Tag: Bengaluru Violence

  • ಎಸ್‌ಡಿಪಿಐ ನಿಷೇಧ ಆಗುತ್ತಾ – ಕ್ಯಾಬಿನೆಟ್‌ ಸಭೆಯ ಇನ್‌ಸೈಡ್‌ ಸುದ್ದಿ

    ಎಸ್‌ಡಿಪಿಐ ನಿಷೇಧ ಆಗುತ್ತಾ – ಕ್ಯಾಬಿನೆಟ್‌ ಸಭೆಯ ಇನ್‌ಸೈಡ್‌ ಸುದ್ದಿ

    ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಈ ಪಕ್ಷವನ್ನು ಕರ್ನಾಟಕದಲ್ಲಿ ನಿಷೇಧ ಮಾಡುವ ಸಂಬಂಧ ಇಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.

    ಕಾನೂನು ಮತ್ತು ಸಂಸದೀಯ ಖಾತೆಯ ಸಚಿವ ಮಾಧುಸ್ವಾಮಿ ಕ್ಯಾಬಿನೆಟ್‌ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಎಸ್‌ಡಿಪಿಐ ನಿಷೇಧ ಸಂಬಂಧವಾಗಿ ಕಾನೂನು ಮೂಲಕ ಏನು ಮಾಡಬಹುದೆಂದು ಚರ್ಚೆ ನಡೆದಿದೆ. ಪೊಲೀಸ್ ಇಲಾಖೆಯಿಂದ ಇನ್ನಷ್ಟು ಮಾಹಿತಿಯನ್ನು ಕೇಳಲಾಗಿದೆ. ಪೊಲೀಸ್ ಇಲಾಖೆ ವರದಿ ಕೊಟ್ಟ ಬಳಿಕ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ಎಸ್‌ಡಿಪಿಐ ಬಗ್ಗೆ ಇಲ್ಲಿಯವರೆಗೆ ಗಟ್ಟಿ ಸಾಕ್ಷ್ಯಗಳು ಸಿಕ್ಕಿಲ್ಲ. ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದು ಸಾಬೀತಾರೆ ನಿಷೇಧ ಮಾಡುತ್ತೇವೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಸ್‌ಡಿಪಿಐ ರಾಜಕೀಯ ಪಕ್ಷವಾಗಿರುವ ಕಾರಣ ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿವರಿಸಿದರು.

    ಕ್ಯಾಬಿನೆಟ್ ಸಭೆಯಲ್ಲಿ ಏನಾಯ್ತು?
    ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರ ವಿರುದ್ಧ ಹಲವು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಪ್ರಕರಣವನ್ನು ರಾಜಕೀಯಗೊಳಿಸಿ ವಿಷಯಾಂತರ ಮಾಡಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಹೀಗಾಗಿ ನಾವು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದರು.

    ತನ್ವೀರ್ ಸೇಟ್ ಮೇಲಿನ ಮಾರಣಾಂತಿಕ ಹಲ್ಲೆ, ಮಂಗಳೂರು ಗಲಭೆ ಪ್ರಕರಣ, ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಗಳಲ್ಲಿ ಎಸ್‌ಡಿಪಿಐ ನೇರ ಪಾತ್ರವಿದೆ. ಇದನ್ನು ಆಧರಿಸಿ ಕೇಂದ್ರಕ್ಕೆ ನಿಷೇಧ ಕುರಿತು ಶಿಫಾರಸು ಮಾಡೋಣ. ಸಿಟಿ ರವಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿ ಹಲವರು ನಿಷೇಧಕ್ಕೆ ಒತ್ತಾಯ ಮಾಡಿದರು ಎಂದು ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

    ಈ ವೇಳೆ ಬೊಮ್ಮಾಯಿ ಅವರು ಗೃಹ ಇಲಾಖೆ ಅಧಿಕಾರಿಗಳು ಈ ಹಿಂದಿನ ಘಟನೆಗಳನ್ನು ಆಧಾರಿಸಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆ ವಿರುದ್ಧ ಸಂಗ್ರಹಿಸಲಾಗಿರುವ ಸಾಕ್ಷ್ಯಗಳ ವರದಿಯನ್ನು ಸಿಎಂ ಬಿಎಸ್‌ವೈಗೆ ಸಲ್ಲಿಸಿದರು. ಬಳಿಕ ನಿಷೇಧದ ಸಾಧ್ಯಾಸಾಧ್ಯತೆಗಳು, ಕಾನೂನು ತೊಡಕುಗಳ ಕುರಿತಾಗಿ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಎಸ್‌ಡಿಪಿಐ ಪಕ್ಷವಾಗಿರುವುದರಿಂದ ನಿಷೇಧಕ್ಕೆ ಕಾನೂನು ತೊಡಕುಗಳ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಸಿಎಂ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಿ ನಿಷೇಧ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • ಶಾಸಕರ ಮನೆ, ಠಾಣೆಯನ್ನು ರಕ್ಷಿಸಿಕೊಳ್ಳಲಾಗದ ಸರ್ಕಾರದಿಂದ ರಾಜ್ಯದ ಜನರಿಗೆ ಯಾವ ರಕ್ಷಣೆ ಸಿಗುತ್ತೆ- ಸಿದ್ದು ಪ್ರಶ್ನೆ

    ಶಾಸಕರ ಮನೆ, ಠಾಣೆಯನ್ನು ರಕ್ಷಿಸಿಕೊಳ್ಳಲಾಗದ ಸರ್ಕಾರದಿಂದ ರಾಜ್ಯದ ಜನರಿಗೆ ಯಾವ ರಕ್ಷಣೆ ಸಿಗುತ್ತೆ- ಸಿದ್ದು ಪ್ರಶ್ನೆ

    – 13 ವಿಚಾರಗಳನ್ನು ಪ್ರಶ್ನಿಸಿ ಸಿಎಂಗೆ ಸಿದ್ದರಾಮಯ್ಯ ಪತ್ರ
    – ಗಲಭೆಗೆ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಿರುವುದು ಯಾಕೆ?

    ಬೆಂಗಳೂರು: ಕೆ.ಜೆ.ಹಳ್ಳಿ ಮತ್ತು ಡಿ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಆಗಸ್ಟ್ 11 ರಂದು ನಡೆದ ಘಟನೆಗಳಿಗೆ ಸರ್ಕಾರದ ವೈಫಲ್ಯವೇ ನೇರ ಕಾರಣ. ಗುಪ್ತಚರ ಇಲಾಖೆಯ ವೈಫಲ್ಯವೂ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

    ಸರ್ಕಾರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಬಿಟ್ಟು ವಿರೋಧ ಪಕ್ಷವಾದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.

    ಪತ್ರದಲ್ಲಿ ಏನಿದೆ?
    1. ಡಿ.ಜೆ.ಹಳ್ಳಿಯ ಘಟನೆಯ ನೈತಿಕ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಆಡಳಿತ ಕೇಂದ್ರದ ಕೈಯಳತೆ ದೂರದಲ್ಲಿರುವ ಈ ಪ್ರದೇಶದಲ್ಲಾದ ಅನಾಹುತವನ್ನು ನಿಭಾಯಿಸಲು ಆಗಲಿಲ್ಲವೆಂದರೆ ಸರ್ಕಾರ ಯಾಕಿರಬೇಕು. ಪ್ರವಾದಿಯವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರ ಕುರಿತು ದೂರು ಬಂದ ತಕ್ಷಣ ಪೊಲೀಸರು ಕ್ರಮ ಕೈಗೊಂಡಿದ್ದರೆ ಈ ಅನಾಹುತಕ್ಕೆ ಅವಕಾಶ ಇರುತ್ತಿರಲಿಲ್ಲ.

