ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಿಂದ (Bengaluru Stampede) ಭಾರೀ ನೋವು ಅನುಭವಿಸಿದ್ದ ಆರ್‌ಸಿಬಿ (RCB) ಆಡಳಿತ ಮಂಡಳಿ ಈಗ ಅಭಿಮಾನಿಗಳಿಗಾಗಿ ಕೇರ್ ಸೆಂಟರ್ ತೆರೆಯಲು ಮುಂದಾಗಿದೆ.
ಈ ದುರ್ಘಟನೆಯಿಂದ ಸಾಕಷ್ಟು ಕಲಿತಿದ್ದೇವೆ. ಇದಕ್ಕಾಗಿಯೇ ನಾವು ಅಭಿಮಾನಿಗಳ ಜೊತೆ ನಿಲ್ಲಲು ನಿರ್ಧರಿಸಿದ್ದೇವೆ. ಇದೇ ಕಾರಣಕ್ಕೆ ಅಭಿಮಾನಿಗಳಿಗಾಗಿ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಈ ಮೂಲಕ ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯುತ್ತೇವೆ. ಈ ಬಗ್ಗೆ ಹೆಚ್ಚಿನ ವಿವರ ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದೆ.
ಏನಿದು ದುರ್ಘಟನೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಬಳಿಕ ಐಪಿಎಲ್ (IPL) ಚಾಂಪಿಯನ್ ಪಟ್ಟವನ್ನ ಮುಡಿಗೇರಿಸಿಕೊಂಡಿತ್ತು. ಆರ್‌ಸಿಬಿ ಫ್ಯಾನ್ಸ್ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಜೂ.4 ಸಂಭ್ರಮಾಚರಣೆಗೆ ಬಂದಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಸಾವಿಗೀಡಾಗಿದ್ದರು. ಉಚಿತ ಪ್ರವೇಶ ಘೋಷಣೆಯಿಂದ ಮಿತಿಮೀರಿದ ಜನ ಬಂದಿದ್ದರಿಂದ ಈ ಅವಘಡ ನಡೆದಿತ್ತು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಕುನ್ಹಾ ಆಯೋಗದ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ – ರಾಜ್ಯಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು: ಆರ್‌ಸಿಬಿ ಜಗತ್ತಿನಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. 18 ವರ್ಷಗಳ ಬಳಿಕ ಟ್ರೋಫಿ ಗೆದ್ದಾಗ, ನಮ್ಮ ಕರ್ನಾಟಕದ್ದೇ ತಂಡ ಗೆದ್ದಿದೆ ಅಂದುಕೊಂಡ್ರು. ಆದ್ರೆ ನನ್ನನ್ನ ಕಾರ್ಯಕ್ರಮಕ್ಕೆ ಕರೆದಾಗ ಓ ಬಿಡಪ್ಪ, ಆರ್‌ಸಿಬಿ ನಮ್ಮ ಟೀಮೇ ಅಲ್ಲ, ಅವರು ನಮ್ಮ ಕರ್ನಾಟಕದವರೇ ಅಲ್ಲ, ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತ ಹೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದರು. ಈ ಕುರಿತ ವಿಡಿಯೋ ಇಲ್ಲಿದೆ…
– ಸದನ ಸಮಿತಿ ರಚಿಸಿ, ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯ
– ಡಿಕೆಶಿ ವಿಸ್ಕಿ ಬಾವುಟ ಹಿಡಿದು ವೀಡಿಯೋ ಮಾಡಿದ್ದು ಸರಿಯಲ್ಲ; ಶಾಸಕ
ಬೆಂಗಳೂರು: ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ (Stampede) ದುರಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಎ1, ಎ2, ಎ3 ಆರೋಪಿಗಳಾಗಿದ್ದಾರೆ. ಆದ್ದರಿಂದ ಎಲ್ಲರೂ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.
ವಿಧಾನಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಸಂವೇದನೆ ಇದ್ದರೆ, ರಾಜ್ಯದ ಜನರ ಕ್ಷಮೆ ಕೇಳಬೇಕು. ಇದರ ಸಂಪೂರ್ಣ ಹೊಣೆಯನ್ನು ಮೂವರೂ ವಹಿಸಿಕೊಳ್ಳಬೇಕು. ಜೊತೆಗೆ ರಾಜೀನಾಮೆ ನೀಡಬೇಕು ಹಾಗೂ ಸಿಬಿಐ ತನಿಖೆ (CBI Investigation) ನಡೆಯಬೇಕು. ಇನ್ನು ಮುಂದಾದರೂ ಇಂತಹ ಘಟನೆ ನಡೆಯದೇ ಇರಲು ನಿಯಮ ರೂಪಿಸಬೇಕು ಹಾಗೂ ಸದನ ಸಮಿತಿ ನೇಮಕ ಮಾಡಬೇಕು. ನೋವಿನಲ್ಲಿ ಕೈ ತೊಳೆಯುತ್ತಿರುವ ತಂದೆ ತಾಯಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಚಿವ ಸಂಪುಟದಿಂದ ರಾಜಣ್ಣ ವಜಾ – ಪರಿಷತ್‌ನಲ್ಲಿ ಗದ್ದಲ ಗಲಾಟೆ
ಡಿಕೆಶಿಗೆ ಎಲ್ಲವೂ ಗೊತ್ತಿತ್ತು
ಜೂನ್ 3 ರಂದು ಆರ್‌ಸಿಬಿ ಕ್ರಿಕೆಟ್ ತಂಡ ಗೆದ್ದ ನಂತರ ಇಡೀ ರಾಜ್ಯದಲ್ಲಿ ಸಂಭ್ರಮಾಚರಣೆ ನಡೆದಿತ್ತು. ಹೊಸ ವರ್ಷದ ಆಚರಣೆಗಿಂತಲೂ ಹೆಚ್ಚಿನ ಆಚರಣೆ ಆಗ ನಡೆದಿತ್ತು. ಅಭಿಮಾನಿಗಳು (RCB Fans) ಬೀದಿಗಿಳಿದು ಕುಣಿದಾಡಿದ್ದರು. ಪೊಲೀಸರು ರಸ್ತೆಗಳಲ್ಲಿ ನಿಂತು ಜನದಟ್ಟಣೆ ನಿರ್ವಹಣೆ ಮಾಡಿದ್ದರು. ಮಧ್ಯರಾತ್ರಿ ಕಳೆದು ಮುಂಜಾನವೆರೆಗೆ ಸಂಭ್ರಮಾಚರಣೆ ನಡೆದು, ಪೊಲೀಸರಿಗೆ ಬಹಳ ಸುಸ್ತಾಗಿತ್ತು. ಇವೆಲ್ಲವೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಗೊತ್ತಿತ್ತು. ಈ ಸಂಭ್ರಮವನ್ನು ಕ್ರೆಡಿಟ್ ಆಗಿ ಸರ್ಕಾರಕ್ಕೆ ವರ್ಗಾವಣೆ ಮಾಡಿಕೊಳ್ಳಲು ʻಕ್ರೆಡಿಟ್ ವಾರ್ʼ ನಡೆಯಿತು ಎಂದರು. ಇದನ್ನೂ ಓದಿ: ಕೆ.ಎನ್.ರಾಜಣ್ಣರನ್ನ ಸಂಪುಟದಿಂದ ತೆಗೆದದ್ದು ದುರದೃಷ್ಟಕರ, ಹೀಗೆ ಆಗಬಾರದಿತ್ತು: ಬಿ.ಕೆ.ಹರಿಪ್ರಸಾದ್
ಸಂಭ್ರಮಾಚರಣೆ ಸಂಬಂಧ ಕ್ರಿಕೆಟ್ ಅಸೋಸಿಯೇಶನ್‌ನಿಂದ ಪೊಲೀಸರಿಗೆ ಅನುಮತಿ ಕೇಳಿ ಪೊಲೀಸ್ ಆಯುಕ್ತರು, ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಪತ್ರ ಬರೆಯಲಾಗಿದೆ. ನಂತರ ಆಡಳಿತ ಮತ್ತು ಸಿಬ್ಬಂದಿ ತರಬೇತಿ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿ ಯಾವುದಾದರೂ ಕಾರ್ಯಕ್ರಮಕ್ಕೆ ಬರುತ್ತಾರೆ ಅಂದ್ರೆ ಅದಕ್ಕೆ ಬಹಳ ಸಿದ್ಧತೆ ಮಾಡುತ್ತಾರೆ. ಆದರೆ ಕೇವಲ 24 ಗಂಟೆಯಲ್ಲೇ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ. ಇದೇ ವೇಳೆ ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಪರೇಡ್ ಬಗ್ಗೆ ಹಾಗೂ ವಿಧಾನಸೌಧದಲ್ಲಿನ ಆಚರಣೆ ಬಗ್ಗೆ ಮಾಹಿತಿ ಹಾಕಲಾಯಿತು. ಜೊತೆಗೆ ಸಿಎಂ ಕಚೇರಿಯಿಂದಲೇ ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಲಾಗಿದೆ. ಇದು ಸರ್ಕಾರಿ ಆಚರಣೆಯಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಸರ್ಕಾರವೇ ತಮ್ಮನ್ನು ಆಹ್ವಾನಿಸಿದೆ ಎಂದು ಆರ್‌ಸಿಬಿ ಮತ್ತು ಕ್ರಿಕೆಟ್ ಅಸೋಸಿಯೇಶನ್ ಹೇಳಿದೆ. ಇದು ಕೋರ್ಟ್‌ಗೆ ನೀಡಿರುವ ಅಫಿಡವಿಟ್‌ನಲ್ಲೂ ಇದೆ ಎಂದು ವಿವರಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಪಾತ್ರ
ಡಿಸಿಎಂ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಕ್ರಿಕೆಟ್ ತಂಡವನ್ನು ಅಭಿನಂದಿಸುತ್ತೇನೆ, ತಂಡದವರು ಆಗಮಿಸಲಿದ್ದು, ಅವರಿಗೆ ಗೌರವಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ, ಅಂತಿಮವಾಗಿ ಗೃಹ ಸಚಿವರು, ಪೊಲೀಸ್ ಅಧಿಕಾರಿಗಳು ಕುಳಿತು ಚರ್ಚಿಸುತ್ತೇವೆ ಎಂದು ಹೇಳುತ್ತಾರೆ. ಇನ್ನೂ ಮುಖ್ಯಮಂತ್ರಿಗಳು ಸಭೆ ನಡೆಸದೆಯೇ ಉಪಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ನಂತರ ಮತ್ತೆ ಮಾತನಾಡಿದ ಅವರು, ಜನರು ನೇರವಾಗಿ ವಿಧಾನಸೌಧಕ್ಕೆ ಬನ್ನಿ, ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬನ್ನಿ ಎಂದು ಆಹ್ವಾನ ನೀಡುತ್ತಾರೆ. ಜೊತೆಗೆ ವಿಕ್ಟರಿ ಪರೇಡ್ ಬಗ್ಗೆ, ಟ್ರಾಫಿಕ್ ನಿಯಂತ್ರಣದ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲದೆ ಹುಚ್ಚು ಅಭಿಮಾನಿಗಳ ಪರ ವಹಿಸಿಕೊಂಡು ಮಾತಾಡುತ್ತಾರೆ. ಇವೆಲ್ಲವುಗಳಿಂದ ಈ ಆಚರಣೆಯಲ್ಲಿ ಸರ್ಕಾರದ ಅಧಿಕೃತ ಪಾತ್ರ ಇರುವುದು ಖಚಿತವಾಗುತ್ತದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಪಾತ್ರ
ಕಾವೇರಿ ನಿವಾಸದಲ್ಲಿ ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹಾಗೂ ಗೋವಿಂದರಾಜು ಸಭೆ ನಡೆಸಿದ್ದರು. ಅಲ್ಲಿಗೆ ಬಂದ ಸಿಎಂ ಸಿದ್ದರಾಮಯ್ಯ ವಿಕ್ಟರಿ ಪರೇಡ್ ಬೇಡ, ಉಳಿದ ಕಾರ್ಯಕ್ರಮ ಮಾಡಿ ಎಂದು ಸೂಚನೆ ನೀಡುತ್ತಾರೆ. ಅದೇ ವೇಳೆ ವಿಧಾನಸೌಧ ಮುಂಭಾಗ ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ರಾಜ್ಯಪಾಲರನ್ನು ಆಹ್ವಾನಿಸುತ್ತಾರೆ. ಆದರೆ ಕಾಲ್ತುಳಿತ ದುರಂತ ನಡೆದ ಬಳಿಕ ನಾನು ರಾಜ್ಯಪಾಲರನ್ನು ಆಹ್ವಾನಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಬಳಿಕ ನಾನೇ ಆಹ್ವಾನಿಸಿದೆ ಎಂದು ಹೇಳುತ್ತಾರೆ ಎಂದು ಹೇಳಿದರು.
ಡಿಪಿಎಆರ್ ಮುಖ್ಯಮಂತ್ರಿಗಳ ಸೂಚನೆಯಂತೆ ಕೆಲಸ ಮಾಡುತ್ತದೆ. ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ವಿಧಾನಸೌಧಕ್ಕೆ ಬಂದು ಮಾಧ್ಯಮಗಳೊಂದಿಗೆ ಮಾತಾಡಿ ವಿಧಾನಸೌಧದಿಂದಲೇ ಸಂಭ್ರಮಾಚರಣೆ ಆರಂಭವಾಗುತ್ತದೆ, ಮಾನ್ಯ ಮುಖ್ಯಮಂತ್ರಿಯವರ ಆದೇಶದಂತೆ ಅನುಮತಿ ನೀಡಿದ್ದೇವೆ, ಸಂಜೆ 4 ಗಂಟೆಗೆ ಕ್ರಿಕೆಟ್ ತಂಡ ಇಲ್ಲಿಗೆ ಬರುತ್ತದೆ, ಆಗ ಸನ್ಮಾನ ಮಾಡುತ್ತೇವೆ ಎಂದು ತಿಳಿಸುತ್ತಾರೆ. ಜನರನ್ನು ಹೇಗೆ ನಿಯಂತ್ರಿಸುತ್ತೀರಿ ಎಂದು ಮಾಧ್ಯಮದವರು ಕೇಳಿದಾಗ, ವಿಧಾನಸೌಧದ ಮೆಟ್ಟಿಲುಗಳ ಬಳಿ ಜನರು ಬರಬಾರದು. ಇಲ್ಲಿಂದ ಕ್ರಿಕೆಟ್ ತಂಡ ಕ್ರೀಡಾಂಗಣಕ್ಕೆ ಹೋಗುತ್ತದೆ. ಕ್ರೀಡಾಂಗಣಕ್ಕೆ ಜನರು ನೇರವಾಗಿ ಹೋಗಬೇಕು, ವಿಧಾನಸೌಧದ ಬಳಿ ಬರಬಾರದು ಎಂದು ಕಾರ್ಯದರ್ಶಿ ಮನವಿ ಮಾಡುತ್ತಾರೆ. ವಿಧಾನಸೌಧದ ಸಿಬ್ಬಂದಿಗೆ ರಜೆ ನೀಡಬೇಕು, ಸಿಸಿಟಿವಿ ಅಳವಡಿಸಬೇಕೆಂದು ಸೂಚನೆ ನೀಡಲಾಗುತ್ತದೆ. ಇಷ್ಟೆಲ್ಲ ಮಾಡಲು ಸಮಯವೇ ಇರುವುದಿಲ್ಲ. ಡಿಪಿಎಆರ್‌ಗೆ ವಿಧಾನಸೌಧದ ಭದ್ರತಾ ಪೊಲೀಸರು ಸಲಹೆಗಳನ್ನು ನೀಡುತ್ತಾರೆ. ಕಾನೂನು ಸುವ್ಯವಸ್ಥೆಗೆ ಸಮಯವಿಲ್ಲ ಎಂದು ಈ ಸಲಹೆಯಲ್ಲಿ ತಿಳಿಸಲಾಗಿದೆ. ಇದನ್ನು ಸರ್ಕಾರ ಮುಚ್ಚಿಹಾಕಿದೆ ಎಂದರು.
ಡಿಕೆಶಿ ವಿಸ್ಕಿ ಬಾವುಟ ಹಿಡಿದು ವೀಡಿಯೋ ಮಾಡಿದ್ದರು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಟ್ಟಣೆ ನಿಯಂತ್ರಿಸುವ ಬಗ್ಗೆ ಟ್ರಾಫಿಕ್ ಡಿಸಿಪಿಯಿಂದ ಒಂದು ಆದೇಶವನ್ನು ನೀಡಿ, ಪಾಸುಗಳು ಇದ್ದರೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಾವಕಾಶ ನೀಡಬೇಕೆಂದು ಸೂಚಿಸಲಾಗಿದೆ. ಇದು ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುತ್ತದೆ. ಇದಕ್ಕೆ ಮುನ್ನವೇ ಡಿಸಿಎಂ ಡಿ.ಕೆ.ಶಿವಕುಮಾರ್ ವಿಮಾನ ನಿಲ್ದಾಣಕ್ಕೆ ಹೋಗಿ ಆರ್‌ಸಿಬಿ ಆಟಗಾರರಿಗೆ ಶುಭಾಶಯ ಕೋರಿದ್ದರು. ನಂತರ ಕಾರ್‌ನಲ್ಲಿ ಕುಳಿತು ರಾಯಲ್ ಚಾಲೆಂಜರ್ಸ್ ವಿಸ್ಕಿ ಬಾವುಟ ಹಿಡಿದುಕೊಂಡು ವೀಡಿಯೋ ಮಾಡಿದ್ದರು. ಇದು ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ಘನತೆಗೆ ಶೋಭೆ ತರುವುದಿಲ್ಲ. ಉಪಮುಖ್ಯಮಂತ್ರಿಗೆ ಶಿಷ್ಟಾಚಾರ ಇರುವಾಗ ಒಂದು ಮದ್ಯದ ದೊರೆಯ ತಂಡದ ಬಾವುಟ ಹಿಡಿಯುವುದು ಸರಿಯಲ್ಲ ಎಂದರು.
ವೇದಿಕೆ ಕಾರ್ಯಕ್ರಮದಲ್ಲಿ ಅಧ್ವಾನ
ವೇದಿಕೆಯ ಮೇಲೆ 20-25 ಗಣ್ಯರಿರಬೇಕೆಂದು ಡಿಪಿಎಆರ್ ಆದೇಶ ನೀಡಿದೆ. ಆದರೆ ಸಂತೆಯಂತೆ ಸುಮಾರು 250 ಜನರು ವೇದಿಕೆಯ ಮೇಲಿದ್ದರು. ಇದಕ್ಕೆ ಅನುಮತಿ ನೀಡಿದವರು ಯಾರು? ವಿಧಾನಸೌಧ ಪಾರಂಪರಿಕ ಕಟ್ಟಡ ಎಂಬ ಘನತೆ ಹಾಗೂ ಶಿಷ್ಟಾಚಾರಗಳು ಇದರಿಂದಾಗಿ ನಾಶವಾಗಿದೆ. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಅರ್ಧ ಗಂಟೆ ಕಾದರೂ ಕಾರ್ಯಕ್ರಮ ಆರಂಭವಾಗಿರಲಿಲ್ಲ. ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಎಲ್ಲ ಕಡೆ, ಕಾಂಪೌಂಡ್ ಮೇಲೆ ಜನರು ಕುಳಿತು ಸೆಲ್ಫಿ ತೆಗೆಯುತ್ತಿದ್ದರು. ಇದನ್ನು ಶಿಸ್ತಾದ ಕಾರ್ಯಕ್ರಮ ಎಂದು ಕರೆಯಲು ಸಾಧ್ಯವೇ? ಸಚಿವ ಜಮೀರ್ ಅಹ್ಮದ್ ಮಗನನ್ನು ಕರೆದುಕೊಂಡು ಬಂದು, ಕುರ್ಚಿಯಲ್ಲಿ ಕೂರಿಸಿದ್ದರು. ಮುಖ್ಯಮಂತ್ರಿಯವರ ಮೊಮ್ಮಗ ಎಲ್ಲೋ ನಿಂತಿದ್ದರು. ಈ ರೀತಿ ಇಡೀ ಕಾರ್ಯಕ್ರಮ ಅಧ್ವಾನವಾಗಿ ನಡೆಯಿತು. ಸಚಿವರ ಕುಟುಂಬದವರು ಸೆಲ್ಫಿ ಫೋಟೋ ತೆಗೆದುಕೊಳ್ಳುವಾಗ, ಅಮಾಯಕ ಯುವಜನರು ಜೀವ ಕಳೆದುಕೊಂಡು ಫೋಟೊ ಆಗಿಬಿಟ್ಟರು ಎಂದರು.
ವಿಧಾನಸೌಧದಲ್ಲಿ ಮಧ್ಯಾಹ್ನ 3.20 ಕ್ಕೆ, ಇನ್ನೂ ಕಾರ್ಯಕ್ರಮ ಆರಂಭವಾಗದ ವೇಳೆಗೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ 70-80 ಸಾವಿರ ಜನರು ಸೇರಿದ್ದರು. ಸ್ಟೇಡಿಯಂನ ಗೇಟ್ ತೆರೆದಿದ್ದರೆ, ಜನರು ಅಲ್ಲಿ ಹೋಗಿ ಕೂತು ಜನದಟ್ಟಣೆ ಕಡಿಮೆಯಾಗುತ್ತಿತ್ತು. ಅಂತಹ ಸಮಯದಲ್ಲಿ ಲಾಠಿ ಚಾರ್ಜ್ ಮಾಡಲು ಆದೇಶ ಕೊಟ್ಟವರು ಯಾರು? ಕ್ರೀಡಾಂಗಣದಲ್ಲಿ 70-80 ಅಂತಾರಾಷ್ಟ್ರೀಯ ಪಂದ್ಯಾ ಆದಾಗಲೂ ಕ್ರೀಡಾಂಗಣದಿಂದ ಅನುಮತಿ ಪಡೆದಿಲ್ಲ. ಕ್ರಿಕೆಟ್ ಅಸೋಸಿಯೇಶನ್‌ನಿಂದ ಕೀಯನ್ನು ಪೊಲೀಸರಿಗೆ ನೀಡಲಾಗಿತ್ತು. ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ವಾಕಿಟಾಕಿಯಲ್ಲಿ ಮಾತನಾಡುತ್ತಾ, ಯಾರನ್ನೂ ಒಳಗೆ ಬಿಡಬೇಡಿ ಎಂದು ಹೇಳಿದ್ದಾರೆ. ಆಗ ವಿಧಿ ಇಲ್ಲದೆ ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ, ಎಲ್ಲರೂ ಎದ್ದು ಬಿದ್ದು ಓಡಿದರು. ಗೇಟ್ ತೆರೆದಿದ್ದರೆ ದುರ್ಘಟನೆ ನಡೆಯುತ್ತಿರಲಿಲ್ಲ ಎಂದರು.
ಸಾವಿನ ಸಂಭ್ರಮದ ಕಾರ್ಯಕ್ರಮಕ್ಕೆ ಡಿಕೆಶಿ ಹೋಗಿದ್ದರು
3.34ಕ್ಕೆ, ಇನ್ನೂ ವಿಧಾನಸೌಧದಲ್ಲಿ ಕಾರ್ಯಕ್ರಮ ಆರಂಭವಾಗದ ವೇಳೆಗಾಗಲೇ ಬಿಡದಿಯ ಎಂಜಿನಿಯರ್ ಪ್ರಜ್ವಲ್ ಸತ್ತುಹೋಗಿದ್ದರು. 3.35ಕ್ಕೆ ಕೆಲವರಿಗೆ ಉಸಿರು ನಿಂತುಹೋಗುವ ಸನ್ನಿವೇಶವಿದೆ ಎಂಬ ಸಂದೇಶ ವಾಕಿಟಾಕಿಯಲ್ಲಿ ಹರಿದಾಡಿತ್ತು. ಕೆ.ಆರ್.ಪೇಟೆಯ ಸಿವಿಲ್ ಎಂಜಿನಿಯರ್ ಪೂರ್ಣಚಂದ್ರ ಕಾಲ್ತುಳಿತಕ್ಕೆ ಸಿಕ್ಕಿ ಸತ್ತುಹೋದರು. 4.36ಕ್ಕೆ ಗೇಟ್-6ರ ಬಳಿ 6 ಮಂದಿ ಬಿದ್ದುಹೋಗಿದ್ದು, ಎತ್ತಿಕೊಂಡು ಹೋಗಲು ಯಾರೂ ಇಲ್ಲ ಎಂದು ವಾಕಿಟಾಕಿಯಲ್ಲಿ ಸಂದೇಶ ಬಂತು. ನಂತರ ವಿದ್ಯಾರ್ಥಿ ಮನೋಜ್ ಕುಮಾರ್, 13 ವರ್ಷದ ದಿವ್ಯಾಂಶಿ ಸತ್ತುಹೋಗಿದ್ದರು. ಬಳಿಕ ಅಕ್ಷತಾ ಪೈ, ಚಿನ್ಮಯಿ ಶೆಟ್ಟಿ, ಭೂಮಿಕ್ ಸತ್ತುಹೋದರು. ವೇದಿಕೆಯಲ್ಲಿ ಸನ್ಮಾನ ನಡೆಯುತ್ತಿದ್ದಂತೆ ಕೋಲಾರದ ಸಹನಾ ಸತ್ತುಹೋಗಿದ್ದರು. ಇಷ್ಟಾದರೂ ಸರಿಯಾದ ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ಸರಿಯಾಗಿ ವೈದ್ಯರು, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದರೆ ಇಷ್ಟೆಲ್ಲ ಅನಾಹುತವಾಗುತ್ತಿರಲಿಲ್ಲ. ಇಷ್ಟೆಲ್ಲ ಸಾವುಗಳಾದ ನಂತರವೂ ಆರ್‌ಸಿಬಿ ತಂಡ ಕ್ರೀಡಾಂಗಣಕ್ಕೆ ಹೋಗಿ ಸಂಭ್ರಮಾಚರಣೆ ಮಾಡುತ್ತದೆ. ಈ ಕಾರ್ಯಕ್ರಮಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೋಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾ.ಡಿಕುನ್ಹಾ ಆಯೋಗದ ಪ್ರಕಾರ, 515 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ 194 ಮಂದಿ ಮಾತ್ರ ಬಂದೋಬಸ್ತ್ ರಿಜಿಸ್ಟರ್‌ನಲ್ಲಿ ಸಹಿ ಹಾಕಿದ್ದರು. ಹಿರಿಯ ಅಧಿಕಾರಿಗಳು ಸಾವಿನ ಬಗ್ಗೆ ಸಚಿವರ ಗಮನಕ್ಕೆ ತಂದರೂ ಕಾರ್ಯಕ್ರಮ ಸ್ಥಗಿತಗೊಳ್ಳುವುದಿಲ್ಲ. ಆರ್‌ಸಿಬಿ ತಂಡದವರು ಕಪ್‌ನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ತಂದುಕೊಡುತ್ತಾರೆ. ಕಪ್‌ಗೆ ಮುತ್ತಿಕ್ಕುವುದು, ಕಪ್ ಎತ್ತಿ ಹಿಡಿದು ಪ್ರದರ್ಶನ ಮಾಡುವುದು ಬೇಕಿತ್ತಾ? ಎಂದು ಪ್ರಶ್ನಿಸಿದರು.
ಸರ್ಕಾರದ ವೈಫಲ್ಯ
ಪಂದ್ಯ ಮುಗಿದು 15 ಗಂಟೆಯಾದ ಕೂಡಲೇ ಕಾರ್ಯಕ್ರಮ ಮಾಡಿದ್ದು ಯಾಕೆ? ಸುಸ್ತಾಗಿ ಹೈರಾಣಾಗಿದ್ದ ಪೊಲೀಸರಿಗೆ ವಿಶ್ರಾಂತಿಗೆ ಅವಕಾಶ ಕೊಡದೆ ಮತ್ತೆ ಕೆಲಸಕ್ಕೆ ನಿಯೋಜಿಸಿದ್ದು ಏಕೆ? ಇಷ್ಟೊಂದು ಅಭಿಮಾನಿಗಳು ಬರುತ್ತಾರೆಂದು ಗುಪ್ತಚರ ದಳದವರಿಗೆ ಗೊತ್ತಿರಲಿಲ್ಲವೇ? ಗುಪ್ತಚರ ದಳದವರು ಎಷ್ಟು ಜನರು ಬರುತ್ತಾರೆಂದು ಮೊದಲೇ ತಿಳಿಸಬೇಕಿತ್ತು. ಆದ್ದರಿಂದ ಇದು ಮುಖ್ಯಮಂತ್ರಿ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಗುಪ್ತಚರ ಸಂಸ್ಥೆಯ ಸಂಪೂರ್ಣ ವೈಫಲ್ಯವಾಗಿದೆ. ಇಷ್ಟೆಲ್ಲ ಅನಾಹುತವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಜೆ 5.45 ಗೆ ದುರಂತದ ಬಗ್ಗೆ ತಿಳಿಯುತ್ತದೆ. ಮುಖ್ಯಮಂತ್ರಿಗೆ ಎರಡು ಗಂಟೆಗಳ ನಂತರ ಈ ಮಾಹಿತಿ ಬರುತ್ತದೆ ಎಂಬುದೇ ಸರ್ಕಾರದ ದೊಡ್ಡ ವೈಫಲ್ಯ ಹಾಗೂ ಲೋಪ. ಈ ಲೋಪದಿಂದಾಗಿ 11 ಮಕ್ಕಳನ್ನು ಕಳೆದುಕೊಂಡಿದ್ದೇವೆ ಎಂದರು.
ಪೊಲೀಸ್ ಕಾಯ್ದೆ ಪ್ರಕಾರ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು. ಆದರೆ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಕೋರ್ಟ್‌ಗೆ ಆರ್‌ಸಿಬಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, ನಾವು ಸಂಭ್ರಮಾಚರಣೆ ಮಾಡಲು ಕೇಳಿಲ್ಲ, ಭದ್ರತೆ ಕೊಡುವುದು ಸರ್ಕಾರದ ಕೆಲಸ ಎಂದು ಹೇಳಿದೆ. ಇಷ್ಟೊಂದು ಸಾವಿಗೆ ಹೊಣೆ ಯಾರು? ಎಂದು ಪ್ರಶ್ನೆ ಮಾಡಿದರು.
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ವಿಕಾಸ್ ಕುಮಾರ್ ವಿಕಾಸ್ ಮೇಲಿನ ಅಮಾನತನ್ನು ಸರ್ಕಾರ ವಾಪಸ್ ಪಡೆದಿದೆ.
ವಿಕಾಸ್ ಕುಮಾರ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಐಜಿಪಿ ಆಗಿ ನಿಯೋಜನೆ ಮಾಡಿದೆ. ಅಲ್ಲದೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ್‌ಗೆ ಎಡಿಜಿಪಿ ಕಾರಾಗೃಹ, ಕೇಂದ್ರ ವಿಭಾಗ ಡಿಸಿಪಿಯಾಗಿದ್ದ ಶೇಖರ್‌ರಿಗೆ ಗುಪ್ತಚರ ಇಲಾಖೆ ಎಸ್ಪಿಯಾಗಿ ಸ್ಥಳ ನಿಯೋಜನೆ ಮಾಡಲಾಗಿದೆ.
ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತವಾಗಿ 11 ಜನ ಸಾವನ್ನಪ್ಪಿದ್ದರು.
ಉಡುಪಿ: ಬೆಂಗಳೂರು ಕಾಲ್ತುಳಿತ (Bengaluru Stampede) ಪ್ರಕರಣಕ್ಕೆ ಪೊಲೀಸ್ ಇಲಾಖೆಯ ಒಳಗಿನ ರಾಜಕೀಯ, ಕೆಟ್ಟ ಸ್ಪರ್ಧೆ ಕಾರಣ. ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಬಲಿಪಶು ಮಾಡಲಾಗಿದೆ ಎಂದು ಮಾಜಿ DySP ಅನುಪಮಾ ಶೆಣೈ (Anupama Shenoy) ಗಂಭೀರ ಆರೋಪ ಮಾಡಿದರು.
ಉಡುಪಿಯಲ್ಲಿ ಮಾತನಾಡಿದ ಅನುಪಮಾ ಶೆಣೈ, ಹೈಕೋರ್ಟ್‌ಗೆ ಸಲ್ಲಿಸಿದ ಸರ್ಕಾರದ ವರದಿಯನ್ನು ಪ್ರಶ್ನಿಸಿದ್ದಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ಸಹಾಯ ಪಡೆದು ಮಾಡಿದ ಕೃತ್ಯ ಇದು. ದಯಾನಂದ ಅವರನ್ನ ಡಿಜೆಪಿ ಹುದ್ದೆಯಿಂದ ತಪ್ಪಿಸಲು ಹುನ್ನಾರ ಮಾಡಲಾಗಿದೆ. ವಿರಾಟ್ ಕೊಹ್ಲಿಯನ್ನು ಆರೋಪಿ ಮಾಡುವ ಮೂಲಕ ಸಿದ್ದರಾಮಯ್ಯ ಬಚಾವಾಗಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಹಣಕಾಸು ಸಚಿವರಾದಾಗ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿರ‍್ತಾಳೆ: ಮಲ್ಲಿಕಾರ್ಜುನ ಖರ್ಗೆ
ಒಳಸಂಚುಗಳನ್ನು ರೂಪಿಸಿ ಡಾ.ಸಲೀಂ ಅವರನ್ನು ನೇಮಿಸಲಾಗಿದೆ. ಸೋಷಿಯಲ್ ಮೀಡಿಯಾ ವ್ಹೀವ್ಸ್‌ಗೂ ಗಲಾಟೆಗೂ ಏನು ಸಂಬಂಧ? ಒಂದೇ ದಿನದಲ್ಲಿ ಜನ ವಿಮಾನ ಹತ್ತಿ ಬಂದು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಐಪಿಎಲ್ 2025ರ ಟ್ರೋಫಿಯನ್ನು ಗೆದ್ದ ಮರುದಿನವೇ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಆಯೋಜಿಸಲಾಗಿತ್ತು. ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರು ಬೆಂಗಳೂರಿಗೆ ಆಮಿಸಿದ್ದರು. ಅವರನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಸಂಭವಿಸಿತು. ಕಾಲ್ತುಳಿತಕ್ಕೆ 11 ಅಭಿಮಾನಿಗಳು ಬಲಿಯಾಗಿದ್ದರು. ಇದನ್ನೂ ಓದಿ: ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಬಾಂಬ್ ಬೆದರಿಕೆ
ಬೆಂಗಳೂರು: ಕಾಲ್ತುಳಿತವಾಗಿ ಜನರು ಸಾಯುವುದು ಗೊತ್ತಿದ್ದರೂ ಮುಖ್ಯಮಂತ್ರಿಗಳು ಹೋಟೆಲ್ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದರು ಎಂದು ಮಾಜಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ್ ಟೀಕಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದುರಾಡಳಿತದ ಸಾಧನೆ ಮಾಡಿದೆ. ಜನರನ್ನು ನಂಬಿಸಿ ಗರಿಷ್ಠ ಬಹುಮತ ಪಡೆದು ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷ ಜನರಿಗೆ ದ್ರೋಹ, ಅನ್ಯಾಯ, ಭ್ರಷ್ಟಾಚಾರವನ್ನೇ ಮಾಡುತ್ತ ಬಂದಿದೆ. ಪ್ರಾರಂಭದ ದಿನದಿಂದ ನೂರಾರು ಹಗರಣ ಮಾಡಿದೆ. ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿರಿಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲೆಗೆ ಹೊಡೆದಂತೆ ಸುಳ್ಳು ಹೇಳಲು ಸಮಾವೇಶ ಮಾಡುತ್ತಿದ್ದಾರೆ. ಇವರಿಗೆ ಏನಾದರೂ ಆತ್ಮಸಾಕ್ಷಿ ಬೇಕಲ್ಲವೇ? ಸುಳ್ಳನ್ನೇ ಸತ್ಯವೆಂದು ಹೇಳಿಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ನಿವೇಶನ ವಾಪಸ್ ಮಾಡಿದ ಮುಡಾ ಹಗರಣ, ಹಣ ಅವ್ಯವಹಾರ ಆದುದನ್ನು ಸ್ವತಃ ಸಿಎಂ ಒಪ್ಪಿಕೊಂಡ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಏನು ಹೇಳುತ್ತಾರೆ? ಅಧಿಕಾರಿಗಳ ಆತ್ಮಹತ್ಯೆ ಬಗ್ಗೆ ಹೇಳುತ್ತಾರಾ? ಪ್ರತಿಯೊಂದರಲ್ಲೂ ಕಮಿಷನ್, ಹಗಲುದರೋಡೆ ವಿಚಾರ ತಿಳಿಸುತ್ತಾರಾ ಎಂದು ಪ್ರಶ್ನಿಸಿದರು.
ಕೆಲವೆಡೆ ಕಮಿಷನ್ ಶೇ.100ಕ್ಕೆ ಏರಿದೆ. ಇನ್ನೂ ಕೆಲವು ಕಡೆ ಶೇ.80, ಶೇ.60 ಭ್ರಷ್ಟಾಚಾರ ಇವರದು. ದುಡ್ಡಿಲ್ಲದೇ ವರ್ಗಾವಣೆ ಇಲ್ಲ. ಈ ಸಂಬಂಧ ಎಷ್ಟೋ ಜನರು ದಲಿತ ವರ್ಗಕ್ಕೆ ಸೇರಿದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೊಲೆಗಡುಕರ, ಸಾವಿನ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡರು.
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತವಾಗಿ 11 ಜನರ ಸಾವು ಕುರಿತು ಮಾತನಾಡಿದ ಅವರು, ಕಾನೂನು-ಸುವ್ಯವಸ್ಥೆ ಕಾಪಾಡುವುದು ಯಾರ ಜವಾಬ್ದಾರಿ? ಅನುಮತಿ ಇಲ್ಲದೇ ಇದ್ದಲ್ಲಿ ಡಿಸಿಎಂ ಸ್ಟೇಡಿಯಂಗೆ ಹೋದದ್ದು ಯಾಕೆ? ಜನರು ಸಾಯುತ್ತಿದ್ದರೂ ಅವರು ಕಪ್‍ಗೆ ಮುತ್ತು ಕೊಡುತ್ತ ಇದ್ದರಲ್ಲವೇ? ಜನರು ಸಾಯುವುದು ಗೊತ್ತಿದ್ದರೂ ಮುಖ್ಯಮಂತ್ರಿಗಳು ಹೋಟೆಲ್ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದರು ಎಂದು ಆಕ್ಷೇಪಿಸಿದರು.
ಕಾರ್ಯಕ್ರಮಕ್ಕೆ ಅನುಮತಿ ಇಲ್ಲದಿದ್ದರೂ ವಿಧಾನಸೌಧದ ಬಳಿ ವಿಜಯೋತ್ಸವ ನಡೆಸಿದ್ದೇಕೆ? ಈ ಸರ್ಕಾರವನ್ನೂ ಆರ್‌ಸಿಬಿ, ಕೆಸಿಎ, ಡಿಎನ್‍ಎ ನಡೆಸುತ್ತಿದೆಯೇ? ಇವರಿಗೆ ನಾಚಿಕೆ ಆಗಬೇಕು. ಜನರ ಜೀವ ತೆಗೆಯುವುದೇ ಇವರ ಸಾಧನೆ. ಇವರು ಅಧಿಕಾರದಲ್ಲಿ ಇರುವ ಯಮದೂತರು. ವರದಿ ಕೊಟ್ಟಿರುವುದು ನಿಜಕ್ಕೂ ಖಂಡನೀಯ. ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಬೇಡ ಎಂಬ ಸ್ಪಷ್ಟ ನಿಲುವು ತೆಗೆದುಕೊಂಡಿದ್ದರು. ವಿರಾಟ್ ಕೊಯ್ಲಿ ಮೇಲೆ ಜವಾಬ್ದಾರಿ ಹೊರಿಸಿದ್ದಾರೆ. ಈಗ ಇಂಡಸ್ತ್ರಿಗಳು ಓಡಿ ಹೋಗುತ್ತಿವೆ. ಇನ್ನು ಯಾವುದೇ ಕ್ರೀಡೆಗಳು ನಡೆಯದಂತೆ ಆಗಲಿದೆ ಎಂದು ತಿಳಿಸಿದರು.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಉಪಸ್ಥಿತರಿದ್ದರು.
ಸಿಎಟಿ ಆದೇಶದಿಂದ ಸರ್ಕಾರಕ್ಕೆ ಮುಖಭಂಗ ಆಗಿದೆ. ಇನ್ನಿಬ್ಬರು ಅಧಿಕಾರಿಗಳ ಅಮಾನತುನ್ನು ಗಮನಿಸುವಂತೆ ಸರ್ಕಾರಕ್ಕೆ ಸಿಎಟಿ ಆದೇಶಿಸಿದೆ. ಇನ್ನಿಬ್ಬರ ಅಮಾನತು ಅನ್ನು ವಾಪಸ್ ಪಡೆಯಬಹುದು ಎಂದು ಸಲಹೆ ನೀಡಿದೆ. ಇಬ್ಬರು ಅಧಿಕಾರಿಗಳು CATಗೆ ಹೋಗದಿದ್ದಕ್ಕೆ ಸರ್ಕಾರಕ್ಕೆ ಸಲಹೆ ನೀಡಿದೆ.
ಪ್ರಕರಣದಲ್ಲಿ ಬೆಂಗಳೂರು ಕಮಿಷನರ್ ಆಗಿದ್ದ ದಯಾನಂದ್ ಸೇರಿದಂತೆ 6 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ತಮ್ಮ ಅಮಾನತು ಆದೇಶ ಪ್ರಶ್ನಿಸಿ ವಿಕಾಸ್ ಕುಮಾರ್ ಅವರನ್ನು ಸಿಎಟಿ ಮೆಟ್ಟಿಲೇರಿದ್ದರು.
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ (Chinnaswamy Stadium Stampede) ಕೇಸ್‌ಗೆ ಸಂಬಂಧಿಸಿದ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ ಸಿದ್ಧವಾಗಿದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಾಳೆಯೊಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಯುಪಿಎಸ್‌ಸಿ ನಿಯಾಮವಳಿಗಳ ಪ್ರಕಾರ 15 ದಿನದೊಳಗಾಗಿ ವರದಿ ಸಲ್ಲಿಸಬೇಕು. ಐಪಿಎಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ರೆ ವರದಿ ಸಲ್ಲಿಸಬೇಕು. ಆದರೆ, ಅಮಾನತು ಬಗ್ಗೆ ಕೇಂದ್ರಕ್ಕೆ ಮಾಹಿತಿಯನ್ನಷ್ಟೇ ನೀಡಿರುವ ರಾಜ್ಯ ಸರ್ಕಾರ ಲಿಖಿತ ವರದಿ ನೀಡಬೇಕಿದೆ. ಡಿಪಿಎಆರ್‌ನಿಂದಲೇ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ವರದಿ ತಯಾರಾಗಿದೆ. ಇದನ್ನೂ ಓದಿ: ಕಾಲ್ತುಳಿತ ತಡೆಗೆ ಹೊಸ ಕಾನೂನು – 3 ವರ್ಷ ಜೈಲು, 5 ಲಕ್ಷ ದಂಡ
ಐಪಿಎಸ್ ಅಧಿಕಾರಿಗಳಾದ ದಯಾನಂದ್, ಶೇಖರ್, ವಿಕಾಸ್ ಕುಮಾರ್ ಅವರನ್ನು ಚಿನ್ನಸ್ವಾಮಿ ಕಾಲ್ತುಳಿತದ ಕರ್ತವ್ಯಲೋಪದಡಿಯಲ್ಲಿ ಅಮಾನತು ಮಾಡಲಾಗಿತ್ತು. ಇದೀಗ ವರದಿಯಲ್ಲೂ ಪೊಲೀಸರ ಲೋಪ ಎತ್ತಿ ಹಿಡಿದಿದ್ಯಾ ರಾಜ್ಯ ಸರ್ಕಾರ ಎಂಬ ಪ್ರಶ್ನೆ ಮೂಡಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಹೊಣೆ ಪೊಲೀಸರದ್ದಾಗಿದ್ದು, ಐಪಿಎಸ್ ಅಧಿಕಾರಿಗಳ ಮೇಲೆ ಕರ್ತವ್ಯಲೋಪದ ಚಾರ್ಜ್‌ಶೀಟ್ ಇದೆ ಎನ್ನಲಾಗಿದೆ. ರಾಜ್ಯ ಸರ್ಕಾರದ ಸಸ್ಪೆಂಡ್ ರಿಪೋರ್ಟ್ ಏನಾಗುತ್ತೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಸ್ಪೆಂಡ್ ಕ್ರಮವನ್ನ ಎತ್ತಿ ಹಿಡಿಯುತ್ತಾ ಅಥವಾ ರಿಜೆಕ್ಟ್ ಮಾಡುತ್ತಾ ಎಂಬುದು ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ
ಬೆಂಗಳೂರು: ವಿಮಾನ ಪತನದಲ್ಲಿ (Plane Crash) 262 ಜನರ ಸಾವಾಯ್ತಲ್ಲ ನಾವು ಏನಾದ್ರೂ ರಾಜೀನಾಮೆ ಕೇಳಿದ್ವಾ ಎಂದು ಬಿಜೆಪಿ (BJP) ನಾಯಕರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಾಲ್ತುಳಿತ (Bengaluru Stampede) ಪ್ರಕರಣ ಖಂಡಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮೊನ್ನೆ 262 ಜನ ಸತ್ರಲ್ಲ, ಅದಕ್ಕೆ ನಾವು ರಾಜೀನಾಮೆ ಕೇಳಿದ್ವಾ? ರೈಲ್ವೆ ದುರುಂತ ಆಯ್ತು, ಅದಕ್ಕೆ ರಾಜೀನಾಮೆ ಕೇಳಿದ್ವಾ? ಬ್ರಿಡ್ಜ್ ಕುಸಿತ ಆದಾಗ ಲೋಪ ಆಗಿಲ್ವಾ? ರಾಜೀನಾಮೆ ಕೇಳುವವರಿಗೆ ಏನು ನೈತಿಕತೆ ಇದೆ? ರಾಜಕೀಯ ಪ್ರೇರಿತವಾಗಿ ಮಾಡ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಮನೆಗೆ ಭೇಟಿ – ದ.ಕ. ಪೊಲೀಸರ ವಿರುದ್ಧವೇ ತನಿಖೆಗೆ NHRC ಆದೇಶ
ಬೆಂಗಳೂರು: ಸರ್ಕಾರಕ್ಕೂ ಆರ್‌ಸಿಬಿಗೂ (RCB) ಏನ್ ಸಂಬಂಧ! ಅದು ಹೇಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡಿದ್ರು? ರಾಯಲ್ ಚಾಲೆಂಜರ್ಸ್ ಅಂದ್ರೆ ಏನು..!? ವಿಸ್ಕಿ ಪ್ರಚಾರಕ್ಕೆ ಅಂತಾ ಮಲ್ಯ ಹೇಳಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ವಿಸ್ಕಿ ಪ್ರಚಾರ ಮಾಡೋದಕ್ಕೆ ಕಾರ್ಯಕ್ರಮ ಮಾಡಿದ್ರಾ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯಗೆ (Siddaramaiah) ತಿರುಗೇಟು ನೀಡಿದ ರವಿ, ಆರ್‌ಸಿಬಿ ನಮ್ಮ ರಾಜ್ಯವನ್ನ ಪ್ರತಿನಿಧಿಸಿತ್ತಾ? ರಾಜ್ಯದ ಆಟಗಾರರು ಯಾರು ಇದ್ರು? ಮಾಲೀಕರು ಕರ್ನಾಟಕದವರು ಇದ್ರಾ? ಸರ್ಕಾರಕ್ಕೆ ಮಾಡೋದಕ್ಕೆ ಬೇರೆ ಏನೂ ಕೆಲಸ ಇರಲಿಲ್ಲವಾ? ರಾಜ್ಯದ ಮರ್ಯಾದೆ ಹರಾಜು ಹಾಕಿದ್ದಾರೆ. ಸರ್ಕಾರ ಅನುಮತಿ ಕೊಡದಿದ್ದರೆ ಅಭಿಮಾನಿಗಳು ಸ್ಟೇಡಿಯಂಗೆ ಬರ್ತಾ ಇರಲಿಲ್ಲ. ಇದು ಸರ್ಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯ. ಅದಕ್ಕೆ ರಾಜೀನಾಮೆ ಕೇಳ್ತಿರೋದು ಅಂತಾ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: EXCLUSIVE | ಲೋಕಾಯುಕ್ತ ಲಂಚ ಪ್ರಕರಣಕ್ಕೆ ಡೈರಿ ಮಿಸ್ಟರಿ – ನಿಂಗಪ್ಪ ಮನೆಯಲ್ಲಿದ್ದ 2 ಡೈರಿ ರಿಕವರಿ
ಆರ್ಗನೈಸೈಡ್ ಕ್ರೈಂ ಬೇರೆ, ಆಕಸ್ಮಿಕ ಘಟನೆ ಬೇರೆ. ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡಿದ್ದು ಆರ್ಗನೈಸೈಡ್ ಕ್ರೈಂ. ಅಹಮದಾಬಾದ್‌ನಲ್ಲಿ ನಡೆದಿರುವುದು ಆಕಸ್ಮಿಕ ಘಟನೆ. ಬೇರೆ ರಾಜ್ಯಗಳಲ್ಲಿ ಆರ್ಗನೈಸೈಡ್ ಕ್ರೈಂ ನಡೆದಿದ್ರೆ, ಅಲ್ಲಿ ಹೋಗಿ ರಾಜೀನಾಮೆ ಕೇಳಲಿ ಎಂದು ಟಾಂಗ್ ಕೊಟ್ಟರು.
ಇದೇ ವೇಳೆ ರಾಮಲಿಂಗಾರೆಡ್ಡಿಗೆ ತಿರುಗೇಟು ನೀಡಿದ ಸಿ.ಟಿ.ರವಿ, ರಾಮಲಿಂಗಾರೆಡ್ಡಿಗೆ ಮನುಷ್ಯತ್ವ ಇದ್ರೆ 11 ಜನರ ಸಾವಿನ ಸಂಕಟ ಕೇಳಲಿ. ಅವರ ಮನೆಗೆ ಹೋಗಿ ನೋಡಲಿ. ಇವರು ಏಕೆ ಅನುಮತಿ ಕೊಟ್ರು? ಇವರು ಅನುಮತಿ ಕೊಟ್ಟಿದ್ದಕ್ಕೆ ಸ್ಟೇಡಿಯಂಗೆ ಬಂದಿದ್ದು. ಸಿಎಂ, ಡಿಸಿಎಂಗೂ ಮನುಷ್ಯತ್ವ ಇಲ್ಲ. ಒಬ್ಬರು ದೋಸೆ ತಿನ್ನಲು ಹೋಗ್ತಾರೆ, ಇನ್ನೊಬ್ಬರು ಕಪ್‌ಗೆ ಮುತ್ತಿಡ್ತಾರೆ ಎಂದು ಸಿಎಂ, ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ: ಡಿಕೆಶಿ