Tag: Bengaluru Water Crisis

  • ಮನೆಯಲ್ಲಿ ನೀರಿಲ್ಲ: ಬೆಂಗಳೂರಲ್ಲಿ ಕಚೇರಿಗೆ ಬಂದು ಬ್ರಷ್‌ ಮಾಡಿದ ಉದ್ಯೋಗಿ

    ಮನೆಯಲ್ಲಿ ನೀರಿಲ್ಲ: ಬೆಂಗಳೂರಲ್ಲಿ ಕಚೇರಿಗೆ ಬಂದು ಬ್ರಷ್‌ ಮಾಡಿದ ಉದ್ಯೋಗಿ

    – ಇಷ್ಟೆಲ್ಲಾ ಮಳೆಯಾದ್ರೂ ನೀರಿಲ್ಲ ಎಂಬ ದೂರು

    ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಮುಂಗಾರಿನ ಅಬ್ಬರ ಜೋರಾಗಿದೆ. ಹೀಗಿದ್ದರೂ ಸಿಲಿಕಾನ್‌ ಸಿಟಿಯಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೀರಿಲ್ಲ ಎಂದು ದೂರಿದ್ದಾರೆ.

    ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ (Bengaluru Water Crisis) ಬಗ್ಗೆ ರಿಷಬ್‌ ಶ್ರೀವಾಸ್ತವ ಎಂಬ ವ್ಯಕ್ತಿಯೊಬ್ಬ ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವ್ಯಕ್ತಿ ತಾನು ಕೆಲಸ ಮಾಡುವ ಕಚೇರಿ ಸ್ನಾನಗೃಹದಲ್ಲಿ ಬ್ರಷ್‌ ಮಾಡುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ. ‘ಪೀಕ್‌ ಬೆಂಗಳೂರು ಮೂಮೆಂಟ್‌! ಮನೆಯಲ್ಲಿ ನೀರಿಲ್ಲದ ಕಾರಣ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದೆ’ ಎಂದು ಅಡಿಬರಹ ನೀಡಿದ್ದಾನೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ – ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

    ಕಳೆದ ವರ್ಷ ಮುಂಗಾರಿನ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿತ್ತು. ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಎದುರಾಗಿತ್ತು. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿತ್ತು. ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಆದರೂ ನಗರದಲ್ಲಿ ನೀರಿನ ಬಿಕ್ಕಟ್ಟು ಎಂಬಂತೆ ಈ ವ್ಯಕ್ತಿ ಪೋಸ್ಟ್‌ ಹಾಕಿದ್ದಾನೆ.

    ನೀರನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ. ‘ನಗರದ ಆಗ್ನೇಯ ಭಾಗದಿಂದ ಹೆಚ್ಚಿನ ದೂರುಗಳು ದಾಖಲಾಗುತ್ತಿದ್ದು, ನೀರು ಮಿತವಾಗಿ ಬಳಕೆ ಮಾಡುವಂತೆ ಜನರಲ್ಲಿ ಮನವಿ ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಸಂಸದ ವಿಶಾಲ್‌ ಕಾಂಗ್ರೆಸ್‌ಗೆ ಬೆಂಬಲ – ‘ಕೈ’ ಸ್ಥಾನಗಳ ಸಂಖ್ಯೆ 100 ಕ್ಕೆ ಏರಿಕೆ

    ಬೆಂಗಳೂರಿನಲ್ಲಿ ನೀರಿನ ಅಭಾವ ಇನ್ನೂ ಇದೆ ಎಂದು ಈ ವ್ಯಕ್ತಿ ನಿಜಕ್ಕೂ ಹೇಳಿದ್ದಾನೆಯೇ? ಅಥವಾ ತಮಾಷೆಗೆ ಈ ರೀತಿ ಪೋಸ್ಟ್‌ ಹಾಕಿದ್ದಾನೆಯೇ ಎಂಬುದು ಪ್ರಶ್ನೆಯಾಗಿದೆ.

