Tag: bengaluru rural

  • ಬೆಂಗಳೂರು ಗ್ರಾ. ಉಸ್ತುವಾರಿ ಹೊಣೆ ಸಿಕ್ಕ ಬಳಿಕ ಚುರುಕಾದ ಸಚಿವ ಎಂಟಿಬಿ

    ಬೆಂಗಳೂರು ಗ್ರಾ. ಉಸ್ತುವಾರಿ ಹೊಣೆ ಸಿಕ್ಕ ಬಳಿಕ ಚುರುಕಾದ ಸಚಿವ ಎಂಟಿಬಿ

    – ದೊಡ್ಡಬಳ್ಳಾಪುರದ ಮೇಕ್‍ಶಿಫ್ಟ್ ಆಸ್ಪತ್ರೆ ಕಾಮಗಾರಿ ಪರಿಶೀಲನೆ

    ಬೆಂಗಳೂರು: ಪೌರಾಡಳಿತ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂಟಿಬಿ ನಾಗರಾಜು ಅವರು ಇಂದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಕ್‍ಶಿಫ್ಟ್ ಆಸ್ಪತ್ರೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

    ಇತ್ತೀಚೆಗಷ್ಟೇ ಸಚಿವ ಎಂಟಿಬಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹೊಣೆ ಸಿಕ್ಕಿದೆ. ಬಹಳ ಕಸರತ್ತು ನಡೆಸಿ ಬಯಸಿದ ಜಿಲ್ಲೆಗೆ ಉಸ್ತುವಾರಿ ಹೊಣೆ ಹೊತ್ತ ಬಳಿಕ ಸಚಿವರು ತಮ್ಮ ಓಡಾಟ ಚುರುಕುಗೊಳಿಸಿದ್ದಾರೆ. ಗ್ರಾಮಾಂತರ ಬೆಂಗಳೂರು ಜಿಲ್ಲೆಯಲ್ಲಿ ಹಲವು ಕಾಮಗಾರಿ, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡಲಾರಂಭಿಸಿದ್ದಾರೆ. ಅದರಲ್ಲೂ ಹೊಸಕೋಟೆ ಕ್ಷೇತ್ರದಲ್ಲಿ ಸೋತ ಬಳಿಕ ಕ್ಷೇತ್ರದ ಮೇಲೆ ಹಿಡಿತ ಕಳೆದುಕೊಳ್ಳುವ ಆತಂಕದಲ್ಲಿ ಎಂಟಿಬಿ ಇದ್ರು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಿಕ್ಕ ಬಳಿಕ ಕ್ಷೇತ್ರವೂ ಸೇತಿದಂತೆ ಇಡೀ ಜಿಲ್ಲೆ ಪೂರ್ಣ ಓಡಾಡುವ ಮೂಲಕ ಹಳೆಯ ಇಮೇಜ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಮುಂದಿನ ಬಾರಿ ಶತಾಯಗತಾಯ ಗೆಲ್ಲಲು ಎಂಟಿಬಿ ಈಗಿಂದಲೇ ತಾಲೀಮು ಆರಂಭಿಸಿದ್ದಾರೆ.

    ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೋನಾ ವಂಶಿ ಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ, ಉಪ ವಿಭಾಗಾಧಿಕಾರಿ ಅರುಳ್‍ಕುಮಾರ್, ತಹಶೀಲ್ದಾರ್ ಶಿವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಉಸ್ತುವಾರಿ ಆಯ್ತು, ಖಾತೆ ಬದಲಾವಣೆಗೆ ಪಟ್ಟು ಹಿಡಿದ ಎಂಟಿಬಿ ನಾಗರಾಜ್

  • ನೀಲಗಿರಿ ತೆರವುಗೊಳಿಸಿ ಕಾಡುಮರ ಬೆಳೆಸಿ ಹೊಸ ರೂಪದ ಅಭಿಯಾನಕ್ಕೆ ಜಯ

    ನೀಲಗಿರಿ ತೆರವುಗೊಳಿಸಿ ಕಾಡುಮರ ಬೆಳೆಸಿ ಹೊಸ ರೂಪದ ಅಭಿಯಾನಕ್ಕೆ ಜಯ

    ನೆಲಮಂಗಲ: ಪುರಾಣ ಪ್ರಸಿದ್ಧ ಮಹಿಮರಂಗನ ಬೆಟ್ಟದಲ್ಲಿರುವ ನೀಲಗಿರಿ ತೆರವುಗೊಳಿಸಿ ಕಾಡುಮರ ಬೆಳೆಸಿ ಹೊಸ ರೂಪದ ಅಭಿಯಾನಕ್ಕೆ ಜಯ ಸಿಕ್ಕಿದೆ.