    2. ಪ್ರವಾದಿಯವರ ಬಗೆಗೆ ಕೆಟ್ಟ ಚಿತ್ರ ರಚಿಸಿ ನವೀನ್ ಎಂಬ ಹುಡುಗನಿಗೆ ಕೊಟ್ಟವರಾರು? ಆ ಚಿತ್ರಗಳು ಸೋಷಿಯಲ್ ಮೀಡಿಯಾಗಳಿಗೆ ಬಿತ್ತರಿಸಲು ಕಾರಣರಾದವರು ಯಾರ್ಯಾರು ? ಇದರ ಹಿಂದೆ ದೊಡ್ಡ ಪಿತೂರಿ ಇದ್ದಂತಿದೆ. ಈ ಕುರಿತು ಸಮರ್ಪಕವಾದ ತನಿಖೆಯಾಗಬೇಕು.

    3. ಪ್ರಾಮಾಣಿಕರು, ದಕ್ಷರು ಅನ್ನಿಸಿಕೊಂಡ ಹಲವು ಪೊಲೀಸ್ ಅಧಿಕಾರಿಗಳನ್ನು ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಗಳಲ್ಲಿ ಕೂರಿಸಿದ್ದೀರಿ. ಭ್ರಷ್ಟರು, ಅಸೂಕ್ಷ್ಮರು ಆದ ಹಲವರಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಲಾಗಿದೆ. ಹೀಗಾಗಿ ಸೂಕ್ಮವಾದ ಇಂಥ ಘಟನೆಗಳನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

    4. ಘಟನೆ ನಡೆದಿರುವುದು ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ (ಈ ಹಿಂದೆಯೂ ಈ ಪ್ರದೇಶಗಳಲ್ಲಿ ಸಮಸ್ಯೆಗಳಾಗಿದ್ದವು) ಮತ್ತು ಘಟನೆಗೆ ಕಾರಣವಾದ ವಿಷಯವೂ ಅತ್ಯಂತ ಸೂಕ್ಷ್ಮವಾಗಿತ್ತು. ಇದನ್ನು ನಿರ್ಲಕ್ಷಿಸಲು ಕಾರಣವೇನು?

    5. ಶಾಸಕರ ಮನೆಯನ್ನು, ಪೊಲೀಸ್ ಠಾಣೆಯನ್ನು ರಕ್ಷಿಸಿಕೊಳ್ಳಲಾಗದ ಸರ್ಕಾರದಿಂದ ರಾಜ್ಯದ ಜನರಿಗೆ ಯಾವ ರಕ್ಷಣೆಯನ್ನು ನೀಡಲು ಸಾಧ್ಯ? ಇದರ ಜವಾಬ್ದಾರಿಯನ್ನು ಸರ್ಕಾರ ಹೊರುವುದನ್ನು ಬಿಟ್ಟು ತಲೆಕೆಟ್ಟ. ಹುಡುಗರ ಮೇಲೆ ಹೊರಿಸಿ ತಮ್ಮ ಸರ್ಕಾರ ಅತ್ಯಂತ ಸಮರ್ಥವಾಗಿದೆ ಎಂದು ಹೇಳುವುದು ಅತ್ಯಂತ ದುಷ್ಟ ಮತ್ತು ನಿರ್ಲಜ್ಜ ರಾಜಕಾರಣದ ಪರಮಾವಧಿಯ ನಿಲುವು.

    6. ಗೃಹ ಸಚಿವರನ್ನು ಭೇಟಿಯಾದ ಕರಾವಳಿಯ ಕೋಮುವಾದಿಯೊಬ್ಬನಿಗೆ, ಸಚಿವರು ನಿಮ್ಮ ಮೇಲಿನ ಎಲ್ಲಾ ಪ್ರಕರಣ ವಾಪಸ್‌ ತೆಗೆದುಕೊಳ್ಳುತ್ತೇವೆಂದು ಹೇಳುವ ಮಾತುಕತೆಯೊಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದು ನಿಜವೇ ಆಗಿದ್ದರೆ ಸಮಾಜದ ಸ್ವಾಸ್ಥ್ಯವನ್ನು ನಿಮ್ಮ ಸರ್ಕಾರ ಕಾಪಾಡಲು ಸಾಧ್ಯವೆ?

    7. ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಜನರನ್ನು ಕಮ್ಯುನಲ್ ಗೂಂಡಾಗಳೆಂದು ಗುರುತಿಸಿದ್ದೀರಿ? ಎಷ್ಟು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿ ಗಡಿಪಾರು ಮಾಡಿದ್ದೀರಿ? ಈ ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾ ಸಂಘಟನೆಗಳನ್ನು ನಿಷೇಧಿಸುವ ತಾಕತ್ತನ್ನು ನೀವು ಪ್ರದರ್ಶಿಸಲು ಸಾಧ್ಯವೆ? ನಿಮ್ಮ ಕಡತದಲ್ಲಿನ ದಾಖಲೆಗಳ ಪ್ರಕಾರ ನಿಮ್ಮದೇ ಪಕ್ಷದ ಅಂಗ ಸಂಘಟನೆಗಳು ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿ ಅಸಂಖ್ಯಾತ ಪ್ರಕರಣಗಳಿವೆ. ಈ ಎಲ್ಲರ ಮೇಲೆಯೂ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಿ ನಾವು ಈ ವಿಷಯದಲ್ಲಿ ನಿಮ್ಮ ಜೊತೆ ಇರುತ್ತೇವೆ.

    8. ಹಿಂದೆ ಮುಂದೆ ನೋಡದೆ ಜನರನ್ನು ಧರ್ಮದ ಆಧಾರದ ಮೇಲೆ ದೊಂಬಿಯೆಬ್ಬಿಸಲು ಪ್ರಯತ್ನಿಸಿದ ಶೃಂಗೇರಿಯ ಜೀವರಾಜ್ ಅವರ ಮೇಲೂ ಪ್ರಕರಣ ದಾಖಲಿಸಿ ಕ್ರಮವಹಿಸಿ. ಶೃಂಗೇರಿಯಲ್ಲಿ ಆರೋಪಿ ಪತ್ತೆಯಾಗುವ ಮೊದಲೇ ಅಪರಾಧಿಗಳು ಯಾರು ಎಂದು ಬಿ.ಜೆ.ಪಿ. ತೀರ್ಮಾನಿಸಿತ್ತು. ಬಡ ತರಕಾರಿ ವ್ಯಾಪಾರಿಗಳು/ಬೀದಿ ಬದಿಯ ವ್ಯಾಪಾರಿಗಳೇ ಈ ಕೃತ್ಯ ಮಾಡಿರುವುದೆಂದು ಅವರ ತಲೆಗೆ ಅಪರಾಧವನ್ನು ಕಟ್ಟಲಾಗಿತ್ತು. ಮಸೀದಿಯಲ್ಲಿ ಸಿ.ಸಿ.ಟಿವಿಗಳು ಇರದಿದ್ದರೆ ಬಜರಂಗದಳದ ಮಾಜಿ ಕಾರ್ಯಕರ್ತನ ಬದಲಿಗೆ ಇನ್ಯಾರೋ ಇರುತ್ತಿದ್ದರು.

