Tag: Bengaluruy

  • ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿ: ಹೆಚ್‌.ಆರ್‌ ರಂಗನಾಥ್‌

    ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿ: ಹೆಚ್‌.ಆರ್‌ ರಂಗನಾಥ್‌

    ಬೆಂಗಳೂರು: ನಮ್ಮ ಕಾಲದಲ್ಲಿ ಈ ರೀತಿಯ ಸೌಲಭ್ಯಗಳು ಇರಲಿಲ್ಲ. ಆದರೆ ಇಂದು ಎಲ್ಲವೂ ಬದಲಾಗಿದೆ. ಹೀಗಾಗಿ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿ ಎಂದು ಪೋಷಕರಿಗೆ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌. ಆರ್‌ ರಂಗನಾಥ್‌ (H R Ranganath) ಹೇಳಿದರು.

    ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ  (PUBLiC TV Vidhyapeeta) ಚಾಲನೆ ಕೊಟ್ಟು ಬಳಿಕ ಮಾತನಾಡಿದ ಅವರು, ನಿನ್ನೆಯಷ್ಟೇ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಮತ ಹಾಕಲು ಬನ್ನಿ ಎಂದು ಎಷ್ಟು ಗಂಭೀರವಾಗಿ ಕರೆಯುತ್ತಿವೆಯೋ ಅದಕ್ಕಿಂತ ಹೆಚ್ಚು ಗಂಭೀರವಾಗಿ ಮಕ್ಕಳ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

    ಪಿಯುಸಿ, ಪದವಿ ನಂತರ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕೆ ಯಾವ ಕಾಲೇಜು ಹಾಗೂ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಹೀಗಾಗಿ ಈ ಬಾರಿ ಕೂಡ ಮಕ್ಕಳ ಪೋಷಕರು ತಮ್ಮ ಮಕ್ಕಳು ಯಾವ ಕಾಲೇಜು ಹಾಗೂ ಯಾವ ಕೋರ್ಸ್‌ ಮಾಡಬೇಕು ಎಂಬುದನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆಂದು ಹೆಚ್‌ಆರ್‌ಆರ್‌ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಚಾಲನೆ

    ಈ ಬಾರಿಯ ಶೈಕ್ಷಣಿಕ ಮೇಳದಲ್ಲಿ 110 ಸಂಸ್ಥೆಗಳು ಇವೆ. ಈ 110 ಸಂಸ್ಥೆಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅದರಲ್ಲಿ ಯಾವುದು ಬೇಕು ಎಂಬುದನ್ನು ಆರಿಸಿಕೊಳ್ಳುವುದಕ್ಕೆ ಇದೊಂದು ವೇದಿಕೆ. ನಮಗೆಲ್ಲ ಈ ಸೌಲಭ್ಯಗಳು ಇರಲಿಲ್ಲ. ನಾವು SSLC, PUC ಪಾಸ್‌ ಆದರೆ 10 ಕಾಲೇಜಿಗೆ ಅರ್ಜಿ ಹಾಕಬೇಕಿತ್ತು. ಯಾವ ಕಾಲೇಜಿನಲ್ಲಿ ಸೀಟು ಸಿಗುತ್ತೆ ಅಂತಾನೂ ಗೊತ್ತಿರಲಿಲ್ಲ. ಹೀಗಾಗಿ ನಾವು ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಅಲೆದಾಡಬೇಕಾಗಿತ್ತು. ಅಪ್ಲಿಕೇಷನ್‌ ತೆಗೆದುಕೊಳ್ಳೋಕೆ ಹಾಗೂ ಕೊಡುವುದಕ್ಕೆ ಮೂರು ಮೂರು ದಿನ ಓಡಾಡುತ್ತಿದ್ದೆವು. ಇಷ್ಟು ಮಾತ್ರವಲ್ಲದೇ ಅದರಲ್ಲಿ ಜಾತಿ ಪ್ರಮಾಣ ಪತ್ರ ಅಂಥದ್ದೇನಾದರೂ ಮಿಸ್ಸಿಂಗ್ ಆದ್ರೆ ಅದಕ್ಕೂ ಎರಡೆರಡು ದಿನ ಓಡಾಡುತ್ತಿದ್ವಿ.‌ ಇನ್ನು ತಹಶೀಲ್ದಾರ್‌ ಕಚೇರಿಗೆ ಹೋದ್ರಂತೂ 4 ದಿನ ಬೇಕೇ ಬೇಕು ಎಂಬುದಾಗಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡರು.

