮಾಯಕರು ಎಂದು ಹೇಳುತ್ತಿರುವ ಬೆನ್ನಲ್ಲೇ ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಕಾಂಗ್ರೆಸ್‍ಗೆ ‘ಪಬ್ಲಿಕ್’ ಪ್ರಶ್ನೆಗಳು
    1. ಡಿ.ಜೆ. ಹಳ್ಳಿ ಗಲಭೆ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಅಷ್ಟರಲ್ಲಿ ಕ್ಲೀನ್‍ಚಿಟ್ ನೀಡಲು ಕಾಂಗ್ರೆಸ್ ನಾಯಕರ್ಯಾರು?
    2. ಗಲಭೆಕೋರರಲ್ಲಿ ಕೆಲವರು ಅಮಾಯಕರಿದ್ದರೆ ಘಟನಾ ಸ್ಥಳದಲ್ಲಿ ಇವರಿಗೇನು ಕೆಲಸ?
    3. ಗಲಭೆಕೋರರಲ್ಲಿರೋ ಅಪ್ರಾಪ್ತರನ್ನು ಬಿಟ್ಟು ಬಿಡಬೇಕಾ? ತಪ್ಪು ಮಾಡಿದರೂ ಕ್ಷಮಿಸಿ ಬಿಡಬೇಕಾ?


    4. ಅಪ್ರಾಪ್ತರನ್ನು ಎಲ್ಲಿಗೆ ಕಳುಹಿಸಬೇಕು? ಏನ್ ಮಾಡಬೇಕು? ಅಂತ ಕಾನೂನು ನಿರ್ಧರಿಸುತ್ತೆ. ಇದನ್ನು ನಿರ್ಧರಿಸಲು ಕಾಂಗ್ರೆಸ್ ನಾಯಕರು ಯಾರು?
    5. ಗಲಭೆಕೋರರ ಬಗ್ಗೆಯಷ್ಟೇ ಮಾತನಾಡುವ ಕಾಂಗ್ರೆಸ್ಸಿಗೆ ಮನೆ ಕಳೆದುಕೊಂಡವರು, ವಾಹನ ಕಳೆದುಕೊಂಡವರು ನೆನಪಾಗುತ್ತಿಲ್ವಾ?
    6. ಗಲಭೆಯಿಂದ ಡಿ.ಜೆ. ಹಳ್ಳಿ ಹೊತ್ತಿ ಉರಿಯುತ್ತಿದ್ದಾಗ ಈ ನಾಯಕರೆಲ್ಲ ಎಲ್ಲಿ ಹೋಗಿದ್ದರು? ಈಗ ನೆನಪಾಯ್ತಾ?

  • ಬೆಂಗಳೂರು ನಗರದಲ್ಲಿ 144 ಸೆಕ್ಷನ್‌ ಜಾರಿ

    ಬೆಂಗಳೂರು ನಗರದಲ್ಲಿ 144 ಸೆಕ್ಷನ್‌ ಜಾರಿ

    ಬೆಂಗಳೂರು: ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಇಡೀ ಬೆಂಗಳೂರು ಕಮೀಷನರೇಟ್‌ ವ್ಯಾಪ್ತಿಯಲ್ಲಿ 144 ಸೆಕ್ಷನ್‌ ಜಾರಿಯಾಗಿದೆ.

    ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್ ‌ಪಂಥ್‌ ಆದೇಶ ಹೊರಡಿಸಿದ್ದಾರೆ.

    ಯಾವುದಕ್ಕೆ ನಿಷೇಧ:
    – ಯಾವುದೇ ವ್ಯಕ್ತಿ ಸಾರ್ವಜನಿಕರಿಗೆ ಧಕ್ಕೆ ಉಂಟಾಗುಂತೆ ಯಾವುದೇ ಕೃತ್ಯದಲ್ಲಿ ತೊಡಗುವಂತಿಲ್ಲ.
    – ಎರಡಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಹಾಗೂ ಅನಗತ್ಯವಾಗಿ ಸಂಚರಿಸುವಂತಿಲ್ಲ. ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ.

    – ಶಸ್ತ್ರಗಳನ್ನು, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಇತ್ಯಾದಿ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನು ಉಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ ಮತ್ತು ಸಂಗ್ರಹಿಸುವಂತಿಲ್ಲ.
    – ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ ಮಾಡುವಂತಿಲ್ಲ.

