Tag: bengaluru voilence

  • ಗಲಭೆ ನಿಯಂತ್ರಣಕ್ಕೆ ಹೈದರಾಬಾದ್, ಚೆನ್ನೈನಿಂದ 6 ಸಿಆರ್‌ಪಿಎಫ್ ತುಕಡಿ: ಬೊಮ್ಮಾಯಿ

    ಗಲಭೆ ನಿಯಂತ್ರಣಕ್ಕೆ ಹೈದರಾಬಾದ್, ಚೆನ್ನೈನಿಂದ 6 ಸಿಆರ್‌ಪಿಎಫ್ ತುಕಡಿ: ಬೊಮ್ಮಾಯಿ

    ಉಡುಪಿ: ಬೆಂಗಳೂರು ಗಲಭೆ ಹಿನ್ನೆಲೆಯಲ್ಲಿ ಹೈದರಾಬಾದ್ ಮತ್ತು ಚೆನ್ನೈನಿಂದ 6 ಸಿಆರ್‌ಪಿಎಫ್ ತುಕಡಿ ಬೆಂಗಳೂರಿಗೆ ಬರುತ್ತಿದೆ. ಸೂಕ್ಷ್ಮ ಪ್ರದೇಶದಲ್ಲಿ ಅವುಗಳ ನಿಯೋಜನೆಯಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಸಿಆರ್‌ಪಿಎಫ್ ನಿಯೋಜನೆ ಬಗ್ಗೆ ಹಿರಿಯ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ರಾಪಿಡ್ ಆಕ್ಷನ್ ಫೋರ್ಸ್, ಗರುಡ ಫೋರ್ಸ್ ಕೂಡ ಸ್ಥಳದಲ್ಲಿ ಯೋಜನೆಯಾಗಿದೆ. ಕೆ.ಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಸಂಪೂರ್ಣ ಪೊಲೀಸರ ಹತೋಟಿಯಲ್ಲಿದೆ ಎಂದರು.

    ಹೆಚ್ಚಿನ ಗಲಭೆಕೋರರ ಬಂಧನ ಆಗಬೇಕಾಗಿದೆ. ಘಟನೆಯ ಹಿಂದೆ ಯಾರಿದ್ದಾರೆ ಅನ್ನೋ ಬಗ್ಗೆ ಕೂಲಂಕುಷ ತನಿಖೆ ನಡೆಯುತ್ತಿದೆ. ಗಲಭೆಯನ್ನು ಹತೋಟಿಗೆ ತರಲು ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಕೊನೆಯ ಅಸ್ತ್ರವಾಗಿ ಗೋಲಿಬಾರ್ ಮಾಡಲಾಗಿದೆ ಎಂದರು. ಪೊಲೀಸರಿಗೆ ಉದ್ರಿಕ್ತ ಗುಂಪು ಕಲ್ಲು ತೂರಾಟ ಮಾಡಿದೆ. ಹಲವಾರು ಪೊಲೀಸರ ತಲೆಗೆ ಗಾಯ ಆಗಿದೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ.

    ಈಗಾಗಲೇ 110 ಜನರನ್ನು ವಶಕ್ಕೆ ಪಡೆದಿದ್ದೇವೆ ಶಾಂತಿ-ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಇನ್ನಷ್ಟು ಬಂಧನ ಆಗಲಿದೆ ಎಂದು ಹೇಳಿದರು. ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದಾರೆ. ನಾನು ಮುಖ್ಯಮಂತ್ರಿಗಳ ಜೊತೆ ಫೋನ್ ನಲ್ಲಿ ನಿರಂತರ ಸಂಪರ್ಕದಲ್ಲಿದ್ದೇನೆ. ಪೊಲೀಸ್ ಸ್ಟೇಷನ್ ನಲ್ಲಿ ಘಟನೆಯ ಎಲ್ಲಾ ರೆಕಾರ್ಡ್ ಗಳಿವೆ, ಸಿಸಿಟಿವಿ ಇದೆ ಕೃತ್ಯ ಎಸಗಿದ ಎಲ್ಲರ ಮಾಹಿತಿ ಕಲೆ ಹಾಕಲಾಗುತ್ತಿದೆ. ಫೇಸ್ ಬುಕ್ ನಲ್ಲಿ ಕರೆಕೊಟ್ಟು ಪ್ಲಾನ್ ಮಾಡಿ ದಾಳಿ ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

    ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಷಡ್ಯಂತ್ರ ನಡೆದಿದೆ. ಹಬ್ಬ-ಹರಿದಿನಗಳು ಶಾಂತವಾಗಿ ನಡೆಯುತ್ತಿರುವಾಗ ಸಮಾಜಘಾತುಕ ಶಕ್ತಿಗಳ ಈ ಕೃತ್ಯ ಪ್ರಚೋದನೆ ಕೊಡುವಂತಿದೆ. ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆದಿದೆ. ಬೆಂಗಳೂರು ತಲುಪಿದ ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡುತ್ತೇವೆ. ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.