Tag: Bengalurue

  • ಸರ್ಕಾರಿ ಕಚೇರಿಗಳಿಗಾಗಿ 50 ಮಹಡಿಗಳ ಅವಳಿಗೋಪುರ ನಿರ್ಮಾಣ: ಗೋವಿಂದ ಕಾರಜೋಳ

    ಸರ್ಕಾರಿ ಕಚೇರಿಗಳಿಗಾಗಿ 50 ಮಹಡಿಗಳ ಅವಳಿಗೋಪುರ ನಿರ್ಮಾಣ: ಗೋವಿಂದ ಕಾರಜೋಳ

    – ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳಿಗೆ ಹೊಸ ಕಟ್ಟಡ

    ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಸದುದ್ದೇಶದಿಂದ ನಗರದ ಹೃದಯಭಾಗವಾಗಿರುವ ಆನಂದರಾವ್ ಸರ್ಕಲ್ ಬಳಿ 1,250 ಕೋಟಿ ರೂ. ವೆಚ್ಚದ ಸುಸಜ್ಜಿತ 50 ಮಹಡಿಗಳ ಅವಳಿಗೋಪುರವನ್ನು ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

    ಕಾಮಗಾರಿ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದಲ್ಲದೇ ಸಕಾಲದಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕಷ್ಟಕರವಾಗುತ್ತಿದೆ. ಸಾರ್ವಜನಿಕರಿಗೂ ಅನಾನುಕೂಲವಾಗುತ್ತಿದೆ. ಇದನ್ನು ಮನಗಂಡು ಸಿಎಂ ಯಡಿಯೂರಪ್ಪ ಅವರು 2020-21 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದರು. ಕಳೆದ ಸಚಿವ ಸಂಪುಟದಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಈ ಪ್ರದೇಶವು ವಿಧಾನಸೌಧ, ವಿಕಾಸಸೌಧ, ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ನೌಕರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

    ಈ ಕಾಮಗಾರಿಯನ್ನು ಪಿಪಿಪಿ ಮಾದರಿಯಲ್ಲಿ ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ ಲಿಮಿಟೆಡ್ (ಎನ್‍ಬಿಸಿಸಿ) ಇವರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುವುದು. 8.5 ಎಕರೆ ಸರ್ಕಾರಿ ನಿವೇಶನದಲ್ಲಿ 23.94 ಲಕ್ಷ ಚದುರ ಅಡಿ ವಿಸ್ತೀರ್ಣದಲ್ಲಿ ಈ ಬೃಹತ್ ಕಟ್ಟಡವನ್ನು ನಿರ್ಮಿಸಲಾಗುವುದು. ಶೇ. 60: 40 ಅನುಪಾತದಲ್ಲಿ ಭಾಗಶ: ಕಟ್ಟಡಗಳನ್ನು ನಿರ್ಮಿಸಲಾಗುವುದು. ಎನ್‍ಬಿಸಿಸಿಗೆ 30 ವರ್ಷಗಳ ಲೀಸ್ ನೀಡುವ ಮೂಲಕ ನಿರ್ಮಿಸಲಾಗುವುದು. ಎನ್‍ಬಿಸಿಸಿ ಅವರೊಂದಿಗೆ ಶೀಘ್ರವಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

    ಶೇ. 60 ರಷ್ಟು ಕಟ್ಟಡ ಪ್ರದೇಶವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು. ರಾಜ್ಯ ಸರ್ಕಾರಕ್ಕೆ ಯಾವುದೇ ವೆಚ್ಚವಿಲ್ಲದೇ ಕಟ್ಟಡ ನಿರ್ಮಾಣವಾಗುತ್ತದೆ. ಕಟ್ಟಡ ನಿರ್ವಹಣೆಯ ವೆಚ್ಚವನ್ನು ಕಟ್ಟಡದ ವಾಸಿಗಳಿಂದಲೇ ಭರಿಸಲು ಉದ್ದೇಶಿಸಿರುವುದರಿಂದ ನಿರ್ವಹಣೆಯ ವೆಚ್ಚವೂ ಉಳಿಕೆಯಾಗಲಿದೆ. ಯಾವುದೇ ವೆಚ್ಚವಿಲ್ಲದೇ ಸರ್ಕಾರಕ್ಕೆ 263 ಕೋಟಿ ರೂ. ನಿವ್ವಳ ಲಾಭವಾಗಲಿದೆ. ಈ ಕಾಮಗಾರಿಯನ್ನು 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈ ನಿವೇಶನದಲ್ಲಿ 1940 ಕ್ಕಿಂತಲೂ ಹಿಂದೆ ನಿರ್ಮಿಸಲಾದ ಲೋಕೋಪಯೋಗಿ ಇಲಾಖೆಯ ಕಟ್ಟಡಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡಗಳು ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡಗಳಿದ್ದು, ಇವುಗಳನ್ನು ಶೀಘ್ರವಾಗಿ ತೆರವುಗೊಳಿಸಲಾಗುತ್ತದೆ.

    ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಅಭಿಯಂತರರಾದ ಶಿವಯೋಗಿ ಹಿರೇಮಠ, ಅಧೀಕ್ಷಕ ಅಭಿಯಂತರರಾದ ಎಲ್. ಶ್ರೀಧರ ಮೂರ್ತಿ, ಕಾರ್ಯನಿರ್ವಾಹಕ ಅಭಿಯಂತರ ಜಿ. ಡಿ. ಕುಮಾರ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ನಾಳೆಯಿಂದ ಕಲಾಸಿಪಾಳ್ಯ, ಕೆಆರ್ ಮಾರ್ಕೆಟ್ ಓಪನ್

    ನಾಳೆಯಿಂದ ಕಲಾಸಿಪಾಳ್ಯ, ಕೆಆರ್ ಮಾರ್ಕೆಟ್ ಓಪನ್

    ಬೆಂಗಳೂರು: ನಾಳೆಯಿಂದ ಕೆ.ಆರ್.ಮಾರ್ಕೆಟ್ ಹಾಗೂ ಕಲಾಸಿಪಾಳ್ಯ ಮಾರ್ಕೆಟ್‍ಗಳು ತೆರೆಯಲಿದೆ. ಸುಮಾರು 6 ತಿಂಗಳಿನಿಂದ ಬಂದ್ ಆಗಿದ್ದ ಮಾರುಕಟ್ಟೆಗಳು ತೆರೆಯಲಿದ್ದು, ವ್ಯಾಪಾರಿಗಳ ಸಂತಸಕ್ಕೆ ಕಾರಣವಾಗಿದೆ.

    ಮಾರುಕಟ್ಟೆ ತೆರೆಯಲು ಬಿಬಿಎಂಪಿಯಿಂದಲೂ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹೂ, ಹಣ್ಣು, ತರಕಾರಿ ವ್ಯಾಪಾರಿಗಳು ಸೇರಿ ಎಲ್ಲಾ ರೀತಿಯ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುತ್ತಿದ್ದು, ಹೂ ವ್ಯಾಪಾರ ನಡೆಯುವ ಸ್ಥಳದಲ್ಲಿ ಕೆಲವೊಂದು ನಿರ್ಬಂಧ ಹೇರಲು ಚಿಂತನೆ ನಡೆಸಲಾಗಿದೆ.

    ಕೇಂದ್ರ ಸರ್ಕಾರದಿಂದ ದೊಡ್ಡ ಮಾರ್ಕೆಟ್‍ಗಳಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಿದ ಹಿನ್ನೆಲೆ ಮಾರುಕಟ್ಟೆ ಮತ್ತೆ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರತಿ ದಿನ ಲಕ್ಷಾಂತರ ವ್ಯಾಪಾರ ವಹಿವಾಟು ನಡೆಯುವ ಕೆಆರ್ ಮಾರ್ಕೆಟ್ ಹಾಗೂ ಕಲಾಸಿ ಪಾಳ್ಯ ಮಾರುಕಟ್ಟೆಗಳಲ್ಲಿ ಸ್ವಚ್ಚತೆ ಹಾಗೂ ಸ್ಯಾನಿಟೈಸ್ ಕಾರ್ಯ ಸಂಪೂರ್ಣವನ್ನು ಬಿಬಿಎಂಪಿ ಪೂರ್ಣಗೊಳಿಸುತ್ತಿದೆ.

    ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅವರು ಕೂಡ ಇಂದು ಎರಡು ಮಾರುಕಟ್ಟೆಗಳಿಗೆ ಭೇಟಿ ನೀಡಿ ಹಲವು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಆಯುಕ್ತರಿಗೆ ಬಿಬಿಎಂಪಿ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತರು, ಐದು ತಿಂಗಳಿಂದ ಬಂದ್ ಆಗಿದ್ದ ಕೆಆರ್ ಮಾರುಕಟ್ಟೆ ನಾಳೆಯಿಂದ ವ್ಯಾಪಾರ ವಹಿವಾಟು ಶುರು ಮಾಡಲಿವೆ. ಜುಲೈ ತಿಂಗಳಿಂದ ಇಲ್ಲಿಗೆ ಪಾಸಿಟಿವ್ ರೇಟ್ ಶೇ.24 ರಿಂದ ಶೇ.15ಕ್ಕೆ ಇಳಿಕೆಯಾಗಿದೆ. ಜೀವ ಬಹಳ ಮುಖ್ಯ ಆದರೆ ಜೀವನ ಸಹ ಮುಖ್ಯ ಹಾಗಾಗಿ ಪುನರ್ ಆರಂಭ ಆಗಬೇಕಿದೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದ್ದು, ಮಾರಾಟ ಮಾಡುವ ವ್ಯಾಪಾರಿಗಳು ಹಾಗೂ ಗ್ರಾಹಕರು ಮಾಸ್ಕ್ ಕಡ್ಡಾಯವಾಗಿರುತ್ತೆ ಎಂದರು.

    ಪ್ರತಿ ಅಂಗಡಿಯವರು ಪ್ರತ್ಯೇಕವಾಗಿ ಸ್ಯಾನಿಟೈಸರ್ ಹೊಂದಿರಬೇಕು. ಇಂದು ಮಧ್ಯರಾತ್ರಿಯಿಂದನೇ ಕೆಆರ್ ಮಾರುಕಟ್ಟೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಂಗಡಿಗಳನ್ನು ಕ್ಲೀನ್ ಮಾಡಿಕೊಳ್ಳುವ ಅಗತ್ಯ ಇದ್ದು, ಈಗಾಗಲೇ ಅಂಗಡಿ ತೆರೆಯಲು ಅವಕಾಶ ಕೇಳಿದ್ದಾರೆ. ಸ್ಮಾಟ್ ಸಿಟಿ ಯೋಜನೆಯಡಿಯಲ್ಲಿ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದು ಎಲ್ಲವೂ ಕೊನೆಯ ಹಂತದಲ್ಲಿವೆ ಎಂದರು.

  • 4 ವರ್ಷಗಳ ನಂತ್ರ ಕೆಂಪೇಗೌಡರಾಗಿ ಬಂದ ಕೋಮಲ್

    4 ವರ್ಷಗಳ ನಂತ್ರ ಕೆಂಪೇಗೌಡರಾಗಿ ಬಂದ ಕೋಮಲ್

    ಬೆಂಗಳೂರು: ಕಾಮಿಡಿಯ ಮೂಲಕ ಪ್ರೇಕ್ಷಕರನ್ನು ನಗಿಸುತ್ತಿದ್ದ ನಟ ಕೋಮಲ್ ಕುಮಾರ್ ಅವರು ಸುದೀರ್ಘ ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಬಂದಿದ್ದಾರೆ.

    ನಟ ಕೋಮಲ್ ಅಭಿನಯದ ‘ಕೆಂಪೇಗೌಡ-2′ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಕಾಮಿಡಿ ಬಿಟ್ಟು ಆ್ಯಕ್ಷನ್ ಅವತಾರ ತಾಳಿ ಅಭಿಮಾನಿಗಳ ಮುಂದು ಅಬ್ಬರಿಸಿದ್ದಾರೆ. ಕಳೆದ ದಿನವೇ ಕೋಮಲ್ ಸಹೋದರ ನಟ ಜಗ್ಗೇಶ್ ಅವರು ಟ್ರೇಲರ್ ಬಿಡುಗಡೆಗೆ ಶುಭಕೋರಿದ್ದರು. “ಕೆಂಪೇಗೌಡ-2’ ಸಿನಿಮಾದಲ್ಲಿ ಅವನ ಎರಡು ವರ್ಷದ ಶ್ರಮವಿದೆ. ಆಶೀರ್ವದಿಸಿ” ಎಂದು ಇಂದು ಕೂಡ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

    ನಟ ಕೋಮಲ್ ಅವರು ಈ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಖಡಕ್ ಲುಕ್, ಫೈಟ್‍ಗಳನ್ನು ಕಾಣಬಹುದಾಗಿದೆ. ಒಂದು ಕೊಲೆ ರಹಸ್ಯ, ಅದರ ಹಿಂದೆ ಇರುವ ರಾಜಕಾಣಿಗಳು ಮತ್ತು ದೊಡ್ಡ-ದೊಡ್ಡ ಅಧಿಕಾರಿಗಳ ಬಣ್ಣ ಬಯಲು ಮಾಡಲು ಹೋರಾಡುವ ಪೊಲೀಸ್ ಅಧಿಕಾರಿಯಾಗಿ ಕೋಮಲ್ ಮಿಂಚಿದ್ದಾರೆ. ಸಿನಿಮಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ನಿಂದ ಕೂಡಿದ್ದು, ಆ್ಯಕ್ಷನ್ ಜೊತೆ ಪ್ರೀತಿ-ಪ್ರೇಮವೂ ಇದೆ.

    ಈ ಸಿನಿಮಾವನ್ನು ಶಂಕರೇಗೌಡ ನಿರ್ದೇಶನ ಮಾಡಿದ್ದು, ಕೋಮಲ್ ಅವರಿಗೆ ಕನ್ನಡದಲ್ಲಿ ಮೊದಲ ಬಾರಿಗೆ ರಿಶಿಕಾ ಶರ್ಮ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಂದರೆ 2012ರಲ್ಲಿ ನಟ ಕಿಚ್ಚ ಸುದೀಪ್ ಮತ್ತು ರಾಗಿಣಿ ದ್ವಿವೇದಿ ಅಭಿನಯದ ಕೆಂಪೇಗೌಡ ಸಿನಿಮಾ ರಿಲೀಸ್ ಆಗಿತ್ತು. ಈಗ ನಟ ಕೋಮಲ್ ‘ಕೆಂಪೇಗೌಡ-2’ ಸಿನಿಮಾದ ಮೂಲಕ ತೆರೆಮೇಲೆ ಮರಳಿದ್ದಾರೆ.

    https://www.youtube.com/watch?v=sPkMNv-lI6s

  • ಜಾತಿ ಬಿಟ್ಟು ಜಾತಿಯವರನ್ನ ಮದ್ವೆ ಆದ್ಮೇಲೆ ಹೇಗೆ ಗೌಡ್ತಿ ಆಗ್ತಾರೆ- ಮತ್ತೆ ನಾಲಿಗೆ ಹರಿಬಿಟ್ಟ ಶಿವರಾಮೇಗೌಡ

    ಜಾತಿ ಬಿಟ್ಟು ಜಾತಿಯವರನ್ನ ಮದ್ವೆ ಆದ್ಮೇಲೆ ಹೇಗೆ ಗೌಡ್ತಿ ಆಗ್ತಾರೆ- ಮತ್ತೆ ನಾಲಿಗೆ ಹರಿಬಿಟ್ಟ ಶಿವರಾಮೇಗೌಡ

    ಮಂಡ್ಯ: ಅಂಬರೀಶ್ ನಮ್ಮ ಗೌಡ್ರು ಓಕೆ, ಆದ್ರೆ ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ಬಿಟ್ಟು ಜಾತಿಯವರನ್ನ ಮದುವೆ ಆದಮೇಲೆ ಹೇಗೆ ಗೌಡ್ತಿ ಆಗುತ್ತಾರೆ ಎಂದು ಸಂಸದ ಶಿವರಾಮೇಗೌಡ ಪ್ರಶ್ನೆ ಮಾಡಿದ್ದಾರೆ.

    ನಮ್ಮ ಸಿಎಂ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ದರೂ ಕೂಡ ಇಲ್ಲ ಸಲ್ಲದ ಆರೋಪ ಮಾಡಿದ್ರೆ ಕೈ ಕಟ್ಟಿ ಕುಳಿತು ಕೊಳ್ಳಲು ಆಗುತ್ತಾ? ನಾನು ಗೌಡ್ತಿ ಗೌಡ್ತಿ ಅಂದರೆ, ಯಾವ್ ರೀತಿ ಗೌಡ್ತಿ ಹೇಳಬೇಕಲ್ಲ ಎಂದು ಹೇಳಿದ್ರು.

    ಇವರೆಲ್ಲಾ ನಾಯ್ಡುಗಳು ಬೆಂಗಳೂರು ಸುತ್ತಮುತ್ತ ಆವರಿಸಿದ್ದಾರೆ. ಮಂಡ್ಯವನ್ನೂ ನಾಯ್ಡುಮಯ ಮಾಡಲು ಹೊರಟಿದ್ದಾರೆ. ದರ್ಶನ್ ಅವರು ಸುದೀಪ್, ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್‍ಗಿಂತ ದೊಡ್ಡ ನಟನೇನಲ್ಲ. ಅವರು ಯಾವುದೇ ಪಕ್ಷದ ಅಭ್ಯರ್ಥಿ ಪರ ಚುನಾವಣೆಗೆ ಹೋಗಲ್ಲ ಎಂದು ಹೇಳಿದ್ದಾರೆ. ಇವರು ಬಂದು ಏನು ಮಾಡಲು ಮಾಡಲು ಸಾಧ್ಯ. ದರ್ಶನ್ ಒಳ್ಳೆ ಸಿನಿಮಾ ತೆಗೆಯುತ್ತಾರೆ ಅಷ್ಟೇ ಎಂದರು.

    ಒಕ್ಕಲಿಗ, ರೈತ ಸಮುದಾಯದ ವಿರುದ್ಧ ತೊಡೆ ತಟ್ಟಿರುವ ವಿರುದ್ಧ ಸುಮ್ಮನೆ ಇರಲು ಸಾಧ್ಯವೇ? ನಾವು ಚುನಾವಣೆಯನ್ನು ಎದುರಿಸುತ್ತೇವೆ. ಆದರೆ ನಾನು ಈ ಸಮಯದಲ್ಲಿ ಅವರ ಕೊಡುಗೆ ಏನು ಎಂದು ಕೇಳಲು ಇಚ್ಛಿಸುತ್ತೇನೆ ಎಂದರು. ಅಲ್ಲದೇ ಅಂಬರೀಶ್ ಅವರು ಇಲ್ಲದ ವೇಳೆ ಬಾರದ ಜಾತಿ ಪ್ರಶ್ನೆ ಈಗ ಏಕೆ ಬಂತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 15 ವರ್ಷಗಳಿಂದ ರಾಜಕೀಯಕ್ಕೆ ಬಾರದ ಅವರು ಈಗ ಏಕೆ ಬಂದಿದ್ದಾರೆ. ಅದ್ದರಿಂದಲೇ ಈಗ ಪ್ರಶ್ನೆ ಮಾಡುತ್ತಿದ್ದೇವೆ. ಅವರು ಅಂತರ್‍ಜಾತಿ ವಿವಾಹ ಎಂದು ಹೇಳಲಿ ಎಂದರು.

    ಶಿವರಾಮೇಗೌಡರ ಟೀಕೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಈ ಬಗ್ಗೆ ಜನತೆ ತೀರ್ಮಾನ ಮಾಡುತ್ತಾರೆ. ಚುನಾವಣೆ ಬಳಿಕ ಯಾರು ಇರುತ್ತಾರೆ ಇರಲ್ಲ ಎಂಬುದು ತಿಳಿಯಲಿದೆ. ನಾಲ್ಕು ತಿಂಗಳ ಹಿಂದೆ ಸಂಸದರಾಗಿ ಆಯ್ಕೆ ಆಗಿದ್ದ ಅವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಇದರಲ್ಲೇ ಪಕ್ಷದಲ್ಲಿ ಅವರ ಸ್ಥಾನ ಏನು ಎಂಬುವುದು ತಿಳಿಯಲಿದೆ ಎಂದು ತಿಳಿಸಿದರು.