  • ಬೆಂಗಳೂರು ಅಲ್ಲ, ರಾಜ್ಯದಲ್ಲಿ ಎಲ್ಲೂ ಲಾಕ್‌ಡೌನ್‌ ಇರಲ್ಲ: ಸಿಎಂ ಬಿಎಸ್‌ವೈ

    ಬೆಂಗಳೂರು ಅಲ್ಲ, ರಾಜ್ಯದಲ್ಲಿ ಎಲ್ಲೂ ಲಾಕ್‌ಡೌನ್‌ ಇರಲ್ಲ: ಸಿಎಂ ಬಿಎಸ್‌ವೈ

    – ಕೊರೊನಾ ನಿಯಂತ್ರಿಸಲು ಲಾಕ್‌ಡೌನ್‌ ಪರಿಹಾರವಲ್ಲ
    – ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವಂತೆ ಮನವಿ

    ಬೆಂಗಳೂರು: ಕೊರೊನಾ ನಿಯಂತ್ರಿಸಲು ಲಾಕ್‌ಡೌನ್‌ ಒಂದೇ ಪರಿಹಾರವಲ್ಲ, ಸಾಮಾಜಿಕ ಅಂತರ ಮತ್ತು ಮಾಸ್ಕ್‌ ಧರಿಸುವ ಮೂಲಕ ಕೊರೊನಾ ನಿಯಂತ್ರಿಸಲು ಜನರು ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

    ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಇರುವುದಿಲ್ಲ. ಜನರ ರಕ್ಷಣೆಯ ಜೊತೆ ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಹೀಗಾಗಿ ಬೆಂಗಳೂರು ಮಾತ್ರ ಅಲ್ಲ ರಾಜ್ಯದ ಎಲ್ಲೂ ಲಾಕ್‌ಡೌನ್‌ ಮಾಡುವುದಿಲ್ಲ. ಆದರೆ ಕಂಟೈನ್ಮೆಂಟ್‌ ವಲಯದಲ್ಲಿ ನಿಯಮ ಬಿಗಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

    ಎಲ್ಲೇ ಹೋದರೂ ಮಾಸ್ಕ್‌ ಧರಿಸುವ ಬಿಗಿ ನಿಲುವನ್ನು ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಜೀವ ಉಳಿಸೋಣ ಎಂದು ವಿನಂತಿಸಿಕೊಂಡರು.

    ಆರಂಭದಲ್ಲಿ ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಮುಂಚೂಣಿಯಲ್ಲಿತ್ತು. ಆದರೆ ಲಾಕ್‌ಡೌನ್‌ ತೆರವಾದ ನಂತರ ಮಹಾರಾಷ್ಟ್ರ, ತಮಿಳುನಾಡು ಬೇರೆ ರಾಜ್ಯಗಳಿಂದ ಜನ ಬಂದ ಬಳಿಕ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈಗ ನಿಯಂತ್ರಣ ಮಾಡಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

    ಪೊಲೀಸರು ಬಹಳ ಕಷ್ಟಪಡುತ್ತಿದ್ದಾರೆ. ಮನೆಯಿಂದ ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಮಾಸ್ಕ್‌ ಧರಿಸದೇ ಇದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಸೋಂಕಿತರು ಅಡ್ಮಿಟ್‌? ಖಾಲಿ ಬೆಡ್ ಎಷ್ಟಿದೆ?

    ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಸೋಂಕಿತರು ಅಡ್ಮಿಟ್‌? ಖಾಲಿ ಬೆಡ್ ಎಷ್ಟಿದೆ?

    ಬೆಂಗಳೂರು: ಕೋವಿಡ್‌ ಸೋಂಕಿತರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೀಸಲಾಗಿಟ್ಟಿರುವ ಒಟ್ಟು 3,331 ಬೆಡ್‌ಗಳ ಪೈಕಿ 733 ಹಾಸಿಗೆಗಳು ಭರ್ತಿಯಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್‌ ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಅವರು ಬೆಂಗಳೂರು ನಗರದಾದ್ಯಂತ ಇರುವ ಒಟ್ಟು 72 ಖಾಸಗಿ ಆಸ್ಪತ್ರೆಗಳಲ್ಲಿ 3,331 ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಶನಿವಾರ ಸಂಜೆಯ ವೇಳೆಗೆ ಇವುಗಳಲ್ಲಿ 733 ಹಾಸಿಗೆಗಳು ಭರ್ತಿಯಾಗಿದ್ದು 2,598 ಹಾಸಿಗೆಗಳು ಅಂದರೆ ಸುಮಾರು ಶೇ.78 ಹಾಸಿಗೆಗಳು ಖಾಲಿಯಿವೆ ಎಂದು ತಿಳಿಸಿದ್ದಾರೆ.

