Tag: Bengaluru Riots

  • ಯಾರು ಹಾನಿ ಮಾಡಿದ್ದಾರೆ ಅವರಿಂದಲೇ ನಷ್ಟ ವಸೂಲಿ : ಬೊಮ್ಮಾಯಿ

    ಯಾರು ಹಾನಿ ಮಾಡಿದ್ದಾರೆ ಅವರಿಂದಲೇ ನಷ್ಟ ವಸೂಲಿ : ಬೊಮ್ಮಾಯಿ

    ಬೆಂಗಳೂರು: ಯಾರು ಹಾನಿ ಮಾಡಿದ್ದಾರೆ ಅವರಿಂದಲೇ  ನಷ್ಟ  ವಸೂಲಿ ಮಾಡುವ ಪ್ರಕ್ರಿಯೆಗೆ ಆದೇಶ ಕೊಟ್ಟಿದ್ದೇನೆ ಎಂದು ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ವಿಚಾರವಾಗಿ ಇಂದು ಗೃಹ ಸಚಿವರ ನಿವಾಸದಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಆಯುಕ್ತ ಕಮಲ್‍ಪಂತ್ ಮತ್ತು ಲಾ ಅಂಡ್ ಆರ್ಡರ್ ಎಡಿಜಿ ಅಮರ್ ಕುಮಾರ್ ಪಾಂಡೆ ಸೇರಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಬೊಮ್ಮಾಯಿ ಆಸ್ತಿಯನ್ನು ಯಾರು ನಾಶ ಮಾಡಿದ್ದಾರೆ ಅವರಿಂದಲೇ ಜಪ್ತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ಫೇಸ್‍ಬುಕ್‍ನಲ್ಲಿ ಪೋಸ್ಟ್ ನೋಡಿ, ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಕಾರು ಜಖಂ ಮಾಡಿದ್ದಾರೆ. ಎಂಎಲ್‍ಎ ಮನೆ ಮೇಲೆ ದಾಳಿ ಮಾಡಿದ್ದಾರೆ. ಹೀಗಾಗಿ ನಮ್ಮ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ವೇಳೆ 3 ಜನ ಡೆತ್ ಆಗಿದ್ದಾರೆ. ಜೊತೆಗೆ 145 ಅರೆಸ್ಟ್ ಮಾಡಿದ್ದೇವೆ. ಸಮಾಜದ ಶಾಂತಿ ಹಾಳು ಮಾಡುವ ಪೋಸ್ಟ್ ಹಾಕಿದ್ದ ನವೀನ್‍ನನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

    ಹೆಚ್ಚಿನ ಸಿ.ಆರ್.ಪಿ.ಎಫ್ ತಂಡ ಬೇಕು ಎಂದು ದೆಹಲಿಗೆ ಕೇಳಿದ್ದೇವೆ. ಆರ್.ಪಿ.ಎಫ್ 6 ತುಕಡಿಗಳನ್ನು ಕಳಿಸಿಕೊಡುತ್ತಾರೆ. ದಂಗೆಗಳಾದ ಸಮಯದಲ್ಲಿ ಏನು ಆಸ್ತಿ-ಪಾಸ್ತಿ ನಷ್ಟ ಆಗಿರುತ್ತದೆ. ಅದನ್ನು ನಾಶ ಮಾಡಿದವರಿಂದಲೇ ವಸೂಲಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಸುಪ್ರೀಂಕೋರ್ಟ್ ಆದೇಶಕ್ಕೂ ಮುಂದೆ ಹೋಗಿ ನಮ್ಮವರು ಕಾರ್ಯಾಚರಣೆ ಮಾಡಬೇಕು. ಯಾರು ಹಾನಿ ಮಾಡಿದ್ದಾರೆ ಅವರಿಂದಲೇ ವಸೂಲಿ ಮಾಡುವ ಪ್ರಕ್ರಿಯೆಗೆ ಆದೇಶ ಕೊಟ್ಟಿದ್ದೇನೆ. ಯಾವ ರೀತಿ ತನಿಖೆ ಮಾಡಬೇಕು ಎಂದು ಮುಖ್ಯಮಂತ್ರಿ ಜೊತೆ ಮಾತಾಡಿ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

    ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವರು, ನಮ್ಮ ಕರ್ನಾಟಕ ಪೊಲೀಸರೆ ಸಶಕ್ತರು ಇದ್ದಾರೆ. ನಮಗೆ ಏನೂ ಮಾಡಬೇಕು ಗೊತ್ತಿದೆ. ನಮ್ಮ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ. ಹೀಗಿರುವಾಗ ಸಿಬಿಐ ಪ್ರಶ್ನೆ ಬರುವುದಿಲ್ಲ. ಎಲ್ಲವೂ ತನಿಖೆ ಹಂತದಲ್ಲಿ ಇದೆ ನಮ್ಮ ಪೊಲೀಸರೇ ನಿಭಾಯಿಸುತ್ತಾರೆ. ಹೀಗಾಗಿ ಸಿಬಿಐಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ಕಾರ್ ಜಖಂಗೊಳಿಸಿ ಪುಂಡಾಟ, ಇಡೀ ಮನೆ ಧ್ವಂಸಗೈದ್ರು

    ಕಾರ್ ಜಖಂಗೊಳಿಸಿ ಪುಂಡಾಟ, ಇಡೀ ಮನೆ ಧ್ವಂಸಗೈದ್ರು

    – ಶಾಸಕರ ಮನೆ ಎಂದುಕೊಂಡು ಪಕ್ಕದ ಮನೆ ಮೇಲೆ ದಾಳಿ
    – ಕಾರ್ ಕೀ ಕಿತ್ತುಕೊಂಡು ಡಿಕ್ಕಿ ಹೊಡೆಸಿದರು
    – ಪಬ್ಲಿಕ್‌ ಟಿವಿಗೆ ಘಟನೆ ವಿವರಿಸಿದ ಪ್ರತ್ಯಕ್ಷದರ್ಶಿಗಳು

    ಬೆಂಗಳೂರು: ಮನೆ ಪ್ರವೇಶಿಸಿ ನಿಲ್ಲಿಸಿದ್ದ ವಾಹನವನ್ನು ಧ್ವಂಸ. ಬಳಿಕ ಮನೆಯ ಒಳಗಡೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳು ಚೆಲ್ಲಾಪಿಲ್ಲಿ – ಇದು ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಗಲಾಟೆಯ ದೃಶ್ಯಗಳನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದು ಹೀಗೆ.

    ಘಟನೆ ಕುರಿತು ಆಂಜನೇಯ ದೇವಸ್ಥಾನದ ಮ್ಯಾನೇಜರ್ ಪುತ್ರ ಪಬ್ಲಿಕ್ ಟಿವಿಗೆ ವಿವರಿಸಿದ್ದು, ಯಾವುದೇ ಕಾರಣ ಹೇಳದೇ ಏಕಾಏಕಿ 30-35ಜನ ಮನೆಗೆ ನುಗ್ಗಿದರು. ನಂತರ ಒಡೆಯಲು ಶುರು ಮಾಡಿದರು, ಒಡೆಯಲು ಶುರು ಮಾಡುತ್ತಿದ್ದಂತೆ ನಾವು ಪಕ್ಕದ ಮನೆಗೆ ಹೋದೆವು. ಲಾಂಗ್ ಮಚ್ಚುಗಳನ್ನು ಎತ್ತಿ ತೋರಿಸಿಕೊಂಡು, ಬಂದು ಗಲಾಟೆ ಎಬ್ಬಿಸಿದರು ಎಂದು ತಿಳಿಸಿದ್ದಾರೆ.