    ಈ ಹಿಂದೆ ಶಿವರಾಮೇಗೌಡ ಹೇಳಿದ್ದೇನು?:
    ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಸುರೇಶ್‍ಗೌಡರನ್ನು ಕರೆ ತಂದ ರಮ್ಯಾರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ವಿರುದ್ಧ ಕಿಡಿಕಾರಿದ್ದರು.

     

  • ರಿಯಾಯಿತಿ ದರದಲ್ಲಿ `ಸಿಲ್ಕ್’ ಸೀರೆ-ನಾರಿಯರಿಗೆ ನಿರಾಸೆ!

    ರಿಯಾಯಿತಿ ದರದಲ್ಲಿ `ಸಿಲ್ಕ್’ ಸೀರೆ-ನಾರಿಯರಿಗೆ ನಿರಾಸೆ!

    ಬೆಂಗಳೂರು/ಮೈಸೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ನೀಡುವುದಾಗಿ ಸಚಿವ ಸಾರಾ ಮಹೇಶ್ ಘೋಷಣೆ ಮಾಡಿದ್ದರು. ಆದರೆ ಈ ಬಾರಿ ಪ್ರವಾಹ ಪರಿಸ್ಥಿತಿ ಎದುರಾದ ಕಾರಣ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಇಲ್ಲ ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ(ಕೆಎಸ್‍ಐಸಿ) ಬೋರ್ಡ್ ಹಾಕಿದೆ.

    ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸೀರೆ ಕೊಳ್ಳಲು ಬಂದ ಮಹಿಳೆಯರು ಬೋರ್ಡ್ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಇತ್ತ ಮೈಸೂರಿನಲ್ಲಿ ಸಿಲ್ಕ್ ಸೀರೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡದಿರಲು ಆಗ್ರಹಿಸಿ ಸಿಲ್ಕ್ ಸೀರೆ ತಯಾರಿಕಾ ಕಂಪೆನಿಯ ನೌಕರರು ಪತ್ರಿಭಟನೆ ನಡೆಸಿದ್ದಾರೆ.

    ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕಂಪೆನಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ. ಸದ್ಯ ಸರ್ಕಾರ ನೀಡಲು ಉದ್ದೇಶಿಸಿರುವ ಒಂದು ಸೀರೆಯ ದರ 10,500 ರೂ. ಇದ್ದು, ರಿಯಾಯಿತಿ ದರದಲ್ಲಿ 4,500 ರೂ. ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಈ ಕ್ರಮ ಕಂಪೆನಿಗೆ ಹೆಚ್ಚಿನ ನಷ್ಟ ಉಂಟು ಮಾಡುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

    ಇದೇ ವೇಳೆ ಸರ್ಕಾರ ಒಂದೊಮ್ಮೆ ಸಿಲ್ಕ್ ಸೀರೆ ಮಾರಾಟ ಮಾಡಲು ತೀರ್ಮಾನಿಸಿದ್ದರೆ, ಮೊದಲು ರಿಯಾಯಿತಿ ದರದ ಮೊತ್ತವನ್ನು ಕಂಪೆನಿಗೆ ನೀಡಿ ಬಳಿಕ ಮಾರಾಟ ಮಾಡಿ. 10,500 ರೂ. ಬೆಲೆಯ ಸೀರೆಯನ್ನು ಮಾರಾಟ ಮಾಡಲು ನಾವು ಬಿಡುವುದಿಲ್ಲ. ಪ್ರತಿ ವರ್ಷ ಹಬ್ಬಗಳು ಬರುತ್ತದೆ. ಸರ್ಕಾರದ ಯೋಜನೆಯಿಂದ 5 ಸಾವಿರ ಸೀರೆ ನೀಡಲು ಉದ್ದೇಶಿಸಿದೆ. ಇದರಿಂದ ಸುಮಾರು 4 ಕೋಟಿ ರೂ. ನಷ್ಟವಾಗುತ್ತದೆ. ಇದು ಸರ್ಕಾರಿ ಸಂಸ್ಥೆಯಾಗಿರುವುದಿರಿಂದ ಈಗಾಗಲೇ 10% ರಿಯಾಯಿತಿ ನೀಡುತ್ತಿದೆ. ಅದ್ದರಿಂದ ಈ ಕ್ರಮವನ್ನು ಮರುಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv