Tag: Bengaluru North

  • ಬೆಂಗಳೂರಿನಲ್ಲೂ ಗೆದ್ದು ಶೋಭಿಸಿದ ಕರಂದ್ಲಾಜೆ

    ಬೆಂಗಳೂರಿನಲ್ಲೂ ಗೆದ್ದು ಶೋಭಿಸಿದ ಕರಂದ್ಲಾಜೆ

    ಬೆಂಗಳೂರು: ಉಡುಪಿ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ಎದುರಿಸಿದ ಬಳಿಕ ಬೆಂಗಳೂರು ಉತ್ತರ (Bengaluru North) ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  (Shobha Karandlaje)2,59,476 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಶೋಭಾ ಕರಂದ್ಲಾಜೆಯವರು 9,86,049 ಮತಗಳನ್ನು ಪಡೆದರೆ ಇವರ ಎದುರಾಳಿ ಕಾಂಗ್ರಸ್ (Congress) ಅಭ್ಯರ್ಥಿ ಪ್ರೊ.ಎಂ.ವಿ ರಾಜೀವ್ ಗೌಡ ಅವರು 7,26,573 ಮತಗಳನ್ನು ಗಳಿಸಿ ಸೋಲಿಗೆ ಶರಣಾದರು.

    ಶೋಭಾ ಕರಂದ್ಲಾಜೆಯವರಿಗೆ ತಮ್ಮ ಕ್ಷೇತ್ರದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಈ ವೇಳೆ ಸಹ ಹೊರಗಿನವರಿಗೆ ಟಿಕೆಟ್ ನೀಡಿದ್ದಾರೆ ಎಂದು ಉತ್ತರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯು ಶೋಭಾ ಅವರು ಗೆದ್ದು ಬೀಗಿದ್ದಾರೆ.

    ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಅವರು ಈ ಕ್ಷೇತ್ರದಿಮದ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 7,18,326 ಹಾಗೂ 2019ರಲ್ಲಿ 8,24,500 ಮತಗಳನ್ನು ಗಳಿಸಿದ್ದರು.

  • ನಾಳೆ ರಾಜ್ಯಕ್ಕೆ ಮೋದಿ ಆಗಮನ – ಪ್ರಧಾನಿ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್‌ ಅಭ್ಯರ್ಥಿ

    ನಾಳೆ ರಾಜ್ಯಕ್ಕೆ ಮೋದಿ ಆಗಮನ – ಪ್ರಧಾನಿ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್‌ ಅಭ್ಯರ್ಥಿ

    ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಗೆ ಬೆಂಗಳೂರು ಉತ್ತರದ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜೀವ್‌ ಗೌಡ (Rajeev Gowda) ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನಾಳೆ ರಾಜ್ಯಕ್ಕೆ ‌ಬರ್ತಿದ್ದಾರೆ. ಅವರು ಬರುವ ಮುನ್ನ ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು. ಬೆಂಗಳೂರಿನಲ್ಲಿ ನೀರನ ಸಮಸ್ಯೆ ದೊಡ್ಡದಿದೆ. ಮೇಕೆದಾಟಿಗೆ ಪ್ರಪೋಸಲ್ ಕೊಟ್ಟಿದ್ದೆವು. ಯಾಕೆ ಎನ್‌ವಿರಾನ್‌ಮೆಂಟ್‌ ಅಪ್ರೂವಲ್ ಕೊಟ್ಟಿಲ್ಲ. ಕೃಷ್ಣ ಟ್ರಿಬ್ಯೂನಲ್ ಆಗಿ 10 ವರ್ಷ ಆಯ್ತು. ಯಾಕೆ‌ ಗೆಜೆಟ್ ಹೊರಡಿಸಿಲ್ಲ? ಅಪ್ಪರ್ ಭದ್ರಾಗೆ 5,300 ಕೋಟಿ ರೂ. ಘೋಷಿಸಿದ್ರು. ಯಾಕೆ ಇಲ್ಲಿಯವರೆಗೆ ಅದರ ಹಣ ಬಿಡುಗಡೆ ಮಾಡಿಲ್ಲ ಎಂದು ರಾಜೀವ್‌ ಗೌಡ ಕೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೂಲ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದವರು: ಡಿಕೆ ಸುರೇಶ್

    15 ನೇ ಹಣಕಾಸು ಆಯೋಗದ ರಿಪೋರ್ಟ್ ಏನಿದೆ? ಕರ್ನಾಟಕಕ್ಕೆ 5,400 ಕೋಟಿ ಶಿಫಾರಸು ಮಾಡಿತ್ತು. ಅದರ ಬಗ್ಗೆ ಯಾಕೆ ಚಕಾರವಿಲ್ಲ. ಇಂಪ್ಲಿಮೆಂಟ್ ಮಾಡ್ತೇವೆ ಅಂದವರು ಯಾಕೆ ಮಾಡಿಲ್ಲ? ಫೈನಾನ್ಸ್ ಕಮಿಷನ್ ರೆಕಮೆಂಡೇಷನ್ ಮಾಡಿತ್ತು. ಯಾಕೆ ಹಣವನ್ನ ನಮಗೆ ಬಿಡುಗಡೆ ಮಾಡಿಲ್ಲ? ಪೆರಿಪೆರಲ್ ರಿಂಗ್ ರಸ್ತೆಗೆ ಹಣ ಯಾಕೆ ಕೊಟ್ಟಿಲ್ಲ. ಪ್ರಧಾನಿ, ಸಬರಬನ್ ರೈಲು ಉದ್ಘಾಟಿಸಿದರು. 40 ತಿಂಗಳಲ್ಲಿ ಯೋಜನೆ ಪೂರ್ಣ ಎಂದಿದ್ರಿ. ಈಗ 20 ತಿಂಗಳಾಯ್ತು, ಎಲ್ಲಿ ಹೋಯ್ತು ಯೋಜನೆ? ಬರ ಪರಿಹಾರದ ಬಗ್ಗೆ ಗಮನವೇ ಕೊಟ್ಟಿಲ್ಲ. 223 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹೆಚ್ಚಿದೆ. ಗ್ರಾಮೀಣ ಭಾಗದ ಜನ ಸಂಕಷ್ಟದಲ್ಲಿದ್ದಾರೆ.
    ಇಲ್ಲಿಯವರೆಗೆ ಪರಿಹಾರದ ಹಣ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ನಾ ಕಾವೂಂಗಾ ನಾ ಕಾನೇ ದೂಂಗಾ ಅಂತೀರ. ನಮ್ಮ ಎಂಪಿಯೊಬ್ಬರ ಮೇಲೆ ಇಡಿ ಕೇಸ್ ಇದೆ. ಅವರನ್ನ ಯಾಕೆ ಸಚಿವ ಸಂಪುಟಕ್ಕೆ ತೆಗೆದುಕೊಂಡ್ರಿ. ಶೋಭಾ ಅವರ ಮೇಲೆ 44 ಕೋಟಿ ರೂ. ಆರೋಪವಿದೆ. ಅವರನ್ನ ಹೇಗೆ ಸಚಿವೆಯನ್ನಾಗಿ ಮಾಡಿದ್ರಿ. ಇದು ನ್ಯಾಯಕ್ಕೆ ವಿರುದ್ಧವಾದುದು. ಶೋಭಾ ಕರಂದ್ಲಾಜೆ ಅವರನ್ನ ತಕ್ಷಣ ಕೆಳಗಿಳಿಸಿ, ಎಲೆಕ್ಟ್ರೋ ಬಾಂಡ್‌ನಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಇಡಿ ರೇಡ್ ಮಾಡಿಸ್ತೀರ. ನಂತರ ಹಣವನ್ನ ಕಲೆಕ್ಟ್ ಮಾಡ್ತೀರ. ಭ್ರಷ್ಟಾಚಾರ ಅಂದ್ರೆ ಮೋದಿ ಸರ್ಕಾರ ಬರುತ್ತೆ. ನಮ್ಮ ರಾಜ್ಯಕ್ಕೆ ಬಂದಾಗ ಉತ್ತರ ಕೊಡಬೇಕು ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ತುಮಕೂರು ಕ್ಷೇತ್ರ ಗೆಲ್ಲಲು ಬಿಜೆಪಿ ಪ್ಲ್ಯಾನ್‌; ಮಾಧುಸ್ವಾಮಿ ಮುನಿಸು ಶಮನಕ್ಕೆ ಆಫರ್ – ಸೋಮಣ್ಣ ಪರ ಪ್ರಚಾರಕ್ಕಿಳಿತಾರಾ?

    ಬಿಜೆಪಿ ಕ್ಯಾಂಡಿಡೇಟ್ (ಶೋಭಾ ಕರಂದ್ಲಾಜೆ) ಬಗ್ಗೆ ಒಳ್ಳೆ ಪ್ರತಿಕ್ರಿಯೆ ಇಲ್ಲ. ಅವರ ಕಾರ್ಯಕರ್ತರೇ ವಿರೋಧ ಮಾಡ್ತಾರೆ. ಉತ್ತರದಲ್ಲಿ ಜೆಡಿಎಸ್ ಕಾರ್ಯಕರ್ತರು ನಮ್ಮ ಜೊತೆ ಬಂದಿದ್ದಾರೆ. ಎಸ್.ಟಿ.ಸೋಮಶೇಖರ್ ಬೆಂಬಲ ಕೊಟ್ಟಿದ್ದಾರೆ. ಅದು ನಮಗೆ ಶಕ್ತಿ ತುಂಬಲಿದೆ. ಬಹಿರಂಗವಾಗಿಯೇ ಅವರು ಬೆಂಬಲ ನೀಡ್ತಾರೆ. ಶೋಭಾ ಕರಂದ್ಲಾಜೆ ಅವರ ಬಗ್ಗೆ ಪ್ರಚಾರ ಮಾಡ್ತೇವೆ. ಇಡಿ ಕೇಸ್ ಬಗ್ಗೆ ಜನರಿಗೆ ತಿಳಿಸ್ತೇವೆ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದಾರೆ.

  • ಕೋಟಿ ಕೋಟಿ ಆಸ್ತಿ ಒಡತಿ ಶೋಭಾ ಕರಂದ್ಲಾಜೆ ಬಳಿಯಿದೆ 1 ಕೆಜಿ ಚಿನ್ನದ ಬಿಸ್ಕೆಟ್‌ – ಆಸ್ತಿ ಎಷ್ಟಿದೆ ಗೊತ್ತಾ?

    ಕೋಟಿ ಕೋಟಿ ಆಸ್ತಿ ಒಡತಿ ಶೋಭಾ ಕರಂದ್ಲಾಜೆ ಬಳಿಯಿದೆ 1 ಕೆಜಿ ಚಿನ್ನದ ಬಿಸ್ಕೆಟ್‌ – ಆಸ್ತಿ ಎಷ್ಟಿದೆ ಗೊತ್ತಾ?

    ಬೆಂಗಳೂರು: ಉಡುಪಿ ಬಿಟ್ಟು ಬೆಂಗಳೂರಿಗೆ ಬಂದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ (Bengaluru North) ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ 16.02 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.

    ಶೋಭಾ ಕರಂದ್ಲಾಜೆ ಅವರು 16.02 ಕೋಟಿ ಆಸ್ತಿಯ ಒಡತಿ. ಚರಾಸ್ತಿ – 9.23 ಕೋಟಿ ರೂ. ಹಾಗೂ ಸ್ಥಿರಾಸ್ತಿ – 6.78 ಕೋಟಿ ರೂ. ಮೌಲ್ಯದ್ದು. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ 4.06 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ – ವಯನಾಡ್‌ನಿಂದಲೇ ಸ್ಪರ್ಧೆ ಯಾಕೆ?

    ಶೋಭಾ ಕರಂದ್ಲಾಜೆ ಬಳಿ 1 kg ಚಿನ್ನದ ಬಿಸ್ಕಟ್ (68.40 ಲಕ್ಷ ಮೌಲ್ಯ) ಹಾಗೂ 650‌ ಗ್ರಾಂ ಚಿನ್ನದ ಆಭರಣಗಳಿವೆ. 1620 ಗ್ರಾಂ ಬೆಳ್ಳಿ ಆಭರಣ ‌ಹಾಗೂ ಬೆಳ್ಳಿ ವಸ್ತುಗಳು ಇವೆ. ಶೋಭಾ ಕರಂದ್ಲಾಜೆ ಅವರ ವಾರ್ಷಿಕ ಆದಾಯ 2022-23ರಲ್ಲಿ 24.90 ಲಕ್ಷ ರೂಪಾಯಿ.

    ಶೋಭಾ ಕರಂದ್ಲಾಜೆ ಬಳಿ ಇರುವ ನಗದು ಹಣ 1,71,000 ರೂ. ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇತ್ಯರ್ಥಕ್ಕೆ ಬಾಕಿ ಇವೆ. ಇದರಲ್ಲಿ ಎರಡು ಕ್ರಿಮಿನಲ್ ಕೇಸ್, 1 ಮಾನನಷ್ಟ ಮೊಕದ್ದಮೆ ಇದೆ. ಇದನ್ನೂ ಓದಿ: ಸಿದ್ದರಾಮಯ್ಯ ಇದ್ದರು ಒಮ್ಮೆಯೂ ಗೆದ್ದಿಲ್ಲ ಜನತಾ ಪರಿವಾರ – ಜನತಾ ಪರಿವಾರದ ಸೋಲಿನ ಚರಿತ್ರೆ

  • Bengaluru North Lok Sabha 2024: ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

    Bengaluru North Lok Sabha 2024: ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

    – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಣಕ್ಕಿಳಿಯೋ ‘ಕೈ’ ಅಭ್ಯರ್ಥಿ ಯಾರು?
    – ಟಿಕೆಟ್‌ ಕೈತಪ್ಪಿದ್ದಕ್ಕೆ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅಸಮಾಧಾನ

    ರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಕೊಟ್ಟ ಕ್ಷೇತ್ರ ಬೆಂಗಳೂರು ಉತ್ತರ (Bengaluru North). ಇದರ ಇತಿಹಾಸ ಗಮನಿಸಿದರೆ ವಿವಿಧ ಅವಧಿಗಳಲ್ಲಿ ಕ್ಷೇತ್ರವು ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದೆ. ಬೆಂಗಳೂರು ನಗರ, ಬೆಂಗಳೂರು, ಬೆಂಗಳೂರು ಉತ್ತರ ಎಂದು ಕರೆಯಲಾಗುತ್ತಿತ್ತು. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕ್ಷೇತ್ರದ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.

    ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಬಿಜೆಪಿ  (BJP) ಪಾರುಪತ್ಯ ಮೆರೆದಿದೆ. ಕಳೆದ ಎರಡು ಅವಧಿಯಿಂದ ಸದಾನಂದ ಗೌಡರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 90 ರ ದಶಕದ ಅಂತ್ಯದ ವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿತ್ತು. ನಂತರ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬೆಂಗಳೂರು ಉತ್ತರದಲ್ಲಿ ಮತ್ತೆ ಹಿಡಿತ ಸಾಧಿಸಲು ಕಾಂಗ್ರೆಸ್ (Congress) ಹವಣಿಸುತ್ತಿದೆ. ಅದು ಫಲ ಕೊಡುತ್ತಾ, ಇಲ್ಲವಾ ಎಂಬುದು ಈ ಸಲದ ಚುನಾವಣೆಯ ಕುತೂಹಲ. ಇದನ್ನೂ ಓದಿ: Bagalkot Lok Sabha 2024: ಚಾಲುಕ್ಯರ ನಾಡಲ್ಲಿ ಬಾವುಟ ಹಾರಿಸೋದ್ಯಾರು?