    ಪುರಾಣ ಪ್ರಸಿದ್ಧ ಲಕ್ಷಾಂತರ ಭಕ್ತ ಸಮೂಹ ಹೊಂದಿರುವ ಶ್ರೀ ಮಹಿಮರಂಗಸ್ವಾಮಿ ನೆಲೆಸಿದ ಬೆಟ್ಟದಲ್ಲಿ ಸಂಪೂರ್ಣ ನೀಲಗಿರಿ ಆವರಿಸಿ ಪ್ರಾಣಿ ಪಕ್ಷಿಗಳು ವಲಸೆ ಹೋಗುವಂತೆ ಆಗಿತ್ತು. ಇದನ್ನು ಮನಗಂಡ ಯುವಕರು ಅಭಿಯಾನ ಆರಂಭಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. 25 ಎಕರೆ ಪ್ರದೇಶದ ಬೆಟ್ಟದಲ್ಲಿರುವ ನೀಲಗಿರಿಯನ್ನು ತೆರವು ಮಾಡಿ ಆ ಸ್ಥಳದಲ್ಲಿ ಕಾಡು ಮರಗಳನ್ನು ನೆಟ್ಟು ಪೋಷಣೆ ಮಾಡಲು ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ:  ಟ್ರೆಡಿಷನಲ್ ಲುಕ್‍ಗೆ 58 ಲಕ್ಷ ಖರ್ಚು ಮಾಡಿದ ಐರಾವತ ಬೆಡಗಿ

    ಜುಲೈ 2ರಂದು ನೀಲಗಿರಿ ಮರಗಳ ಹರಾಜು ಕಾರ್ಯ ನಡೆಯಲಿದೆ. ಕಾಡಿನಲ್ಲಿ ನೀಲಗಿರಿ ಹೋಗಿ ಕಾಡುಮರಗಳ ಇದ್ದರೆ ವಲಸೆ ಹೋಗಿರುವ ಪ್ರಾಣಿ ಪಕ್ಷಿಗಳು ಮತ್ತೆ ಮಹಿಮರಂಗನ ಬೆಟ್ಟಕ್ಕೆ ಆಗಮಿಸುವ ವಿಶ್ವಾಸವಿದ್ದು, ಯುವಕರ ಅಭಿಯಾನಕ್ಕೆ ಯಶಸ್ಸು ಸಿಕ್ಕಿದೆ. ಅಂತರ್ಜಲಕ್ಕೆ ಕಂಟಕವಾದ ನೀಲಗಿರಿ ತೆರವಿಗೆ ಜಿಲ್ಲಾಧಿಕಾರಿ ಆದೇಶವಿದ್ದರೂ ಕೊರೊನಾ ಆರಂಭವಾದ ನಂತರ ಜಿಲ್ಲೆಯಲ್ಲಿ ತೆರವು ಕಾರ್ಯ ಸ್ಥಗಿತವಾಗಿತ್ತು. ಅನೇಕ ಮನವಿಗಳ ನಂತರ ಮಹಿಮರಂಗ ಬೆಟ್ಟದ ಉತ್ತಮ ಪರಿಸರಕ್ಕೆ ಅಧಿಕಾರಿಗಳು ಸ್ಪಂದಿಸಿದ್ದು ತಹಶೀಲ್ದಾರ್ ಮಂಜುನಾಥ್ ಬೆಟ್ಟದ ಹೊಸರೂಪಕ್ಕೆ ಶಕ್ತಿ ನೀಡಿದ್ದಾರೆ. ಇದನ್ನೂ ಓದಿ: ಜಿಯೋದಿಂದ ಬರುತ್ತೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ – ಬೆಲೆ ಎಷ್ಟು? ವಿಶೇಷತೆ ಏನು? ಕಡಿಮೆ ಬೆಲೆಗೆ ಹೇಗೆ ಸಿಗುತ್ತೆ?

    ಕೆಲವೇ ತಿಂಗಳಲ್ಲಿ ಸಂಪೂರ್ಣ ಬೆಟ್ಟ ಕಾಡು ಮರಗಳು ಹಾಗೂ ಔಷಧಿ ಸಸ್ಯಗಳಿಂದ ಹಸಿರಾಗಲಿದೆ. ಮಹಿಮರಂಗ ಬೆಟ್ಟದಲ್ಲಿ ನೀಲಗಿರಿ ಬೆಳೆದ ನಂತರ ವಾತಾವರಣ ಬದಲಾವಣೆ ಹಾಗೂ ಪ್ರಾಣಿಪಕ್ಷಿಗಳ ಬದುಕಲು ಕಷ್ಟವಾದ ಬಗ್ಗೆ ಅಧಿಕಾರಿಗಳಿಗೆ ಗಮನಕ್ಕೆ ತಂದು ಮನವಿ ಮಾಡಿದ ನಂತರ ಸ್ಪಂದಿಸಿದ್ದಾರೆ. ನೀಲಗಿರಿ ತೆಗೆದು ಕಾಡು ಮರಗಳನ್ನು ಬೆಳೆಸಲು ಶೀಘ್ರವೇ ತಯಾರಿ ನಡೆಯಲಿದೆ ಎಂದು ಅಭಿಯಾನದದಲ್ಲಿ ಪಾಲ್ಗೊಂಡ ವಿಜಯ್ ಹೊಸಪಾಳ್ಯ ಹೇಳಿದ್ದಾರೆ.

  • ಉಸ್ತುವಾರಿ ಆಯ್ತು, ಖಾತೆ ಬದಲಾವಣೆಗೆ ಪಟ್ಟು ಹಿಡಿದ ಎಂಟಿಬಿ ನಾಗರಾಜ್

    ಉಸ್ತುವಾರಿ ಆಯ್ತು, ಖಾತೆ ಬದಲಾವಣೆಗೆ ಪಟ್ಟು ಹಿಡಿದ ಎಂಟಿಬಿ ನಾಗರಾಜ್

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಡದಿದಕ್ಕೆ ಮುನಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಗೆ ನಿನ್ನೆ ಸಚಿವ ಆರ್.ಅಶೋಕ್ ಅವರ ಬಳಿ ಇದ್ದ ಉಸ್ತುವಾರಿಯನ್ನ ನೀಡಿದೆ. ಆದರೂ ಸಮಾಧಾನಗೊಳ್ಳದ ಎಂಟಿಬಿ ಈಗ ಉತ್ತಮ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.

    ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೀಡಲಾಗಿದ್ದ ಹೊಸಕೋಟೆ ಕ್ಷೇತ್ರಕ್ಕೆ ಐದು ಸಾವಿರ ಫುಡ್ ಕಿಟ್‍ಗಳನ್ನ ಇಂದು ಮೊದಲ ಬಾರಿಗೆ ಪೋಸ್ಟ್ ಮಾಸ್ಟರ್ ಮತ್ತು ಪೋಸ್ಟ್ ಮ್ಯಾನ್ ಗಳಿಗೆ ಹೊಸಕೋಟೆ ಬಿಜೆಪಿ ಕಚೇರಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಆಹಾರ ಕಿಟ್ ಗಳನ್ನ ನೀಡುವ ಮೂಲಕ ಚಾಲನೆ ನೀಡಿದರು. ನಾಳೆಯಿಂದ ಕಟ್ಟಡ ಕಾರ್ಮಿಕರಿಗೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಿತರಣೆ ಮಾಡುವುದಾಗಿ ಹೇಳಿದರು.

    ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಇದಕ್ಕೂ ಮೊದಲು ನನಗೆ ಸಿಎಂ ಅವರು ಕೋಲಾರ ಜಿಲ್ಲೆಯ ಉಸ್ತುವಾರಿ ನೀಡಿದ್ದರು. ನಾನು ಹೊಸಕೋಟೆಯಲ್ಲಿ ಮೂರು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಇದಕ್ಕೂ ಮೊದಲು ಬೆ.ಗ್ರಾ. ಉಸ್ತುವಾರಿ ಆಗಿ ಕೆಲಸ ಮಾಡಿರುವ ಅನುಭವ ಇದೆ. ನನಗೆ ಬೆ.ಗ್ರಾ. ಜಿಲ್ಲೆಯನ್ನೆ ನೀಡಿ ಇಲ್ಲಿನ ನಾಡಿಮಿಡಿತ ಮತ್ತು ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಅನುಭವ ಇದೆ. ಕೊಟ್ಟರೆ ಬೆಂಗಳೂರು ಗ್ರಾಮಾಂತರ ಕೊಡಿ ಇಲ್ಲದಿದ್ದರೆ ಯಾವುದು ಬೇಡ ಅಂತ ಹೇಳಿದ್ದೆ. ಆದ್ದರಿಂದ ಕೋಲಾರ ಜಿಲ್ಲೆ ವಾಪಸ್ ತೆಗೆದುಕೊಂಡು ನಿನ್ನೆ ಸಿಎಂ ಅವರು ಮತ್ತು ನಮ್ಮ ಎಲ್ಲಾ ನಾಯಕರು ಸೇರಿ ನನಗೆ ಉಸ್ತುವಾರಿ ವಹಿಸಿದ್ದಾರೆ ಎಂದರು.

    ಜಿಲ್ಲಾ ಉಸ್ತುವಾರಿ ಜೊತೆಗೆ ಖಾತೆ ಬದಲಾವಣೆ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳ ಬಳಿ ಕೇಳಿಕೊಂಡೆ ಆದರೆ ಒಂದು ಮಾಡಿದ್ದಾರೆ ಇನ್ನೊಂದು ಮಾಡಿಲ್ಲ. ಅದನ್ನು ಕೆಲವು ದಿನಗಳಲ್ಲಿ ಮಾಡಿಕೊಡುವುದಾಗಿ ಹೇಳಿದ್ದಾರೆ. ಆದರೆ ಯಾವುದೇ ಖಾತೆ ನೀಡಿದರು ಪರವಾಗಿಲ್ಲ ಜನರ ಸೇವೆ ಮಾಡುತ್ತೇನೆ. ಈ ಮೊದಲು ವಸತಿ ಸಚಿವನಾಗಿದ್ದೆ, ಅದಕ್ಕೂ ಉತ್ತಮವಾದ ಖಾತೆ ನೀಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ ಕೊಡುತ್ತಾರೆ ಎಂದು ನಂಬಿಕೆ ಇದೆ ಎಂದು ಹೇಳಿದ್ದಾರೆ.

    ಮುಖ್ಯಮಂತ್ರಿಗಳು ಆದಷ್ಟು ಬೇಗ ಖಾತೆ ಬದಲಾವಣೆ ಮಾಡಿಕೊಡೂ ನಿರೀಕ್ಷೆಯಿದೆ, ಉಸ್ತುವಾರಿ ನೀಡಿರೂ ಕಾರಣ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒಡಾಡುತ್ತೇನೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲುವನ್ನು ಸಾಧಿಸಲು ಉತ್ತಮ ರೀತಿಯಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.

    ಆರ್.ಅಶೋಕ್ ಅವರು ಮೂರು ತಿಂಗಳ ಹಿಂದೆಯೇ ಉಸ್ತುವಾರಿ ಸಚಿವ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದ್ದರು. ಸಿಎಂಗೆ ಪತ್ರನೂ ಬರೆದಿದ್ದರು ಅದೇ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದರು. ಯೋಗೇಶ್ವರ್ ಬಗ್ಗೆ ನನಗೆ ಗೊತ್ತಿಲ್ಲ ಮುಂದಿನ ದಿನಗಳಲ್ಲಿ ಅವರಿಗೂ ನೀಡಬಹುದು. ಕೋಲಾರ ನೀಡುವುದಾಗಿ ಹೇಳುತ್ತಿದ್ದಾರೆ ಮಾತುಕತೆ ನಡೆಯುತ್ತಿದೆ ಎಂದರು.

  • ತುಂತುರು ಮಳೆ- ಎದುರಿಗಿದ್ದ ಲಾರಿಗೆ ಡಿಕ್ಕಿಯಾಗಿ ಡಿವೈಡರ್ ಹತ್ತಿ ರಸ್ತೆಗೆ ಉರುಳಿದ ಲಾರಿ

    ತುಂತುರು ಮಳೆ- ಎದುರಿಗಿದ್ದ ಲಾರಿಗೆ ಡಿಕ್ಕಿಯಾಗಿ ಡಿವೈಡರ್ ಹತ್ತಿ ರಸ್ತೆಗೆ ಉರುಳಿದ ಲಾರಿ

    – ಲಾರಿಯಲ್ಲಿದ್ದ ಗುಜರಿ ವಸ್ತುಗಳು ಚೆಲ್ಲಾಪಿಲ್ಲಿ

    ಬೆಂಗಳೂರು: ಮುಂದೆ ಹೋಗುತ್ತಿದ್ದ ಲಾರಿಗೆ ಇನ್ನೊಂದು ಲಾರಿ ಡಿಕ್ಕಿ ಹೊಡೆದು ಡಿವೈಡರ್ ಹತ್ತಿ ರಸ್ತೆ ಮಧ್ಯೆಯೇ ಲಾರಿ ಉರುಳಿ ಬಿದ್ದಿರುವ ಘಟನೆ ಬೆಂಗಳೂರು-ತಮಿಳುನಾಡು ಸಂಪರ್ಕಿಸೋ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ತುಂತುರು ಮಳೆಯಲ್ಲಿ ಬೆಳ್ಳಂಬೆಳಗ್ಗೆ ಎರಡು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಆನೇಕಲ್ ತಾಲೂಕಿನ ಅತ್ತಿಬೆಲೆಯ ಸಮೀಪದ ಬೆಂಗಳೂರು-ತಮಿಳುನಾಡು ಸಂಪರ್ಕಿಸೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಲಾರಿ ಬಂದು ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದು ಭಾರೀ ಪ್ರಮಾಣದ ಅಪಘಾತ ಸಂಭವಿಸಿದೆ.

    ಲಾರಿ ಹೆದ್ದಾರಿಯಲ್ಲಿ ಉರುಳಿಬಿದ್ದ ಪರಿಣಾಮ ಸುಮಾರು 3 ಕಿಲೋಮೀಟರ್ ಬೆಂಗಳೂರಿನಿಂದ ತಮಿಳುನಾಡು ಕಡೆ ತೆರಳುವ ರಸ್ತೆ ಸಂಪೂರ್ಣ ಜಾಮ್ ಆಗಿದೆ. ಗುಜರಿ ಸಾಮಾನು ಹೊತ್ತೊಯ್ಯುತ್ತಿದ್ದ ಲಾರಿ ಆಗಿತ್ತು. ಅಪಘಾತದಿಂದದಾಗಿ ಲಾರಿಯಲ್ಲಿದ್ದ ಗುಜರಿವಸ್ತುಗಳು ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

    ಅಪಘಾತದಲ್ಲಿ ಲಾರಿಯ ಚಾಲಕ ಹಾಗೂ ನಿರ್ವಾಹಕ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್ – 1 ರಿಂದ 6ನೇ ತರಗತಿವರೆಗಿನ ಪರೀಕ್ಷೆ ರದ್ದು

    ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್ – 1 ರಿಂದ 6ನೇ ತರಗತಿವರೆಗಿನ ಪರೀಕ್ಷೆ ರದ್ದು

    – ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರಕ್ಕೆ ಮಾತ್ರ ಅನ್ವಯ
    – ಶಿಕ್ಷಣ ಇಲಾಖೆಯಿಂದ ಆದೇಶ

    ಬೆಂಗಳೂರು: ಮಹಾಮಾರಿ ಕೊರೊನಾ ಸಿಲಿಕಾನ್ ಸಿಟಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ ಭಾಗದ ಶಾಲೆಗಳಲ್ಲಿ 1ರಿಂದ 6ನೇ ತರಗತಿವರೆಗೆ ಪರೀಕ್ಷೆಯನ್ನು ರದ್ದುಗೊಳಿಸಿದೆ.

    ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ, 1ರಿಂದ 6ನೇ ತರಗತಿವರೆಗೆ ಪರೀಕ್ಷೆ ಇಲ್ಲ. 7ರಿಂದ 9ನೇ ತರಗತಿವರೆಗೆ ಮಾರ್ಚ್ 23 ಒಳಗೆ ಪರೀಕ್ಷೆ ನಡೆಸಬೇಕು. ಆ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ರಜೆ ನೀಡಬೇಕು. ಹಾಗೆಯೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಗೊಳಿಸಿರುವ ದಿನಾಂಕದಂದೆ ಪರೀಕ್ಷೆ ನಡೆಸಲಾಗುವುದು. ಅಲ್ಲದೇ ವಿದ್ಯಾರ್ಥಿಗಳು ನಿಗದಿತ ಪರೀಕ್ಷೆಯ ದಿನ ಮಾತ್ರ ಶಾಲೆಗೆ ಬಂದು ಪರೀಕ್ಷೆ ಬರೆಯಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

    ಸುತ್ತೋಲೆಯಲ್ಲಿ ಏನಿದೆ?
    ಬಿಬಿಎಂಪಿ, ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಗ್ರಾಮಾಂತರ ಭಾಗದ ಶಾಲೆಗಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ನೀಡಲಾಗುವುದು. 2020-21ನೇ ಸಾಲಿನ ಶೈಕ್ಷಣಿಕ ವೇಳಾ ಪಟ್ಟಿಯಂತೆ ಶಾಲೆ ಪುನರಾರಂಭವಾಗಲಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

    1ರಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಿರುವ ಹಿನ್ನೆಲೆ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಎಫ್‍ಎ 1, ಎಫ್‍ಎ 2, ಎಫ್‍ಎ 3, ಎಫ್‍ಎ 4 ಹಾಗೂ ಎಸ್‍ಎ 1ರಲ್ಲಿ ಗಳಿಸಿದ ಅಂಕಗಳ ಆಧಾರದ ಮೇರೆಗೆ ವಿದ್ಯಾರ್ಥಿಗಳ ಶ್ರೇಣಿಕೃತ ಫಲಿತಾಂಶವನ್ನು ಪ್ರಕಟಿಸಿ, ಮುಂದಿನ ತರಗತಿಗಳಿಗೆ ಭಡ್ತಿ ನೀಡಬೇಕು. ಈ ಸಾಲಿನ ಬೇಸಿಗೆ ರಜೆಯನ್ನು ಇಂದಿನಿಂದಲೇ ಘೋಷಿಸಲಾಗುವುದು.

    ಇತ್ತ 7ರಿಂದ 8ನೇ ತರಗತಿಗಳನ್ನು ಮಾರ್ಚ್ 13ರಿಂದ ಪರೀಕ್ಷಾ ಪೂರ್ವಸಿದ್ಧಾತಾ ರಜೆಯ ಮಾದರಿಯಲ್ಲಿ ಸ್ಥಗಿತಗೊಳಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನಗಳಂದು ಮಾತ್ರ ಶಾಲೆಗೆ ಹಾಜರಾಗುವಂತೆ ಸೂಚಿಸಬೇಕು. ಮಾರ್ಚ್ 23 ಒಳಗೆ ಪರೀಕ್ಷೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಿ, ಬೇಸಿಗೆ ರಜೆಯನ್ನು ನೀಡಬೇಕು. ಹಾಗೆಯೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲಾಗುತ್ತದೆ.

    ಅಷ್ಟೇ ಅಲ್ಲದೇ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಇಚ್ಛಿಸಿದರೆ ಅವರಿಗೆ ಅನುಮತಿ ನೀಡಬೇಕು. ಹಾಗೆಯೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಲೆಯ ಮುಖ್ಯಸ್ಥರುಗಳಿಗೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    ಈಗಾಗಲೇ ಶಿಕ್ಷಣ ಇಲಾಖೆ ಮುಜಾಗ್ರತಾ ಕ್ರಮವಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ಪೂರ್ವ ಪ್ರಾರ್ಥಮಿಕ, ಎಲ್‍ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಮಾರ್ಚ್ 9ರಿಂದಲೇ ರಜೆ ಘೋಷಿಸಿದೆ. ಹಾಗೆಯೇ ಸರ್ಕಾರಿ, ಅನುಧಾನಿತ ಹಾಗೂ ಅನುಧಾನರಹಿತ ಶಾಲೆಗಳ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಚ್ 10ರಿಂದ ಮುಂದಿನ ಆದೇಶದವರೆಗೆ ರಜೆ ಘೋಷಿಸಿದೆ.

  • ಜನನಿಬಿಡ ಪ್ರದೇಶದಲ್ಲೇ ಪತ್ನಿಗೆ ಚಾಕು ಇರಿದ ಪಾಪಿ ಪತಿ

    ಜನನಿಬಿಡ ಪ್ರದೇಶದಲ್ಲೇ ಪತ್ನಿಗೆ ಚಾಕು ಇರಿದ ಪಾಪಿ ಪತಿ

    ನೆಲಮಂಗಲ: ಪಾಪಿ ಪತಿಯೊಬ್ಬ ಜನನಿಬಿಡ ಪ್ರದೇಶದಲ್ಲೇ ಪತ್ನಿಗೆ ಚಾಕು ಇರಿದು ಪರಾರಿಯಾದ ಅಮಾನವೀಯ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಸೋಲೂರಿನಲ್ಲಿ ನಡೆದಿದೆ.

    ತಿಮ್ಮರಾಜು ಜಾಕು ಇರಿದ ಪಾಪಿ ಪತಿ. ಸೌಮ್ಯಾ ಹಲ್ಲೆಗೆ ಒಳಗಾದ ಪತ್ನಿ. ಅದೃಷ್ಟವಶಾತ್ ಸೌಮ್ಯಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸೌಮ್ಯಾ ಎಂದಿನಂತೆ ಬುಧವಾರವೂ ಟಿವಿಎಸ್ ಶೋರೂಂನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದರು. ಈ ವೇಳೆ ಶೋರೂಂ ಬಳಿ ಕಾದು ಕುಳಿತಿದ್ದ ತಿಮ್ಮರಾಜು ಪತ್ನಿಯ ಬಳಿಗೆ ಬಂದು ಜಗಳ ಆರಂಭಿಸಿದ್ದಾನೆ. ನಂತರ ಗಲಾಟೆ ಮಾಡಿಕೊಂಡು ಕುತ್ತಿಗೆಗೆ ಚಾಕು ಇರಿದಿದ್ದಾನೆ. ಸೌಮ್ಯಾ ಜೋರಾಗಿ ಚೀರಿದ ಧ್ವನಿ ಕೇಳಿ ಸ್ಥಳೀಯರು ಅಲ್ಲಿಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.

    ರಕ್ತಸ್ರಾವದಿಂದ ಬಿದ್ದು ಒದ್ದಾಡುತ್ತಿದ್ದ ಸೌಮ್ಯಾ ಅವರನ್ನು ಸ್ಥಳೀಯರು ಸೋಲೂರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ತಿಮ್ಮರಾಜು ಚಾಕು ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕುದೂರು ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

  • ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕ್ಕೆ ನುಗ್ಗಿದ 30 ಜನರಿದ್ದ ಬಸ್

    ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕ್ಕೆ ನುಗ್ಗಿದ 30 ಜನರಿದ್ದ ಬಸ್

    – ತಪ್ಪಿದ ಭಾರೀ ಅನಾಹುತ, 20 ವಿದ್ಯಾರ್ಥಿಗಳು ಬಜಾವ್

    ಚಿಕ್ಕಬಳ್ಳಾಪುರ: ಕೆಎಸ್ಆರ್‌ಟಿಸಿ ಬಸ್‍ನ ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕ್ಕೆ ನುಗ್ಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಬಳಿ ನಡೆದಿದೆ.

    ಅದೃಷ್ಟವಶಾತ್ ಬಸ್‍ನಲ್ಲಿದ್ದ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಅಂದಹಾಗೆ ತೂಬಗೆರೆ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊರಡಿದ್ದ ಕೆಎಸ್ಆರ್‌ಟಿಸಿ ಬಸ್ ಮಾರ್ಗ ಮಧ್ಯದಲ್ಲಿನ ತಿರುಮಗೊಂಡನಹಳ್ಳಿಯ ಬಳಿ ಬರುವಾಗ ಬಸ್‍ನ ಸ್ಟೇರಿಂಗ್ ಕಟ್ಟಾಗಿತ್ತು. ಬಳಿಕ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯಲ್ಲಿ ಕಟ್ಟಲಾಗಿದ್ದ ಹಸುವಿಗೆ ಗುದ್ದಿ ನಂತರ ಕೊಟ್ಟಿಗೆಯನ್ನು ನೆಲ ಸಮ ಮಾಡಿದೆ.

    ರಸ್ತೆ ಬದಿಯಲ್ಲಿನ ಮರಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿನ ಹಳ್ಳಕ್ಕೆ ನುಗ್ಗಿದೆ. ಬಸ್‍ನಲ್ಲಿ ಕಾಲೇಜು ಮತ್ತು ಶಾಲೆಗೆ ಹೊರಟ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ಯಾರಿಗೂ ಸಣ್ಣ ಪುಟ್ಟ ಗಾಯಗಳು ಸಹ ಆಗದೆ ಪ್ರಾಣಾಪಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಬಸ್ ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ಹಸುವಿನ ಕಣ್ಣಿನ ಹತ್ತಿರ ಪೆಟ್ಟಾಗಿದೆ. ಮತ್ತೊಂದೆಡೆ ಬೆಳೆಗ್ಗೆ ಘಟನೆ ನಡೆದಿದ್ದರಿಂದ ತಿರುಮಗೊಂಡನಹಳ್ಳಿಯ ಬಳಿ ಜನಜಂಗುಳಿ ಇರಲಿಲ್ಲ. ಒಂದು ವೇಳೆ ಜನಜಂಗುಳಿ ಇದ್ದ ವೇಳೆ ಘಟನೆ ಸಂಬಂಧಿಸಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಕೆಎಸ್ಆರ್‌ಟಿಸಿ ಡಿಪೋ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ಡಕೋಟ ಬಸ್‍ಗಳನ್ನ ಹಾಕುತ್ತಾರೆ. ಇದರಿಂದ ದಾರಿ ಮಧ್ಯೆ ಬಸ್ ಕೆಟ್ಟು ನಿಲ್ಲುವುದು. ಇಂತಹ ಘಟನೆಗಳು ನಡೆಯುವುದು ಸಾಮಾನ್ಯವಾಗಿದೆ ಅಂತ ಗ್ರಾಮಸ್ಥರು ಡಿಪೋ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಖತರ್ನಾಕ್ ಕಳ್ಳರ ಬಂಧನ- 578 ಗ್ರಾಂ ಚಿನ್ನಾಭರಣ ವಶ

    ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಖತರ್ನಾಕ್ ಕಳ್ಳರ ಬಂಧನ- 578 ಗ್ರಾಂ ಚಿನ್ನಾಭರಣ ವಶ

    ನೆಲಮಂಗಲ: ಹಗಲಿನ ವೇಳೆಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಖದೀಮರನ್ನು ಬೆಂಗಳೂರು ಹೊರವಲಯ ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಸುಮಾರು 23.50 ಲಕ್ಷ ರೂ. ಮೌಲ್ಯದ 578 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

    ಬಂಧಿತರಾದ ವಿಶ್ವನಾಥ್ ಮತ್ತು ಹನುಮಂತರಾಜು ತಮ್ಮ ಸಂಬಂಧಿಗಳ ಮನೆಯನ್ನ ಟಾರ್ಗೆಟ್ ಮಾಡಿ ಯಾವುದೇ ಅನುಮಾನ ಬರದ ಹಾಗೆ ಸುಮಾರು ಒಂದೂವರೆ ವರ್ಷಗಳಿಂದ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕಳ್ಳತನ ಮಾಡುತ್ತಿದ್ದ ಬೆಲೆಬಾಳುವ ಆಭರಣಗಳನ್ನು ಆಟಿಕಾ ಗೋಲ್ಡ್ ಮತ್ತು ಮಣಪ್ಪುರಂ ಫೈನಾನ್ಸ್ ನಲ್ಲಿ ಗಿರವಿ ಇಡುತ್ತಿದ್ದರು ಎಂದು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಅಧೀಕ್ಷಕರಾದ ಸಜೀತ್ ತಿಳಿಸಿದ್ದಾರೆ.

    ಆರೋಪಿಗಳು ತಮ್ಮ ಚಾಣಾಕ್ಷತನದಿಂದ ಯಾವುದೇ ಕುರುಹುಗಳು ಸಿಗದಂತೆ ಹಾಗೂ ಯಾರಿಗೂ ಯಾವ ರೀತಿಯಲ್ಲಿ ಅನುಮಾನ ಬರದ ರೀತಿಯಲ್ಲಿ ತಮ್ಮ ಕೈಕೆಲಸ ಮಾಡುವ ಆಸಾಮಿಗಳು. ಒಂದನೇ ಆರೋಪಿ ವಿಶ್ವನಾಥ್ ಇದೇ 17ರಂದು ನೆಲಮಂಗಲದ ದಾದಾಪೀರ್ ಬಡಾವಣೆಯ ಸಮೀರ್ ಎಂಬವರ ಮನೆಯಲ್ಲಿ ನಕಲಿ ಕೀ ಬಳಸಿ, ಮನೆಯಲ್ಲಿ ಇದ್ದ 463 ಗ್ರಾಂ ಚಿನ್ನಾಭರಣವನ್ನ ಕದ್ದು ನಾಪತ್ತೆಯಾಗಿದ್ದ.

    ಎರಡನೇ ಆರೋಪಿ ಹನುಮಂತರಾಜು ದಾನೋಜಿಪಾಳ್ಯದ ಸಂಬಂಧಿಕರ ಮನೆಯಲ್ಲಿ 115 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಟೌನ್ ಪಿಎಸ್‍ಐ ಮಂಜುನಾಥ್ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ವಿಮಾನದ ಆಕಾರದಲ್ಲಿ ರೆಡಿಯಾಗ್ತಿದೆ ನ್ಯೂ ಗೆಟಪ್ ರೆಸ್ಟೋರೆಂಟ್

    ವಿಮಾನದ ಆಕಾರದಲ್ಲಿ ರೆಡಿಯಾಗ್ತಿದೆ ನ್ಯೂ ಗೆಟಪ್ ರೆಸ್ಟೋರೆಂಟ್

    – ವಿಮಾನದಲ್ಲಿ ಸಿಗಲಿದೆ ಎಲ್ಲಾ ರೀತಿಯ ಡಿನ್ನರ್
    – ಗ್ರಾಹಕರಿಗೆ ವಿಮಾನದ ಫೀಲ್

    ನೆಲಮಂಗಲ: ಬಹು ಎತ್ತರದ ಕಟ್ಟಡ, ವಿವಿಧ ವಿನ್ಯಾಸದ ರೂಪಗಳಲ್ಲಿನ ರೆಸ್ಟೋರೆಂಟ್‍ಗಳನ್ನು ನೋಡಿದ್ದೇವೆ. ಆದರೆ ವಿಮಾನದ ಮಾದರಿಯಲ್ಲಿ ರೆಸ್ಟೋರೆಂಟ್‍ವೊಂದು ಸಿದ್ಧವಾಗುತ್ತಿದೆ.

    ಮಾಜಿ ಸೈನಿಕ ರಮೇಶ್ ಕುಮಾರ್ ಅವರ ಬಹುದಿನದ ಕನಸು ಈ ವಿಮಾನ ಮಾದರಿಯ ರೆಸ್ಟೋರೆಂಟ್. ಬೆಂಗಳೂರು ನಗರದ ಹೊರವಲಯದ ನೆಲಮಂಗಲ ರಸ್ತೆಯ ಕುಡುರೆಗೆರೆ ಗ್ರಾಮದ ಬಳಿ ಈ ರೀತಿಯ ವಿಶಿಷ್ಟ ಸೌಲಭ್ಯವನ್ನು ಒಳಗೊಂಡ ವಿಮಾನಗಳನ್ನು ತಯಾರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣದೊಂದಿಗೆ ವಿಮಾನ ರೆಸ್ಟೋರೆಂಟ್‍ಗಳು ಬಹಳ ಜನಪ್ರಿಯವಾಗುತ್ತಿವೆ. ಜೊತೆಗೆ ಅವುಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ತಯಾರಕರು ಹೇಳುತ್ತಾರೆ.

    ರಮೇಶ್ ಕುಮಾರ್ ಅವರು ಕನಸು ಯಶಸ್ವಿಯಾಗುತ್ತಿದೆ. ಪ್ರಸ್ತುತ ತಯಾರಗುತ್ತಿರುವ ಏರ್‌ಬಸ್ ಎ-320 ಮಾದರಿಯಲ್ಲಿ ಥೆಟ್ ವಿಮಾನದಲ್ಲಿರುವಂತೆ ಪರಿಚಾರಿಕಿಯರು ಸೇವೆಯನ್ನು ಕೊಡುತ್ತಿದ್ದಾರೆ. ಇಲ್ಲಿಯೂ ಕೂಡ ವಿಮಾನದಲ್ಲಿದ್ದಂತೆ ಕಾಕ್‍ಪಿಟ್, ಆಸನಗಳು, ರತ್ನಗಂಬಳಿಗಳು, ವಿಮಾನದ ಒಳಗೆ ಒಬ್ಬರು ಕೇಳುವ ಸ್ವಲ್ಪ ಸದ್ದು ಮಾಡುವ ಶಬ್ದವೂ ಸಹ ಇದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

    ತಯಾರಕರಿಗೆ ಒಂದು ದೊಡ್ಡ ಕಾರ್ಯವೆಂದರೆ ವಿಮಾನದ ಸಾಗಣೆ. ಪ್ರಸ್ತುತ ಏರ್‌ಬಸ್ ಎ-320 ಮಾದರಿಯು 123 ಅಡಿ ಉದ್ದವಿದ್ದು, 115 ಅಡಿಗಳಷ್ಟು ರೆಕ್ಕೆಗಳನ್ನು ಹೊಂದಿದೆ. ಇದು ಸಂಪೂರ್ಣ ರೆಡಿಯಾದ ಬಳಿಕ ಗುಜರಾತ್‍ನ ವಡೋದರವರೆಗೆ ಸಾಗಣೆ ಮಾಡಲಾಗುತ್ತದೆ.

    ಇಂತಹ ವಿಮಾನ ರೆಸ್ಟೋರೆಂಟ್ ಈಗಾಗಲೇ ಡೆಹ್ರಾಡೂನ್‍ನಲ್ಲಿದೆ. ಇದೀಗ ಇಲ್ಲಿ ತಯಾರಗುತ್ತಿರುವುದ ವಿಮಾನ ಮಾದರಿಯ ರೆಸ್ಟೋರೆಂಟ್ ದೇಶದಲ್ಲಿಯೇ ಎರಡನೇಯ ರೆಸ್ಟೋರೆಂಟ್ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

  • ಕೆಟಿಎಂ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರರ ಮೇಲೆ ಹರಿದ ಐರಾವತ ಬಸ್

    ಕೆಟಿಎಂ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರರ ಮೇಲೆ ಹರಿದ ಐರಾವತ ಬಸ್

    ಬೆಂಗಳೂರು: ಐರಾವತ ಬಸ್ ಹರಿದು ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣಕ್ಕಿಡಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬಾಣಮಾಕನಹಳ್ಳಿ ಗೇಟ್ ಬಳಿ ಸಂಭವಿಸಿದೆ.

    ಕೆ.ಆರ್.ಪುರಂನ ಎ.ನಾರಾಯಣಪುರದ ನಿವಾಸಿಗಳಾದ ನಾಗೇಶ್ (23) ಹಾಗೂ ತೇಜಸ್ (22) ಮೃತ ದುರ್ದೈವಿಗಳು. ಕೆಟಿಎಂ ಬೈಕ್‍ನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

    ನಾಗೇಶ್ ಹಾಗೂ ತೇಜಸ್ ಕೆಟಿಎಂ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಾಣಮಾಕನಹಳ್ಳಿ ಗೇಟ್ ಬಳಿ ಬೈಕ್ ಏಕಾಏಕಿ ಸ್ಕಿಡ್ ಆಗಿ ಬೀದ್ದಿದೆ. ಆದರೆ ಹಿಂದೆ ಬರುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿದ ಐರಾವತ ಬಸ್, ಓರ್ವ ಸವಾರನ ತಲೆ ಹಾಗೂ ಮತ್ತೊಬ್ಬನ ಸೊಂಟದ ಮೇಲೆ ಹರಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ನಂದಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸವಾರರ ಮೃತದೇಹಗಳನ್ನು ಮರಣೋತ್ತರ ಪರಿಕ್ಷೇ ಕಳುಹಿಸಿದ್ದಾರೆ.