    ಮೊದಲು ನಾಲ್ಕು ಜನ ದ್ವಿಚಕ್ರ ವಾಹನಗಳಲ್ಲಿ ಬಂದು ಅವರೇ ಇತರರಿಗೆ ಹೇಳಿಕೊಟ್ಟರು. ಇದನ್ನು ಒಡೆಯಿರಿ, ಹೀಗೆ ಒಡೆಯಿರಿ ಎಂದು ಹೇಳಿದರು. ಕಾರ್‌ಗಳನ್ನು ಹೊರಗಡೆ ತೆಗೆದುಕೊಂಡು ಹೋಗಿ ಗುದ್ದಿಸಿ ಜಖಂ ಮಾಡಿದರು. ಮೊದಲು ನಾಲ್ಕು ಜನ ಬಂದಾಗ ಅಖಂಡ ಶ್ರೀನಿವಾಸಮೂರ್ತಿ ಮನೆಯಾವುದು ಎಂದು ಕೇಳಿದರು. ಆ ಕಡೆ ಇದೆ ಎಂದು ಹೇಳಿದೆವು. ಆದರೂ ಎಲ್ಲವನ್ನು ಒಡೆದುಕೊಂಡು ಹೋದರು. ಅದನ್ನು ಹೇಳಿಕೊಂಡೇ ಒಡೆದು ಎಲ್ಲ ಚಿಂದಿ ಮಾಡಿದರು ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

    ಮೊದಲು 10-15 ಜನ ಲಾಂಗ್ ಜಳಪಿಸುತ್ತ ಬಂದರು. ಬರುತ್ತಿದ್ದಂತೆ ಧ್ವಂಸ ಮಾಡಲು ಮುಂದಾದರು. ನಾವು ಹೆದರಿಕೊಂಡು ಪಕ್ಕದ ಮನೆಗೆ ಹೋದೆವು. ನಂತರ 30-40 ಜನ ಬಂದು ಕೃತ್ಯ ಎಸಗಿದರು. ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಯಾವುದು ಎಂದು ಹೇಳಿಕೊಂಡೇ ಎಲ್ಲವನ್ನೂ ಒಡೆದು ಹಾಕಿದರು ಎಂದು ಅವರು ದುಃಖವನ್ನು ತೋಡಿಕೊಂಡರು.

    ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಡಿಪಿಐ ಬೆಂಗಳೂರು ಕಾರ್ಯದರ್ಶಿ ಎ1 ಆರೋಪಿ ಮುಜಾಮಿಲ್ ಪಾಶಾ ಸೇರಿದಂತೆ ಈ ವೆರೆಗೆ 110 ಜನರನ್ನು ಬಂಧಿಸಲಾಗಿದೆ. ಅಲ್ಲದೆ ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಈ ಕುರಿತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ. ಅಲ್ಲದೆ ಪರಿಸ್ಥಿತಿ ನಿಯಂತ್ರಿಸಲು ಹೈದರಾಬಾದ್ ಹಾಗೂ ಚೆನ್ನೈನಿಂದ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಕರೆಸಲಾಗುತ್ತಿದೆ.

    ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮತ್ತು ಕಚೇರಿ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ. ಶಾಸಕರ ಸಂಬಂಧಿ ನವೀನ್ ಎಂಬವರು ಫೇಸ್ ಬುಕ್ ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್ ಆಗಿ ರಾತ್ರಿ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ಮನೆ ಮುಂದೆ ಜಮಾಯಿಸಿ ಬೆಂಕಿ ಹಚ್ಚಿದೆ.

    100ಕ್ಕೂ ಹೆಚ್ಚು ಪುಂಡರು ಕಲ್ಲು ತೂರಾಟ ನಡೆಸಿ ದೊಣ್ಣೆ ಹಿಡಿದು ಕಚೇರಿಯನ್ನು ಒಡೆದು ಹಾಕಲು ಯತ್ನಿಸಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

    ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಆಫೀಸ್ ಬಳಿ ನಿಂತಿದ್ದ ಕಾರುಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು.

