Tag: Bengaluru Riots

  • ನೈಜ ಆರೋಪಿಯ ಪತ್ತೆ ಹಚ್ಚುವ ಬದಲು ಸರ್ಕಾರದಿಂದ ಅಮಾಯಕರ ಬಂಧನ – ಖಾದರ್ ಆರೋಪ

    ನೈಜ ಆರೋಪಿಯ ಪತ್ತೆ ಹಚ್ಚುವ ಬದಲು ಸರ್ಕಾರದಿಂದ ಅಮಾಯಕರ ಬಂಧನ – ಖಾದರ್ ಆರೋಪ

    – ಬಂಧಿಸಿದ ನಿರಪರಾಧಿಗಳಿಗೆ ಮುಕ್ತಿ ನೀಡಿ

    ಬೆಂಗಳೂರು: ನಗರದ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸರ್ಕಾರ ನೈಜ ಅಪರಾಧಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಗಂಭೀರ ಆರೋಪ ಮಾಡಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರದ ಭಯ ಇದ್ರೆ ಪುಂಡರು ಈ ರೀತಿ ವರ್ತಿಸುತ್ತಿರಲಿಲ್ಲ. ಇದು ಸರ್ಕಾರದ ವೈಫಲ್ಯವಲ್ಲದೆ ಮತ್ತೇನು? ನೈಜ ಆರೋಪಿಯ ಪತ್ತೆ ಹಚ್ಚುವ ಬದಲು ಸರ್ಕಾರ ಅಮಾಯಕರನ್ನ ಬಂಧಿಸುತ್ತಿದೆ. ಈ ಮೂಲಕ ನೈಜ ಅಪರಾಧಿಗಳಿಗೆ ರಕ್ಷಣೆ ನೀಡ್ತಾ ಇದೆ ಎಂದರು.

    ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಬೀಳೋ ತನಕ, ಪೊಲೀಸ್ ಠಾಣೆ ಸುಟ್ಟು ಬೂದಿಯಾಗೋ ತನಕ, ಪೊಲೀಸರು ಏನೂ ಮಾಡಿಲ್ಲ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆಯಾದ ಪ್ರಕರಣದ ಕಥೆ ಏನಾಯ್ತು ಗೊತ್ತಿಲ್ಲ. ಮಂಗಳೂರು ಗಲಭೆಗೆ ಕೇರಳದಿಂದ ಬಂದವರು ಕಾರಣ ಎಂದಿರಿ, ಹಾಗಿದ್ದರೆ ಒಬ್ಬ ಕೇರಳಿಗರನ್ನ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

    ರಾಜಕೀಯದ ಕೆಸರೆರಚಾಟ ಮಾಡುವ ಬದಲು ಸಮಾಜಘಾತುಕ ಶಕ್ತಿ ಯಾರೇ ಇರಲಿ ಅವರನ್ನ ಮಟ್ಟ ಹಾಕಿ ನಿಮ್ಮ ಬದ್ಧತೆಯನ್ನ ತೋರಿಸಿ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಅಧಿಕಾರದಲ್ಲಿ ಕುಳಿತು ಇನ್ನೊಬ್ಬರ ಮೇಲೆ ಬೆರಳು ತೋರಿಸುವುದೇ ನಿಮ್ಮ ಸ್ವರ್ಣಯುಗವೇ? ಬಂಧಿಸಿದ ನಿರಪರಾಧಿಗಳಿಗೆ ಮುಕ್ತಿ ನೀಡಿ, ನೈಜ ಅಪರಾಧಿಯನ್ನ ಶಿಕ್ಷಿಸಿ, ಸಮಾಜವನ್ನ ರಕ್ಷಿಸಿ ಎಂದು ತಿಳಿಸಿದ್ದಾರೆ.

    ಶಾಸಕ ತನ್ವೀರ್ ಸೇಠ್ ಮೇಲಿನ ಮಾರಣಾಂತಿಕ ಹಲ್ಲೆ ತಡೆಯಲಾಗಲಿಲ್ಲ. ಆರೋಪಗಳಿನ್ನೂ ಪತ್ತೆ ಹಚ್ಚಲಾಗಲಿಲ್ಲ. ಪ್ರವಾದಿಗೆ ನಿಂದಿಸಿದ ವ್ಯಕ್ತಿ ಪಕ್ಕದಲ್ಲೇ ಇದ್ದರೂ ಬಂಧಿಸಲಿಲ್ಲ ಎಂದು ಕಿಡಿಕಾರಿದ್ದಾರೆ.

  • ಗಲಭೆಯ ಬೆಂಕಿಯಲ್ಲಿ ಬಿಜೆಪಿ ಸರ್ಕಾರ ರೊಟ್ಟಿ ಬಡಿಯುತ್ತಿದೆ: ಸಿದ್ದರಾಮಯ್ಯ

    ಗಲಭೆಯ ಬೆಂಕಿಯಲ್ಲಿ ಬಿಜೆಪಿ ಸರ್ಕಾರ ರೊಟ್ಟಿ ಬಡಿಯುತ್ತಿದೆ: ಸಿದ್ದರಾಮಯ್ಯ

    -ಕಂದಾಯ ಸಚಿವರಿಗೆ ಬೆಂಗಳೂರಿನಲ್ಲೇನು ಕೆಲಸ?
    -ಬಾದಾಮಿ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳಿದ ಮಾಜಿ ಸಿಎಂ

    ಬೆಂಗಳೂರು: ಉತ್ತರ ಕರ್ನಾಟಕದ ಜನ ಪ್ರವಾಹದ ಸಂಕಷ್ಟದಲ್ಲಿ ಸಿಲುಕಿದ್ರೆ, ಬಿಜೆಪಿ ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರೊಟ್ಟಿ ಬಡಿಯುತ್ತಾ ಕುಳಿತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಇಡೀ ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿಹೋಗಿದೆ. ಬಿಜೆಪಿ ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರಾಜಕೀಯದ ರೊಟ್ಟಿ ಬಡಿಯುತ್ತಾ ಕೂತಿದೆ. ನೊಂದ ಜನರ ಗೋಳು ಅರಣ್ಯರೋದನ. ಅತಿವೃಷ್ಟಿಯ ಪರಿಹಾರದಲ್ಲಿ ಕಳೆದ ವರ್ಷದ ವೈಫಲ್ಯ. ಈ ಬಾರಿ ಜನರ ಕಷ್ಟ-ಕಾರ್ಪಣ್ಯಗಳನ್ನು ದುಪ್ಪಟ್ಟುಗೊಳಿಸಿದೆ.