    ಸದ್ಯ ಇವತ್ತು ಎಲ್ಲವೂ ಬದಲಾಗಿದೆ. ಅದಕ್ಕೆ ಒಂದು ಒಳ್ಳೆಯ ಅವಕಾಶ ಇಲ್ಲಿದೆ. ದೇವರು ಒಳ್ಳೆಯ ಅವಕಾಶ ಗಳನ್ನು ನೀಡುತ್ತಿದ್ದಾನೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾದವರು ನಾವಾಗಿರುತ್ತೇವೆ. ಹೀಗಾಗಿ ಒಳ್ಳೊಳ್ಳೆಯ ಸಂಸ್ಥೆಗಳಿವೆ. ನಿಮ್ಮ ಮಗುವಿಗೆ ಒಳ್ಳೆಯ ಕಾಲೇಜು ಹಾಗೂ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವಂತೆ ಹಚ್‌ಆರ್‌ ಆರ್‌ ಪೋಷಕರಿಗೆ ಕಿವಿಮಾತು ಹೇಳಿದರು.

    110ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ: ಕರ್ನಾಟಕದ (Karnataka) ಅತಿ ದೊಡ್ಡ ಶೈಕ್ಷಣಿಕ ಮೇಳ ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 110ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

    ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್ ಆರ್ಕಿಟೆಕ್ಚರ್, ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು, ವಾಣಿಜ್ಯ ಮತ್ತು ಬ್ಯಾಂಕಿಂಗ್, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು, ಸಮೂಹ ಸಂವಹನ, ಎಂಬಿಎ ಸಂಸ್ಥೆಗಳು ವಿದ್ಯಾಪೀಠದಲ್ಲಿ ಭಾಗಿಯಾಗಿವೆ.

    ಮತದಾನ ಮಾಡಿ, ಉಡುಗೊರೆ ಪಡೆಯಿರಿ: ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಅದರಲ್ಲೂ ವಿಶೇಷವಾಗಿ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾವಣೆ ಮಾಡಿದ ವಿದ್ಯಾರ್ಥಿಗಳಿಗೆ ಆಕರ್ಷಕ ಉಡುಗೊರೆ ಸಿಗಲಿದೆ.

    ಚಿನ್ನದ ನಾಣ್ಯ, ಸೈಕಲ್‌ ಉಡುಗೊರೆ: ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಚಿನ್ನದ ನಾಣ್ಯ ಹಾಗೂ ಬೈಸಿಕಲ್‌ ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುವುದು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದ್ದಲ್ಲಿ ಅವರಿಗೂ ಉಡುಗೊರೆ ಸಿಗಲಿದೆ.

  • ಅಯ್ಯೋ ಇಲ್ಲ ಸರ್, ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ: ಸಲೀಂ, ಉಗ್ರಪ್ಪ ಸಮರ್ಥನೆ

    ಅಯ್ಯೋ ಇಲ್ಲ ಸರ್, ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ: ಸಲೀಂ, ಉಗ್ರಪ್ಪ ಸಮರ್ಥನೆ

    ಬೆಂಗಳೂರು: ಅಯ್ಯೋ ಇಲ್ಲ ಸರ್.. ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ. ಅದು ನಾನು ತಪ್ಪಾಗಿ ಹೇಳಿದ್ದೇನೆ ಎಂದು ಹೇಳುವ ಮೂಲಕ ಕೆಪಿಸಿಸಿ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಸಂಸದ ಉಗ್ರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.

    ಡಿಕೆಶಿಯವರು ಒಳ್ಳೆಯ ನಾಯಕ. ವಿಜಯೇಂದ್ರ ಬಂದ ಬಳಿಕ ಕಲೆಕ್ಷನ್ ಜಾಸ್ತಿಯಾಗಿದೆ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಕಾಂಗ್ರೆಸ್ ನಾಯಕರು ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲೂಸೀವ್ ಆಗಿ ಮಾತನಾಡಿದ್ದಾರೆ.

    ನಾವು ಹೇಳಿದ ವಿಚಾರವಷ್ಟೇ ವರದಿ ಮಾಡಬೇಕಿತ್ತು. ನಾವು ಮಾತಾಡಿದ್ದು ಇವತ್ತಿನ ಪರಿಸ್ಥಿತಿ ಅಷ್ಟೇ ಎಂದು ಹೇಳುವ ಮೂಲಕ ಉಗ್ರಪ್ಪ ಅವರು ಮಾಧ್ಯಮಗಳಿಗೆ ನೀತಿ ಪಾಠ ಮಾಡಿದ್ದಾರೆ.

