Tag: Bengaluru Police Commissioner Bhaskar Rao

  • ಬಸ್ ಸಂಚಾರ ಅವಧಿ ವಿಸ್ತರಣೆಗೆ ಬಿಎಂಟಿಸಿಯಿಂದ ಪತ್ರ

    ಬಸ್ ಸಂಚಾರ ಅವಧಿ ವಿಸ್ತರಣೆಗೆ ಬಿಎಂಟಿಸಿಯಿಂದ ಪತ್ರ

    -ಬೆಳಗ್ಗೆ 6ರಿಂದ ರಾತ್ರಿ 8ರವರೆಗೂ ಸೇವೆ ನೀಡಲು ಬಿಎಂಟಿಸಿ ಒಲವು

    ಬೆಂಗಳೂರು: ಬಿಎಂಟಿಸಿ ಬಸ್ ಸಂಚಾರ ಅವಧಿಯನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ವಿಸ್ತರಿಸಲು ಬಿಎಂಟಿಸಿ ಎಂಡಿ ಶಿಖಾ ಅವರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆದರೆ ಇದುವರೆಗೂ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎಂಬ ಮಾಹಿತಿ ಲಭಿಸಿದೆ.

    ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ, ಹಲವು ಸಂಸ್ಥೆಗಳ ಕೋರಿಕೆ ಹಿನ್ನೆಲೆ ಶಿಖಾ ಅವರು ಪತ್ರ ಬರೆದಿದ್ದು, ಇಷ್ಟು ದಿನ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಬಸ್ ಸಂಚಾರಕ್ಕೆ ಕಲ್ಪಿಸಲಾಗಿದ್ದ ಅವಧಿಯನ್ನು ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೂ ವಿಸ್ತರಿಸಲು ಅನುಮತಿ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಶಿಖಾ ಅವರು, ಬೆಳಗ್ಗೆ 6 ಗಂಟೆ ಹಾಗೂ ಸಂಜೆ 7 ಗಂಟೆ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರಿರುತ್ತಾರೆ. ಆದ್ದರಿಂದ ಹೆಚ್ಚಿನ ಅವಧಿಯಲ್ಲಿ, ಕರ್ಫ್ಯೂ ಇದ್ದರೂ ಬಸ್ ಸಂಚಾರಕ್ಕೆ ಅನುಮತಿ ನೀಡಲು ಪತ್ರ ಬರೆದು ಮನವಿ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಕೊರೊನಾ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬಸ್‍ಗಳ ಸ್ಪಚ್ಛತೆ, ನೈರ್ಮಲ್ಯ ಮತ್ತು ಶುಚಿತ್ವ ಕುರಿತು ಅರಿವು ಮೂಡಿಸಿ ಸಾರ್ವಜನಿಕ ಸಾರಿಗೆ ಬಳಸುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ಶಿಖಾ ಅವರು ತಿಳಿಸಿದ್ದಾರೆ.

    ಬೆಳಗ್ಗೆ 6 ಗಂಟೆಯಿಂದಲೇ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಆದರೆ ಆ ವೇಳೆಗೆ ಬಸ್ ಸಂಚಾರ ಆರಂಭಿಸಲು ಅನುಮತಿ ಇಲ್ಲ. ಹಲವು ಸಂಸ್ಥೆಗಳು ಬಸ್ ಸಂಚಾರ ಅವಧಿ ವಿಸ್ತರಣೆ ಮಾಡಲು ಬಿಬಿಎಂಪಿಗೆ ಮನವಿ ಮಾಡಿದ್ದವು. ಈ ಮನವಿಗಳಿಗೆ ಸ್ಪಂಧಿಸಿರುವ ಶಿಖಾ ಅವರು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು, ಪ್ರಯಾಣಿಕರಿಗಾಗಿ ಸೇವೆ ವಿಸ್ತರಣೆ ಮಾಡುವ ಒಲವು ತೋರಿದ್ದಾರೆ. ಸರ್ಕಾರದ ಅನುಮತಿ ಸಿಕ್ಕರೆ ಬೆಳಗ್ಗೆ 6ರಿಂದಲೇ ಬಸ್ ಸಂಚಾರ ಆರಂಭವಾಗಲಿದೆ.