Tag: Bengaluru Stampede

  • ಅಲ್ಲಿ ಹೆಣಗಳು ಬಿದ್ದಿವೆ, ಇವರು ಕಪ್‌ಗೆ ಮುತ್ತು ಕೊಟ್ಟುಕೊಂಡು ನಿಂತಿದ್ದಾರೆ: ಸಿಎಂ, ಡಿಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ

    ಅಲ್ಲಿ ಹೆಣಗಳು ಬಿದ್ದಿವೆ, ಇವರು ಕಪ್‌ಗೆ ಮುತ್ತು ಕೊಟ್ಟುಕೊಂಡು ನಿಂತಿದ್ದಾರೆ: ಸಿಎಂ, ಡಿಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ

    – ಡಿಸಿಎಂ ಚೈಲ್ಡಿಷ್ ಥರ ಆಡಲಿಲ್ಲ ಅಂದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ: ಕೇಂದ್ರ ಸಚಿವ

    ನವದೆಹಲಿ: ಅಲ್ಲಿ ಹೆಣಗಳು ಬಿದ್ದಿವೆ, ಇವರು ಕಪ್‌ಗೆ ಮುತ್ತು ಕೊಟ್ಟುಕೊಂಡು ನಿಂತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

    ಕಾಲ್ತುಳಿತ ದುರಂತ ಪ್ರಕರಣ ಕುರಿತು ಮಾತನಾಡಿದ ಅವರು, ಅವರು ಏನ್ ಹೇಳಿದ್ರು? ಕಾರ್ಯಕ್ರಮ ನಿಲ್ಲಿಸಲು ಅಂತಾ ಹೇಳಿದ್ದಾರೆ ಅಲ್ವಾ. ಕ್ರೀಡಾಂಗಣಕ್ಕೆ ಹೋಗಿ ಕಾರ್ಯಕ್ರಮ ನಿಲ್ಲಿಸ್ತೀವಿ ಅಂದ್ರು. ಅಲ್ಲಿ ಹೋಗಿ ಕಪ್‌ಗೆ ಮುತ್ತು ಕೊಡಲು ಹೋಗಿದ್ದಾರೆ. ಹೆಣ ಬಿದ್ದಿದೆ, ಇವರು ಹೋಗಿ ಹೆಣದ ಮುಂದೆ ಕಪ್‌ಗೆ ಮತ್ತು ಕೊಟ್ಟಿಕೊಂಡು ನಿಂತಿದ್ದಾರೆ. ಇವರೇ ಆರ್‌ಸಿಬಿ ಗೆಲ್ಲಿಸಿಕೊಂಡು ಕಪ್ ತೆಗೆದುಕೊಂಡು ಬರೋ ಥರ ಮಾಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳ ಸಾವಿನ ನಡುವೆ ಮುತ್ತು ಕೊಟ್ಟಿಕೊಂಡು ನಿಂತಿದ್ದಾರೆ ಎಂದು ಸಿಎಂ ಮತ್ತು ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

    ನಿನ್ನೆ ಒಂದು ರೀತಿಯ ಕುತೂಹಲ ಘಟಕ್ಕೆ ತಲುಪಿ ಆರ್‌ಸಿಬಿ ತಂಡ ಐಪಿಎಲ್ ಕಪ್ ಗೆದ್ದಿದೆ. ಇಂತಹ ಸಂದರ್ಭದಲ್ಲಿ ಇಷ್ಟೊಂದು ತರಾತುರಿಯಲ್ಲಿ ಸರ್ಕಾರದ ವತಿಯಿಂದ ಅಭಿನಂದನೆ ಸಲ್ಲಿಸಲು ತೀರ್ಮಾನ ಮಾಡಿದ್ದು ಯಾರು? ಅವರಿಗೆ ಇನ್ವಿಟೇಷನ್ ಕೊಟ್ಟಿದ್ದು ಯಾರು? ಅವರಿಗೆ ಸರ್ಕಾರ ಆಹ್ವಾನ ಕೊಟ್ಟಿದ್ದು ತಪ್ಪು ಅಂತಾಲೂ ನಾನು ಹೇಳಲ್ಲ. ಏರ್ ಪೋರ್ಟ್ನ ಡ್ರಾಮಾ ಕೂಡ ತೋರಿಸಿದ್ದೀರಿ. ಅಲ್ಲಿಗೆ ಯಾರು ಹೋದರು? ಆಯೋಜನೆ ಮಾಡಿದ್ದು ಯಾರು? ನಮ್ಮ ಡಿಸಿಎಂ ಅವರೇ ಬೆವರು ಸುರಿಸಿ ಕಪ್ ಗೆದ್ದಾರೋ ಅನ್ನೋ ತರ ಮುತುವರ್ಜಿಯಿಂದ ಹೋಗಿದ್ದಾರೆ. ಕನಕಪುರದವರನ್ನ ಕರೆದುಕೊಂಡು ಹೋಗಿದ್ದಾರೆ. ಬೇರೆ ಯಾರೂ ಹೋಗಿಲ್ಲ. ಇದು ಕನಕಪುರದ ಆರ್‌ಸಿಬಿನಾ? ಚೇಲಾಗಳು ಬೆಂಬಲಿಗರನ್ನ ಕರೆದುಕೊಂಡು ಹೋಗಿದ್ದಾರೆ ಡಿಕೆಶಿ ಎಂದು ಕಿಡಿಕಾರಿದರು.

    ಏರ್‌ಪೋರ್ಟ್ನಿಂದ ವಿಧಾನಸೌಧಕ್ಕೆ ಕರೆದುಕೊಂಡು ಹೋಗಿದ್ದಾರೆ. ಎರಡು ಕಾರ್ಯಕ್ರಮ ಮಾಡುವ ಅವಕಾಶ ಏನಿತ್ತು? ಅಮಾಯಕರನ್ನ ಬಲಿಪಡುವ ಅವಕಾಶ ಏನಿತ್ತು? ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭದಲ್ಲಿ ಬೀಗ ತೆರೆದು ಬಿಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿತ್ತಾ? ಈ ಸರ್ಕಾರ ಕಟುಕರ ಸರ್ಕಾರ. ಸಿಎಂ ನಿಷ್ಕ್ರಿಯ ಸಿಎಂ. ಡಿಸಿಎಂ ಮುಂದೆ ಸಿಎಂ ನಿಷ್ಕ್ರಿಯ. ಇನ್ನೂ ಹೋಮ್ ಮಿನಿಸ್ಟರ್ ಬಗ್ಗೆ ಮಾತಾಡೋದೇ ಬೇಡ. ಹೇಳು ಅಂದರೆ ಹೇಳ್ತಾರೆ ಇಲ್ಲಾಂದ್ರೆ ಇಲ್ಲ. ವಿಧಾನಸೌಧ ಮುಂದೆ ಕಾರ್ಯಕ್ರಮ ನಡೆಯುವಾಗಲೇ 4 ಜನರು ಸತ್ತಿದ್ದರು. ತರಾತುರಿಯಲ್ಲಿ ಮಾಡುವ ಅವಶ್ಯಕತೆ ಏನಿತ್ತು. ಆಗಲೇ ಕಾರ್ಯಕ್ರಮ ನಿಲ್ಲಿಸಬೇಕಿತ್ತು. ನಿನ್ನೆಯಿಂದಲೇ ಏನು ಅಂತಾ ಎಲ್ಲ ಗೊತ್ತಿತ್ತು. ವಿಧಾನಸೌಧ ಮುಂದೆಯೇ ಜನರು ಡಿಸಿಎಂಗೆ ಮರ್ಯಾದೆ ತೆಗೆದಿದ್ದಾರೆ. ಜನರು ನಿಮ್ಮನ್ನ ನೋಡಲು ಬಂದಿಲ್ಲ ಅಂತಾ ಎಂದು ವಾಗ್ದಾಳಿ ನಡೆಸಿದರು.

    ಸಿಎಂ ಹೇಳ್ತಾರೆ, ಈ ಸಂದರ್ಭದಲ್ಲಿ ಲಕ್ಷಾಂತರ ಸೇರಿದಾಗ ಹೀಗೆ ಅಂತಾ. ಅದಕ್ಕೆ ಹೇಳಿದ್ದು ನೀವು ನಿಷ್ಕ್ರಿಯ ಸಿಎಂ ಅಂತಾ. ಇಂತಹವರನ್ನ ಹೊರಹಾಕಿ ಅಂತಾ ಹೇಳೋದು. ಇದು ಸರ್ಕಾರದ ವೈಫಲ್ಯ. ಲಕ್ಷಾಂತರ ಜನರು ಸೇರಿದ್ದಾರೆ. ಪೊಲೀಸರು ಮೊದಲೇ ಹೇಳಿದ್ದಾರೆ. ಪೊಲೀಸ್ ಕಮಿಷನರ್ ಹೇಳಿದ್ದಾರೆ. ಎರಡು ಕಾರ್ಯಕ್ರಮ ಮಾಡಿದರೆ ಸೆಕ್ಯುರಿಟಿ ಸಮಸ್ಯೆ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ನಿರ್ಲಕ್ಷö್ಯ ತೋರಿ ಹೀಗೆ ಮಾಡಿದ್ದಾರೆ. ಮೃತರ ಕುಟುಂಬಸ್ಥರಿಗೆ ದುಃಖ ಬರಿಸುವ ಶಕ್ತಿಯನ್ನು ಭಗವಂತೆ ನೀಡಲಿ ಎಂದರು.

    ನಾನು ರಾಜಕೀಯ ಮಾಡ್ತಿಲ್ಲ. ಇದು ಕಣ್ಣಾರೆ ನಡೆದಿರುವ ಕಥೆ. ಡಿಸಿಎಂ ಚೈಲ್ಡಿಷ್ ತರ ಆಡಿಲ್ಲ ಅಂದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಮಂಗಳೂರು ಘಟನೆ ನೋಡಿ, ಗಡಿಪಾರು ಮಾಡ್ತಾರಂತೆ. ಗಡಿಪಾರು ಮಾಡಿಲ್ಲ ಅಂದರೆ ಏನ್ ಮಾಡ್ತೀರಿ. ನಿಮಗೆ ಹದ್ದುಬಸ್ತಿನಲ್ಲಿ ಇಡಲು ಆಗಲ್ವಾ? ಎರಡು ವರ್ಷಗಳಿಂದ ಶಾಂತಿ ನೆಲೆಸಿಲ್ಲ. ರಾಜ್‌ಕುಮಾರ್ ನಿಧನರಾದಾಗ ಸರ್ಕಾರಕ್ಕೆ ಮಾಹಿತಿ ಇರಲಿಲ್ಲ. ಕುಟುಂಬದವರು ಹೇಳಿರಲಿಲ್ಲ. ಮಾಧ್ಯಮ ಮೂಲಕ ಗೊತ್ತಾಗಿದ್ದು. ನಾವು ಕೊನೆ ಹಂತದಲ್ಲಿ ಕಂಠೀರವ ಸ್ಟೇಡಿಯಂಗೆ ತೆಗೆದುಕೊಂಡು ಹೋಗಿ ಅಂತಿಮ ದರ್ಶನಕ್ಕೆ ಇಟ್ಟಿದ್ವಿ. ಕಾಂಗ್ರೆಸ್ ಪಟಲಾಂನವರು ಸೀಮೆಎಣ್ಣೆ ಇಟ್ಟುಕೊಂಡು ಅಶಾಂತಿ ಕ್ರಿಯೇಟ್ ಮಾಡಲು ಬಂದಿದ್ದರು. ಗೋಲಿಬಾರ್ ಮಾಡಿದ್ವಿ. ಅಂಬರೀಶ್ ನಿಧನರಾದಾಗ ಶಾಂತಿ ಕಾಪಾಡಿದೆ ಎಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.

    ಇವರು ಪ್ಲಾನ್ ಮಾಡಿರುವ ಕಾರ್ಯಕ್ರಮ ಅಲ್ಲ. ಇವರು ಎಕ್ಸ್ಪೋಸ್ ಮಾಡಲು ಮಾಡಿದ ಕಾರ್ಯಕ್ರಮ ಇದು. ಕಳೆದ ಬಾರಿ ಮುಂಬೈನಲ್ಲಿ ಐದು ಲಕ್ಷ ಜನರು ಸೇರಿದ್ದರು. ಆಗ ಯಾವುದೇ ಅನಾಹುತ ಆಗಲಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ನಡೆಗೆ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.

  • ಕಾಲ್ತುಳಿತ ಪ್ರಕರಣ; ಆಸ್ಪತ್ರೆಗಳಿಗೆ ಬಿಜೆಪಿ ನಾಯಕರು ಭೇಟಿ – ನ್ಯಾಯಾಂಗ ತನಿಖೆಗೆ ಆಗ್ರಹ

    ಕಾಲ್ತುಳಿತ ಪ್ರಕರಣ; ಆಸ್ಪತ್ರೆಗಳಿಗೆ ಬಿಜೆಪಿ ನಾಯಕರು ಭೇಟಿ – ನ್ಯಾಯಾಂಗ ತನಿಖೆಗೆ ಆಗ್ರಹ

    – ದುರಂತಕ್ಕೆ ಸರ್ಕಾರವೇ ನೇರ ಹೊಣೆ ಎಂದ ಕೇಸರಿ ಪಡೆ

    ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಜನರನ್ನು ಭೇಟಿಯಾಗಿ ಬಿಜೆಪಿ ನಾಯಕರು ಆರೋಗ್ಯ ವಿಚಾರಿಸಿದರು.

    ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಸಂಸದರಾದ ಪಿ.ಸಿ.ಮೋಹನ್‌, ಡಾ. ಕೆ.ಸುಧಾಕರ್‌ ಆಸ್ಪತ್ರೆಗೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರದ ವಿರುದ್ಧ ಹರಿಹಾಯ್ದರು. ಇವರಿಗೂ ಮೊದಲು ವಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಭೇಟಿ ನೀಡಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ, 11 ಮಂದಿ ಸಾವು – ಮೃತರು ಯಾರು? ಇಲ್ಲಿದೆ ವಿವರ

    ಬಸವರಾಜ್‌ ಬೊಮ್ಮಾಯಿ ಮಾತನಾಡಿ, 11 ಜನ ಸಾವನ್ನಪ್ಪಿರೋದು ದುಃಖದ ಸಂಗತಿ. ಕರ್ನಾಟಕದ ನಾಗರಿಕರಿಗೆ ಕೋಪ ಬಂದಿದೆ. ವಿಜಯೋತ್ಸವ ನಿಯಂತ್ರಣ ಮಾಡಲಿಕ್ಕೆ ಆಗಲಿಲ್ಲ ಅಂದರೆ, ಇಡೀ ಕರ್ನಾಟಕ ಜನರ ರಕ್ಷಣೆ ಮಾಡ್ತೀರಾ? ಇದು ಅನಿರೀಕ್ಷಿತ ಅಲ್ಲ, ಯಾಕಂದ್ರೆ ನೀವು ಪ್ಲಾನಿಂಗ್ ಮಾಡಿಲ್ಲ.‌ ಒಂದೇ ಒಂದು‌ ಸಭೆ ಮಾಡಿಲ್ಲ. ಯಾವ ಪ್ಲಾನಿಂಗ್ ಮಾಡಿಲ್ಲ.‌ ಒಟ್ಟಾರೆ ಬೇಜವಾಬ್ದಾರಿ ಇದು. ಈ ಕೊಲೆಗೆ ಸರ್ಕಾರ ನೇರ ಕಾರಣ. ಸಿಎಂ, ಕೆಸಿಎ ಅಂತಾರೆ. ಆದರೆ ಸೆಕ್ಯುರಿಟಿ ಯಾರು‌ ಕೊಡಬೇಕು? ಹಿರಿಯ ಪೊಲೀಸ್ ಅಧಿಕಾರಿಗಳು ಸುಮ್ಮನೆ ಇದ್ರು. ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ತನಿಖೆ ಆಗಬೇಕು ಎಂದು ಆಗ್ರಹಿಸಿದರು.

    ಫಂಕ್ಷನ್ ಮಾಡದೇ, ರೋಡ್ ಶೋ ಮಾಡಬೇಕಿತ್ತು. ಪುನೀತ್ ರಾಜ್‍ಕುಮಾರ್ ಅವರ ನಿಧನದ ವೇಳೆ, ಹಳೆ ವಿಚಾರದ ಬಗ್ಗೆ ಯೋಚನೆ ಮಾಡಿ, 25 ಲಕ್ಷ ಜನ ಸೇರುವ ನಿರೀಕ್ಷೆ ಇತ್ತು. ಆಗ ನಾವು ಪ್ಲಾನಿಂಗ್‌ ಮಾಡಿದ್ವಿ. ಗೃಹ ಸಚಿವರ ಪಾತ್ರ ಕಾಣಿಸ್ತಾ ಇಲ್ಲ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ‌ ಚೇಲಗಳೇ ತುಂಬಿ ಹೋಗಿದ್ರು. ನಾಚಿಕೆ ಮರ್ಯಾದೆ ಇದ್ದರೆ ಸಂಬಂಧಪಟ್ಟವರು ರಾಜೀನಾಮೆ ನೀಡಬೇಕು. ತನಿಖೆ ಘಟನೆಯ ಬಗ್ಗೆ ಆಗಬಾರದು, ಪೂರ್ವಯೋಜನೆ ವಿಫಲತೆ ಬಗ್ಗೆ ಆಗಬೇಕು. ಎಲ್ಲಿ ಹಿರಿಯ ಅಧಿಕಾರಿಗಳು ವೈಫಲ್ಯ ಆಗಿದ್ದಾರೆ, ಯಾವ ರಾಜಕಾರಣಿ ಪಾತ್ರ ಇದೆ ಅಂತ ತಿಳಿಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಸಿಎಂ ಘೋಷಣೆ

    ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ಹೋಗಿ, ಸೂತಕದ ವಾತಾವರಣ ಆಗಿದೆ. ಇದು ನಮಗೆ ತುಂಬಾ ದುಃಖ ತಂದಿದೆ. ಗಾಯಾಳುಗಳನ್ನು, ಮೃತರ ಸಂಬಂಧಿಕರನ್ನು ನಾವು ಮಾತಾಡಿಸಿದ್ದೇವೆ. ಸಾವಿನ ಮನೆಯಲ್ಲಿ ರಾಜಕೀಯ ಮಾಡಬಾರದು. ಚೆನೈ, ಮುಂಬೈ, ಎಲ್ಲಾ ಕಡೆ ಗೆದ್ದ ಸಂಭ್ರಮ ಮಾಡಿದ್ದಾರೆ, ಎಲ್ಲೂ ಹೀಗಾಗಿಲ್ಲ. ದುರಾಡಳಿ ಸರ್ಕಾರದಿಂದ ನಮ್ಮಲ್ಲಿ ಈ ದುರಂತ ನಡೆದಿದೆ. ಸಮಯೋಚಿತ ನಿರ್ಧಾರ ಮಾಡದೇ, ಅತ್ಯಂತ ಬೇಜವಬ್ದಾರಿಯಿಂದ ಸರ್ಕಾರ ನಡೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

    ಮೃತರ ತಂದೆ-ತಾಯಿಗೆ ಶೋಕ ಜೀವನಪರ್ಯಂತ ಇರುತ್ತದೆ. ಸರ್ಕಾರ ವ್ಯವಸ್ಥೆ ಮಾಡಬೇಕಿತ್ತು. ಗೆದ್ದ ವಾತಾವರಣ ಅಲ್ಲಿಗಿಂತ ಇಲ್ಲಿ ಹೆಚ್ಚಿತ್ತು. ದೀಪಾವಳಿ ರೀತಿಯಲ್ಲಿ ಆಚರಿಸಲಾಗಿತ್ತು. ಈ ವಿಚಾರ ತಿಳಿದು ಬಂದೋಬಸ್ತ್ ಮಾಡಬೇಕಿತ್ತು. ಇಂಟಲಿಜೆನ್ಸ್ ಏನು ಮಾಡ್ತಾ ಇತ್ತು? ಸರ್ಕಾರದ ನಡೆ ಎಲ್ಲಾ ಗೊಂದಲಮಯವಾಗಿತ್ತು. ಕಾರ್ಯಕ್ರಮ ಚೇಂಜ್ ಆಗ್ತಾನೆ ಇತ್ತು. ಜನರ ರಕ್ಷಣೆ ಮಾಡುವ ಬದಲು ಈ ರೀತಿ ಬೇಜವಬ್ದಾರಿತನ ಮಾಡಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಅಂತ ಸಂಬಂಧಿಕರು ಆರೋಪ ಮಾಡ್ತಿದ್ದಾರೆ. ರೈತರು ನೂರು ಜನ ಹೋರಾಟ ಮಾಡಲು, ಬಂದರೆ ನೂರಾರು ಪೊಲೀಸ್ ಹಾಕಿ ಭದ್ರತೆ ಕೊಡೋ ಸರ್ಕಾರ, ಈಗ್ಯಾಕೆ‌ ಭದ್ರತೆ ಕೊಡಲಿಲ್ಲ? ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿದೆ. ಈ ಘಟನೆಯ ಸೂಕ್ತ ತನಿಖೆ ಆಗಬೇಕು. ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕು. ಇದು ಸಾಮಾನ್ಯ ವಿಚಾರ ಅಲ್ಲ ಎಂದು ಮಾತನಾಡಿದರು. ಇದನ್ನೂ ಓದಿ: ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಿದ ಸಿಎಂ, ಡಿಸಿಎಂ

  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೀಕರ ಕಾಲ್ತುಳಿತ – ರಾಷ್ಟ್ರಪತಿ, ರಾಹುಲ್‌ ಗಾಂಧಿ ಸೇರಿ ಗಣ್ಯರ ಸಂತಾಪ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೀಕರ ಕಾಲ್ತುಳಿತ – ರಾಷ್ಟ್ರಪತಿ, ರಾಹುಲ್‌ ಗಾಂಧಿ ಸೇರಿ ಗಣ್ಯರ ಸಂತಾಪ

    ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu), ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಕಾಲ್ತುಳಿತದಿಂದ 11 ಜನರು ಮೃತಪಟ್ಟಿದ್ದಾರೆ. ಘಟನೆಗೆ ವಿಷಾದ ವ್ಯಕ್ತಪಡಿಸಿದ ದ್ರೌಪದಿ ಮುರ್ಮು, ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆದ ದುರಂತ ಘಟನೆಯಲ್ಲಿ ಸಂಭವಿಸಿದ ಜೀವಹಾನಿ ಆಘಾತಕಾರಿ ಮತ್ತು ಹೃದಯವಿದ್ರಾವಕ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಸಿಎಂ ಘೋಷಣೆ

    ಆರ್‌ಸಿಬಿಯ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ದುರಂತ ಹೃದಯವಿದ್ರಾವಕ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುಃಖದ ಸಮಯದಲ್ಲಿ, ನಾನು ಬೆಂಗಳೂರಿನ ಜನರೊಂದಿಗೆ ನಿಲ್ಲುತ್ತೇನೆ. ಕರ್ನಾಟಕ ಸರ್ಕಾರವು ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ಬೆಂಬಲ ಮತ್ತು ಪರಿಹಾರವನ್ನು ಒದಗಿಸಬೇಕು. ಈ ದುರಂತವು ನೋವಿನ ಜ್ಞಾಪನೆಯಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಪ್ರತಿಯೊಂದು ಸುರಕ್ಷತಾ ಪ್ರೋಟೋಕಾಲ್ ಅನ್ನು ಪರಿಶೀಲಿಸಬೇಕು ಮತ್ತು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜನರ ಸುರಕ್ಷತೆ ಮೊದಲ ಆದ್ಯತೆಯಾಗಬೇಕು ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

    ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 11 ಅಭಿಮಾನಿಗಳು ಬಲಿಯಾಗಿದ್ದಾರೆ. ದುರಂತಕ್ಕೆ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ | ಇದು ಹೃದಯ ವಿದ್ರಾವಕ ಘಟನೆ – ಮೃತರಿಗೆ ಮೋದಿ ಸಂತಾಪ

  • ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಸಿಎಂ ಘೋಷಣೆ

    ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಸಿಎಂ ಘೋಷಣೆ

    ಬೆಂಗಳೂರು: ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕಾಲ್ತುಳಿತ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದರು. ನಿನ್ನೆ ಆರ್‌ಸಿಬಿ ತಂಡ ಫೈನಲ್ ಪಂದ್ಯ ಜಯಗೊಳಿಸಿತ್ತು. ಇಂದು ವಿಜಯೋತ್ಸವ ಆಯೋಜಿಸಲಾಗಿತ್ತು. ಕ್ರಿಕೆಟ್ ಅಸೋಸಿಯೇಷನ್, ಸರ್ಕಾರದ ವತಿಯಿಂದಲೂ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಂತಹ ಘಟನೆ ನಡೆಯಬಾರದಾಗಿತ್ತು. ಬಹಳ ದೊಡ್ಡ ದುರಂತ ನಡೆದಿದೆ. ಕಾಲ್ತುಳಿತಕ್ಕೆ ಒಳಗಾಗಿ 11 ಜನ ಮೃತರಾಗಿದ್ದಾರೆ. 47 ಜನರು ಗಾಯಗೊಂಡಿದ್ದಾರೆ ಎಂದು ಸಿಎಂ ವಿಷಾದಿಸಿದರು. ಇದನ್ನೂ ಓದಿ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ | ಇದು ಹೃದಯ ವಿದ್ರಾವಕ ಘಟನೆ – ಮೃತರಿಗೆ ಮೋದಿ ಸಂತಾಪ

    ನಾನು ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೆ. ಸಂಭ್ರಮ ಆಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಿತ್ತು. ನಮ್ಮ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರು. ಘಟನೆಗೆ ಸರ್ಕಾರ ಬಹಳ ದುಃಖ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.

    ವಿಧಾನಸೌಧ ಎದರು 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಅಲ್ಲಿ ಯಾವುದೇ ಅನಿರೀಕ್ಷಿತ ಘಟನೆ ದುರಂತ ನಡೆದಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನ ವಿಧಾನಸೌಧದ ಮುಂದೆ ಸೇರಿದ್ರು. ವಿಧಾನಸೌಧದ ಮುಂದೆ ನಡೆದ ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ದುರಂತ ಆಗಿದೆ. ಯಾರು ಸಹ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಕೆಎಸ್‌ಸಿಎ, ಸರ್ಕಾರ ಇದನ್ನ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದಲ್ಲಿ 35 ಸಾವಿರ ಜನರಿಗೆ ಮಾತ್ರ ಆಸನದ ವ್ಯವಸ್ಥೆ ಇತ್ತು. ಆದರೆ 2-3 ಲಕ್ಷ ಜನ ಬಂದಿದ್ದರಂತೆ. ಇಂದು ಸಂಭ್ರಮದ ಬಗ್ಗೆ ಕೆಎಸ್‌ಸಿಎ ಮಾಹಿತಿ ಕೊಟ್ಟಿತ್ತು. ಹೀಗಾಗಿ ಇಷ್ಟು ಜನ ಬರುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಆಸನದ ವ್ಯವಸ್ಥೆ ಇರುವಷ್ಟು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಬರುವ ನಿರೀಕ್ಷೆ ಇತ್ತು ಎಂದರು. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ

    ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಕೊಡುತ್ತೇವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೂ ಸರ್ಕಾರ ಹಣ ಕೊಡುತ್ತದೆ. ಎಲ್ಲಾ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಒಟ್ಟು 47 ಜನ ಗಾಯಗೊಂಡಿದ್ದಾರೆ. ಕೆಲವರು ಚಿಕಿತ್ಸೆ ಪಡೆದು ಹೋಗಿದ್ದಾರೆ. ಒಟ್ಟಾರೆ 47 ಜನಕ್ಕೆ ಗಾಯ ಆಗಿದೆ. ಎಲ್ಲಾ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಡಾಕ್ಟರ್ ಹೇಳಿದ್ದಾರೆ. ಗಾಯಾಳುಗಳ ಸಾರಿಗೆ, ಊಟ ಎಲ್ಲಾ ವ್ಯವಸ್ಥೆ ಸರ್ಕಾರ ಮಾಡಲಿದೆ. ಅನಿರೀಕ್ಷಿತ ದುರಂತ ಇದು ಎಂದು ಸಿಎಂ ನೊಂದು ನುಡಿದರು.

    ಯಾರು ಕಾಲ್ತುಳಿತದಲ್ಲಿ ಸತ್ತಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸರ್ಕಾರ ಪ್ರಾರ್ಥನೆ ಮಾಡುತ್ತದೆ. ವಿದ್ಯಾರ್ಥಿಗಳು, ಯುವಕ-ಯುವತಿಯರು ಮೃತರಾಗಿದ್ದಾರೆ. ಅವರ ಪೋಷಕರಿಗೆ ಸಾವಿನ ದುಃಖ ಭರಿಸೋ ಶಕ್ತಿ ದೇವರು ಕೊಡಲಿ ಎಂದರಲ್ಲದೇ, ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಲಾಗಿದೆ ಎಂದರು. ಇದನ್ನೂ ಓದಿ: ಅನ್ ಕಂಟ್ರೋಲ್ಡ್ ಕ್ರೌಡ್ ಆಯ್ತು: ಕಾಲ್ತುಳಿತದ ಬಗ್ಗೆ ಡಿಕೆಶಿ ರಿಯಾಕ್ಷನ್

    ಯಾರು ತಪ್ಪಿತಸ್ಥರು ಇದ್ದಾರೆ ಅವರ ಮೇಲೆ ತನಿಖೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇದೊಂದು ಅನಿರೀಕ್ಷಿತ ಘಟನೆ. ಯಾರು ನಿರೀಕ್ಷೆ ಮಾಡಿರಲಿಲ್ಲ. ಭದ್ರತಾ ವೈಫಲ್ಯ ಇಲ್ಲ. ವಿರೋಧ ಪಕ್ಷದ ತರಹ ಯಾಕೆ ಮಾತಾಡ್ತೀರಾ? ಅನಿರೀಕ್ಷಿತವಾಗಿ ಜನ ಬಂದಿದ್ದರು. ಅದಕ್ಕೆ ಆಗಿದೆ. ಇದರಲ್ಲಿ ರಾಜಕೀಯ ಮಾತಾಡೊಲ್ಲ. ಬಿಜೆಪಿ ಅವರು ರಾಜಕೀಯ ಮಾಡ್ತಾರೆ. ನಾನು ಅದಕ್ಕೆ ಮಾತಾಡೊಲ್ಲ. ಅನಿರೀಕ್ಷಿತ ಘಟನೆ ಆಗಿರೋದ್ರಿಂದ ಡಿಸಿ ತನಿಖೆ ಮಾಡಿಸ್ತೀವಿ ಎಂದು ತಿಳಿಸಿದರು.

    ಘಟನೆಯನ್ನ ಸಮರ್ಥನೆ ಮಾಡಿಕೊಳ್ಳೊಲ್ಲ. ಇದರಲ್ಲಿ ರಾಜಕೀಯ ಮಾಡೊಲ್ಲ. ಡಿಸಿ ತನಿಖೆಗೆ 15 ದಿನ ಸಮಯ ಕೊಡ್ತೀವಿ. ತನಿಖೆಯಿಂದ ಏನ್ ಬರುತ್ತೋ ನೋಡೋಣ. ಗೇಟ್ ಚಿಕ್ಕದು ಇತ್ತು. ಅದನ್ನ ಮುರಿದು ಒಳಗೆ ಹೋಗೋ ಪ್ರಯತ್ನ ಮಾಡಿದ್ದಾರೆ. ಯಾರು ಇದನ್ನ ನಿರೀಕ್ಷೆ ಮಾಡಿರಲಿಲ್ಲ. ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಹೀಗಾಗಿ, ಈ ಘಟನೆ ಸಂಭವಿಸಿದೆ. ಖಚಿತವಾಗಿ ಏನು ನಡೆದೇ ಇಲ್ಲ ಅಂತ ನಾನು ಹೇಳಿಲ್ಲ. ಹೀಗಾಗಿ, ಡಿಸಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ ಎಂದರು.

    ಗ್ರ‍್ಯಾಂಡ್ ಸ್ಟೆಪ್ ಮೇಲೆ ಪೊಲೀಸರು ಕಾರ್ಯಕ್ರಮ ಮಾಡಬೇಡಿ ಅಂತ ಹೇಳಿಲ್ಲ. ಯಾವ ಅಧಿಕಾರಿಗಳು ಮಾಡಬೇಡಿ ಅಂತ ಹೇಳಿಲ್ಲ. KSCA ಕಾರ್ಯಕ್ರಮ ಆಯೋಜನೆ ಮಾಡಿತ್ತು. ನಾವು ವಿಧಾನಸೌಧದ ಮುಂದೆ ಮಾಡಿದ್ವಿ. ಅಲ್ಲೇನು ನಡೆದಿಲ್ಲ, ಸುಖಾಂತ್ಯವಾಗಿದೆ. ಕ್ರೀಡಾಂಗಣದಲ್ಲಿ ಇದು ಆಗಿರೋದು. ವಿಧಾನಸೌಧದ ಮುಂದೆ ಏನು ನಡೆದಿಲ್ಲ. ಕ್ರೀಡಾಂಗಣದ ಬಳಿ ಮಾತ್ರ ನಡೆದಿರೋದು. ಇಂತಹ ಘಟನೆ ಬೇಕಾದಷ್ಟು ಕಡೆ ನಡೆದಿದೆ. ಕುಂಭಮೇಳದಲ್ಲಿ ನಡೆದಿತ್ತು ಅಂತ ನಾನು ಹೇಳಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಿದ ಸಿಎಂ, ಡಿಸಿಎಂ

    ನಾವು ಸಮಾರಂಭ ಕರೆದಿರಲಿಲ್ಲ. ಕೆಎಸ್‌ಸಿಎ ಅವರು ಕೇಳಿದ್ರು ಪರ್ಮಿಷನ್ ಕೊಟ್ಟಿದ್ವಿ. ದುರಂತ ನಡೆಯಬಾರದಿತ್ತು ನಡೆದಿದೆ. ಸರ್ಕಾರ ಇದಕ್ಕೆ ದುಃಖ ಪಡ್ತೀವಿ. ಕ್ರೀಡಾಂಗಣದಲ್ಲಿ ಪೊಲೀಸ್ ಭದ್ರತೆ ಮಾತ್ರ ಕೊಡ್ತೀವಿ. ಅಲ್ಲಿ ಆಗಬಾರದಿತ್ತು ಆಗಿದೆ. ಅದಕ್ಕೆ ಡಿಸಿ ತನಿಖೆ ಆದೇಶ ಮಾಡಿದ್ದೇವೆ. ಯಾರೇ ತಪ್ಪು ಮಾಡಿದ್ರು ಕ್ರಮ ಆಗುತ್ತದೆ ಎಂದರು.

  • ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ  | ಇದು ಹೃದಯ ವಿದ್ರಾವಕ ಘಟನೆ – ಮೃತರಿಗೆ ಮೋದಿ ಸಂತಾಪ

    ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ | ಇದು ಹೃದಯ ವಿದ್ರಾವಕ ಘಟನೆ – ಮೃತರಿಗೆ ಮೋದಿ ಸಂತಾಪ

    ಬೆಂಗಳೂರು: ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಿಂದ ನಡೆದ ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಸಂತಾಪ ಸೂಚಿಸಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಬೆಂಗಳೂರಿನಲ್ಲಿ (Bengaluru) ನಡೆದಿರುವುದು ನಿಜಕ್ಕೂ ಹೃದಯವಿದ್ರಾವಕ ಘಟನೆ. ಈ ದುರಂತದಲ್ಲಿ ಹಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಕನಿಕರವಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಪ್ರಚಾರದ ಹುಚ್ಚಿಗೆ ಜನ ಬಲಿಯಾಗಿದ್ದಾರೆ: ವಿಜಯೇಂದ್ರ ಆಕ್ರೋಶ

    ಆರ್‌ಸಿಬಿ (RCB) ಗೆಲುವು ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಸಂಭವಿಸಿದ ಕಾಲ್ತುಳಿತಕ್ಕೆ (Stampede) 11 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

    ಗಾಯಾಳುಗಳಿಗೆ ಬೌರಿಂಗ್‌ ಆಸ್ಪತ್ರೆ, ವೈದೇಹಿ ಆಸ್ಪತ್ರೆ ಹಾಗೂ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