    ಹೇಳಿದ್ದೇನು..?
    ರಾಜ್ಯ ರಾಜಕಾರಣದಲ್ಲಿ ಪರ್ಸಂಟೇಜ್ ಕೋಲಾಹಲ ಎಬ್ಬಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ಪರ್ಸಂಟೇಜ್ ಆರೋಪವೊಂದು ಕೇಳಿಬಂದಿದ್ದು, ಕಾಂಗ್ರೆಸ್ ನಾಯಕರೇ ಈ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತ, ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಸಂಸದ ಉಗ್ರಪ್ಪ ನಡುವೆ ಸಂಭಾಷಣೆ ನಡೆದಿದೆ. ಡಿಕೆಶಿ ಅವರು ಕಲೆಕ್ಷನ್ ಗಿರಾಕಿ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹೇಳಿರುವುದು ಇದೀಗ ಭಾರೀ ಚರ್ಚೆಯಾಗುತ್ತಿದೆ.

    ಜಲಸಂಪನ್ಮೂಲ ಇಲಾಖೆಯಲ್ಲಿ ಹೇಗೆ ಪರ್ಸಂಟೇಜ್ ಫಿಕ್ಸಾಗುತ್ತೆ ಎಂದು ಮಾತನಾಡಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಪರ್ಸಂಟೇಜ್ ಹೇಗೆ ಹಚ್ಚಾಯ್ತು..?, ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲೆಲ್ಲಾ 6 ರಿಂದ 8 ಪರ್ಸೆಂಟ್ ಇತ್ತು. ಡಿಕೆಶಿ ಬಂದ ಮೇಲೆ 12 ಪರ್ಸೆಂಟ್ ಮಾಡಿದರು ಎಂದು ಸಲೀಂ ಅವರು ಉಗ್ರಪ್ಪ ಬಳಿ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ

    ಇದೇ ವೇಳೆ ಜಲ ಸಂಪನ್ಮೂಲ ಇಲಾಖೆಯ ಕಾಂಟ್ರಾಕ್ಟರ್ ಗಳಾಗಿರುವ ಉಪ್ಪಾರ್, ಜೀ.ಶಂಕರ್ ಹನುಮಂತಪ್ಪರ ಬಗ್ಗೆಯು ಪ್ರಸ್ತಾಪ ಮಾಡಿದ್ದಾರೆ. ವಾರದ ಹಿಂದೆ ಈ ಕಾಂಟ್ರಕ್ಟರ್ ಗಳ ಮೇಲೆ ಐಟಿ ದಾಳಿ ನಡೆದಿತ್ತು. ಪ್ರೆಸ್ ಮೀಟ್ ಗೂ ಮುನ್ನ ಈ ವಿಚಾರದ ಬಗ್ಗೆ ಸಲೀಂ ಹಾಗೂ ಉಗ್ರಪ್ಪ ಚರ್ಚೆ ನಡೆಸಿದ್ದರು. ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದಾಗಲೂ ಇದೆ ಕಾಂಟ್ರಾಕ್ಟರ್ ಗಳು ಇದ್ದರು. ಡಿಕೆಶಿ ಆಪ್ತ ಮುಳಗುಂದ ಸಾಕಷ್ಟು ದುಡ್ಡು ಮಾಡಿದ್ದಾರೆ. ಮುಳಗುಂದ 50-100 ಕೋಟಿ ಮಾಡಿದ್ದಾನೆ ಅಂದ್ರೆ ಡಿಕೆ ಹತ್ತಿರ ಎಷ್ಟಿರಬೇಕು ಲೆಕ್ಕ ಹಾಕಿ. ಡಿಕೆ ಬರೀ ಕಲೆಕ್ಷನ್ ಗಿರಾಕಿ ಎಂದಿದ್ದಾರೆ.