  • ನೀರಿನ ಅಭಾವದ ಮಧ್ಯೆಯೂ ನೀರಿನ ನಿರ್ವಹಣೆಯಲ್ಲಿ ದೇಶದಲ್ಲೇ ಬೆಂಗಳೂರು ನಂ.2

    ನೀರಿನ ಅಭಾವದ ಮಧ್ಯೆಯೂ ನೀರಿನ ನಿರ್ವಹಣೆಯಲ್ಲಿ ದೇಶದಲ್ಲೇ ಬೆಂಗಳೂರು ನಂ.2

    ಬೆಂಗಳೂರು: ನೀರಿನ ಅಭಾವದ ಮಧ್ಯೆಯೂ ನೀರಿನ ನಿರ್ವಹಣೆಯಲ್ಲಿ ಬೆಂಗಳೂರು ಟಾಪ್‌ 5 ರಲ್ಲಿ ಸ್ಥಾನ ಪಡೆದಿದೆ. ಬಳಸಿದ ನೀರು ನಿರ್ವಹಣೆಯಲ್ಲಿ ಸೂರತ್‌ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು (Bengaluru Water Crisis) 2ನೇ ಸ್ಥಾನದಲ್ಲಿದೆ.

    ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿ, ವಾಟರ್ ಆ್ಯಂಡ್ ಎನ್ವಿರಾನ್‌ಮೆಂಟ್‌ ನಡೆಸಿದ ಸರ್ವೇ ಈ ಅಂಶ ಬೆಳಕಿಗೆ ಬಂದಿದೆ. ದೇಶದ 10 ರಾಜ್ಯಗಳ ಪೈಕಿ 500 ನಗರಗಳನ್ನು ಸರ್ವೇಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಪೊಲೀಸ್ ಠಾಣೆಗೂ ತಟ್ಟಿದ ನೀರಿನ ಅಭಾವದ ಎಫೆಕ್ಟ್ – ಇಲಾಖೆ ವಾಹನದಲ್ಲಿ ಕ್ಯಾನ್‌ಗಳಲ್ಲಿ ನೀರು ಸಾಗಾಟ

    ಬಳಸಿದ ನೀರು ನಿರ್ವಹಣೆಯಲ್ಲಿ ಸೂರತ್‌ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಸಂಶೋಧನೆಗಳ ಆಧಾರದಲ್ಲಿ ಸೂರತ್‌ಗೆ 3.32 ಅಂಕಗಳ ಮೂಲಕ ಮೊದಲ ಸ್ಥಾನ ಇದೆ. ಬೆಂಗಳೂರು 5 ಅಂಕಗಳಿಗೆ 3.23 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಬಳಸಿದ ನೀರು ಮರುಬಳಕೆ ವಿಚಾರದಲ್ಲಿ ದೇಶದಲ್ಲೇ ಇದು ಗಮನಾರ್ಹ ಸಾಧನೆಯಾಗಿದೆ. ಬೇರೆ ಯಾವ ನಗರಗಳೂ ಕನಿಷ್ಠ 3 ಅಂಕ ಗಳಿಸಿಲ್ಲ.

    ಸಂಸ್ಕರಿಸಿದ ಗೃಹ ತ್ಯಾಜ್ಯವನ್ನು ಮರುಬಳಕೆ ಮಾಡಲು ಸಂಸ್ಕರಿಸಿದ ಬಳಸಿದ ನೀರಿನ ನೀತಿಯನ್ನು ಅಳವಡಿಸಿಕೊಂಡಿರುವ 10 ರಾಜ್ಯಗಳು, ಬಳಸಿದ ನೀರಿನ ನಿರ್ವಹಣೆ ಎಂಬ ವಿಷಯಾಧಾರಿತವಾಗಿ ಅಧ್ಯಯನ ನಡೆಸಲಾಗಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 2021 ರಲ್ಲಿ ಪ್ರಕಟಿಸಿದ ಇತ್ತೀಚಿನ ರಾಷ್ಟ್ರೀಯ ಮಟ್ಟದ ಒಳಚರಂಡಿ ದಾಸ್ತಾನು ದತ್ತಾಂಶವನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ಪ್ರಿಯತಮೆಗೆ ಬಾಯ್ ಹೇಳಲು ಹೋಗಿ ಲವರ್ ಲಾಕ್!