  • ಬೆಂಗಳೂರು ಗಲಾಟೆ- ಶಿವಮೊಗ್ಗ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

    ಬೆಂಗಳೂರು ಗಲಾಟೆ- ಶಿವಮೊಗ್ಗ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

    -ಧಾರವಾಡ ಅತ್ಯಾಚಾರ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ನೀಡಿ

    ಶಿವಮೊಗ್ಗ: ಇತ್ತೀಚಿಗೆ ಧಾರವಾಡ ಜಿಲ್ಲೆಯಲ್ಲಿ ನಡೆದ ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ, ಹತ್ಯೆ ಪ್ರಕರಣ ಹಾಗೂ ಮಂಗಳವಾರ ರಾತ್ರಿ ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದಿರುವ ಘಟನೆಯನ್ನು ಖಂಡಿಸಿ, ಇಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಗ್ರಾಮದಲ್ಲಿ ಬಾಲಕಿಯೊಬ್ಬಳು ತನ್ನ ತಾಯಿಯ ಅನಾರೋಗ್ಯದ ಕಾರಣ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮರಳುತ್ತಿದ್ದಳು. ಈ ವೇಳೆ ಬಾಲಕಿ ಮೇಲೆ ವಿಕೃತ ಕಾಮಿಯೊಬ್ಬ ಅತ್ಯಾಚಾರ ನಡೆಸಿದ್ದಾನೆ. ಈ ಘಟನೆಯಿಂದ ಮನನೊಂದ ಬಾಲಕಿ ಜು. 31 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ದುಷ್ಕೃತ್ಯ ಎಸಗಿರುವ ಆರೋಪಿಯನ್ನು ಕೂಡಲೇ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಈ ಮೂಲಕ ಮೃತ ಬಾಲಕಿ ಮತ್ತು ಅವಳ ಕುಟುಂಬಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

     

    ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ಸಾರ್ವಜನಿಕರ ಆಸ್ತಿ ಹಾಳು ಮಾಡಿರುವುದರ ವಿರುದ್ಧ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಹ ಸಿಎಂ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಡ ರಾತ್ರಿಯಲ್ಲಿ ಕೆಲವು ಕಿಡಿಗೇಡಿಗಳು ಸಿಕ್ಕಸಿಕ್ಕ ಬೈಕ್ ಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಜೊತೆಗೆ ಪೊಲೀಸ್ ಠಾಣೆಯನ್ನೇ ಧ್ವಂಸಗೊಳಿಸಿದ್ದಲ್ಲದೇ ಠಾಣೆ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿದ್ದಾರೆ. ಮಾಧ್ಯಮಗಳ ಮೇಲೂ ಹಲ್ಲೆ ನಡೆಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ಈ ರೀತಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ಮೂಲಕ ಇಂತಹವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

  • ಗಲಭೆಗೆ ಪ್ರಚೋದಿಸಿದ್ದ ನವೀನ್‍ಗೆ ಹಿಂದೂ ಹಿರಿಯರೇ ಬುದ್ಧಿ ಹೇಳಬೇಕಲ್ಲಾ?-ಸಿದ್ದರಾಮಯ್ಯ

    ಗಲಭೆಗೆ ಪ್ರಚೋದಿಸಿದ್ದ ನವೀನ್‍ಗೆ ಹಿಂದೂ ಹಿರಿಯರೇ ಬುದ್ಧಿ ಹೇಳಬೇಕಲ್ಲಾ?-ಸಿದ್ದರಾಮಯ್ಯ

    -ನನ್ನ ಹೇಳಿಕೆಯಲ್ಲಿ ತಪ್ಪೇನಿದೆ?
    -ದೇಗುಲ ರಕ್ಷಿಸಿದ ಮುಸ್ಲಿಂ ಯುವಕರಿಗೆ ಯತೀಂದ್ರ ಸಿದ್ದರಾಮಯ್ಯ ಧನ್ಯವಾದ

    ಬೆಂಗಳೂರು: ಗಲಭೆಗೆ ಪ್ರಚೋದಿಸಿದ್ದ ಹಿಂದೂ ಯುವಕ ನವೀನ್‍ಗೆ ಹಿಂದೂ ಹಿರಿಯರೇ ಬುದ್ಧಿ ಹೇಳಬೇಕಲ್ವಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

    ಹಿಂದು-ಮುಸ್ಲಿಮರು ಕೂಡಿ ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂಬ ನನ್ನ ಹೇಳಿಕೆಯನ್ನು ಹಿಂದೂ ವಿರೋಧಿ ಎನ್ನುವಂತೆ ತಿರುಚಲಾಗುತ್ತಿದೆ. ಮುಸ್ಲಿಮ್ ಗಲಭೆಕೋರರಿಗೆ ಮುಸ್ಲಿಮ್ ಹಿರಿಯರು, ಗಲಭೆಗೆ ಪ್ರಚೋದಿಸಿದ್ದ ಹಿಂದೂ ಯುವಕ ನವೀನ್‍ಗೆ ಹಿಂದೂ ಹಿರಿಯರೇ ಬುದ್ದಿ ಹೇಳಬೇಕಲ್ಲಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ? ಕಾವಲಭೈರಸಂದ್ರದಲ್ಲಿ ಗಲಭೆ ವರದಿ ಮಾಡಲು ಹೋಗಿರುವ ಮಾಧ್ಯಮ ಮಿತ್ರರ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ. ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ, ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

    ಸಿದ್ದರಾಮಯ್ಯ ಹೇಳಿದ್ದೇನು?: ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಂ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ. ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್‍ಗೆ ತಿಳಿಸಿದ್ದೇನೆ ಎಂದಿದ್ದಾರೆ.

    ಶಾಂತಿ ಸ್ಥಾಪನೆಯ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ. ಇಂತಹ ಕೋಮು ಗಲಭೆಗಳಲ್ಲಿ ಸಾವು-ನೋವಿಗೆ ಈಡಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕೆಂದು ಕೋರುತ್ತೇನೆ ಎಂದಿದ್ದರು. ಇದನ್ನೂ ಓದಿ: ಮತಾಂಧ ಮುಸ್ಲಿಮರಿಗೆ ಡಿಕೆಶಿ ಬೆಂಬಲ ಇದೆ ಅನ್ನಿಸುತ್ತೆ: ಸಚಿವ ಕೆ.ಎಸ್.ಈಶ್ವರಪ್ಪ

    ಯಾರು ಈ ನವೀನ್?: ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಪ್ತ ಈ ನವೀನ್. ಫೇಸ್‍ಬುಕ್ ಪೋಸ್ಟ್ ನಲ್ಲಿ ಒಂದು ಸಮುದಾಯದ ಬಗ್ಗೆ ನವೀನ್ ಅವಹೇಳನಕಾರಿಯಾಗಿ ಬರೆದುಕೊಂಡಿದ್ದರಿಂದ ಉದ್ರಿಕ್ತಗೊಂಡ ಗುಂಪು ಕಾವಲಬೈರಸಂದ್ರದಲ್ಲಿರುವ ಶಾಸಕರ ಮನೆಯ ಮೇಲೆ ದಾಳಿ ನಡೆಸಿತ್ತು. ಇದೀಗ ಸಿದ್ದರಾಮಯ್ಯ ಗಲಭೆಗೆ ಪ್ರಚೋದನೆ ನೀಡಿದ್ದು ನವೀನ್ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ. ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರಿಗೆ ಶಿಕ್ಷೆಯಾಗಬೇಕು: ಹೆಚ್‍ಡಿಕೆ

    ಯತೀಂದ್ರ ಸಿದ್ದರಾಮಯ್ಯ ಟ್ವೀಟ್: ಒಂದು ಗುಂಪು ಉದ್ರಿಕ್ತರಾಗಿ ಗಲಭೆ ಮಾಡಿದರೆ, ಮತ್ತೊಂದು ಮುಸ್ಲಿಂ ಯುವಕರ ಗುಂಪು ಮಾನವ ಸರಪಳಿ ನಿರ್ಮಿಸಿ ದೇಗುಲವನ್ನು ಗಲಭೆಕೋರರಿಂದ ರಕ್ಷಿಸಿದೆ. ಇಂತಹ ವಿವೇಚನೆಯನ್ನು ಮಾನವೀಯತೆಯನ್ನು ಮೆರೆದ ಯುವಕರಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ.

  • ಮತಾಂಧ ಮುಸ್ಲಿಮರಿಗೆ ಡಿಕೆಶಿ ಬೆಂಬಲ ಇದೆ ಅನ್ನಿಸುತ್ತೆ: ಸಚಿವ ಕೆ.ಎಸ್.ಈಶ್ವರಪ್ಪ

    ಮತಾಂಧ ಮುಸ್ಲಿಮರಿಗೆ ಡಿಕೆಶಿ ಬೆಂಬಲ ಇದೆ ಅನ್ನಿಸುತ್ತೆ: ಸಚಿವ ಕೆ.ಎಸ್.ಈಶ್ವರಪ್ಪ

    -ಇಂತಹ ದುಷ್ಕೃತ್ಯವನ್ನು ಇತರೆ ಮುಸ್ಲಿಮರು ಖಂಡಿಸಬೇಕು

    ಶಿವಮೊಗ್ಗ: ಬೆಂಗಳೂರಿನಲ್ಲಿ ಮತಾಂಧ ಮುಸಲ್ಮಾನರ ದಾಳಿ ಖಂಡನೀಯ. ಆದರೆ ಈ ಘಟನೆ ನಡೆದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಖಂಡನೆ ವ್ಯಕ್ತಪಡಿಸಿಲ್ಲ. ಇದನ್ನು ನೋಡಿದರೆ ಇಂತಹ ಮತಾಂಧ ಮುಸಲ್ಮಾನರಿಗೆ ಡಿಕೆಶಿ ಬೆಂಬಲ ಇದೆ ಅನಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ರವರ ಮನೆಯ ದಾಳಿ, ಬೆಂಗಳೂರಿನಲ್ಲಿ ನಡೆದ ದುಷ್ಕೃತ್ಯ ಖಂಡನೀಯವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದ್ದಾರೆ. ಇದನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೇ ಎಲ್ಲರೂ ಖಂಡಿಸಬೇಕಿದೆ ಎಂದರು. ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರಿಗೆ ಶಿಕ್ಷೆಯಾಗಬೇಕು: ಹೆಚ್‍ಡಿಕೆ

    ನಾನು ಎಲ್ಲಾ ಮುಸ್ಲಿಮರು ಕೆಟ್ಟವರು ಎಂದು ಹೇಳುತ್ತಿಲ್ಲ. ಆದರೆ ಮತಾಂಧ ಮುಸಲ್ಮಾರು ಮಾತ್ರ ಇಂತಹ ದುಷ್ಕೃತ್ಯದಲ್ಲಿ ತೂಡಗಿಕೊಳ್ಳುತ್ತಾರೆ. ಇಂತಹ ಮತಾಂಧ ಮುಸ್ಲಿಮರ ವಿರುದ್ಧ ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ಖಂಡಿಸಬೇಕಿದೆ ಎಂದರು. ದುಷ್ಕೃತ್ಯದಲ್ಲಿ ಪೊಲೀಸರು, ಮಾಧ್ಯಮದವರ ಮೇಲೂ ಹಲ್ಲೆ ನಡೆದಿದೆ. ಉಗ್ರಗಾಮಿಗಳನ್ನು ಸದೆಬಡೆದ ದೇಶ ಭಾರತ. ಹೀಗಾಗಿ ಇಂತಹ ದುಷ್ಕೃತ್ಯಗಳಿಗೆ ಎದರುವ ಮಾತೇ ಇಲ್ಲ. ಆದರೆ ಈ ಘಟನೆ ಬಗ್ಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾಕೆ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನೆ ಮಾಡಿದರು. ಡಿ.ಕೆ.ಶಿವಕುಮಾರ್ ಇಂತಹವರ ವಿರುದ್ದ ಹೇಳಿಕೆ ನೀಡಬೇಕಿತ್ತು. ಇಂತಹ ಮತಾಂಧ ಮುಸ್ಲಿಂರಿಗೆ ಡಿ.ಕೆ.ಶಿವಕುಮಾರ್ ಬೆಂಬಲವಿದೆ ಎಂದೆನ್ನಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಅಶಾಂತಿಯೇ ಕೆಲವರ ರಾಜಮಾರ್ಗ ಎಂದಾದ್ರೆ, ಆ ಮಾರ್ಗವನ್ನೇ ಬದಲಿಸಲು ಸರ್ಕಾರ ಬದ್ಧ: ಆರ್.ಅಶೋಕ್

    ಘಟನೆಯಲ್ಲಿ ಯಾರೇ ಇರಲಿ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಪಕ್ಷಬೇಧ ಮರೆತು ಎಲ್ಲಾ ದೇಶಭಕ್ತರು ಒಂದಾಗಿ ಖಂಡಿಸಬೇಕಿದೆ. ಮತಾಂಧ ಮುಸ್ಲಿಂರಿಗೆ ಹಿಂದಿನ ಸರ್ಕಾರಗಳ ಬೆಂಬಲದಿಂದ ಈ ರೀತಿ ಬಲಿತಿದ್ದಾರೆ. ಮುಂದೆ ಈ ರೀತಿ ಆಗಲು ಬಿಡಲ್ಲ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

    ಡಿಕೆಶಿ ಪ್ರತಿಕ್ರಿಯೆ: ಯಾರು ಕೂಡ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ನಿನ್ನೆ ನಡೆದ ಘಟನೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ. ಶಾಸಕರಾಗಲಿ, ಯಾರೇ ಆಗಲಿ ಅವರ ಮೇಲೆ ದಾಳಿ ಮಾಡಬಾರದು. ಪೊಲೀಸ್ ಠಾಣೆಯ ಆಸ್ತಿ- ಪಾಸ್ತಿಗೆ ಮಾಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ.

  • ಕೆಲ ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಗಲಭೆ ಮಾಡ್ತಿವೆ: ಸಚಿವ ಗೋಪಾಲಯ್ಯ

    ಕೆಲ ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಗಲಭೆ ಮಾಡ್ತಿವೆ: ಸಚಿವ ಗೋಪಾಲಯ್ಯ

    ಹಾಸನ: ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಗಲಭೆ ಮಾಡುತ್ತಿದ್ದು, ಬೆಂಗಳೂರಿನ ಘಟನೆ ಪೂರ್ವ ನಿಯೋಜಿತ ಗಲಭೆಯಂತೆ ಕಾಣುತ್ತಿದೆ ಎಂದು ಸಚಿವ ಗೋಪಾಲಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

    ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಸಚಿವ ಗೋಪಾಲಯ್ಯ, ಯಡಿಯೂರಪ್ಪ ನೇತೃತ್ವದ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗಡದುಕೊಂಡು ಶಾಂತಿಯುತವಾಗಿ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿಲ್ಲ. ಗೃಹಸಚಿವರಿಗೆ ದಕ್ಷತೆಯಿದ್ದು ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಬೆಳಗ್ಗೆಯೇ ಬೆಂಗಳೂರಿನಿಂದ ಬಂದಿದ್ದೇನೆ. ಮಾಧ್ಯಮದಲ್ಲಿ ನೋಡಿ ನನಗೆ ವಿಷಯ ತಿಳಿಯಿತು. ಘಟನೆ ಹಿಂದೆ ಎಸ್‍ಡಿಪಿಐ ಸದಸ್ಯನ ಕೈವಾಡ ಇರುವ ಬಗ್ಗೆ ಗೃಹ ಸಚಿವರು ಮಾಹಿತಿ ನೀಡುತ್ತಾರೆ. ಆದರೆ ಗಲಭೆಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು. ಇದನ್ನೂ ಓದಿ: ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಭಯದಿಂದ ಬಾತ್‍ರೂಮಿನಲ್ಲಿ 3 ಗಂಟೆ ಬಚ್ಚಿಟ್ಟುಕೊಂಡಿದ್ದ ಕುಟುಂಬ

    ಬಿಜೆಪಿ ಸರ್ಕಾರ ಬಂದ ಮೇಲೆ ಯಾವುದೇ ಸಮುದಾಯದ ಮೇಲೆ ಗಲಾಟೆ ಆಗಿಲ್ಲ. ಕೆಲವು ದುಷ್ಟ ಶಕ್ತಿಗಳು ಸರ್ಕಾಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಪರಿಸ್ಥಿತಿಯನ್ನು ಸಮರ್ಥವಾಗಿ ಗೃಹ ಸಚಿವರು ನಿಭಾಯಿಸುತ್ತಾರೆ. ಸರ್ಕಾರ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ದುಷ್ಟ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಇದನ್ನೂ ಓದಿ:  ಬೆಂಕಿ ಹಚ್ಚೋದು ನಮ್ಮ ಸಂಸ್ಕೃತಿಯಲ್ಲ, ನೆಲದ ಕಾನೂನೇ ಅಂತಿಮ: ಖಾದರ್