  • ರಾಧಿಕಾ ಕೆಜಿಎಫ್ ನೋಡಿಲ್ಲ – ರಾಕಿ ಭಾಯ್ ಸ್ಪಷ್ಟನೆ

    ರಾಧಿಕಾ ಕೆಜಿಎಫ್ ನೋಡಿಲ್ಲ – ರಾಕಿ ಭಾಯ್ ಸ್ಪಷ್ಟನೆ

    ಬೆಂಗಳೂರು: ಭಾರತದಾದ್ಯಂತ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾವನ್ನು ನೋಡಿ ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಆದರೆ ಯಶ್ ಪತ್ನಿ ರಾಧಿಕಾ ಪಂಡಿತ್ ಇನ್ನೂ ಕೆಜೆಎಫ್ ಸಿನಿಮಾವನ್ನು ನೋಡಿಲ್ಲ.

    ಹೌದು.. ನಟಿ ರಾಧಿಕಾ ಪಂಡಿತ್ ಇನ್ನೂ ಕೆಜಿಎಫ್ ಸಿನಿಮಾವನ್ನು ನೋಡಿಲ್ಲ. ಈ ಬಗ್ಗೆ ಯಶ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಜಿಎಫ್ ಸಿನಿಮಾವನ್ನು ಹೊಸ ಸೌಂಡ್‍ನಲ್ಲಿ ನೋಡುವುದಕ್ಕೆ ಓರಾಯನ್ ಮಾಲ್‍ ಗೆ ಹೋಗಿದ್ದರು. ಈ ವೇಳೆ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ಯಶ್, ರಾಧಿಕಾ ಪಂಡಿತ್ ಇನ್ನೂ ಸಿನಿಮಾ ನೋಡಿಲ್ಲಾ ಎಂದು ಹೇಳಿದ್ದಾರೆ. ಇದನ್ನೂ ಓದಿ: 150 ಕೋಟಿಯ ಕ್ಲಬ್ ಸೇರಿ ದಾಖಲೆ ಬರೆದ ಕೆಜಿಎಫ್!

    ರಾಧಿಕಾ ಅವರಿಗೂ ಸಿನಿಮಾ ನೋಡಬೇಕೆಂಬ ಆಸೆ ಇದೆ. ಆದರೆ ನೋಡಲು ಸಾಧ್ಯವಾಗಿಲ್ಲ. ಎಲ್ಲರೂ ಇಷ್ಟೊಂದು ಇಷ್ಟ ಪಡುತ್ತಿದ್ದಾರೆ. ನಾನು ಸಿನಿಮಾ ನೋಡಲೇಬೇಕು ಎಂದು ಪ್ರತಿದಿನ ಕೇಳುತ್ತಿದ್ದಾರೆ. ಆದರೆ ರಾಧಿಕಾ ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ. ಯಾಕೆಂದರೆ ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ರಾಧಿಕಾ ಸಿನಿಮಾ ನೋಡಲು ಆಗುವುದಿಲ್ಲ ಎಂದು ಯಶ್ ಅಭಿಮಾನಿಗಳ ಬಳಿ ಹೇಳಿದ್ದಾರೆ.

    ರಾಧಿಕಾ ಅವರು ಡಿಸೆಂಬರ್ 2 ಭಾನುವಾರದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ರಾಧಿಕಾ ಅವರು ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಜೊತೆ ಹೊಸ ಜಗತ್ತಿನಲ್ಲಿ ಹೊಸ ಅನುಭವಗಳನ್ನ ಪಡೆಯುತ್ತಿದ್ದಾರೆ.

    ರಾಧಿಕಾಗೆ ಡಾಕ್ಟರ್ ರೆಸ್ಟ್ ಮಾಡಲು ಸೂಚಿಸಿದ್ದಾರೆ. ಆದರೂ ನಾನು ಸಿನಿಮಾ ನೋಡಬೇಕು ಎಂದು ಯಶ್ ಬಳಿ ತುಂಬಾ ಸಾರಿ ಹೇಳಿದ್ದಾರಂತೆ. ಆದರೆ ಡಾಕ್ಟರ್ ಸದ್ಯಕ್ಕೆ ಹೊರಗಡೆ ಹೋಗೋದು ಬೇಡ ಅಂತ ಕೆಜಿಎಫ್ ವೀಕ್ಷಣೆಗೆ ಬ್ರೇಕ್ ಹಾಕಿದ್ದಾರೆ. ಸದ್ಯದಲ್ಲೇ ತಾಯಿ, ಮಗು ಇಬ್ಬರು ಕೆಜಿಎಫ್ ಸಿನಿಮಾವನ್ನು ವೀಕ್ಷಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv