Tag: Bengaluru Riots

  • ಬೆಂಗಳೂರು ಗಲಭೆ – ಎನ್‌ಐಎಯಿಂದ ಎಸ್‌ಡಿಪಿಐ, ಪಿಎಫ್‌ಐಯ 17 ಮಂದಿ  ಅರೆಸ್ಟ್‌

    ಬೆಂಗಳೂರು ಗಲಭೆ – ಎನ್‌ಐಎಯಿಂದ ಎಸ್‌ಡಿಪಿಐ, ಪಿಎಫ್‌ಐಯ 17 ಮಂದಿ ಅರೆಸ್ಟ್‌

    ಬೆಂಗಳೂರು: ದೇವರಜೀವನಹಳ್ಳಿ(ಡಿಜೆಹಳ್ಳಿ) ಮತ್ತು ಕಾಡುಗೊಂಡನ ಹಳ್ಳಿ(ಕೆಜೆಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ.

    ಎಸ್‌ಡಿಪಿಐ ನಾಯಕರಾದ ಕೆಜೆ ಹಳ್ಳಿ ವಾರ್ಡ್‌ನ ಅಧ್ಯಕ್ಷ ಇಮ್ರಾನ್ ಅಹ್ಮದ್, ಇತರ ಹಿರಿಯ ನಾಯಕ ರುಬಾ ವಕಾಸ್, ನಾಗವಾರ ವಾರ್ಡ್‌ನ ಎಸ್‌ಡಿಪಿಐ ಅಧ್ಯಕ್ಷ ಅಬ್ಬಾಸ್ ಆತನ ಸಹಚರರಾದ ಅಜಿಲ್ ಪಾಷಾ, ಇರ್ಫಾನ್ ಖಾನ್ ಮತ್ತು ಅಕ್ಬರ್ ಖಾನ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ.

    ಕೃತ್ಯಕ್ಕೂ ಮುನ್ನ ಆಗಸ್ಟ್‌ 11ರ ಸಂಜೆ ಸಭೆ ನಡೆಸಿದ್ದಾರೆ. ಬೆಂಗಳೂರಿನ ಥಣಿಸಂದ್ರದ ಮತ್ತು ಕೆ.ಜಿ ಹಳ್ಳಿ ವಾರ್ಡ್‌ಗಳಲ್ಲಿ ನಡೆದ ಸಭೆಗಳಲ್ಲಿ ಪಿತೂರಿ ನಡೆಸಿ, ಗಲಭೆಗೆ ಜನರನ್ನು ಸಜ್ಜುಗೊಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಜನಸಮೂಹ ಜಮಾವಣೆಗೆ ಕುಮ್ಮಕ್ಕು ನೀಡಿದ ಆರೋಪ ಇವರ ಮೇಲಿದೆ.

    ಆರೋಪಿಗಳಾದ ಸದ್ದಾಂ, ಸಯೀದ್ ಸೊಹೆಲ್, ಕಲೀಮುಲ್ಲಾ ಅಲಿಯಾಸ್‌ ಶಾರುಖ್ ಖಾನ್ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ವಾಟ್ಸಪ್‌ ಮೂಲಕ ಕೃತ್ಯಕ್ಕೆ ಪ್ರಚೋದನೆ ನೀಡಿ ಜನರು ಸೇರುವಂತೆ ಮಾಡಿದ್ದರು ಎಂದು ಎನ್‌ಐಎ ಹೇಳಿದೆ.

    17 ಮಂದಿ ಸೇರಿದಂತೆ ಒಟ್ಟು ಈ ಪ್ರಕರಣಕ್ಕೆ ಸಂಬಂಧಿಸಿಂತೆ 187 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  • ಸಂಪತ್ ರಾಜ್ ಜಾಮೀನು ಅರ್ಜಿ ವಜಾ

    ಸಂಪತ್ ರಾಜ್ ಜಾಮೀನು ಅರ್ಜಿ ವಜಾ

    ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಜಾಮೀನು ಅರ್ಜಿ ವಜಾಗೊಂಡಿದೆ.