    ಶನಿವಾರ ಟ್ವೀಟ್‌ ಮಾಡಿದ್ದ ಅವರು, ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್ ಗಳು ಸೇರಿದಂತೆ ಬೆಂಗಳೂರಿನ ಒಟ್ಟು 41 ಸ್ಥಳಗಳಲ್ಲಿ 4,958 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇವುಗಳಲ್ಲಿ 2107 ಹಾಸಿಗೆಗಳು ಅಂದರೆ ಸುಮಾರು ಶೇ.42.49 ಹಾಸಿಗೆಗಳು ಖಾಲಿಯಿವೆ ಎಂದು ತಿಳಿಸಿದ್ದರು.

    ಒಟ್ಟು ಬೆಂಗಳೂರಿನಲ್ಲಿ 8,345 ಮಂದಿಗೆ ಸೋಂಕು ಬಂದಿದ್ದು, ಈ ಪೈಕಿ 7,250 ಸಕ್ರಿಯ ಪ್ರಕರಣಗಳಿವೆ. 965 ಮಂದಿ ಬಿಡುಗಡೆಯಾಗಿದ್ದು, 129 ಮಂದಿ ಮೃತಪಟ್ಟಿದ್ದಾರೆ. ಶನಿವಾರ ಒಂದೇ ದಿನ ಬೆಂಗಳೂರಿನಲ್ಲಿ 1172 ಮಂದಿಗೆ ಸೋಂಕು ಬಂದಿದೆ.

  • ರಾಜ್ ಕುಮಾರ್ ಭಾರತೀಯ ಚಿತ್ರರಂಗದ ಚಕ್ರವರ್ತಿ: ಅನಿಲ್ ಕಪೂರ್

    ರಾಜ್ ಕುಮಾರ್ ಭಾರತೀಯ ಚಿತ್ರರಂಗದ ಚಕ್ರವರ್ತಿ: ಅನಿಲ್ ಕಪೂರ್

    ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರು ಭಾರತೀಯ ಚಿತ್ರರಂಗದ ಚಕ್ರವರ್ತಿ ಎಂದು ಬಾಲಿವುಡ್ ನಟ ಅನಿಲ್ ಕಪೂರ್ ಹೇಳಿದ್ದಾರೆ.

    ಬಸವನಗುಡಿಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಅವರು, ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ರಾಜ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ. ರಾಜ್ ಕುಮಾರ್ ಅವರು ಕನ್ನಡಕ್ಕೆ ಮಾತ್ರ ಅಲ್ಲ ಇಡೀ ಭಾರತೀಯ ಚಿತ್ರರಂಗದ ಹೆಮ್ಮೆ ಎಂದು ಶ್ಲಾಘಿಸಿದರು.

    ರಾಜ್ ಕುಮಾರ್ ಅವರು ಕೇವಲ ರಾಜ್ ಕುಮಾರ್ ಅಲ್ಲ ಅವರು ಚಕ್ರವರ್ತಿ ರಾಜ್ ಕುಮಾರ್, ಭಾರತೀಯ ಚಿತ್ರರಂಗದ ಎಲ್ಲಾ ನಟರಿಗೆ ಅವರು ಚಕ್ರವರ್ತಿ ಎಂದು ಹೇಳಿದ್ದಾರೆ. ಅವರು ಕೇವಲ ಕನ್ನಡ ಸಿನಿಮಾ ಜಗತ್ತಿಗೆ ಮಾತ್ರ ಸಿಮೀತ ಅಲ್ಲ ಅವರು ಇಡೀ ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೊಗಳಿದರು.