    ಕ್ಷೇತ್ರ ಪರಿಚಯ
    ಬೆಂಗಳೂರು ಉತ್ತರವು 1951 ರಲ್ಲಿ ತನ್ನ ಮೊದಲ ಚುನಾವಣೆಗೆ ಕಣವಾಯಿತು. ಮೊದಲ ಸಂಸದರಾಗಿ ಕಾಂಗ್ರೆಸ್‌ನ ಕೇಶವ ಅಯ್ಯಂಗಾರ್ ಆಯ್ಕೆಯಾಗಿ ಪಾರ್ಲಿಮೆಂಟ್ ಮೆಟ್ಟಿಲೇರಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ಇದೇ ಕ್ಷೇತ್ರದಿಂದ (1962, 67, 71) ಸ್ಪರ್ಧಿಸಿ ಸತತ ಮೂರು ಬಾರಿ ಗೆಲುವು ದಾಖಲಿಸಿದ್ದರು. 1991 ರ ವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರುಪತ್ಯ ಮೆರೆದಿತ್ತು. 1977 ರಿಂದ 1991 ರವರೆಗೆ ಕಾಂಗ್ರೆಸ್‌ನ ಜಾಫರ್ ಶರೀಫ್ ಸಂಸದರಾಗಿದ್ದರು. ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಜನತಾದಳದ ಸಿ.ನಾರಾಯಣಸ್ವಾಮಿ ಬ್ರೇಕ್ ಹಾಕಿದರು. 1996 ರಲ್ಲಿ ಕಾಂಗ್ರೆಸ್ ಮಣಿಸಿ ಮೊದಲ ಬಾರಿಗೆ ಜಯದ ನಗೆ ಬೀರಿದರು. ಅದಾದ ಬಳಿಕ ಮತ್ತೆ 2 ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 2004 ರಲ್ಲಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಮಲ ಅರಳಿತು. ಹೆಚ್.ಟಿ.ಸಾಂಗ್ಲಿಯಾನ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಅಲ್ಲಿಂದೀಚೆಗೆ ಬೆಂಗಳೂರು ಉತ್ತರ ಬಿಜೆಪಿ ತೆಕ್ಕೆಯಲ್ಲಿದೆ. 2009 ರಲ್ಲಿ ಡಿ.ಬಿ.ಚಂದ್ರೇಗೌಡ ಗೆಲುವು ದಾಖಲಿಸಿದ್ದರು. ನಂತರ 2014 ಮತ್ತು 2019 ರ ಅವಧಿಯಲ್ಲಿ ಡಿ.ವಿ.ಸದಾನಂದ ಗೌಡ ಸಂಸದರಾಗಿ ಪಾರ್ಲಿಮೆಂಟ್ ಪ್ರತಿನಿಧಿಸಿದ್ದಾರೆ. ಇವರು ಕೂಡ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು.

    ವಿಧಾನಸಭಾ ಕ್ಷೇತ್ರಗಳೆಷ್ಟು?
    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಕೆ.ಆರ್.ಪುರಂ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ (ಎಸ್‌ಸಿ ಮೀಸಲು). ಇದನ್ನೂ ಓದಿ: Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?‌

    ಒಟ್ಟು ಮತದಾರರ ಸಂಖ್ಯೆ
    ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 31,74,098 ಇದೆ. ಅವರ ಪೈಕಿ ಪುರುಷರು 16,29,089 ಹಾಗೂ ಮಹಿಳಾ ಮತದಾರರು 15,44,415 ಇದ್ದಾರೆ. 594 ತೃತೀಯಲಿಂಗಿ ಮತದಾರರಿದ್ದಾರೆ.

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಡಿ.ವಿ.ಸದಾನಂದ ಗೌಡರು (D.V.Sadananda Gowda) ಸ್ಪರ್ಧಿಸಿದ್ದರು. ಅವರ ವಿರುದ್ಧ ಕಾಂಗ್ರೆಸ್ ಕೃಷ್ಣ ಬೈರೇಗೌಡ ಅವರನ್ನು ಕಣಕ್ಕಿಳಿಸಿತ್ತು. ಡಿ.ವಿ.ಸದಾನಂದ ಗೌಡರು 1,47,518 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

    ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್
    ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು 2024 ರ ಚುನಾವಣೆಯಲ್ಲಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಗೌಡರ ವಿರುದ್ಧ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಭಾರಿ ಅಸಮಾಧಾನವಿತ್ತು. ಇತ್ತ ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿದ್ದ ಒಕ್ಕಲಿಗ ಸಮುದಾಯದವರೇ ಆದ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ ಕಾರ್ಯಕರ್ತರು ಸಿಡಿದಿದ್ದರು. ಹೀಗಾಗಿ ಅಲ್ಲಿಂದ ಶೋಭಾ ಅವರನ್ನು ಬೆಂಗಳೂರು ಉತ್ತರದ ಅಭ್ಯರ್ಥಿಯಾಗಿ ಹೈಕಮಾಂಡ್ ಘೋಷಿಸಿತು. ಇದನ್ನೂ ಓದಿ: Chamarajanagara Lok Sabha 2024: ಕಾಂಗ್ರೆಸ್ ಕೋಟೆಗೆ ಎಂಟ್ರಿ ಕೊಟ್ಟಿರೋ ಬಿಜೆಪಿ ಮತ್ತೆ ಸಿಂಹಾಸನ ಏರುತ್ತಾ?

    ತಮಗೆ ಟಿಕೆಟ್ ಕೈತಪ್ಪಿದ್ದಕ್ಕೆ ಡಿ.ವಿ.ಸದಾನಂದ ಗೌಡರು ಪಕ್ಷದ ನಿಲುವಿಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಹೊತ್ತಿನಲ್ಲಿ ಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಪಕ್ಷ ಬಿಡುವ ವಿಚಾರವನ್ನು ಸದಾನಂದ ಗೌಡರೇ ಅಲ್ಲಗಳೆದಿದ್ದಾರೆ. ಆದರೂ ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಸಿಗುತ್ತಿದ್ದಂತೆಯೇ ಶೋಭಾ ಕರಂದ್ಲಾಜೆ ಅವರು ಸದಾನಂದ ಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವರ ಪ್ರಯತ್ನ ಎಷ್ಟು ಫಲ ಕೊಡುತ್ತದೆ ಎಂಬುದು ಪ್ರಶ್ನೆಯಾಗಿದೆ.

    ಇನ್ನೂ ಘೋಷಣೆಯಾಗದ ಕಾಂಗ್ರೆಸ್ ಅಭ್ಯರ್ಥಿ
    ಒಕ್ಕಲಿಗರೇ ಇಲ್ಲಿ ನಿರ್ಣಾಯಕರಾಗಿರುವುದಿಂದ ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆಗೆ ನೀಡಿದರೆ ಕಾಂಗ್ರೆಸ್‌ನಲ್ಲಿ ಪ್ರೊ.ರಾಜೀವ್ ಗೌಡ (Rajeev Gowda) ಅವರಿಗೆ ನೀಡುವ ಸಾಧ್ಯತೆ ಇದೆ. ಕ್ಷೇತ್ರದಿಂದ ಸ್ಪರ್ಧಿಸುವಂತೆ ಗೋವಿಂದರಾಜನಗರ ಕ್ಷೇತ್ರ ಶಾಸಕ ಪ್ರಿಯಕೃಷ್ಣ ಅವರ ಮನವೊಲಿಸಲಾಗಿತ್ತು. ಶೋಭಾ ಕರಂದ್ಲಾಜೆಗೆ ಪ್ರಬಲ ಪೈಪೋಟಿ ಕೊಡಬಹುದು ಎಂಬ ಲೆಕ್ಕಾಚಾರದಲ್ಲಿ ಪ್ರಿಯಕೃಷ್ಣ ಸ್ಪರ್ಧೆಗೆ ಒತ್ತಾಯಿಸಲಾಗಿತ್ತು. ಇತ್ತ ಪ್ರಿಯಕೃಷ್ಣ ಅವರ ತಂದೆ ಎಂ.ಕೃಷ್ಣಪ್ಪ ಅವರನ್ನು ಸಿಎಂ ಮತ್ತು ಡಿಸಿಎಂ ಭೇಟಿಯಾಗಿ ಚರ್ಚೆ ನಡೆಸಿದ್ದರು. ಪ್ರಿಯಕೃಷ್ಣ ಸ್ಪರ್ಧಿಸಿದರೆ ಗೆಲ್ಲಿಸಿಕೊಂಡು ಬರುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದರು. ಆದರೆ ಈಗ ರಾಜೀವ್‌ ಗೌಡ ಅವರಿಗೆ ಟಿಕೆಟ್‌ ಪಕ್ಕಾ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: Shivamogga Lok Sabha 2024: ಬಿಎಸ್‌ವೈ v/s ಬಂಗಾರಪ್ಪ ಫ್ಯಾಮಿಲಿ – ಯಾರಿಗೆ ಮಣೆ ಹಾಕ್ತಾರೆ ಮಲೆನಾಡ ಜನ?

    ಜಾತಿವಾರು ಲೆಕ್ಕಾಚಾರ
    ಒಕ್ಕಲಿಗರು- 13,51,005
    ಎಸ್‌ಸಿ/ಎಸ್‌ಟಿ- 6,56,868
    ಮುಸ್ಲಿಂ- 6,97,389
    ಕುರುಬ- 5,47,282
    ಲಿಂಗಾಯತ- 5,20,581
    ಇತರೆ- 2,57,138

  • ಸುಳ್ಯಕ್ಕೆ ತೆರಳಿದ ಡಿವಿಎಸ್‌ – ಇನ್ನೂ ನಡೆ ನಿಗೂಢ

    ಸುಳ್ಯಕ್ಕೆ ತೆರಳಿದ ಡಿವಿಎಸ್‌ – ಇನ್ನೂ ನಡೆ ನಿಗೂಢ

    ಬೆಂಗಳೂರು: ಸಂಸದ ಡಿವಿ ಸದಾನಂದ ಗೌಡರ (DV Sadananda  Gowda) ನಡೆ ಇನ್ನೂ ನಿಗೂಢವಾಗಿದ್ದು ಬೆಂಗಳೂರಿನಿಂದ ಸುಳ್ಯಕ್ಕೆ (Sullia) ಪ್ರಯಾಣಿಸಿದ್ದಾರೆ.

    ಬೆಂಗಳೂರು ಉತ್ತರ (Bengaluru North) ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸದಾನಂದ ಗೌಡ ಇಂದು ಬೆಳಗ್ಗೆಯೇ ಸುಳ್ಯದತ್ತ ಪ್ರಯಾಣಿಸಿದ್ದು ಕುಟುಂಬಸ್ಥರು, ಸಂಬಂಧಿಕರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ 2ನೇ ಪಟ್ಟಿ ಇಂದು ಬಿಡುಗಡೆ – ಸಂಭಾವ್ಯ ಅಭ್ಯರ್ಥಿಗಳು ಯಾರು?

     

    ಮಾರ್ಚ್‌ 18 ರಂದು ಹುಟ್ಟುಹಬ್ಬ ಆಚರಿಸಿದ್ದ ವೇಳೆ ನಾನು ನಾಳೆ ಸುದ್ದಿಗೋಷ್ಠಿ ನಡೆಸಿ ಮುಂದಿನ ನಡೆಯ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದ್ದರು. ಆದರೆ ಅವರು ಸುದ್ದಿಗೋಷ್ಠಿ ನಡೆಸಿರಲಿಲ್ಲ. ‌ ಹೀಗಾಗಿ ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿತ್ತು.

    ಸದಾನಂದ ಗೌಡ ಗುರುವಾರ ಬೆಂಗಳೂರಿಗೆ (Bengaluru) ವಾಪಸ್‌ ಆಗಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿಗೆ ಬಂದ ನಂತರ ಮುಂದಿನ ರಾಜಕೀಯ ನಡೆಯ ಬಗ್ಗೆ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಸಂಜೆ ನೆರೆ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಹತ್ಯೆ – ರಾತ್ರಿ ಯುಪಿ ಪೊಲೀಸರ ಎನ್‌ಕೌಂಟರ್‌ಗೆ ಪಾತಕಿ ಬಲಿ

     

    ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಕೈ ತಪ್ಪಿದರಿಂದ ಅಸಮಾಧಾನಗೊಂಡಿರುವ ಡಿವಿಎಸ್‌ ಮೈಸೂರಿನಿಂದ (Mysuru) ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾರೂ ಈ ವಿಚಾರವನ್ನು ಅಧಿಕೃತಗೊಳಿಸಿಲ್ಲ.

    ಮಾಧ್ಯಮಗಳ ಜೊತೆ ಮಾತನಾಡಿದ್ದ ಸದಾನಂದ ಗೌಡ ಕಾಂಗ್ರೆಸ್‌ ನಾಯಕರು (Congress) ನನ್ನನ್ನು ಸಂಪರ್ಕಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದರು.

  • ಬೆಂಗಳೂರಿನಿಂದ ಮೈಸೂರಿಗೆ – ಕಾಂಗ್ರೆಸ್‌ನಿಂದ ಡಿವಿಎಸ್‌ ಸ್ಪರ್ಧೆ?

    ಬೆಂಗಳೂರಿನಿಂದ ಮೈಸೂರಿಗೆ – ಕಾಂಗ್ರೆಸ್‌ನಿಂದ ಡಿವಿಎಸ್‌ ಸ್ಪರ್ಧೆ?

    ಬೆಂಗಳೂರು: ಮಾಜಿ ಸಿಎಂ, ಹಾಲಿ ಬೆಂಗಳೂರು ಉತ್ತರ (Bengaluru North) ಕ್ಷೇತ್ರದ ಬಿಜೆಪಿ ಸಂಸದ ಸದಾನಂದ ಗೌಡ (D. V. Sadananda Gowda) ಮೈಸೂರಿನಿಂದ (Mysuru) ಸ್ಪರ್ಧಿಸುತ್ತಾರಾ ಹೀಗೊಂದು ಪ್ರಶ್ನೆ ಎದ್ದಿದೆ.

    ಇಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಡಿವಿಎಸ್‌ ಮಾತನಾಡಿದರು. ಈ ವೇಳೆ ನಾನು ಮಹತ್ವದ ವಿಷಯದ ಬಗ್ಗೆ ನಾಳೆ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದರಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಕಾಂಗ್ರೆಸ್ (Congress) ನಾಯಕರ ಸಂಪರ್ಕ ವಿಚಾರ ಒಪ್ಪಿಕೊಂಡ ಡಿವಿಎಸ್, ನನ್ನನ್ನ ಬೇರೆಬೇರೆಯವರು ಬಂದು ಸಂಪರ್ಕ ಮಾಡುತ್ತಿರುವುದು ನಿಜ. ನಿನ್ನೆ ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು ಸಮಾಧಾನ ಹೇಳಿದ್ದಾರೆ. ಇವತ್ತು ನನ್ನ ಜನ್ಮದಿನ. ಇಡೀ ದಿನ ಕುಟುಂಬದ ಸದಸ್ಯರ ಜತೆ ಕಳೆದು ನಂತರ ನಿಶ್ಚಯ ಮಾಡುತ್ತೇನೆ ಎಂದು ಹೇಳಿದರು.

    ನನ್ನ ನಿರ್ಧಾರಗಳನ್ನು ನಾನು ನನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಬೇಕು. ಬೆಂಗಳೂರು ಉತ್ತರದಲ್ಲಿ ನಿಮಗೆ ಟಿಕೆಟ್‌ ಎಂದು ಹೇಳಿ ಕೊನೇ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ. ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ಮಂಗಳವಾರ ಸುದ್ದಿಗೋಷ್ಠಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿಬಿಟ್ಟರೆ ನಾಳೆಗೆ ಏನೂ ಉಳಿಯುವುದಿಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಹೀಗಿದ್ದರೂ ತಿಳಿದೂ ತಿಳಿದೂ ಹೀಗೆ ಮಾಡಿರುವುದು ಬೇಜಾರು ತಂದಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಕಲ್ಲೆಸೆತಕ್ಕೆ ಸುದ್ದಿಯಾಗಿದ್ದ ಕಾಶ್ಮೀರದಲ್ಲಿ ಫಸ್ಟ್‌ ಟೈಂ ಫಾರ್ಮುಲಾ 4 ರೇಸ್‌ – ಮೋದಿ ಮೆಚ್ಚುಗೆ

     

    ಮೈಸೂರಿನಿಂದ ಸ್ಪರ್ಧೆ:
    ಒಕ್ಕಲಿಗರ ಮತದಾರರ ಸಂಖ್ಯೆ ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಆಪರೇಷನ್‌ ಹಸ್ತ ಮಾಡಿದ್ದು ಡಿವಿಎಸ್‌ ಅವರನ್ನು ಇಳಿಸಲು ಮುಂದಾಗಿದೆ ಎಂಬ ವದಂತಿ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಇನ್ನೂ ಯಾರು ಅಧಿಕೃತವಾಗಿ ತಿಳಿಸಿಲ್ಲ. ಹೀಗಾಗಿ ಮಂಗಳವಾರದ ಡಿವಿಎಸ್‌ ಸುದ್ದಿಗೋಷ್ಠಿ ಭಾರೀ ಮಹತ್ವ ಪಡೆದಿದೆ.

  • ಟಿಕೆಟ್ ಸಿಕ್ಕ ಕ್ಷೇತ್ರದ ಹಾಲಿ ಸಂಸದ ಡಿವಿಎಸ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಶೋಭಾ ಕರಂದ್ಲಾಜೆ

    ಟಿಕೆಟ್ ಸಿಕ್ಕ ಕ್ಷೇತ್ರದ ಹಾಲಿ ಸಂಸದ ಡಿವಿಎಸ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಶೋಭಾ ಕರಂದ್ಲಾಜೆ

    ಬೆಂಗಳೂರು: ನಗರದ ಉತ್ತರ ಲೋಕಸಭಾ ಟಕೆಟ್ (Bengaluru North) ಸಿಕ್ಕ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  (Shobha Karandlaje) ಮಾಜಿ ಸಿಎಂ ಹಾಗೂ ಕ್ಷೇತ್ರದ ಹಾಲಿ ಸಂಸದ ಸದಾನಂದ ಗೌಡ (D.V.Sadananda Gowda) ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಿ, ಸಹಕಾರ ನೀಡುವಂತೆ ಶೋಭಾ ಅವರು ಕೇಳಿಕೊಂಡಿದ್ದಾರೆ.

    ಕಳೆದ ಬಾರಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವರಿಗೆ ಈ ಬಾರಿ ಆ ಕ್ಷೇತ್ರದಿಂದ ಸ್ಪರ್ಧಿಸಲು ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿತ್ತು. ಈಗ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. ಇತ್ತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದಲೂ ಅವರಿಗೆ ಗೋ ಬ್ಯಾಕ್ ಬಿಸಿ ತಟ್ಟಿತ್ತು. ಆದರೂ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’: ರಾಷ್ಟ್ರಪತಿಗೆ 18,000 ಪುಟಗಳ ವರದಿ ಸಲ್ಲಿಕೆ

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ದೆಹಲಿ ನಾಯಕರ ಮೇಲೆ ನನಗೆ ವಿಶ್ವಾಸ ಇತ್ತು. ಅವರು ಯಾವ ಜವಾಬ್ದಾರಿ ನನಗೆ ವಹಿಸಿದ್ರು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಯಾವುದೇ ರಾಜ್ಯದ ಚುನಾವಣೆಯಾಗಲಿ, ಯಾವುದೇ ಇಲಾಖೆ ಆಗಲಿ ಅಲ್ಲೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ. ಈ ಕಾರಣಕ್ಕೆ ನನ್ನ ನಾಯಕತ್ವವನ್ನು ಗುರುತಿಸಿ ಟಿಕೆಟ್ ಕೊಟ್ಟಿದ್ದಾರೆ ಎಂದಿದ್ದಾರೆ.

    ಇನ್ನಾದರೂ ಪಕ್ಷ ವಿರೋಧಿ ಚಟುವಟಿಕೆ ಮಾಡುವವರು ಪಾಠ ಕಲಿಯಲಿ. ಬಿಜೆಪಿ ಒಂದು ಶಿಸ್ತಿನ ಪಕ್ಷವಾಗಿದೆ. ಇದರಿಂದ ನನಗೆ ನಿಜಕ್ಕೂ ಆನಂದವಾಗಿದೆ. ನಾನು ಬೆಂಗಳೂರಲ್ಲಿ ಶಾಸಕಿಯಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸದಾನಂದಗೌಡರ ಮನೆಗೆ ಹೋಗಿ ಬಂದಿದ್ದೇನೆ. ಎಲ್ಲರ ಆಶೀರ್ವಾದ ನನ್ನ ಮೇಲಿದೆ. ಇಲ್ಲಿ ವಿರೋಧ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಿಎಎಯಲ್ಲಿ ಅವಕಾಶವಿಲ್ಲ: ಅಮಿತ್ ಶಾ ಸ್ಪಷ್ಟನೆ

  • ಕಾಂಗ್ರೆಸ್ ಸೇರುವ ವದಂತಿ ಬಗ್ಗೆ ಡಿವಿಎಸ್ ಸ್ಪಷ್ಟನೆ

    ಕಾಂಗ್ರೆಸ್ ಸೇರುವ ವದಂತಿ ಬಗ್ಗೆ ಡಿವಿಎಸ್ ಸ್ಪಷ್ಟನೆ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯ (Loksabha Elections 2024) ಟಿಕೆಟ್ ಕೈ ತಪ್ಪಿದೆ. ಈ ಬೆನ್ನಲ್ಲೇ ತಮ್ಮ ವಿರುದ್ಧ ಹರಿದಾಡುತ್ತಿರುವ ಊಹಾಪೋಹಗಳಿಗೆ ಸ್ವತಃ ಅವರೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

    ತಮ್ಮ ಎಕ್ಸ್ ಖಾತೆಯ ಮೂಲಕ ಸ್ಪಷ್ಟನೆ ನೀಡಿರುವ ಡಿವಿಎಸ್, ನಾನು ಕಾಂಗ್ರೆಸ್ ಪಕ್ಷಕ್ಕೆ (Congress) ಸೇರುವುದಾಗಿ ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ಹಾರಿಕೆ ಸುದ್ದಿಯನ್ನು ಹಬ್ಬುವವರು ದೇಶದ್ರೋಹಿಗಳು ಅಂತಾ ಕಿಡಿಕಾರಿದ್ದಾರೆ.

    ಲೋಕಸಭಾ ಟಿಕೆಟ್ ಸಿಗದ್ದಕ್ಕೆ ಡಿವಿ ಸದಾನಂದ ಗೌಡರು (Sadananda Gowda) ಕಾಂಗ್ರೆಸ್ ಸೇರುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಲು ಆರಂಭವಾಗಿದೆ. ಆದರೆ ಇದೀಗ ಡಿವಿಎಸ್ ಅವರೇ ಸ್ಪಷ್ಟನೆ ಕೊಡುವ ಮೂಲಕ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನ ಬದಲಾಯಿಸಲು ಆಗಲ್ಲ: ಸ್ವಪಕ್ಷದ ನಾಯಕನ ವಿರುದ್ಧ ರಾಜೂಗೌಡ ಆಕ್ರೋಶ

    ಕಳೆದ ಚುನಾವಣೆಯಲ್ಲಿ ಗೆದ್ದಿದ್ದ 25 ಸಂಸದರಲ್ಲಿ ಕೆಲವು ಸಂಸದರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಲಾಗಿತ್ತು. ಇದರಲ್ಲಿ ಸದಾನಂದ ಗೌಡರ ಹೆಸರೂ ಕೇಳಲ್ಪಟ್ಟಿತ್ತು. ಅದು ನಿಜವೂ ಆಗಿದೆ. ಬಿಜೆಪಿ 2ನೇ ಪಟ್ಟಿ ಬಿಡುಗಡೆ ಮಾಡುವುದಕ್ಕೂ ಮುನ್ನ ಎಕ್ಸ್ ಮೂಲಕ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ. ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ ಎಂದು ಹೇಳಿದ್ದರು.

    ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು ಎಂದು ಹೇಳುವ ಮೂಲಕ ಟಿಕೆಟ್ ಕೈ ತಪ್ಪುವ ಸುಳಿವು ನೀಡಿದ್ದರು.

  • ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ಅಶೋಕ್ ಪರೋಕ್ಷ ವಿರೋಧ

    ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ಅಶೋಕ್ ಪರೋಕ್ಷ ವಿರೋಧ

    ಬೆಂಗಳೂರು: ನಗರದ ಉತ್ತರ ಕ್ಷೇತ್ರದಿಂದ (Bengaluru North) ಶೋಭಾ ಕರಂದ್ಲಾಜೆ (Shobha Karandlaje) ಸ್ಪರ್ಧೆಗೆ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ನಾವು ಹೇಳಿದ್ದು ನಿಜ. ಅವರನ್ನ ಭೇಟಿಯಾಗಿ, ನೀವೇ ನಿಂತುಕೊಳ್ಳಬೇಕು ಎಂದು ಕೇಳಿದ್ದೇವೆ. ಈಗಲೂ ನಾವು ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದೇವೆ. ಉಳಿದದ್ದು ಕೇಂದ್ರ ಹಾಗೂ ದೇವರಿಗೆ ಬಿಟ್ಟಿದ್ದು. ಈಗಲೂ ನಾವು ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ಹೇಳಿದ್ದೇವೆ. ನಾವು ಕೇಂದ್ರದ ನಾಯಕರ ಜೊತೆ ಮಾತಾಡ್ತೀವಿ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರು ಕೋಮುಭಾವನೆ ಸೃಷ್ಟಿಸೋಕೆ ಸಿಎಎ ವಿರೋಧ ಮಾಡ್ತಿದ್ದಾರೆ: ಆರ್.ಅಶೋಕ್

    ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಬರುವ ವಿಚಾರಕ್ಕೆ ಸ್ಥಳೀಯ ಶಾಸಕರ ವಿರೋಧ ಇದೆ. ಹೊರಗಿನವರಿಗೆ ಟಿಕೆಟ್ ಕೊಡುವುದು ಬೇಡ ಎಂದು ಬೆಂಗಳೂರು ಉತ್ತರದ ಶಾಸಕರು ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ನಾಯಕರಿಗೆ ಅದನ್ನು ಹೇಳ್ತೀವಿ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ.

    ಸೋಮಣ್ಣ, ರೇಣುಕಾಚಾರ್ಯ, ಪ್ರತಾಪ್ ಸಿಂಹ ಹೇಳಿಕೆ ವಿಚಾರ ಮತ್ತು ಟಿಕೆಟ್ ತಪ್ಪಿದರೆ ಬಿಜೆಪಿಗೆ ಒಳ ಏಟು ಆಗುತ್ತಾ? ಎಂಬ ಪ್ರಶ್ನೆಗೆ, ಮೋದಿ ಅಲೆಯಲ್ಲಿ, ಬಿಜೆಪಿ ಅಲೆಯಲ್ಲಿ ಯಾವುದೇ ಒಳ ಏಟು ವರ್ಕ್ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ಸಿಎಎ ಜಾರಿ: ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

  • ಬೆಂಗಳೂರು ರೌಂಡಪ್ – ದಕ್ಷಿಣ, ಉತ್ತರ, ಕೇಂದ್ರದಲ್ಲಿ ಯಾರಿಗೆ ಜಯಮಾಲೆ?

    ಬೆಂಗಳೂರು ರೌಂಡಪ್ – ದಕ್ಷಿಣ, ಉತ್ತರ, ಕೇಂದ್ರದಲ್ಲಿ ಯಾರಿಗೆ ಜಯಮಾಲೆ?

    ಬೆಂಗಳೂರು ಮಹಾನಗರವನ್ನು ದಕ್ಷಿಣ, ಉತ್ತರ ಮತ್ತು ಕೇಂದ್ರ ಎಂದು ಮೂರು ಲೋಕಸಭಾ ಕ್ಷೇತ್ರಗಳನ್ನು ವಿಭಾಗಿಸಲಾಗಿದೆ. ಈ ಮೂರು ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಗಳೆಂದು ಬಿಂಬಿತವಾಗಿದ್ದು, ಅನಂತ್‍ಕುಮಾರ್ ನಿಧನದ ಬಳಿಕ ಬೆಂಗಳೂರು ದಕ್ಷಿಣದಿಂದ ಬಿಜೆಪಿಯಿಂದ ತೇಜಸ್ವಿ ಸೂರ್ಯ ಕಣಕ್ಕಿಳಿದಿದ್ದಾರೆ. ಇತ್ತ ಉತ್ತರದಲ್ಲಿ ಡಿ.ವಿ.ಸದಾನಂದ ಗೌಡ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಕೇಂದ್ರದಿಂದ ಪಿ.ಸಿ.ಮೋಹನ್ ಕಣದಲ್ಲಿದ್ದಾರೆ.

    ಇತ್ತ ಕಾಂಗ್ರೆಸ್‍ನಿಂದ ಬೆಂಗಳೂರು ಕೇಂದ್ರ ರಿಜ್ವಾನ್ ಅರ್ಷದ್, ಉತ್ತರದಲ್ಲಿ ಕೃಷ್ಣ ಬೈರೇಗೌಡ ಮತ್ತು ದಕ್ಷಿಣದಲ್ಲಿ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ. ಮೊದಲ ಬಾರಿಗೆ ನಟ ಪ್ರಕಾಶ್ ರೈ ಬೆಂಗಳೂರು ಕೇಂದ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ.

    1. ಬೆಂಗಳೂರು ಉತ್ತರ ಕದನ:

    ಕಾಂಗ್ರೆಸ್‍ನ ಭದ್ರಕೋಟೆಯನ್ನು ಛಿದ್ರ ಮಾಡಿದ್ದು ಬಿಜೆಪಿ. 2004ರಿಂದಲೇ ಬೆಂಗಳೂರು ಉತ್ತರ ಕ್ಷೇತ್ರವನ್ನು ಕೈ ತೆಕ್ಕೆಯಿಂದ ಬಿಜೆಪಿ ಕಿತ್ತುಕೊಂಡಿತ್ತು. 2004ರಲ್ಲಿ ಸಾಂಗ್ಲಿಯಾನ ಬಿಜೆಪಿಯಿಂದ ಗೆಲ್ಲುವ ಮೂಲಕ 2009ರಕಲ್ಲಿ ಡಿ.ಬಿ.ಚಂದ್ರೇಗೌಡ, 2014ರಲ್ಲಿ ಡಿ.ವಿ.ಸದಾನಂದಗೌಡ ಬಿಜೆಪಿಯಿಂದ ಗೆದ್ದಿದ್ರು. ಬೆಂಗಳೂರು ಉತ್ತರದಿಂದ 7 ಬಾರಿ ಗೆದ್ದಿದ್ದ ಕಾಂಗ್ರೆಸ್‍ನ ನಾಯಕ ದಿವಂಗತ ಜಾಫರ್ ಷರೀಫ್ ಅವರು ಸಾಂಗ್ಲಿಯಾನ, ಚಂದ್ರೇಗೌಡ ಅವರ ಎದುರು ಸೋತಿದ್ದರು.

    ಅಂದಿನಿಂದ ಬೆಂಗಳೂರು ಉತ್ತರ ಬಿಜೆಪಿ ಭದ್ರಕೋಟೆಯಾಗಿ ಬದಲಾಯ್ತು. ಮಿನಿ ಭಾರತದಂತಿರುವ ಈ ಕ್ಷೇತ್ರದಲ್ಲಿ ಎಲ್ಲ ಧರ್ಮ, ಜಾತಿ, ಒಳಗಿನವರು, ಹೊರಗಿನವರು ಎಲ್ಲರನ್ನೂ ಒಳಗೊಂಡಿರುವ ಕ್ಷೇತ್ರ. ಈಗ ಇದೇ ಕ್ಷೇತ್ರದಲ್ಲಿ ಒಂದೇ ಸಮುದಾಯದ ಇಬ್ಬರು ಅಖಾಡದಲ್ಲಿ ಇದ್ದಾರೆ. ಕೇಂದ್ರ ಸಚಿವ, ಹಾಲಿ ಸಂಸದ ಡಿ.ವಿ.ಸದಾನಂದಗೌಡ, ಸಚಿವ ಕೃಷ್ಣಬೈರೇಗೌಡ ಕಣದಲ್ಲಿದ್ದು, ಕದನ ಕಣ ರಂಗೇರಿದೆ.

    ಒಟ್ಟು ಮತದಾರರು: ಬೆಂಗಳೂರು ಉತ್ತರ ಕ್ಷೇತ್ರ 28,48,705 ಮತದಾರರನ್ನು ಒಳಗೊಂಡಿದೆ. 14,81,456 ಪುರುಷ ಮತದಾರರು ಮತ್ತು 13,66,753 ಮಹಿಳಾ ಮತದಾರರನ್ನು ಹೊಂದಿದೆ. ಒಕ್ಕಲಿಗ 8 ಲಕ್ಷ, ಎಸ್‍ಸಿ-ಎಸ್‍ಟಿ 5 ಲಕ್ಷ, ಮುಸ್ಲಿಂ 3 ಲಕ್ಷ, ಕುರುಬ 3 ಲಕ್ಷ, ಲಿಂಗಾಯತರು 2 ಲಕ್ಷ, ಇತರೆ ಹಿಂದುಳಿದ ವರ್ಗ 3 ಲಕ್ಷ ಮತದಾರರಿದ್ದಾರೆ. ಒಕ್ಕಲಿಗರ ಮತಗಳ ನಿರ್ಣಾಯಕ ಸ್ಥಾನದಲ್ಲಿವೆ.

    2014ರ ಫಲಿತಾಂಶ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದಗೌಡರು 2,29,764 (16.91%) ಮತಗಳ ಅಂತರದಿಂದ ಕಾಂಗ್ರೆಸ್‍ನ ಸಿ.ನಾರಾಯಣಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದರು. ಡಿ.ವಿ.ಸದಾನಂದಗೌಡ (ಬಿಜೆಪಿ) 7,18,326 (52.91%), ಸಿ.ನಾರಾಯಣಸ್ವಾಮಿ(ಕಾಂಗ್ರೆಸ್) 4,88,562 (35.99%) ಅಬ್ದುಲ್ ಅಜೀಂ (ಜೆಡಿಎಸ್)-92,681 (6.83%) ಮತಗಳನ್ನು ಪಡೆದಿದ್ದರು.

    ವಿಧಾನಸಭಾ ಚುನಾವಣೆಯ ಫಲಿತಾಂಶ: ಬೆಂಗಳೂರು ಉತ್ತರ ಲೋಕ ಅಖಾಡ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 5, ಜೆಡಿಎಸ್ 2, ಬಿಜೆಪಿ 1 ಸ್ಥಾನದಲ್ಲಿ ಗೆಲುವು ಕಂಡಿವೆ. ಬ್ಯಾಟರಾಯನಪುರ – ಕೃಷ್ಣ ಭೈರೇಗೌಡ(ಕಾಂಗ್ರೆಸ್), ಯಶವಂತಪುರ – ಎಸ್.ಟಿ.ಸೋಮಶೇಖರ್(ಕಾಂಗ್ರೆಸ್), ಹೆಬ್ಬಾಳ – ಭೈರತಿ ಸುರೇಶ್ (ಕಾಂಗ್ರೆಸ್), ಕೆ.ಆರ್.ಪುರಂ- ಭೈರತಿ ಬಸವರಾಜು (ಕಾಂಗ್ರೆಸ್), ಪುಲಿಕೇಶಿನನಗರ – ಅಖಂಡ ಶ್ರೀನಿವಾಸಮೂರ್ತಿ (ಕಾಂಗ್ರೆಸ್), ಮಹಾಲಕ್ಷ್ಮೀ ಲೇಔಟ್- ಗೋಪಾಲಯ್ಯ (ಜೆಡಿಎಸ್), ದಾಸರಹಳ್ಳಿ – ಮಂಜುನಾಥ್ (ಜೆಡಿಎಸ್) ಮತ್ತು ಮಲ್ಲೇಶ್ವರಂ- ಅಶ್ವಥ್‍ನಾರಾಯಣ್ (ಬಿಜೆಪಿ) ಶಾಸಕರಾಗಿದ್ದಾರೆ.

    ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
    1. ಡಿ.ವಿ.ಸದಾನಂದಗೌಡ- ಬಿಜೆಪಿ
    2. ಕೃಷ್ಣಬೈರೇಗೌಡ- ಕಾಂಗ್ರೆಸ್

    2. ಬೆಂಗಳೂರು ದಕ್ಷಿಣ

    ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ. ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಅವರ ಭದ್ರಕೋಟೆಯಾಗಿತ್ತು. ಜನತಾ ಪಾರ್ಟಿಯ ಭದ್ರಕೋಟೆಯಾಗಿದ್ದ ಬೆಂಗಳೂರು ದಕ್ಷಿಣವನ್ನು ಛಿದ್ರ ಮಾಡಿದ್ದು ದಿವಂಗತ ಮಾಜಿ ಸಿಎಂ ಆರ್.ಗುಂಡೂರಾವ್. 1989ರಲ್ಲಿ ಜನತಾ ಪಾರ್ಟಿಯ ಛಿದ್ರಗೊಳಿಸಿದ ನಂತರ ಬಿಜೆಪಿಗೆ ವರವಾಯ್ತು. 1991ರಲ್ಲಿ ಕೆ.ವಿ.ಗೌಡ ಬಿಜೆಪಿಯಿಂದ ಗೆದ್ದರೆ ಆ ನಂತರ ಸತತ 6 ಬಾರಿ ಅನಂತಕುಮಾರ್ ಈ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಒಕ್ಕಲಿಗ, ಬ್ರಾಹ್ಮಣ, ಮುಸ್ಲಿಂ ಸಮುದಾಯ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಉತ್ತರ ಭಾರತೀಯರು ನಿರ್ಣಾಯಕರಾಗಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಅವರನ್ನು ರಾಜ್ಯ ಬಿಜೆಪಿ ಅಭ್ಯರ್ಥಿಯನ್ನಾಗಿ ಬಿಂಬಿಸಿ ಕೊನೆಗೆ ಹೈಕಮಾಂಡ್ ಯೂತ್ ಫೇಸ್ ನೆಪದಲ್ಲಿ ಬಿಜೆಪಿಯಿಂದ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಕೊಟ್ಟಿದ್ದು, ಕಾಂಗ್ರೆಸ್‍ನಿಂದ ದೆಹಲಿ ಮಟ್ಟದ ಪ್ರಭಾವಿ ನಾಯಕ ಬಿ.ಕೆ.ಹರಿಪ್ರಸಾದ್ ಸ್ಪರ್ಧೆಗಿಳಿದಿದ್ದು, ಕದನ ಕಣ ರೋಚಕವಾಗಿದೆ.

    ಒಟ್ಟು ಮತದಾರರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ 22,15,758 ಮತದಾರನ್ನು ಒಳಗೊಂಡಿದೆ. 11,53,622 ಪುರುಷ ಮತದಾರರು ಮತ್ತು 10,61,796 ಮಹಿಳಾ ಮತದಾರರನ್ನು ಹೊಂದಿದೆ. ಜಾತಿವಾರು ಪ್ರಾಬಲ್ಯ ನೋಡೋದಾದ್ರೆ ಒಕ್ಕಲಿಗ ಸಮುದಾಯ 5 ಲಕ್ಷ, ಮುಸ್ಲಿಂ ಸಮುದಾಯ 4 ಲಕ್ಷ, ಬ್ರಾಹ್ಮಣ ಸಮುದಾಯ 4 ಲಕ್ಷ, ಉತ್ತರ ಭಾರತೀಯರು 2 ಲಕ್ಷ, ಕುರುಬ ಸಮುದಾಯ 2 ಲಕ್ಷ, ಎಸ್‍ಸಿ ಸಮುದಾಯ 2 ಲಕ್ಷ ಮತ್ತು ಲಿಂಗಾಯತ ಸಮುದಾಯ 1.80 ಲಕ್ಷ ಮತದಾರರು ಕ್ಷೇತ್ರದಲ್ಲಿದ್ದಾರೆ.

    2014ರ ಫಲಿತಾಂಶ: 2014ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಅವರು 2,28,575 (19.51) ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಗೆದ್ದಿದ್ದರು. ಅನಂತಕುಮಾರ್ (ಬಿಜೆಪಿ) 6,33,816 (56.88%), ನಂದನ್ ನಿಲೇಕಣಿ (ಕಾಂಗ್ರೆಸ್)- 4,05,241 (36.37%), ರುತ್ ಮನೋರಮಾ (ಜೆಡಿಎಸ್) 25,677 (2.30%) ಮತಗಳನ್ನು ಪಡೆದಿದ್ದರು.

    ವಿಧಾನಸಭಾ ಫಲಿತಾಂಶ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಹ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 5, ಕಾಂಗ್ರೆಸ್ 3 ಶಾಸಕರಿದ್ದಾರೆ. ಬಸವನಗುಡಿ – ರವಿ ಸುಬ್ರಮಣ್ಯ (ಬಿಜೆಪಿ), ಪದ್ಮನಾಭನಗರ – ಆರ್.ಅಶೋಕ್(ಬಿಜೆಪಿ), ಬೊಮ್ಮನಹಳ್ಳಿ ಸತೀಶ್ ರೆಡ್ಡಿ (ಬಿಜೆಪಿ), ಚಿಕ್ಕಪೇಟೆ – ಉದಯ್ ಗರುಡಾಚಾರ್(ಬಿಜೆಪಿ), ಗೋವಿಂದರಾಜನಗರ – ವಿ.ಸೋಮಣ್ಣ(ಬಿಜೆಪಿ), ವಿಜಯನಗರ – ಕೃಷ್ಣಪ್ಪ (ಕಾಂಗ್ರೆಸ್), ಜಯನಗರ – ಸೌಮ್ಯರೆಡ್ಡಿ (ಕಾಂಗ್ರೆಸ್) ಮತ್ತು ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ (ಕಾಂಗ್ರೆಸ್) ಶಾಸಕರಿದ್ದಾರೆ.

    ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
    1. ತೇಜಸ್ವಿಸೂರ್ಯ – ಬಿಜೆಪಿ
    2. ಬಿ.ಕೆ.ಹರಿಪ್ರಸಾದ್ – ಕಾಂಗ್ರೆಸ್

    3. ಬೆಂಗಳೂರು ಸೆಂಟ್ರಲ್

    ಕಾಂಗ್ರೆಸ್ ಭದ್ರಕೋಟೆ ಬೆಂಗಳೂರು ಸೆಂಟ್ರಲ್‍ನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿಯ ಪಿ.ಸಿ. ಮೋಹನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ಸಿನ ಐವರು ಶಾಸಕರಿದ್ದರೂ, ಈ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯೇ ಆಗಿದೆ. ಕಳೆದ ಬಾರಿ ಕೇವಲ 1.30 ಲಕ್ಷ ಮತಗಳ ಅಂತರದಿಂದ ಸೋತಿದ್ದ ರಿಜ್ವನ್ ಅರ್ಷದ್ ಈ ಬಾರಿಯೂ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿದ್ದಾರೆ. ಉತ್ತರ ಭಾರತೀಯರು, ಮುಸ್ಲಿಮರು, ಕ್ರೈಸ್ತರು ಹಾಗೂ ತಮಿಳು ಮತದಾರರೇ ನಿರ್ಣಾಯಕವಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರನಟ ಪ್ರಕಾಶ್ ರೈ ಅದೃಷ್ಟ ಪರೀಕ್ಷೆಯಲ್ಲಿದ್ದಾರೆ. ಮೋದಿ ವಿರೋಧಿಸುತ್ತಲೇ ರಾಜಕೀಯ ಭವಿಷ್ಯಕ್ಕಾಗಿ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.

    ಒಟ್ಟು ಮತದಾರರು: ಬೆಂಗಳೂರು ಸೆಂಟ್ರಲ್ ಒಟ್ಟು 22,04,740 ಮತದಾರರನ್ನು ಹೊಂದಿದೆ. 11,45,974 ಪುರುಷ ಮತದಾರರು ಮತ್ತು 10,58,369 ಮಹಿಳಾ ಮತದಾರರಿದ್ದಾರೆ. ಜಾತಿವಾರು ನೋಡೋದಾದ್ರೆ, ತಮಿಳರು 5 ಲಕ್ಷ, ಮುಸ್ಲಿಂ 3 ಲಕ್ಷ, ಉತ್ತರ ಭಾರತೀಯರು 2.5ಲಕ್ಷ, ಕ್ರಿಶ್ಚಿಯನ್ 2 ಲಕ್ಷ, ಮೇವಾರ 1.50 ಲಕ್ಷ, ಎಸ್‍ಸಿ 3 ಲಕ್ಷ, ಲಿಂಗಾಯತ 1 ಲಕ್ಷ, ಒಕ್ಕಲಿಗ 1.5 ಲಕ್ಷ ಮತ್ತು ಇತರೆ 3 ಲಕ್ಷ ಮತದಾರರಿದ್ದಾರೆ.

    2014ರ ಫಲಿತಾಂಶ: 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ.ಮೋಹನ್ 1,37,500 ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ವಿರುದ್ಧ ಜಯಮಾಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಪಿ.ಸಿ.ಮೋಹನ್ (ಬಿಜೆಪಿ) 5,57,130 (51.85%), ರಿಜ್ವಾನ್ ಅರ್ಷದ್ (ಕಾಂಗ್ರೆಸ್) 4,19,630 (39.05%) ಮತ್ತು ನಂದಿನಿ ಆಳಾ ್ವ(ಜೆಡಿಎಸ್) 20,387 (1.90%) ಮತಗಳನ್ನು ಪಡೆದುಕೊಂಡಿದ್ದರು.

    ವಿಧಾನಸಭಾ ಫಲಿತಾಂಶ: ಬೆಂಗಳೂರು ಸೆಂಟ್ರಲ್ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಕಾಂಗ್ರೆಸ್ 5, ಬಿಜೆಪಿ 3 ಶಾಸಕರನ್ನು ಹೊಂದಿದೆ. ಶಿವಾಜಿನಗರ- ರೋಷನ್‍ಬೇಗ್ (ಕಾಂಗ್ರೆಸ್), ಗಾಂಧಿನಗರ – ದಿನೇಶ್ ಗುಂಡೂರಾವ್ (ಕಾಂಗ್ರೆಸ್), ಶಾಂತಿನಗರ- ಹ್ಯಾರಿಸ್ (ಕಾಂಗ್ರೆಸ್), ಚಾಮರಾಜಪೇಟೆ – ಜಮೀರ್ ಅಹಮದ್ (ಕಾಂಗ್ರೆಸ್), ಸರ್ವಜ್ಞ ನಗರ – ಕೆ.ಜೆ.ಜಾರ್ಜ್ (ಕಾಂಗ್ರೆಸ್), ರಾಜಾಜಿನಗರ- ಸುರೇಶ್‍ಕುಮಾರ್ (ಬಿಜೆಪಿ), ಮಹದೇವಪುರ – ಅರವಿಂದ ಲಿಂಬಾವಳಿ (ಬಿಜೆಪಿ) ಮತ್ತು ಸಿ.ವಿ.ರಾಮನ್‍ನಗರ- ರಘು (ಬಿಜೆಪಿ)

    ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
    1. ಪಿ.ಸಿ.ಮೋಹನ್ – ಬಿಜೆಪಿ
    2. ರಿಜ್ವಾನ್ ಅರ್ಷದ್ – ಕಾಂಗ್ರೆಸ್
    3. ಪ್ರಕಾಶ್ ರೈ – ಪಕ್ಷೇತರ