    ಗೃಹಸಚಿವರು ಅತಿವೃಷ್ಟಿ ಸಮೀಕ್ಷೆಗೆ ಪ್ರವಾಸ ಮಾಡುತ್ತಿದ್ದಾರೆ. ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಕಾವಲಭೈರಸಂದ್ರ ಗಲಭೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕಂದಾಯ ಸಚಿವರಿಗೆ ಬೆಂಗಳೂರಿನಲ್ಲೇನು ಕೆಲಸ? ಸಿಎಂ ಯಡಿಯೂರಪ್ಪನವರೇ ಮೊದಲು ಇವರನ್ನು ಪ್ರವಾಹಪೀಡಿತ ಪ್ರದೇಶಕ್ಕೆ ಕಳಿಸಿಕೊಡಿ ಎಂದು ಆಗ್ರಹಿಸಿದ್ದಾರೆ.

    ಕ್ಷೇತ್ರದ ಜನರಲ್ಲಿ ಕ್ಷಮೆ: ನನ್ನ ಕ್ಷೇತ್ರವಾದ ಬಾದಾಮಿಯ ಜನ ಪ್ರವಾಹದಿಂದಾಗಿ ಸಂಕಷ್ಟದಲ್ಲಿದ್ದಾರೆ. ಕೊರೋನಾ ಸೋಂಕಿನ ನಂತರ ಕಡ್ಡಾಯ ವಿಶ್ರಾಂತಿಯಲ್ಲಿರುವುದರಿಂದ ಕ್ಷೇತ್ರಕ್ಕೆ ಭೇಟಿ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಅಧಿಕಾರಿಗಳು ಮತ್ತು ನಮ್ಮ ಪಕ್ಷದ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

  • ಬೆಂಗಳೂರು ಗಲಭೆ – ಕಾಂಗ್ರೆಸ್ ಶೋಧಿಸಿದ ‘ಸತ್ಯ’ ಏನು?

    ಬೆಂಗಳೂರು ಗಲಭೆ – ಕಾಂಗ್ರೆಸ್ ಶೋಧಿಸಿದ ‘ಸತ್ಯ’ ಏನು?

    ಬೆಂಗಳೂರು: ರಾಜಧಾನಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಡಿಸಿಎಂ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿತ್ತು. ಈ ಸಮಿತಿಯ ವರದಿ ಇನ್ನೆರಡು ದಿನಗಳಲ್ಲಿ ಕೆಪಿಸಿಸಿಯ ಕೈ ಸೇರಲಿದೆ.

    ಇಡೀ ಘಟನೆ ಕಾಂಗ್ರೆಸ್ ಮೂವರು ನಾಯಕರ ವಿರುದ್ಧ ಸುತ್ತುತ್ತಿದೆ. ಪಕ್ಷದ ಮುಖಂಡರ ಒಳಜಗಳದಿಂದ ಈ ಗಲಾಟೆಯ ಇಷ್ಟು ದೊಡ್ಡಮಟ್ಟದ ರೂಪ ಪಡೆದುಕೊಂಡಿರುವ ಬಗ್ಗೆ ಸತ್ಯ ಶೋಧನ ಸಮಿತಿ ನೀಡಿದ ವರದಿಯಲ್ಲಿದೆ ಎಂಬುವುದು ತಿಳಿದು ಬಂದಿದೆ.

    ಕಾಂಗ್ರೆಸ್ ಶೋಧಿಸಿದ ‘ಸತ್ಯ’: ಬೆಂಗಳೂರು ಗಲಭೆಗೆ ಕಾಂಗ್ರೆಸ್ ನಾಯಕರ ನಡುವಿನ ಒಳ ಜಗಳವೇ ಕಾರಣವಾಗಿದೆ. ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಮೂವರು ನಾಯಕರ ವರ್ತನೆಯಿಂದಾಗಿ ಈ ಪ್ರಮಾಣದ ಗಲಾಟೆ ನಡೆದಿದೆ. ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಕಾರ್ಪೊರೇಟರ್ ಗಳು ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಇರಬೇಕು ಎಂದು ಪರಸ್ಪರ ಕತ್ತಿ ಮಸೆದಿದ್ದಾರೆ. ಒಬ್ಬರ ವಿರುದ್ದ ಒಬ್ಬರು ಹಗೆ ಸಾಧಿಸಿ ಎರಡನೇ ಹಂತದ ನಾಯಕರನ್ನ ಎತ್ತಿ ಕಟ್ಟಿದ್ದು ಈ ಗಲಭೆಗೆ ಕಾರಣ ಸಮಿತಿ ನೀಡಿದ ವರದಿಯಲ್ಲಿದೆ ಎನ್ನಲಾಗಿದೆ.

    ಶಾಸಕರ ಸಂಬಂಧಿ ಧಾರ್ಮಿಕ ಭಾವನೆ ಕೆರಳಿಸುವ ಪೋಸ್ಟರ್ ಹಾಕಿದ್ದರೂ ಅದನ್ನು ಸರಿಪಡಿಸುವ ಪ್ರಯತ್ನ ಮಾಡದಿರುವುದು. ತಮ್ಮ ಮೇಲೆ ನೇರ ಆರೋಪ ಬರಬಾರದು ಅನ್ನೋ ಕಾರಣಕ್ಕೆ ಬೇರೆ ಬೇರೆ ಸಂಘಟನೆಗಳ ಮೂಲಕ ಗಲಭೆಗೆ ಕುಮ್ಮಕ್ಕು ನೀಡಿರುವ ಸಾಧ್ಯತೆಗಳಿವೆ.

    ಸಂಪತ್‍ರಾಜ್ ವಿರುದ್ಧ ಕೈ ಆರೋಪಪಟ್ಟಿ: ಮಾಜಿ ಮೇಯರ್ ಸಂಪತ್‍ರಾಜ್ ವಿರುದ್ಧ ಇಡೀ ಘಟನೆಯ ಪ್ರಮುಖ ಆರೋಪ ಕೇಳಿ ಬಂದಿದೆ. ಸಂಪತ್ ರಾಜ್ ಕಳೆದ ವಿಧಾನಭಾ ಚುನಾವಣೆಯಲ್ಲಿ ಪುಲಿಕೇಶಿನಗರದ ಟಿಕೆಟ್ ಕೇಳಿದ್ದರು. ಆದರೆ ಒಲ್ಲದ ಮನಸ್ಸಿನಿಂದ ಸಿ.ವಿ.ರಾಮನ್ ನಗರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಚುನಾವಣೆ ಸೋತ ನಂತರ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲೆ ಸಂಪತ್‍ರಾಜ್ ಓಡಾಟ ನಡೆಸಿದ್ದರು.

    ಸಂಪತ್ ರಾಜ್ ಮುಂದಿನ ಚುನಾವಣೆಗೆ ಪುಲಿಕೇಶಿನಗರ ಟಿಕೆಟ್ ನನಗೆ ಎಂದು ಹೇಳಿಕೊಂಡು ಓಡಾಟ ನಡೆಸಿದ್ದಾರೆ ಎನ್ನಲಾಗಿದೆ. ಮೇಯರ್ ಆಗಿದ್ದ ನಾನು ನಿಮ್ಮ ಮಾತು ಯಾಕೆ ಕೇಳಬೇಕು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಸೆಡ್ಡು ಹೊಡೆದಿದ್ದರಂತೆ. ತಮ್ಮ ಜೊತೆಗೆ ಕ್ಷೇತ್ರದ ಉಳಿದ ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್ ಗಳನ್ನ ಕಟ್ಟಿಕೊಂಡು ಅಖಂಡ ವಿರುದ್ಧ ರಾಜಕಾರಣ ಮಾಡಿದ್ದರು. ಗಲಭೆಗೆ ಕಾರಣವಾದ ದಿನ ಪ್ರಚೋದನೆ ನೀಡಿರುವ ಬಗ್ಗೆ ಪೊಲೀಸರಿಗೆ ಸಂಪತ್ ರಾಜ್ ಬಗ್ಗೆ ಪ್ರಬಲವಾದ ಅನುಮಾನ ವ್ಯಕ್ತವಾಗಿದೆ. ಒಂದು ವೇಳೆ ಪ್ರಕರಣದಲ್ಲಿ ಸಂಪತ್‍ರಾಜ್ ಕೈವಾಡ ಸಾಬೀತಾದರೆ ಕ್ರಮ ಕೈಗೊಳ್ಳಬಹುದು ಎಂದು ಸತ್ಯ ಶೋಧನೆ ವರದಿಯಲ್ಲಿದೆ ಎಂದು ತಿಳಿದು ಬಂದಿದೆ.

  • ಬೆಂಗ್ಳೂರು ಗಲಭೆಯಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ: ಡಿಕೆಶಿ

    ಬೆಂಗ್ಳೂರು ಗಲಭೆಯಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ: ಡಿಕೆಶಿ

    ನವದೆಹಲಿ: ಬೆಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವಿಚಾರಣೆ ಸಂಬಂಧ ಪ್ರತಿಕ್ರಿಯಿಸಿ, ಉದ್ದೇಶಪೂರ್ವಕವಾಗಿ ನಮ್ಮ ನಾಯಕರ ವಿಚಾರಣೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಪಾತ್ರ ಇದೇ ಎಂದು ಸಾಬೀತು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಸರ್ಕಾರದ ಹುಳುಕು ಮುಚ್ಚಿಕೊಳ್ಳಲು ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ಕಾಂಗ್ರೆಸ್ ಮೇಲೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನಾನು ಪೊಲೀಸ್ ಮೂಲಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ನಮ್ಮ ನಾಯಕರದ್ದು ಯಾವುದೇ ಪಾತ್ರ ಈ ಪ್ರಕರಣದಲ್ಲಿಲ್ಲ ಎಂದರು.

    ನನಗಿರುವ ಮಾಹಿತಿ ಪ್ರಕಾರ, ನವೀನ್ ಬಿಜೆಪಿ ಕಾರ್ಯಕರ್ತ. ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮುಖ್ಯ, ಈ ಅಂಶವನ್ನೇ ನವೀನ್ ಹಂಚಿಕೊಂಡಿದ್ದಾರೆ. ನನಗೆ ಶುಭಾಶಯ ಕೋರಿದಾಕ್ಷಣ ಕಾಂಗ್ರೆಸ್ ಕಾರ್ಯಕರ್ತ ಅಲ್ಲ. ನವೀನ್ ಮೇಲೆ ಆರೋಪ ಬಂದಾಗ ಯಾಕೆ ಬಂಧಿಸಿಲ್ಲ ಎಂದು ಪೊಲೀಸರನ್ನು ಕೇಳಿ. ಶಾಸಕರಿಗೆ ರಕ್ಷಣೆ ನೀಡಲು ಸರ್ಕಾರಕ್ಕೆ ಸಾಧ್ಯವಾಗಲ್ಲ. ಬಿಜೆಪಿ, ದಲಿತ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.

    ಇದೇ ಸಂದರ್ಭದಲ್ಲಿ ಎರಡನೇ ಹಂತದಲ್ಲಿ ಆಪರೇಷನ್ ಕಮಲ ವಿಚಾರದ ಸಂಬಂಧ ಪ್ರತಿಕ್ರಿಯಿಸಿ, ಬಿಜೆಪಿ ಮತ್ತೊಂದು ಆಪರೇಷನ್ ಮಾಡಿದ್ರೆ ಸ್ವಾಗತ. ಎಷ್ಟು ಜನರನ್ನು ಆಪರೇಷನ್ ಮಾಡ್ತಾರೆ ಮಾಡಲಿ. ಅವರು ಎಲ್ಲ ಶಾಸಕರ ಸಂಪರ್ಕದಲ್ಲಿದ್ದಾರೆ. ನನ್ನನೂ ಸೇರಿದಂತೆ 224 ಶಾಸಕರ ಸಂಪರ್ಕದಲ್ಲಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

  • ಗಲಭೆ ಮಾಡಿದವ್ರಿಗೆ ಶಿಕ್ಷೆಯಾಗ್ಬೇಕೆಂದು ಯಾವೊಬ್ಬ ಕೈ ನಾಯಕರೂ ಹೇಳಿಲ್ಲ: ಬಿ.ಸಿ ಪಾಟೀಲ್

    ಗಲಭೆ ಮಾಡಿದವ್ರಿಗೆ ಶಿಕ್ಷೆಯಾಗ್ಬೇಕೆಂದು ಯಾವೊಬ್ಬ ಕೈ ನಾಯಕರೂ ಹೇಳಿಲ್ಲ: ಬಿ.ಸಿ ಪಾಟೀಲ್

    ದಾವಣಗೆರೆ: ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಇದೂವರೆಗೂ ಯಾವೊಬ್ಬ ಕಾಂಗ್ರೆಸ್ ನಾಯಕರೂ ಹೇಳಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ದಾವಣಗೆರೆಯ ಕತ್ತಲಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಗಳನ್ನು ಮುಲಾಜಿಲ್ಲದೆ ನಿಷೇಧ ಮಾಡಬೇಕು. ಈ ಪ್ರಕರಣದ ಹಿಂದೆ ಬಹುದೊಡ್ಡ ರಾಜಕೀಯ ಪಿತೂರಿ ಇದೆ. ಸ್ವ-ಪಕ್ಷದ ದಲಿತ ಶಾಸಕನ ರಕ್ಷಣೆಗೆ ಕಾಂಗ್ರೆಸ್ ನಾಯಕರು ನಿಲ್ಲುತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ಆಗಿಲ್ಲ. ಆರೋಪಿಗಳನ್ನು ಅಮಾಯಕರು ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಗರಂ ಆದರು.

    ಠಾಣೆಗೆ ಶಾಸಕರ ಮನೆಗೆ ಬೆಂಕಿಬಿಟ್ಟವರು ಅಮಾಯಕರಾ?, ಅಖಂಡ ಶ್ರೀನಿವಾಸರ ಮನೆ ಮೇಲೆ ನಡೆದ ದಾಳಿ ಪೂರ್ವ ನಿಯೋಜಿತ ಸಂಚು ಆಗಿದೆ. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಇದುವರೆಗೂ ಗಲಭೆ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಯಾವೊಬ್ಬ ಕಾಂಗ್ರೆಸ್ ನಾಯಕರು ಕೂಡ ಹೇಳಿಲ್ಲ ಎಂದರು.

    ಈ ಗಲಭೆ ಹಿಂದಿರುವ ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಬೇಕು. ಸಂಘಟನೆಗಳ ನಿಷೇಧದ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸರ್ಕಾರ ಸುಭದ್ರವಾಗಿದೆ. ದುಷ್ಟಶಕ್ತಿಗಳನ್ಮು ಸರ್ಕಾರ ಹೆಡೆಮುರಿ ಕಟ್ಟುತ್ತದೆ ಎಂದು ತಿಳಿಸಿದರು.

    ಇದೇ ವೇಳೆ ಯೂರಿಯಾ ಗೊಬ್ಬರ ಕೊರತೆಗೆ ಪ್ರತಿಕ್ರಿಯಿಸಿದ ಅವರು, ಯೂರಿಯಾ ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ರಾಜ್ಯಕ್ಕೆ 27 ಸಾವಿರ ಟನ್ ಯೂರಿಯಾ ಗೊಬ್ಬರ ಬಂದಿದೆ. ಶಿವಮೊಗ್ಗ-ದಾವಣಗೆರೆ ಭಾಗಕ್ಕೆ 2007 ಟನ್ ಯೂರಿಯಾ ಬೇಕಿದೆ. ರೈತರಿಗೆ ಯೂರಿಯಾ ಗೊಬ್ಬರ ಕೊರತೆ ಆಗಲ್ಲ. ಮೂರ್ನಾಲ್ಕು ದಿನದಲ್ಲಿಯೇ ಯೂರಿಯಾ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದರು.

  • ಜಮೀರ್ ಇನ್ ಟ್ರಬಲ್ – ಪಕ್ಷದ ನಾಯಕರಿಂದ ಎಚ್ಚರಿಕೆ

    ಜಮೀರ್ ಇನ್ ಟ್ರಬಲ್ – ಪಕ್ಷದ ನಾಯಕರಿಂದ ಎಚ್ಚರಿಕೆ

    -ಪರಿಹಾರ ಕೊಡ್ತಾರಾ ಜಮೀರ್ ಅಹ್ಮದ್?

    ಬೆಂಗಳೂರು: ಕೆಜಿ ಹಳ್ಳಿ ಗಲಾಟೆಯಲ್ಲಿ ಮೃತರಾದ ಮೂವರ ಕುಟುಂಬಕ್ಕೆ ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ 5 ಲಕ್ಷ ರೂ. ಪರಿಹಾರ ನೀಡುವದಾಗಿ ಘೋಷಣೆ ಮಾಡಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕರು ನೀಡಿರುವ ಎಚ್ಚರದ ಸಂದೇಶಕ್ಕೆ ಜಮೀರ್ ಅಹ್ಮದ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಕೆ.ಜೆ.ಹಳ್ಳಿ ಗಲಾಟೆಯಲ್ಲಿ ಮೃತಪಟ್ಟ ಮೂವರು ಯುವಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಕೊಡುವುದಾಗಿ ಶಾಸಕ ಜಮೀರ್ ಅಹ್ಮದ್ ಘೋಷಿಸಿದ್ದರು. ಆದರೆ ಅನಗತ್ಯ ಗಲಭೆ ಮಾಡಿದವರ ಕುಟುಂಬಕ್ಕೆ ಪರಿಹಾರ ಕೊಟ್ಟರೆ ಬೇರೆಯದೆ ಸಂದೇಶ ರವಾನೆ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಾದರೆ ಕೊಡಿ. ಆದರೆ ಈ ವಿಷಯ ಮಾತ್ರ ಬಹಿರಂಗ ಆಗಬಾರದು ಎಂದು ಕಾಂಗ್ರೆಸ್ ನಾಯಕರು ಎಂದಿದ್ದಾರೆ. ಎಲ್ಲಿಯೂ ಸಹ ಪರಿಹಾರ ಕೊಟ್ಟೆ ಅಂತ ಹೇಳಬಾರದು ಎಂದು ಬಹಿರಂಗವಾಗಿ ಹೇಳುವಂತಿಲ್ಲ ಎಂದು ವಾರ್ನ್ ಮಾಡಿದ್ದಾರೆ ಎನ್ನಲಾಗಿದೆ.

    ಮುಸ್ಲಿಂ ಸಮುದಾಯದ ಪ್ರಶ್ನಾತೀತ ನಾಯಕ ನಾನೇ ಎಂದುಕೊಂಡ ಜಮೀರ್ ಗಲಭೆಯಲ್ಲಿ ಮೃತರಾದವರ ಕುಟುಂಬಕ್ಕೆ ಪರಿಹಾರ ಘೋಷಿಸಿದರು. ಪರಿಹಾರ ಕೊಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಗುಟ್ಟು ಗುಟ್ಟಾಗಿ ಪರಿಹಾರ ಕೊಡಿ ಅನ್ನೋ ಪಕ್ಷದ ನಾಯಕರ ಮಾತಿಗೆ ಜಮೀರ್ ಅಹ್ಮದ್ ಗೊಂದಲದಲ್ಲಿ ಸಿಲುಕಿದ್ದಾರೆ. ಪರಿಹಾರ ಕೊಟ್ಟರು ಕೊಟ್ಟೆ ಅಂತ ಹೇಳಿಕೊಳ್ಳುವಂತಿಲ್ಲ ಎಂಬ ಪಕ್ಷದ ನಾಯಕರ ವರಸೆ ಕಂಡು ಜಮೀರ್ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿದಂತಾಗಿದ್ದಾರೆ. ಆಡಿದ ಮಾತಿನಂತೆ ಜಮೀರ್ ಪರಿಹಾರ ಕೊಡ್ತಾರಾ? ಅಥವಾ ಸೈಲೆಂಟ್ ಪರಿಹಾರಕ್ಕೆ ಒಪ್ಪದೆ ಸುಮ್ಮನಾಗ್ತಾರಾ ಅನ್ನೋದೆ ಸದ್ಯದ ಕುತೂಹಲ.

  • ಸಿಎಂ ಭೇಟಿಯಾದ ಅಖಂಡ ಶ್ರೀನಿವಾಸ್- ಗಲಭೆ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹ

    ಸಿಎಂ ಭೇಟಿಯಾದ ಅಖಂಡ ಶ್ರೀನಿವಾಸ್- ಗಲಭೆ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹ

    – ಭದ್ರತೆ ಹೆಚ್ಚಳಕ್ಕೂ ಸಿಎಂ ಬಳಿ ಮನವಿ
    – ಕಾಂಗ್ರೆಸ್ ಬಿಡೋ ಮಾತೇ ಇಲ್ಲ

    ಬೆಂಗಳೂರು: ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಭೇಟಿ ಮಾಡಿದ್ದಾರೆ.

    ಘಟನೆಯ ಬಳಿಕ ಮೊದಲ ಬಾರಿಗೆ ಶಾಸಕ ಅರವಿಂದ ಲಿಂಬಾವಳಿ ಜೊತೆ ಬಂದು ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಅಖಂಡ, ಗಲಭೆ ಕುರಿತು ಬಿಎಸ್‍ವೈ ಜೊತೆ ಚರ್ಚೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸಿಎಂ ಬಿಎಸ್‍ವೈಗೆ ಅಖಂಡ ವಿವರಣೆ ನೀಡಿದ್ದಾರೆ.

    ಈ ಗಲಭೆ ಪ್ರಮುಖ ಕಾರಣ ಯಾರು, ಗಲಭೆ ನಡೆದ ದಿನದಿಂದ ಇಲ್ಲಿವರೆಗೂ ಆಗಿರುವ ಬೆಳವಣಿಗೆ, ಪ್ರಕರಣದ ಕುರಿತು ತನಿಖೆ ಬಗ್ಗೆ ಚರ್ಚೆ ಮಾಡಿದ್ದಾರೆ. ಎಸ್‍ಡಿಪಿಐ ಸಂಘಟನೆಯ ಕೈವಾಡ ಹಾಗೂ ಸ್ಥಳೀಯ ನಾಯಕರ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಹಲವು ವಿಷಯಗಳ ಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ, ಭದ್ರತೆ ಹೆಚ್ಚಳಕ್ಕೆ ಮನವಿ ಮಾಡಿದ್ದೇನೆ. ಸಿಬಿಐ ತನಿಖೆ ಮಾಡಿಸುವಂತೆ ಕೇಳಿಕೊಂಡಿದ್ದೇನೆ. ತನಿಖೆ ಬಳಿಕ ಪರಿಶೀಲಿಸಿ ನೋಡೋದಾಗಿ ಸಿಎಂ ಹೇಳಿದ್ದಾರೆ. ಯಾರೇ ಇದ್ರೂ ತಪ್ಪಿತಸ್ಥರನ್ನು ಬಂಧಿಸಲು ಮನವಿ ಮಾಡಿದ್ದೇನೆ ಎಂದರು.

    ನನಗೆ ಸರ್ಕಾರ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ. ನನ್ನ ಮನೆಗೆ ಭದ್ರತೆ ಕೊಟ್ಟಿದ್ದಾರೆ. ಭದ್ರತೆ ವಿಚಾರದಲ್ಲಿ ಸರ್ಕಾರ ಸ್ಪಂದಿಸಿಲ್ಲ ಎಂದು ಇದೇ ವೇಳೆ ಅಖಂಡ ಆರೋಪ ಮಾಡಿದರು. ಮೊನ್ನೆ ಸಿಎಂ ಜೊತೆ ಫೋನಲ್ಲಿ ಮಾತಾಡಿದ್ದೆ. ನಮ್ಮನೆ ಅಕ್ಕ-ಪಕ್ಕ ಮನೆ, ವಾಹನಗಳನ್ನು ಸುಟ್ಟಿದ್ದಾರೆ. ಇವರಿಗೆಲ್ಲ ಪರಿಹಾರ ಕೊಡಲು ಸಿಎಂಗೆ ಮನವಿ ಮಾಡಿಕೊಂಡಿದ್ದೇನೆ. ಅಪರಾಧಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿದ್ರೂ ಶಿಕ್ಷೆ ಆಗಲೇಬೇಕು ಎಂದು ಕಟುವಾಗಿ ಹೇಳಿದರು.

    ಇದೇ ವೇಳೆ ಮಾಜಿ ಶಾಸಕ ಪ್ರಸನ್ನಕುಮಾರ್ ಮತ್ತೆ ಕಾಂಗ್ರೆಸ್ ಸೇರೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅಖಂಡ,ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ನನಗೆ ಗೊತ್ತೇ ಇಲ್ಲ. ನನ್ನ ಗಮನಕ್ಕೂ ಬಂದಿಲ್ಲ. ಪ್ರಸನ್ನಕುಮಾರ್ ಸೇರ್ಪಡೆಯಿಂದ ನನಗೆ ತೊಂದರೆ ಇಲ್ಲ. ಕಾಂಗ್ರೆಸ್ಸಿಗೆ ಯಾರು ಬೇಕಾದರೂ ಬರಬಹುದು. ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ಅಧ್ಯಕ್ಷರಿಗೆ ಬಿಟ್ಟಿದು ಎಂದು ತಿಳಿಸಿದರು.

    ಆದರೆ ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಸೇರಲು ಬಯಸಿರುವ ವಿಷಯ ಅಖಂಡ ಶ್ರೀನಿವಾಸ್ ಗಮನಕ್ಕೆ ತಂದಿರೋದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಈ ಹಿಂದೆ ತಿಳಿಸಿದ್ದರು. ಪ್ರಸನ್ನಕುಮಾರ್ ಸೇರ್ಪಡೆಗೆ ಅಖಂಡ ವಿರೋಧ ಇಲ್ಲ ಅಂದಿದ್ದರು. ಆದರೆ ಈಗ ಪ್ರಸನ್ನಕುಮಾರ್ ಮತ್ತೆ ಬರೋ ವಿಷಯ ನನಗೆ ಗೊತ್ತಿಲ್ಲ ಎಂದು ಅಖಂಡ ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಡಿಕೆಶಿ ಸುಳ್ಳು ಹೇಳಿದ್ರಾ?, ಸುಳ್ಳೇ ಹೇಳಿದ್ರೂ ಯಾಕೆ ಹೇಳಿದ್ರು ಎಂಬ ಪ್ರಶ್ನೆ ಮೂಡಿದೆ.

    ನಾನು ಕಾಂಗ್ರೆಸ್ ಬಿಡಲ್ಲ. ನಮ್ಮ ತಂದೆಯೂ ಕಾಂಗ್ರೆಸ್ಸಿನಲ್ಲೇ ಇದ್ದಿದ್ದು. ಹೀಗಾಗಿ ನಾನು ಕಾಂಗ್ರೆಸ್ ಪಕ್ಷ ಬಿಡೋ ಮಾತೇ ಇಲ್ಲ. ನನ್ನ ರಕ್ತದಲ್ಲಿ ಇರೋದು ಕಾಂಗ್ರೆಸ್. ನನ್ನ ರಕ್ಷಣೆಗೆ ಸರ್ಕಾರ ಸೇರಿದಂತೆ ನಮ್ಮ ಪಕ್ಷದ ನಾಯಕರು ಬರಬೇಕು. ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಸೇರಿದಂತೆ ಡಿಕೆ ಶಿವಕುಮಾರ್ ನನ್ನ ರಕ್ಷಣೆಗೆ ಬರಬೇಕು. ನನ್ನ ಮೇಲೆ ಯಾರಿಂದಲೂ ಒತ್ತಡ ಇಲ್ಲ, ಯಾವ ಒತ್ತಡವೂ ಇಲ್ಲ ಎಂದರು.

    ಬಿಜೆಪಿ ಶಾಸಕರ ಜೊತೆ ಸಿಎಂ ಭೇಟಿಗೆ ಬಂದ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಅವರು, ನಮ್ಮ ಭೋವಿ ಸಮಾಜದ ಮುಖಂಡರ ಜೊತೆ ನಾನು ಸಿಎಂ ಭೇಟಿಗೆ ಆಗಮಿಸಿದೆ. ನಮ್ಮ ಸಮಾಜದ ಮುಖಂಡರು ಇದ್ದರು. ಅರವಿಂದ ಲಿಂಬಾವಳಿ ಭೋವಿ ಜನಾಂಗದ ಶಾಸಕರು. ನಮ್ಮ ಜನಾಂಗದ ಶಾಸಕರ ಜೊತೆ ನಾನು ಬಂದಿದ್ದೇನೆ. ಭೋವಿ ಜನಾಂಗದ ಅಧ್ಯಕ್ಷ ಮಾಕಳಿ ರವಿಯವರು ಬಂದಿದ್ದಾರೆ. ಅವರ ಜೊತೆಯಲ್ಲಿ ನಾನು ಬಂದು ಸಿಎಂ ಭೇಟಿ ಮಾಡಿದ್ದೇನೆ ಅಷ್ಟೇ ಎಂದರು.

  • ಕಾಂಗ್ರೆಸ್ಸಿವರು ಪ್ರೂವ್ ಮಾಡಿದ್ರೆ, ಆರೋಪಿಗಳು ಬಿಜೆಪಿಯಲ್ಲಿದ್ರೂ ಒಳಗೆ ಹಾಕ್ತೀವಿ: ಮಾಧುಸ್ವಾಮಿ

    ಕಾಂಗ್ರೆಸ್ಸಿವರು ಪ್ರೂವ್ ಮಾಡಿದ್ರೆ, ಆರೋಪಿಗಳು ಬಿಜೆಪಿಯಲ್ಲಿದ್ರೂ ಒಳಗೆ ಹಾಕ್ತೀವಿ: ಮಾಧುಸ್ವಾಮಿ

    – ರಾಜ್ಯದಲ್ಲಿ ಸಾರಾ ಮಹೇಶ್ ಒಬ್ರೇ ಮೇಧಾವಿ ಅಂದ್ಕೊಂಡಿದ್ದಾರೆ

    ಕೊಪ್ಪಳ: ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನವರು ಪ್ರೂವ್ ಮಾಡಿದ್ರೆ, ಆರೋಪಿಗಳು ಬಿಜೆಪಿ ಪಕ್ಷದವರಾಗಿದ್ದರೂ ಅವರನ್ನು ಒಳಗೆ ಹಾಕ್ತೀವಿ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

    ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ಸಿವರು ಅವರ ಪಕ್ಷದ ಶಾಸಕರಿಗೆ ಸಾಂತ್ವನ ಹೇಳೋದು ಬಿಟ್ಟು, ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಘಟನೆಗೆ ಬಿಜೆಪಿಯವರು ಕಾರಣ ಅನ್ನೋದೇ ಆದರೆ ಅವರು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೀಡಲಿ. ಒಂದು ವೇಳೆ ಗಲಭೆಯಲ್ಲಿ ಬಿಜೆಪಿಯವರು ಇದ್ದರೂ ನಾವು ಅವರನ್ನು ಒಳಗೆ ಹಾಕ್ತೀವಿ ಎಂದರು.

    ಶಾಸಕರನ್ನು ದಲಿತ ಅದು ಇದು ಎಂದು ವಿಂಗಡಣೆ ಮಾಡಬಾರದು. ಶಾಸಕರಿಗೆ ಅಂತ ಶೋಷಣೆಗಳು ಆಗೋ ಸ್ಥಿತಿ ಇರಲ್ಲ. ಅವರು ಎಲ್ಲರಿಗೂ ಸಮಾನರು, ಅವರು ದಲಿತರು ಹೌದ ಅಲ್ವೋ, ಆದರೆ ಕಾಂಗ್ರೆಸ್ಸಿನವರು ಮುಂದೆ ಬಂದು ಮಾತಾಡಬೇಕಿತ್ತು. ಅವರಿಗೆ ಸಾಂತ್ವನ ಹೇಳೋದು ಬಿಟ್ಟು, ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಇದೇ ವೇಳೆ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆ ಬ್ಯಾನ್ ಮಾಡಲಿ ಎಂದ ರಾಮಲಿಂಗಾರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿರುವ ಪೊಲೀಸರು ಎರಡು ಸಂಘಟನೆಯಿಂದ ಇಂತಹ ಪರಿಸ್ಥಿತಿ ಬಂದಿದೆ ಎಂದು ವರದಿ ಕೊಟ್ಟರೆ ನಾವು ಬ್ಯಾನ್ ಮಾಡುತ್ತೇವೆ. ನಮ್ಮ ಪೊಲೀಸರು ತನಿಖೆ ಮಾಡಿ ಯಾರಿಂದ ಆಗಿದೆ ಅನ್ನೋ ಬಗ್ಗೆ ವರದಿ ಕೊಡೋವರೆಗೂ ಮಾತಾಡೋದು ಬಾಲಿಶ ಎಂದು ತಿರುಗೇಟು ನೀಡಿದರು.

    ಕಾನೂನು ಸಚಿವನಾಗಿ ನಾನು ಬ್ಯಾನ್ ಮಾಡ್ತೀನಿ, ಮಾಡಲ್ಲ ಅಂತ ಹೇಳಾಕಗಲ್ಲ. 1981ರಲ್ಲಿ ಕಾನೂನು ಇದೆ. ಇದರ ಹಿಂದೆ ಯಾರೇ ಇದ್ದರೂ ಅವರ ಅಸ್ತಿ ಮುಟ್ಟಗೋಲು ಹಾಕ್ತೀವಿ. ಮುಟ್ಟಗೋಲು ಹಾಕಿ ನಷ್ಟ ಭರಿಸ್ತೀವಿ. ಬೆಂಗಳೂರಿನಲ್ಲಿ ಇಂತಹ ಪರಸ್ಥಿತಿ ನಿರ್ಮಾಣ ಆಗತ್ತೆ ಎಂದು ಯಾರೂ ನೀರಿಕ್ಷೆ ಮಾಡಿರಲಿಲ್ಲ. ಗುಪ್ತಚರ ಇಲಾಖೆಯಲ್ಲಿ ಇರೋದು ಮನುಷ್ಯರೇ. ಒಂದೇ ಸಲ 3-4 ಸಾವಿರ ಬರ್ತಾರೆ ಅನ್ನೋದು ಗೊತ್ತಾಗಲ್ಲ. ಯಾವನೋ ಪೋಸ್ಟ್ ಮಾಡಿದ್ರೆ, 4 ಸಾವಿರ ಜನ ಬರುತ್ತಾರೆ ಅನ್ನೋದು ಗೊತ್ತಾಗಲ್ಲ. ಸಾರಾ ಮಹೇಶ್ ಏನ್ ಮಾಡಿದ್ರೂ ದೂರುತ್ತಾರೆ. ರಾಜ್ಯದಲ್ಲಿ ಇವರೊಬ್ಬರೇ ಮೇಧಾವಿ ಅಂದುಕೊಂಡಿದ್ದಾರೆ. ಇದಕ್ಕೆ ನಾವೇನ್ ಮಾಡೋಕೆ ಆಗಲ್ಲ ಎಂದರು.

  • ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ಕೆ ಕಮೆಂಟ್ ಮಾಡಿದ್ದೆ: ನವೀನ್

    ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ಕೆ ಕಮೆಂಟ್ ಮಾಡಿದ್ದೆ: ನವೀನ್

    – ಬೇಕೂ ಅಂತ ಯಾವುದೇ ಪೋಸ್ಟ್ ಮಾಡಿಲ್ಲ, ಕೇವಲ ಕಮೆಂಟ್ ಮಾಡಿದ್ದೇನೆ

    ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಳಿಯ ನವೀನ್ ಫೆಸ್ಬುಕ್ ಪೋಸ್ಟ್‍ನಿಂದಲೇ ಗಲಾಟೆಯಾಯಿತು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ನಾನು ಬೇಕೂ ಅಂತ ಯಾವುದನ್ನೂ ಪೋಸ್ಟ್ ಮಾಡಿಲ್ಲ. ಅವರು ಮಾಡಿದ್ದ ಪೋಸ್ಟ್‍ಗೆ ಕಮೆಂಟ್ ಮಾಡಿದ್ದೆ ಅಷ್ಟೆ ಎಂದು ವಿಚಾರಣೆ ವೇಳೆ ಆರೋಪಿ ನವೀನ್ ತಿಳಿಸಿದ್ದಾನೆ.

    ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕುರಿತು ನವೀನ್ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದು, ನಾನು ಬೇಕು ಅಂತ ಯಾವುದನ್ನೂ ಪೋಸ್ಟ್ ಮಾಡಿಲ್ಲ, ಅವರು ಮಾಡಿದ್ದ ಪೋಸ್ಟ್ ಗೆ ಕಮೆಂಟ್ ಮಾಡಿದ್ದೇನೆ ಅಷ್ಟೆ. ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕಮೆಂಟ್ ಅಷ್ಟೇ ಮಾಡಿದ್ದೆ ಎಂದು ತನ್ನ ಪೋಸ್ಟ್ ಬಗ್ಗೆ ಆರೋಪಿ ಸ್ಪಷ್ಟನೆ ನೀಡಿದ್ದಾನೆ.

    ಪೋಸ್ಟ್ ಮಾಡಿದ ಬಳಿಕ ಅಖಂಡ ಶ್ರೀನಿವಾಸ್ ಡಿಲೀಟ್ ಮಾಡುವಂತೆ ತಿಳಿಸಿದರು. ಬಳಿಕ ನಾನು ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿದ್ದೆ. ಗಲಭೆಯ ಮಾಸ್ಟರ್ ಮೈಂಡ್ ಪೈರೋಜ್ ಖಾನ್ ಒಂದು ಪೋಸ್ಟ್ ಮಾಡಿದ್ದ, ಇದಕ್ಕೆ ಉತ್ತರವಾಗಿ ಕಮೆಂಟ್ ಮಾಡಿದ್ದೆ. ಕಮೆಂಟ್ ಮಾಡೋ ಸಲುವಾಗಿ ಗೂಗಲ್ ನಲ್ಲಿ ಇಮೇಜ್ ಹುಡುಕಿದ್ದೆ. ಬಳಿಕ ಒಂದು ಇಮೇಜ್ ತೆಗೆದು ಕಮೆಂಟ್ ಬಾಕ್ಸ್ ನಲ್ಲಿ ಪೋಸ್ಟ್ ಮಾಡಿದ್ದೆ ಎಂದು ನವೀನ್ ತಿಳಿಸಿದ್ದಾನೆ.

    ಪಾದರಾಯನಪುರ ಪುಂಡರ ಗಲಭೆ, ಸಿಎಎ ಮತ್ತು ಎನ್‍ಆರ್‍ಸಿ ಪ್ರತಿಭಟನೆ ವೇಳೆಯು ಕಮೆಂಟ್ ಮಾಡಿದ್ದೆ. ಬೇರೆಯವರ ಪೋಸ್ಟ್ ಸಲುವಾಗಿಯಷ್ಟೇ ನಾನು ಕಮೆಂಟ್ ಮಾಡಿದ್ದೇನೆ. ನಾನಾಗಿ ಯಾವುದೇ ಪೋಸ್ಟ್ ಮಾಡಿಲ್ಲ. ರಾಮ ಜನ್ಮಭೂಮಿ ಶಿಲಾನ್ಯಾಸದ ವೇಳೆ ಏರಿಯಾದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿಕೆ ಮಾಡಿದ್ದೆ. ಈ ವೇಳೆ ಅಪರಿಚಿತ ನಂಬರ್ ಗಳಿಂದ ನನಗೆ ಬೆದರಿಕೆ ಕರೆಗಳು ಬಂದಿದ್ದವು. ದುಷ್ಕರ್ಮಿಗಳು ಫೋನ್ ಮಾಡಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.

    ಬೆದರಿಕೆ ಕರೆಗಳಿಗೆ ಜಗ್ಗದೆ ನನ್ನ ಕೆಲಸ ಮುಂದುವರೆಸಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ಹಿಂದಿನ ಘಟನೆಗಳ ಬಗ್ಗೆ ಆರೋಪಿ ನವೀನ್ ಬಾಯ್ಬಿಟ್ಟಿದ್ದಾನೆ. ನವೀನ್ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

  • ಮೂರು ಕಾರಣಗಳಿಗೆ ಹೊತ್ತಿ ಉರಿಯಿತು ಬೆಂಗಳೂರು- ವಿಚಾರಣೆ ವೇಳೆ ಬಾಯಿಬಿಟ್ಟ ಕಿರಾತಕರು

    ಮೂರು ಕಾರಣಗಳಿಗೆ ಹೊತ್ತಿ ಉರಿಯಿತು ಬೆಂಗಳೂರು- ವಿಚಾರಣೆ ವೇಳೆ ಬಾಯಿಬಿಟ್ಟ ಕಿರಾತಕರು

    ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು ಕೆಲ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ದೊಂಬಿ ಎಬ್ಬಿಸಿದ್ದಕ್ಕೆ ಕಾರಣಗಳನ್ನ ಕೊಟ್ಟಿದ್ದಾರೆ. ಮೂರು ಕಾರಣಗಳಿಂದಾಗಿ ಬೆಂಗಳೂರು ಹೊತ್ತಿ ಉರಿದಿದೆ ಎಂದು ತಿಳಿದು ಬಂದಿದೆ.

    ಬೆಂಗಳೂರಲ್ಲಿ ದೊಂಬಿ ಎಬ್ಬಿಸಿದ್ದಕ್ಕೆ ಕಾರಣ ಕೊಟ್ಟ ಕಿರಾತಕರು!
    1. ಎನ್‍ಆರ್ ಸಿ ಸಿಟ್ಟೇ ಬೆಂಗಳೂರು ಗಲಭೆಗೆ ಕಾರಣವಂತೆ
    2. ‘ನಮ್ಮನ್ನು ದೇಶ ಬಿಟ್ಟು ಓಡಿಸ್ತಾರೆ, ನಾವು ಹುಟ್ಟಿದ್ದು ಇಲ್ಲೇ’
    3. ‘ನಮಗೆ ಸ್ವಾತಂತ್ರ್ಯ ಇಲ್ವಾ? ನಾವ್ಯಾಕೆ ದೇಶ ಬಿಡಬೇಕು?’

    ಗಲಾಟೆ ನಡೆದ ಸ್ಥಳದಲ್ಲಿ ಮೂರು ಪ್ರಚೋದನೆಯ ಮಾತುಗಳನ್ನು ಕೇಳಿದ ಕಿಡಿಗೇಡಿಗಳು ದೊಂಬಿ ಎಬ್ಬಿಸಿದ್ದಾರೆ. ನಮ್ಮ ಕೋಪವನ್ನು ಗಲಭೆ ಮೂಲಕ ತೀರಿಸಿಕೊಂಡಿದ್ದೇವೆ ಎಂದು ಕಿಡಿಗೇಡಿಗಳು ಪೊಲೀಸರ ಮುಂದೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ನವೀನ್ ಆಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣದ ಕುರಿತು ಕೆಲ ಪೋಸ್ಟ್ ಮಾಡಿಕೊಂಡಿದ್ದು, ಗಲಭೆಗೆ ಕಾರಣವಾಗಿದೆ.