    ಸಿಟಿ ಸಿವಿಲ್ ಕೋರ್ಟ್ ಗೆ ಜಾಮೀನು ನೀಡುವಂತೆ ಸಂಪತ್ ರಾಜ್ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನ ವಜಾಗೊಳಿಸಿ ಆದೇಶಿಸಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಸಂಪತ್ ರಾಜ್‍ಗೆ ಪರಪ್ಪನ ಅಗ್ರಹಾರದ ಬಾಗಿಲುಗಳು ತೆರೆದಿಲ್ಲ. ಜಾಮೀನಿಗಾಗಿ ಸಂಪತ್ ರಾಜ್ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ.

    ಕೊರೊನಾ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂಪತ್ ರಾಜ್ ಎಸ್ಕೇಪ್ ಆಗಿದ್ದರು. ತದನಂತರ ನವೆಂಬರ್ 16ರಂದು ಸಿಸಿಬಿ ಪೊಲೀಸರು ಸಂಪತ್ ರಾಜ್ ಅವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದ ನ್ಯಾಯಾಲಯ ನಂತರ ನ್ಯಾಯಂಗ ಬಂಧನಕ್ಕೆ ನೀಡಿತ್ತು.

  • ಪರಪ್ಪನ ಅಗ್ರಹಾರದಲ್ಲೂ ಅನಾರೋಗ್ಯದ ನಾಟಕವಾಡಿದ ಸಂಪತ್‍ರಾಜ್!

    ಪರಪ್ಪನ ಅಗ್ರಹಾರದಲ್ಲೂ ಅನಾರೋಗ್ಯದ ನಾಟಕವಾಡಿದ ಸಂಪತ್‍ರಾಜ್!

    – ನಾರ್ಮಲ್ ಇದೆ ಎಂದು ಮತ್ತೆ ಜೈಲಿಗೆ ಕಳಿಸಿದ ವೈದ್ಯರು

    ಬೆಂಗಳೂರು: ಅನಾರೋಗ್ಯದ ನಾಟಕವಾಡಿ ಜಯದೇವ ಆಸ್ಪತ್ರೆಗೆ ಸೇರಿದ್ದ ಮಾಜಿ ಮೇಯರ್ ಸಂಪತ್ ರಾಜ್ ಡ್ರಾಮಾ ಫೇಲ್ ಆಗಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಸಂಪತ್ ರಾಜ್ ನನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

    ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿ ಹಿನ್ನೆಲೆ ನವೆಂಬರ್ 20ರಂದು ಸಂಪತ್ ರಾಜ್ ಪರಪ್ಪರ ಅಗ್ರಹಾರ ಸೇರಿದ್ದರು. ಜೈಲು ಸೇರಿದ ಒಂದೇ ದಿನಕ್ಕೆ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ ಭಾನುವಾರ ಜೈಲಾಧಿಕಾರಿಗಳು ಸಂಪತ್ ರಾಜ್ ಅವರನ್ನ ಜಯದೇವ ಆಸ್ಪತ್ರೆಗೆ ಕರೆ ತಂದಿದ್ದರು. ವೈದ್ಯರು ಸುಮಾರು ಒಂದೂವರೆ ಗಂಟೆಗಳ ಕಾಲ ಪರೀಕ್ಷೆ ನಡೆಸಿದರು. ವೈದ್ಯಕೀಯ ವರದಿಯಲ್ಲಿ ಆರೋಗ್ಯದ ಸ್ಥಿತಿ ನಾರ್ಮಲ್ ಆಗಿದೆ ಅಂತ ಬಂದಿದೆ. ಎಲ್ಲವೂ ನಾರ್ಮಲ್ ಇರೋದ್ರಿಂದ ಅಡ್ಮಿಟ್ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದರು.

    ಈ ಮೂಲಕ ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿರುವ ಪ್ಲಾನ್ ಮಾಡಿಕೊಂಡಿದ್ದ ಸಂಪತ್ ರಾಜ್ ಲೆಕ್ಕಾಚಾರ ತಲೆಕೆಳಗಾದಂತಾಗಿದೆ. ಬಿಪಿ ಮತ್ತು ಸಕ್ಕರೆ ಕಾಯಿಲೆಯಿಂದ ಸಹ ಸಂಪತ್ ರಾಜ್ ಬಳಲುತ್ತಿದ್ದಾರೆ.

  • ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಂಪತ್ ರಾಜ್ ರಾಜ ವೈಭೋಗ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಂಪತ್ ರಾಜ್ ರಾಜ ವೈಭೋಗ

    ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಮತ್ತು ಬೆಂಗಳೂರು ಗಲಭೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಮಾಜಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಸೇರಿದ್ದು, ಜೈಲಿನಲ್ಲಿ ಆರೋಪಿಗೆ ರಾಜಾತಿಥ್ಯ ನೀಡಿರುವ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಕೊರೊನಾ ಹಿನ್ನೆಲೆ ಜೈಲು ಸೇರುವ ಹೊಸ ಆರೋಪಿ 14 ದಿನ ಕ್ವಾರಂಟೈನ್ ನಲ್ಲಿರಬೇಕು. ಆದ್ರೆ ಸಂಪತ್ ರಾಜ್ ಗಾಗಿ ನಿಯಮ ಸಡಿಲಿಕೆ ಮಾಡಿ ನೇರವಾಗಿ ಕೊಠಡಿಗೆ ಶಿಫ್ಟ್ ಮಾಡಲಾಗಿದೆ. ಪೊಲೀಸ್ ಠಾಣೆಯೊಂದರ ಸಿಬ್ಬಂದಿಯೇ ಸಂಪತ್ ರಾಜ್ ಗೆ ಹೊಸ ಹಾಸಿಗೆ, ದಿಂಬು ಮತ್ತು ಬೆಡ್ ಶೀಟ್ ನೀಡಿರುವ ಬಗ್ಗೆ ತಿಳಿದು ಬಂದಿದೆ.

    ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಪತ್ ರಾಜ್‍ರನ್ನು ಸಿಸಿಬಿ ಪೊಲೀಸರು ಬೆಂಗಳೂರಿನ 67ನೇ ಸಿಸಿಎಚ್ ಕೋರ್ಟ್‍ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್, ಸಂಪತ್ ರಾಜ್‍ರನ್ನು ನವೆಂಬರ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

     

  • ಎಂಎಲ್‍ಎ ಮನೆ ಬೆಂಕಿಗೂ ನನಗೂ ಸಂಬಂಧವಿಲ್ಲ – ಸಿಸಿಬಿ ಎದುರು ಸಂಪತ್‍ರಾಜ್ ಹೇಳಿಕೆ

    ಎಂಎಲ್‍ಎ ಮನೆ ಬೆಂಕಿಗೂ ನನಗೂ ಸಂಬಂಧವಿಲ್ಲ – ಸಿಸಿಬಿ ಎದುರು ಸಂಪತ್‍ರಾಜ್ ಹೇಳಿಕೆ

    ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಸಂಪತ್ ರಾಜ್, ಶಾಸಕನ ಮನೆಗೆ ಬೆಂಕಿ ಹಾಕಿದವರಿಗೂ ನನಗೂ ಸಂಬಂಧ ಇಲ್ಲ. ನಾನು ಶಾಸಕನ ಮನೆಗೆ ಬೆಂಕಿ ಹಚ್ಚಿಸಿಲ್ಲ. ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಯಾವ ಕಾರಣಕ್ಕೆ ಬಂಧಿಸಿದ್ರಿ..?, ನಾನು ಮಾಡಿರೋ ತಪ್ಪಾದ್ರೂ ಏನು ಎಂದು ಪ್ರಶ್ನಿಸಿದ್ದಾರೆ.

    ಬೆಂಕಿ ಹಚ್ಚಿಸೋದಾಗಿದ್ರೆ ಹಿಂದೂಗಳ ಕೈಯಲ್ಲೇ ಹಚ್ಚಿಸುತ್ತಿದ್ದೆ. ಮುಸ್ಲಿಮರನ್ನ ಯಾಕೆ ಬಳಸಿಕೊಳ್ಳಬೇಕಿತ್ತು. ನಾವೆಲ್ಲ ಓಡಾಡಿ ಅಖಂಡ ಶ್ರೀನಿವಾಸಮೂರ್ತಿಯನ್ನ ಗೆಲ್ಲಿಸಿದ್ದು, ಇವರೆಲ್ಲ ಹೀಗೆ ಮಾಡ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಜಮೀರ್ ಸ್ಟೇಷನ್ ಬಳಿ ಬಂದಾಗ ನಾನು ಹೋಗ್ಬೋದಿತ್ತಲ್ಲ ಎಂದು ಸಂಪತ್ ರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ: ಅಖಂಡ