    ಸದ್ಯ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗೆ (ತೋಟಗಾರಿಕೆ ಮತ್ತು ಕೈಗಾರಿಕೆಗಳಿಗೆ) ಸಂಸ್ಕರಿಸಿದ ನೀರು ಬಳಸಬಹುದಾಗಿದೆ. ಬೆಂಗಳೂರು ಜಲಮಂಡಳಿಯೂ ನೀರಿನ ಮರುಬಳಕೆಯನ್ನು ಉಲ್ಲೇಖಿಸಿತ್ತು.

  • ಈಜುಕೊಳಗಳಿಗೆ ಕಾವೇರಿ ನೀರು ಬಳಸಿದರೆ 5,000 ರೂ. ದಂಡ

    ಈಜುಕೊಳಗಳಿಗೆ ಕಾವೇರಿ ನೀರು ಬಳಸಿದರೆ 5,000 ರೂ. ದಂಡ

    ಬೆಂಗಳೂರು: ರಾಜಧಾನಿಯಲ್ಲಿ (Bengaluru Water Crisis) ನೀರಿನ ಸಮಸ್ಯೆ ತಲೆದೋರಿದೆ. ಸಮಸ್ಯೆ ನಿಭಾಯಿಸಲು ಹಲವು ಕ್ರಮಕೈಗೊಂಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (Bangaluru Water Supply and Sewerage Board), ನಗರದ ಈಜುಕೊಳಗಳಿಗೆ ಕಾವೇರಿ ನೀರನ್ನು ಬಳಸಬಾರದು ಎಂದು ಆದೇಶ ಹೊರಡಿಸಿದೆ.

    ನಗರದ ಎಲ್ಲಾ ಕಡೆಗೂ ಕುಡಿಯುವ ನೀರು ಪೂರೈಸುವ ಅಗತ್ಯವಿದೆ. ಹೀಗಾಗಿ ಈ ಕ್ರಮಕೈಗೊಳ್ಳಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ಹಾಕಲಾಗುವುದು ಎಂದು ಮಂಡಳಿ ತಿಳಿಸಿದೆ. ಇದನ್ನೂ ಓದಿ: ಪೊಲೀಸ್ ಠಾಣೆಗೂ ತಟ್ಟಿದ ನೀರಿನ ಅಭಾವದ ಎಫೆಕ್ಟ್ – ಇಲಾಖೆ ವಾಹನದಲ್ಲಿ ಕ್ಯಾನ್‌ಗಳಲ್ಲಿ ನೀರು ಸಾಗಾಟ

    ಈ ಬಾರಿ ಮುಂಗಾರು ಮಳೆ ಕೊರತೆಯಿಂದ ನೀರಿನ ಅಭಾತ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ನೀರು ಪೋಲಾಗುವುದನ್ನು ತಡೆಗಟ್ಟಲು ನಗರದಲ್ಲಿ ಕುಡಿಯುವ ನೀರನ್ನು ಈಜುಕೊಳ ಹಾಗೂ ಇತರೆ ಉದ್ದೇಶಗಳಿಗಾಗಿ ಬಳಕೆ ಮಾಡದಿರುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

    ನಿಯಮ ಉಲ್ಲಂಘಿಸಿದವರಿಗೆ ಆರಂಭದಲ್ಲಿ 5 ಸಾವಿರ ರೂ. ದಂಡ ಹಾಕಲಾಗುವುದು. ನಂತರವೂ ನಿಯಮ ಉಲ್ಲಂಘಿಸಿದರೆ 5,500 ರೂ. ದಂಡದ ಜೊತೆಗೆ ಈಜುಕೊಳದ ಮಾಲೀಕನ ವಿರುದ್ಧ ಪೊಲೀಸ್‌ ಠಾಣೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದೆ. ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?

    ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈಜು ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿರುವವರಿಗೆ ಈ ನಿಯಮ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆಯಲ್ಲದೇ, ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಸಾರ್ವಜನಿಕರು ದೂರವಾಣಿ 1916 ಗೆ ಕರೆ ಮಾಡುವಂತೆ ತಿಳಿಸಿದೆ.

  • ನಮ್ಮ ಮನೆ ಬೋರ್‌ವೆಲ್‌ನಲ್ಲೇ ನೀರಿಲ್ಲ: ಡಿ.ಕೆ ಶಿವಕುಮಾರ್

    ನಮ್ಮ ಮನೆ ಬೋರ್‌ವೆಲ್‌ನಲ್ಲೇ ನೀರಿಲ್ಲ: ಡಿ.ಕೆ ಶಿವಕುಮಾರ್

    – ಡಿಸಿಎಂ ಮನೆಗೂ ತಟ್ಟಿದ ನೀರಿನ ಹಾಹಾಕಾರದ ಬಿಸಿ

    ಬೆಂಗಳೂರು: ನಗರದಲ್ಲಿ (Bengaluru) ಉಂಟಾಗಿರುವ ನೀರಿನ ಹಾಹಾಕಾರದ ಬಿಸಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರಿಗೂ ತಟ್ಟಿದೆ. ನಮ್ಮ ಮನೆಯ ಬೋರ್‌ವೆಲ್‌ನಲ್ಲೂ (Borewell) ನೀರಿಲ್ಲ. ನೀರನ್ನು ಹೊರಗಿನಿಂದ ತರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೇನೂ ಇಲ್ಲ. ಸಲಹೆ ಕೊಟ್ಟರೆ ನಾವು ಸ್ವೀಕಾರ ಮಾಡ್ತೀವಿ. ಚರಿತ್ರೆಯಲ್ಲೇ ಟ್ಯಾಂಕರ್ ಕಂಟ್ರೋಲ್ ಮಾಡಿರೋದು ನಾವು. ಈ ದಂಧೆಗೆ ಕಡಿವಾಣ ಹಾಕಿರೋದು ನಾವು. ಅವರಿಗೆ ಒಂದು ದರ ಫಿಕ್ಸ್ ಕುರಿತು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: ನಾನು ಮೈಸೂರು-ಕೊಡಗು ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯ ಸೀಟು ಅಲುಗಾಡುತ್ತೆ: ಪ್ರತಾಪ್ ಸಿಂಹ

    ಕಾವೇರಿ ನೀರು (Cauvery water) ಹೆಚ್ಚಾಗಿ ಬರುತ್ತಿದೆ. ನೀರಿಗೆ ಹಾಹಾಕಾರ ಇಲ್ಲ ಎಂದು ನಾವು ಹೇಳ್ತಾ ಇಲ್ಲ. ನಮ್ಮ ಮನೆಯ ಬೋರ್‌ವೆಲ್‌ನಲ್ಲೂ ನೀರಿಲ್ಲದೆ, ಬೇರೆ ಕಡೆಯಿಂದ ತರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾರು ತೊಳೆಯಲು, ದನಕರು ತೊಳೆಯಲು ನೀರನ್ನು ಬಳಸಬೇಡಿ ಎಂದು ಹೇಳಿದ್ದೇವೆ. ಆರ್‌ಓ ವಾಟರ್ ಎಲ್ಲೆಲ್ಲಿ ಕೆಟ್ಟಿದಿಯೋ ಅದನ್ನ ಸರಿ ಮಾಡುತ್ತಿದ್ದೇವೆ ಎಂದಿದ್ದಾರೆ.

    ನೋಡೆಲ್ ಆಫೀಸರ್‌ಗಳನ್ನು ಬೆಂಗಳೂರು ನಗರಕ್ಕೂ ಹಾಕಿದ್ದೇವೆ. ಬೆಂಗಳೂರು ಗ್ರಾಮಾಂತರ ಪೂರ್ತಿ ಬೋರ್‌ವೆಲ್‌ಗಳಿವೆ. ನಗರದಲ್ಲಿ ಕಾವೇರಿ ವಾಟರ್ ಬರುತ್ತದೆ. ಹಾಗಾಗಿ ಅಲ್ಲಿಗೆ ನೋಡಲ್ ಆಫೀಸರ್‌ಗಳನ್ನು ಹಾಕಿದ್ದೇವೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಗೀತಕ್ಕ ಗೆಲ್ತಾರೆ: ಮಧು ಬಂಗಾರಪ್ಪ

