Tag: Bengaluru riot

  • ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಒಂದು ವರ್ಷ

    ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಒಂದು ವರ್ಷ

    – ನ್ಯಾಯ ಸಿಕ್ಕೇ ಸಿಗುತ್ತೆ ಅಂದ್ರು ಶಾಸಕ ಅಖಂಡ

    ಬೆಂಗಳೂರು: ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಇಂದಿಗೆ ಬರೋಬ್ಬರಿ ಒಂದು ವರ್ಷ ತುಂಬಿದೆ. ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ನವೀನ್ ಹಾಕಿದ್ದ ಪೋಸ್ಟ್ ನೆಪಕ್ಕೆ ಶುರುವಾಗಿದ್ದ, ಗಲಾಟೆ ಪ್ರಕರಣ ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗಲಭೆಕೋರರು, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಬಳಿ ಜಮಾಯಿಸಿ ಕಲ್ಲು ತೂರಾಟ ಮಾಡಿ ಅಲ್ಲಿಂದ ವಾಹನಗಳು ಸೇರಿದಂತೆ ಮನೆಗೆ ಬೆಂಕಿ ಹಾಕಿದ್ದರು. ನಂತರ ನೋಡು ನೋಡುತ್ತಿದ್ದಂತೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಪುಂಡಾಟ ಮೆರೆದು ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಮನೆಗಳಿಗೆ ಕಲ್ಲು ತೂರಾಟ ಮಾಡಿದ್ದರು.

    ಗಲಭೆ ವಿಕೋಪಕ್ಕೆ ಹೋಗ್ತಿದ್ದಂತೆ ಡಿಜೆ ಹಳ್ಳಿ , ಕೆಜಿ ಹಳ್ಳಿ ಪೊಲೀಸ್ ಠಾಣೆಯ ಬಳಿ ಬಂದ ನೂರಾರು ಗಲಭೆಕೊರರು, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿ ಪೊಲೀಸರ ವಾಹನಗಳನ್ನು ಸುಟ್ಟು ಪುಂಡಾಟ ಮೆರದಿದ್ದರು. ಪೊಲೀಸರು ಇಷ್ಟೆಲ್ಲಾ ನಡೀತಿದ್ರು ಏನು ಮಾಡಲಾಗದ ಸ್ಥಿತಿಯಲ್ಲಿ ನಿಲ್ಲಬೇಕಾಯಿತು. ಕೊನೆಗೆ ಪರಿಸ್ಥಿತಿ ಕೈ ಮೀರುತ್ತಿರುವದನ್ನ ನೋಡಿ ಪೊಲೀಸರು ಫೈರಿಂಗ್ ಶುರುಮಾಡಿದ್ದರು. ಈ ವೇಳೆ ಓರ್ವ ಗುಂಡೇಟಿಗೆ ಬಲಿಯಾಗಿದ್ದ.

    ಎನ್‍ಐಎ ಮತ್ತು ಸಿಸಿಬಿ ಪೊಲೀಸರು ತನಿಖೆ ನಡೆಸಿ 450ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ತನಿಖೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡದ ಬಗ್ಗೆ ಸಾಕ್ಷಿ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಕೂಡ ಬಂಧಿಸಲಾಗಿತ್ತು. ಸದ್ಯ ಈ ಪ್ರಕರಣದ ತನಿಖೆಯನ್ನು ಎನ್‍ಐಎ ಪೊಲೀಸರು ನಡೆಸುತ್ತಿದೆ. ವಿಪರ್ಯಾಸವೆಂದರೆ ಗಲಾಟೆಯಲ್ಲಿ ಹಾನಿಗೊಳಾದ ಡಿಜೆ ಹಳ್ಳಿ ಪೊಲೀಸ್ ಠಾಣೆ ಇನ್ನೂ ಕೂಡ ಹಾಗೇ ಇದೆ. ಮನೆ ಕಳೆದುಕೊಂಡ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಕೂಡ ನೆಲಸಮ ಆಗಿದ್ದು, ಇನ್ನೂ ನಿರ್ಮಾಣ ಆಗಿಲ್ಲ. ಇದನ್ನೂ ಓದಿ: ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ – ಪೊಲೀಸರು ಕೊಟ್ರು 20-20ಯ ತ್ರಿಪಲ್ ಶಾಕ್!

    ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಪ್ರತಿಕ್ರಿಯೆ:
    ಬೆಂಗಳೂರಿನ ಡಿಜೆ ಹಳ್ಳಿ -ಕೆಜಿ ಹಳ್ಳಿ ಗಲಭೆಗೆ ಇಂದಿಗೆ ಸರಿಯಾಗಿ ಒಂದು ವರ್ಷ ಆದ ಹಿನ್ನೆಲೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮಾಧ್ಯಮ ಗಳಿಗೆ ಪ್ರತಿಕ್ರಿಯೆಸಿದ್ದಾರೆ. ಕಳೆದ ವರ್ಷ ಇದೇ ದಿನದಂದು ನಮ್ಮ ಮನೆ ಮೇಲೆ ನೂರಾರು ಸಂಖ್ಯೆಯಲ್ಲಿ ಕಿಡಿಗೇಡಿಗಳು ಗಲಾಟೆ ಮಾಡಿ ಬೆಂಕಿ ಹಾಕಿದ್ರು. ಮನೆ ಮುಂದಿದಿದ್ದ ವಾಹನಗಳನ್ನು ಸುಟ್ಟು ಹಾಕಿದ್ರು. ನಮ್ಮ ಕುಟುಂಬ ತಾಯಿ -ತಂದೆ ಬಾಳಿ ಬದುಕಿದ ಮನೆ ಇದು. ನೋಡಿದ್ರೆ ದುಖಃ ಆಗುತ್ತೆ. ಇನ್ನೂ ಕೂಡ ಇಲ್ಲಿ ಹೊಸ ಮನೆ ನಿರ್ಮಾಣ ಮಾಡಲು ಆಗಿಲ್ಲ. ನಮ್ಮ ಪಕ್ಷದ ಕೆಲ ನಾಯಕರೇ ಅಂದಿನ ಘಟನೆಗೆ ಪರೋಕ್ಷವಾಗಿ ಬೆಂಬಲ ನೀಡಿರೋದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ನಾನು ಇನ್ನೂ ಕೂಡ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.  ಇದನ್ನೂ ಓದಿ:ಹೀಗೊಂದು ವಿಚಿತ್ರ ಕೋಳಿ ಮೊಟ್ಟೆ – ಮನೆಯವರಿಗೆ ಅಚ್ಚರಿ

    ನನಗೆ ನ್ಯಾಯ ಸಿಕ್ಕೇ ಸಿಗುತ್ತೆ:
    ನನ್ನ ಮನೆ ಮೇಲಿನ ದಾಳಿಗೆ ಯಾರೆಲ್ಲಾ ಕಾರಣ, ಏನೆಲ್ಲಾ ಮಾಡಿದ್ದು ಅನ್ನೋದನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದೀನಿ. ಅವರು ನನಗೆ ನ್ಯಾಯ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನಗೂ ಕೂಡ ನ್ಯಾಯ ಸಿಗುವ ವಿಶ್ವಾಸವಿದೆ, ನಮ್ಮ ಪಕ್ಷದ ಮಾಜಿ ಮೇಯರ್ ಸಂಪತ್ ರಾಜ್, ಯಾಸೀರ್, ಅರುಣ್, ಸಂತೋಷ, ಝಕೀರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇನೆ.. ಈ ಪ್ರಕರಣದಲ್ಲಿ ಬಂಧನವಾಗಿ, ಈಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಅವರ ಜಾಮೀನು ವಜಾ ಮಾಡಬೇಕು ಅಂತಾ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದೇನೆ. ತಡವಾದ್ರು ನನಗೆ ನ್ಯಾಯ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆ ನನ್ನದು. ನನಗೆ ಆದ ರೀತಿ ಬೇರೆ ಯಾವುದೇ ಶಾಸಕ ಅಥವಾ ವ್ಯಕ್ತಿ ಗೆ ಆಗಬಾರದು ಅಂತಾ ತಮ್ಮ ಮನದ ನೋವವನ್ನು ಹೊರಹಾಕಿದರು. ಇದನ್ನೂ ಓದಿ:ಅಕ್ಟೋಬರ್ 1ರೊಳಗೆ ಮೀಸಲಾತಿ ಪ್ರಕಟಿಸಿ- ಸರ್ಕಾರಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಂದೇಶ

  • ಡಿಜೆ ಹಳ್ಳಿ ಗಲಭೆ- ಇಬ್ಬರು ಶಾಸಕರನ್ನ ವಿಚಾರಣೆ ನಡೆಸಿದ ಎನ್‍ಐಎ

    ಡಿಜೆ ಹಳ್ಳಿ ಗಲಭೆ- ಇಬ್ಬರು ಶಾಸಕರನ್ನ ವಿಚಾರಣೆ ನಡೆಸಿದ ಎನ್‍ಐಎ

    ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಎನ್‍ಐಎ ಇಬ್ಬರು ಕಾಂಗ್ರೆಸ್ ಶಾಸಕರನ್ನು ವಿಚಾರಣೆಗೆ ಒಳಪಡಿಸಿರುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಇಬ್ಬರು ಎನ್‍ಐಎ ವಿಚಾರಣೆ ಹಾಜರಾಗಿ ತಮ್ಮ ಹೇಳಿಕೆಯನ್ನ ದಾಖಲಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಾಗ ಇಬ್ಬರು ಶಾಸಕರು ಘಟನಾ ಸ್ಥಳದಲ್ಲಿರುವ ಬಗ್ಗೆ ಎನ್‍ಐಎಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಎನ್‍ಐಎ ಇಬ್ಬರನ್ನು ಬೆಂಗಳೂರಿನ ದೊಮ್ಮಲೂರಿನ ಕಚೇರಿಯಲ್ಲಿ ವಿಚಾರಣೆ ನಡೆಸಿದೆ. ಮಂಗಳವಾರ ಜಮೀರ್ ಅಹ್ಮದ್ ಮತ್ತು ಸೋಮವಾರ ರಿಜ್ವಾನ್ ಅರ್ಷದ್ ವಿಚಾರಣೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

    ಜಮೀರ್ ಅಹ್ಮದ್ ಅವರನ್ನು ಸುಮಾರು 20 ನಿಮಿಷ ಮತ್ತು ರಿಜ್ವಾನ್ ಅರ್ಷದ್ ಅವರನ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಎನ್‍ಐಎ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಅಂದು ಗಲಭೆ ಸ್ಥಳಕ್ಕೆ ನೀವು ಹೋಗಿದ್ಯಾಕೆ? ಗಲಭೆ ಬಗ್ಗೆ ನಿಮಗೆ ಹೇಗೆ ಗೊತ್ತಾಯ್ತು? ಇದು ಪೂರ್ವ ನಿಯೋಜಿತ ಅಂತ ನಿಮಗೆ ಅನ್ನಿಸಿದೆಯಾ? ಉದ್ರಿಕ್ತರು ನಿಮ್ಮ ಮಾತು ಆಲಿಸುವ ಸೌಜನ್ಯ ತೋರಿಸಿದ್ರಾ? ಗಲಭೆ ಕೋರರನ್ನ ಕುರಿತು ಏನು ಹೇಳಿದಿರಿ ಎಂದು ಪ್ರಶ್ನೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಡಿ.ಜೆ. ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಿಸಿಬಿ ಕೋರ್ಟ್ ಗೆ ಸಲ್ಲಿಸಿದ ದೋಷರೋಪ ಪಟ್ಟಿಯಲ್ಲಿನ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಜೀವಂತ ದಹನಕ್ಕೆ ಸಂಚು ನಡೆದಿತ್ತು ಎಂಬ ವಿಚಾರ ಬಯಲಾಗಿದೆ. ಡಿ.ಜೆ. ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್-ಎಸ್‍ಡಿಪಿಐ ಪಾತ್ರವಿರೋ ಬಗ್ಗೆ ಚಾರ್ಜ್‍ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

    ಮುಸ್ಲಿಂ ಬಾಹುಳ್ಯದ ತಿಲಕ್‍ನಗರ, ಚಾಮರಾಜಪೇಟೆ, ಗೋರಿಪಾಳ್ಯದ ಪುಂಡ ಯುವಕರನ್ನು ಪ್ರಚೋದಿಸಿ ಗಲಭೆ ಮಾಡಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಕಾಂಗ್ರೆಸ್ಸಿಗರೇ ಬೆಂಕಿ ಹಚ್ಚಿಸಿದ್ದಾರೆ. ಅಖಂಡ ಮನೆಗೆ ಬೆಂಕಿ ಬಿದ್ದಾಗ, ಕೇವಲ 100 ಮೀಟರ್ ದೂರದಲ್ಲಿ ಇರುವ ಸಂತೋಷ್ ನಿವಾಸದಲ್ಲಿ ಸಂಪತ್ ರಾಜ್ ಇದ್ದರು. ಅಸಲಿಗೆ ಗಲಭೆಗೆ ಫಂಡಿಂಗ್ ಮಾಡಿದ್ದೇ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಜಾಕೀರ್.

    ಗಲಭೆ ನಡೆಸಲು ಬಂದಿದ್ದ ಪುಂಡರಿಗೆ ಸಂಪತ್ ರಾಜ್ ಫ್ರೀಯಾಗಿ ಸಂಪತ್ ರಾಜ್ ಪೆಟ್ರೋಲ್ ಕೊಡಿಸಿದ್ರು. ಇದರ ಜವಾಬ್ದಾರಿಯನ್ನು ಅರುಣ್ ವಹಿಸಿಕೊಂಡಿದ್ದನು. ಕಾವಲ್ ಬೈರಸಂದ್ರದ ಬಸ್ ನಿಲ್ದಾಣದಲ್ಲೇ ಹಣ ಕೂಡ ಹಂಚಲಾಗಿತ್ತು ಎಂಬುದಕ್ಕೆ ದೃಶ್ಯ ಸಾಕ್ಷ್ಯ ಸಮೇತ ಸಿಸಿಬಿ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್‍ಶೀಟ್ ಬೆನ್ನಲ್ಲೇ ಶಾಸಕ ಅಖಂಡ ಶ್ರೀನಿವಾಸ್ ಬೆಂಬಲಿಗರು ಸಂಪತ್ ರಾಜ್ ವಿರುದ್ಧ ಬೀದಿಗೆ ಇಳಿದಿದ್ದಾರೆ. ಟ್ಯಾನರಿ ರೋಡ್‍ನ ಸಂಪತ್ ರಾಜ್ ನಿವಾಸದೆದರು ಪ್ರತಿಭಟನೆ ನಡೆಸಿದರು. ಸಂಪತ್ ರಾಜ್, ಜಾಕೀರ್ ಬಂಧಿಸುವಂತೆ ಒತ್ತಾಯಿಸಿದರು.

  • ಡಿಜೆ ಹಳ್ಳಿ ಗಲಭೆಯಲ್ಲಿ ಕೆಲ ಕಾಂಗ್ರೆಸ್ ನಾಯಕರ ಕೈವಾಡವೂ ಇದೆ: ರೋಷನ್ ಬೇಗ್

    ಡಿಜೆ ಹಳ್ಳಿ ಗಲಭೆಯಲ್ಲಿ ಕೆಲ ಕಾಂಗ್ರೆಸ್ ನಾಯಕರ ಕೈವಾಡವೂ ಇದೆ: ರೋಷನ್ ಬೇಗ್

    ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಯಲ್ಲಿ ಕೆಲ ಕಾಂಗ್ರೆಸ್ ನಾಯಕರ ಕೈವಾಡವೂ ಇದೆ ಎಂದು ಮಾಜಿ ಸಚಿವ ರೋಶನ್ ಬೇಗ್ ಆರೋಪಿಸಿದ್ದಾರೆ.

    ಡಿಜೆ ಹಳ್ಳಿ ಗಲಭೆ ಕುರಿತು ಪ್ರತಿಕ್ರಿಯಿಸಿರುವ ಅವರು, ಗೋರಿ ಪಾಳ್ಯದ ಮೌಲಾನ ಇಲ್ಲಿಗೆ ಯಾಕೆ ಬರಬೇಕಿತ್ತು, ಕಲಾಸಿಪಾಳ್ಯದಿಂದ, ಟಿಪ್ಪು ನಗರದಿಂದ ಇಲ್ಲಿಗೆ ಯಾಕೆ ಬರಬೇಕಿತ್ತು? ಹೊರಗಿನವರು ಯಾರ್ಯಾರೋ ಬಂದಿದ್ದರು. ದಿಡೀರ್ ಗಲಾಟೆ ಮಾಡಿದರು ಎಂದು ಸ್ಥಳಿಯರೇ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಪೊಲೀಸರು ಬಂಧಿಸಿದವರಲ್ಲಿ ಕೆಲವರು ಅಮಾಯಕರೂ ಇರಬಹುದು. ಅಂತಹವರನ್ನು ಬಿಡಿ. ಆದರೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ಆಗಲೇಬೇಕು. ಜಮೀರ್ ಅಹ್ಮದ್ ಬಗ್ಗೆ ನಾನು ಜಾಸ್ತಿ ಮಾತಾಡಲ್ಲ. ಜಮೀರ್ ಏನು ಅಂತ ನಾನು ಮಾತನಾಡಲಿ. ನಾನು ವಿದ್ಯಾರ್ಥಿ ಹೋರಾಟದಿಂದ ಬಂದ ಸೀನಿಯರ್ ಲೀಡರ್. ಯಡಿಯೂರಪ್ಪನವರು ಸಿಎಂ ಆದರೆ ಜಮೀರ್ ವಾಚ್‍ಮನ್ ಕೆಲಸ ಮಾಡ್ತೀನಿ ಅಂದಿದ್ದರು. ಮೊದಲು ಆ ಕೆಲಸ ಮಾಡಲಿ ಎಂದು ಹರಿಹಾಯ್ದಿದ್ದಾರೆ.

  • ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

    ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

    – ಕೆಜಿ ಹಳ್ಳಿ ಪುಂಡರಿಗೆ ಕೇರಳವೇ ಅಡುಗುದಾಣ

    ಬೆಂಗಳೂರು: ಇದು ಕೆಜಿ ಹಳ್ಳಿ ಟು ಕೇರಳ ಸ್ಟೋರಿ. ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್ ಪತ್ತೆಯಾಗಿದ್ದು, ಸಿಸಿಪಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ಮಾಡಿದ ಪುಂಡರು ಅಂತಾರಾಜ್ಯದಲ್ಲಿ ತಲೆಮರೆಸಿಕೊಂಡಿದ್ದು, ಡಿಜೆ ಹಳ್ಳಿಯ ಪುಂಡರಿಗೆ ಕೇರಳ ರಾಜ್ಯವೇ ಅಡಗುತಾಣವಾಗಿದೆಯಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

    ಮಂಗಳವಾರ ಗಲಾಟೆ ಮಾಡಿ ಊರು ಬಿಟ್ಟಿರುವ 30 ಕ್ಕೂ ಹೆಚ್ಚು ಲೋಕಲ್ ಪುಂಡರು ಕೇರಳದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಂಧನವಾಗಿರುವ ಆರೋಪಿಗಳ ಮಾಹಿತಿ ಮತ್ತು ಕಾಲ್ ಡಂಪ್ ಲೊಕೇಶನ್ ನಲ್ಲಿ ಈ ಮಾಹಿತಿ ಬಟಾಬಲಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸಿಸಿಬಿ ತಂಡ ಕೇರಳದಲ್ಲಿ ಹಂಟಿಂಗ್ ಶುರು ಮಾಡಿದೆ. ಹೆಚ್ಚಿನ ಮಾಹಿತಿ ಕಲೆಹಾಕಿ ಪುಂಡರಿಗಾಗಿ ಬಲೆ ಬೀಸಿದೆ.

    ಕೃತ್ಯದ ರುವಾರಿಗಳಾದ ಉಬೇರ್, ಮುದಾಸಿರ್ ಸೇರಿದಂತೆ 30ಕ್ಕೂ ಹೆಚ್ಚು ಜನರಗೆ ಕೇರಳ ಅಡಗುತಾಣವಾಗಿದೆ. ಕೇರಳವೇ ಸುರಕ್ಷಿತ ಸ್ಥಳ ಎಂದು ಭಾವಿಸಿದ ಪುಂಡರು, ಪ್ಲಾನ್ ಮಾಡಿ ಅಲ್ಲಿಗೆ ಪರಾರಿಯಾಗಿದ್ದಾರೆ.

  • ಬಹುಶಃ ಬೆಂಗಳೂರು ಗಲಭೆಯ ಡೈರಕ್ಟ್ರು-ಪ್ರೊಡ್ಯೂಸರ್ ಜಮೀರ್ ಅನ್ಸುತ್ತೆ: ಸಿ.ಟಿ.ರವಿ

    ಬಹುಶಃ ಬೆಂಗಳೂರು ಗಲಭೆಯ ಡೈರಕ್ಟ್ರು-ಪ್ರೊಡ್ಯೂಸರ್ ಜಮೀರ್ ಅನ್ಸುತ್ತೆ: ಸಿ.ಟಿ.ರವಿ

    ಚಿಕ್ಕಮಗಳೂರು: ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು. ಅವರೇ ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ರೆ ನಟರು ಯಾರೆಂದು ಗೊತ್ತೇ ಗೊತ್ತಿರುತ್ತೆ ಅದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಮೀರ್ ಅಹಮದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಮೀರ್ ಅಹಮದ್ ಗೋಲಿಬಾರ್ ನಲ್ಲಿ ಮೃತರಾದವರ ಮನೆಗೆ ಹೋಗಿ ಚೆಕ್ ನೀಡಿ ಬಂದಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು ಎಂದು ಕಿಡಿಕಾರಿದ್ದಾರೆ. ಈಗ ಜಮೀರ್ ಅಹಮದ್ ಎಲ್ಲ ಜಿಪಿಎ ತೆಗೆದುಕೊಂಡಿರುವುದರಿಂದ ಏನ್ ನಷ್ಟ ಆಗಿದೆ ಅದನ್ನು ಜಮೀರ್ ಅಹಮದ್‍ರಿಂದ ವಸೂಲಿ ಕ್ರಮ ತೆಗೆದುಕೊಳ್ಳೋಣ ಎಂದರು.

    ನೀವು ಸಹಾಯ ಮಾಡುವುದು ಮಾನವೀಯ ಧರ್ಮ ಇರಬಹುದು. ಯಾವ ಸಂದರ್ಭದಲ್ಲಿ ಸಹಾಯ ಮಾಡ್ತಿದ್ದೀರಾ, ಯಾರಿಗೆ ಸಹಾಯ ಮಾಡ್ತಿದ್ದೀರಾ ಎಂಬುದು ಮುಖ್ಯವಾಗುತ್ತೆ. ಅದು ಕೊಡುವ ಮೆಸೇಜ್ ಮಾನವೀಯ ಮೆಸೇಜ್ ಕೊಡುವುದಿಲ್ಲ. ಯಾರು ಏನೇ ಮಾಡಿದರು, ನಾನು ನಿಮ್ಮ ಜೊತೆ ಇದ್ದೀನಿ ಎಂಬ ಮೇಸೆಜ್ ಕೊಡುತ್ತೆ. ಇದರ ಬಗ್ಗೆ ಅವರ ಪಕ್ಷ ಯೋಚಿಸಬೇಕು ಎಂದರು. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರು ಜೈಲಿನಿಂದ ಬಂದರೆ ಅವರಿಗೆ ಹಾರ ಹಾಕಿ ಸನ್ಮಾನ ಮಾಡುತ್ತಾರೆ. ಅವರಿಗೆ ಪ್ರಚೋದಿಸುವ ಕೆಲಸವನ್ನು ಜಮೀರ್ ಮಾಡುತ್ತಿದ್ದಾರೆ ಎಂದರು.

    ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರಲ್ಲ. ಅಮಾಯಕರಾಗಿದ್ದರೆ ಮನೆಯಲ್ಲಿ ಮಲಗಿರೋರು. 300ಕ್ಕೂ ಹೆಚ್ಚು ವಾಹನ ಸುಟ್ಟಿದ್ದಾರೆ. ಆ ವಾಹನ ಸುಟ್ಟವರು ಯಾರು ಹೇಳಲಿ ಹಾಗಾದರೆ. ಇವರು ಅಮಾಯಕರಾದರೆ ಆ ಕಿರಾತಕರು ಯಾರು. ಜಮೀರ್ ಅಹಮದ್ ಖಾನ್‍ಗೆ ಚೆನ್ನಾಗಿ ಗೊತ್ತಿರುತ್ತೆ ಎಂದಿದ್ದಾರೆ. ನಷ್ಟ ವಸೂಲಿ ಕೆಲಸ ಆಗಲೇಬೇಕು. ಈಗಿನ ಕಾಂಗ್ರೆಸ್ ಒಳ ರಾಜಕಾರಣ ನೋಡಿದರೆ ಅವರು ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸದರು.

    ಬೆಂಗಳೂರು ಗಲಭೆಯನ್ನು ಲೀಡ್ ಮಾಡಿರೋದು ಎಸ್.ಡಿ.ಪಿ.ಐ. ಅದರಲ್ಲಿ ನಟನೆ ಮಾಡಿ 300ಕ್ಕೂ ಹೆಚ್ಚು ವಾಹನ ಸುಟ್ಟಿರೋರು ಈ ಜನ. ಅವರಿಗೆ ಗೊತ್ತಿರುತ್ತೆ ಸ್ಪಷ್ಟಪಡಿಸಲಿ ಎಂದಿದ್ದಾರೆ. ನಾನು ಆರಂಭದಿಂದ ಹೇಳಿದ್ದೇನೆ. ಕಾಂಗ್ರೆಸ್ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟೋ ಕೆಲಸ ಮಾಡುತ್ತಿದೆ. ಜಮೀರ್ ಅಹಮದ್ ಮಾಡುತ್ತಿರುವುದು ಅದನ್ನೇ ಎಂದು ಕಾಂಗ್ರೆಸ್ ಹಾಗೂ ಜಮೀರ್ ಅಹಮದ್ ವಿರುದ್ಧ ಕಿಡಿಕಾರಿದ್ದಾರೆ.

  • ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿಯ ಕಾನೂನಿದೆ: ಮಾಧುಸ್ವಾಮಿ

    ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿಯ ಕಾನೂನಿದೆ: ಮಾಧುಸ್ವಾಮಿ

    ತುಮಕೂರು: ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿ ಮಾಡಬೇಕು ಎಂಬ ಕಾನೂನನ್ನು ಕೇಂದ್ರ ಸರ್ಕಾರ ತಂದಿದೆ. ಆದರೆ ಕರ್ನಾಟಕದಲ್ಲಿ ಅದು ಜಾರಿ ಆಗಿರಲಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಸ್ತಿ ಮುಟ್ಟುಗೋಲು ಆಗುವಂತಹ ಪ್ರಕರಣಗಳು ಇನ್ನೂ ಆಗಿರಲಿಲ್ಲ. ಹೀಗಾಗಿ ಆ ಕಾನೂನು ರಾಜ್ಯದಲ್ಲಿ ಇನ್ನೂ ಜಾರಿ ಆಗಿರಲಿಲ್ಲ. ಡಿಜೆ ಹಳ್ಳಿ ಪ್ರಕರಣದಲ್ಲಿ ಗಲಭೆಕೋರರಿಂದ ಆಸ್ತಿ ನಷ್ಟ ವಸೂಲಿ ಮಾಡುವ ಬಗ್ಗೆ ಸಿಎಂ ಬಳಿ ಚರ್ಚಿಸಬೇಕಾಗಿದೆ. ಸಿಎಂ ಕ್ವಾರಂಟೆನ್ ನಲ್ಲಿದ್ದಾರೆ. ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

    ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ನಿಷೇಧದ ಕುರಿತು ಮಾತನಾಡಿದ ಅವರು, ಕಾನೂನಿನ ಕ್ರಮ ಏನಿದೆಯೋ ಅದನ್ನು ಖಂಡಿತ ಜಾರಿ ಮಾಡುತ್ತೇವೆ. ಆದರೆ ತನಿಖಾ ವರದಿ ಬರದೇ ಪ್ರತಿಕ್ರಿಯಸಲು ಸಾಧ್ಯವಿಲ್ಲ. ಮೂರು ಸಾವಿರ ಜನ ಸೇರ್ತಾರೆ ಅಂದ್ರೆ ಪ್ರಚೋದನೆ ಇಲ್ಲದೆ, ಪ್ಲಾನ್ ಇಲ್ಲದೆ, ಸಂಘಟನೆ ಇಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

  • ನಿಮ್ಮ ಬಳಿ ಮದ್ದು, ಗುಂಡುಗಳು ಎಷ್ಟಿವೆ? ಬುಲೆಟ್ ಪ್ರೂಫ್ ಜಾಕೆಟ್ ಸರಿಯಾಗಿ ಹಾಕಿಕೊಳ್ಳಿ : ಅಲೋಕ್ ಕುಮಾರ್

    ನಿಮ್ಮ ಬಳಿ ಮದ್ದು, ಗುಂಡುಗಳು ಎಷ್ಟಿವೆ? ಬುಲೆಟ್ ಪ್ರೂಫ್ ಜಾಕೆಟ್ ಸರಿಯಾಗಿ ಹಾಕಿಕೊಳ್ಳಿ : ಅಲೋಕ್ ಕುಮಾರ್

    ಬೆಂಗಳೂರು: ನಿಮ್ಮ ಬಳಿ ಮದ್ದು ಗುಂಡುಗಳಿವೆಯಾ, ಎಷ್ಟಿವೆ? ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಸರಿಯಾಗಿ ಹಾಕಿಕೊಳ್ಳಿ. ಯಾವುದೇ ಕ್ಷಣದಲ್ಲಿ ಏನೇ ಘಟಿಸಿದರೂ ಎದುರಿಸಲು ಸಿದ್ಧರಾಗಿ ಎಂದು ಕೆಎಸ್‍ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

    ಡಿಜೆ ಹಳ್ಳಿಯ ಗಲಭೆ ಪ್ರಕರಣದಲ್ಲಿ ಹಲವು ಪೊಲೀಸರಿಗೆ ಗಾಯಗಳಾಗಿದ್ದು, ಸಿಬ್ಬಂದಿ ಯೋಗಕ್ಷೇಮ ವಿಚಾರಿಸಲು ಅಲೋಕ್ ಕುಮಾರ್ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಕೆಜೆ ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಾದ ಹಾನಿಯ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ಘಟನೆ ವಿವರ ಪಡೆದಿದ್ದಾರೆ. ಈ ವೇಳೆ ಸಿಬ್ಬಂದಿಗೆ ಎಚ್ಚರದಿಂದಿರುವಂತೆ ಸೂಚನೆಯನ್ನೂ ನೀಡಿದ್ದಾರೆ.

    ನಿನ್ನೆ ರಾತ್ರಿ ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ದುರ್ಘಟನೆಯಲ್ಲಿ ಹಲ್ಲೆಗೊಳಗಾದ ನಾಲ್ಕು ಜನ ಕೆಎಸ್‍ಆರ್‍ಪಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗಳಾಗಿವೆ. ಘಟನೆಯಲ್ಲಿ ನಾಲ್ಕು ಪೊಲೀಸ್ ವಾಹನಗಳು ಸುಟ್ಟು ಕರಕಲಾಗಿವೆ. ಇದರಲ್ಲಿ 20 ಜನರಿಗೆ ಗಾಯಗಳಾಗಿದ್ದು, 4 ಜನರಿಗೆ ಗಂಭೀರ ಗಾಯಗಳಾಗಿವೆ. ಹೀಗಾಗಿ ಅಲೋಕ್ ಕುಮಾರ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.

    ಸಣ್ಣಪುಟ್ಟ ಗಾಯಗಳಾಗಿದ್ದವರು ಈಗಾಗಲೇ ಡಿಸ್ಚಾರ್ಜ್ ಆಗಿದ್ದು, ಕೆಜೆ ಹಳ್ಳಿ, ಡಿಜೆ ಹಳ್ಳಿ ಸುತ್ತ 50 ಕೆಎಸ್‍ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಸಂಪೂರ್ಣ ಭದ್ರತೆ ಕಲ್ಪಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.