    ಡಾ ರಾಜ್ ಕುಮಾರ್ ಅವರು ತಮ್ಮ ಅದ್ಭುತ ನಟನೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಒಂದು ದಂತಕಥೆಯಾಗಿ ಉಳಿದಿದ್ದಾರೆ. ಅವರು ನಟನೆಯ ನಿಧಿ ಮತ್ತು ಕನ್ನಡ ಸಿನಿಮಾಗಳ ಪ್ರೇಮಿ ಆಗಿದ್ದರು. ರಾಜ್ ಕುಮಾರ್ ಅವರು ಭಾರತೀಯ ಚಿತ್ರ ರಸಿಕರ ಮನದಲ್ಲಿ ಯಾವಾಗಲೂ ಇರುತ್ತಾರೆ ಎಂದು ಅನಿಲ್ ಕಪೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಅವರನ್ನು ಕುರಿತು ಮಾತನಾಡಿದ ಅನಿಲ್ ಕಪೂರ್ ಅವರು, ನಾನು ವಿಜಯ್ ಅವರ ಬಹುದೊಡ್ಡ ಅಭಿಮಾನಿ. ಅವರು ನನ್ನ ನಟನೆಯ ಎರಡು ಸಿನಿಮಾಗೆ ಹಾಡನ್ನು ಹಾಡಿದ್ದಾರೆ. ನಾನು ನಟಿಸಿದ್ದ ಸ್ಲಂ ಡಾಗ್ ಮಿಲೇನಿಯರ್ ಚಿತ್ರದಲ್ಲಿ ಜೈ ಹೋ ಹಾಗೂ ಯುವರಾಜ ಚಿತ್ರದಲ್ಲಿ ಮನಮೋಹಿನಿ ಹಾಡುಗಳನ್ನು ವಿಜಯ್ ಹಾಡಿದ್ದಾರೆ. ಇನ್ನೊಂದು ಆಚ್ಚರಿಯ ಸಂಗತಿ ಎಂದರೆ ಎಆರ್ ರೆಹಮಾನ್ ಕೂಡ ವಿಜಯ್ ಅವರ ಅಭಿಮಾನಿ ಎಂದು ಅನಿಲ್ ಹೇಳಿದರು.

    ಈ ಎಲ್ಲ ವಿಚಾರಗಳ ಜೊತೆ ಕನ್ನಡದಲ್ಲಿ ತಮ್ಮ ನಟನೆಯ ಮೊದಲ ಸಿನಿಮಾ ಪಲ್ಲವಿ ಅನುಪಲ್ಲವಿ ಬಗ್ಗೆ ಮಾತನಾಡಿದ ಅನಿಲ್ ಕಪೂರ್, ನಾನು ಕನ್ನಡದಲ್ಲಿ ಮೊದಲು ನಟಿಸಿದ ಚಿತ್ರ ಪಲ್ಲವಿ ಅನುಪಲ್ಲವಿ ಇದು 1983 ರಲ್ಲಿ ಬಿಡುಗಡೆಯಾಗಿತ್ತು. ಇದರ ನಿರ್ದೇಶಕ ಮಣಿರತ್ನಂ ಅವರಿಗೂ ಕೂಡ ಇದು ಮೊದಲ ಚಿತ್ರ ಎಂದು ಹೇಳಿದ್ದಾರೆ. ಇದೇ ವೇಳೆ ಈ ಸಿನಿಮಾದ ನಗುವ ನಯನ ಮಧುರ ಮೌನ ಎಂಬ ಹಾಡನ್ನು ಹಾಡಿ ಜನರನ್ನು ರಂಜಿಸಿದರು.

    ಇತ್ತೀಚೆಗೆ ಮೃತ ಪಟ್ಟ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ನಟ ಗಿರೀಶ್ ಕರ್ನಾಡ್ ಅವರ ಬಗ್ಗೆ ಮಾತನಾಡಿದ ಕಪೂರ್, ನಾನು ಅವರ ಕಲೆಯ ಅಭಿಮಾನಿಯಾಗಿದ್ದೆ. ಅವರ ಜೊತೆ ಒಂದೆರಡು ಚಿತ್ರಗಳಲ್ಲಿ ನಟಿಸುವ ಅದೃಷ್ಟವು ನನಗೆ ಸಿಕ್ಕಿತ್ತು. ಇಂದು ಅವರ ನಮ್ಮ ಜೊತೆ ಇಲ್ಲ ಆದರೆ ಅವರು ಮಾಡಿರುವ ಕೆಲಸ ಮಾತ್ರ ನಮ್ಮ ಜೊತೆ ಶಾಶ್ವತವಾಗಿ ಉಳಿಯುತ್ತದೆ ಎಂದರು.

  • ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ – ಪ್ರಸಾದಕ್ಕೂ ಎಕ್ಸ್ ಪೈರಿ ಡೇಟ್

    ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ – ಪ್ರಸಾದಕ್ಕೂ ಎಕ್ಸ್ ಪೈರಿ ಡೇಟ್

    ಬೆಂಗಳೂರು: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಘಟನೆ ನಂತರ ಎಚ್ಚೆತ್ತ ಸರ್ಕಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

    ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಯಮ ಪ್ರಕಾರ ‘ಎಕ್ಸ್ ಪೈರಿ ಡೇಟ್’ ನಮೂದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಮುಜರಾಯಿ ಇಲಾಖೆ! – ಆದೇಶದಲ್ಲಿ ಏನಿದೆ?

    ಮುಜರಾಯಿ ಇಲಾಖೆ ದೇವಾಲಯಗಳು ಸೇರಿದಂತೆ ಎಲ್ಲಾ ಖಾಸಗಿ ದೇವಾಲಯಗಳು ಹಾಗೂ ಮಠಗಳಿಗೂ ಈ ನಿಯಮ ಅನ್ವಯವಾಗಲಿದೆ. ಪ್ರಸಾದದ ಮೇಲೆ ಏನೆಲ್ಲಾ ನಮೂದಾಗಬೇಕು ಅನ್ನೋದನ್ನು ನೋಡೋದಾದರೆ,

    * ಪ್ರಸಾದದ ಪ್ಯಾಕೆಟ್‍ನಲ್ಲಿ ದೇವಾಲಯ ಹೆಸರು
    * ತಯಾರಾದ ದಿನಾಂಕ
    * ಬ್ಯಾಚ್ ನಂಬರ್
    * ತೂಕ
    * ಬಳಕೆಯ ಅವಧಿ(ಎಕ್ಸ್ ಪೈರಿ ಡೇಟ್, ಯೂಸ್ ಬಿಫೋರ್, ಬೆಸ್ಟ್ ಬಿಫೋರ್)
    * ಪ್ರಸಾದಕ್ಕೆ ಬಳಸಿರುವ ಪದಾರ್ಥ

    ಇದು ಕೇವಲ ದೇವಾಲಯ ಪ್ರಸಾದಕ್ಕೆ ಮಾತ್ರವಲ್ಲದೇ ತೀರ್ಥದ ಬಾಟಲ್‍ಗೂ ಈ ನಿಯಮ ಅನ್ವಯವಾಗಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ತಿಂದು 17 ಮಂದಿ ಮೃತಪಟ್ಟಿದ್ದಾರೆ. ಇನ್ನೂ 60ಕ್ಕೂ ಮಂದಿಗೂ ಹೆಚ್ಚಿನ ಭಕ್ತರು ಅಸ್ವಸ್ಥರಾಗಿದ್ದು, ಮೈಸೂರು ಮತ್ತು ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ರೀತಿಯ ನಿಯಮವನ್ನು ಜಾರಿಗೆ ತಂದಿದೆ.

    ಈ ಹಿಂದೆಯೇ ಮುಜರಾಯಿ ಇಲಾಖೆ, ದೇವರ ನೈವೇದ್ಯ ಮತ್ತು ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು. ಪ್ರಮುಖವಾಗಿ ದೇವಾಲಯದ ಅಡುಗೆ ಕೋಣೆಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ಮೇಲೆ ಕಟ್ಟುನಿಟ್ಟಿನ ನಿಗಾವಹಿಸುವುದು. ತಯಾರಿಸಿದ ನೈವೇದ್ಯ/ ಅಡುಗೆಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಬೇಕು ಮತ್ತು ದೇವಾಲಯಗಳಲ್ಲಿ ತಯಾರಿಸುವ ಪ್ರಸಾದವನ್ನು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಈ ರೀತಿಯ ಅನೇಕ ನಿಯಮಗಳನ್ನು ಕಡ್ಡಾಯ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಗಡಿ ಮುಂದೆ ಹಾಕಿದ್ದ ನೀರಿನಿಂದ ಜಾರಿ ಬಿದ್ದಿದ್ದಕ್ಕೆ ಮಾಲೀಕನ ಕೊಲೆ!