  • ಕುಡಿಯುವ ನೀರು ಅನ್ಯ ಉದ್ದೇಶಕ್ಕೆ ಬಳಕೆ ನಿಷೇಧ – ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ 5,000 ರೂ. ದಂಡ

    ಕುಡಿಯುವ ನೀರು ಅನ್ಯ ಉದ್ದೇಶಕ್ಕೆ ಬಳಕೆ ನಿಷೇಧ – ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ 5,000 ರೂ. ದಂಡ

    ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಬೆಂಗಳೂರಿನಲ್ಲೂ ನೀರಿನ ಸಮಸ್ಯೆಯಿದ್ದು (Bengaluru Water Crisis), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಲವು ಕ್ರಮ ಕೈಗೊಂಡಿದೆ.

    ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು (Drinking Water) ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೇನಾದರು ಬಳಸಿದರೆ 5,000 ರೂ. ದಂಡ ಹಾಕಲಾಗುವುದು ಎಂದು ಮಂಡಳಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಸ್ಕರಣೆ ಮಾಡಿದ ನೀರು ಮರುಬಳಕೆಗೆ ಶೀಘ್ರವೇ ಆದೇಶ: ಈಶ್ವರ್ ಖಂಡ್ರೆ

    ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ, ಕುಡಿಯುವ ನೀರನ್ನು ಅನ್ಯ ಬಳಕೆಗೆ ನಿಷೇಧಿಸಲಾಗಿದೆ. ಕುಡಿಯುವ ನೀರು ಬೇರೆ ಯಾವುದಕ್ಕೂ ಬಳಸಬಾರದು ಎಂದು ಆದೇಶದಲ್ಲಿ ತಿಳಿಸಿದೆ.

    ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆ, ಕೈದೋಟ, ಕಟ್ಟಡ ನಿರ್ಮಾಣ, ಮನರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಬಳಸಬಾರದು. ಸಿನಿಮಾ ಮಂದಿರ ಮತ್ತು ಮಾಲ್‌ಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಬಳಸಲು ನಿಷೇಧ ಹೇರಲಾಗಿದೆ ಎಂದು ಮಂಡಳಿ ಆದೇಶದಲ್ಲಿ ಹೇಳಿದೆ. ಇದನ್ನೂ ಓದಿ: ಟ್ಯಾಂಕರ್ ಮೂಲಕ ಉಚಿತ ನೀರು ಕೊಟ್ಟ ನಟ ಧ್ರುವ ಸರ್ಜಾ

    ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಅಂಥವರ ವಿರುದ್ಧ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ 5,000 ರೂ. ದಂಡ ಹಾಕಲಾಗುವುದು. ಉಲ್ಲಂಘನೆಯು ಮರುಕಳಿಸಿದ್ದಲ್ಲಿ ದಂಡದ ಮೊತ್ತ 5,000 ರೂ. ಜೊತೆಗೆ ಹೆಚ್ಚುವರಿಯಾಗಿ 500 ರೂ. ಪ್ರತಿ ದಿನದಂತೆ ದಂಡ ಹಾಕಲಾಗುವುದು ಎಂದು ಎಚ್ಚರಿಸಿದೆ.

    ನಿಯಮವನ್ನು ಯಾರಾದರು ಉಲ್ಲಂಘಿಸುವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್‌ ಸೆಂಟರ್‌ ಸಂಖ್ಯೆ: 1916 ಕ್ಕೆ ಕರೆ ಮಾಡಿ ತಿಳಿಸಿ ಎಂದು ಸಾರ್ವಜನಿಕರಲ್ಲಿ ಮಂಡಳಿ ಮನವಿ ಮಾಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ನಿಯಮ – ಒಬ್ಬರಿಗೆ ಒಂದೇ ಕ್ಯಾನ್‌ ನೀರು!