    ಅರುಣ್, ಸಂತೋಷ್‍ನನ್ನ ಭೇಟಿಯಾಗಿದ್ದು ನಿಜ. ಹಾಗಂತ ಬೆಂಕಿ ಹಚ್ಚಿ ಅಂತ ನಾನು ಹೇಳಿಲ್ಲ. ನಾನು ಎಲ್ಲೂ ತಲೆ ಮರೆಸಿಕೊಂಡು ಓಡಿ ಹೋಗಿರಲಿಲ್ಲ. ಕೋವಿಡ್ ಇದ್ದ ಕಾರಣ ಐಸೋಲೇಷನ್‍ನಲ್ಲಿದ್ದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಯಾರಿಗೂ ತೊಂದರೆ ಆಗಬಾರದು ಅಂತ ಮನೆಯಲ್ಲೇ ಐಸೊಲೇಟ್ ಆಗಿದ್ದೆ ಎಂದು ಬಂಧನದಲ್ಲಿರುವ ಸಂಪತ್ ರಾಜ್ ಸಿಸಿಬಿ ಪೊಲೀಸರ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಸಂಪತ್ ರಾಜ್ ತಪ್ಪಿತಸ್ಥ ಅನ್ನೋದನ್ನು ಪೊಲೀಸರು ಪ್ರೂವ್ ಮಾಡ್ಲಿ: ಸಿದ್ದರಾಮಯ್ಯ

    ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ನನ್ನ ಸಿಸಿಬಿ ಪೊಲೀಸರು ಕೊನೆಗೂ ಬೆಂಗಳೂರಲ್ಲೆ ಬಂಧಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ರಾತ್ರಿ 9 ಗಂಟೆಗೆ ಸಂಪತ್ ರಾಜ್ ನನ್ನ ಬಂಧಿಸಿರೋ ಸಿಸಿಬಿ, ಬೆಳಗ್ಗೆ ಎಂಟು ಗಂಟೆಗೆ ಸಿಸಿಬಿ ಕಚೇರಿಗೆ ಕರೆತಂದ್ರು. ಬಳಿಕ ತನಿಖಾಧಿಕಾರಿಗಳಾದ ಎಸಿಪಿ ವೇಣುಗೋಪಾಲ್, ಡಿಸಿಪಿ ಕುಮಾರ್ ಮಧ್ಯಾಹ್ನಾದವರೆಗೂ ವಿಚಾರಣೆ ನಡೆಸಿದರು. ಬಳಿಕ ನಾಲ್ಕು ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸಂಪತ್ ರಾಜ್ ನನ್ನ 10 ದಿನ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿಕೊಂಡ್ರು. ಆದರೆ ನ್ಯಾಯಾಧೀಶರು 2 ದಿನ ಪಿಸಿ ಕಸ್ಟಡಿಗೆ ಅಂದರೆ 19 ರವರೆಗೆ ತನಕ ಪಿಸಿ ಕಸ್ಟಡಿಗೆ ಕೊಟ್ಟು ಆದೇಶ ಹೊರಡಿಸಿದರು. ಇದನ್ನೂ ಓದಿ: ಸಂಪತ್ ರಾಜ್ ಓಡಿ ಹೋಗಿರಲಿಲ್ಲ, ಆರೋಗ್ಯ ಸರಿ ಇರಲಿಲ್ಲ ಅಷ್ಟೇ: ಡಿಕೆಶಿ

  • ಡಿಜೆ, ಕೆಜಿ ಹಳ್ಳಿ ಗಲಭೆ ಕೇಸ್ – ಅವಹೇಳನಕಾರಿ ಪೋಸ್ಟ್ ಆರೋಪಿ ನವೀನ್‍ಗೆ ಜಾಮೀನು

    ಡಿಜೆ, ಕೆಜಿ ಹಳ್ಳಿ ಗಲಭೆ ಕೇಸ್ – ಅವಹೇಳನಕಾರಿ ಪೋಸ್ಟ್ ಆರೋಪಿ ನವೀನ್‍ಗೆ ಜಾಮೀನು

    ಬೆಂಗಳೂರು: ಡಿಜೆ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ನವೀನ್ ಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ನೀಡಿದೆ. ನವೀನ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಅವಹೇಳನಕಾರಿ ಪೋಸ್ಟ್ ಗಲಭೆಗೆ ಪ್ರಚೋದನೆ ನೀಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ನವೀನ್ ಬಂಧನವಾಗಿತ್ತು.

    ಆರೋಪಿಯ ಜೀವಕ್ಕೆ ಅಪಾಯವಿದೆ ಅನ್ನೋ ಕಾರಣಕ್ಕೆ ಜಾಮೀನು ನೀಡದೆ ಇದ್ದರೆ ತಪ್ಪಾಗುತ್ತೆ. ಬಂಧನದಲ್ಲಿಡೋದು ಆತನ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ ಆಗುತ್ತದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಬಿ.ಎ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವೀನ್ ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರ ಸಂಬಂಧಿಯಾಗಿದ್ದಾನೆ. ಇದನ್ನೂ ಓದಿ: ಗಲಭೆಗೆ ಪ್ರಚೋದಿಸಿದ್ದ ನವೀನ್‍ಗೆ ಹಿಂದೂ ಹಿರಿಯರೇ ಬುದ್ಧಿ ಹೇಳಬೇಕಲ್ಲಾ?-ಸಿದ್ದರಾಮಯ್ಯ

    ನವೀನ್ ಮೆಸೇಜ್ ಫಾರ್ವರ್ಡ್ ಮಾಡಿ ಡಿಲೀಟ್ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ರಾಜಕೀಯವಾಗಿ ಕಕ್ಷಿದಾರರನ್ನ ಟಾರ್ಗೆಟ್ ಮಾಡಲಾಗಿದೆ ಎಂದು ನವೀನ್ ಪರ ವಕೀಲರು ವಾದ ಮಂಡಿಸಿದ್ದರು. ನವೀನ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67, ಸೆಕ್ಷನ್ 153ಎ ಹಾಗೂ 295ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ನವೀನ್‍ನ ಶೀಘ್ರ ಬಂಧನವಾಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರಲಿಲ್ಲವೇನೊ?-ಸಿದ್ದರಾಮಯ್ಯ

    ಯಾರು ಈ ನವೀನ್?: ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಪ್ತ ಈ ನವೀನ್. ಫೇಸ್‍ಬುಕ್ ಪೋಸ್ಟ್ ನಲ್ಲಿ ಒಂದು ಸಮುದಾಯದ ಬಗ್ಗೆ ನವೀನ್ ಅವಹೇಳನಕಾರಿಯಾಗಿ ಬರೆದುಕೊಂಡಿದ್ದರಿಂದ ಉದ್ರಿಕ್ತಗೊಂಡ ಗುಂಪು ಕಾವಲಬೈರಸಂದ್ರದಲ್ಲಿರುವ ಶಾಸಕರ ಮನೆಯ ಮೇಲೆ ದಾಳಿ ನಡೆಸಿತ್ತು. ಇದೀಗ ಸಿದ್ದರಾಮಯ್ಯ ಗಲಭೆಗೆ ಪ್ರಚೋದನೆ ನೀಡಿದ್ದು ನವೀನ್ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ. ಇದನ್ನೂ ಓದಿ: ಮತಾಂಧ ಮುಸ್ಲಿಮರಿಗೆ ಡಿಕೆಶಿ ಬೆಂಬಲ ಇದೆ ಅನ್ನಿಸುತ್ತೆ: ಸಚಿವ ಕೆ.ಎಸ್.ಈಶ್ವರಪ್ಪ

  • ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣ- ಎಸ್‍ಡಿಪಿಐ ಕಚೇರಿ ಮೇಲೆ ಸಿಸಿಬಿ ದಾಳಿ

    ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣ- ಎಸ್‍ಡಿಪಿಐ ಕಚೇರಿ ಮೇಲೆ ಸಿಸಿಬಿ ದಾಳಿ

    ಬೆಂಗಳೂರು: ನಗರದ ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಸಿಸಿಬಿ ಅಧಿಕಾರಿಗಳ ಕಂಡ ಎಸ್‍ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

    ಗಲಭೆಯಲ್ಲಿ ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಈಗಾಗಲೇ 32 ಮಂದಿ ಕಾರ್ಯಕರ್ತರ ಬಂಧನವಾಗಿದೆ. ಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹಲಸೂರು ಗೇಟ್‍ನ ಎಸ್‍ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ನ್ಯಾಯಾಲಯದಿಂದ ಸರ್ಚ್  ವಾರೆಂಟ್ ಪಡೆದು ಪೊಲೀಸರ ತಂಡ ಪರಿಶೀಲನೆ ನಡೆಸಿದೆ.

    ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಸಂಬಂಧ ಮೂರು ಪ್ರಕರಣಗಳ ಸಿಸಿಬಿ ವರ್ಗಾವಣೆ ಆಗಿದ್ದವು. ಅದರ ಸಂಬಂಧ ಎಸಿಪಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ತನಿಖೆ ಭಾಗವಾಗಿ ಮೂರು ಎಸ್‍ಡಿಪಿಐ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ದಾಳಿ ಮುಂದುವರಿದಿದ್ದು, ಈಗ ತನಿಖಾ ಹಂತದಲ್ಲಿದ್ದು ಹೆಚ್ಚಿನ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಏಕಕಾಲಕ್ಕೆ ಮೂರು ಕಡೆಗಳಲ್ಲೂ ದಾಳಿಯಾಗಿದೆ. ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳ ತಂಡಗಳಿಂದ ಮೂರು ಕಡೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹಲಸೂರು ಗೇಟ್‍ನ ಎಸ್‍ಡಿಪಿಐನ ಮುಖ್ಯ ಕಚೇರಿ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

  • ಬೆಂಗ್ಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ 2 ಲಕ್ಷ ಪರಿಹಾರ ಘೋಷಿಸಿದ ಇಮ್ರಾನ್ ಪಾಷಾ

    ಬೆಂಗ್ಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ 2 ಲಕ್ಷ ಪರಿಹಾರ ಘೋಷಿಸಿದ ಇಮ್ರಾನ್ ಪಾಷಾ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇದೀಗ ಮತ್ತೊಬ್ಬ ಮುಸ್ಲಿಂ ಮುಖಂಡ ಮೃತಪಟ್ಟವರ ಬೆನ್ನಿಗೆ ನಿಂತಿದ್ದಾರೆ.

    ಹೌದು. ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಗೋಲಿಬಾರ್ ನಲ್ಲಿ ಸತ್ತವರಿಗೆ ಎರಡು ಲಕ್ಷ ಘೋಷಣೆ ಮಾಡಿದ್ದಾರೆ. ಈ ಕುರಿತು ಫೇಸ್ ಬುಕ್‍ನಲ್ಲಿ ಬರೆದುಕೊಂಡಿರುವ ಇಮ್ರಾನ್ ಪಾಷಾ, ಮೃತರಿಗೆ 2 ಲಕ್ಷ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಈ ಹಿಂದೆ ಶಾಸಕ ಜಮೀರ್ ಗೋಲಿಬಾರ್ ನಲ್ಲಿ ಸತ್ತವರಿಗೆ 5 ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಪಾಲಿಕೆ ಸದಸ್ಯ ಎರಡು ಲಕ್ಷ ಘೋಷಣೆ ಮಾಡಿದ್ದಾರೆ.

    ಕೆ.ಜೆ.ಹಳ್ಳಿ ಗಲಾಟೆಯಲ್ಲಿ ಮೃತಪಟ್ಟ ಮೂವರು ಯುವಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಕೊಡುವುದಾಗಿ ಶಾಸಕ ಜಮೀರ್ ಅಹ್ಮದ್ ಘೋಷಿಸಿದ್ದರು. ಆದರೆ ಅನಗತ್ಯ ಗಲಭೆ ಮಾಡಿದವರ ಕುಟುಂಬಕ್ಕೆ ಪರಿಹಾರ ಕೊಟ್ಟರೆ ಬೇರೆಯದ್ದೇ ಸಂದೇಶ ರವಾನೆ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬುದ್ಧಿ ಹೇಳಿದ್ದಾರೆ ಎನ್ನಲಾಗಿತ್ತು. ಇದನ್ನೂ ಓದಿ: ಜಮೀರ್ ಇನ್ ಟ್ರಬಲ್ – ಪಕ್ಷದ ನಾಯಕರಿಂದ ಎಚ್ಚರಿಕೆ

    ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಾದರೆ ಕೊಡಿ. ಆದರೆ ಈ ವಿಷಯ ಮಾತ್ರ ಬಹಿರಂಗ ಆಗಬಾರದು ಎಂದು ಕಾಂಗ್ರೆಸ್ ನಾಯಕರು ಎಂದಿದ್ದಾರೆ. ಎಲ್ಲಿಯೂ ಸಹ ಪರಿಹಾರ ಕೊಟ್ಟೆ ಅಂತ ಹೇಳಬಾರದು ಎಂದು ಬಹಿರಂಗವಾಗಿ ಹೇಳುವಂತಿಲ್ಲ ಎಂದು ವಾರ್ನ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿತ್ತು.

  • ಸೋದರಳಿಯನ್ನ ಬಿಟ್ಟು ಆಟ ಆಡಲು ಹೋಗಿ ತಗ್ಲಾಕೊಂಡ್ರಾ ಕಾರ್ಪೋರೇಟರ್ ಸಂಪತ್‍ರಾಜ್?

    ಸೋದರಳಿಯನ್ನ ಬಿಟ್ಟು ಆಟ ಆಡಲು ಹೋಗಿ ತಗ್ಲಾಕೊಂಡ್ರಾ ಕಾರ್ಪೋರೇಟರ್ ಸಂಪತ್‍ರಾಜ್?

    – ಪೊಲೀಸ್ ಸ್ಟೇಷನ್ ಎದುರು ಪ್ರತಿಭಟನೆ

    ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಾಟೆ ಪ್ರಕರಣಕ್ಕೆ ಹೊಸ ತಿರುವ ಸಿಕ್ಕಿದೆ. ಕಾರ್ಪೋರೇಟರ್ ಸಂಪತ್ ರಾಜ್ ಸೋದರಳಿಯನ ಮೂಲಕ ಗಲಾಟೆ ಮಾಡಿಸಿದ್ರಾ ಅನ್ನೋ ಅನುಮಾನಗಳು ದಟ್ಟವಾಗ್ತಿವೆ. ಗಲಭೆಗೆ ಸಂಬಂಧಿಸಿದಂತೆ ಕಾರ್ಪೋರೇಟರ್ ಸಂಪತ್ ರಾಜ್ ಸೋದರಳಿಯ ಅರುಣ್ ನನ್ನು ಸಿಸಿವಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಅರುಣ್ ನೀಡಿರುವ ಹೇಳಿಕೆಗಳು ಸಂಪತ್‍ರಾಜ್ ಅವರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಸಿಸಿಬಿ ಪೊಲೀಸರ ಮುಂದೆ ಅರುಣ್ ಮಂಡಿಯೂರಿದ್ದಾನೆ ಎನ್ನಲಾಗಿದ್ದು, ಗಲಭೆಯಲ್ಲಿ ನಡೆದ ಘಟನಾವಳಿಗಳ ಬಗ್ಗೆ ಒಂದೊಂದಾಗಿ ಬಾಯಿಬಿಟ್ಟಿದ್ದಾನೆ. ಅರುಣ್ ಗಲಭೆ ನಡೆದಾಗ ನಡೆದ ಫೋನ್ ಸಂಭಾಷಣೆಯ ವಿಚಾರ ಅರುಣ್ ಒಪ್ಪಿಕೊಂಡಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದೀಗ ಸಿಸಿಬಿ ಪೊಲೀಸರು ಅರುಣ್ ಹೇಳಿಕೆಯನ್ನಾಧರಿಸಿ ಟೆಕ್ನಿಕಲ್ ಸಾಕ್ಷ್ಯ ಸಂಗ್ರಹಣೆಗೆ ಮುಂದಾಗಿದ್ದಾರೆ. ಅರುಣ್ ಹೇಳಿಕೆಗಳು ಸಂಪತ್ ರಾಜ್‍ಗೆ ಮುಳುವಾಗಲಿದೆ ಎನ್ನಲಾಗಿದೆ.

    ಅರುಣ್ ಬಂಧನ ಖಂಡಿಸಿ ಆತನ ಸಂಬಂಧಿಕರು ಸ್ಟೇಷನ್ ಎದುರು ಪ್ರತಿಭಟನೆ ನಡೆಸಿದರು. ಕಾರಣ ಇಲ್ಲದೆಯೇ ಅರುಣ್‍ನನ್ನ ಬಂಧಿಸಿ ಚಿತ್ರಹಿಂಸೆ ಕೊಡುತ್ತಿದ್ದಾರೆ. ಕೂಡಲೇ ಬಿಡುಗಡೆ ಮಾಡುವಂತೆ ಆಕ್ರೋಶ ಹೊರಹಾಕಿದರು.

  • ಡಿಜೆ ಹಳ್ಳಿ ಗಲಭೆ ಪುಂಡರಿಗೆ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಲಿಂಕ್

    ಡಿಜೆ ಹಳ್ಳಿ ಗಲಭೆ ಪುಂಡರಿಗೆ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಲಿಂಕ್

    ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದ ಕುರಿತು ಪೊಲೀಸರು ಬಗೆದಷ್ಟು ಸತ್ಯ ಹೊರಗೆ ಬರುತ್ತಿದ್ದು, ಕೆಲ ಆರೋಪಿಗಳು ದೇಶದ್ರೋಹಿಗಳ ಜೊತೆ ಸಂಪರ್ಕದಲ್ಲಿರುವುದು, ಇನ್ನೂ ಕೆಲವರು ದುಷ್ಕೃತ್ಯದಲ್ಲಿ ತೊಡಗಿರುವ ಕುರತ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ಇದೀಗ ಮತ್ತೊಂದು ಭಯಾನಕ ಸತ್ಯ ಹೊರ ಬಿದ್ದಿದ್ದು, ಡಿಜೆ ಹಳ್ಳಿ ಗಲಭೆ ಪ್ರಕರಣ ಪುಂಡರಿಗೆ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಲಿಂಕ್ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ನಗರದ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ರುವಾರಿಗೆ ಪುಂಡರು ನಿಕಟ ಸಂಬಂಧಿಗಳು ಎಂಬ ಮಾಹಿತಿ ಲಭ್ಯವಾಗಿದೆ.

    ಗಲಭೆ ಪ್ರಕರಣದಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿ ಅಫ್ರೀದಿ ಸಹೀದರ ಮೊಹಮದ್‍ನ್ನು ಪೊಲೀಸರು ಬಂಧಿಸಿದ್ದು, ಅಫ್ರೀದಿಯು ಸಿಯಾವುದ್ದೀನ್, ಮೊಹಮದ್ ಸೇರಿದಂತೆ ಐವರು ಆರೋಪಿಗಳ ಜೊತೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಸದ್ಯ ಬಾಂಬ್ ಬ್ಲಾಸ್ಟ್ ಲಿಂಕ್ ಬಗ್ಗೆ ಸಿಸಿಬಿಯಿಂದ ತನಿಖೆ ಮುಂದುವರಿದಿದ್ದು, ಎಲ್ಲ ರೀತಿಯಿಂದಲೂ ವಿಚಾರಣೆ ನಡೆಸುತ್ತಿದ್ದಾರೆ. ಈ ಮೂಲಕ ಹಿಂದಿನ ಸತ್ಯವನ್ನು ಬಾಯ್ಬಿಡಿಸುತ್ತಿದ್ದಾರೆ.

    2014ರ ಡಿಸೆಂಬರ್ ನಲ್ಲಿ ಚರ್ಚ್ ಸ್ಟ್ರೀಟ್ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಇದು ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿತ್ತು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಹಲವರನ್ನು ಬಂಧಿಸಿದ್ದರು. ಇದೀಗ ಪ್ರಮುಖ ಆರೋಪಿಯೊಂದಿಗೆ ಈತ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ಬಾಂಬ್ ಬ್ಲಾಸ್ಟ್ ರುವಾರಿ ಸಾರಾಯಿಪಾಳ್ಯದ ಹುಡುಗಿಯನ್ನು ಮದುವೆಯಾಗಿದ್ದ. ಬಳಿಕ ಪರಪ್ಪನ ಅಹ್ರಹಾರದಲ್ಲಿ ಎನ್‍ಐಎ ಆತನನ್ನು ಬಂಧಿಸಿತ್ತು.