    ಅಂಗಡಿ ಮುಂದೆ ಹಾಕಿದ್ದ ನೀರಿನಿಂದ ಜಾರಿ ಬಿದ್ದಿದ್ದಕ್ಕೆ ಮಾಲೀಕನ ಕೊಲೆ!

                                         ಆಕಾಶ್

    ಬೆಂಗಳೂರು: ಅಂಗಡಿ ಮುಂದೆ ಮಾಲೀಕ ನೀರು ಹಾಕುತ್ತಿದ್ದಾಗ, ಬೈಕಿನಲ್ಲಿ ಬರುತ್ತಿದ್ದ ಸವಾರ ಜಾರಿ ಕೆಳಗೆ ಬಿದ್ದಿದ್ದಾನೆ. ಇದರಿಂದ ಕೋಪಗೊಂಡ ಬೈಕಲ್ ಸವಾರ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ಕುರುಬರಹಳ್ಳಿ ಸರ್ಕಲ್ ನಲ್ಲಿ ನಡೆದಿದೆ.

    ಕುರುಬರಹಳ್ಳಿ ನಿವಾಸಿವಾದ ಮಂಜುನಾಥ್ ಕೊಲೆಯಾದ ದುರ್ದೈವಿ. ಇವರು ಕಾಂಡಿಮೆಂಟ್ಸ್ ಅಂಗಡಿಯಿಟ್ಟುಕೊಂಡಿದ್ದರು. ಎಂದಿನಂತೆ ಬೆಳಗ್ಗೆ 5 ಗಂಟೆಗೆ ಎದ್ದು ಅಂಗಡಿ ತೆರೆಯಲು ಮುಂದಾಗಿದ್ದಾರೆ. ಇದಕ್ಕೂ ಮುನ್ನ ಅಂಗಡಿಯ ಮುಂದೆ ನೀರು ಹಾಕಲು ಹೋದಾಗ ಇದೇ ಮಾರ್ಗದಲ್ಲಿ ತನ್ನ ಬುಲೆಟ್ ಬೈಕ್‍ನಲ್ಲಿ ಬರುತ್ತಿದ್ದ ಸಾಫ್ಟ್ ವೇರ್ ಉದ್ಯೋಗಿ ಆಕಾಶ್ ಎಂಬಾತನಿಗೆ ನೀರು ಬಿದ್ದಿದೆ. ಪರಿಣಾಮ ಆಕಾಶ್ ಸ್ಲಿಪ್ ಆಗಿ ಕೆಳಗೆ ಬಿದ್ದಿದ್ದಾನೆ. ನೀವು ಹಾಕಿದ ನೀರಿನಿಂದಲೇ ನಾನು ಕೆಳಗೆ ಬಿದ್ದೆ ಅಂತ ಮಂಜುನಾಥ್ ಜಗಳ ಕೂಡ ಶುರು ಮಾಡಿದ್ದಾನೆ ಎಂದು ಉತ್ತರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋರ್ ಹೇಳಿದ್ದಾರೆ.

    ಈ ಗಲಾಟೆ ವಿಕೋಪಕ್ಕೆ ಹೋಗಿ ಅಂಗಡಿ ಮಾಲೀಕ ಮಂಜುನಾಥ್ ಮತ್ತು ಸಾಫ್ಟ್ ವೇರ್ ಉದ್ಯೋಗಿ ಆಕಾಶ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಂತರ ಈ ಗಲಾಟೆ ನೋಡಿದ ಮಂಜುನಾಥ ಮಗ ಮನೋಜ್ ಕೂಡ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಮೂವರು ಕೊನೆಗೆ ಚಾಕು, ಕಬ್ಬಿಣದ ರಾಡ್ ಹಿಡಿದು ಜಗಳವಾಡಿದ್ದಾರೆ.