  • ಬೆಂಗಳೂರಿನಲ್ಲಿ ಸಂಸ್ಕರಣೆ ಮಾಡಿದ ನೀರು ಮರುಬಳಕೆಗೆ ಶೀಘ್ರವೇ ಆದೇಶ: ಈಶ್ವರ್ ಖಂಡ್ರೆ

    ಬೆಂಗಳೂರಿನಲ್ಲಿ ಸಂಸ್ಕರಣೆ ಮಾಡಿದ ನೀರು ಮರುಬಳಕೆಗೆ ಶೀಘ್ರವೇ ಆದೇಶ: ಈಶ್ವರ್ ಖಂಡ್ರೆ

    ಬೆಂಗಳೂರು: ಬೆಂಗಳೂರು (Bengaluru) ನಗರದ ಬೃಹತ್ ಕಟ್ಟಡ ಸಮುಚ್ಚಯಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಅದನ್ನು ಪುನರ್‌ಬಳಕೆಗೆ ಮಾರಾಟ ಮಾಡಲು ಅವಕಾಶ ನೀಡುವ ಕುರಿತಂತೆ ಮಾನದಂಡಗಳನ್ನು ರೂಪಿಸಿ 1 ವಾರದೊಳಗೆ ಸರ್ಕಾರಿ ಆದೇಶ ಹೊರಡಿಸಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ತಿಳಿಸಿದರು.

    ಕರ್ನಾಟಕ ಚೌಗುಭೂಮಿ ಪ್ರಾಧಿಕಾರದ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ರಾಜಧಾನಿಯಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ನೀರು ಪೂರೈಕೆ ಕಷ್ಟ ಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮೂಲಗಳ ರಕ್ಷಣೆ ಮತ್ತು ನೀರಿನ ಮರುಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದರು. ಇದನ್ನೂ ಓದಿ: ಬೆಂಗಳೂರು ಬಿಸಿ ಬಿಸಿ; 4 ವರ್ಷದ ದಾಖಲೆ ಮುರಿದ ಸಿಲಿಕಾನ್‌ ಸಿಟಿ

    ಸೂಕ್ತ ರೀತಿಯಲ್ಲಿ ನೀರು ಸಂಸ್ಕರಿಸಿದರೆ ಬೆಂಗಳೂರು ನಗರದಲ್ಲಿ ನಿತ್ಯ 250ರಿಂದ 300 ಎಂಎಲ್‌ಡಿ ಯಷ್ಟು ನೀರು ಮರುಬಳಕೆಗೆ ಲಭಿಸಲಿದೆ. ಆದರೆ ಈ ನೀರನ್ನು ಯಾವುದೇ ಕಾರಣಕ್ಕೂ ಕುಡಿಯಲು, ಔಷಧ ಮತ್ತು ಆಹಾರ ತಯಾರಿಕೆಗೆ ಬಳಸದಂತೆ ನಿರ್ಬಂಧಿಸಲಾಗುವುದು. ಮಾರಾಟ ಮಾಡಲಾಗುವ ಮರುಬಳಕೆ ನೀರಿನ ಶುದ್ಧತೆಯ ಜವಾಬ್ದಾರಿ ಕಟ್ಟಡ ಸಮುಚ್ಚಯಗಳ ಸಂಘಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಿಡಬ್ಲ್ಯುಎಸ್‌ಎಸ್‌ಬಿ ಮತ್ತಿತರ ಪೂರಕ ಸಂಸ್ಥೆಗಳ ಮೇಲೂ ಇರುತ್ತದೆ ಎಂದರು.

    ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಜಲವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಆ ನೀರನ್ನು ಹತ್ತಿರದ ಕೆರೆಗಳಿಗೆ ಕೊಳವೆಯ ಮೂಲಕ ಹರಿಸಿದರೆ ಕೆರೆಗಳಲ್ಲಿ ನೀರೂ ಇರುತ್ತದೆ. ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಈ ಕುರಿತಂತೆ ಇಂದು ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ, ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಕಟ್ಟಡ ಸಮುಚ್ಚಯಗಳ ನಿವಾಸಿಗಳ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ನಿಯಮ – ಒಬ್ಬರಿಗೆ ಒಂದೇ ಕ್ಯಾನ್‌ ನೀರು!