    9. ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿದವರಿಂದ ನಷ್ಟ ವಸೂಲು ಮಾಡುವುದು ಒಳ್ಳೆಯ ವಿಚಾರವೇ. ಆದರೆ ಇದು ಒಂದು ಗುಂಪಿಗೆ, ಒಂದು ಘಟನೆಗೆ ಮಾತ್ರ ಸಂಬಂಧಿಸಿರಬಾರದು. ಹಾಗೆ ಮಾಡುವುದಾದರೆ ಪೂರ್ವಾನ್ವಯಗೊಳಿಸಬೇಕು. ಕಳೆದ ಮೂವತ್ತು ವರ್ಷಗಳಿಂದೀಚೆಗೆ ಕಮ್ಯುನಲ್ ಮತ್ತಿತರ ಗಲಭೆಗಳಲ್ಲಿ ಮಾಡಿರುವ ಹಾನಿಯ ನಷ್ಟವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಬೇಕೆಂದು ಆಗ್ರಹಿಸುತ್ತೇನೆ.

    10. ಆಡಳಿತ ಪಕ್ಷವೊಂದು ಸತ್ಯ ಶೋಧನಾ ತಂಡ ರಚಿಸುವುದು ಪ್ರಜಾಪ್ರಭುತ್ವದ ಭೀಕರ ಅಪಹಾಸ್ಯದಂತೆ ಕಾಣುತ್ತಿದೆ. ಆಡಳಿತ ಪಕ್ಷವೊಂದು ಸತ್ಯ ಶೋಧನೆ ಮಾಡುತ್ತೇನೆಂದು ಹೊರಟರೆ ಅದು ತನಿಖೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    11. ನಿಮ್ಮ ಸರ್ಕಾರಕ್ಕೆ ಪೊಲೀಸರ ಮೇಲೆ ನಂಬಿಕೆ ಇಲ್ಲವೆ? ನಿಮ್ಮ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಅವರಿಗೆ ಜನರ ತೆರಿಗೆಯ ಹಣದಲ್ಲಿ ಸಂಬಳ, ಸಾರಿಗೆ ಮುಂತಾದ ಸವಲತ್ತುಗಳನ್ನು ಯಾಕೆ ಕೊಡತ್ತಿದ್ದೀರಿ? ಮುಲಾಜಿಲ್ಲದೆ ಅವರನ್ನು ಮನೆಗೆ ಕಳಿಸಿ.

    12. ಘಟನೆಯಲ್ಲಿ ಎಸ್‍ಡಿಪಿಐ ಪಾತ್ರ ಇದೆ ಎಂದು ಹೇಳಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಯಾವ ಸಂಘಟನೆಯೇ ತಪ್ಪು ಮಾಡಿದ್ದರೂ ಸಮರ್ಪಕವಾದ ತನಿಖೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ.

    13. ಈ ಘಟನೆಯ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.

  • ಪೋಸ್ಟ್ ಕೇವಲ ನೆಪ, ಇದು ದಲಿತ ಶಾಸಕರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ – ಇದು ಬಿಜೆಪಿ ಶೋಧಿಸಿದ ಸತ್ಯ

    ಪೋಸ್ಟ್ ಕೇವಲ ನೆಪ, ಇದು ದಲಿತ ಶಾಸಕರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ – ಇದು ಬಿಜೆಪಿ ಶೋಧಿಸಿದ ಸತ್ಯ

    ಬೆಂಗಳೂರು: ನವೀನ್ ನ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಕೇವಲ ನೆಪ ಆಗಿತ್ತು. ಪೋಸ್ಟ್ ನೆಪದಲ್ಲಿ ಮುಸ್ಲಿಂ ಸಮುದಾಯದೊಳಗೆ ಕಿಡಿ‌ ಹತ್ತಿಸಿ ಹಬ್ಬಿಸಿ ಗಲಭೆ ನಡೆಯುವಂತೆ ಸಂಚು ರೂಪಿಸಿಲಾಗಿತ್ತು – ಇದು ಬಿಜೆಪಿ ಶೋಧಿಸಿದ ಸತ್ಯ.

    ದೇವರಜೀವನ ಹಳ್ಳಿ ಮತ್ತು ಕಾಡಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ರಾಜ್ಯ ಬಿಜೆಪಿ ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೇದಾರ್, ಎಂ ಶಂಕರಪ್ಪ, ಪಿ ಸಿ ಮೋಹನ್, ಎ ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಅವರಿದ್ದ ಸತ್ಯಶೋಧನಾ ಸಮಿತಿಯನ್ನು ನೇಮಿಸಿತ್ತು.

    ಮೂರು ದಿನಗಳ ಹಿಂದೆ ರಚನೆ ಆಗಿದ್ದ ಸಮಿತಿ ಈಗ ಮಾಹಿತಿಗಳನ್ನು ಕಲೆ ಹಾಕಿ ವರದಿ ತಯಾರಿಸಿದ್ದು ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಸಲ್ಲಿಸಲಿದೆ.

    ಬಿಜೆಪಿಯ ಸತ್ಯ ಶೋಧನೆ ಏನು?
    ಪ್ರಕರಣದಲ್ಲಿ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರೇ ಟಾರ್ಗೆಟ್ ಆಗಿದ್ದರು. ಕಾಂಗ್ರೆಸ್‌ನಲ್ಲಿದ್ದರೂ ಅಖಂಡ ಶ್ರೀನಿವಾಸ ಮೂರ್ತಿ ಒಬ್ಬಂಟಿಯಾಗಿದ್ದರು. ಕ್ಷೇತ್ರದಲ್ಲಿ ಅಖಂಡ ಪರ ಯಾವ ಕಾಂಗ್ರೆಸ್ ಮುಖಂಡರು, ನಾಯಕರು ಇರಲಿಲ್ಲ.

    ಮುಂಬರುವ ಬಿಬಿಎಂಪಿ ಚುನಾವಣೆ ಮತ್ತು ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿಗೆ ಬೆಂಬಲಿಸಬಾರದು, ಟಿಕೆಟ್ ಸಿಗದಂತೆ ನೋಡಿಕೊಳ್ಳಬೇಕು. ಟಿಕೆಟ್ ಸಿಕ್ಕಿದ್ದರೂ ಸೋಲಿಸಬೇಕು ಎಂಬ ಉದ್ದೇಶ ಇತ್ತು.

    ನವೀನ್ ನ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಕೇವಲ ನೆಪ ಆಗಿತ್ತು. ಪೋಸ್ಟ್ ನೆಪದಲ್ಲಿ ಮುಸ್ಲಿಂ ಸಮುದಾಯದೊಳಗೆ ಕಿಡಿ‌ ಹತ್ತಿಸಿ ಹಬ್ಬಿಸಿ ಗಲಭೆ ನಡೆಯುವಂತೆ ಸಂಚು ರೂಪಿಸಲಾಗಿತ್ತು. ಪ್ರತಿಭಟನೆ ಉದ್ದೇಶ ಇದ್ದ ಗುಂಪಿಗೆ ಅಖಂಡ ಮೇಲೆ ದಾಳಿ ಮಾಡುವಂತೆ ಪ್ರಚೋದಿಸಲಾಗಿತ್ತು.

    ಗಲಭೆಗೆ ಕಾಂಗ್ರೆಸ್ ಸ್ಥಳೀಯ ಮುಖಂಡರು, ಲೋಕಲ್ ಪಾಲಿಟಿಕ್ಸ್, ಎಸ್‌ಡಿಪಿಐ ಕಾರಣ. ಇದು ದಲಿತ ಶಾಸಕರೊಬ್ಬರ ವಿರುದ್ಧ ನಡೆದ ವ್ಯವಸ್ಥಿತ ರಾಜಕೀಯ ಹುನ್ನಾರ.

  • ಕರ್ಫ್ಯೂ ತೆಗೆಯಿರಿ, ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ

    ಕರ್ಫ್ಯೂ ತೆಗೆಯಿರಿ, ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ

    – ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿದ್ದ ಮುಸ್ಲಿಮ್‌ ಮುಖಂಡರು
    – ಆಯುಕ್ತರಿಗೆ ನೀಡಿದ್ದು ಮನವಿಯೇ? ಅಥವಾ ಎಚ್ಚರಿಕೆಯೇ?

    ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಭೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಶಾಂತಿನಗರದ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಜೊತೆ ಮೌಲ್ವಿಗಳು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಈ ವೇಳೆ ಮೌಲ್ವಿಗಳು ಆರೋಪಿಗಳ ಪರವಾಗಿ ಆಯುಕ್ತರ ಬಳಿ ಮನವಿ ಮಾಡಿದ್ದಾರೋ ಎಚ್ಚರಿಕೆ ನೀಡಿದ್ದಾರೋ ಎಂಬ ಪ್ರಶ್ನೆ ಎದ್ದಿದೆ.

    ಹೌದು, ಈ ಪ್ರಶ್ನೆ ಏಳಲು ಕಾರಣ ಪಬ್ಲಿಕ್‌ ಟಿವಿಗೆ ಒಂದು ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಕರ್ಫ್ಯೂ ಬಗ್ಗೆ ಉಲ್ಲೇಖಿಸಿ, ಅಲ್ಲಿ ವಿಧಿಸಿರುವ ಕರ್ಫ್ಯೂ ತೆಗೆಯಿರಿ. ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಪೊಲೀಸರು ಚೆನ್ನಾಗಿ ಕೆಲಸ ಮಾಡ್ತಾ ಇದ್ದಾರೆ ಅನ್ನೋ ಮೆಸೇಜ್ ನಾವು ಕಳೆದ ಶುಕ್ರವಾರ ಎಲ್ಲರಿಗೂ ಕಳಿಸಿದ್ದೇವೆ. ನಮ್ಮ ಸಂಘಟನೆಗಳು 28 ಜಿಲ್ಲೆಗಳಲ್ಲಿದ್ದು, ನಾವು ಎಲ್ಲಿಯೂ ಪ್ರತಿಭಟನೆ ಮಾಡಿಲ್ಲ. ಇನ್ನೆರಡು ದಿನಗಳಲ್ಲಿ ಶುಕ್ರವಾರ ಬರಲಿದೆ. ಎರಡು ವಾರ ಅಲ್ಲಿ ಹೇಗೆ ಕರ್ಫ್ಯೂ ಮಾಡ್ತಾರೆ ಅಂತ ಜನ ನಮ್ಮನ್ನ ಕೇಳ್ತಾ ಇದ್ದಾರೆ. ಜನ ಭಯಭೀತರಾಗಿದ್ದಾರೆ. ಶುಕ್ರವಾರದ ಪ್ರಾರ್ಥನೆಯಲ್ಲಿ ಗಲಾಟೆಯ ಬಗ್ಗೆ ಯಾವುದೇ ಚರ್ಚೆಗಳು ನಡೆಯಲ್ಲ. ಹಾಕಿರೋ ಕರ್ಫ್ಯೂ ತೆಗೆಯಿರಿ ಅಂತ ನಾವು ಮನವಿ ಮಾಡಿಕೊಳ್ಳುತ್ತೇವೆ.

    ನಾವು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲಿಯ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ನಾವು ಸಂಪೂರ್ಣ ಸಹಕಾರ ನೀಡ್ತೀವಿ. ಸಹಜ ಸ್ಥಿತಿಗೆ ತರಲು ನೀವು ಹೇಳಿದ ಹಾಗೆ ನಾವು ಕೇಳಲು ರೆಡಿ. ಎಲ್ಲರೂ ಒಂದಾಗಿ ಅಲ್ಲಿಯ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವಂತೆ ಮಾಡೋಣ. ಆದ್ರೆ ಅಲ್ಲಿ ವಿಧಿಸಿರುವ ಕರ್ಫ್ಯೂ ತೆಗೆಯಿರಿ. ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದ್ರೆ ನಾವು ಜವಾಬ್ದಾರರಲ್ಲ. ನಿನ್ನೆ ಬಾಣಸವಾಡಿಯಲ್ಲಿ 16 ಜನರನ್ನ ಬಂಧಿಸಿದ್ದಾರೆ. ಅವರಿಗೂ ಈ ಪ್ರಕರಣಕ್ಕೆ ಏನು ಸಂಬಂಧ? ಬಂಧಿತರ ಪೋಷಕರು ನಮ್ಮ ಮಕ್ಕಳು ಅಮಾಯಕರು, ಅಪ್ರಾಪ್ತರು ಅಂತಾ ಹೇಳ್ತಾರೆ.

    ಅಮಾಯಕರನ್ನ ಅರೆಸ್ಟ್ ಮಾಡಬಾರದು, ಪೋಷಕರು ಸ್ಟೇಷನ್‍ಗೆ ಹೋದ್ರೆ ಪೊಲೀಸರು ನಾವು ಅರೆಸ್ಟ್ ಮಾಡಿಲ್ಲ ಅಂತಾರೆ, ಬೇರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅಂತಾರೆ. ಪೊಲೀಸರು ಹೀಗೆ ಹೇಳಿದ್ರೆ ಏನು ಮಾಡೋದು, ಕಾನೂನಿನಲ್ಲಿ ಹೀಗಿದೆಯಾ? ಯಾರೋ ಬಂದು ಅರೆಸ್ಟ್ ಮಾಡ್ತಾರೆ ಅಂದ್ರೆ ಹೇಗೆ? ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲಿ ಅರೆಸ್ಟ್ ಆಯ್ತು ಅನ್ನೋದರ ಬಗ್ಗೆ ಅಪ್ಡೇಟ್ ಮಾಡಲಾಗ್ತಿದೆ.

  • ಇವನು ಕಾಂಗ್ರೆಸ್, ಅವನು ಎಸ್‍ಡಿಪಿಐ – ಫೋನ್‍ಕಾಲ್‍ನಲ್ಲೇ ಬೆಂಕಿಗೆ ಸ್ಕೆಚ್

    ಇವನು ಕಾಂಗ್ರೆಸ್, ಅವನು ಎಸ್‍ಡಿಪಿಐ – ಫೋನ್‍ಕಾಲ್‍ನಲ್ಲೇ ಬೆಂಕಿಗೆ ಸ್ಕೆಚ್

    ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌, ಎಸ್‌ಡಿಪಿಐ ಮುಖಂಡರು ಪರಸ್ಪರ ಫೋನ್‌ ಸಂಪರ್ಕದಲ್ಲಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಎಸ್‌ಡಿಪಿಐ ಸಕ್ರಿಯ ಕಾರ್ಯಕರ್ತ ಮುಜಾಮಿಲ್ ಪಾಷಾನ ಮೊಬೈಲ್‌ ಕರೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಒಂದು ನಂಬರ್‌ಗೆ ಪದೇ ಪದೇ ವಾಟ್ಸಪ್‌ ಕಾಲ್‌ ಹೋಗಿರುವುದು ಗೊತ್ತಾಗಿದೆ. ರಾತ್ರಿ 9:30 ರಿಂದ 11:30ರ ಅವಧಿಯಲ್ಲಿ ಒಟ್ಟು 11 ಬಾರಿ ಕರೆ ಹೋಗಿದ್ದು,ಈ ನಂಬರ್‌ ಯಾವುದು ಎಂದು ಪರಿಶೀಲನೆ ನಡೆಸಿದಾಗ ಅರುಣ್‌ ಎಂಬಾತನದ್ದು ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: 4 ತಿಂಗಳ ಅಂತರದಲ್ಲಿ ಎರಡು ಮಕ್ಕಳು ಹೇಗೆ ಸಾಧ್ಯ – ಪ್ರಥಮ್‌ ವಿರುದ್ಧ ಕೇಸ್‌ ದಾಖಲು

    ಸಂಪತ್‌ ರಾಜ್‌ ಆಪ್ತ ಅರುಣ್‌
    ಸಂಪತ್‌ ರಾಜ್‌ ಆಪ್ತ ಅರುಣ್‌

    ಅರುಣ್‌ ಬೇರೆ ಯಾರು ಅಲ್ಲ ಈತ ಮಾಜಿ ಬಿಬಿಎಂಪಿ ಮೇಯರ್‌ ಸಂಪತ್‌ ರಾಜ್‌ ಆಪ್ತ, ಕಾಂಗ್ರೆಸ್‌ನ ಸಕ್ರೀಯ ಕಾರ್ಯಕರ್ತ. ಈ ಗಲಭೆಯಲ್ಲಿ ಅರುಣ್‌ ಪಾತ್ರ ಇರುವುದು ತಿಳಿದು ಬರುತ್ತಿದ್ದತೆ ಸಿಸಿಬಿ ಪೊಲೀಸರು ಸೋಮವಾರ ರಾತ್ರಿಯೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

    ತನಿಖೆಯ ವೇಳೆ ಇನ್ನೊಂದು ಟ್ವಿಸ್ಟ್‌ ಸಿಕ್ಕಿದ್ದು, ಫೋನಿನಲ್ಲಿ ಮುಜಾಮಿಲ್‌ ಪಾಷಾನೊಂದಿಗೆ ಅರುಣ್‌ ಮಾತನಾಡಿದರೆ ಜೊತೆಯಲ್ಲೇ ಇನ್ನೊಬ್ಬ ವ್ಯಕ್ತಿಯೂ ಮಾತನಾಡಿದ್ದಾರೆ. ಈ ವ್ಯಕ್ತಿಯ ಧ್ವನಿ ಸಂಪತ್‌ ರಾಜ್‌ ಧ್ವನಿಯಂತೆ ಹೋಲಿಕೆ ಇರುವ ಕಾರಣ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ

    ತನ್ನ ಫೋನ್‌ ನಂಬರ್‌ ಬಳಸಿದ್ರೆ ತನಗೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಸಂಪತ್‌ ರಾಜ್‌ ಅರುಣ್‌ ಫೋನ್‌ ಬಳಸಿದ್ರಾ? ಇದರ ಜೊತೆ ಗಲಭೆ ಇನ್ನಷ್ಟು ದೊಡ್ಡದಾಗೋ ಸಂಪತ್ ರಾಜ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಧ್ವನಿ ಸಂಪತ್‌ ರಾಜ್‌ ಅವರದ್ದೇ ಎನ್ನುವುದು ಪೊಲೀಸ್‌ ಮೂಲಗಳ ಮಾಹಿತಿ. ಆದರೂ ಈ ಬಗ್ಗೆ ಪೂರ್ಣವಾದ ಸಾಕ್ಷ್ಯ ಸಂಗ್ರಹಿಸಲು ಸಂಪತ್‌ ರಾಜ್‌ ಅವರನ್ನು ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.

    ವಿಚಾರಣೆ ವೇಳೆ ಸಂಪತ್‌ ರಾಜ್‌ ಬಗ್ಗೆ ಅರುಣ್‌ ಸ್ಫೋಟಕ ಮಾಹಿತಿಗಳನ್ನು ತಿಳಿಸಿದ್ದು, ಇಂದೇ ಸಂಪತ್‌ ರಾಜ್‌ ಬಂಧನವಾಗುವ ಸಾಧ್ಯತೆಯಿದೆ.

  • ಬೆಂಗಳೂರು ಗಲಭೆ ಹಿಂದೆ ಉಗ್ರ ಸಂಘಟನೆಯ ನಂಟು – ಏನಿದು ಅಲ್ ಹಿಂದ್?

    ಬೆಂಗಳೂರು ಗಲಭೆ ಹಿಂದೆ ಉಗ್ರ ಸಂಘಟನೆಯ ನಂಟು – ಏನಿದು ಅಲ್ ಹಿಂದ್?

    ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಇಡೀ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದ್ದು, ಗಲಭೆಯ ಹಿಂದೆ ಉಗ್ರಗಾಮಿ ಸಂಘಟನೆಯ ಪಾತ್ರವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್‌ ಭೈರಸಂದ್ರದ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮೀವುದ್ದೀನ್ ಎಂಬಾತನನ್ನು ಭಾನುವಾರ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸಮೀವುದ್ದೀನ್‍ಗೆ ಆಲ್ ಹಿಂದ್ ಭಯೋತ್ಪಾದಕ ಸಂಘಟನೆಯ ನಂಟು ಇರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: 4 ತಿಂಗಳ ಅಂತರದಲ್ಲಿ ಎರಡು ಮಕ್ಕಳು ಹೇಗೆ ಸಾಧ್ಯ – ಪ್ರಥಮ್‌ ವಿರುದ್ಧ ಕೇಸ್‌ ದಾಖಲು

    ಡಿಜೆ ಹಳ್ಳಿ ಗಲಭೆ ವೇಳೆ ಸಮೀವುದ್ದೀನ್ ಸ್ಥಳದಲ್ಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸಮೀವುದ್ದೀನ್‍ನನ್ನು ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು, ಗಲಭೆ ಹಿಂದೆ ಉಗ್ರಗಾಮಿ ಸಂಘಟನೆ ಆಲ್ ಹಿಂದ್ ಪಾತ್ರವಿದೆಯಾ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.

    ಶಿವಾಜಿನಗರದಲ್ಲಿ ನಡೆದಿದ್ದ ಬಿಜೆಪಿ ಮುಖಂಡ ರುದ್ರೇಶ್ ಕೊಲೆ ಆರೋಪಿಗಳ ಜೊತೆಗೂ ಸಮೀವುದ್ದೀನ್‍ಗೆ ನಿಕಟ ನಂಟಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಪಿಗಳು ಉಗ್ರ ಸಂಘಟನೆಗಳ ಜೊತೆಗೂ ಲಿಂಕ್ ಇಟ್ಕೊಂಡಿದ್ದಾರಾ ಅಂತ ಪರಿಶೀಲನೆ ನಡೆಸಲಾಗ್ತಿದೆ. ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಈ ಬಗ್ಗೆ ಈಗಲೇ ಏನು ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.

    ಏನಿದು ಅಲ್ ಹಿಂದ್?
    ಐಸಿಸ್ ಸಂಘಟನೆಯಿಂದ ಪ್ರೇರಣೆಗೊಂಡು ಸ್ಥಾಪನೆಯಾದ ಸಂಘಟನೆಯೇ ಅಲ್ ಹಿಂದ್. ಉಗ್ರರಾದ ಮೆಹಬೂಬ್ ಪಾಷಾ, ಮೊಯಿದ್ದೀನ್ ಕ್ವಾಜಾ ಈ ಸಂಘಟನೆಯನ್ನು ಸ್ಥಾಪಿಸಿದ್ದು, ದಕ್ಷಿಣ ಭಾರತದಲ್ಲಿ (ಕರ್ನಾಟಕ, ಕೇರಳ) ಸಕ್ರಿಯವಾಗಿದೆ. 200-250 ಉಗ್ರರು ಈ ಸಂಘಟನೆಯಲ್ಲಿ ಇರುವ ಶಂಕೆ ವ್ಯಕ್ತವಾಗಿದ್ದು, ತಿಂಗಳ ಹಿಂದಷ್ಟೇ ಅಲ್ ಹಿಂದ್ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿತ್ತು.

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಉಗ್ರರು ಹರಡಿರುವ ಶಂಕೆ ವ್ಯಕ್ತವಾಗಿದ್ದು, 2019ರಲ್ಲಿ ಬೆಂಗಳೂರಿನ ಗುರಪ್ಪನ ಪಾಳ್ಯದಲ್ಲಿ ನಡೆದಿದ್ದ ಹಲವು ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡಿನ ಹಿಂದೂ ನಾಯಕರ ಹತ್ಯೆಯಲ್ಲಿ ಅಲ್ ಹಿಂದ್ ಪಾತ್ರವಿದೆ. ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಲ್ ಹಿಂದ್‍ನ ಉಗ್ರ ಶಿವಮೊಗ್ಗದ ಅಬ್ದುಲ್ ಮತೀನ್ ಬಗ್ಗೆ ಮಾಹಿತಿ ನೀಡಿದರೆ 3 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ತೀರ್ಥಹಳ್ಳಿ ಉಗ್ರನ ಪತ್ತೆ ಮಾಡ್ಕೊಟ್ಟರೆ 3 ಲಕ್ಷ ಬಹುಮಾನ- ಎನ್‍ಐಎ ಘೋಷಣೆ

  • ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿ ಈಗ ಕಣ್ಣೀರು ಹಾಕ್ಬೇಡಿ – ಬೇಗ್‌ ವಿರುದ್ಧ ಜಮೀರ್‌ ಕಿಡಿ

    ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿ ಈಗ ಕಣ್ಣೀರು ಹಾಕ್ಬೇಡಿ – ಬೇಗ್‌ ವಿರುದ್ಧ ಜಮೀರ್‌ ಕಿಡಿ

    ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಈಗ ಮುಸ್ಲಿಮ್‌ ರಾಜಕೀಯ ನಾಯಕರಾದ ಜಮೀರ್‌ ಮತ್ತು ರೋಷನ್‌ ಬೇಗ್‌ ಮಧ್ಯೆ ಕಿತ್ತಾಟ ಆರಂಭಗೊಂಡಿದೆ.

    ಮಾಜಿ ಸಚಿವ ಜಮೀರ್‌ ಅಹಮದ್‌ ಅವರು ಇಂದು 5 ಟ್ವೀಟ್‌ ಮಾಡಿ ರೋಷನ್‌ ಬೇಗ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಮೂರು ದಶಕಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಮುಸ್ಲಿಮರ ಬಡತನ, ಅನಕ್ಷರತೆ, ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದೆ, ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿಕೊಂಡಿದ್ದ ರೋಷನ್‌ ಬೇಗ್‌ ಅವರು ಈಗ ಮುಸ್ಲಿಮರ ಪರ ಕಣ್ಣೀರು ಹಾಕುತ್ತಿರುವುದು ತಮಾಷೆಯಾಗಿದೆ.

    ಶಿವಾಜಿನಗರದಲ್ಲಿ ಬೇಗ್ ಅವರು ಸ್ಪರ್ಧಿಸುತ್ತಿದ್ದಾಗ ಎಂದೂ ಸ್ಪರ್ಧಿಸದಿದ್ದ ಎಸ್‌ಡಿಪಿಐ ಇತ್ತೀಚಿನ ಶಿವಾಜಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಣಕ್ಕಿಳಿದದ್ದು ಯಾಕೆ? ಕಾಂಗ್ರೆಸ್ ಬೆಂಬಲಿಸುವ ಮುಸ್ಲಿಮ್‌ ಮತಗಳನ್ನು ವಿಭಜಿಸುವ ದುರುದ್ದೇಶದಿಂದ ಎಸ್‌ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಯಾರು ಎನ್ನುವುದನ್ನು ಬೇಗ್ ಸಾಹೇಬರು ತಿಳಿಸಬೇಕು.

    ಡಿಜೆಹಳ್ಳಿ ಗಲಭೆ ಬಗ್ಗೆ ಇಲ್ಲಿಯ ವರೆಗೆ ಮೌನವಹಿಸಿದ್ದ ರೋಷನ್‌ಬೇಗ್‌ ಅವರು ಇದ್ದಕ್ಕಿದ್ದ ಹಾಗೆ ಎಸ್‌ಡಿಪಿಐ ಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನ ಪಡುತ್ತಿರುವುದು ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದನ್ನು ಕಂಡಾಗ ಪೊಲೀಸರ ತನಿಖೆಯ ಸುಳಿವು ಅವರಿಗೆ ಸಿಕ್ಕ ಹಾಗೆ ಕಾಣುತ್ತಿದೆ. ಇದನ್ನೂ ಓದಿ: ಬೆಂಗಳೂರು ಪುಂಡರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ – ಈ ಕಾಯ್ದೆಯ ವಿಶೇಷತೆ ಏನು?

    ಪ್ರವಾದಿಯವರನ್ನು ಅವಹೇಳನ ಮಾಡಿರುವ ನವೀನ್ ಎಂಬ ಆರೋಪಿಯ ಕುಕೃತ್ಯವನ್ನು ಕನಿಷ್ಠ ಖಂಡಿಸುವ ಧೈರ್ಯ ತೋರದ ರೋಷನ್‌ ಬೇಗ್‌ ಅವರು ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಸಂಬಂಧದ ಕತೆ ಹೆಣೆಯುತ್ತಿರುವುದು ಅವರ ಆತ್ಮವಂಚಕ ನಡವಳಿಕೆಗೆ ಸರಿಯಾಗಿ ಹೊಂದಿಕೊಳ್ಳುತ್ತಿದೆ.

    ಮಾನ್ಯ ರೋಷನ್‌ ಬೇಗ್‌ ಅವರೇ, ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪ ಮಾಡಿ ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿ ಕಸ ಗುಡಿಸಿ, ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 10 ವರ್ಷದ ಷರತ್ತು ಸಡಿಲಿಸಿ 2023ರ ಚುನಾವಣೆಯಲ್ಲಾದರೂ ಬಿಜೆಪಿ ಟಿಕೆಟ್ ನೀಡಬಹುದು. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ.

  • ಬೆಂಗಳೂರು ಪುಂಡರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ – ಈ ಕಾಯ್ದೆಯ ವಿಶೇಷತೆ ಏನು?

    ಬೆಂಗಳೂರು ಪುಂಡರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ – ಈ ಕಾಯ್ದೆಯ ವಿಶೇಷತೆ ಏನು?

    ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಬಂಧಿಸಿ ಎಂದು ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.

    ಭಾರೀ ಪ್ರಮಾಣದ ಅಪರಾಧ ಕೃತ್ಯಗಳನ್ನು ಎಸಗಿದ ಆರೋಪಿಗಳನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿಲಾಗುತ್ತದೆ. ಈ ಕಾಯ್ದೆ ಬಿದ್ದರೆ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಗೂಂಡಾ ಕಾಯ್ದೆ ಅಲ್ಲದೇ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯ ಅಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ. ಹೀಗಾಗಿ ಇಲ್ಲಿ ಗೂಂಡಾ ಕಾಯ್ದೆ ಯಾವಾಗ ಬಂದಿತ್ತು? ವಿಶೇಷತೆ ಏನು ಇತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.

    ಏನಿದು ಗೂಂಡಾ ಕಾಯ್ದೆ?
    ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಮೀತಿ ಮೀರಿತ್ತು. ಈ ರೌಡಿಗಳನ್ನು ಮಟ್ಟ ಹಾಕಲು 1985ರಲ್ಲಿ ಜನತಾ ಸರ್ಕಾರ ಗೂಂಡಾ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿತು.

    ಯಾರ ವಿರುದ್ಧ ಕ್ರಮ ಕೈಗೊಳ್ಳಬಹುದು?
    ತಿದ್ದು ಪಡಿಯಾದ ಕಾಯ್ದೆ ವ್ಯಾಪ್ತಿಗೆ ಆಸಿಡ್ ದಾಳಿಕೋರರು, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ಹಾನಿ ಮಾಡುವವರು, ಡಿಜಿಟಲ್ ಮೀಡಿಯಾದಲ್ಲಿ (ವೆಬ್‍ಸೈಟ್) ವಂಚಿಸುವವರು, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು, ಕಾನೂನು ಬಾಹಿರ ಹಣಕಾಸು ವ್ಯವಹಾರ ನಡೆಸುವವರನ್ನು ಸೇರಿಸಲಾಗಿದೆ.

    ನೇರವಾಗಿ ಜೈಲಿಗೆ:
    ಈ ಕಾಯ್ದೆಯಲ್ಲಿ ಬಂಧನಕ್ಕೆ ಒಳಗಾದ ಆರೋಪಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇಲ್ಲ. ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದಾಗಿದೆ. ಈ ಕಾಯ್ದೆಯ ಅಡಿ ಬಂಧನಕ್ಕೆ ಒಳಗಾದರೆ ಒಂದು ವರ್ಷ ಜಾಮೀನು ಸಿಗುವುದಿಲ್ಲ. ಮುನ್ನಚ್ಚರಿಕಾ ಕ್ರಮವಾಗಿ ಬಂಧಿಸಿ ಗಡೀಪಾರು ಆದೇಶವನ್ನೂ ಹೊರಡಿಸಲು ಅವಕಾಶವಿದೆ. ಇದನ್ನೂ ಓದಿ: ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು

    ಯಾವ ರಾಜ್ಯದಲ್ಲಿದೆ?
    ಸ್ವಾತಂತ್ರ್ಯಾ ನಂತರ ರಾಜಸ್ತಾನ (1975), ಉತ್ತರ ಪ್ರದೇಶ (1971), ತಮಿಳುನಾಡು (1982), ಕೇರಳ(2007) ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿವೆ. ಡಿಜಿಟಲ್ ಅಪರಾಧ, ಸೈಬರ್ ಅಪರಾಧಗಳನ್ನು ಗೂಂಡಾ ಕಾಯ್ದೆಯಡಿ ತಮಿಳುನಾಡು ಮೊದಲ ಬಾರಿಗೆ 2004ರಲ್ಲಿ ತಂದಿತ್ತು. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

  • ಗೂಂಡಾ ಕಾಯ್ದೆ ಅಡಿ ಬಂಧಿಸಿ, ದಂಗೆಕೋರರಿಂದ ನಷ್ಟ ಭರ್ತಿ ಮಾಡಿ – ಸಿಎಂ ಸೂಚನೆ

    ಗೂಂಡಾ ಕಾಯ್ದೆ ಅಡಿ ಬಂಧಿಸಿ, ದಂಗೆಕೋರರಿಂದ ನಷ್ಟ ಭರ್ತಿ ಮಾಡಿ – ಸಿಎಂ ಸೂಚನೆ

    – ಗೃಹ ಇಲಾಖೆಯ ಜೊತೆ ಸಿಎಂ ಬಿಎಸ್‌ವೈ ಸಭೆ
    – 3 ಮಂದಿ ಸರ್ಕಾರಿ ಅಭಿಯೋಜಕರನ್ನು ನೇಮಿಸಿ

    ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಂಡಾ ಕಾಯ್ದೆಯ ಅಡಿ ಯಾರನ್ನು ಬಂಧಿಸಬಹುದು ಅವರನ್ನು ಬಂಧಿಸಿ ಎಂದು ಸಿಎಂ ಯಡಿಯೂರಪ್ಪ ಗೃಹ ಇಲಾಖೆಗೆ ಸೂಚಿಸಿದ್ದಾರೆ.

    ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಬೊಮ್ಮಾಯಿ, ಸಂಪೂರ್ಣ ಮಾಹಿತಿಯನ್ನು ಸಿಎಂಗೆ ನೀಡಿದ್ದೇವೆ. ದಂಗೆಯಲ್ಲಿ ಭಾಗವಹಿಸಿದವರಿಂದ ನಷ್ಟ ಭರ್ತಿಗೆ ಸಿಎಂ ಸೂಚಿಸಿದ್ದಾರೆ. ಗಲಭೆಯಲ್ಲಿ ಪಾಲ್ಗೊಂಡವರ ಹಿನ್ನೆಲೆ ಪರಿಶೀಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸುವುದಕ್ಕೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

    ಮೂರು ಜನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳನ್ನು ನೇಮಿಸಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯ ಅಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು.

    ಗಲಭೆಯಲ್ಲಿ ಪಾಲ್ಗೊಂಡ ಆರೋಪಿಗಳ ಹಿನ್ನೆಲೆ, ಯಾವ ಸಂಘಟನೆಗಳ ಜೊತೆ ಸಂಪರ್ಕ ಇದೆ? ಆರೋಪಿಗಳು ಉಗ್ರ ಸಂಘಟನೆಗಳ ಜತೆಗೂ ಲಿಂಕ್ ಇಟ್ಕೊಂಡಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ಗಲಭೆಕೋರರಿಗೆ ಉಗ್ರರ ನಂಟಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ಇನ್ನೂ ತನಿಖೆ ಹಂತದಲ್ಲಿ ಇದೆ. ಯಾವ ಸಂಘಟನೆಯ ಜೊತೆ ಸಂಪರ್ಕದಲ್ಲಿದೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಇದರ ಬಗ್ಗೆ ಹೇಳಲು ಆಗುವುದಿಲ್ಲ ಎಂದು ಉತ್ತರಿಸಿದರು.

    ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿ-ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಉಪಸ್ಥಿತರಿದ್ದರು.

    ಸಿಎಂ ಸಭೆಯ ಹೈಲೈಟ್ಸ್‌:
    1. ಆರೋಪಿಗಳ ತ್ವರಿತ ವಿಚಾರಣೆಗಾಗಿ, ಕಾನೂನು ಪ್ರಕ್ರಿಯೆಗಳಿಗಾಗಿ ಮೂವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ನೇಮಕ.
    2. ಗಲಭೆಯಡಿ ಬಂಧಿಸಿರುವ ಆರೋಪಿಗಳ ಜತೆ ಉಗ್ರ ಸಂಘಟನೆಗಳ ಲಿಂಕ್ ಇದ್ಯಾ ಅನ್ನೋ ಬಗ್ಗೆ ಬಗ್ಗೆ ಪರಿಶೀಲನೆಗೆ ನಿರ್ಧಾರ.
    3. ಘಟನೆಯಿಂದ ಆಗಿರುವ ಆಸ್ತಿಪಾಸ್ತಿ ನಷ್ಟ ವಸೂಲಿಗೆ ಕ್ಲೇಂ ಕಮೀಷನರ್ ನೇಮಕ ಮಾಡುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಕೆಗೆ ನಿರ್ಧಾರ.


    4. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಹಿಂದೆ ಕೇಸ್ ಇದ್ದರೆ ಪರಿಶೀಲಿಸಿ ಅಂತಹವರ ಮೇಲೆ ಗೂಂಡಾ ಕಾಯ್ದೆಯ ಅಡಿ ಹಾಕಲು ನಿರ್ಧಾರ.
    5. ಪ್ರಕರಣದಲ್ಲಿ ಭಾಗಿಯಾದವರು ಇತರೇ ಸಂಘಟನೆಗಳ ಜೊತೆ ಗುರ್ತಿಸಿಕೊಂಡಿರುವ ಬಗ್ಗೆ ಪರಿಶೀಲನೆ.
    6. ಪ್ರಕರಣದ ಹಿಂದಿರುವ ರಾಜಕೀಯ ಕಾರಣಗಳ ಬಗ್ಗೆಯೂ ಪರಿಶೀಲನೆ.


    7. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಒಂದೇ ತನಿಖಾ ತಂಡದಿಂದ ಮಾತ್ರ ಸದ್ಯಕ್ಕೆ ತನಿಖೆ. ಇದರಲ್ಲೂ ಸದ್ಯಕ್ಕೆ ಬದಲಾವಣೆ ಇಲ್ಲ.
    8. ಗೋಲಿಬಾರ್ ಪ್ರಕರಣವೂ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ. ಇದರಲ್ಲಿ ಬದಲಾವಣೆ ಇಲ್ಲ.
    9. ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

  • ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ಬೆಂಗಳೂರು: ಆರೋಪಿ ನವೀನ್‌ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೇ ಈಗ ಡಿಜೆ ಹಳ್ಳಿ ಠಾಣೆಯಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.

    ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದಕ್ಕೆ ನವೀನ್‌ ವಿರುದ್ಧ ಫಿರ್ದೋಸ್‌ ಪಾಶಾ ನೀಡಿದ್ದರು. ಆದರೆ ಈಗ ತನ್ನ ಸ್ಕೂಟರ್‌ ಅನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ವತ್ತಿನ ನಾಶ ಹಾಗೂ ನಷ್ಟ ಪ್ರತಿಬಂಧಕ ಅಧಿನಿಯಮ 1981 ಮತ್ತು ಐಪಿಸಿ ಸೆಕ್ಷನ್‌ 143, 145, 144, 147, 148, 149, 435 ಅಡಿ ಪ್ರಕರಣ ದಾಖಲಾಗಿದೆ. 75 ಸಾವಿರ ರೂ. ಮೌಲ್ಯ ನಷ್ಟವಾಗಿದೆ ಎಂದು ಫಿರ್ದೋಶ್‌ ಪಾಶಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

    ದೂರಿನಲ್ಲಿ ಏನಿದೆ?
    ಆಗಸ್ಟ್‌ 11 ರ ಸಂಜೆ 7:30ಕ್ಕೆ ನಾನು ನನ್ನ ಹೊಂಡಾ ಆಕ್ವೀವಾವನ್ನು ಡಿಜೆ ಹಳ್ಳಿ ಠಾಣೆಯಲ್ಲಿ ನಿಲ್ಲಿಸಿ ದೂರು ನೀಡಲು ಬಂದಿದ್ದೆ. ಈ ವೇಳೆ ಸುಮಾರು ಜನ ಠಾಣೆಯ ಒಳಗಡೆ ಬಂದು ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ನನಗೆ ನನ್ನ ಆಕ್ಟೀವಾವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ರಾತ್ರಿ 9 ಗಂಟೆಗೆ ಜಮಾಯಿಸಿದ ಜನ ನನ್ನ ಸ್ಕೂಟರ್‌ ಅನ್ನು ಸುಟ್ಟು ಹಾಕಿದ್ದಾರೆ. ಗಲಭೆಯಾದ ದಿನದಂದು 144 ಸೆಕ್ಷನ್‌ ಜಾರಿಯಾದ ಕಾರಣ ನನಗೆ ಆ ದಿನವೇ ದೂರು ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಈ ದಿನ ದೂರು ನೀಡುತ್ತಿದ್ದೇನೆ. ನನ್ನ ಸ್ಕೂಟರನ್ನು ಸುಟ್ಟು ಹಾಕಿ ನಾಶ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ.

    ಎಫ್‌ಬಿ ಪೋಸ್ಟ್‌ ನೆಪ?
    ನವೀನ್‌ ವಿರುದ್ಧವೇ ದೂರು ನೀಡಿದ ಫಿರ್ದೋಸ್ ಪಾಶಾ ಅವರೇ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದು ಈ ಪ್ರಕರಣ ಮತ್ತಷ್ಟು ಟ್ವಿಸ್ಟ್‌ ಸಿಕ್ಕಿ ಹಲವು ಪ್ರಶ್ನೆಗಳು ಎದ್ದಿದೆ. ದೂರು ಕೊಟ್ಟವರು ಹಾಗೂ ಗಲಾಟೆ ಮಾಡಿದವರಿಗೂ ಸಂಬಂಧ ಇಲ್ಲವೇ? ನವೀನ್ ಪೋಸ್ಟ್‌ಗೂ ಗಲಾಟೆಗೂ ಸಂಬಂಧವೆ ಇಲ್ಲವೇ? ಫೇಸ್‌ಬುಕ್‌ ಪೋಸ್ಟ್‌ ಎಂಬುದು ನೆಪ ಮಾತ್ರವೇ ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.