    ಕೊನೆಗೆ ಈ ಜಗಳದಲ್ಲಿ ಮೂವರು ಪರಸ್ಪರ ಚಾಕು, ಕಬ್ಬಿಣದ ರಾಡ್‍ಗಳಿದ್ದ ಹೊಡೆದಾಡಿಕೊಂಡಿದ್ದು, ಪರಿಣಾಮ ಅಂಗಡಿ ಮಾಲೀಕ ಮಂಜುನಾಥ್ ಮೃತಪಟ್ಟಿದ್ದಾನೆ. ಮಂಜುನಾಥ್ ಮಗ ಮನೋಜ್ ಮತ್ತು ಸಾಫ್ಟ್ ವೇರ್ ಉದ್ಯೋಗಿ ಆಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

    ಈ ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತಿಂಗಳಿಗೊಂದು ಸಿಹಿ ಸುದ್ದಿ ಕೊಡ್ತೀನಿ ಅಂತ ಹೇಳಿ ಸಿಎಂ ಎಡವಟ್ ಮಾಡ್ಕೊಂಡ್ರಾ?

    ತಿಂಗಳಿಗೊಂದು ಸಿಹಿ ಸುದ್ದಿ ಕೊಡ್ತೀನಿ ಅಂತ ಹೇಳಿ ಸಿಎಂ ಎಡವಟ್ ಮಾಡ್ಕೊಂಡ್ರಾ?

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲದೇ ಇನ್ನು ಮುಂದೆ ಪ್ರತಿ ತಿಂಗಳು ಒಂದೊಂದು ಸಿಹಿ ಸುದ್ದಿ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಚುನಾವಣೆ ಬಳಿಕ ಮುಂದಿನ ತಿಂಗಳು ರೈತರ ಬೃಹತ್ ಸಮಾವೇಶ ಆಯೋಜಿಸಿ ಋಣ ಪತ್ರ ಹಂಚಿಕೆ ಮಾಡುತ್ತೇನೆ. ಅದಕ್ಕೆ ಪೂರಕವಾದ ಸಾಕಷ್ಟು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಇದರಿಂದ ದೀಪಾವಳಿ ಮಾತ್ರವಲ್ಲದೇ ಪ್ರತಿ ತಿಂಗಳು ಸಿಹಿ ಸುದ್ದಿ ನೀಡುತ್ತೇನೆ ಎಂದು ನಗರದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ರೈತರ ಸಾಲ ಮನ್ನಾ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ ಅಂತ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ರೈತರ ಸಾಲ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಂಪೂರ್ಣ ಮಾಹಿತಿ ಇಲ್ಲದೆ ಫಜೀತಿಯಾಗಬಾರದು. ಬಜೆಟ್ ನಲ್ಲಿ ಇದಕ್ಕೆ ಅಂತಾನೇ ಹಣವನ್ನ ಮೀಸಲಿಟ್ಟಿದ್ದೇನೆ. 43 ಸಾವಿರ ಕೋಟಿ ಸಣ್ಣ ಮೊತ್ತ ಅಲ್ಲ. ಮಾಹಿತಿ ಕೊಟ್ಟಿರುವ ರೈತರ ವಿವರವನ್ನ ಉಸ್ತುವಾರಿ ಸಮಿತಿಗೆ ಕಳುಹಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿ 10 ಲಕ್ಷ ರೈತರನ್ನೊಳಗೊಂಡ ಬೃಹತ್ ಸಮಾವೇಶ ಮಾಡುತ್ತೇನೆ. ಸಮಾವೇಶ ಮಾಡಿ ರೈತರಿಗೆ ಸಾಲಮನ್ನಾ ಋಣಮುಕ್ತ ಪತ್ರ ನೀಡುತ್ತೇನೆ ಅಂತ ಸಿಎಂ ತಿಳಿಸಿದ್ದಾರೆ.

    ನೀತಿ ಸಂಹಿತೆ ಉಲ್ಲಂಘನೆ: ಐದು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಈ ವೇಳೆ ರಾಜ್ಯದ ಜನರಿಗೆ ಪ್ರತಿ ತಿಂಗಳ ಒಂದೊಂದು ಸಿಹಿ ಸುದ್ದಿ ನೀಡುತ್ತೇನೆ ಎಂದು ಬಹಿರಂಗವಾಗಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈ ಹೇಳಿಕೆಯಿಂದ ನೀತಿ ಸಂಹಿತೆ ಉಲ್ಲಂಘನೆ ಆಗಿದ್ಯಾ? ಇಲ್ಲವೋ ಎನ್ನುವ ಗೊಂದಲ ಈಗ ಎದ್ದಿದೆ. ಹೀಗಾಗಿ ಚುನಾವಣೆ ಆಯೋಗ ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv