Tag: bengaluru rain

  • ರಾಜ್ಯದ ಹಲವೆಡೆ ಭಾರೀ ಮಳೆ- ಕೆಲವೆಡೆ ಜನಜೀವನ ಅಸ್ತವ್ಯಸ್ತ

    ರಾಜ್ಯದ ಹಲವೆಡೆ ಭಾರೀ ಮಳೆ- ಕೆಲವೆಡೆ ಜನಜೀವನ ಅಸ್ತವ್ಯಸ್ತ

    ಬೆಂಗಳೂರು: ರಾಜ್ಯದ ಹಲವೆಡೆಗಳಲ್ಲಿ ಇಂದು ಭಾರೀ ಮಳೆಯಾಗಿದೆ. ಮಲೆನಾಡಿನಲ್ಲಿ ಮತ್ತೆ ಮಳೆಯಾಗಿದ್ದು ಹೊಸನಗರ ತಾಲೂಕಿನ ನಗರ ಹೋಬಳಿಯ ಬಾಳೆಕೊಪ್ಪ ಸಂಪರ್ಕ ಕಡಿತಗೊಂಡಿದೆ. ಸುರಿದ ಭಾರೀ ಮಳೆಗೆ ರಸ್ತೆ ಮೇಲೆ ಎರಡು ಅಡಿ ನೀರು ನಿಂತ ಪರಿಣಾಮ ಬಾಳೆಕೊಪ್ಪ ಮಾರ್ಗ ಬಂದ್ ಆಗಿದೆ.

    ಹಿನ್ನೀರು ಒಮ್ಮೆಲೆ ಏರಿ ಬಂದ ಪರಿಣಾಮ ಬಾಳೆಕೊಪ್ಪ ಸಂಪರ್ಕ ಕಡಿತಗೊಂಡಿದೆ. ಶಾಲೆಗೆ ಹೊರಟ ಬಾಳೆಕೊಪ್ಪ, ಸೂಲಿಕಲ್ಲು, ಮುಂಡುಕೋಡು, ಕೆರೆಮಠ ಗ್ರಾಮದ ಜನತೆ ಪರದಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶ್ರೀಧರಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಿಂಗನಮಕ್ಕಿ ಡ್ಯಾಂ ತುಂಬಿದ್ದು, ಶರಾವತಿ ನದಿಗೆ ನಿನ್ನೆಯಿಂದ ನೀರು ಹರಿಸಲಾಗುತ್ತಿದೆ.

    ಬಳ್ಳಾರಿಯಲ್ಲೂ ಮಳೆಯಾಗಿದ್ದು, ಜಿಲ್ಲೆಯ ಸಂಡೂರು ತಾಲೂಕಿನ ಭುಜಂಗನಗರದಲ್ಲಿ ಮಣ್ಣಿನ ಮನೆ ಕುಸಿದು ವೃದ್ಧೆ ಮೃತಪಟ್ಟಿದಲ್ಲದೇ ಮತ್ತೊಬ್ಬ ಮಹಿಳೆ ಗಾಯಗೊಂಡ ಘಟನೆ ನಡೆದಿದೆ. ಇನ್ನೊಬ್ಬ ಮಹಿಳೆಗೆ ಗಾಯವಾಗಿದ್ದು, ಬಸಮ್ಮ(70) ಮೃತ ವೃದ್ಧೆ ಎಂದು ಗುರುತಿಸಲಾಗಿದೆ. ಬಸಮ್ಮ ಸಹೋದರಿ ಉಜ್ಜಮ್ಮಗೆ ಗಾಯವಾಗಿದೆ. ಆಗಸ್ಟ್ 30 ಮತ್ತು ಸೆ.1ರಂದು ಸುರಿದ ಮಳೆಗೆ ನೆನೆದಿದ್ದ ಮನೆಯ ಮಣ್ಣಿನ ಗೋಡೆಗಳು ಕುಸಿದ ಪರಿಣಾಮ ಈ ದುರಂತ ನಡೆದಿದೆ. ಜನರು ರಕ್ಷಣಾ ಕಾರ್ಯ ನಡೆಸಿದರೂ ಬಸಮ್ಮನ ಪ್ರಾಣ ಉಳಿಯಲಿಲ್ಲ. ಗಾಯಾಳು ಉಜ್ಜಮ್ಮಳನ್ನು ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಭಾರ ತಹಶೀಲ್ದಾರ್ ಶಿವಕುಮಾರ್ ಹಾಗೂ ಆರ್‍ಐ ಮುರಳಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಬೆಳಗ್ಗೆಯಿಂದಲೇ ಮಳೆಯ ಅಬ್ಬರ ಜೋರಾಗಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದಿವೆ. ಚಾರ್ಮಾಡಿ ಘಾಟ್ ಸೇರಿದಂತೆ ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆಯಾಗಿದೆ. ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಗ್ರಹಳ್ಳಿ ಗ್ರಾಮದ ಸೇತುವೆ ಕುಸಿಯೋ ಹಂತ ತಲುಪಿದ್ದು, ಜನ ಆತಂಕಕ್ಕೀಡಾಗಿದ್ದಾರೆ.

    ಇತ್ತ ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಮುಂಜಾನೆಯಿಂದಲೂ ಸುರಿಯುತ್ತಿರೋ ಮಳೆಗೆ ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆಯಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಮಡಿಕೇರಿ, ಕಾವೇರಿ ಪುಣ್ಯಕ್ಷೇತ್ರ ತಲಕಾವೇರಿ ಭಾಗಮಂಡಲ ಸೇರಿ ಹಲವು ಕಡೆಗಳಲ್ಲಿ ಮುಂಜಾನೆಯಿಂದಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿರೋದರಿಂದ ಜಿಲ್ಲೆಯಲ್ಲಿ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

    ಕೋಲಾರ ಜಿಲ್ಲೆಯ ಹಲವೆಡೆ ಕೂಡ ವರುಣನ ಆರ್ಭಟ ಜೋರಾಗಿದೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದಂಗೆ ತುಂತುರು ಮಳೆ ಆರಂಭವಾಗಿದೆ. ಅಲ್ಲದೆ ಇಂದು ಸುಮಾರು ಒಂದು ಗಂಟೆಯಿಂದ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಲ್ಲದೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

  • ಬೆಂಗ್ಳೂರಿನಲ್ಲಿ ಭಾರೀ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿ ಹೋದ್ರು ಯುವಕರು – ಎಲ್ಲೆಲ್ಲಿ ಏನಾಗಿದೆ?

    ಬೆಂಗ್ಳೂರಿನಲ್ಲಿ ಭಾರೀ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿ ಹೋದ್ರು ಯುವಕರು – ಎಲ್ಲೆಲ್ಲಿ ಏನಾಗಿದೆ?

    ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆ ಆಗುತ್ತಿಲ್ಲ.  ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ ಹೇಳತೀರದಾಗಿದೆ. ಸಂಜೆಯಿಂದ ಬೆಂಗಳೂರಲ್ಲಿ ಧೋ ಎಂದು ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದ್ದು ನೀರಿನಲ್ಲಿ ಇಬ್ಬರು ಕೊಚ್ಚಿಹೋಗಿದ್ದಾರೆ.

    ಕುರುಬರಹಳ್ಳಿ ಸರ್ಕಲ್ ವೆಂಕಟೇಶವರ ದೇವಾಲಯ ಬಳಿ ರಾಜಕಾಲುವೆ ನೀರಿನಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸಂಜೆ 6 ಗಂಟೆಗೆ ಶುರುವಾದ ಭಾರೀ ಮಳೆ ಇಲ್ಲಿ ತನಕ ಮೋಡವೇ ಕುಸಿದು ಬಿದ್ದ ಹಾಗೆ ಸುರಿಯುತ್ತಿದೆ. ಹೆಬ್ಬಾಳ, ಮತ್ತೀಕೆರೆ, ಶಿವಾನಂದ, ಚಂದ್ರಲೇಔಟ್, ಗೊರಗುಂಟೆಪಾಳ್ಯ, ಯಶವಂತಪುರ, ರಾಜ್‍ಕುಮಾರ್ ಸಮಾಧಿ, ಲಗ್ಗೆರೆ ಸುತ್ತಮುತ್ತ ಭಾರೀ ಮಳೆಯಾಗಿದೆ.

    ಶಿವಾನಂದ ಸರ್ಕಲ್‍ನ ರೈಲ್ವೆ ಅಂಡರ್‍ಪಾಸ್ ನೀರಿನಿಂದ ಜಲಾವೃತವಾಗಿದ್ದು, 2 ಕಾರುಗಳು ನೀರಿನಲ್ಲಿ ಮುಳುಗಿ ಹೋಗಿತ್ತು. ನದಿಯಂತೆ ಹರಿಯುತ್ತಿದ್ದ ನೀರಿನಲ್ಲಿ ಸಂಚರಿಸಲಾಗದೆ ವಾಹನಸವಾರರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ.

    ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದ ನೆಲಮಾಳಿಗೆ ಜಲಾವೃತವಾಗಿದೆ. ಬಸ್‍ಗಳು ನಿಂತಲ್ಲೇ ನಿಂತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಆರ್‍ಎಂಸಿ ಯಾರ್ಡ್ ಜಲಾವೃತವಾಗಿದೆ.

    ಹೆಬ್ಬಾಳ, ಹೆಣ್ಣೂರು ಕೆರೆಗಳು ಕೋಡಿ ಬಿದ್ದಿದ್ದು, ಹೆಬ್ಬಾಳ, ನಾಗವಾರ ಪ್ರದೇಶಗಳು ಅಕ್ಷರಶಃ ನದಿಗಳಾಗಿವೆ. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ನಗರವಾಸಿಗಳ ಜನಜೀವನ ಅಯೋಮಯವಾಗುವ ಲಕ್ಷಗಳು ಗೋಚರಿಸುತ್ತಿವೆ.